|| ಹರೇರಾಮ ||

ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು..
ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು..
ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು..
ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ..
ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು…

ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು ಮಾತ್ರವೇ ಬೆಳಗುತ್ತಾನೆ..
ಆದರೆ ಆತನ ವಂಶದಲ್ಲಿ ಪ್ರಾದುರ್ಭವಿಸಿದ ದಶರಥನು ಭುವಿಯ ಬದುಕಿನ ಎರಡು ಪಾರ್ಶ್ವಗಳನ್ನೂ ಬೆಳಗಿದನು..
ಪುರ-ಜನಪದಗಳು ಭುವಿಯ ಬದುಕಿನ ಎರಡು ಪಾರ್ಶ್ವಗಳು..
ಪುರವೆಂದರೆ ನಗರ : ಅಲ್ಲಿ ವಾಸಿಸುವವರು ‘ಪೌರರು
ಜನಪದವೆಂದರೆ ಹಳ್ಳಿಗಳು: ಅಲ್ಲಿ ಬದುಕುವವರು ‘ಜಾನಪದರು
ಈ ಎರಡೂ ಬಗೆಯ ಪ್ರಜೆಗಳೂ ದಶರಥನ ಆಳ್ವಿಕೆಯಲ್ಲಿ ಸಮಾನವಾಗಿ ಸುಖಿಸಿದರು..
ಪರಿಣಾಮವಾಗಿ ದಶರಥನು ‘ ಪೌರ- ಜಾನಪದಪ್ರಿಯ‘ನೆನಿಸಿದನು..

ಗ್ರಾಮ ಜೀವನವು ಕಾನನ ಸುಮದಂತೆ..
ಸಹಜ ಸೌಂದರ್ಯವದರದ್ದು..
ನಗರ ಜೀವನವು ಸ್ವರ್ಣಾಭರಣದಂತೆ..
ಸಂಸ್ಕಾರಜ ಸೌಂದರ್ಯವದರದ್ದು..
ಪ್ರಕೃತಿಗೆ ಹಳ್ಳಿಗಳು ಹತ್ತಿರ..
ನಗರಗಳು ಸಂಸ್ಕೃತಿಗೆ ಸಮೀಪ..
ಅದಾಗ ತಾನೇ ಜನಿಸಿದ ಶಿಶುವು ‘ನಿರಾಭರಣವಾಗಿದ್ದರೂ, ನಿರ್ವಸ್ತ್ರವಾಗಿದ್ದರೂ’ ಅದೆಷ್ಟು ಸುಂದರ…!
ಆ ಚೆಲುವು ಪ್ರಕೃತಿ..
ಅದೇ ಶಿಶುವು ತರುಣ-ತರುಣಿಯಾಗಿ ಬೆಳೆದಾಗಲೂ ಸುಂದರವೇ..
ನಖ-ಶಿಖೆಗಳ ಒಪ್ಪ..
ಬಟ್ಟೆ-ಬರೆಗಳ ಓರಣ..
ತನುವೊಪ್ಪುವ ಆಭರಣ..
ಆ ಚೆಲುವು ಸಂಸ್ಕೃತಿ..
ಬದುಕಿನ ಚೆಲುವಿಗೆ ಪ್ರಕೃತಿ-ಸಂಸ್ಕೃತಿಗಳೆರಡೂ ಬೇಕು..
ಬೇಡದುದು ‘ವಿಕೃತಿ’ ಮಾತ್ರ..
ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯ ಕೆಟ್ಟರೆ ಅದುವೇ ‘ವಿಕೃತಿ’…

ದಶರಥ ಸಾಧಿಸಿದ್ದು ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯವನ್ನು..
ಗ್ರಾಮ-ನಗರಗಳ ಸಮತೋಲನದ ಸಮರಸ-ಸಮಾಜ ಜೀವನವನ್ನು..

ರಾಜನೆಂದರೆ ರಾಜ್ಯದ ಕಣ್ಣು..
ಹಾಗೆಂದ ಮೇಲೆ ರಾಜನ ಕಣ್ಣು ಹೇಗಿರಬೇಕು..?
ತನ್ನ ರಾಜ್ಯದ ಸಮಸ್ತ ಜೀವಗಳನ್ನೂ- ಸಮಸ್ತ ಪ್ರಕೃತಿಯನ್ನೂ-ಸಮಸ್ತ ವ್ಯವಸ್ಥೆಗಳನ್ನೂ ಚೆನ್ನಾಗಿ ನೋಡಿಕೊಳ್ಳುವುದು ರಾಜನ ಹೊಣೆ..
ಯಾವುದನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ಮೊದಲು ಚೆನ್ನಾಗಿ ‘ನೋಡಬೇಕಲ್ಲವೇ’..?

