LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಇದು ಹೀಗೇ ಇರದು..!!

Author: ; Published On: ರವಿವಾರ, ಜೂನ್ 20th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಒಮ್ಮೊಮ್ಮೆ ಸೌಭಾಗ್ಯವು ವೈರಾಗ್ಯವನ್ನು ಹುಡುಕಿಕೊಂಡು ಬರುವುದುಂಟು..
ನಾಡಿನ ದೊರೆಗಳು ಕಾಡಿನ ಗುರುಗಳ ಚರಣಗಳನ್ನಾಶ್ರಯಿಸುವುದುಂಟು..
ತಥಾಕಥಿತ ಸುಖಪುರುಷರು ನಿಜಸುಖವನ್ನರಸಿ ತ್ಯಾಗಿಗಳ ಬಳಿ ಸಾರುವುದುಂಟು..

ಒಮ್ಮೆ ಹೀಗಾಯಿತು..
ಮಹಾಯೋಗಿಯೊಬ್ಬರ ಸನ್ನಿಧಿಯಲ್ಲಿ ಮಹಾರಾಜನೊಬ್ಬ ವಿಚಿತ್ರವಾದ ಪ್ರಶ್ನೆಯೊಂದನ್ನು ಮುಂದಿಡುತ್ತಾನೆ..
“ಗುರುವೇ, ಮೂರೇಮೂರು ಶಬ್ದಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಜೀವನಕ್ಕೇ ಸಮತೋಲನವನ್ನು ಕೊಡುವ ಉಪದೇಶವೊಂದನ್ನು ತಮ್ಮಿಂದ ಬಯಸುವೆ.
ಉಪದೇಶ ಹೇಗಿರಬೇಕೆಂದರೆ, ಒಮ್ಮೆ ನೆನೆಸಿಕೊಂಡರೆ ಸಾಕು ಕಡುಕಷ್ಟಗಳಲ್ಲಿಯೂ ಮನ ಕುಗ್ಗಬಾರದು- ಸುಖದ ಸುಪ್ಪತ್ತಿಗೆಯಲ್ಲಿಯೂ ಹಿಗ್ಗಬಾರದು.

ತಮ್ಮ ಉಪದೇಶವನ್ನು ಮುದ್ರೆಯುಂಗುರದಲ್ಲಿ ಬರೆಸಿ ನಿತ್ಯ ಧರಿಸುವೆನು. ಏಕೆಂದರೆ, ಅದು ಯಾವಾಗಲೂ ನನ್ನ ಕಣ್ಣಿಗೆ ಬೀಳುವಂತಿರಬೇಕು..”

ಕೊಂಚಕಾಲ ತನ್ನೊಳಗೇ ಹುಡುಕಿದ ಗುರು ನೀಡಿದ ಉಪದೇಶ ಹೀಗಿತ್ತು..

ಇದು ಹೀಗೇ ಇರದು “
“ಹಾಗೆಂದರೆ..!?”
“ಹಾಗೆಂದರೇನೆಂದು ಸಮಯ ಬಂದಾಗ ತಾನಾಗಿ ಅರ್ಥವಾದೀತು..
ಯಾವಾಗ ನಿನಗೀ ಉಪದೇಶದ ಅಗತ್ಯ ಬೀಳುವುದೋ..
ಆಗ ನಿನ್ನ ಮುದ್ರೆಯುಂಗುರ ಒಮ್ಮೆ ಮಿಂಚೀತು…!”

ಕೆಲಕಾಲ ಕಳೆಯಿತು..
ಒಮ್ಮೆ ಆ ರಾಜ್ಯದ ಮೇಲೆ ಶತ್ರುಗಳ ಅಕ್ರಮಣವಾಯಿತು..ಸಮರದಲ್ಲಿ ರಾಜನಿಗೆ ಸೋಲೇ ಆಯಿತು..
ಪ್ರಾಣಗಳನ್ನುಳಿಸಿಕೊಳ್ಳಲು ಕುದುರೆಯನ್ನೇರಿ ಪಲಾಯನ ಮಾಡಿದನಾತ…
ಶತ್ರುಸೈನಿಕರು ಆತನನ್ನು ಹಿಂಬಾಲಿಸಿದರು..
ತನ್ನೊಡೆಯನನ್ನು ಹೊತ್ತು ಬಹುದೂರ ಓಡಿದ ಕುದುರೆ  ಬಳಲಿ ಬಸವಳಿದು ಬಿದ್ದು ಸತ್ತಾಗ –
ರಾಜನಿಗೆ ಮುಂದೇನು ಮಾಡಬೇಕಂದು ದಿಕ್ಕೇ ತೋಚಲಿಲ್ಲ..
ಶತ್ರುಗಳ ವಶವಾದರೆ ಮುಂದೆ ಬರಬಹುದಾದ ಪರಿಸ್ಥಿತಿಯನ್ನು ಎಣಿಸಿಕೊಂಡಾಗ ಆತ್ಮಹತ್ಯೆಯೇ ಹಿತವೆನಿಸಿತು…
ಇನ್ನೇನು ಆತ ಸಾವಿಗೆ ಶರಣಾಗಬೇಕು ಎನ್ನುವಷ್ಟರಲ್ಲಿ
ಮುದ್ರೆಯುಂಗುರ ಮಿಂಚಿತು…!

ಆಗ ಕಾಣಿಸಿದವು ಗುರು’ಪದ’ಗಳು…!

“ಇದು ಹೀಗೇ ಇರದು”

ಮೊದಲೆಷ್ಟೋ ಬಾರಿ ನೋಡಿದ ಅವೇ ‘ಪದ’ಗಳು ಮೊದಲ ಬಾರಿಗೆ ಈಗ ಅರ್ಥ ಕೊಡತೊಡಗಿದವು…!

