||ಹರೇರಾಮ||

ಒಮ್ಮೊಮ್ಮೆ ನಮ್ಮ ಕೃತಿಯ ಕುರಿತು ನಮ್ಮೊಳಗೇ ಅಚ್ಚರಿ ಮೂಡುವುದುಂಟು.ಇದು ಹೇಗಾಯಿತು ಎನ್ನುವ ಪ್ರಶ್ನೆ ಏಳುವುದುಂಟು ! ಆಗ ಅದು ಕೇವಲ ನಮ್ಮ  ಕೃತಿಯಲ್ಲವೆಂದೇ ತಿಳಿಯಬೇಕು.ನಮ್ಮನ್ನು ಮಾಧ್ಯಮವಾಗಿರಿಸಿಕೊಂಡು ಸೃಷ್ಟಿಕರ್ತನೇ ಹೊರ ತರುವ ಕೃತಿಯದು..! ನಮ್ಮ ಕೃತಿಯೇ ಆಗಿದ್ದರೆ, ಹೇಗಾಯಿತು ಎನ್ನುವ ಪ್ರಶ್ನೆಗೆ ಅವಕಾಶವಾದರೂ ಎಲ್ಲಿ?

ತಮ್ಮ ಮುಖದಿಂದಲೇ ತಾನಾಗಿ ಹೊರಹೊಮ್ಮಿದ ‘ಮಾನಿಷಾದ‘ವನ್ನು ತಮ್ಮ ಕಿವಿಯಿಂದಲೇ ಕೇಳಿ ಅಚ್ಚರಿಗೊಂಡರು ವಾಲ್ಮೀಕಿಗಳು..!

ಅಚ್ಚರಿಯ ಆದಿಕವಿತೆಯ ಆವಿರ್ಭಾವಕ್ಕೆ ಪ್ರಪಂಚದ ಪಂಚ ಜೀವಿಗಳು ಸಾಕ್ಷಿ. ಬೇಡನ ಬಾಣಾಘಾತಕ್ಕೆ ಸಿಲುಕಿ ಸಾಯುವ ಪಕ್ಷಿ ಒಂದು ಸಾಕ್ಷಿಯಾದರೆ, ಸಾಯುವ ಪಕ್ಷಿಯನ್ನು ಕಂಡು ನೋಯುವ ಪಕ್ಷಿ, ಇನ್ನೊಂದು ಸಾಕ್ಷಿ !
ಇನ್ನೆರಡು ಮಾನವ ಸಾಕ್ಷಿಗಳು. ವಾಲ್ಮೀಕಿಗಳಿಗೆ ‘ಬೇಡ-ಬೇಡ’ವೆನಿಸಿದ
ಬೇಡ..ಬೇಕೆನಿಸಿದ ಭರದ್ವಾಜ…!
ಐದನೆಯದು ಆತ್ಮಸಾಕ್ಷಿ. ಅದು ಬೇರೆ ಯಾರಲ್ಲ..ತನ್ನ ಮತಿ-ಅನುಮತಿಗಳಿಲ್ಲದೆ, ಸಂಕಲ್ಪ ಪ್ರಯತ್ನಗಳಿಲ್ಲದೆ, ತಾನೇತಾನಾಗಿ ತನ್ನೊಳಗಿಂದ ಹೊರಹೊಮ್ಮುವ  ಶ್ಲೋಕವೊಂದನ್ನು ಕಂಡು ಮೂಕರಾದ ವಾಲ್ಮೀಕಿಗಳೇ..!

ಈ ಪಂಚ ಸಾಕ್ಷಿಗಳಲ್ಲಿ ವಾಲ್ಮೀಕಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿದ್ದುದು ಭರದ್ವಾಜನೊಂದಿಗೆ ಮಾತ್ರ. ಪಾಲ್ಗಡಲು ತರಂಗವೊಂದನ್ನು ಕರೆದು ತನ್ನೊಳಗಿನಿಂದ ಉದಯಿಸಿ ಬರುವ ಚಂದ್ರನನ್ನು ತೋರಿಸಿದಂತೆ..
ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.

