|| ಹರೇರಾಮ ||

ಒಮ್ಮೊಮ್ಮೆ ಸೌಭಾಗ್ಯವು ವೈರಾಗ್ಯವನ್ನು ಹುಡುಕಿಕೊಂಡು ಬರುವುದುಂಟು..
ನಾಡಿನ ದೊರೆಗಳು ಕಾಡಿನ ಗುರುಗಳ ಚರಣಗಳನ್ನಾಶ್ರಯಿಸುವುದುಂಟು..
ತಥಾಕಥಿತ ಸುಖಪುರುಷರು ನಿಜಸುಖವನ್ನರಸಿ ತ್ಯಾಗಿಗಳ ಬಳಿ ಸಾರುವುದುಂಟು..

ಒಮ್ಮೆ ಹೀಗಾಯಿತು..
ಮಹಾಯೋಗಿಯೊಬ್ಬರ ಸನ್ನಿಧಿಯಲ್ಲಿ ಮಹಾರಾಜನೊಬ್ಬ ವಿಚಿತ್ರವಾದ ಪ್ರಶ್ನೆಯೊಂದನ್ನು ಮುಂದಿಡುತ್ತಾನೆ..
“ಗುರುವೇ, ಮೂರೇಮೂರು ಶಬ್ದಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಜೀವನಕ್ಕೇ ಸಮತೋಲನವನ್ನು ಕೊಡುವ ಉಪದೇಶವೊಂದನ್ನು ತಮ್ಮಿಂದ ಬಯಸುವೆ.
ಉಪದೇಶ ಹೇಗಿರಬೇಕೆಂದರೆ, ಒಮ್ಮೆ ನೆನೆಸಿಕೊಂಡರೆ ಸಾಕು ಕಡುಕಷ್ಟಗಳಲ್ಲಿಯೂ ಮನ ಕುಗ್ಗಬಾರದು- ಸುಖದ ಸುಪ್ಪತ್ತಿಗೆಯಲ್ಲಿಯೂ ಹಿಗ್ಗಬಾರದು.

ತಮ್ಮ ಉಪದೇಶವನ್ನು ಮುದ್ರೆಯುಂಗುರದಲ್ಲಿ ಬರೆಸಿ ನಿತ್ಯ ಧರಿಸುವೆನು. ಏಕೆಂದರೆ, ಅದು ಯಾವಾಗಲೂ ನನ್ನ ಕಣ್ಣಿಗೆ ಬೀಳುವಂತಿರಬೇಕು..”

ಕೊಂಚಕಾಲ ತನ್ನೊಳಗೇ ಹುಡುಕಿದ ಗುರು ನೀಡಿದ ಉಪದೇಶ ಹೀಗಿತ್ತು..

ಇದು ಹೀಗೇ ಇರದು “
“ಹಾಗೆಂದರೆ..!?”
“ಹಾಗೆಂದರೇನೆಂದು ಸಮಯ ಬಂದಾಗ ತಾನಾಗಿ ಅರ್ಥವಾದೀತು..
ಯಾವಾಗ ನಿನಗೀ ಉಪದೇಶದ ಅಗತ್ಯ ಬೀಳುವುದೋ..
ಆಗ ನಿನ್ನ ಮುದ್ರೆಯುಂಗುರ ಒಮ್ಮೆ ಮಿಂಚೀತು…!”

