LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಕ್ಕಿಂತ ಸಖನು೦ಟೆ..?

Author: ; Published On: ಬುಧವಾರ, ದಶಂಬರ 9th, 2009;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆಧರ್ಮ“..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..

ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!

ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!

ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣ
ವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.

ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:”ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!?
ಧರ್ಮರಾಜ ಉತ್ತರಿಸಿದ, “ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು

ಮುಂದೆ ಸಾಗುತ್ತಿದ್ದಂತೆಯೇ ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ಅಣ್ಣ, ಸಹದೇವನಿಗೇಕೆ ಹೀಗಾಯಿತು?
ಧರ್ಮರಾಜ ಉತ್ತರಿಸಿದ: “ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”

ಮತ್ತೆ ಕುಸಿದವನು ನಕುಲ, ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ”ವಾಯಿತೆಂದು ಧರ್ಮರಾಜ ಉತ್ತರಿಸಿದ.

ಮತ್ತೆ ಮೃತ್ಯುವಿನ ಸರದಿ ಅರ್ಜುನದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:”ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು?
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”

ಮಹಾಪ್ರಸ್ಥಾನ ಮುಂದುವರೆಯಿತು..

ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ?
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!

ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು.

ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.

ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ“ದ ಧರ್ಮರಾಜ.
ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.

ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.

ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು.

ಚಕಿತನಾದ ಇಂದ್ರ ಹೇಳಿದ, “ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ“. (Dogs are not allowed..!)

ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!

ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?

ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?

ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!

ನಾಯಿ ಮಾಯವಾಗಿತ್ತು..!!

ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!

ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ  ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!

ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?

ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?

ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?

ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

ಭೋಜರಾಜನ ಜೀವನಸಂದೇಶವನ್ನು ಗಮನಿಸಿ:

ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!

…ಧರ್ಮೋ ರಕ್ಷತಿ ರಕ್ಷಿತಃ …

45 Responses to ಧರ್ಮಕ್ಕಿಂತ ಸಖನು೦ಟೆ..?

 1. ಜಗದೀಶ್ B. R.

  ಹರೇ ರಾಮ..
  ಗುರುಗಳೇ, ನಮ್ಮ ಬದುಕು ದುರ್ಯೋಧನನ ಸ್ಥಿತಿಯಂತೆ ಇದೆ. ‘ಜಾನಾಮಿ ಧರ್ಮಂ ನಚಮೇವ ಪ್ರವೃತ್ತಿಹಿ…’
  ಇದರಿಂದ ಪಾರಾಗುವುದು ಹೇಗೆ?

  [Reply]

  Sri Samsthana Reply:

  ಧರ್ಮವನ್ನು ಪ್ರೀತಿಸಿ..
  ಯಾರಾದರೂ ನಮ್ಮ ಸಖನಾಗಬೇಕೆಂದರೆ..
  ನಾವು ಅವರನ್ನು ಮೊದಲು ಪ್ರೀತಿಸಬೇಕಲ್ಲವೇ..?
  ನಮ್ಮ ಪ್ರೀತಿಗೆ ಸೋತು ಧರ್ಮ ಒಮ್ಮೆ ನಮ್ಮ ಸಖನಾದರೆ ಮತ್ತೆಂದೂ ನಮ್ಮ ಬೆನ್ನು ಬಿಡದು..
  ಧರ್ಮರಾಜನ ಬೆನ್ನುಬಿಡದ ನಾಯಿಯಂತೆ..

  [Reply]

 2. Gowtam B K

  ‘ಅಶ್ವಥಾಮೋ ಹತ ಕುಂಜರಃ ‘ ಎಂದ ಧರ್ಮರಾಯ ಪಾಪಿ ಯಾಗಲಿಲ್ಲವೇ. ?

  [Reply]

  sriharsha.jois Reply:

  Adarartha ashvtthamanemba aaneyondu kollalpattitu yendallave?

  paapi hegagtane?

  [Reply]

  Sri Samsthana Reply:

  ಧರ್ಮರಾಜನ ಸ್ವೇಚ್ಛೆಯಲ್ಲ.. ಶ್ರೀಕೃಷ್ಣನ ಅನುಶಾಸನವದು..
  ಆದುದರಿ೦ದ ಶ್ರೀ ಕೃಷ್ಣನಲ್ಲಿಯೇ ಕೇಳಬೇಕಾದ ಪ್ರಶ್ನೆ ಇದು..
  ಯಾವುದು ನಮ್ಮನ್ನು ಶ್ರೀ ಕೃಷ್ಣನ ಸಮೀಪ ಕರೆದೊಯ್ಯುವುದೋ ಅದುವೇ ಧರ್ಮ..
  ಆತನಿಂದ ನಮ್ಮನ್ನು ದೂರಮಾಡುವುದು ಅಧರ್ಮ..
  ಅವನೇ ಆದೇಶಿಸಿದ ಮೇಲೆ ಮತ್ತೆ ಕೇಳಲೇನಿದೆ.?
  ಆಳವಾದ ವಿಷಯವಿದು.. ಮೇಲ್ನೋಟಕ್ಕೆ ತೀರ್ಮಾನಕ್ಕೆ ಬರುವಂಥದ್ದಲ್ಲ ..
  ಧರ್ಮವೆ೦ಬುದು ಒಂದು ಸ್ಥಿತಿ(condition)..
  ನಮ್ಮ ಉಪಾಧ್ಯಾಯರು ಹೇಳುತ್ತಿದ್ದ ನೆನಪು..
  ವೀಣೆಯಲ್ಲಿ ನಿರ್ದಿಷ್ಟವಾದ – ನಿರ್ದುಷ್ಟವಾದ ನಾದವೊಂದು ಹೊರ ಹೊಮ್ಮ ಬೇಕೆಂದರೆ ಅದನ್ನು ಶ್ರುತಿ ಮಾಡಬೇಕಾಗುತ್ತದೆ ..
  ಶ್ರುತಿ ಮಾಡಿದಾಗ ಆ ತಂತಿಗಳಲ್ಲಿ ಒಂದು ಸ್ಥಿತಿ ಉಂಟಾಗುತ್ತದೆ..
  ಸ್ವಲ್ಪ ಹೆಚ್ಚು ಬಿಗಿ ಮಾಡಿದರೂ.. ಸ್ವಲ್ಪ ಸಡಿಲ ಮಾಡಿದರೂ ಆ ನಾದ ಹೊರಬಾರದು..
  ಕಾರಣ ಆ ಸ್ಥಿತಿ ಕಳೆದು ಹೋಗಿದ್ದು..
  ಹಾಗೆಯೇ, ನಮ್ಮ ಶರೀರ ಮನಸ್ಸು ಪ್ರಕೃತಿಗಳ ಮೇಲೆ ಬೇರೆ ಬೇರೆ ಸಂಗತಿಗಳು ಬೀರುವ ಪ್ರಭಾವದಿಂದ ಉಂಟಾಗುವ ಸ್ಥಿತಿಗಳಿಗೆ ಧರ್ಮ – ಅಧರ್ಮಗಳೆಂದು ಹೆಸರು..
  ಪರಮಾತ್ಮ ದರ್ಶನಕ್ಕೆ – ಪರಮಾನಂದಾನುಭಾವಕ್ಕೆ ಪರಮ ಶಾಂತಿಯ ಆವಿರ್ಭಾವಕ್ಕೆ ಅನುಕೂಲವಾದ ಸ್ಥಿತಿಗೆ ಧರ್ಮವೆಂದು ಹೆಸರು..
  ವ್ಯತಿರಿಕ್ತವಾದ ಸ್ಥಿತಿಗೆ ಅಧರ್ಮವೆಂದು ಹೆಸರು..(ಈ ಸ್ಥಿತಿಗೆ ಕಾರಣವಾಗುವ ಕರ್ಮಗಳನ್ನು ಧರ್ಮ ಅಧರ್ಮಗಳೆಂದು ಮತ್ತೆ ವ್ಯವಹರಿಸಿದರು)
  ಹಾಗಾಗಿ ಒಂದು ಕರ್ಮದಿಂದ ಅಧರ್ಮ ಉ೦ಟಾಯಿತೇ..?ಅದು ಉಳಿದಿದೆಯೇ ..? ಎಂಬುದನ್ನು ಆತ್ಮಪರ್ಯಂತ ದೃಷ್ಟಿ ಹಾಯಿಸಿ ಅಲ್ಲಿರುವ ಪಾಪಪುಣ್ಯದ ಕಲೆಗಳನ್ನು ನೋಡಬಲ್ಲವರೇ ಹೇಳಬೇಕಾಗುತ್ತದೆ..
  ಶ್ರೀ ವ್ಯಾಸರ೦ಥವರ ದೃಷ್ಟಿ ಧರ್ಮರಾಜನನ್ನು ಧರ್ಮಮಯನನ್ನಾಗಿ ಕ೦ಡಿದೆ..

  [Reply]

 3. vdaithota

  vyavaharika badukinalli “darma” kke kavalugaliruttavalla…???!!!!

  [Reply]

  Sri Samsthana Reply:

  ಕವಲುಗಳಿರುವುದು ಮನಸ್ಸಿನಲ್ಲಿ ..ಧರ್ಮವೆ೦ಬುದು ಜೀವದ ಪರಿಪೂರ್ಣತೆಯ ಒಂದು ಸ್ಥಿತಿ. ಸ್ವಯ೦ ಅದ್ವೈತಾವಸ್ಥೆಯೇ ಅದು. ಅಲ್ಲಿ ಕವಲುಗಳಿಗೆ ಅವಕಾಶವೇ ಇಲ್ಲ..
  ನಿಜವಾದ ಧರ್ಮವಾವುದೆಂದು ತಿಳಿಯದೆ ಮನಸ್ಸು ಕವಲೊಡೆಯುವಾಗ ನಿನ್ನಾತ್ಮವನ್ನು ನಿರೀಕ್ಷಿಸು..
  ಆತ್ಮ ತೋರಿದ ಹಾದಿಯಲ್ಲಿ ನಡೆ ಇದಕ್ಕೆ ‘ಆತ್ಮತುಷ್ಟಿ’ ಪ್ರಮಾಣ ವೆಂದು ಹೆಸರು..
  ಅ೦ತರ೦ಗ ಕಲುಷಿತವಾದಾಗ ಆತ್ಮದ ಧ್ವನಿಯೇನೆ೦ಬುದು ಅರ್ಥವಾಗದಿರುವುದುಂಟು..ಭ್ರಮೆ ಬರುವುದುಂಟು..
  ಆಗ ವೇದಗಳ ಕಡೆ ನೋಡು. ಜೀವವನ್ನು ಸ೦ಪೂಣ೯ವಾಗಿ ಧರ್ಮ ಆವರಿಸಿದ ಸ್ಥಿತಿಯಲ್ಲಿ ತಾನಾಗಿಯೇ ಹೊರ ಹೊಮ್ಮಿದ ಉದ್ಗಾರಗಳು ಅವು..
  ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವ್ಯಕ್ತಿಯ ಮೂಲಕ ಆಗುವ ಧರ್ಮದ ಅಭಿವ್ಯಕ್ತಿಯೇ ವೇದಗಳು..
  ವೇದಗಳ ತಾತ್ಪರ್ಯ ಮನಸ್ಸಿಗೆ ಬರದಿದ್ದರೆ ಸ್ಮೃತಿಗಳ ಕೆಡೆ ನೋಡು. ನಿನ್ನ ಹತ್ತಿರ ಬಂದು ನಿನಗರ್ಥವಾಗುವಂತೆ ಧರ್ಮದ ಮರ್ಮಗಳನ್ನು ಬಿಡಿಸಿಹೇಳುತ್ತವೆ ಅವು..
  ಇನ್ನೂ ಗೊತ್ತಾಗದಿದ್ದರೆ ಮಹಾಪುರುಷರ ಜೀವನವನ್ನು ಗಮನಿಸು..
  ಜೀವಗಳ ಮೇಲಿನ ಕರುಣೆಯಿಂದ ನಾರಾಯಣನೇ ನರನಾಗಿ ದಿವಿಯಿಂದ ಭುವಿಗಿಳಿಯುತ್ತಾನೆ ..
  ತನ್ನ ಬದುಕಿನ ಮೂಲಕ ನಮ್ಮ ಸಂದೇಹ ಗಳಿಗೆ ಉತ್ತರನೀಡುತ್ತಾನೆ..
  ಇವೆಲ್ಲ ಗೊಂದಲವೆನಿಸಿದರೆ ನಿಶ್ಚಲ ಮನದಿಂದ ಧರ್ಮಕ್ಕೆ ಶರಣಾಗು..ದಾರಿತೋರೆಂದು ಮೊರೆಯಿಡು.. ಧರ್ಮವೆ೦ದೆ೦ದೂ ನಿನ್ನ ಕೈಬಿಡದು..

  [Reply]

  Raghavendra Narayana Reply:

  ಅದ್ಭುತ

  [Reply]

  vdaithota Reply:

  Hare Rama…
  dhanyalade Gurugale…
  Enna manada gondala gooda
  anishchayateya jalu hasinali
  neleyaguvudentu…
  Nischalateya hakki….
  Gurudeva toridiri gooda
  hasanagisuva pariya…
  Sharanade Shripadagalige..
  mabbaada kannugalu
  tadavarisuva kaigaligu
  adhara bedi….
  Sharanu..sharanu…

  [Reply]

  shobha lakshmi Reply:

  gurudeevaa….e uthara thrupthi kottidu….pranaamagalu….

  [Reply]

 4. Raghavendra Narayana

  The level of “Dharma” mentioned here is beyond my imagination to adapt at this point of time I think.

  At this point of time, we know that Dharma is great, but if someone asks to follow it then – would be difficult to agree. We know, we are aware, sometimes we preach the same thing to others, but the answer to “Are we practicing it?” question is always “No”.

  Good thing is we know Dharma is bigger than anything else. May be after some 50-100 “Janma”, we may start practicing.

  But whoever practicing it should be treated with high respect.

  For now, we are appreciating the level of Nakula and Sahadeva, yet to look at to Dharmaraja level (if it happens before Yama Dharma Raja visit us – then little “Saadhane”..)

  [Reply]

  Raghavendra Narayana Reply:

  “That’s called GURU KRIPA – Makes impossible to I’m possible!!!” extract from “Shri Mukha”

  GURUGALE, how to get Guru Kripa please?

  [Reply]

  Sri Samsthana Reply:

  Gurukrupaa is ready..Waiting for you..open your heart and receive..thats it..

  [Reply]

  Raghavendra Narayana Reply:

  ಹೃದಯದಾ ನದಿಯಲಿ ನೆಲೆ-ಸೆಲೆ ಹೆಚ್ಚಾಗಬೇಕು,
  ಕಲ್ಮಶದ ಸಣ್ಣ ದೊಡ್ಡ ಕಲ್ಲುಗಲು ನುಚ್ಚು ನೂರಾಗಿ ನದಿಯಲಿ ಒ೦ದಾಗಬೇಕು, ರಭಸಕೆ ಜೊತೆಯಾಗಬೇಕು,
  ಕೋಟೆ ಕೊಟ್ಟಲೆಗಳ ದಾಟಿ ಪ್ರವಾಹದ೦ದದಿ ಸಾಗರವ ಸೇರಲು ಧುಮ್ಮಿಕ್ಕಬೇಕು..

  ಪರಿಪೂರ್ಣತೆ ಬಾರದೆ – ಮಿಲನವಾಗದೆ..
  ದರ್ಶನವಾಗದೆ – ಲೀನವಾಗದೆ..

