|| ಹರೇರಾಮ ||

ಹೇ ಮಾನವಾ. . . .!!
ಬೇರೆಯವರೊಂದಿಗೆ ನೀನು ನಡೆದುಕೊಳ್ಳುತ್ತಿರುವ ರೀತಿ ಸರಿಯೋ – ತಪ್ಪೋ ಎನ್ನುವುದನ್ನು ಹೇಗೆ ತಿಳಿದುಕೊಳ್ಳುತ್ತೀಯೆ..?
ಉತ್ತರ ಕ್ಲಿಷ್ಟವೇನೂ ಅಲ್ಲ..
ಒಂದು ವೇಳೆ ನಿನ್ನೊಡನೆ  ಬೇರೆಯವರು ಹಾಗೆ ನಡೆದುಕೊಂಡರೆ ನಿನಗೆ  ಹೇಗನಿಸುತ್ತದೆ – ಎಂಬುದನ್ನು ಕಲ್ಪಿಸಿಕೊಂಡರಾಯಿತು..

ಈ ಕುರಿತು ಬಲ್ಲವರೇನು ಹೇಳುತ್ತಾರೆಂಬುದನ್ನು ಗಮನಿಸು..

|| ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್ ||
(ಯಾವುದು ನಿನಗೆ ಪ್ರತಿಕೂಲವೋ,  ಅದನ್ನು ಬೇರೆಯವರಿಗೆ ಮಾಡಕೂಡದು..!)

ಸೀತೆಯನ್ನಪಹರಿಸುವ ರಾವಣನಿಗೆ ಜಟಾಯು ಹೇಳಿದ್ದು –
“ಒಂದು ವೇಳೆ ಮಂಡೋದರಿಯನ್ನು ಪರಪುರುಷರು ಯಾರಾದರೂ ಅಪಹರಿಸಿದರೆ ನಿನಗೆ ಹೇಗನಿಸಬಹುದು..?”

ಗೋವು - ಸರ್ವ ದೇವಗಳ ಸಮಾಗಮ

ಸರ್ವದೇವಮಯೀ

ಈ ಮಾತುಗಳ ಹಿನ್ನೆಲೆಯಲ್ಲಿ, ಗೋವುಗಳ ಬಗ್ಗೆ ನೀನು ನಡೆದುಕೊಂಡ ರೀತಿ ಎಷ್ಟು ಸರಿ – ಅಥವಾ ಎಷ್ಟು ತಪ್ಪು ಎನ್ನುವುದನ್ನು ನಿರ್ಣಯಿಸುವೆಯಾ?
ಎಲ್ಲಿ ನೋಡೋಣ ….!!?
ಒಂದೇ ಒಂದು ಬಾರಿ – ಗೋವಿನ ಸ್ಥಾನದಲ್ಲಿ ನಿಂತುಕೋ. . . !
ಎಚ್ಚರ….!! ಎದೆ ಗಟ್ಟಿಯಿರಲಿ….!!!