“ಏನು ಸೋಜಿಗವಿದು!? ಛಂದಸ್ಸೂತ್ರದಲ್ಲಿ ಬದ್ಧವಾದ, ಸಮವಾದ ನಾಲ್ಕು ಪಾದಗಳಿಂದ ಶೋಭಿಸುವ, ನಾದ-ಲಯಗಳಲ್ಲಿ ನಲಿಯುವ ಕವಿತಾ ಕಾಮಧೇನುವೇ ಇಳೆಗಿಳಿದು ಬರುವುದನ್ನು ನೋಡು…
ಇದು ಶಾಪವಲ್ಲ, ಶೋಕವಲ್ಲ…ಶ್ಲೋಕವಿದು..ಕರುಣರಸ ಪಾಕವಿದು..!”

ಭರದ್ವಾಜನ ಆತ್ಮ ಅಹುದೆಂದಿತು, ಮನ ಬಾಗಿತು,ತಲೆದೂಗಿತು.ವಾಲ್ಮೀಕಿಗಳ  ‘ಮಾನಿಷಾದ’ ಭರದ್ವಾಜನ ಮುಖದಲ್ಲಿ ಮಾರ್ದನಿಸಿತು..
ವಾಲ್ಮೀಕಿಗಳ ಕಿವಿದೆರೆಗಳಲ್ಲಿ ಅಮೃತ ಹೊಕ್ಕಂತೆ, ಅದೇನೋ ತಂಪು-ತೃಪ್ತಿ..ಆತ್ಮಸಂತೋಷ,ಸಮಾಧಾನ!
ಅದೊಂದು ವೃತ್ತ…ವಾಲ್ಮೀಕಿಗಳ ಹೃದಯದಲ್ಲಿ ಹುಟ್ಟಿದ ಶೋಕ..ಮುಖದಲ್ಲಿ ಶ್ಲೋಕವಾಯಿತು! ಭರದ್ವಾಜನ ಕಿವಿಯ ಹಾದಿಯಲ್ಲಿ ಹೃದಯ ಸೇರಿ ಆತನ ಮುಖದಲ್ಲಿ ಪ್ರತಿಧ್ವನಿಸಿತು.
ಅದು ವಾಲ್ಮೀಕಿಗಳ ಕರ್ಣಪಥದ ಮೂಲಕವಾಗಿ ಮತ್ತೊಮ್ಮೆ ತನ್ನ ಮೂಲನೆಲೆಯಾದ ಹೃದಯವನ್ನು ಸೇರುವಾಗ,  ಏನಚ್ಚರಿ! ತಾಪವು ತೃಪ್ತಿಯಾಗಿ..ಶೋಕವು ಸಂತೋಷವಾಗಿ ಮಾರ್ಪಟ್ಟಿತ್ತು…!

ತನ್ನ ಮಗುವನ್ನು ತಾನೇ ಕಂಡು ತೃಪ್ತಿಪಡುವ ತಾಯಿಯಂತೆ…ತನ್ನ ಮೊಗವನ್ನೇ ಕನ್ನಡಿಯಲ್ಲಿ ಕಂಡು ನಲಿಯುವ ನಾರಿಯಂತೆ…ತನ್ನದೇ ಪ್ರತಿಧ್ವನಿಯಲ್ಲಿ ವಿಸ್ತರಿಸುವ ಧ್ವನಿಯಂತೆ…
ತನ್ನ ಜ್ಞಾನಕಂದನ ಸ್ವರದಲ್ಲಿ ಅನುರಣಿಸುವ ಕಾವ್ಯಕಂದವನ್ನು ಆಲಿಸಿ ಆನಂದಿಸಿದರು ವಾಲ್ಮೀಕಿಗಳು..
ಗಂಗೆಯಲ್ಲಿ ಬಂದ ಮಹಾಪೂರವು ಮೆಲ್ಲಮೆಲ್ಲನೇ ಇಳಿಯುವಂತೆ,  ಒಮ್ಮೆ ಸಾಮಾನ್ಯ ಪ್ರಜ್ಞೆಗೆ ಮರಳಿ,ಮರೆತೇ ಹೋಗಿದ್ದ ತಮಸಾ ಸ್ನಾನಕ್ಕೆ ಉದ್ಯುಕ್ತರಾದರು..!