  [Reply]

 5. Raghavendra Narayana

  Like the common debate in Ramayana about sending Sita to forest, Dharmaraja is commonly pointed out for betting his wife that too without her permission? How it can be justified as “Dharma”?

  [Reply]

  Sri Samsthana Reply:

  ಧರ್ಮರಾಜನಿಗೆ ತನ್ನ ತಮ್ಮಂದಿರು ಮತ್ತು ಪತ್ನಿಯೊಡನೆ ಅದ್ವೈತಭಾವವಿತ್ತು, ದ್ರೌಪದಿ ಮತ್ತು ಭೀಮಾರ್ಜುನ ನಕುಲ ಸಹದೇವರು ಧರ್ಮರಾಜನಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಎಂಬುದನ್ನು ನಾವು ಗಮನಿಸಬೇಕು.. ಅಪ್ಪಣೆ ಕೇಳುವ ಪ್ರಶ್ನೆ ಭೇದವಿರುವಲ್ಲಿ-ಬೇರೆಯವರಲ್ಲಿ ಮಾತ್ರವೇ ಬರುವಂಥದ್ದು..
  ಧರ್ಮರಾಜನೂ ಭೇದವೆಣಿಸಲಿಲ್ಲ..ಉಳಿದವರನ್ನು ಹೇಗೆ ಪಣಕ್ಕಿಟ್ಟನೋ ಹಾಗೆಯೇ ತನ್ನನ್ನೂ ಪಣಕ್ಕಿಟ್ಟುಕೊಳ್ಳುತ್ತಾನೆ.. ದ್ರೌಪದಿ ಪ್ರಶ್ನಿಸುವುದೂ ಇದನ್ನಲ್ಲ..
  ಧರ್ಮರಾಜ ತನ್ನನ್ನು ತಾನು ಪಣಕ್ಕಿಟ್ಟು ಸೋಲುತ್ತಿದ್ದಂತೆಯೇ ದಾಸನಾದ..ದ್ರೌಪದಿಯನ್ನು ಪಣಕ್ಕಿಟ್ಟು ಸೋತಿದ್ದು ಆಮೇಲೆ..ದ್ರೌಪದಿಯ ವಾದವೇನೆಂದರೆ ದಾಸನಾಗುತ್ತಿದ್ದಂತೆಯೇ ಎಲ್ಲ ಹಕ್ಕುಗಳೂ ನಷ್ಟವಾಗುವುದರಿಂದ ಆಮೇಲೆ ತನ್ನನ್ನು ಪಣಕ್ಕಿಟ್ಟಿದ್ದು ಮತ್ತು ಸೋತಿದ್ದು ಅಸಿಂಧುವಾಯಿತು..ಹಾಗಾಗಿ “ತನ್ನ ಮೇಲೆ ಕೌರವರಿಗೆ ಹಕ್ಕು ಬರಲಿಲ್ಲ” ಎಂಬುದಾಗಿ..

  [Reply]

 6. Anuradha Parvathi

  Hare Raama Gurugale, As always it was superb. I do not know how much we can follow it. Almost all we do in day to day life is paapa according to Garudapurana. It is really scary.

  Is there a simple way of following dharma? I hope my question is appropriate

  [Reply]

  Sri Samsthana Reply:

  ಧರ್ಮ-ಸಂದೇಹ ಬಂದಲ್ಲೆಲ್ಲಾ ‘ಸರಿಯಾದ ಹಾದಿಯಲ್ಲಿ ಮುನ್ನಡೆಸು’ ಎಂಬುದಾಗಿ ಸರ್ವೇಶ್ವರನಲ್ಲಿ ಮೊರೆಯಿಡು..ಮತ್ತೆ ಹೃದಯ ಹೇಳಿದಂತೆ ನಡೆದುಕೋ..

  [Reply]

 7. Jayashree Yajnesh

  ತುಂಬಾ ಚೆನ್ನಾಗಿದ್ದು ಸಂಸ್ಥಾನ

  [Reply]

 8. shobha lakshmi

  harEraama..ಗುರುದೇವಾ..ಒ೦ದು ಸ೦ಶಯ……ಧರ್ಮರಾಯ ಪಗಡೆ ಆದಿದ್ದುಧರ್ಮವೆ?? ಪಗಡೆಲಿ ತನ್ನ ಎಲ್ಲವನ್ನೂ ಪಣಕ್ಕಿಟ್ಟದು..ಅದರಲ್ಲೂ ಧರ್ಮಪತ್ನಿ ಯ ವಸ್ತ್ರಾಪಹರಣ ಮಾಡುವಗ ನೋಡಿಕೊ೦ಡು ಸುಮ್ಮನಿದ್ದದು ಧರ್ಮವ?? ರಾಜ ಜೂಜು ಆಡುದು ಧರಮವೆ??
  ಧರ್ಮರಾಯ ಜೂಜಿಗೆ ಒಪ್ಪಿಕೊ೦ಡಕಾರಣ ತಾನೇ ಮಹಾಭಾರತ ಯುಧ್ಧಕ್ಕೆ ಕಾರಣ ಆಯಿತು?? ಅಷ್ಟೆಲ್ಲ ಜನರ ಮಾರಣ ಹೋಮ ಆಗಿದ್ದು??
  ಗುರುದೇವ..ದ್ರೌಪದಿ ಸಹಿತ ಉಳಿದ ಪಾ೦ಡವರು ಅವರ ಸಣ್ಣ ತಪ್ಪು ಯಾವ ಲೆಕ್ಕ ??ಧರ್ಮರಾಯನೆದುರು??
  ಆದರೂ ಏಕೆ ತಾರತಮ್ಯ??