  • ಅದೋ ನೋಡು. . ನಿನ್ನ ಹುಟ್ಟು ತಂದೆ-ತಾಯಿಗಳ ದಾಂಪತ್ಯದ ಆನಂದದ ಫಲವಾಗಿ ಆಗಲಿಲ್ಲ .!
    ಬದಲಿಗೆ , ತಂದೆಯ ಮುಖವನ್ನೇ ನೋಡದ ತಾಯಿಗೆ  ಮಾನವರು  ಚುಚ್ಚಿದ  ಚುಚ್ಚುಮದ್ದಿನ ಫಲವಾಗಿ ಆಯಿತು ..
    ಛೆ!! ಹುಟ್ಟೇ ಕೃತ್ರಿಮವಾಯಿತಲ್ಲವೇ?
    (ಜೀವಿಯ ಹುಟ್ಟು ತಂದೆ ತಾಯಿಗಳು ಅನುಭವಿಸುವ ಅದ್ವೈತ-ಆನಂದದ ಮೂಲಕವೇ ಆಗಬೇಕೆಂಬುದು ತತ್ವಜ್ಞರ ಅಭಿಮತ.
    ಹಾಗಿದ್ದಲ್ಲಿ ಮಾತ್ರ ಜೀವಿಯ ಬದುಕು ಆನಂದದಲ್ಲಿ ಬೆಳೆದು ಅದ್ವೈತದಲ್ಲಿ ಮುಗಿಯಲು ಸಾಧ್ಯ.
    ಬೀಜದಲ್ಲಿಲ್ಲದ್ದು ಹೇಗೆ ತಾನೇ ಫಲದಲ್ಲಿ  ಬಂದೀತು?
    ಬದುಕಿನ ಬೀಜವೇ ಕೃತ್ರಿಮವಾದರೆ, ಬದುಕಿನ್ನೇನಾದೀತು . . ?)
  • ಹುಟ್ಟುವ ಮೊದಲೇ ನಿನಗೆ ಸಾವಿನ ಭಯ . . !
    ಮಾನವರೆಂಬ ದಾನವರು ನೀನಿನ್ನೂ ಭ್ರೂಣವಾಗಿರುವಾಗಲೇ ಅಮ್ಮನ ಹೊಟ್ಟೆಗೆ ಚೂರಿಯಿಟ್ಟಾರು…!!
    ನಿನ್ನ ಚರ್ಮ ಸುಲಿದು ಜಂಬದ ಚೀಲ (Vanity Bag) ಮಾಡಿಕೊಂಡಾರು..!!
    (ಈ ಮಾನವರ ಶೋಕಿಗೆ ಜೀವ ಹಿಂಸೆಯೇ ಬೇಕೇ..??)
  • ಹುಟ್ಟಿದ ಮೇಲೆಯೂ ಸುಖವಿಲ್ಲ ನಿನಗೆ..!!
    ಒಡನೆಯೇ ಅಮ್ಮನಿಂದ ನಿನ್ನನ್ನು ಬೇರೆ ಮಾಡುವರು…
    ವಾತ್ಸಲ್ಯದ ಮಳೆಗರೆಯುವ, ತನ್ನ ಅಮೃತ ದೃಷ್ಟಿಯಿಂದಲೇ ತನ್ನ ಬಳಿ ಕರೆಯುವ ಅಮ್ಮನೆಡೆಗೆ ಧಾವಿಸುವ ನಿನ್ನನ್ನು, ಕಟ್ಟಿ ಹಿಡಿದೆಳೆಯುವರಲ್ಲವೇ..?
    ಅಮ್ಮನೆದುರು ನಿನ್ನನ್ನು ಕಟ್ಟಿ, ನಿನಗೆ ಸಲ್ಲಬೇಕಾದ ಹಾಲನ್ನು ಮಾನವರು ಕಿತ್ತುಕೊಳ್ಳುವಾಗ ಹೇಗನಿಸುತ್ತದೆ ನಿನಗೆ..?
    ( ಪೋಷಣೆ ಸರಿಯಾಗಿದ್ದರೆ ಕರುವಿಗೆ ಸಾಕಾಗಿ ಮನುಷ್ಯರ ಉಪಯೋಗಕ್ಕೆ ಮಿಗುವಷ್ಟು ಹಾಲು ಗೋವಿನಲ್ಲಿ ಇರುತ್ತದೆ..!)
  • ನೀನು ಬೆಳೆದಂತೆ ಬಂಧನವೂ ಬೆಳೆಯುತ್ತದೆ ನೋಡು ..
    ಈಗ ನಿನಗೆ ಸ್ವೇಚ್ಛಾ ಸಂಚಾರದ ಸ್ವಾತಂತ್ರ್ಯವೂ ಇಲ್ಲ…