“ಮಗೂ..ಈ ವಿಕಟ ಪರಿಸ್ಥಿತಿ ಬಹುಕಾಲ ಹೀಗೆಯೇ ಇರದು. ಸಾವಿಗೆ ಮನ ಮಾಡಬೇಡ. ಶೀಘ್ರದಲ್ಲಿಯೇ ಒಳ್ಳೆಯ ಕಾಲ ಬಂದೀತು”
ಎಂದು ಕಿವಿಯಲ್ಲಿ ಗುರುವೇ ಹೇಳಿದಂತೆನಿಸಿತು..
‘ಈಸಬೇಕು, ಇದ್ದು ಜೈಸಬೇಕು’ ಎಂಬ ದೃಢ ನಿಶ್ಚಯದೊಡನೆ
ಮನೋಭಾರವನ್ನು ಗುರುಪಾದದಲ್ಲಿರಿಸಿ,
ಮೈಭಾರವನ್ನು ತನ್ನ ಪದಗಳಲ್ಲಿಯೇ ಇಟ್ಟು ಮುಂದುವರೆದನಾತ…!

ಅನತಿದೂರದಲ್ಲೊಂದು ಕವಲುದಾರಿ..
ಅವುಗಳಲ್ಲಿ ರಾಜನೊಂದು ದಾರಿಯಲ್ಲಿ ಮುಂದುವರಿದರೆ,
ಆತನನ್ನು ಬೆಂಬತ್ತಿ ಬಂದ ಶತ್ರುಸೈನಿಕರು ಮತ್ತೊಂದು ದಾರಿಯಲ್ಲಿ ಸಾಗಿದರು…!
ಹೀಗೆ ಶತ್ರುಗಳಿಂದ ಪಾರಾದ ರಾಜ ಗುಡ್ಡಗಾಡಿನ ಪ್ರದೇಶವೊಂದನ್ನು ಪ್ರವೇಶಿಸಿದ..

ಅಲ್ಲಿಯ ಜನರು ಅವನನ್ನು ಪ್ರೀತಿಸುವವರು..!
ಆತನ ರಾಜ್ಯಭಾರದಲ್ಲಿ ಸುಖಪಟ್ಟವರು..ಶ್ರೇಯಸ್ಸು ಕಂಡವರು…
ಎಂದೋ ಮಾಡಿದ ಒಳ್ಳೆಯ ಕೆಲಸ ಇಂದು ಫಲ ಕೊಡತೊಡಗಿತ್ತು..!
ಅವರ ನಡುವೆ ಆಶ್ರಯ ಪಡೆದ ರಾಜ ಮತ್ತೆ ಸೈನ್ಯ ಕಟ್ಟಿದ…ಸಮರಸಿದ್ಧತೆ ನಡೆಸಿದ…

ಒಂದು ಶುಭದಿನದಂದು..
ಎಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದನೋ…ಎಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದನೋ..
ಎಲ್ಲಿ ವೈಭವದಲ್ಲಿ ಮೆರೆದಿದ್ದನೋ…ಎಲ್ಲಿ ಸೋತು ಸುಣ್ಣವಾಗಿದ್ದನೋ…
ಅಲ್ಲಿಗೆ –
ತನ್ನ ತಾಯ್ನೆಲಕ್ಕೆ– ತನ್ನವರೊಡನೆ ಯುದ್ದಯಾತ್ರೆಯನ್ನು ಕೈಗೊಂಡ..
ಯುದ್ಧ ನಡೆಯಿತು..
ಈ ಬಾರಿ ವಿಜಯಲಕ್ಷ್ಮಿ ಆತನ ಕೈ ಬಿಡಲಿಲ್ಲ..
ಕಳೆದುಹೋದದ್ದೆಲ್ಲವೂ ಮತ್ತೆ ಪ್ರಾಪ್ತವಾಗಿತ್ತು…!

ರಾಜ್ಯವೇ ಸಂಭ್ರಮಿಸಿತು..!
ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ…ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು…!!

“ಇದು ಹೀಗೇ ಇರದು”

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|

ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ||

ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|

ಗಡುವಿರುವುದೆಲ್ಲಕಂ –ಮಂಕುತಿಮ್ಮ||

ಸಪ್ತಸಾಗರಗಳು ಸುನಾಮಿಯಾಗಿ ಉಕ್ಕೇರಿ ಬರಲಿ ನಿನ್ನೆಡೆಗೆ,

ನಿನ್ನನ್ನು ಹೊತ್ತ ಭೂಮಂಡಲವೇ ಧೂಳೀಪಟಲವಾಗಿ ಮೇಲೇಳಲಿ ಮುಗಿಲಿನೆಡೆಗೆ,

ನೆಮ್ಮದಿ ಬಿಡಬೇಡ..ಗಾಬರಿಪಡಬೇಡ,

ಏಕೆಂದರೆ..
” ಅದು ಹಾಗೇ ಇರದು ”
ಅದು ಹಾಗೇ ಇರದು ಏಕೆಂದರೆ, ಕಾಲ ಅದನ್ನು ಬಹುಕಾಲ ಹಾಗೇ ಇರಲು ಬಿಡದು..!
ಉಕ್ಕೇರಿದ ಸಾಗರವು ಹಿಂದೆ ಸರಿಯಲೇಬೇಕು..
ಮೇಲೆದ್ದ ಧೂಳೀಪಟಲ ಕೆಳಗಿಳಿಯಲೇಬೇಕು..!
ಏಕೆಂದರೆ, ಎಲ್ಲದಕ್ಕೂ ಒಂದು ಗಡುವಿದೆ…

“ಮಾ ಕುರು ಧನಜನ ಯೌವನಗರ್ವಂ|
ಹರತಿ ನಿಮೇಷಾತ್ ಕಾಲಃ ಸರ್ವಮ್||

–  ಭಜಗೋವಿಂದಂನಲ್ಲಿ ಶ್ರೀ ಶಂಕರಾಚರ್ಯರು..

ಧನ-ಜನ-ಯೌವನಗಳಿವೆಯೆಂದು ಗರ್ವ ತಾಳಬೇಡ ಏಕೆಂದರೆ, ಅದು ಹಾಗೇ ಇರದು…!
ಧನ-ಜನ-ಯೌವನಗಳ ಉನ್ಮಾದದಲ್ಲಿ ಹಿಗ್ಗಿ ನೀನು ಕುಣಿಯುವಾಗ ಕಾಲನು ಕಾಲಕೆಳಗಿನ ನೆಲವನ್ನೇ ಕಸಿದಾನು..!