  [Reply]

  Sri Samsthana Reply:

  ಯುಧ್ಧಕ್ಕಾಗಲೀ, ದ್ಯೂತಕ್ಕಾಗಲೀ ಕರೆದರೆ ಒಲ್ಲೆನೆನ್ನುವುದಿಲ್ಲ’ ಎನ್ನುವುದು ಧರ್ಮರಾಜನ ಉಪಾ೦ಶುವ್ರತವಾಗಿದ್ದಿತು..ಇದನ್ನು ತಿಳಿದೇ ಕೌರವರು ಆತನನ್ನು ದ್ಯೂತಕ್ಕೆ ಕರೆದದ್ದು..ಮುಂದಿನದ್ದು ಅನಿವಾರ್ಯ..ಧರ್ಮರಾಜ ಅಲ್ಲಿ ಅಸಹಾಯಕ..
  ಮಹಾಭಾರತ ಯುದ್ಧ ಕೆಟ್ಟದ್ದೆಂದು ಏಕೆ ಭಾವಿಸಬೇಕು..? ದುಷ್ಟಸ೦ಹಾರ -ಭೂಭಾರಹರಣಗಳು ಅದರಿಂದಲೇ ಅಲ್ಲವೇ ನೆರವೇರಿದ್ದು..ಕೃಷ್ಣಾವತಾರದ ಉದ್ದೇಶವಾದರೂ ಏನು..?

  [Reply]

  shobha lakshmi Reply:

  dharma sthaapanegaagi krishnavathara nija…

  eega namma kaladalli andigintha hechu dushtariruvallave??? bhubhara ,,ella hechagide…bhagavanthana avathara elli innu agilla??? innu thada yaake??

  [Reply]

 9. Ashwini Bhat

  blog ತುಂಬಾ ಇಷ್ಟ ಆತು ಸಂಸ್ಥಾನ…

  [Reply]

 10. Arun Hegde

  || ಹರೇ ರಾಮ ||ಗುರುಗಳೇ, ಮನಸ್ಸಿನ ಕಾಮನೆಗಳಿಂದಾಗಿ ಹಾಗೂ ಸಮಾಜ ಬಾಹಿರರಾದ ದುಷ್ಟಮನುಷ್ಯರ ದ್ವೇಷಪೂರಿತವಾದ ತಿರಸ್ಕರಣೀಯವಾದ ಮಾತುಗಳನ್ನು ಕೇಳುವದರಿಂದಲೂ, ಬೇಕು ಬೇಕು ಎಂದು ಕಾಣುವ ಬ್ರೇೂಕೇ ಇಲ್ಲದ ಅತಿಆಸೆಯಿಂದಾಗಿ, ಅಹಿತವನ್ನು ಮಾಡುವ ದುಷ್ಟರ ಸೇವೆ ಮಾಡುವದರಿಂದ ಧರ್ಮಸಾಧನಗಳಾದ
  ಅಹಿಂಸಾ ಸತ್ಯಮಸ್ತೇಯಂ ಶೌಚಮಿನ್ದ್ರಿಯನಿಗ್ರಹಃ | ದಾನಂ ದಮೊ ದಯಾ ಕ್ಷಾಂತಿ ಗಳನ್ನು ಪಾಲಿಸುವದು ಕಷ್ಟಸಾಧ್ಯವಾಗಿದೆ. “ಪಾಪಂ ಕುರ್ವಂತಿ ಯತ್ನತಃ” ಇದರಿಂದ “ಧರ್ಮನೆಂಬ ಮೋಕ್ಷಕಾರಕ ಸಖ” ನನ್ನು ಉಳಿಸಿಕೊಳ್ಳುವದು ಕಷ್ಟಕರವಾಗಿದೆ. “ಅಭ್ಯಾಸಯೋಗೆನ ……”ಅಂತ ಗೊತ್ತಿದ್ದರೂ ಜಾಲದಿಂದ ಹೊರಬರಲೆತ್ನಿಸುತ್ತಿರುವ ನಮ್ಮೆಲ್ಲರನ್ನೂ ಕೈಹಿಡಿದೆಳೆದು ಪೋಷಿಸಬೇಕೆಂದು ಪ್ರಾರ್ಥಿಸುವೆ….
  ಗುರುಗಳೇ, “ಸ್ವಧರ್ಮೆ ನಿಧನಂ ಶ್ರೇಯಃ ಪರಧರ್ಮೊ ಭಯಾಪಹಃ” ಎನ್ನುವ ಗೀತಾಚಾರ್ಯನ ಮಾತನ್ನು ಅದೆಷ್ಟೋ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಲ್ಲಿ ಸ್ವಧರ್ಮ-ಪರಧರ್ಮ ದ ವಿಷಯದಲ್ಲಿ ಗೀತಾಚಾರ್ಯನ ಅಭಿಪ್ರಾಯ ಸ್ಪಷ್ಟಪಡಿಸಬೇಕಾಗಿ ನಮ್ರನಾಗಿ ಕೇಳಿಕೊಳ್ಳುತ್ತೇನೆ.