ಕೆಲಕಾಲ ಕಳೆಯಿತು..
ಒಮ್ಮೆ ಆ ರಾಜ್ಯದ ಮೇಲೆ ಶತ್ರುಗಳ ಅಕ್ರಮಣವಾಯಿತು..ಸಮರದಲ್ಲಿ ರಾಜನಿಗೆ ಸೋಲೇ ಆಯಿತು..
ಪ್ರಾಣಗಳನ್ನುಳಿಸಿಕೊಳ್ಳಲು ಕುದುರೆಯನ್ನೇರಿ ಪಲಾಯನ ಮಾಡಿದನಾತ…
ಶತ್ರುಸೈನಿಕರು ಆತನನ್ನು ಹಿಂಬಾಲಿಸಿದರು..
ತನ್ನೊಡೆಯನನ್ನು ಹೊತ್ತು ಬಹುದೂರ ಓಡಿದ ಕುದುರೆ  ಬಳಲಿ ಬಸವಳಿದು ಬಿದ್ದು ಸತ್ತಾಗ –
ರಾಜನಿಗೆ ಮುಂದೇನು ಮಾಡಬೇಕಂದು ದಿಕ್ಕೇ ತೋಚಲಿಲ್ಲ..
ಶತ್ರುಗಳ ವಶವಾದರೆ ಮುಂದೆ ಬರಬಹುದಾದ ಪರಿಸ್ಥಿತಿಯನ್ನು ಎಣಿಸಿಕೊಂಡಾಗ ಆತ್ಮಹತ್ಯೆಯೇ ಹಿತವೆನಿಸಿತು…
ಇನ್ನೇನು ಆತ ಸಾವಿಗೆ ಶರಣಾಗಬೇಕು ಎನ್ನುವಷ್ಟರಲ್ಲಿ
ಮುದ್ರೆಯುಂಗುರ ಮಿಂಚಿತು…!

ಆಗ ಕಾಣಿಸಿದವು ಗುರು’ಪದ’ಗಳು…!

“ಇದು ಹೀಗೇ ಇರದು”

ಮೊದಲೆಷ್ಟೋ ಬಾರಿ ನೋಡಿದ ಅವೇ ‘ಪದ’ಗಳು ಮೊದಲ ಬಾರಿಗೆ ಈಗ ಅರ್ಥ ಕೊಡತೊಡಗಿದವು…!

“ಮಗೂ..ಈ ವಿಕಟ ಪರಿಸ್ಥಿತಿ ಬಹುಕಾಲ ಹೀಗೆಯೇ ಇರದು. ಸಾವಿಗೆ ಮನ ಮಾಡಬೇಡ. ಶೀಘ್ರದಲ್ಲಿಯೇ ಒಳ್ಳೆಯ ಕಾಲ ಬಂದೀತು”
ಎಂದು ಕಿವಿಯಲ್ಲಿ ಗುರುವೇ ಹೇಳಿದಂತೆನಿಸಿತು..
‘ಈಸಬೇಕು, ಇದ್ದು ಜೈಸಬೇಕು’ ಎಂಬ ದೃಢ ನಿಶ್ಚಯದೊಡನೆ
ಮನೋಭಾರವನ್ನು ಗುರುಪಾದದಲ್ಲಿರಿಸಿ,
ಮೈಭಾರವನ್ನು ತನ್ನ ಪದಗಳಲ್ಲಿಯೇ ಇಟ್ಟು ಮುಂದುವರೆದನಾತ…!

ಅನತಿದೂರದಲ್ಲೊಂದು ಕವಲುದಾರಿ..
ಅವುಗಳಲ್ಲಿ ರಾಜನೊಂದು ದಾರಿಯಲ್ಲಿ ಮುಂದುವರಿದರೆ,
ಆತನನ್ನು ಬೆಂಬತ್ತಿ ಬಂದ ಶತ್ರುಸೈನಿಕರು ಮತ್ತೊಂದು ದಾರಿಯಲ್ಲಿ ಸಾಗಿದರು…!
ಹೀಗೆ ಶತ್ರುಗಳಿಂದ ಪಾರಾದ ರಾಜ ಗುಡ್ಡಗಾಡಿನ ಪ್ರದೇಶವೊಂದನ್ನು ಪ್ರವೇಶಿಸಿದ..

