||ಹರೇರಾಮ||

|| ಯೋರ್ಥೇ ಶುಚಿಃ ಸ ಶುಚಿಃ ನ ಮೃದ್ವಾರಿ ಶುಚಿಃ ಶುಚಿಃ ||

ವ್ಯಕ್ತಿ ಶುದ್ಧನಾಗುವುದು ಸಾಬೂನು, ನೀರುಗಳಿಂದಲ್ಲ, ಹಣದ ವಿಷಯದಲ್ಲಿ ಯಾರು ಶುದ್ಧನೋ ಅವನು ಮಾತ್ರವೇ ನಿಜವಾಗಿಯೂ ಶುದ್ಧನು..!!

ಭಾಗ್ಯದ ಲಕ್ಷ್ಮಿ ಬಾರಮ್ಮ..

ಭಾಗ್ಯದ ಲಕ್ಷ್ಮಿ ಬಾರಮ್ಮ..

ಶ್ರೀಮಂತರೊಬ್ಬರ ಮನೆಯಲ್ಲಿ ಸಂತರೊಬ್ಬರ ಶುಭಾಗಮನವಾಗಿತ್ತು.

ಸಂಭ್ರಮದ ಸ್ವಾಗತ, ವೈಭವದ ಪಾದಪೂಜೆಯ ನಂತರ ಸಮೃದ್ಧವಾದ ಭಿಕ್ಷೆ ಆ ಮನೆಯಲ್ಲಿ ನೆರವೇರಿತು..

ಅದು ಯಾವ ಮಾಟವೋ, ಭಿಕ್ಷೆಯನ್ನು ಸ್ವೀಕರಿಸಿದ ಸಂತ ಮನೆಯಿಂದ ಹೊರಡುವಾಗ ಬೆಳ್ಳಿಯ ತಟ್ಟೆಯೊಂದನ್ನು ಕದ್ದು ಜೊತೆಗೊಯ್ಯುತ್ತಾನೆ..!!!

ಬಲುದೂರ ಸಾಗಿದ ಮೇಲೆ, ಬಲುಹೊತ್ತು ಕಳೆದ ಮೇಲೆ ಉದರದಲ್ಲಿದ್ದ ಅನ್ನ ಕರಗಿ ಶುಭವಾದ ಹೊಸ ಅನ್ನ ಪ್ರವೇಶಿಸಿದ ಮೇಲೆ..ಇದ್ದಕ್ಕಿದ್ದಂತೆ ಸಂತನಿಗೆ ಎಚ್ಚರವಾಯಿತು.

“ಅರೇ ಈ ಕಳ್ಳಬುದ್ಧಿ ನನಗ್ಯಾಕೆ ಬಂತು..!!?? ಎಲ್ಲಿಂದ ಬಂತು..!!?”

ಕೊಂಚ ಚಿಂತಿಸುವಷ್ಟರಲ್ಲಿ ಶ್ರೀಮಂತನ ಮನೆಯ ಅನ್ನದ ಪ್ರಭಾವವೆಂದು ಸ್ಫುರಿಸಿತು..

ಒಡನೆಯೇ ಆತನ ಮನೆಗೆ ಧಾವಿಸಿದ ಸಂತ ಬೆಳ್ಳಿಯತಟ್ಟೆಯನ್ನು ಆತನಿಗೆ ಮರಳಿಸಿ ಮತ್ತೆ ಪ್ರಶ್ನಿಸುತ್ತಾನೆ..

“ನಿಜ ಹೇಳು ನಿನ್ನ ಈ ಸಂಪತ್ತು ಸಂಪಾದನೆಯಾದ ಮಾರ್ಗವಾವುದು..?”

ನಿಜವಾಗಿಯೂ ಕಳ್ಳತನದ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತಾಗಿದ್ದಿತು ಅದು..!!

ದುರ್ಮಾಗ೯ದಲ್ಲಿ ಸಂಪಾದಿಸಿದ ಹಣದ ದುಷ್ಪ್ರಭಾವ ಅನ್ನದ ಮೂಲಕ ತನು ಮನ ಜೀವನಗಳ ಮೇಲೆ ಎಷ್ಟಾಗಬಹುದೆಂಬುದಕ್ಕೆ ಇದೊಂದು ದೃಷ್ಟಾಂತ..!