ಆಕಾಶಕಾಯಗಳು ಅಸಾಮಾನ್ಯ ಕಾರಣಗಳಿಗಾಗಿ ಒಮ್ಮೊಮ್ಮೆ ತಮ್ಮ ಪಥವನ್ನು ಬದಲಾಯಿಸುವುದುಂಟು..ಪುನಃ ಮೂಲಪಥವನ್ನೇ ಸೇರುವುದೂ ಉಂಟು…!ಎಂದಿನಂತೆ ಸ್ನಾನಕ್ಕೆ ಹೊರಟಿದ್ದ ವಾಲ್ಮೀಕಿಗಳನ್ನು ಅದ್ಯಾವುದೋ ದಿವ್ಯಶಕ್ತಿಯೊಂದು ಸೆಳೆದೊಯ್ದು ವಿಚಿತ್ರ ಘಟನಾವಳಿಗಳನ್ನು ನಿರ್ಮಿಸಿ ಮರಳಿ ತಮಸಾ ತೀರಕ್ಕೆ ತಂದಿಳಿಸಿತ್ತು..!

ತಮಸೆಯಲ್ಲಿ ತನ್ಮಯರಾಗಿ ಮುಳುಗಿ ತನು ತೊಳೆದರೂ ವಾಲ್ಮೀಕಿಗಳ ಮನದೊಳಗೆ ‘ಮಾನಿಷಾದ’ ಮರೆಯಾಗಲಿಲ್ಲ..!

ನಮ್ಮಾತ್ಮ ನಮ್ಮ ತನುವಿಗೇ ಸೀಮಿತವಾಗಿದ್ದರೆ ಪರರ ನೋವು-ನಲಿವುಗಳು ನಮಗರಿವಾಗದು..ವಾಲ್ಮೀಕಿಗಳಾದರೋ, ಆತ್ಮವಿಸ್ತಾರವುಳ್ಳವರು..ಸಕಲ ಜೀವಿಗಳಲ್ಲಿಯೂ ತಮ್ಮನ್ನೇ ಕಾಣುವವರು..!
ಆದುದರಿಂದಲೇ ಕ್ರೌಂಚಪಕ್ಷಿಗಳ ಕರುಣಧ್ವನಿ ಅವರ ಹೃದಯದಲ್ಲಿ ಪ್ರತಿಧ್ವನಿಸುತ್ತಿತ್ತು..ಆಶ್ರಮದಲ್ಲಿ ಸುಖಾಸನದಲ್ಲಿ ಸುಖಾಸೀನರಾಗಿ ಕ್ರೌಂಚಕಥೆಯನ್ನು ಮರೆಯಲೋಸುಗವೋ ಎಂಬಂತೆ…
ಅನ್ಯಾನ್ಯ ಕಥೆಗಳನ್ನು ಕಥನ ಮಾಡತೊಡಗಿದರು..ಆದರೆ, ಮರೆತೇನೆಂದರೂ ಮರೆಯಲಾಗದಸ್ಥಿತಿ ಅವರದಾಗಿತ್ತು..ಮನದಲ್ಲಿ ಮಡುಗಟ್ಟಿದ ವಿಷಾದ,ಮುಖದಲ್ಲಿ ಉದ್ಗಾರಗೊಳ್ಳುವ ಮಾನಿಷಾದ…