    ಹಗ್ಗವೇ ನಿನ್ನ ಬದುಕಾಯಿತೇ..?
  • ಹಸಿವಾದಾಗ ತಿನ್ನುವುದು, ಬಾಯಾರಿಕೆಯಾದಾಗ ಕುಡಿಯುವುದು – ಜೀವಸಹಜ..
    ಆದರೆ, ‘ದೇವರು ಕೊಟ್ಟರೂ ಪೂಜಾರಿ ಕೊಡ’  ಎಂಬಂತೆ, ದೈವದತ್ತವಾದ ನಿನ್ನ ಈ ಹಕ್ಕನ್ನು ಮಾ(ದಾ)ನವರು ಕಸಿದರು ನೋಡು..!!
    ಅವರು ಹಾಕಿದ್ದನ್ನು ನೀನು ತಿನ್ನಬೇಕು ಮತ್ತು  ಹಾಕಿದಾಗ ತಿನ್ನಬೇಕು ..
    ನೀರು ಕೂಡಾ ಹಾಗೆಯೇ..
    ಮಾನವರು ಕೊಟ್ಟರುಂಟು..ಕೊಟ್ಟಾಗ ಉಂಟು..!!
  • ಅನುಪಮವಾದ ಕುಲ ನಿನ್ನದು..
    ಮಾನವ ಜೀವನಕ್ಕೆ ಬೇಕಾದ ಉತ್ತಮೋತ್ತಮ ವಸ್ತುಗಳನ್ನೀಯುವುದರಲ್ಲಾಗಲೀ ,ಪ್ರೇಮ ಸೇವೆ, ತ್ಯಾಗಗಳಲ್ಲಾಗಲೀ,..
    ಈ ಜಗದಲ್ಲಿ ನಿನ್ನ ಕುಲವನ್ನು ಯಾರೂ ಸರಿಗಟ್ಟಲಾರರು..!!
    ಹೀಗಿದ್ದರೂ…
    ನೀ ಬೆಳೆದು ನಿಂತಾಗ, ನಿನ್ನ ದೇಶದ ಘನ ಸರ್ಕಾರದ ಇಲಾಖೆಗಳು ನಿನ್ನ ಕುಲವನ್ನು ಉಪಯೋಗಕ್ಕೆ ಬಾರದ್ದೆಂದು ತಿರಸ್ಕರಿಸಿದವು ..!!
    ಚಿನ್ನದ ಮುಂದೆ ಪ್ಲಾಸ್ಟಿಕ್ಕಿನಂತೆ, ನಿನಗೇನೇನೂ ಸಾಟಿಯಲ್ಲದ, ಸತ್ವಹೀನವಾದ, ರೋಗಮಯವಾದ, ವಿದೇಶೀ ತಳಿಗಳನ್ನು ತಂದು ನಿನಗೆ ಚುಚ್ಚಲಾಯಿತು..!
    ಮೊದಲೇ ನಿನಗೆ ಬೇರಾವ ಸುಖವೂ ಇಲ್ಲ.., ಇದರಿಂದಾಗಿ ಜೀವಸಹಜವಾದ ದಾಂಪತ್ಯ ಸುಖವನ್ನೂ ಕಳೆದುಕೊಂಡೆ..
    ಸೃಷ್ಟಿಯಲ್ಲಿಯೇ ಸರ್ವಶ್ರೇಷ್ಠವಾದ ನಿನ್ನ ಕುಲವೂ ಕಲುಷಿತವಾಗಿ ಹೋಯಿತು….
    ( ನಾಳೆ ಈ ಘನ ಸರಕಾರಗಳು ಭಾರತೀಯ ಮನುಷ್ಯರ ತಳಿ ನಿರುಪಯೀಗಿಯೆಂದೂ,  ಯುರೋಪಿನ ಬಿಳಿಮನುಷ್ಯರ ತಳಿಗಳೇ ಶ್ರೇಷ್ಠವೆಂದು ಸಾರಿದರೆ. . .!!
    ಭಾರತೀಯರಲ್ಲಿ ಪರಸ್ಪರ ವಿವಾಹವನ್ನು ನಿಷೇಧಿಸಿ, ಯುರೋಪಿನಿಂದ  ಕೃತಕ ಗರ್ಭಧಾರಣೆಗೆ ಆಜ್ಞೆ ಹೊರಡಿಸಿದರೆ..?!
    ಹಳ್ಳಿ ಹಳ್ಳಿಗಳಲ್ಲಿ ಕೃತಕ ಗರ್ಭಧಾರಣಾ ಕೇಂದ್ರಗಳನ್ನು ತೆರೆದರೆ ..!
    ಈಗಿನಿಂದಲೇ ಸಿದ್ಧರಾಗುವುದು ಒಳಿತು..!)