  [Reply]

  Raghavendra Narayana Reply:

  Many of us have questions and confusions on the similar lines I feel.

  [Reply]

  Raghavendra Narayana Reply:

  “Satsanga” is considered as great thing.. where are the similar mind people gathering and living together?

  [Reply]

  Sri Samsthana Reply:

  ಔಷಧದ ಅಂಗಡಿಯಲ್ಲಿ ಸಾವಿರಾರು ಔಷಧಗಳಿವೆ..ವೈದ್ಯರು ನಮಗೆ ಯಾವ ಔಷಧ ಉಚಿತವೆಂದು ನಿರ್ದೇಶನ ನೀಡಿದ್ದಾರೋ ಅದನ್ನು ಮಾತ್ರವೇ ನಾವು ತೆಗೆದುಕೊಳ್ಳಬೇಕು..ಅದು ಸ್ವಧರ್ಮ..ಹಾಗೆ ಮಾಡದೆ ಬೇರೆಯವರ ಔಷಧವನ್ನು ನಾವು ನುಂಗಿದರೆ ಅದು ಭಯಾವಹವಲ್ಲದೆ ಮತ್ತೇನಾಗಲು ಸಾಧ್ಯ..?

  [Reply]

 11. Madhu Dodderi

  ತಂಬಾ ತುಂಬಾ ತುಂಬಾ… ಇಷ್ಟವಾಯಿತು…

  [Reply]

 12. Raghavendra Narayana

  Maha Darshana….?
  ————————–

  ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
  ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಳನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಸ್ಥಿರನೆಲ್ಲಿ….?

  ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?

  Yudistira is really Dharmaraja, no questions – no pointing finger – let us start to practice then??? Krishna Paramathma is required with us then… better in Saguna Roopa.

  [Reply]

 13. Raghavendra Narayana

  ಗುರುಗಳೇ, ಧರ್ಮರಾಜ ಕೈಗೊ೦ಡ ಧರ್ಮ ಯಾವುದು?

  [Reply]

  Sri Samsthana Reply:

  ಜೀವಧರ್ಮ
  ಮಾನವಧರ್ಮ
  ಕ್ಷತ್ರಿಯಧರ್ಮ
  ರಾಜಧರ್ಮ ಹೀಗೆ ಹೇಳುತ್ತಾ ಹೋಗಬಹುದು..ಮುಖ್ಯವಾಗಿ ಧರ್ಮದ ಮರ್ಮ ಆತನಿಗೆ ಅರ್ಥವಾಗಿತ್ತು..ಆತ ಆ ರೇಖೆಯನ್ನು ಬಿಟ್ಟುಹೋಗಲು ಎಂದೂ ಬಯಸಲಿಲ್ಲ..

  [Reply]

  shobha lakshmi Reply:

  thumba olle uthara ….gurugalee…..thumba thiluvalike neediddiri……pranamagalu

  [Reply]

 14. Raghavendra Narayana

  Dharmaraja looks complex personality, many of his deeds are difficult to judge and understand. Lots of threads are running in mind without conclusions…

  Gurugale, kindly explain us.

  [Reply]

 15. ravi n

  illadudara kadege tudivude jeevana… iruvudarolage kaleduhoguvude…….. marana alva……?

  [Reply]

 16. Arun Hegde

  ಹರೇ ರಾಮ…
  ತನ್ನ ಕರ್ತವ್ಯವನ್ನು ಮತ್ತು ತತ್ವವನ್ನು ಬಲ್ಲ ರಾಜನೇ ಧರ್ಮರಾಜ. ಧರ್ಮರಾಜನೇ ಹೇಳಿದ ಮಾತು “ ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತೆ ಪ್ರಜಾಃ ”
  “ಯಾವುದು ಜನತೆಯನ್ನು ಪೋಷಿಸುತ್ತದೆಯೋ ಅದು ಧರ್ಮ”” sustaining force of the society.
  ಋಷಿಗಳು ಧರ್ಮಾಧರ್ಮ ವಿಷಯದಲ್ಲಿ ವೇದಗಳೇ ಪರಮಪ್ರಮಾಣವಾಗಿದೆಯೆಂದು “ವೇದೋಽಖಿಲಂ ಧರ್ಮಮೂಲಂ” ಎಂದು ಸಾರಿದರು. ಧರ್ಮಮೂಲವನ್ನರಿತು ವಿಸ್ತರಿಸಿ ಸಮಸ್ತ ಮಾನವೋದ್ಧಾರಕ್ಕಾಗಿ ಧರ್ಮಶಾಸ್ತ್ರ ರಚಿಸಿದರು.ಧರ್ಮಸಾಧನಗಳನ್ನೂ ವಿವರಿಸಿದರು.
  ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ..
  ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
  ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!
  ಗುರುಗಳ ಮಾತನ್ನನುಸರಿಸೋಣ. ಧರ್ಮಶೀಲರಾಗೋಣ. ಶ್ರೇಯಸ್ಸಿನ ಮಾರ್ಗದಲ್ಲಿ ಸಾಗೋಣ.
  ಸದಾಕಾಲ ನಮ್ಮನ್ನು ರಕ್ಷಿಸುವ ಸಖನ ಸಂಗದಲ್ಲಿದ್ದು (ಸತ್-ಸಂಗ), ನಮ್ಮ ಪ್ರಿಯಸಖನನ್ನು ರಕ್ಷಿಸೋಣ.(ಧರ್ಮೋ ರಕ್ಷತಿ ರಕ್ಷಿತಃ )…