ಯಾಕೆ ಹೀಗೆ? ಏನಿದು? ಹೇಗಿದು? ಎನ್ನುವ ಪ್ರಶ್ನೆಗಳ ಸಾಲು ಸಾಲು ಮುನಿಮನದಲ್ಲಿ ಸಮುದ್ರಮಥನವನ್ನೇ ಏರ್ಪಡಿಸುವಾಗ ಉತ್ತರದ ಅಮೃತವನ್ನೇ ತರುವಂತೆ..ಚತುರ್ಮುಖ ಬ್ರಹ್ಮನ ಆವಿರ್ಭಾವವಾಯಿತಲ್ಲಿ…!
ಸೃಷ್ಟಿ ರಹಸ್ಯದ ಓನಾಮವನ್ನೇ ತಿಳಿಯದೆ ಪಾಡುಪಡುವ ನಮಗೆ,ಸೃಷ್ಟಿಕರ್ತನೊಡನೆ ತನ್ನ ಕುಟಿಯಲ್ಲಿಯೇ ಮುಖಾಮುಖಿಯಾಗುವ,ಸರಳ ಸಂಭಾಷಣೆಗೈಯುವ ವಾಲ್ಮೀಕಿಗಳು ಅರ್ಥವಾಗದಿದ್ದರೆ ಆಶ್ಚರ್ಯವೇನಿಲ್ಲ…!

ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ…!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ…!

ದೊಡ್ಡವರ ಸ್ವಭಾವವೇ ಹೀಗೆ..ನಾವು ಯಾವುದನ್ನು ಬಹುದೊಡ್ಡದೆಂದುಕೊಳ್ಳುತ್ತೇವೆಯೋ,ಅದು ಕಣ್ಣೆದುರಿದ್ದರೂ ಮರೆತುಬಿಡುತ್ತಾರವರು..!
ನಾವು ಯಾವುದನ್ನು ಚಿಕ್ಕದೆಂದುಕೊಳ್ಳುತ್ತೇವೆಯೋ,ಅದು ಅವರಿಗೆ ಬಹುದೊಡ್ಡದಾಗಿ ಕಾಣುತ್ತದೆ..!
ವರ್ತಮಾನದಲ್ಲಿ ಪ್ರತ್ಯಕ್ಷವಿರುವ ಸೃಷ್ಟಿಕರ್ತನನ್ನು ಮರೆತು, ಭೂತದಲ್ಲಿ ಮರೆಯಾಗಿ ಹೋದ ಪುಟ್ಟ ಪಕ್ಷಿಗಳೆಡೆಗೆ ಮತ್ತೆ ಹರಿಯಿತು ಮುನಿಮನಸ್ಸು..!

“ಛೆ, ಪಾಪಿಯೇ..! ಅದೆಂಥ ಕೆಡುಕನ್ನೆಸಗಿಬಿಟ್ಟೆ..? ನಿನ್ನ ಅಕಾರಣ ವೈರಕ್ಕೆ,ನೀನೆಸಗಿದ ಅಕಾರಣ ಹಿಂಸೆಗೆ ಧಿಕ್ಕಾರವಿರಲಿ.ಸೊಗಸೇ ಮೈವೆತ್ತ ರೂಪದ, ಮಾಧುರ್ಯವೇ ಮೈವೆತ್ತ ನಾದದ ಕ್ರೌಂಚಪಕ್ಷಿಯನ್ನು ಆ ಅವಸ್ಥೆಯಲ್ಲಿ ಕೊಲ್ಲಲು ಮನವಾದರೂ ಹೇಗಾಯಿತು…?”