ನೆಮ್ಮದಿಯಿರುವುದು ಸಮತೆಯಲ್ಲಿಯೇ ಹೊರತು, ಹಿಗ್ಗು-ಕುಗ್ಗುಗಳ ವಿಷಮತೆಯಲ್ಲಲ್ಲ..
‘ಹಿಗ್ಗು ಬೇಕೇ ಬೇಕು, ಕುಗ್ಗು ಬೇಡವೇ ಬೇಡ’ ಎನ್ನುವವರುಂಟು..
ಮೇಲ್ನೋಟಕ್ಕೆ ಕತ್ತಲು-ಬೆಳಕಿನಂತೆ ಹಿಗ್ಗು-ಕುಗ್ಗುಗಳು ಪರಸ್ಪರ ವಿರೋಧಿಗಳಂತೆ ಕಂಡರೂ,
ಬಗೆದು ನೋಡಿದರೆ, ಜೊತೆಗೂಡಿ ದೋಚುವ ಜೊಡಿಕಳ್ಳರೇ ಅವರು..!

ಹಿಗ್ಗು-ಕುಗ್ಗುಗಳೆಂಬ ಹಾಲುಮನವನ್ನು ಕದಿಯುವ ಕಳ್ಳಬೆಕ್ಕುಗಳು..!

ಭೂಗೋಳದ ಏರಿಳಿತಗಳನ್ನೇ ನೋಡಿ.!
ಏರಿದ್ದಲ್ಲಿ ಇಳಿತ -ಇಳಿತವಿದ್ದಲ್ಲಿ ಏರು..
ಏರಿಳಿತಗಳು ಒಂದನ್ನು ಬಿಟ್ಟು ಇನ್ನೊಂದು ಇಲ್ಲವೇ ಇಲ್ಲ..
ಹಾಗೆ ನೋಡಿದರೆ ಎಲ್ಲಾ ಏರುಗಳೂ ಇನ್ನೊಂದು ಕಡೆಯಿಂದ ನೋಡಿದರೆ ಇಳಿತಗಳೇ..!
ಎಲ್ಲಾ ಇಳಿತಗಳೂ ವಿರುದ್ಧ ದಿಕ್ಕಿನಿಂದ ನೋಡಿದರೆ ಏರುಗಳೇ..!
ಸಮಭೂಮಿ ಹಾಗಲ್ಲ..! ಅದು ಎಲ್ಲಿಂದ ನೋಡಿದರೂ ಸಮವೇ…!
ಹಿಗ್ಗು ಬರುವಾಗ ತನ್ನ ಬೆನ್ನ ಹಿಂದೆ ಕುಗ್ಗನ್ನು ಅಡಗಿಸಿಟ್ಟುಕೊಂಡೇ ಬರುತ್ತದೆ..!
ಹಾಗೆಯೇ ಕುಗ್ಗೂ ಕೂಡ…
ಹಿಗ್ಗು ಬರುವಾಗ  ಹಮ್ಮನ್ನು ತರುತ್ತದೆ..ಹಮ್ಮು ಪತನಕ್ಕೆ ಕಾರಣವಾಗುತ್ತದೆ…
ಕುಗ್ಗು ಆತ್ಮ್ಸಸ್ಥೈರ್ಯ ಕೆಡಿಸುತ್ತದೆ..
ಕೆಲವೂಮ್ಮೆ ಆತ್ಮಹತ್ಯೆಗೂ ಕಾರಣವಾಗುತ್ತದೆ..
ಒಂದು ಕಬ್ಬಿಣದ ಚೂರಿಯಾದರೆ, ಇನ್ನೊಂದು ಚಿನ್ನದ ಚೂರಿ…!
ವಿಷಮತೆಯು ತರುವ ಹಿಗ್ಗು-ಕುಗ್ಗುಗಳೆಂಬ ಜೋಡಿಖಾಯಿಲೆಗೆ ಸಮತೆಯೇ ಸರಿಯಾದ ಮದ್ದು..!
ತನ್ನೆರಡೂ ರೆಕ್ಕೆಗಳನ್ನೂ ಸಮವಾಗಿಟ್ಟುಕೊಂಡು ತಡೆಯಿಲ್ಲದೆ ಆಕಾಶದಂಗಳದಲ್ಲಿ ಹಾರಾಡುವ ,
ಹಕ್ಕಿಯೇ ಸಮತೆಯ ಗುರು ನಮಗೆ..!
ಮಳೆಗಾಲದಲ್ಲಿ ಉಕ್ಕಿಹರಿಯದ, ಬೇಸಿಗೆಯಲ್ಲಿ ಬತ್ತದ ಮಹಾಸಾಗರವೇ ಸಮತೆಯ ಗುರು ನಮಗೆ….!
ಸುಖ-ದುಃಖಗಳು ಬಂದೊದಗುವಾಗ (ಬಂದೆರಗುವಾಗ) ಪ್ರತಿಕ್ರಿಯಿಸದಿರಲು ನಾನೇನು ಕಲ್ಲುಬಂಡೆಯೇ ಎಂದು ಕೇಳಬೇಡಿ…!
ಪ್ರತಿಕ್ರಿಯೆಗಳಿರಲಿ..
ಆದರೆ ಅವುಗಳು ಮನದ ಮೇಲುಪದರದಲ್ಲಿದ್ದರೆ ಸಾಕು…
ಗಂಭೀರ ಸಾಗರದಲ್ಲಿಯೂ ಮೇಲ್ಪದರದಲ್ಲಿಅಲೆಗಳಿವೆ..
ಆದರೆ ಆಳಕ್ಕಿಳಿದಂತೆ ಶಾಂತ-ಶಾಂತ..ಅಚಲ-ಅಚಲ…!

