|| ಹರೇರಾಮ ||

ದೈವೀಸಂಪತ್ತುಗಳು ಹರಿದು ಬರುವ ದ್ವಾರವನ್ನು ಕೃತಜ್ಞತೆಯಿಂದ ಪೂಜಿಸಬೇಕು.
ಹಾಗೆ ಮಾಡದಿದ್ದಾಗ ದ್ವಾರಬಂಧವಾಗಬಹುದು, ಸಂಪತ್ತಿನ ಹರಿವೆಯೇ ನಿಲ್ಲಬಹುದೆಂಬುದು ಬಲ್ಲವರ ಮಾತು..

ಸಂಪೂರ್ಣ ರಾಮಕಥೆಯನ್ನು ಸಂಕ್ಷೇಪವಾಗಿ ಕೇಳಿದ ವಾಲ್ಮೀಕಿಗಳು ನಾರದರನ್ನು ವಿಧಿವತ್ತಾಗಿ ಪೂಜಿಸಿದರು.
ವಾಲ್ಮೀಕಿಗಳ ಪಾಲಿಗೆ ರಾಮದ್ವಾರವಲ್ಲವೇ ನಾರದರು..?
ಯುಗ-ಯುಗಗಳ ಕಾಲ ಭುವಿಯ ಜೀವಿಗಳಿಗೆ ಭವ್ಯ ಬದುಕಿನ ದಾರಿ ತೋರಬಲ್ಲ ಮಹಾಕಾವ್ಯವೊಂದಕ್ಕೆ –
ಅಮೃತಬೀಜವನ್ನು ವಾಲ್ಮೀಕಿಗಳ ಹೃದಯದಲ್ಲಿ ಬಿತ್ತಿದ ನಾರದರು-
‘ಬಂದ ಕಾರ್ಯವಾಯಿತು’ ಎಂಬಂತೆ ಗಗನವನ್ನೇರಿ ಹೊರಟು ಹೋದರು…

ದಿವಿ ಭುವಿಗಿಳಿದಿತ್ತು..
ಭುವಿಯನ್ನು ದಿವಿಯಾಗಿಸಬಯಸಿತ್ತು..!
ವಾಲ್ಮೀಕಿಗಳ ಹೃದಯವನ್ನು ಹೊಕ್ಕಿತ್ತು..
ಬಹು ದೊಡ್ಡ ರೂಪದಲ್ಲಿ ಪ್ರಕಟಗೊಳ್ಳಲು ಸಮಯ ಕಾಯುತ್ತಿತ್ತು…
ಸನ್ನಿವೇಶವನ್ನು ಸೃಷ್ಟಿಸತೊಡಗಿತ್ತು..!

ರಾಮಾಯಣದ ಕಥನ-ಕಥಾನಕ-ಕಥಾನಾಯಕರ ಗಾಢ ಪ್ರಭಾವಕ್ಕೊಳಗಾದ ಮಹಾಮುನಿಗಳಿಗೆ ಬಹು ಹೊತ್ತಿನವರೆಗೆ ಬಾಹ್ಯಪ್ರಜ್ಞೆ ಮರಳಲಿಲ್ಲ…!
ನಡುನೆತ್ತಿಯ ನೇಸರ ತನ್ನ ಕಿರಣಗಳ ಕರಗಳಿಂದ ತಟ್ಟಿ ಎಬ್ಬಿಸಿದಾಗಲೇ ವಾಲ್ಮೀಕಿಗಳಿಗೆ ಎಚ್ಚರವಾದದ್ದು…!