  • ದೇವರು ನಿನಗೆ ಮೂಗು ಕೊಟ್ಟಿದ್ದು ಪ್ರಾಣವಾಯುವಿನ ಸಂಚಾರಕ್ಕೆಂದು…
    ಆದರೆ..
    ಮಾನವ ಅದನ್ನು ಬಳಸಿದ್ದು ನಿನ್ನ ಪ್ರಾಣ ಪೀಡನೆಗೆಂದು  ….!!!
    ನಿನ್ನ ಮೂಗಿನೊಳ ರಂಧ್ರ ಕೊರೆದು -ಅಲ್ಲಿ ಒರಟು ಬಳ್ಳಿ ಸುರಿದು ..
    ಬಾರಿ ಬಾರಿಗೂ ಹಿಡಿದೆಳೆಯುವಾಗ…
    ದೇವರು ಏಕಾದರೂ ಈ ಮೂಗು ಕೊಟ್ಟನೋ ?ಎಂದೆನಿಸಿರಬಹುದಲ್ಲವೇ..?
    (ಗೋವುಗಳಿಗೆ ಪ್ರಥಮವಾಗಿ ಮೂಗು ಸುರಿಯುವಾಗ ,ಮಾನವನಿಗೆ ಕಿವಿ ಚುಚ್ಚುವಾಗ ಆಗುವಷ್ಟೇ ನೋವಾಗುವುದು..
    ಹೆಚ್ಚು ಹಿಂಸೆಯಾಗುವುದು ,ಮತ್ತೆ ಅದನ್ನು ಬಲವಾಗಿ ಹಿಡಿದೆಳೆಯುವಾಗ….)
  • ಅದೆಷ್ಟು ಬೈಗುಳ-ಪೆಟ್ಟುಗಳನ್ನು ನೀನು ತಿಂದೆಯೋ ….ಅಷ್ಟೇ ಹುಲ್ಲು-ಹಿಂಡಿಗಳು ನಿನಗೆ ತಿನ್ನಲು ಸಿಕ್ಕಿದ್ದರೆ…..??
    ಆದರೆ..
    ಚಳಿ-ಮಳೆ -ಗಾಳಿ-ಬಿಸಿಲುಗಳಲ್ಲಿ, ಹಸಿವು -ಬಾಯಾರಿಕೆ-ಬಳಲಿಕೆಗಳೊಡನೆ,
    ದಿನವಿಡೀ..ಜೀವನವಿಡೀ.. ದುಡಿತ ತಪ್ಪಲಿಲ್ಲ….
    ಶೋಷಣೆಯುಂಟು ….ಪೋಷಣೆಯಿಲ್ಲ…..!!
  • “ಬಾಣಲೆಯಿಂದ ಬೆಂಕಿಗೆ” ಎನ್ನುವ ಗಾದೆ ನಿನಗಾಗಿಯೇ ಹುಟ್ಟಿಕೊಂಡಿದ್ದೋ ಏನೋ.
    ಮಾನವನಿಗಾಗಿಯೇ ದುಡಿದುಡಿದು ಮುದಿಯಾದ ಮೇಲೆ
    ಮೂರು ಕಾಸಿಗೆ ನಿನ್ನನ್ನು ಮಾರಿದ್ದು ಕಟುಕರಿಗೆ..!
    ಜೀವನ ಹಿಂಸೆಯಿಂದ ನಿನ್ನ ಪ್ರಯಾಣ ಮೃತ್ಯು ಹಿಂಸೆಯೆಡೆಗೆ.
    .!
    ಎಷ್ಟೇ ಕೆಟ್ಟವನಾದರೂ, ಸಾಯುವ ವ್ಯಕ್ತಿಗೆ ಕೊಂಚವಾದರೂ ಸುಖ ನೆಮ್ಮದಿಗಳನ್ನು ನೀಡಬೇಕಾದದ್ದು ಮಾನವಧರ್ಮ..