ತಮಸಾ ತೀರದ ಘಟನೆಗಳು ತಮಸಾ ತರಂಗಗಳಂತೆ ಒಂದರ ಮೇಲೊಂದು ವಾಲ್ಮೀಕಿಗಳ ಕಣ್ಣಿಗೆ ಕಟ್ಟಿದಂತೆ ಗೋಚರಿಸತೊಡಗಿದವು.
ಮರಣಸಂಕಟದಲ್ಲಿ ಚಡಪಡಿಸುವ ತನ್ನ ವಲ್ಲಭನನ್ನು ಕಂಡು ಅಸಹಾಯಳಾಗಿ ರೋಧಿಸುವ ಕ್ರೌಂಚಿಯನ್ನು ನೆನೆನೆನೆದು ದುಃಖಿಸುತ್ತಾ ತನ್ನನ್ನೇ ಮರೆತ,
ತನ್ನ ಮುಂದೆ ಬ್ರಹ್ಮದೇವನಿರುವನೆಂಬುದನ್ನೂ ಮರೆತ ವಾಲ್ಮೀಕಿಗಳ ಮುಖದಿಂದ ಅಪ್ರಯತ್ನವಾಗಿ ಮಾನಿಷಾದ ಹೊರಹೊಮ್ಮಿತು.
ಅದನ್ನು ಆಲಿಸಿ ಕಮಲದಂತೆ ವಿಕಸಿತವಾದ ಕಮಲಾಸನನ ಮುಖದಿಂದ ಹೊರಹೊಮ್ಮಿದ ನಗು ಆಶ್ರಮವನ್ನು ವ್ಯಾಪಿಸಿತು…ವಾಲ್ಮೀಕಿಗಳಿಗೆ ಆಶ್ಚರ್ಯವನ್ನು ತಂದಿತು..!

ಆಗ ಬ್ರಹ್ಮನ ವಾಣಿಯಾಯಿತು…!