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ|

ಹೊರಕೋಣೆಯಲಿ ಲೋಗರಾಟಗಳನಾಡು||

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ|

ವರಯೋಗಸೂತ್ರವಿದು –ಮಂಕುತಿಮ್ಮ||

ನಿನ್ನಂತರಂಗದ ಮೇಲ್ಪದರದಲ್ಲಿ ಹಿಗ್ಗು-ಕುಗ್ಗುಗಳ ದಾಳಿಯಲ್ಲಿ ಅದೆಷ್ಟ್ಟೇ ತರಂಗಗಳೇಳಲಿ ಚಿಂತೆಯಿಲ್ಲ,
ಆದರೆ ಭಾವದಾಳದಲ್ಲಿ ‘ಇದು ಶಾಶ್ವತವಲ್ಲ…ಇದು ಶಾಶ್ವತವಲ್ಲ’ ಎನ್ನುವ ಮಂತ್ರವನ್ನು ನಿನ್ನ ಜೀವವು ಸದಾಕಾಲವೂ ಜಪಿಸುತ್ತಿರಲಿ…!
ಪರಿಸ್ಥಿತಿಗಳು ಬದಲಾಗುತ್ತಿದ್ದರೂ ಮನಸ್ಥಿತಿಯು ಬದಲಾಗದಂತೆ ಮಾಡುವ ಮಹಾಮಂತ್ರವದು…!

ಮನಃಪರಿಪಾಕದ ಫಲವಾಗಿ ನಿನ್ನೊಳಗುದಯಿಸಿ ಬರುವ ಸಮತೆಯ ಸ್ಥಿತಿಯೇ ಮೋಕ್ಷ..!

ಮುಕ್ತನಾಗು…ಮುಕ್ತಿಗಾಗಿ ದ್ವಂದ್ವಮುಕ್ತನಾಗು…!

|| ಹರೇರಾಮ ||

34 Responses to ಇದು ಹೀಗೇ ಇರದು..!!

 1. Varidhi Deshpande

  ಈ ಲೇಖನ ಓದಿ ಮನಸ್ಸು ಹಿಗ್ಗಿ ಕುಣಿಯುವಂತಾಯಿತು, ಆಗ ದೊಡ್ಡಕ್ಷರಗಳಲ್ಲಿ ಕಾಣಿಸಿದ್ದು ‘ಇದು ಹೀಗೇ ಇರದು’. ಆಗ ಬಂದ ಪ್ರಶ್ನೆ, ಧರ್ಮ ಮೋಕ್ಷಗಳಿಗೆ ಸಂಬಂದ ಪಟ್ಟ ಸದ್ವಿಚಾರ ಶ್ರವಣ ಮಾಡಿ ಮನಸ್ಸು ಬಹಳ ಉತ್ಸುಕವಾದಾಗ , ಅಂತರಂಗದ ಅನುಭವ ಅವುಗಳಿಗೂ ಅನ್ವಯಿಸುವುದೆ?

  [Reply]

  Sri Samsthana Reply:

  ಪ್ರಿಯ ವಾರಿಧಿ..
  ಆಸ್ವಾದನೆ ಅಪರಾಧವಲ್ಲ..
  ಸುಖಿಸುವುದು ತಪ್ಪಲ್ಲ, ದುಃಖಿಸುವುದೂ ತಪ್ಪಲ್ಲ..
  ಸುಖ-ದುಃಖಗಳಲ್ಲಿ ಸಮತೋಲನ ಕಳೆದುಕೊಳ್ಳುವುದು ಮಾತ್ರವೇ ತಪ್ಪು..
  ಸುಖ-ದುಃಖಗಳನ್ನು ಜೀರ್ಣಿಸಿಕೊಳ್ಳಲಾಗದಿದ್ದಾಗ ಅವು ಹಿಗ್ಗು-ಕುಗ್ಗುಗಳಾಗಿ ಪರಿವರ್ತನೆಗೊಳ್ಳುತ್ತವೆ..
  ವಿಷಮತೆಯ ವಿಷವಾಗಿ ಜೀವ ಹಿಂಡುತ್ತವೆ..
  ಇದರಿಂದ ಪಾರಾಗಲು ಬೇಕಾದ ಮನಃಪರಿಪಾಕದ ಚಿಂತನೆಯೇ ಈ ಲೇಖನ…

  [Reply]

 2. Anushree Bandady

  ಹರೇ ರಾಮ.
  ಸರ್ವ ಕಾಲ ಸತ್ಯದ ಮಾತು ಗುರುಗಳೇ. ಕಾಲಚಕ್ರದ ಗತಿಯಲ್ಲಿ ಬರುವ ಏರಿಳಿತಗಳನ್ನು ಬಹು ಸಂಕ್ಷಿಪ್ತವಾಗಿ ವಿವರಿಸುವ ಮಾತು – “ಇದು ಹೀಗೇ ಇರದು”. ಬಹುಶಃ ಇದು ಜೀವನದ ಪ್ರತಿ ಕ್ಷಣಕ್ಕೂ ಅನ್ವಯವಾಗುವಂಥದ್ದು.
  ಸಮತೆಯ ಆ ಸ್ಥಿತಿ ತಲುಪುವುದು ತುಸು ಕಷ್ಟವೇ. ನಾವೆಲ್ಲ ಹೊಳೆಯ ಹಾಗೆ. ಹಲವಾರು ಏರಿಳಿತಗಳ, ಕಠಿಣ ಕ್ಲಿಷ್ಟ ಕೊರಕಲು ದಾರಿಯಲ್ಲಿ ಸಾಗಿಬರುತ್ತೇವೆ. ನಲಿವಿನ ಮಳೆ ಬಂದಾಗ ಉತ್ಸಾಹ-ಸಂತಸ ಉಕ್ಕಿ ಹರಿಯುವುದು. ಅದಿಲ್ಲದೆ ಕಷ್ಟದ ಪ್ರಖರತೆ ಹೆಚ್ಚಾದಾಗ ತುಸು ಮುಂದೆ ಹೋಗಲೂ ತ್ರಾಣವಿರದಾಗುವುದು. ಇದನ್ನೆಲ್ಲ ಮೀರಿ ಮಹಾಸಾಗರವಾಗಲು ಬಹಳ ಸಾಧನೆ ಮಾಡಬೇಕಾದೀತು.
  ಗುರುಗಳ ಅನುಗ್ರಹವಿರಲು ಅಸಾಧ್ಯವಾದುದಿಲ್ಲ. ಉತ್ತಮ ಜೀವನಪಾಠ ತಿಳಿಸಿದಿರಿ ಗುರುಗಳೇ.

