ಅದೊಂದು ಶಿಲ್ಪ ಶಾಲೆ..!!

ತನ್ನ ಅಮರ ಶಿಲ್ಪಗಳಿಂದ ಲೋಕ ವಿಖ್ಯಾತನಾಗಿದ್ದ ಮಹಾ ಶಿಲ್ಪಿಯೊಬ್ಬ ಅಲ್ಲಿಯ ಗುರುಸ್ಥಾನವನ್ನಲಂಕರಿಸಿದ್ದ..!
ಆತನ ಶಿಷ್ಯರಲ್ಲೊಬ್ಬ ಗುರುವಿಗೆ ಸರಿಮಿಗಿಲೆನಿಸುವ ಕೈಚಳಕ ಹೊಂದಿದ್ದ..

ಕೈಚಳಕವನ್ನೇನೋ ಹೊಂದಿದ್ದ, ಆದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಗುರುವಿನ ಶಿಲ್ಪಗಳಿಗೆ ಸರಿಮಿಗಿಲೆನಿಸುವ ಶಿಲ್ಪಗಳನ್ನು ರಚಿಸಲು ಆತನಿಂದ ಸಾಧ್ಯವಾಗುತ್ತಿರಲಿಲ್ಲ..!

ಒಮ್ಮೆ ಆತ ತನ್ನ ಜಿಜ್ಞಾಸೆಯನ್ನು ಗುರುವಿನ ಮುಂದಿಟ್ಟ:

ಅದೆಷ್ಟೋ ಪ್ರಯತ್ನಿಸಿದೆ, ಆದರೆ ತಮ್ಮ ಶಿಲ್ಪಗಳ ಶ್ರೇಣಿಯಲ್ಲಿ ಸಲ್ಲುವಂತಹ ಶಿಲ್ಪಗಳನ್ನು ರಚಿಸಲು ಸಾಧ್ಯವಾಗಲೇ ಇಲ್ಲ..!!!
ತಮ್ಮ ಸಿದ್ಧಿಯ ಮರ್ಮವೇನು ಗುರುಗಳೇ..?!!

ಕಣ್ತೆರೆಸುವಂತಹ ಉತ್ತರ ಗುರುವಿನ ಕಡೆಯಿಂದ ಬಂದಿತು..!

ಕೆತ್ತನೆಗಾಗಿ ಶಿಲೆಯನ್ನು ಆಯ್ದುಕೊಂಡ ನಂತರ ನಾನೊಮ್ಮೆ ತದೇಕಚಿತ್ತನಾಗಿ ಏಕಾಗ್ರದೃಷ್ಟಿಯಿಂದ ಅದನ್ನೇ ನೋಡುತ್ತೇನೆ..
ಕೊಂಚಹೊತ್ತಿನಲ್ಲಿಯೇ, ಕೆತ್ತನೆಮಾಡಬೇಕಾಗಿರುವ ಮೂರ್ತಿ ನನಗೆ ಅಲ್ಲಿ ಗೋಚರಿಸ ತೊಡಗುತ್ತದೆ..
ಮುಂದಿನ ಕೆಲಸ ಬಹುಸುಲಭ..!
ಶಿಲೆಯಲ್ಲಿ ಮೂರ್ತಿಯಲ್ಲದ ಭಾಗವನ್ನು ತೆಗದು ಹಾಕಿದರಾಯಿತು..!!

ಬಂಡೆಯಲ್ಲಿಯೂ ಭಗವಂತನನ್ನು ಕಾಣುವುದು ಶಿಲ್ಪಿಯ ದೃಷ್ಟಿ..!
ಪಾಪಿಯಲ್ಲಿಯೂ ಪರಮಾತ್ಮನನ್ನು ಕಾಣುವುದು ಗುರುದೃಷ್ಟಿ..!!

ಶರೀರದ ಹೊರ ಅವರಣವನ್ನು ಭೇದಿಸಿ ಒಳಹೊಕ್ಕು ಅಲ್ಲಿಯ ಗುಣ ದೋಷಗಳನ್ನು ಗುರುತಿಸುವುದು ಎಕ್ಸ್ ರೇ ದೃಷ್ಟಿ..!!

ಹೊರಗಿನ ಶರೀರವನ್ನೂ ಒಳಗಿನ ಮನಸ್ಸನ್ನೂಭೇದಿಸಿ ಎಕ್ಸ್ ರೇ ಗಿಂತಾ ಆಳಕ್ಕಿಳಿದು ಆತ್ಮದ ದಿವ್ಯತೆಯನ್ನು ಹುಡುಕುವುದು ಗುರು ದೃಷ್ಟಿ..!!

ದಿವ್ಯತೆ ಮಾತ್ರವೇ ತೋರಿದರೆ ತಿದ್ದುವ ಮಾತೇ ಇಲ್ಲ..!!
ದೋಷಗಳು ಮಾತ್ರವೇ ತೋರಿದರೆ ತಿದ್ದುವುದಾದರೂ ಎಲ್ಲಿಂದ..!?