ಅಲ್ಲಿಯ ಜನರು ಅವನನ್ನು ಪ್ರೀತಿಸುವವರು..!
ಆತನ ರಾಜ್ಯಭಾರದಲ್ಲಿ ಸುಖಪಟ್ಟವರು..ಶ್ರೇಯಸ್ಸು ಕಂಡವರು…
ಎಂದೋ ಮಾಡಿದ ಒಳ್ಳೆಯ ಕೆಲಸ ಇಂದು ಫಲ ಕೊಡತೊಡಗಿತ್ತು..!
ಅವರ ನಡುವೆ ಆಶ್ರಯ ಪಡೆದ ರಾಜ ಮತ್ತೆ ಸೈನ್ಯ ಕಟ್ಟಿದ…ಸಮರಸಿದ್ಧತೆ ನಡೆಸಿದ…

ಒಂದು ಶುಭದಿನದಂದು..
ಎಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದನೋ…ಎಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದನೋ..
ಎಲ್ಲಿ ವೈಭವದಲ್ಲಿ ಮೆರೆದಿದ್ದನೋ…ಎಲ್ಲಿ ಸೋತು ಸುಣ್ಣವಾಗಿದ್ದನೋ…
ಅಲ್ಲಿಗೆ –
ತನ್ನ ತಾಯ್ನೆಲಕ್ಕೆ– ತನ್ನವರೊಡನೆ ಯುದ್ದಯಾತ್ರೆಯನ್ನು ಕೈಗೊಂಡ..
ಯುದ್ಧ ನಡೆಯಿತು..
ಈ ಬಾರಿ ವಿಜಯಲಕ್ಷ್ಮಿ ಆತನ ಕೈ ಬಿಡಲಿಲ್ಲ..
ಕಳೆದುಹೋದದ್ದೆಲ್ಲವೂ ಮತ್ತೆ ಪ್ರಾಪ್ತವಾಗಿತ್ತು…!

ರಾಜ್ಯವೇ ಸಂಭ್ರಮಿಸಿತು..!
ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!

ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ…ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು…!!

“ಇದು ಹೀಗೇ ಇರದು”

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|

ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ||

ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|

ಗಡುವಿರುವುದೆಲ್ಲಕಂ –ಮಂಕುತಿಮ್ಮ||

ಸಪ್ತಸಾಗರಗಳು ಸುನಾಮಿಯಾಗಿ ಉಕ್ಕೇರಿ ಬರಲಿ ನಿನ್ನೆಡೆಗೆ,

ನಿನ್ನನ್ನು ಹೊತ್ತ ಭೂಮಂಡಲವೇ ಧೂಳೀಪಟಲವಾಗಿ ಮೇಲೇಳಲಿ ಮುಗಿಲಿನೆಡೆಗೆ,

ನೆಮ್ಮದಿ ಬಿಡಬೇಡ..ಗಾಬರಿಪಡಬೇಡ,

ಏಕೆಂದರೆ..
” ಅದು ಹಾಗೇ ಇರದು ”
ಅದು ಹಾಗೇ ಇರದು ಏಕೆಂದರೆ, ಕಾಲ ಅದನ್ನು ಬಹುಕಾಲ ಹಾಗೇ ಇರಲು ಬಿಡದು..!
ಉಕ್ಕೇರಿದ ಸಾಗರವು ಹಿಂದೆ ಸರಿಯಲೇಬೇಕು..
ಮೇಲೆದ್ದ ಧೂಳೀಪಟಲ ಕೆಳಗಿಳಿಯಲೇಬೇಕು..!
ಏಕೆಂದರೆ, ಎಲ್ಲದಕ್ಕೂ ಒಂದು ಗಡುವಿದೆ…

“ಮಾ ಕುರು ಧನಜನ ಯೌವನಗರ್ವಂ|
ಹರತಿ ನಿಮೇಷಾತ್ ಕಾಲಃ ಸರ್ವಮ್||

–  ಭಜಗೋವಿಂದಂನಲ್ಲಿ ಶ್ರೀ ಶಂಕರಾಚರ್ಯರು..