ಪವಿತ್ರತೆಯಲ್ಲಿ ಗಂಗೆಯ ತಂಗಿಯೇ ಆದ ತಮಸೆಯೆಡೆಗೆ ತೆರಳಿದರು ವಾಲ್ಮೀಕಿಗಳು ಮಾಧ್ಯಾಹ್ನಿಕ ಸ್ನಾನಕ್ಕಾಗಿ.
ಪ್ರಿಯಶಿಷ್ಯನಾದ ಭರದ್ವಾಜನು ಸ್ನಾನವಸ್ತ್ರ ಮತ್ತು ಕಲಶಗಳೊಡನೆ ಅವರನ್ನನುಸರಿಸಿದನು.
ನಿರ್ಮಲಾತ್ಮನ ನೆನಪಿನಲ್ಲಿಯೇ ಇದ್ದ ವಾಲ್ಮೀಕಿಗಳಿಗೆ ಪ್ರತಿನಿತ್ಯ ನೋಡುತ್ತಿದ್ದರೂ ಅಂದೇಕೋ ವಿಶೇಷವಾಗಿ ತೋರಿದಳು ತಮಸೆ..!

ಒಂದಿನಿತೂ ಕಲ್ಮಷವಿಲ್ಲದ, ರಮಣೀಯವಾದ, ಸ್ಫಟಿಕಸದೃಶವಾದ ತಮಸೆಯ ಜಲದಲ್ಲಿ –
ವಾಲ್ಮೀಕಿಗಳಿಗೆ ತೋರಿದ್ದು ಶ್ರೀರಾಮನ ಮನ….!
ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!
ಅಂತಹ ಶ್ರೀರಾಮನ ಮನಕ್ಕೆ ನಮನ ಸಲ್ಲಿಸಿ ಸ್ನಾನಕ್ಕೆ ಸಿದ್ಧರಾದ ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.

” ಮಗೂ.. ಕಲಶವನ್ನಿಲ್ಲಿಯೇ ಇಡು, ಸ್ನಾನವಸ್ತ್ರವನ್ನು ಕೊಡು.
ಹಿತವಾದ ಈ ತಮಸಾ ತೀರ್ಥವನ್ನು ಅವಗಾಹಿಸುವೆ..”
ಭರದ್ವಾಜನು ವಿನೀತನಾಗಿ ವಾಲ್ಮೀಕಿಗಳ ಆಣತಿಯನ್ನು ಪಾಲಿಸಿದನು.

ಭರದ್ವಾಜನ ಹಸ್ತದಿಂದ ಸ್ನಾನವಸ್ತ್ರವನ್ನು ವಾಲ್ಮೀಕಿಗಳು ತೆಗೆದುಕೊಂಡಿದ್ದೇನೋ ನಿಜ,
ಆದರೆ ತಮಸೆಯ ಅವಗಾಹನವನ್ನು ಅವರು ಮಾಡಲಿಲ್ಲ..!
ಅದಾಗಲೇ ಅವರ ಮನಸ್ಸು ನಿರ್ಮಲತೆಯಲ್ಲಿ ತಮಸೆಯನ್ನೇ ಹೋಲುವ ರಾಮನ ಮನದಲ್ಲಿ ಅವಗಾಹನಗೈದಾಗಿತ್ತು…!
ಯಾರೋ ಕರೆದವರಂತೆ ತಟ್ಟನೆದ್ದ ವಾಲ್ಮೀಕಿಗಳು ತಮಸಾವನದಲ್ಲಿ ವಿಹರಿಸತೊಡಗಿದರು…!

ತಮಸೆಯ ತಂಪಿನಿಂದ ಮೇಲೆದ್ದು ಬಂದು, ಹಸಿರಿನ ಸೊಂಪಿನಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಗಳನ್ನು-
ಇದ್ದಕ್ಕಿದ್ದಂತೆ ಸೆಳೆಯಿತು ಜೋಡಿಹಕ್ಕಿಗಳ ಹಾಡಿನ ಇಂಪು..!
ಧ್ವನಿ ಬಂದೆಡೆಗೆ ಅಪ್ರಯತ್ನವಾಗಿ ತಿರುಗಿದ ವಾಲ್ಮೀಕಿಗಳ ದೃಷ್ಟಿಗೆ –
ಗೋಚರವಾದವು ಪ್ರೇಮದ ವಿನಿಮಯದಲ್ಲಿ ಮಗ್ನವಾಗಿದ್ದ ಜೋಡಿ ಕ್ರೌಂಚ ಪಕ್ಷಿಗಳು..!