ಪ್ರತ್ಯಕ್ಷವನ್ನು ನೋಡಬಹುದು….
ಪರೋಕ್ಷವನ್ನು…?
ಪರೋಕ್ಷವನ್ನು ನೋಡಲು ರಾಜನಾಗಬೇಕು ‘ಚಾರಚಕ್ಷು‘..
ವರ್ತಮಾನವನ್ನು ಬರಿಗಣ್ಣಿನಿಂದ ನೋಡಬಹುದು..
ಭವಿಷ್ಯತ್ತನ್ನು…?
ಭವಿಷ್ಯತ್ತನ್ನು ನೋಡಲು ರಾಜನಾಗಬೇಕು ‘ದೀರ್ಘಚಕ್ಷು‘..

ತನ್ನ ವ್ಯವಸ್ಥೆಯಲ್ಲಿರಬಹುದಾದ ಕೊರತೆಗಳನ್ನು ರಾಜನು ಬರಿಗಣ್ಣಿನಿಂದ ನೋಡುವುದು ಬಲುಕಠಿಣ..
ಏಕೆಂದರೆ ರಾಜನು ಎದುರು ಬರುವಾಗ ತಾನಾಗಿ ಕೊರತೆಗಳು ಮರೆಯಾಗಿರುತ್ತವೆ..
ಸುವ್ಯವಸ್ಥೆ ಪ್ರಕಟವಾಗಿರುತ್ತದೆ..
ಆದರೆ ರಾಜನು ಒಮ್ಮೆ ಮರೆಯಾಗುತ್ತಿದ್ದಂತೆ ಪುನಃ ಮೊದಲಿನ ಅವ್ಯವಸ್ಥೆಗಳೇ ಪ್ರಕಟವಾಗಿಬಿಡುತ್ತವೆ..
(ಇಂದೂ ಪ್ರಧಾನಮಂತ್ರಿಗಳೋ, ರಾಷ್ಟ್ರಪತಿಗಳೋ ಬರುವರೆಂದರೆ ಒಮ್ಮೆಲೇ ರಸ್ತೆಗಳೆಲ್ಲಾ ಸರಿಯಾಗಿಬಿಡುವಂತೆ..)

ಹಾಗೆಯೇ ಪ್ರಜೆಗಳ ಒಡಲಾಳದ ಧ್ವನಿಯನ್ನು ರಾಜನು ಬರಿಗಿವಿಯಿಂದ ಕೇಳಲೂ ಸಾಧ್ಯವಿಲ್ಲ..
ರಾಜದರ್ಬಾರಿನ ವಾತಾವರಣದ ಪ್ರಖರತೆಗೆ ಆ ಧ್ವನಿಗಳು ನಡುಗಿ-ಅಡಗಿ ಅವ್ಯಕ್ತವಾಗಿಬಿಡಬಹುದು..
ತಾನಾಗಿ ತಿಳಿಯದ ಈ ಬಗೆಯ ಸಂಗತಿಗಳನ್ನು ರಾಜನು ತಾನಾಗಿಯೇ ತಿಳಿದುಕೊಂಡು ಪ್ರತಿಕ್ರಿಯಿಸಬೇಕಾಗುತ್ತದೆ..

ದಶರಥನ ಬಳಿ ಸಮರ್ಥರಾದ – ವಿಶ್ವಸ್ತರಾದ ಚಾರರಿದ್ದರು..
ಅವರನ್ನೇ ಕಣ್ಣಾಗಿಸಿಕೊಂಡು ರಾಜ್ಯದ ಮೂಲೆ-ಮೂಲೆಗಳನ್ನೂ ಆತ ನೋಡುತ್ತಿದ್ದನು..
ಅವರನ್ನೇ ಕಿವಿಯಾಗಿಸಿಕೊಂಡು ಪ್ರಜೆಗಳ ಹೃದಯಧ್ವನಿಯನ್ನು ಆಲಿಸುತ್ತಿದ್ದನು..