“ನಿನ್ನ ಮುಖದಲ್ಲಿ ಮಾನಿಷಾದದ ರೂಪದಲ್ಲಿ ಸರಸ್ವತಿ ಪ್ರಕಾಶವಾಗುತ್ತಿರುವುದು ನಿನ್ನಿಚ್ಚೆಯಲ್ಲ..ನನ್ನಿಚ್ಚೆ..!
(ವಾಣಿ ಬ್ರಹ್ಮನ ರಾಣಿಯಲ್ಲವೇ..? ತನ್ನ ಪತಿಯ ಅಭಿಪ್ರಾಯ-ಅನುಮತಿಯಿಲ್ಲದೆ ಹೇಗೆ ತಾನೇ ಆಕೆ ಬೇರೊಂದೆಡೆ ಹೋಗಲು ಸಾಧ್ಯ..!?)
ಯಾವುದು ಮೊದಲು ಶೋಕವಾಗಿತ್ತೋ..ಮತ್ತೆ ಶ್ಲೋಕವಾಯಿತೋ..ಅದು ಮುಂದೆ ಮಹಾಕಾವ್ಯವಾಗಬೇಕಾಗಿದೆ…!
ರಾಮಚರಿತವನ್ನು ರಚಿಸು..
ನಾರದರ ಮುಖದಿಂದ ಆ ಧರ್ಮಮೂರ್ತಿಯ, ಗುಣಸಾಗರನ, ಲೋಕೈಕವೀರನ ಚರಿತೆಯನ್ನು ಹೇಗೆ ನೀನು ಕೇಳಿದೆಯೋ, ಹಾಗೆಯೇ ಜಗತ್ತಿಗೆ ಬಿತ್ತರಿಸು.
ನಾರದರು ಬಣ್ಣಿಸುವಾಗ ರಾಮಚರಿತೆಯನ್ನು ಕಿವಿಯಿಂದ ನೋಡಿದ ನೀನು..ಇದೋ, ಈಗ ನನ್ನ ಕೃಪೆಯಿಂದ ಅದನ್ನು ಕಣ್ಣಿನಿಂದಲೇ ನೋಡುವೆ.
ಆದರೆ ಕಣ್ತೆರೆದು ನೋಡುವುದಲ್ಲ, ಧ್ಯಾನಮಗ್ನನಾಗಿ ಕಣ್ಮುಚ್ಚಿ ಕುಳಿತ ನಿನ್ನ ಮುಂದೆ ಸಂಪೂರ್ಣ ರಾಮಕಥೆಯೇ ಪ್ರಕಟಗೊಳ್ಳುವುದು ..
ಯಾವ ಘಟನೆಗಳು ರಾಮನ ಜೀವನದಲ್ಲಿ ಲೋಕಾಂತದಲ್ಲಿ ನಡೆದವೋ..ಯಾವ ಘಟನೆಗಳು ಏಕಾಂತದಲ್ಲಿ ನಡೆದವೋ,ಅವೆಲ್ಲವೂ ಹಾಗೆ ಹಾಗೆಯೇ ನಿನ್ನ ಕಣ್ಮುಂದೆ ಗೋಚರಿಸುವುವು.
ಇದೇ ರೀತಿಯ ಶ್ಲೋಕಗಳಿಂದಲೇ ರಾಮಕಥೆಯನ್ನು ಬಣ್ಣಿಸು..ಈ ಕಾವ್ಯದಲ್ಲಿ ನಿನ್ನ ಮಾತೆಂದಿಗೂ ಸುಳ್ಳಾಗದು..
ಎಲ್ಲಿಯವರೆಗೆ ಧರೆಯಲ್ಲಿ ಹಿಮಾಲಯವೇ ಮೊದಲಾದ ಪರ್ವತಗಳಿರುವುವೋ..ಎಲ್ಲಿಯವರೆಗೆ ಗಂಗೆಯೇ ಮೊದಲಾದ ನದಿಗಳು ಹರಿಯುವುವೋ, ಅಲ್ಲಿಯವರೆಗೆ ನೀನು ರಚಿಸಿದ ರಾಮಾಯಣವು ಅಜರಾಮರವಾಗಿ ಉಳಿಯುವುದು.
ಎಲ್ಲಿಯವರೆಗೆ ರಾಮಾಯಣವು ಭೂಮಿಯಲ್ಲಿ ಉಳಿದುಕೊಳ್ಳುವುದೋ..ಅಲ್ಲಿಯವರೆಗೆ ನೀನು ಬ್ರಹ್ಮಲೋಕದಲ್ಲಿ ವಿಹರಿಸುವೆ..”

ಆ ವಾಣಿಯ ಪರ್ಯವಸಾನದಲ್ಲಿ ಬ್ರಹ್ಮದೇವನು ಕಣ್ಮರೆಯಾದನು..ಆದರೆ, ಒಂದೇ ದಿನದಲ್ಲಿ ನಡೆದುಹೋದ, ಊಹೆಗೂ ಮೀರಿದ ಘಟನೆಗಳನ್ನವಲೋಕಿಸತೊಡಗಿದ ಮುನಿಯ ವಿಸ್ಮಯ ಬೆಳೆಯುತ್ತಲೇ ಇದ್ದಿತು..!
ಮೊದಲು ಮನದೊಳಗೆ ಪರಿಪೂರ್ಣ ಪುರುಷನ ಕುರಿತುಮೂಡಿದ ಪ್ರಶ್ನೆ..
ನಾರದರೊಂದಿಗೆ ಸಮಾಗಮ…
ಉತ್ತರರೂಪವಾಗಿ ರಾಮಕಥಾಶ್ರವಣ..
ತಮಸಾಗಮನ..
ಕ್ರೌಂಚಯುಗ್ಮದ ಆನಂದ-ಅವಸಾನಗಳ ದರ್ಶನ…ಮಾನಿಷಾದ…
ಆಶ್ರಮ ಪ್ರತ್ಯಾಗಮನ…
ಮನದಲ್ಲಿಯೇ ಮಾನಿಷಾದ ಮಂಥನ…
ಬ್ರಹ್ಮಾಗಮನ..
ರಾಮಚರಿತೆಯ ಮಹಾಕಾವ್ಯ ರಚನೆಗೆ ನಿರ್ದೇಶನ.
ಆದಿಕಾವ್ಯದ ಅಂಕುರಾರೋಪಣದ ಮೂಲಕವಾಗಿ ಅಖಿಲ ವಿಶ್ವಕ್ಕೆ ನವದಿಶಾ ದರ್ಶನವನ್ನುಮಾಡಿಸಿದ ಆ ದಿನವನ್ನು ಮಹಾದಿನವೆನ್ನದಿರಲಾದೀತೆ…!?