ಧನ-ಜನ-ಯೌವನಗಳಿವೆಯೆಂದು ಗರ್ವ ತಾಳಬೇಡ ಏಕೆಂದರೆ, ಅದು ಹಾಗೇ ಇರದು…!
ಧನ-ಜನ-ಯೌವನಗಳ ಉನ್ಮಾದದಲ್ಲಿ ಹಿಗ್ಗಿ ನೀನು ಕುಣಿಯುವಾಗ ಕಾಲನು ಕಾಲಕೆಳಗಿನ ನೆಲವನ್ನೇ ಕಸಿದಾನು..!

ನೆಮ್ಮದಿಯಿರುವುದು ಸಮತೆಯಲ್ಲಿಯೇ ಹೊರತು, ಹಿಗ್ಗು-ಕುಗ್ಗುಗಳ ವಿಷಮತೆಯಲ್ಲಲ್ಲ..
‘ಹಿಗ್ಗು ಬೇಕೇ ಬೇಕು, ಕುಗ್ಗು ಬೇಡವೇ ಬೇಡ’ ಎನ್ನುವವರುಂಟು..
ಮೇಲ್ನೋಟಕ್ಕೆ ಕತ್ತಲು-ಬೆಳಕಿನಂತೆ ಹಿಗ್ಗು-ಕುಗ್ಗುಗಳು ಪರಸ್ಪರ ವಿರೋಧಿಗಳಂತೆ ಕಂಡರೂ,
ಬಗೆದು ನೋಡಿದರೆ, ಜೊತೆಗೂಡಿ ದೋಚುವ ಜೊಡಿಕಳ್ಳರೇ ಅವರು..!

ಹಿಗ್ಗು-ಕುಗ್ಗುಗಳೆಂಬ ಹಾಲುಮನವನ್ನು ಕದಿಯುವ ಕಳ್ಳಬೆಕ್ಕುಗಳು..!

ಭೂಗೋಳದ ಏರಿಳಿತಗಳನ್ನೇ ನೋಡಿ.!
ಏರಿದ್ದಲ್ಲಿ ಇಳಿತ -ಇಳಿತವಿದ್ದಲ್ಲಿ ಏರು..
ಏರಿಳಿತಗಳು ಒಂದನ್ನು ಬಿಟ್ಟು ಇನ್ನೊಂದು ಇಲ್ಲವೇ ಇಲ್ಲ..
ಹಾಗೆ ನೋಡಿದರೆ ಎಲ್ಲಾ ಏರುಗಳೂ ಇನ್ನೊಂದು ಕಡೆಯಿಂದ ನೋಡಿದರೆ ಇಳಿತಗಳೇ..!
ಎಲ್ಲಾ ಇಳಿತಗಳೂ ವಿರುದ್ಧ ದಿಕ್ಕಿನಿಂದ ನೋಡಿದರೆ ಏರುಗಳೇ..!
ಸಮಭೂಮಿ ಹಾಗಲ್ಲ..! ಅದು ಎಲ್ಲಿಂದ ನೋಡಿದರೂ ಸಮವೇ…!
ಹಿಗ್ಗು ಬರುವಾಗ ತನ್ನ ಬೆನ್ನ ಹಿಂದೆ ಕುಗ್ಗನ್ನು ಅಡಗಿಸಿಟ್ಟುಕೊಂಡೇ ಬರುತ್ತದೆ..!
ಹಾಗೆಯೇ ಕುಗ್ಗೂ ಕೂಡ…
ಹಿಗ್ಗು ಬರುವಾಗ  ಹಮ್ಮನ್ನು ತರುತ್ತದೆ..ಹಮ್ಮು ಪತನಕ್ಕೆ ಕಾರಣವಾಗುತ್ತದೆ…
ಕುಗ್ಗು ಆತ್ಮ್ಸಸ್ಥೈರ್ಯ ಕೆಡಿಸುತ್ತದೆ..
ಕೆಲವೂಮ್ಮೆ ಆತ್ಮಹತ್ಯೆಗೂ ಕಾರಣವಾಗುತ್ತದೆ..
ಒಂದು ಕಬ್ಬಿಣದ ಚೂರಿಯಾದರೆ, ಇನ್ನೊಂದು ಚಿನ್ನದ ಚೂರಿ…!
ವಿಷಮತೆಯು ತರುವ ಹಿಗ್ಗು-ಕುಗ್ಗುಗಳೆಂಬ ಜೋಡಿಖಾಯಿಲೆಗೆ ಸಮತೆಯೇ ಸರಿಯಾದ ಮದ್ದು..!
ತನ್ನೆರಡೂ ರೆಕ್ಕೆಗಳನ್ನೂ ಸಮವಾಗಿಟ್ಟುಕೊಂಡು ತಡೆಯಿಲ್ಲದೆ ಆಕಾಶದಂಗಳದಲ್ಲಿ ಹಾರಾಡುವ ,
ಹಕ್ಕಿಯೇ ಸಮತೆಯ ಗುರು ನಮಗೆ..!
ಮಳೆಗಾಲದಲ್ಲಿ ಉಕ್ಕಿಹರಿಯದ, ಬೇಸಿಗೆಯಲ್ಲಿ ಬತ್ತದ ಮಹಾಸಾಗರವೇ ಸಮತೆಯ ಗುರು ನಮಗೆ….!
ಸುಖ-ದುಃಖಗಳು ಬಂದೊದಗುವಾಗ (ಬಂದೆರಗುವಾಗ) ಪ್ರತಿಕ್ರಿಯಿಸದಿರಲು ನಾನೇನು ಕಲ್ಲುಬಂಡೆಯೇ ಎಂದು ಕೇಳಬೇಡಿ…!
ಪ್ರತಿಕ್ರಿಯೆಗಳಿರಲಿ..
ಆದರೆ ಅವುಗಳು ಮನದ ಮೇಲುಪದರದಲ್ಲಿದ್ದರೆ ಸಾಕು…
ಗಂಭೀರ ಸಾಗರದಲ್ಲಿಯೂ ಮೇಲ್ಪದರದಲ್ಲಿಅಲೆಗಳಿವೆ..
ಆದರೆ ಆಳಕ್ಕಿಳಿದಂತೆ ಶಾಂತ-ಶಾಂತ..ಅಚಲ-ಅಚಲ…!