ಅನ್ಯೋನ್ಯ ಪ್ರೇಮಾತಿಶಯದಿಂದಾಗಿ ಒಂದು ಕ್ಷಣವಾದರೂ ಪರಸ್ಪರ ವಿರಹವನ್ನು ಸಹಿಸಲಾರದ,
ಆನಂದಾತಿಶಯದಿಂದಾಗಿ ಅತ್ಯಂತ ಮಧುರವಾಗಿ ನಿನಾದಗೈಯುತ್ತಿದ್ದ ಕ್ರೌಂಚಮಿಥುನವನ್ನು-
ಕಣ್ತುಂಬ ನೋಡಿದಾಗ ವಾಲ್ಮೀಕಿಗಳಿಗೆ ಆದದ್ದು ಪ್ರಕೃತಿ-ಪುರುಷರ ಸಾಕ್ಷಾತ್ಕಾರ…!

ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

ಅಯ್ಯೋ…
ಆಗ ಬಿದ್ದಿತಲ್ಲಿಗೊಂದು ‘ಬೇಡ’ದ ದೃಷ್ಟಿ..!
ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ…!?
ಕೆಂಗಣ್ಣಿನ, ಕೆಡುಮನಸ್ಸಿನ, ಕ್ರೂರವೈರದ, ದಯಾದೂರನಾದ, ದುರುಳ ಬೇಡನೊಬ್ಬನು ದಾಂಗುಡಿಯಿಟ್ಟನಲ್ಲಿ..!

ಒಂದೆಡೆ ಸಕಲ ಜೀವಗಳನ್ನೂ ಸ್ವಾರ್ಥವಿಲ್ಲದೆ ಪ್ರೀತಿಸುವ ವಾಲ್ಮೀಕಿಗಳು-
ಇನ್ನೊಂದೆಡೆ ಸಕಲಜೀವಗಳನ್ನೂ ಅಕಾರಣವಾಗಿ ದ್ವೇಷಿಸುವ ಒಬ್ಬ ಬೇಡ..
ಒಂದೆಡೆ ಜೀವಗಳ ಆನಂದವನ್ನು ಕಂಡು ಆನಂದಿಸುವ ದೈವೀಮನಸ್ಥಿತಿ..
ಇನ್ನೊಂದೆಡೆ ಜೀವಹಿಂಸೆಯಲ್ಲೇ ಆನಂದವನ್ನು ಕಾಣುವ ಆಸುರೀಮನಸ್ಥಿತಿ..
ಎಂಥ ವಿಪರ್ಯಾಸದ ಸಮಾವೇಶವಿದು…!

ಪಕ್ಷಿಯುಗಳವು ಮೈಮರೆತು ಸುಖಿಸುತ್ತಿರುವಂತೆಯೇ, ಮಹರ್ಷಿ ವಾಲ್ಮೀಕಿಗಳು ನೋಡನೋಡುತ್ತಿರುವಂತೆಯೇ –
ಬೇಡನ ಕೆಡುಮನಸ್ಸು ಕೆಡುಸಂಕಲ್ಪವೊಂದನ್ನು ಮಾಡಿತು..
ಕೆಂಗಣ್ಣು ಗುರಿಯಿಟ್ಟಿತು..
ಕ್ರೂರ ಕೈಗಳು ಕೂರಂಬನ್ನೆಸೆದವು…!
ನಲ್ಲೆಯ ಒಲವಿನಲ್ಲಿ ಜಗದಿರವನ್ನು, ಹೆಚ್ಚೇಕೆ.. ತನ್ನಿರವನ್ನೇ ಮರೆತಿದ್ದ ಗಂಡುಪಕ್ಷಿಯ ಕೋಮಲ ಹೃದಯವನ್ನು –
ಹೃದಯಶೂನ್ಯನಾದ ಬೇಡನ ಬಾಣವು ಭೇದಿಸಿಯೇಬಿಟ್ಟಿತು..!