ಶ್ಲೋಕ ಒಂದೇ…!
ಆದರೆ ಮೂವರ ಮುಂದೆ ಉಚ್ಚರಿಸಿದಾಗ ಆದ ಪರಿಣಾಮಗಳು ಸಂಪೂರ್ಣ ಬೇರೆ ಬೇರೆ…!
ಬೇಡನ ಮುಂದೆ ಉದ್ಗರಿಸಿದಾಗ ಯಾವ ಶುಭ ಪರಿಣಾಮವೂ ಆಗಲಿಲ್ಲ..! (ಶಾಪದ ದುಷ್ಪರಿಣಾಮವನ್ನು ಹೊರತುಪಡಿಸಿ).
ಭರದ್ವಾಜನ ಮುಂದೆ ಉಚ್ಚರಿಸಿದಾಗ ವೃದ್ಧಿಯಾಗದಿದ್ದರೂ ಪ್ರತಿಧ್ವನಿ ಬಂದಿತು…!
ಬ್ರಹ್ಮದೇವನ ಮುಂದೆ ಉಚ್ಚರಿಸಿದಾಗ..ಅದೊಂದು ಮಹಾಕಾವ್ಯಕ್ಕೇ ನಾಂದಿಯಾಯಿತು..!ಕಾವ್ಯಲೋಕದ ನಿರ್ಮಿತಿಗೆ ಮೂಲಶಿಲೆಯಾಯಿತು…!

ಬದುಕಿನಲ್ಲಿ ‘ಏನು’ ಎಂಬುದೆಷ್ಟು ಮುಖ್ಯವೋ, ‘ಎಲ್ಲಿ’ ಎಂಬುದೂ ಅಷ್ಟೇ ಮುಖ್ಯವಾಗುತ್ತದೆ..
ಹೇಳಬಾರದಲ್ಲಿ ಹೇಳಿದರೆ ಆಗಬಾರದ್ದಾಗುತ್ತದೆ .
ಹೇಳಬೇಕಾದಲ್ಲಿ ಹೇಳಿದರೆ ಆಗಬೇಕಾದದ್ದೇ ಆಗುತ್ತದೆ..ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ…!

ದಿವಿಯಲ್ಲಿ ದೇವತೆಗಳ ಸಂದೋಹವೇ ಇರುವಾಗ, ವಾಲ್ಮೀಕಿಗಳ ಬಳಿ ಬ್ರಹ್ಮದೇವನೇ ಬರಬೇಕೇಕೆ..?
ಶ್ರೀರಾಮ ಯಾರ ಅವತಾರವೋ, ಆ ಮಹಾವಿಷ್ಣುವೇ ಬರಬಹುದಿತ್ತು..ಸೀತಾವತಾರಗೈದ ಮಹಾಲಕ್ಷ್ಮಿ ಬರಬಹುದಿತ್ತು.
ಶ್ರೀರಾಮನ ಪರಮಪ್ರಿಯನಾದ ಮಹಾದೇವನೇ ಬರಬಹುದಿತ್ತು..