‘ದೀರ್ಘಂ ಪಶ್ಯತ, ಮಾ ಹ್ರಸ್ವಂ’
(ದೀರ್ಘದೃಷ್ಟಿಗಳಾಗಿ, ಹ್ರಸ್ವದೃಷ್ಟಿಗಳಾಗಬೇಡಿ..!
ದೂರದೃಷ್ಟಿಗಳಾಗಿ, ಅಲ್ಪದೃಷ್ಟಿಗಳಾಗಬೇಡಿ..!)

ಜೀವಲೋಕಕ್ಕೆ ಭಗವಾನ್ ವಸಿಷ್ಠರ ಸಂದೇಶವಿದು..
ದೀರ್ಘ ಭವಿಷ್ಯತ್ತನ್ನು ಅವಲೋಕಿಸದೇ ಕಾರ್ಯವೆಸಗುವವನು ಸದಾಕಾಲ ಕಟ್ಟಿದ್ದನ್ನು ಕೆಡವುದರಲ್ಲಿ, ಕೆಡವಿದ್ದನ್ನು ಕಟ್ಟುವುದರಲ್ಲಿ ಆಯುಸ್ಸನ್ನು ಕಳೆಯಬೇಕಾಗುತ್ತದೆ..
ದೀರ್ಘದೃಷ್ಟಿಯಿಲ್ಲದವನು ಮಾಡಿದ ಕಾರ್ಯಗಳು, ಕಟ್ಟಿದ ಸಾಮ್ರಾಜ್ಯಗಳು ಕಾಲಬಾಧಿತವಾಗುತ್ತವೆ..
ಭವಿಷ್ಯ್ತತ್ತಿನಲ್ಲಿ ಅಪ್ರಸ್ತುತವಾಗುತ್ತವೆ…

ಹರಸುವುದದೇನ ನೀ, ವರವದೇನೆಂದರಿವೆ
ಸರಿಯಿಂದು ತೋರುವುದು ನಾಳೆ ಸರಿಯಿಹುದೇ ?
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು
ಅರಿವ ದೈವವೆ ಪೊರೆಗೆ-ಮಂಕುತಿಮ್ಮ ||

ಇದು ಸಾಮಾನ್ಯ ದೃಷ್ಟಿಯ ಪಾಡು..
ವಸಿಷ್ಠರ ಅನುಗ್ರಹ ದೃಷ್ಟಿಗೆ ಪಾತ್ರವಾದ ದಶರಥನ ದೃಷ್ಟಿಯು ದೀರ್ಘಕ್ಕೆ ವಿಸ್ತರಿಸಿತು..
ದೂರಗಾಮಿಯಾಯಿತು..

ಇಂದಿನ ಕಾಲಕ್ಕೂ, ಮುಂದಿನ ಕಾಲಕ್ಕೂ, ಚಿರಕಾಲಕ್ಕೂ ‘ಯಾವುದು ಒಳ್ಳಿತು’ ಎಂಬುದನ್ನು ನಿರುಕಿಸಬಲ್ಲವನಾಗಿದ್ದ ದಶರಥನನ್ನು ಬಲ್ಲವರು ‘ದೀರ್ಘಚಕ್ಷು‘ವೆಂದು ಪ್ರಶಂಸಿಸಿದರು..

‘ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲಬೇಕು’ ಇದು ರಾಜಧರ್ಮ..
ದಶರಥನು ತನ್ನ ಸ್ನೇಹ-ಸದ್ಗುಣಗಳಿದ ಹಲವರ ಮನಗೆದ್ದನು..
ಸ್ನೇಹದ ಭಾಷೆ ಅರ್ಥವಾಗದ ಕೆಲವರನ್ನು ಬಲ-ಪರಾಕ್ರಮಗಳಿಂದ ಮಣಿಸಿ, ವಿನೀತ ಸಾಮಂತರನ್ನಾಗಿಸಿದನು..
ಕೆಲವರನ್ನು ಭಾವಬಲದಿಂದ, ಇನ್ನು ಕೆಲವರನ್ನು ಬಾಹುಬಲದಿಂದ..
ಕೆಲವರನ್ನು ಪ್ರೇಮದಿಂದ,ಇನ್ನು ಕೆಲವರನ್ನು ಸಂಗ್ರಾಮದಿಂದ..
ವಶಪಡಿಸಿಕೊಂಡನು ರಾಜಾ ದಶರಥ..!