  [Reply]

 17. Raghavendra Narayana

  ಗುರುಗಳ ಈ ಕೆಳಗಿನ ಸಾಲುಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಮತ್ತೆ ಮತ್ತೆ ಓದಬೇಕೆನಿಸುತ್ತದೆ. ರಮಣೀಯವಾಗಿದೆ, ಮನನೀಯವಾಗಲು – ಗುರುಗಳ ಆಶೀರ್ವಾದ ಬೇಕು.

  ________________________________________________________
  “ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
  ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
  ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
  ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
  ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
  “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
  ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
  ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?”
  ________________________________________________________

  [Reply]

 18. sriharsha.jois

  SAMSTHANA…….

  Dronachaaryara chkravyoohadodolage ABHIMANYUvannu

  kaluhisuvaaga DHAMARAJAna manasthiti hegirabahudu ?

  Hintirugi baralaaranembudu avanige tilidtte?

  Dyootavaduvaaga avanu nadedukonda reeti samanjasave?

  Illelloo avanu dharmalopavesagidantaagalillave?

  [Reply]

  Sri Samsthana Reply:

  ಅಭಿಮನ್ಯು ರಣಕ್ಷೇತ್ರಕ್ಕೆ ಬಂದಿದ್ದು ೧೩ನೆಯ ದಿನವೆಂಬುದು ತಪ್ಪುಕಲ್ಪನೆ..ಯುದ್ಧ ಪ್ರಾರ೦ಭವಾದ ಕ್ಷಣದಿಂದಲೇ ಅಭಿಮನ್ಯು ಪಾಂಡವರ ಪಕ್ಷದಿಂದ ಹೋರಾಡುತ್ತಿದ್ದ.. ಆಗ ಆತ ಕೇವಲ ಶಿಶುವೂ ಅಲ್ಲ. ಆತನಿಗಾಗ ೧೬ ವಯಸ್ಸು..ತನ್ನ ಪರಾಕ್ರಮದಿಂದಾಗಿ ಜಗತ್ತಿನ ಅಗ್ರಗಣ್ಯ ಮಹಾವೀರರೊಳಗೆ ಅದಾಗಲೇ ಆತ ಪರಿಗಣಿತನಾಗಿದ್ದ..
  ಚಕ್ರವ್ಯೂಹವನ್ನು ಅಭಿಮನ್ಯು ಭೇದಿಸಹೊರಟರೆ ಆಶೀರ್ವದಿಸಬೇಕಾದದ್ದು ಧರ್ಮರಾಜನ ಧರ್ಮ.. ಕ್ಷತ್ರಿಯಶ್ರೇಷ್ಠನಾಗಿ ಕ್ಷತ್ರಿಯಕುಮಾರನೊಬ್ಬನನ್ನು ಯುದ್ಧಕ್ಕೆ ನಿರುತ್ಸಾಹಗೊಳಿಸಿದರೆ ಆತನ ಕ್ಷತ್ರಧರ್ಮದ ಪಾಡೇನು..?
  ಇನ್ನು ಅಭಿಮನ್ಯುವಿನ ರಕ್ಷಣೆಯ ಬಗ್ಗೆ ಸೂಕ್ತ ಕ್ರಮಗಳನ್ನು ಧರ್ಮರಾಜ ಕೈಗೊಂಡಿದ್ದ..ಚಕ್ರವ್ಯೂಹವನ್ನು ಭೇದಿಸುವುದು ಮಾತ್ರವೇ ಅಭಿಮನ್ಯುವಿನ ಕರ್ತವ್ಯವಾಗಿದ್ದಿತು..ಒಮ್ಮೆ ಚಕ್ರವ್ಯೂಹದ ದ್ವಾರವನ್ನು ಅಭಿಮನ್ಯು ಭೇದಿಸುತ್ತಿದ್ದಂತೆಯೇ ಪಾಂಡವ-ಮಹಾವೀರರೆಲ್ಲರೂ ಚಕ್ರವ್ಯೂಹವನ್ನು ಪ್ರವೇಶಿಸಬೇಕೆನ್ನುವುದು ಆತನ ಯೋಜನೆಯಾಗಿದ್ದಿತು..ಆದರೆ ಒಮ್ಮೆ ಅಭಿಮನ್ಯು ಒಳ ಪ್ರವೇಶಿಸುತ್ತಿದ್ದಂತೆಯೇ ಜಯದ್ರಥ ಉಳಿದ ಪಾಂಡವವೀರರನ್ನೆಲ್ಲ ತಡೆಯುತ್ತಾನೆ..ಒಂದು ದಿನದ ಮಟ್ಟಿಗೆ ಅರ್ಜುನನ ಹೊರತು ಉಳಿದ ಪಾಂಡವರನ್ನು ತಡೆಯುವ ವರ ಆತನಿಗೆ ಶಿವನಿಂದ ಪ್ರಾಪ್ತವಾಗಿದ್ದುದರಿಂದ ಅದು ಸಾಧ್ಯವಾಯಿತು..ಇದು ವಿಧಿವಿಲಾಸವಲ್ಲದೆ ಮತ್ತೇನು..?ಇದರಲ್ಲಿ ಧರ್ಮರಾಜನ ತಪ್ಪೇನು..?