ಎಂದೋ ಒಮ್ಮೆ ಉಂಡ ಸಂತನ ಮನಸ್ಸೇ ಇಷ್ಟು ಕಲುಷಿತವಾಗಬೇಕಾದರೆ ನಿತ್ಯ ಅದನ್ನೇ ಉಣ್ಣುವವರ ಮನಸ್ಥಿತಿ – ಪರಿಸ್ಥಿತಿ ಏನಿರಬಹುದು..!!??

ನಮ್ಮ ಮಠದಲ್ಲಿ ತುತ್ತೆತ್ತುವ ಮೊದಲು ಪರಂಪರೆಯಿಂದ ಪಠಿಸುವ ಒಂದು ಶ್ಲೋಕ ಹೀಗಿದೆ..

ಆಹಾರಾರ್ಥಂ ಕರ್ಮ ಕುರ್ಯಾತ್ ಅನಿಂದ್ಯಮ್ |

ಕುರ್ಯಾತ್ ಆಹಾರಂ ಪ್ರಾಣ ಸಂರಕ್ಷಣಾರ್ಥಮ್ ||

ಪ್ರಾಣಾಃ ರಕ್ಷ್ಯಾಃ ತತ್ವಜಿಜ್ಞಾಸನಾರ್ಥಮ್ |

ತತ್ವಂ ಜಿಜ್ಞಾಸ್ಯಂ ಯೇನ ಭೂಯೋ ನ ದುಃಖಮ್ ||

ಜೀವಿಸುವ ಸಕಲ ಜೀವಿಗಳ ಜೀವನಕ್ಕೆ ಸಂಕಲ್ಪವೊಂದೇ..

ದುಃಖಗಳು ದೂರಾಗಬೇಕು..ಸುಖಸಂಪೂರ್ಣವಾಗಿರಬೇಕು ಬದುಕು..

ಸುಖಸಂಪೂರ್ಣತೆ ತತ್ವಜ್ಞಾನದಿಂದ..

ತತ್ವಜ್ಞಾನ ಉಂಟಾಗುವುದು ಮಾನವಶರೀರದಲ್ಲಿ..

ದೇವತೆಗಳು ಕೂಡಾ ತತ್ವಜ್ಞಾನವನ್ನು ಪಡೆಯಬೇಕೆಂದರೆ ಮಾನವರಾಗಿಯೇ ಹುಟ್ಟಿಬರಬೇಕಾಗುತ್ತದೆ..!

ಶರೀರ ಉಳಿಯಲು ಆಹಾರ ಬೇಕೇ ಬೇಕು..

ಆಹಾರ ಸಂಪಾದನೆ ಧನ ಸಂಪಾದನೆಯಿಂದ..

ಧನಸಂಪಾದನೆಯಾಗುವುದು ಕರ್ಮದಿಂದ..!

ಮಲಿನ ಕರ್ಮದಿಂದ ಸಂಪಾದನೆಯಾಗುವುದು ಮಲಿನ ಧನವೇ..!!

ಮಲಿನ ಧನದಿಂದ ಸಂಪಾದನೆಯಾಗುವ ಅನ್ನವೂ ಮಲಿನವೇ..!

ನಾವುಣ್ಣುವ ಅನ್ನವೇ ನಮ್ಮ ತನು-ಮನಗಳನ್ನು ನಿರ್ಮಾಣ ಮಾಡುವುದು..

ಅನ್ನದ ಸ್ಥೂಲ ಭಾಗದಿಂದ ಶರೀರ – ಅನ್ನದ ಸೂಕ್ಶ್ಮಭಾಗದಿಂದ ಮನಸ್ಸು..

ಅನ್ನಮಯಂ ಹಿ ಸೌಮ್ಯಮನಃ – ಛಾಂದೋಗ್ಯೋಪನಿಶತ್..

जैसा अन्न वैसा मन – ಹಿಂದಿ ಗಾದೆ..

ಮಲಿನ ಮನದಲ್ಲಿ ಜ್ಞಾನವೆಲ್ಲಿ ಮೂಡಲು ಸಾಧ್ಯ..