ಪರಿಣಾಮವಾಗಿ..
ಎಲ್ಲರೂ ಜೊತೆಯಲ್ಲಿ, ಇದಿರಾರೂ ಇಲ್ಲ’..
‘ಮಿತ್ರರುಂಟು, ಶತ್ರುಗಳಿಲ್ಲ’

ಎನ್ನುವ ಅತ್ಯಂತ ಹಿತಕರವಾದ ವಾತಾವರಣವು ಅಲ್ಲಿ ಸೃಷ್ಟಿಯಾಯಿತು..!

ತನ್ನ ಅಭಿನಯ-ನರ್ತನಗಳಿಂದ ರಂಗ ಮತ್ತು ಪ್ರೇಕ್ಷಕರ ಅಂತರಂಗಗಳೆರಡನ್ನೂ ಆಳುವನಲ್ಲವೇ ಮಹಾನಟನು..?
ಘಂಟೆ-ಘಂಟೆಗಳ ಕಾಲ ತಮ್ಮ ಹೃದಯ-ನಯನಗಳನ್ನು ಆತನಿಗೆ ಸಮರ್ಪಿಸುವ ಸಹೃದಯರು ಪ್ರತಿಯಾಗಿ ಪಡೆಯುವುದಾದರೂ ಏನನ್ನು..?
ತತ್ಕಾಲಕ್ಕೊಂದು ‘ಸಂತೋಷ’
ಜೀವಮಾನಕ್ಕೊಂದು ‘ಸಂದೇಶ’
ಪ್ರಿಯ-ಹಿತಗಳೆರಡನ್ನೂ ಹದವಾಗಿ ಒಂದರೊಳಗೊಂದನ್ನು ಬೆರೆಸಿ ನೀಡುವನವನು..
ಸಂದೇಶವಿಲ್ಲದ ಸಂತೋಷ ಬದುಕಿನ ದಿಕ್ಕು ತಪ್ಪಿಸೀತು..!
ಸಂತೋಷವಿಲ್ಲದ ಸಂದೇಶ ಬರಿಸಪ್ಪೆಯೆನಿಸೀತು..!

ತನ್ನ ಮುದ್ದು ಮಗುವಿಗಾಗಿ ಅಡುಗೆ ಸಿದ್ಧಪಡಿಸುವ ತಾಯಿಯು ಸ್ವಾದ-ಸ್ವಾಸ್ಥ್ಯಗಳೆರಡನ್ನೂ ಗಮನಿಸುವಳಲ್ಲವೇ ..?
ಸ್ವಾದವಿಲ್ಲದಿದ್ದರೆ ಮಗು ಸ್ವೀಕರಿಸದಿದ್ದೀತು..
ಸ್ವಾಸ್ಥ್ಯಕರವಲ್ಲದಿದ್ದರೆ ಸ್ವೀಕರಿಸಿಯೂ ಅನರ್ಥವಾದೀತು..!

ದಶರಥನ ರಾಜ್ಯಭಾರವಂತು..
ಆತ ಪ್ರಜಾರಂಜಕನೂ ಅಹುದು..
ಪ್ರಜಾಪಾಲಕನೂ ಅಹುದು..
ಪ್ರಜೆಗಳನ್ನು ರಂಜಿಸುವಾಗ ಧರ್ಮವನ್ನು ಮರೆಯಲಿಲ್ಲ..
ಪ್ರಜೆಗಳನ್ನು ಪಾಲಿಸುವಾಗ ಅವರ ಸಂತೋಷವನ್ನು ಅಲಕ್ಷಿಸಲಿಲ್ಲ..
ಪ್ರಿಯ-ಹಿತಗಳೆರಡರ ಸಮನ್ವಯದ ಸಂತುಷ್ಟ-ಸತ್ಯನಿಷ್ಠ ಸಮಾಜವನ್ನು ಸಾಧಿಸಿದನಾತ..