  [Reply]

  Sri Samsthana Reply:

  “ಇದು ಹೀಗೇ ಇರದು..ಇದು ಹೀಗೇ ಇರದು”..

  ಎಂಬ ಭಾವ ಮನದಲ್ಲಿ ಮತ್ತೆ ಮತ್ತೆ ಕುಣಿದಾಡಿದರೆ ಸಮತೆ ಕಷ್ಟವೇನಲ್ಲ….!

  [Reply]

 3. ಜಗದೀಶ್ B R

  ಹರೇ ರಾಮ..

  ಗುರುಗಳ ಜ್ಞಾನಾಮೃತವನ್ನು ಸವಿಯುವ ಸೌಭಾಗ್ಯ ನನ್ನಾದಾಗಿರುವುದಕ್ಕೆ ಗುರುಗಳಿಗೆ ಅನಂತ ಪ್ರಣಾಮಗಳು.
  ಇದು ಹೀಗೇ ಇರಲಿ!

  [Reply]

  Sri Samsthana Reply:

  ‘ಇದು ಹೀಗೇ ಇರಲಿ!’

  ಅದ್ಭುತ ಅಭಿವ್ಯಕ್ತಿ….!!

  [Reply]

 4. Madhu Dodderi

  ಒಹ್! ಎಲ್ಲ ಪ್ರಾಪಂಚಿಕ ಸಮಸ್ಯೆಗಳಿಗೂ ಒಂದೇ ಪರಿಹಾರ!
  ಗುಡ್ಡ ಕಡಿಯುವುದಕ್ಕೂ ಗುಂಡಿ ಮುಚ್ಚುವುದಕ್ಕೂ ಒಂದೇ ಯಂತ್ರ!
  ’ತಾನೇ ಎಲ್ಲ’ ಎನ್ನುವವರಿಗೂ ’ತಾನೇನೂ ಅಲ್ಲ’ ಎನ್ನುವವರಿಗೂ ಒಂದೇ ಕಿವಿಮಾತು!
  ಕಷ್ಟದ ಮರುಗುವಿಕೆಗೆ ಸುಖದ ಮೆರೆಯುವಿಕೆಗೆ ಒಂದೇ ಮಾತ್ರೆ!
  ನಡುಬಾಗಿದವರಿಗೆ ಎದೆಯುಬ್ಬಿದವರಿಗೆ ಒಂದೇ ಸಾಮು!
  ತಿರುಪೆಯವನಿಂದ ಚಕ್ರವರ್ತಿಯವರೆಗೆ ಒಂದೇ ಉಪದೇಶ!

  ಅದೆಷ್ಟು ಅರ್ಥಪೂರ್ಣ ಈ ಮಾತು… ಇದು ಹೀಗೆ ಇರದು, ಇದು ಹೀಗೆ ಇರದು… ಇದು ಹೀಗೇ ಇರದು…

  ಸರ್ವಕಾಲಿಕ, ಸರ್ವದೇಶಿಕ ಸರ್ವರಿಗೂ ಅನ್ವಯವಾಗುವ ಸಿದ್ಧಸೂತ್ರವೊಂದನ್ನು ನೀಡಿದುದಕ್ಕೆ ಅನಂತ ಪ್ರಣಾಮಗಳು…ಏಕೆಂದರೆ ಇಂಥದೊಂದಕ್ಕೆ ಪ್ರತಿಯಾಗಿ ಇನ್ನೇನು ನೀಡಿದರೆ ಅದು ಸಮನಾಗಲು ಸಾಧ್ಯ?

  [Reply]

  Sri Samsthana Reply:

  ಭವ್ಯ ಬರಹ..! ಮರುಮಾತಿಲ್ಲ…!

  [Reply]

 5. Sunil Kulkarni

  ಗುರುಗಳಿಗೆ ಸಾಸ್ಟಾಂಗ ನಮಸ್ಕಾರಗಳು.
  ಮನಸ್ಸೊಂದು ಕುದುರೆ, ನೋಡು ನೋಡುತ್ತಲೇ ಕಣ್ಣಿನೆದುರೇ ಫರ್ಲಾಂಗು ಹಾರುವ. ಈಗ ಇಲ್ಲಿದ್ದರೆ, ಕ್ಷಣಾರ್ಧದಲ್ಲಿ ಇನ್ನಾವುದೋ ಕಡೆ ಇರುವ ಕುದುರೆ. ಈ ಕುದುರೆಗೆ ರಂಜನೆ ಬೇಕು, ತಿಂದರೆ ಮತ್ತಷ್ಟು ತಿನ್ನುವ ಆಸೆ, ಕುಡಿದರೆ ಇನ್ನಷ್ಟು ಕುಡಿಯುವ, ಕಂಡರೆ ಕಾಣುತ್ತಲೇ ಇರುವ ಹಂಬಲ.
  ಈ ರೀತಿಯ ಕುದುರೆಯನ್ನು ಕಟ್ಟಿ ಹಾಕಲು “ಇದು ಹೀಗೇ ಇರದು” ಗುಗುಗಳ ಲೇಖನ ಅತ್ಯಂತ ಪರಿಣಾಮಕರಿಯಾಗಿ ಮೂಡಿಬಂದಿದೆ. ಮುದುಡಿದ ಮನಸ್ಸಿಗೂ, ಮೆರೆಯುವ ಮನಸ್ಸಿಗೂ ಉತ್ತರ ಒಂದೇ ಲೇಖನದಲ್ಲಿ ಸ್ಪಷ್ಟವಾಗಿದೆ.

  [Reply]

  Sri Samsthana Reply:

  ಮನವೆಂಬ ಕುದುರೆ ಚಂಚಲವಾಗದಂತೆ ಅದರ ಕಣ್ಣು ಕಟ್ಟಬೇಕು..!