    ಒಳ್ಳೆಯತನಕ್ಕೆಲ್ಲ ’ಮಾನವತೆ’ಯೆಂಬ ಬಿರುದು ಕೊಡುವ ಮಾನವ, ನಿನ್ನ ವಿಷಯದಲ್ಲಿ ಈ ಧರ್ಮವನ್ನೂ ಗಾಳಿಗೆ ತೂರಿದನಲ್ಲವೆ..!?
    ಸಾಮಾನುಗಳನ್ನು ಸಾಗಿಸುವಾಗ ಅವುಗಳಿಗೆ ಧಕ್ಕೆಯಾಗದಂತೆ ಜಾಗ್ರತೆವಹಿಸುತ್ತಾರೆ..
    ಆದರೆ,
    ಜೀವ ಸೆಲೆ ಹರಿದಾಡುವ ನಿನ್ನನ್ನು ಮಾನವ
    ಮೃತ್ಯುವಿನ ಮನೆಗೆ ಸಾಗಿಸಿದ್ದು ಜಡವಸ್ತುಗಳಿಂತಲೂ ಕಳಪೆಯಾಗಿ..
    ಅಂಗಭಂಗವೆಷ್ಟಾಯಿತೋ..!!

    ಹೃದಯವೆಷ್ಟು ಚೂರಾಯಿತೋ..!
    ಹೃದಯ ಜೀವಿಯ ವ್ಯಥೆ ಬುದ್ಧಿಜೀವಿಗೆ ಹೇಗೆ ತಾನೇ ಗೊತ್ತಾಗಬೇಕು?
  • ಬದುಕಿಡೀ ಅನ್ನವಿತ್ತ ನಿನಗೆ ಸಾಯುವ ಮೊದಲು ದಿನಗಟ್ಟಲೆ ಉಪವಾಸವೇ..!
    ಹೆತ್ತ ತಾಯಿಯ ಎದೆ ಒಣಗಿದ ಮೆಲೆ ಜೀವನವಿಡೀ ಹಾಲಿನ ಹೊಳೆ ಹರಿಸಿದ ನಿನ್ನ ಕೊರಳನ್ನು ಸ್ವಲ್ಪಸ್ವಲ್ಪವೇ ಕೊಯಿದು, ರಕ್ತ ಶೇಖರಿಸುವ ರಾ
    ಕ್ಷಸ ಮನಸ್ಸೇ..
  • ಮಾನವರ ಹೊಟ್ಟೆ ಹೃದಯಗಳನ್ನು ತಂಪಾಗಿರಿಸುವ ನಿನ್ನನ್ನು ಕೊನೆಯಲ್ಲಿ ಕುದಿನೀರಲ್ಲಿ ಬೇಯಿಸುವ ಪರಿಯೇ…!!
  • ಇನ್ನೂ ಬದುಕಿರುವಾಗಲೇ ಚರ್ಮ ಸುಲಿಯುವಾಗ ಪೀಡೆ ತನ್ನ ಪರಾಕಾಷ್ಟೆಯನ್ನು ಮುಟ್ಟಿತೇ..!
  • ಸ್ವರ್ಗವನ್ನು ಭೂಮಿಗಿಳಿಸುವ ನಿನಗೆ ಬದುಕೇ ನರಕ, ಮೃತ್ಯುವೇ ಮುಕ್ತಿ…!