ಅದು ಹೀಗೆ..
ಸರಸ್ವತಿಯನ್ನು ಧರೆಗೆ ಸರಸ್ವತೀರಮಣನೇ ಕರೆತರಬೇಕು..
ರಾಮಾಯಣವೆಂದರೆ, ಸೃಷ್ಟಿ-ಶಬ್ಧ ಚಿತ್ರ. ಅದರ ಶುಭಾರಂಭಕ್ಕೆ ಸೃಷ್ಟಿಕರ್ತನೇ ಬರಬೇಕು..!
ಅನನ್ಯವಾದ ಜೋಡಿಯದು ಸರಸ್ವತೀ-ಸರಸಿಜಾಸನರದು..

ಬ್ರಹ್ಮನೇ ಜಗತ್ತಿನ ಸಕಲ ವಸ್ತುಗಳನ್ನೂ ಸೃಷ್ಟಿ ಮಾಡುವವನು.
ಒಂದೊಂದು ವಸ್ತುವಿಗೂ ಸಂಬಂಧಿಸಿದ ಶಬ್ಧಗಳನ್ನು ಸೃಷ್ಟಿಸುವುದು ಸರಸ್ವತಿ..
ಅವೆರಡರಲ್ಲಿ (ಶಬ್ಧಾರ್ಥಗಳಲ್ಲಿ)ಸಹಚಾರವಿದ್ದರೆ ಅದುವೇ ಸತ್ಯ..ಅವುಗಳಲ್ಲಿ ವ್ಯಭಿಚಾರ ಬಂದರೆ ಅದುವೇ ಮಿಥ್ಯ..
ಇರುವುದನ್ನೇ ನುಡಿದರೆ ಸತ್ಯ..ಇರುವುದೇ ಬೇರೆ, ನುಡಿಯೇ ಬೇರೆ ಆದರೆ ಅದುವೇ ಮಿಥ್ಯ..
ಶಬ್ಧಾರ್ಥಗಳು ‘ಸಹಿತ’ವಾಗಿದ್ದರೆ, ಅದು ತಾನೆ ‘ಸಾಹಿತ್ಯ’ವೆನಿಸಿಕೊಳ್ಳುವುದು..?
ಶಭಾರ್ಥಗಳ ಮೂಲ ಸ್ರೋತಸ್ಸುಗಳು ಜೊತೆಗೂಡಿ ಬಂದು ಆದಿಕವಿಯನ್ನು ಹರಸಿ ಪ್ರೇರಿಸಿದವು ಆದಿಕಾವ್ಯ ರಚನೆಗೆ..!

ಈ ಮಧ್ಯೆ ಮಾನಿಷಾದ ಬೆಳೆಯತೊಡಗಿತು.ಕ್ಷಣಕ್ಷಣಕ್ಕೂ ಹೆಚ್ಚು ಹೃದಯಗಳನ್ನೂ, ಹೆಚ್ಚು ಮುಖಗಳನ್ನೂ ಆವರಿಸತೊಡಗಿತು…
ಮೊದಲು ವಾಲ್ಮೀಕಿಗಳು.. ಮತ್ತೆ ಜೊತೆಗೆ ಭರದ್ವಾಜ..ಈಗ ಆಶ್ರಮಕ್ಕೆ ಆಶ್ರಮವೇ ಆನಂದ ಆಶ್ಚರ್ಯಗಳೊಂದಿಗೆ ಮಾನಿಷಾದವನ್ನು ಮತ್ತೆ ಮತ್ತೆ ಹಾಡತೊಡಗಿತು…!

ಸಾವಿರ ಯೋಜನಗಳ ಪ್ರಯಾಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ..
೨೪,೦೦೦ ಶ್ಲೋಕಗಳ ರಾಮಾಯಣ ರಚನೆ ಮಾನಿಷಾದವೆಂಬ ಒಂದು ಶ್ಲೋಕದಿಂದ ಆರಂಭವಾಯಿತು…!

||ಹರೇರಾಮ||

Facebook Comments