  [Reply]

 6. Raghavendra Narayana

  ಸಮತಟ್ಟದ ನೆಲದಲ್ಲಿ ನಾಗಲೋಟದಿ ಓಡಿಸಿಕೊ೦ಡು ಓದಿಸಿಕೊ೦ಡು ಹೋಯಿತು ಈ ಲೇಖನ. ಗುರುಗಳೇ, ಇದು ವಿಶೇಷ.
  .
  “ಅಸಮದಲಿ ಸಮತೆಯನು.. ಮ೦ಕುತಿಮ್ಮ”
  .
  ದ್ವ೦ದ್ವದಿ೦ದ ಮುಕ್ತನಾದರೆ ಮುಕ್ತಿ

  [Reply]

 7. srinivaas padavagod

  hare rama, edannu odidamele nanna desk top quote kuda ede.pranamagalu

  [Reply]

  Sri Samsthana Reply:

  ಲೇಖನ ಸಾರ್ಥಕ…!

  [Reply]

 8. Shridevi Vishwanath

  ಹರೇ ರಾಮ.. ಇದು ಜೀವನದ ಪಾಠ.. ಏರನ್ನು ಏರುತ್ತಾ ಹೋಗುವಾಗ ಎಷ್ಟು ಕಷ್ಟ ಎನಿಸುತ್ತದೆ.. ಹಾಗೆಯೇ ಜೀವನದ ಏರನ್ನು ಏರುವಾಗಲೂ ಕಷ್ಟವೆನಿಸುತ್ತದೆ.. ಆ ಕಷ್ಟವನ್ನು ಅಸಹನೆಯಿಂದ ಕ್ರಮಿಸುತ್ತೇವೆ.. ಆ ಏರಿನ ನಂತರ ಇಳಿತ ಇದೆ.. ಜೀವನ ಸರಳವಾಗುತ್ತದೆ ಎಂಬುದು ನೆನಪಿಗೆ ಬರುವುದಿಲ್ಲ.. ಹಾಗೆಯೇ ಇಳಿತ ಬಂದು ಸರಳವಾದಾಗ ಸಂತೋಷದಲ್ಲಿ ಬಂದಿದ್ದ ಕಷ್ಟವನ್ನೂ, ದೇವರನ್ನೂ ಎಲ್ಲವನ್ನೂ ಮರೆಯುತ್ತೇವೆ… ಇದೇ.. ಧನ ಮದದಲ್ಲಿ ಏರುತ್ತಿರುವವನಿಗೆ ನಾಳೆ ಧನ ಇಳಿತವಾಗುವ ಸಾಧ್ಯತೆ ಮರೆಯುತ್ತದೆ.. ಅವನಿಗೆ ಧನ ಇಳಿತವಾದಾಗ ಆ ಇಳಿತ… ಏರನ್ನು ಏರುವುದಕ್ಕಿಂತಲೂ ಕಷ್ಟವೆನಿಸುತ್ತದೆ .. ಕಷ್ಟ ಸುಖಗಳು ಬಂದೆರಗುವಾಗ ನಮಗೆ ಸಮತೆಯನ್ನು ಕಾಯ್ದುಕೊಳ್ಳಲು ಇರುವ ಗುರುಗಳೆಲ್ಲರನ್ನು ನೆನಪಿಸುವ ಮತಿಯನ್ನು ಅನುಗ್ರಹಿಸಿ…
  ನಾವೆಲ್ಲಾ ಈ ಭೂಮಿಯಲ್ಲಿ ಚಿರಂಜೀವಿಗಳಾಗಿ, ಶಾಶ್ವತವಾಗಿ ಇರುತ್ತೇವೆ ಎನ್ನುವ ಭಾವನೆಯಲ್ಲಿ ಬದುಕುತ್ತಿರುತ್ತೇವೆ… ಕಾಲನ ಕರೆಗೆ ಓಗೊಟ್ಟು ನಾವೂ ಇಲ್ಲಿಂದ ತೆರಳಬೇಕೆನ್ನುವುದನ್ನು ಮರೆಯುತ್ತೇವೆ.. ಈ ಜೀವವೂ.., ಜೀವನವೂ ಹೀಗೇ ಇರದು ಅಲ್ಲವೇ ಗುರುಗಳೇ?

  [Reply]

  Sri Samsthana Reply:

  ಸಮತೆಗೆ ತತ್ವದ ಸ್ಮರಣೆಯೊಂದೆ ಸಾಕು. ಆದರೆ ಅದು ಬರಲು ಪುರುಷಪ್ರಯತ್ನ, ದೇವತಾನುಗ್ರಹ ಬೇಕೇಬೇಕು..!

  [Reply]

 9. Raghavendra Narayana

  “…ನಿತ್ಯ ಪರಿವರ್ತನೆಯೆ ಚೈತನ್ಯ ನರ್ತನವೇ ಸತ್ಯ ಜಗದೊಳು ಕಾಣ ಮ೦ಕುತಿಮ್ಮ”
  .
  “ಸಮತ್ವ೦ ಯೋಗ ಉಚ್ಛತೇ..”
  .
  ಚೈತನ್ಯ ನರ್ತನದ ಮೂಲ ಬಯಸುವುದು ಹೇಗೆ ಬೆದಕುವುದು ಹೇಗೆ? —– ವೈರಾಗ್ಯವ ಅನರ್ಥ ಮಾಡಿದ್ದೇಕೆ, ಚೈತನ್ಯ ನರ್ತನವ ಮರೆತದ್ದೇಕೆ, ನಿರ್ಜೀವ ನಿರ್ವೀರ್ಯ ಆಗಿದ್ದೇಕೆ. ಸಗುಣ ನಿರ್ಗುಣ ಸಮತ್ವ ಸಾಧಿಸದೇ ಯೋಗವೆಲ್ಲಿ – ಯೋಗವಿಲ್ಲದೇ ಚೈತನ್ಯವೆಲ್ಲಿ – ಚೈತನ್ಯವಿಲ್ಲದೇ ಪ್ರಕೃತಿಯೆಲ್ಲಿ – ಪ್ರಕೃತಿಯಲ್ಲಿ ಸಮತ್ವದ ಆನ೦ದ ಸಾಧಿಸದೇ ಅಚಿ೦ತ್ಯನೆಲ್ಲಿ ಅನ೦ತನೆಲ್ಲಿ ಅಚ್ಯುತನೆಲ್ಲಿ