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ|

ಹೊರಕೋಣೆಯಲಿ ಲೋಗರಾಟಗಳನಾಡು||

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ|

ವರಯೋಗಸೂತ್ರವಿದು –ಮಂಕುತಿಮ್ಮ||

ನಿನ್ನಂತರಂಗದ ಮೇಲ್ಪದರದಲ್ಲಿ ಹಿಗ್ಗು-ಕುಗ್ಗುಗಳ ದಾಳಿಯಲ್ಲಿ ಅದೆಷ್ಟ್ಟೇ ತರಂಗಗಳೇಳಲಿ ಚಿಂತೆಯಿಲ್ಲ,
ಆದರೆ ಭಾವದಾಳದಲ್ಲಿ ‘ಇದು ಶಾಶ್ವತವಲ್ಲ…ಇದು ಶಾಶ್ವತವಲ್ಲ’ ಎನ್ನುವ ಮಂತ್ರವನ್ನು ನಿನ್ನ ಜೀವವು ಸದಾಕಾಲವೂ ಜಪಿಸುತ್ತಿರಲಿ…!
ಪರಿಸ್ಥಿತಿಗಳು ಬದಲಾಗುತ್ತಿದ್ದರೂ ಮನಸ್ಥಿತಿಯು ಬದಲಾಗದಂತೆ ಮಾಡುವ ಮಹಾಮಂತ್ರವದು…!

ಮನಃಪರಿಪಾಕದ ಫಲವಾಗಿ ನಿನ್ನೊಳಗುದಯಿಸಿ ಬರುವ ಸಮತೆಯ ಸ್ಥಿತಿಯೇ ಮೋಕ್ಷ..!

ಮುಕ್ತನಾಗು…ಮುಕ್ತಿಗಾಗಿ ದ್ವಂದ್ವಮುಕ್ತನಾಗು…!

|| ಹರೇರಾಮ ||
Facebook Comments Box