ಹೇ ಮಾನವಾ. . .
ಕ್ಷಣ ಮಾತ್ರ ನೀನು ಗೋವಿನ ಸ್ಥಾನದಲ್ಲಿ ನಿಂತು ನೋಡಿದೆಯಲ್ಲವೇ..?
ತಿಳಿದುಕೋ..
ಇದು ಸಿಂಧುವಿನಲ್ಲಿ ಬಿಂದು ಮಾತ್ರ…!

ನೆನಪಿಡು. . !
ದೇವರು ನಿನ್ನಲ್ಲಿ ಹೇಗೆ ನೆಲೆಸಿರುವನೋ ಹಾಗೆಯೇ ಎಲ್ಲ ಜೀವಗಳಲ್ಲಿಯೂ ನೆಲೆಸಿರುವನು..
ಜೀವವು ನಿನ್ನಲ್ಲಿ ಹೇಗಿದೆಯೋ,ಹಾಗೆಯೇ ಎಲ್ಲ ಜೀವಿಗಳಲ್ಲಿಯೂ ಇದೆ.

ನಿನ್ನ ಒಂದೊಂದು ಅಂಗವನ್ನೂ ನಡೆಸುತ್ತಿರುವುದು ಕಣ್ಣಿಗೆ ಮೀರಿದ ದೈವೀ ಶಕ್ತಿಗಳು.
ಅದು ಎಲ್ಲರಲ್ಲಿಯೂ ಹಾಗೆಯೇ..!

ನೀನು ಇನ್ನೊಂದು ಜೀವದ ಒಂದೊಂದು ಅಂಗವನ್ನು ಘಾಸಿ ಮಾಡುವಾಗಲೂ ಘಾಸಿಯಾಗುವುದು ಅಲ್ಲಿ ಹುದುಗಿರುವ ದೈವೀ ಶಕ್ತಿಗಳಿಗೆ..!
ನೋವಾಗುವುದು ಜೀವಕ್ಕೆ.!
ಕ್ಷೋಭೆಯಾಗುವುದು ಪರಮಾತ್ಮನಿಗೆ..!

ಇವೆಲ್ಲವೂ ನಿನ್ನಲ್ಲಿ ಪ್ರತಿಫಲಿಸುವುದು ಅನಿವಾರ್ಯ.
ಕಾರಣ,
ಈ ದೈವೀ ಶಕ್ತಿಗಳು, ಈ ಜೀವ – ದೇವ – ಎಲ್ಲವೂ ನಿನ್ನಲ್ಲಿಯೂ ನೆಲೆಸಿರುವುದು.

“ಪ್ರತಿಯೊಂದು ಕ್ರಿಯೆಗೊಂದು ಪ್ರತಿಕ್ರಿಯೆ”

ಅದು ಸೃಷ್ಟಿ ನಿಯಮ.

ನಿನ್ನೊಡಹುಟ್ಟುಗಳೇ ಆದ ಜಗದ ಜೀವರಾಶಿಗಳಿಗೆ ನೀನೇನು ಕೊಟ್ಟೆಯೋ, ಅದು ಒಂದಕ್ಕೆ ನೂರಾಗಿ ನಿನ್ನೆಡೆಗೆ ಹಿಂದಿರುಗಿ ಬರುವುದು ಸೂರ್ಯನಷ್ಟೇ ಸತ್ಯ..!

ಆದುದರಿಂದ,

ಹೇ ಮಾನವಾ . . !

ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್..||

ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್..||

ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್..||

ರಾಮಬಾಣ:

ಗೋವು + ನಾವು = ಸ್ವರ್ಗ
ಗೋವು + ಸಾವು = !! ??

Facebook Comments Box