  [Reply]

  Sri Samsthana Reply:

  ಸೃಷ್ಟಿ ವಿಷಮ. ಅಲ್ಲಿ ಒಂದರ ಹಾಗೆ ಇನ್ನೊಂದಿಲ್ಲ..!
  ಆದರೆ ಚೈತನ್ಯ ಸಮ..
  ರಾಜ-ರಂಕರಲ್ಲಿ, ಮಹಾತ್ಮ-ದುರಾತ್ಮರಲ್ಲಿ, ಸ್ತ್ರೀ-ಪುರುಷರಲ್ಲಿ,
  ಮೃಗ-ಪಕ್ಷಿಗಳಲ್ಲಿ, ತರು-ಲತೆಗಳಲ್ಲಿ, ಕ್ರಿಮಿ-ಕೀಟಗಳಲ್ಲಿ ಅದು ಹಬ್ಬಿ ಹರಡಿದೆ..!

  [Reply]

  Raghavendra Narayana Reply:

  ಗುರುಗಳೇ, ದಯವಿಟ್ಟು ತಿಳಿಸಿ.
  ಪ್ರಕೃತಿ ಸ೦ಸಾರ ಎರಡೂ ಒ೦ದೆ?
  ಸ೦ಸಾರದಲ್ಲಿ ಇರುವ ಕಷ್ಟಸುಖಗಳಿಗೆ ಏರುಕುಗ್ಗದೇ ಬದುಕುವುದಕ್ಕೆ “ಇದು ಹೀಗೇ ಇರದು” ಮ೦ತ್ರ ಉಪಯೋಗವಾಗುತ್ತದಯೆ?
  “ಇದು ಹೀಗೇ ಇರದು” ಎ೦ದು ಪ್ರತಿಯೊ೦ದಕ್ಕೂ ಅ೦ದುಕೊ೦ಡು ಯಾವುದಕ್ಕು ಸ೦ತೋಷಡದೇ ಯಾವುದಕ್ಕು ದುಃಖಪಡದೇ ಇದ್ದರೆ – ಬಾಳಿನಲ್ಲಿ, ಚೈತನ್ಯ ಕಳೆದುಕೊ೦ಡ೦ತೆ ಅನ್ನಿಸುವುದಿಲ್ಲವೆ? ಚೈತನ್ಯವೇ ಇಲ್ಲದಿದ್ದರೆ, ಚೈತನ್ಯ ವಸ್ತುವನ್ನು ಹೇಗೆ ಸೇರುವುದು?

  [Reply]

 10. Raghavendra Narayana

  “ಇದು ಹೀಗೇ ಇರದು” – 3 Idiots ಸಿನಿಮಾದ “all is well” ಕೂಡ ನೆನಪಾಗುತ್ತಿದೆ

  [Reply]

  Sri Samsthana Reply:

  ಅದು ಏನು..!?

  [Reply]

  Raghavendra Narayana Reply:

  “All is well” – ಸಿನಿಮಾದಲ್ಲಿ ಈ ಮಾತು ಸುಮಾರು ಸಲ ಬರುತ್ತದೆ. ಮನಸ್ಸು ತು೦ಬ ಹೆದರಿಕೊಳ್ಳುತ್ತದೆ, ಸಣ್ನದು ಏನೇ ಆದರು ಹೆದರಿಕೊಳ್ಳುತ್ತದೆ, ಅದಕ್ಕೆ ಆಗಾಗ ಮನಸ್ಸಿಗೆ ಹೇಳಿಕೊಳ್ಳುತ್ತಿರಬೇಕು – “ಎಲ್ಲಾ ಸರಿ ಇದೆ, ಎಲ್ಲಾ ಚೆನ್ನಾಗಿದೆ”. ಇದು ನೆನಪಿಗೆ ಬ೦ತು ಈ ಲೇಖನ ಓದುತ್ತಿರುವಾಗ

  [Reply]

 11. sriharsha.jois

  ಎಂದೋ ಮಾಡಿದ ಒಳ್ಳೆಯ ಕೆಲಸ ಇಂದು ಫಲ ಕೊಡತೊಡಗಿತ್ತು..!

  ಹಾಗೆಯೇ ಎಂದೋ ಮಾಡಿದ ಪಾಪವೂ ತನ್ನ ಫಲವನ್ನು ಕೊಡತೊಡಗುವುದು…ಎಂಬುದನ್ನು ನಾವೆಲ್ಲಿ ನೆನಪಿಡುತ್ತೇವೆ ?
  ಒಂದು ಹುಲ್ಲುಕಡ್ಡಿಯನ್ನು ಪರರ ಸಹಾಯದಿಂದಲೇ ಎತ್ತಿಟ್ಟು, ನಾನೇ ಮಾಡಿದ್ದು ಎಂದು ಹೊಗಳಿಸಿಕೊಳ್ಳಬಯಸುವ ನಾವು-
  ಪಾಪವ ಮಾಡಿದ್ದನ್ನೆಂದೂ ಒಪ್ಪಿಕೊಳ್ಳಲಾರೆವು..!ನೆನೆಸಿಕೊಳ್ಳಲಾರೆವು..!
  ಅದನ್ನೇನಾದರೂ ನಮ್ಮಿಂದ ಮಾಡಲು ಸಾಧ್ಯವಾದರೆ….
  ನಾವು ಮಾಡಿದ ಸಣ್ಣ ಒಳ್ಳೆಯ ಕೆಲಸವೂ ನಮ್ಮನ್ನು ಕೈಬಿಡದು….
  ತಂದೇ ಈ ವಿಷಯ ಸರಿಯೇ…?
  ವ್ಯಕ್ತಪಡಿಸುವ ಪರಿ ಅರಿಯೆ…
  ಇದ ಓದುವುದೆನ್ನ ಹರಿಯೇ…!
  ಅಲ್ಲಿ ಕ್ಷಮೆಗೆ ಬರವಿದೆಯೆ…!?