(ಯೇನ-ಕೇನ ಪ್ರಕಾರೇಣ ಜನರ ಮೆಚ್ಚಿಸಲೆಳಸುವ..
ಪ್ರಕೃತದಲ್ಲಿ ಸುಖದ ಭ್ರಮೆಯನ್ನು ತೋರಿ, ಪರಿಣಾಮದಲ್ಲಿ ಸಮಾಜವನ್ನು ಘೋರವಿಪತ್ತಿಗೆ ದೂಡುವ ಇಂದಿನ ನಾಯಕರನ್ನು ನೆನೆಸಿಕೊಂಡರೆ…)

ಕಾಲಕಳೆದಂತೆ ಗುಣ-ಶೋಭೆಗಳೂ ಕಳೆಯುವುದುಂಟು..
ವಸ್ತು ಹಳೆಯದಾಗುವುದುಂಟು..
ಕಳಾಹೀನವಾಗುವುದುಂಟು..
ಸ್ಥಿತ ವೈಭವವು ಗತವೈಭವವಾಗುವುದುಂಟು..

ಆದರೆ ಸೂರ್ಯ ಮಾಸಲುಂಟೇ..?
ಲಕ್ಷ-ಕೋಟಿವರ್ಷಗಳು ಕಳೆದರೂ ಇಂದಿಗೂ ಕುಂದದ ಪ್ರಭೆಯಿಂದ ಲೋಕವನ್ನು ಬೆಳಗುವನವನು..
ಅಂತೆಯೇ ಅವನ ವಂಶವೂ..

ಅಂದಿನ ಅಯೋಧ್ಯಾವಾಸಿಗಳದೇನು ಅದೃಷ್ಟವಂತರೋ..?
ಮೊದಲ ಮಹಾರಾಜನಾದ ಮನುವು ಅದಾವ ಮಮತೆಯಿಂದ ಅಯೋಧ್ಯೆಯನ್ನು ಪಾಲಿಸಿದ್ದನೋ,
ಮೂವತ್ತನಾಲ್ಕು ತಲೆಗಳ ನಂತರ ಸಿಂಹಾಸನದಲ್ಲಿ ಮಂಡಿಸಿದ್ದ ದಶರಥನೂ ಅದೇ ಮಮತೆಯಿಂದ-ಕುಶಲತೆಯಿಂದ ಅಯೋಧ್ಯೆಯನ್ನೂ-ಅಯೋಧ್ಯೆಯ ದ್ವಾರಾ ವಿಶ್ವವನ್ನೂ ಪಾಲಿಸಿದನು..

ದಶರಥನು ಅನವರತವಾಗಿ ನೆರವೇರಿಸಿದ ಯಜ್ಞಗಳಿಂದ ಸುಪ್ರೀತರಾದ ದೇವತೆಗಳು ಸುರಿಸಿದ ಅಮೃತವೃಷ್ಟಿಯು ಭುವಿಯನ್ನು ತಂಪಾಗಿಟ್ಟಿತು..
ಅಂತರಂಗದ ಒಳಮನೆಯಲ್ಲಿ ಅನವರತವಾಗಿ ಆತ ನಡೆಸಿದ ಆತ್ಮಸಾಧನೆಯ ಫಲವಾಗಿ ಜಾಗೃತಗೊಂಡು, ಸರ್ವೇಂದ್ರಿಯಗಳ ಮೂಲಕ ಹೊರಹೊಮ್ಮಿದ ಅಂತಸ್ಥ ಚೇತನದ ಕಿರಣಗಳು ಭುವಿಯನ್ನು ಬೆಳಗಿದವು..

ದಶರಥನ ಕೀರ್ತಿಲತೆಯು ಕ್ರಮಕ್ರಮವಾಗಿ ಪಾತಾಳದ ಆಳದಲ್ಲಿ ಬೇರು ಬಿಟ್ಟಿತು..
ಭುವಿಯಗಲ ವಿಸ್ತರಿಸಿತು..
ಮುಗಿಲು ಮುತ್ತಿಕ್ಕಿತು..
ತ್ರಿಲೋಕ ವಿಖ್ಯಾತನೆನಿಸಿದನಾತ..!

ಸತ್ಯಸಂಧನಾಗಿ, ಧರ್ಮನಿಷ್ಠನಾಗಿ ದಶರಥನು ರಾಜ್ಯಭಾರವನ್ನು ನಡೆಸುತ್ತಿರಲು..
ಅಯೋಧ್ಯೆಯು ಅಮರಾವತಿಯೊಡನೆ, ಕೋಸಲವು ಸ್ವರ್ಗದೊಡನೆ ಸ್ಪರ್ಧಿಸಿದವು..
ದಶರಥನು ದೇವತೆಗಳ ದೊರೆಗೆ ಮಿಗಿಲೆನಿಸಿದನು..


|| ಹರೇರಾಮ ||

Facebook Comments Box