|| ಹರೇ ರಾಮ ||

ಓ ಅಮ್ಮನ ಮಗುವೇ………..!

mother

ಅಮ್ಮ – ಪ್ರತ್ಯಕ್ಷ ದೇವತೆ

ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!

ಒಮ್ಮೆಯಲ್ಲ, ಒಂದು ದಿನವಲ್ಲ, ಒಂದು ತಿಂಗಳಲ್ಲ, ಒಂಭತ್ತು ತಿಂಗಳ ಕಾಲ ಹೊರ ಜಗತ್ತಿನ ಸಂಪರ್ಕವೇ ನಿನಗಿಲ್ಲದಿದ್ದ ಆ ಸಮಯದಲ್ಲಿ…
ಕಣ್ಣಿದ್ದರೂ ನೋಡಲಾರೆ, ಕಾಲಿದ್ದರೂ ನಡೆಯಲಾರೆ, ಬಾಯಿದ್ದರೂ ಉಣ್ಣಲಾರೆ..
ಹೃದಯದ ಬಡಿತವಿತ್ತು, ನಾಡಿಯ ಮಿಡಿತವಿತ್ತು, ಮತ್ತೇನಿತ್ತು ಹೇಳು ನಿನ್ನಲ್ಲಿ ಅಂದು ..?
ಅಸಹಾಯಕನಾಗಿ ಜೀವಚ್ಛವದಂತೆ ಅಂಧಕಾರದಲ್ಲಿ ಮಲಗಿದ್ದೆ ಅಲ್ಲವೇ ಒಂಭತ್ತು ತಿಂಗಳ ಕಾಲ..?
ಅಂದು ಅಮ್ಮ ತನ್ನ ಬಾಯಿಯಿಂದ ನಿನಗೆ ಉಣಬಡಿಸಲಿಲ್ಲವೇ ..?
ತನ್ನ ಉಸಿರಲ್ಲಿ ನಿನಗೆ ಪಾಲು ಕೊಡಲಿಲ್ಲವೇ..?
ಊಟ ಮಾಡಲು ಒಂದೇ ಬಾಯಿ,
ಉಸಿರಾಡಲು ಒಂದೇ ಮೂಗು,
ಅಮ್ಮನಿಗೂ ನಿನಗೂ ಇದೆಂಥಾ ಅದ್ವೈತ..!!!!!

ಉಣ್ಣುವ ಅನ್ನದಲ್ಲಿ ಪಾಲು ಕೊಡುವವರಿರಬಹುದು,
ಉಂಡ ಊಟದಲ್ಲಿ ಪಾಲು ಕೊಟ್ಟವರುಂಟೇ ?
ಉಸಿರಿನಲ್ಲಿ ಪಾಲು ಕೊಟ್ಟವರುಂಟೇ ..?
ರಕ್ತ ಮಾಂಸಗಳನ್ನು ಹಂಚಿಕೊ೦ಡವರು೦ಟೇ..??
ಅಮ್ಮ ಉಸಿರಾಡಿದರೆ ನಿನಗೆ ಬದುಕು, ಅಮ್ಮನು೦ಡರೆ ನಿನಗೆ ತೃಪ್ತಿ..!
ಸಾಟಿಯಿಲ್ಲದ ಸಂಬಂಧವಲ್ಲವೇ..?

ನಿನ್ನಬಳಿ ಇಂದು ಬಂಗಲೆಗಳಿರಬಹುದು,
ಆದರೆ ಅಂದು ಅಮ್ಮನ ಒಡಲೇ ನಿನಗೆ ಮನೆಯಾಗಿತ್ತು..
ಇಂದು ನಿನ್ನ ಬಳಿ ವಾತಾನುಕೂಲಿತ(air conditioned) ಕೊಠಡಿಗಳಿರಬಹುದು,
ಆ ಒಂಭತ್ತು ತಿಂಗಳ ಮನೆ ವಾತಾನುಕೂಲಿತವಷ್ಟೇ ಅಲ್ಲ,  ಸರ್ವಾನುಕೂಲಿತವಿತ್ತಲ್ಲವೇ..?
ಅಲ್ಲಿಯ ಸೌಕರ್ಯಗಳು ಮತ್ತೆಲ್ಲಿಯೂ ಸಿಗಲಾರವು..!