ಅಹೋ…ಬದುಕಿನ ಭಾಗ್ಯದ ವಿಪರ್ಯಯವೇ…!
ಎಲ್ಲಿಋಷಿಯ ಪಾವನ ದೃಷ್ಟಿಯಿದ್ದಿತೋ..ಅಲ್ಲಿ ಬಿದ್ದಿತು ವ್ಯಾಧನ ಪಾಪದೃಷ್ಟಿ..
ಮಡದಿಗಾಗಿ ಮೀಸಲಿಟ್ಟ ಮೃದು ಹೃದಯದಲ್ಲಿ ಆಯಿತು ಕ್ರೂರ ಶರಪ್ರವೇಶ..
ಶೃಂಗಾರರಸವಳಿದು ಪ್ರಕಟವಾಯಿತು ಕರುಣರಸ…
ಪ್ರೇಮಧಾರೆಯಾರಿತು, ಚಿಮ್ಮಿತು ರಕ್ತಧಾರೆ..
ಕಲರವ ಕರಗಿತು, ಮಾರ್ದನಿಸಿತು ಚೀತ್ಕಾರ…!!

ಮುಂಜಾನೆಯ ಮಂಜಿನಲ್ಲಿ ಮಿಂದು ನಳನಳಿಸುವ, ಸೂರ್ಯನನ್ನು ನೋಡಿ ತನ್ನಷ್ಟಕ್ಕೇ ನಗುವ,
ಸುಕೋಮಲ ಕಮಲದ ಮೇಲೆ ಸಿಡಿಲು ಬಿದ್ದಂತೆ..
ಹಿಂದುಮುಂದಿಲ್ಲದ, ಪ್ರಾಣಹರವಾದ ಬಾಣಾಘಾತಕ್ಕೆ ತುತ್ತಾಗಿ ಧರೆಗುರುಳಿದ ಪ್ರೇಮಪಕ್ಷಿ ,
ರಕ್ತದ ಮಡುವಿನಲ್ಲಿ ತನ್ನ ಪ್ರಾಣಗಳಿಗಾಗಿ..ಅಲ್ಲಲ್ಲ..ತನ್ನ ಪ್ರಾಣಪ್ರಿಯಳಿಗಾಗಿ ಚಡಪಡಿಸಿತು…!

ಒಂದೇ ಕಲ್ಲಿಗೆ ಎರಡು ಹಕ್ಕಿಗಳೆನ್ನುವರಲ್ಲವೇ..
ಇಲ್ಲಿ ಆದದ್ದು ಹಾಗೇ..!
ಒಂದೇ  ಶ್ರುತಿಯ ಎರಡು ವೀಣೆಗಳಲ್ಲಿ ಒಂದನ್ನು ಮೀಟಿದರೆ ಎರಡೂ ಮಿಡಿಯುವಂತೆ –
ಗಂಡುಪಕ್ಷಿಯ ಮರಣವೇದನೆಯ ಕೂಗು ಹೆಣ್ಣುಪಕ್ಷಿಯ ಹೃದಯದಲ್ಲಿ
ಇಮ್ಮಡಿಯಾಗಿ..ಮುಮ್ಮಡಿಯಾಗಿ..ನೂರ್ಮಡಿಯಾಗಿ ಪ್ರತಿಧ್ವನಿಸಿತು..!
ಆಕೆಯ ಕರುಣಾಕ್ರಂದನಕ್ಕೆ ಕರುಳೇಕೆ..ಕಲ್ಲುಬಂಡೆಗಳೇ ಕರಗಿದವು…!

ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..
ಅದು ಜೀವನದಿ… ಜೀವನದ ನೋವ ನದಿ..!

|| ಹರೇರಾಮ ||

Facebook Comments