  ಅದಕ್ಕೇ ತೊದಲು ನುಡಿಗಳ ಬರೆದಿರುವೆ….

  ಹರೇರಾಮ..

  [Reply]

  Sri Samsthana Reply:

  ಅದನ್ನೇನಾದರೂ ನಮ್ಮಿಂದ ಮಾಡಲು ಸಾಧ್ಯವಾದರೆ.. ಸ್ವರ್ಗ ಸತ್ತ ಮೇಲಲ್ಲ..ಇಲ್ಲಿಯೇ..!

  [Reply]

 12. Anuradha Parvathi

  ಎತ್ತರಕ್ಕೆ ಏರಿದಗ ಹಿಗ್ಗದೆ, ಬಿದ್ದಾಗ ಕುಗ್ಗದೆ ಇರುವ ಸ್ಥಿತಿ ’ಹಾಗೆ ಇರುತ್ತೆದೆಯೆ’ ಗುರುಗಳೆ?

  [Reply]

  Sri Samsthana Reply:

  ಶಾಶ್ವತ ಸ್ಥಿತಿಯದು ..ಅದು ಒಮ್ಮೆ ಬಂದರೆ, ನಾವು ಅದನ್ನು ಕಾಪಾಡಬೇಕಿಲ್ಲ..ಅದೇ ನಮ್ಮನ್ನು ಕಾಪಾಡುವುದು..!

  [Reply]

 13. Vishwa M S Maruthipura

  ಮುಕ್ತ ….ಮುಕ್ತ…..ಮುಕ್ತ ……!

  [Reply]

  Sri Samsthana Reply:

  ಧನ್ಯ..ಧನ್ಯ..ಧನ್ಯ…!

  [Reply]

 14. yajneshbhat

  ಸದಾಕಾಲ ನೆನಪಲ್ಲಿ ಇಟ್ಟುಕೊಳ್ಳುವಂತಹ ಲೇಖನವಿದು. ಗೆದ್ದಾಗ ಹಿಗ್ಗದೇ ಬಿದ್ದಾಗ ಕುಗ್ಗದೇ ಮನಸ್ಸು ಎಲ್ಲವನ್ನೂ ಒಂದೇ ರೀತಿ ತೆಗೆದುಕೊಳ್ಳಬೇಕು ಎನ್ನುವ ತಿರುಳು… ಅಧ್ಬುತ….

  [Reply]

 15. nandaja haregoppa

  ಹರೇ ರಾಮ

  ಮನೋಭಾರವನ್ನು ಗುರುಪಾದದಲ್ಲಿರಿಸಿ,
  ಮೈಭಾರವನ್ನು ತನ್ನ ಪದಗಳಲ್ಲಿಯೇ ಇಟ್ಟು ಮುಂದುವರೆದನಾತ…!

  ಇದು ಎಷ್ಟು ಅರ್ಥಪೂರ್ಣ,ಮನೋಭಾರವನು ಗುರುವಿನಲ್ಲಿಟ್ಟರೆ ಮೈಭಾರ ಆಗಲಾರದು,ಪಾದ ದೇಹವನ್ನು ಗುರಿಯೆಡೆಗೆ ಎಳೆದುಕೊಂಡು ಹೋಗಬಹುದೇನೋ ಅಲ್ಲವೇ ಗುರುಗಳೇ
  ಪ್ರಣಾಮಗಳು

  [Reply]

 16. Geetha Manjappa

  Hare Raama Gurugale
  Edu heege eradu ee amulyavada Guruvaakya namage bere ellu sigadu.Mure padagalalli jeevana purti kaliyuva pathavide.Nanu bayasuvudu inde egale sashaktaragiruvagale Gurusevege sampoorna thodagisikollabeku.Naleyendare EDU HEEGE ERADU!!!

  [Reply]

 17. RAVINDRA T L BHATT

  “ಮಾ ಕುರು ಧನಜನ ಯೌವನಗರ್ವಂ|
  ಹರತಿ ನಿಮೇಷಾತ್ ಕಾಲಃ ಸರ್ವಮ್||”

  ಶಂಕರರ ಈ ನುಡಿಗೆ ಮರುನುಡಿಯದೆಲ್ಲಿ?,

  ಇಳಿಜಾರಿಗೆ ಹರಿವ ನೀರಂತೆ,
  ಏರಲ್ಲಿ ಉಸಿರ್ಕೊಡುವ ಹಸಿರು ಕಾಡಂತೆ,
  ಸರಿ ದಾರಿಯಲಿ ನೆಡೆವ ಜೀವನವು ಇರುವಂತೆ,
  ವರವ ಕರುಣಿಸು, ಗುರುವೆ ಹೇ ದೇವ||

  [Reply]

 18. Raghavendra Narayana

  “ಮನಃಪರಿಪಾಕದ ಫಲವಾಗಿ ನಿನ್ನೊಳಗುದಯಿಸಿ ಬರುವ ಸಮತೆಯ ಸ್ಥಿತಿಯೇ ಮೋಕ್ಷ..! ”

  “ಮುಕ್ತನಾಗು…ಮುಕ್ತಿಗಾಗಿ ದ್ವಂದ್ವಮುಕ್ತನಾಗು…!”
  .
  ಶ್ರೀ ಗುರುಭ್ಯೋ ನಮಃ

  [Reply]

 19. manjunath

  samastiti hondalu sanyamave pradanavo….tilisabeku…

  [Reply]

 20. Nataraja Hebbar

  Hare Rama..

  Gurubhyo namaha..

  Gurugala Padaravindagalige mukkoti pranamagalu.

  I have one confusion, is this word “ಇದು ಹೀಗೇ ಇರದು” is similar to “Parivartane Jagada Niyama”. OR any difference .

  Nimma Bhakta

  [Reply]

Leave a Reply

Highslide for Wordpress Plugin