ಜ್ಞಾನವಿಲ್ಲದೇ ಸುಖವೆಲ್ಲಿ..?

ಜ್ಞಾನ – ಸುಖಗಳು ಒಂದನ್ನು ಬಿಟ್ಟು ಇನ್ನೊಂದಿರಲಾರವು…!!

ಮಲಿನ ಜಲದಲ್ಲಿ ಪ್ರಭಾಕರನ ಪ್ರತಿಬಿಂಬ ಮೂಡುವುದೇ..?

ಆನಂದಮಯನ ಸೃಷ್ಠಿಯಲ್ಲಿ ಎಲ್ಲೆಲ್ಲೂ ಆನಂದವೇ ತುಂಬಿದೆ..!

ಅದು ನಮ್ಮಲ್ಲಿ ಪ್ರತಿಫಲಿಸಬೇಕಂದರೆ ನಮ್ಮ ಮಾನಸ, ಮಾನಸಸರೋವರವಾಗಬೇಕು..

ಮಲಿನ – ಚಂಚಲ ಜಲದ  ಆಳದಲ್ಲಿ ಮಣಿಮಾಲೆಯಿದ್ದರೂ ಅದು ತೋರದು..

ನಮ್ಮನ್ನು ಸೃಷ್ಟಿಸಿದವನು ನಮ್ಮೊಳಗೆ ಹುದುಗಿಸಿಟ್ಟಿರುವ ಆನಂದದ ನಿಧಿ ಮಲಿನ-ಚಂಚಲ-ಮನದಲ್ಲಿ ಮೈದೋರಲಾರದು..!

ದಿನವಿಡೀ – ಜೀವನವಿಡೀ ‘ಮಡಿ – ಮಡಿ’ ಎಂದು ಮಡಿಗಾಗಿ ಹೊಡೆದಾಡುವವರನ್ನು ನೋಡಿದ್ದೇವೆ..

ಆದರೆ ಹಣ ಮಡಿಯಲ್ಲದಿದ್ದರೆ ಬೇರಾವುದೂ ಮಡಿಯಲ್ಲ.. !!!!

ಬದುಕಿಗೆ ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ..

ಮೊದಲು ಸಿಗಬೇಕಾದದ್ದು ದಾರಿ.ಅದು ಸಿಕ್ಕಿದರೆ ಮತ್ತೆ ತಾನೇತಾನಾಗಿ ಸಿಗುವುದು ಗುರಿ..

ಬೇಗ ತಲುಪುವೆನೆಂಬ ಭ್ರಮೆಯಲ್ಲಿ ತಪ್ಪುದಾರಿಯಲ್ಲಿ ನಡೆದರೆ ಗುರಿ ಎಂದೆಂದೂ ಸಿಗದು..!

ಹಣಸಂಪಾದನೆಯಲ್ಲದೇ ಬೇರಾವುದನ್ನೂ ಬದುಕಿನ ಗುರಿಯಾಗಿಸಿಕೊಳ್ಳುವುದನ್ನು ಮನಸ್ಸು ಒಪ್ಪುತ್ತಿಲ್ಲವೇ..?

ಚಿಂತೆಯಿಲ್ಲ…!

ಸಂಪಾದನೆಯ ದಾರಿಯೊಂದು ಶುದ್ಧವಾಗಿರಲಿ..

ಆ ಶುದ್ಧಿ ತನು- ಮನ – ಜೀವನಗಳಲ್ಲೆಲ್ಲಾ ಪಸರಿಸುವುದು..

ಆ ಬಗೆಯ ಹಣಸಂಪಾದನೆ ಅದು ಮಹಾಲಕ್ಷ್ಮಿಯ ಉಪಾಸನೆ..

ಅವಳಿರುವುದು ವೈಕುಂಠದಲ್ಲಿ..

ಶ್ರೀಮನ್ನಾರಾಯಣನ ಪಾಶ್ವ೯ದಲ್ಲಿ…

ನೀನು ಸೇರುವುದು ಅಲ್ಲಿ………!!!!




ರಾಮಬಾಣ:- ಧನ ಮೈಲಿಗೆಯಾದರೆ ಜೀವನವೇ ಮೈಲಿಗೆ..!!

||ಹರೇರಾಮ||

Facebook Comments Box