ಒಂದು ಕಣ್ಣಿನಿಂದ ವ್ಯಕ್ತಿತ್ವದ ಆಳದಲ್ಲಿ ಹುದುಗಿರುವ ದಿವ್ಯತೆಯನ್ನು ಕಾಣಬೇಕು..!
ಇನ್ನೊಂದು ಕಣ್ಣಿನಿಂದ ಆ ದಿವ್ಯತೆಯನ್ನು ಮುಸುಕಿರುವ ದೋಷಗಳನ್ನೂ ಕಾಣಬೇಕು..!
ಮತ್ತೆ ಆ ದೋಷಗಳನ್ನು ಕಳೆಯಬೇಕು, ದಿವ್ಯತೆಯನ್ನು ಬೆಳಗಿಸಬೇಕು..!

ಇದು ಗುರು ದೃಷ್ಟಿಯ ಕಾರ್ಯ ವೈಖರಿ..!

ಗುರುದೃಷ್ಟಿಯೆಂಬುದು ಶಿಷ್ಯನ ಪಾಲಿಗೆ ಗಂಗಾ ಸ್ನಾನವಿದ್ದಂತೆ..!!
ಒಳ ಹೊರಗಿನ ದೋಷಗಳನ್ನು ತೊಳೆದು ಶುದ್ಧವಾಗಿಸುವ ನೋಟವದು..!

ಕತ್ತಲೆಯನ್ನು ಕಳೆಯುವುದು ಮತ್ತು ಭೂಮಿಯನ್ನು ಬೆಳಗಿಸುವುದು ಸೂರ್ಯನಿಗೆ ಎರಡು ಕಾರ್ಯಗಳಲ್ಲ..
ಬಾನಿನಲ್ಲಿ ಸೂರ್ಯನುದಯಿಸಿ ಭೂಮಿಯನ್ನೊಮ್ಮೆ ನೋಡಿದರೆ ಸಾಕು,
ಕತ್ತೆಲೆ ಕಾಲಿಗೆ ಬುದ್ಧಿಹೇಳುತ್ತದೆ..
ಭೂಮಿ ಬೆಳಗುತ್ತದೆ..!

ಶಿಷ್ಯನ ಬದುಕಿನ ಬಾಂದಳದಲ್ಲಿ ಗುರುಸೂರ್ಯನುದಯಿಸಿದರೂ ಆಗುವುದು ಹೀಗೆಯೇ..!!

ಮೂಕ ಬಾಲಕನನ್ನು ಹಸ್ತಾಮಲಕರನ್ನಾಗಿಸಿದ್ದು ಗುರುದೃಷ್ಟಿ..!
ಪರಮ ಪಾತಕಿಯಾಗಿದ್ದ ಅಂಗುಲಿಮಾಲನಲ್ಲಿ ಪರಿವರ್ತನೆ ತಂದಿದ್ದು ಗುರುದೃಷ್ಟಿ..!

ತನ್ನೊಳಗೆ ಹುದುಗಿರುವ ಪರಮಾತ್ಮನೆಂಬ ಅಮೃತವನ್ನು ದೃಷ್ಟಿಯೆಂಬ ಸೌಟಿನಿಂದಲ್ಲವೇ ಗುರು, ಶಿಷ್ಯರ ಹೃದಯವೆಂಬ ತಟ್ಟೆಗಳಿಗೆ ಬಡಿಸುವುದು…!!!?

ಗುರುದೃಷ್ಟಿಗೆ,

ಗಂಗೆ ಬರಿಯ ನೀರಲ್ಲ..!
ಕಾಶಿ ಬರಿಯ ಊರಲ್ಲ..!
ಗೋವು ಕೇವಲ ಪ್ರಾಣಿಯಲ್ಲ..!
ತುಳಸಿ ಜಡವಾದ ಗಿಡವಲ್ಲ..!
ರಾಮ – ಕೃಷ್ಣರು ಮನುಷ್ಯ ಮಾತ್ರರಲ್ಲ..!
ಸಾಲಿಗ್ರಾಮ ಬರಿಯ ಕಲ್ಲಲ್ಲ…!

ಎಲ್ಲೆಲ್ಲೂ ಕಾಣದ ಪರಮಾತ್ಮನನ್ನು..
ಎಲ್ಲೆಲ್ಲೂ ಕಾಣುವ – ತೋರುವ ಗುರುದೃಷ್ಟಿಯೊಮ್ಮೆ ಸೋಕಿದರೆ ಸಾಕು,
ಮಾನವ ಮಾಧವನಾಗುವನಲ್ಲವೇ..!

ರಾಮಬಾಣ: ಗುರುವಿನ ಕಣ್ಣಿಗೆ ಕಲ್ಲಿನಲ್ಲಿಯೂ ಶಿವದರ್ಶನ, ಪಾಮರನ ಕಣ್ಣಿಗೆ ಶಂಕರನೂ ಶಿಲೆಯಾಗಿ ತೋರುತ್ತಾನೆ!

Facebook Comments Box