  [Reply]

 19. Shiva shankar

  ಧರ್ಮಕ್ಕಿಂತ ಸಖನು೦ಟೆ.oodi. Bhauka nade.. Kannili neeru banthu.. Gurugale…

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 20. Sharada Jayagovind

  Hare Rama samsthana

  In today’s world of corruption,cheating and falsehood what brand of Dharma should we follow and teach our children. ?

  People say one thing and follow another thing. In such a world ,survival means to follow adharma.How to solve this problem?

  [Reply]

 21. Sharada Jayagovind

  .Harerama Samsthana

  1 Please explain the difference between dharma and religion.

  2 Can somebody’s dharma become adharma to others? who is to judge ?

  3. Does dharma change according to time?

  [Reply]

 22. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಸಾಮಾನ್ಯರಾದ ನಮಗೆ ಧರ್ಮ ಯಾವುದು ಅಧರ್ಮ ಯಾವುದು ಎಂದು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ…. ನಮಗಿರುವ ಒಂದೇ ಒಂದು ದಾರಿ ಎಂದರೆ ಕಣ್ಣೆದುರಿಗಿರುವ ಈ ಶ್ರೀರಾಮಚಂದ್ರನ ಕೈ ಹಿಡಿದು ಮುನ್ನಡೆಯುವುದು.

  [Reply]

 23. Harihar Bhat, Bangalore.

  ಶ್ರೀ ಗುರುಬ್ಯೋನಮಃ.
  ಸರ್ವೇ ಸಾಮಾನ್ಯ ಧರ್ಮಾಚರಣೆಯ ಹವ್ಯಕ ಕುಡಿಗಳಿಗೆಲ್ಲ ಧರ್ಮ ಅರ್ಥ ಕಾಮ ಮೋಕ್ಷಗಳ ವಿಚಾರ ಹೊಸದೆನಿಸುವದಿಲ್ಲ. ಆದರೆ ಇಂದಿನ ದಿನಗಳಲ್ಲಿ , ಭೂತ – ವರ್ತಮಾನ – ಭವಿಷ್ಯತ್ ಕಾಲಗಳಲ್ಲೂ ಸದಾ ಅಸ್ತಿತ್ವದಲ್ಲಿರಬಹುದಾದ ” ಧರ್ಮ” ಶ್ರೀಗಳಿಂದ ವಿಶ್ಲೇಷಣೆ ಗೊಳಗಾದಾಗ , ಏನೋ ಒಂದು ಅವ್ಯಕ್ತ ತ್ರಪ್ತಿ ಉಂಟು ಮಾಡುವದೆನ್ನುವದರಲ್ಲಿ ಎರಡು ಮಾತಿಲ್ಲ.
  ಹವ್ಯಕರು ಮೂಲತಃ ವಿಚಾರಪ್ರಿಯರು. ವೈಚಾರಿಕ ಸಾಹಿತ್ಯ ಅನುಭವಿಸುವವರು – ಅನುಭಾವಿಸುವವರು. ಚರ್ಚಾಸಕ್ತರು. ಕೇವಲ ಕೈ ಮುಗಿದು ಮುಂದೆ ಸಾಗುವವರಲ್ಲ. ಈ ಮೇಲೆ ಲಿಖಿತವಾಗಿರುವ ಪ್ರತಿಕ್ರಿಯೆಗಳೇ ನನ್ನ ಅಕ್ಷರಗಳನ್ನು ಪುರಸ್ಕರಿಸುತ್ತಿವೆ.
  ಹೀಗಿರುವಾಗ ಚರ್ಚೆ, ಆರೊಗ್ಯಪೂರಕ ವಾದ-ವಿವಾದಗಳಿಗೆ ಶ್ರೀಗಳೇ ಒಂದು ವೇದಿಕೆ (forum) ನಿರ್ಮಿಸಿ , ತಲೆ ತಲಾಂತರದಿಂದ ಬಳುವಳಿ ಪಡೆದಿರುವ, ಮಾಗಿದ ಮಿದುಳುಗಳಿಗೆ, ಪಕ್ವತೆಯತ್ತ ಸಾಗಲು ಅನುಕೂಲ ಕಲ್ಪಿಸಬಹುದಲ್ಲವೇ?
  ಶ್ರೀಗಂಧ ಜಗುಲಿ( ಅಗುಳಿ ) ಯಲ್ಲಿಡದೆ ಸರಿಯಾಗಿ ತೀಡಿದರೆ ತಾನೇ ಎಲ್ಲೆಡೆ ಘಮ ಘಮಿಸುವದು?

  ಹರೇ ರಾಮ.

  ಹರಿಹರ ಭಟ್, ಬೆಂಗಳೂರು.
  September 17 , 2012 .

  [Reply]

 24. gshegde

  We expect more….. Harerama……..

  [Reply]

Leave a Reply

Highslide for Wordpress Plugin