ಅಂದು ನಿನ್ನಲ್ಲಿ ಉಸಿರಾಡುವ, ಉಣ್ಣುವ ಶಕ್ತಿಯು ಇಲ್ಲದಿದ್ದಾಗ ಅಮ್ಮ ತನ್ನ ಒಡಲಲ್ಲಿಟ್ಟುಕೊಂಡು ನಿನ್ನನ್ನು ಬೆಳಸಿದಳು,
ಮತ್ತೆ ಆ ಶಕ್ತಿ ನೀಡಿ ನಿನ್ನನ್ನು ಭುವಿಗಿಳಿಸಿದಳು ..
ಅಂದು ಆಕೆ ನಿನಗಾಗಿ ಅನುಭವಿಸಿದ ವೇದನೆ ಎಷ್ಟೆಂದು ಗೊತ್ತೇ..??

ಉಪನಿಷತ್ತುಗಳು ಬಣ್ಣಿಸುತ್ತವೆ “ಗರ್ಭದಲ್ಲಿರುವಾಗ ಶಿಶುವಿಗೆ ಪರಮಾತ್ಮದರ್ಶನವಾಗುವುದೆಂದು”. ಅದೆಷ್ಟು ಪವಿತ್ರವಿರಬೇಕು ಅಮ್ಮನ ಗರ್ಭ..!!
ಕಾಶಿ ಕೈಲಾಸಗಳಿಗೆ ಅದೇನು ಕಡಿಮೆ ಹೇಳು..?  (ಕಾಶಿ ಕೈಲಾಸಗಳಲ್ಲಿ ದೇವರ ಸಾಕ್ಷಾತ್ಕಾರವಾಗದಿರಬಹುದು, ಆದರೆ ಅಮ್ಮನ ಗರ್ಭದಲ್ಲಿ…?)
ಬದುಕಿಗೆ ಬೆಳಕು ಕೊಟ್ಟವಳು..
ಅವಳು ನಿನ್ನನ್ನು ತನ್ನೊಳಗಿಟ್ಟುಕೊಂಡು ಪರಮಾತ್ಮ ಜ್ಯೋತಿಯನ್ನು ತೋರಿಸಿದಳು,
ಮಾತ್ರವಲ್ಲ ಮತ್ತೆ ಹೊರತಂದು ಈ ಭುವಿಯ ಬೆಳಕು ತೋರಿಸಿದಳು..

ನೆನಪಿದೆಯೇ..ನೀನು ಈ ಜಗಕೆ ಬಂದ ಮೇಲೆ ಮಾಡಿದ ಮೊದಲ ಊಟ ??
ಅಮ್ಮನಿತ್ತ ಅಮೃತ ದ್ರವ ?
ಅದನ್ನು ಸಿದ್ದಪಡಿಸುವಾಗ ಅಮ್ಮ ತನ್ನ ಒಡಲನ್ನೇ ಅಡುಗೆ ಮನೆಯಾಗಿ ಮಾಡಿಕೊಂಡಿದ್ದಳು, ಮತ್ತೆ ತನ್ನ ಹೃದಯದಿಂದ ವಾತ್ಸಲ್ಯ ಧಾರೆಯಾಗಿ ನಿನ್ನೆಡೆಗೆ ಹರಿಸಿದಳು..
ನಿನ್ನ ಹಲ್ಲಿಲ್ಲದ ಬಾಯಿಗೆ ಶ್ರಮವಾಗದಂತೆ..
ಎಳೆಯ ಒಡಲಿಗೆ ಭಾರವಾಗದಂತೆ..
ಎಲ್ಲಿಲ್ಲದ ಮಧುರತೆ….!!
ಎಲ್ಲಬಗೆಯ ಪೌಷ್ಟಿಕಾಂಶ..!!

ಜಗತ್ತಿನ ಎಲ್ಲಾ ಬಾಣಸಿಗರು ಸೇರಿದರೂ ನೀನುಣುವ ಊಟಕ್ಕೆ ಆ ಸ್ವಾದವನ್ನು ತರಲಾರರು..
ಜಗತ್ತಿನ ಎಲ್ಲಾ ವೈದ್ಯರು ಜೊತೆಗೂಡಿದರೂ ಅಮ್ಮನಿತ್ತ ಮೊದಲೂಟದ ಪೌಷ್ಟಿಕತೆಯನ್ನು ತಂದು ಕೊಡಲಾರರು..!
ಇಂದು ನೀನು ಬೆಳ್ಳಿಯ ತಾಟು, ಬಂಗಾರದ ಸೌಟುಗಳನ್ನು ಕಂಡಿರಬಹುದು,
ಔತಣಕೂಟಗಳಲ್ಲಿ ಸಾವಿರಾರು ಬಾರಿ ಪಂಚಭಕ್ಷ್ಯ ಪರಮಾನ್ನಗಳನ್ನು ಉಂಡಿರಬಹುದು..
ಆದರೆ ಬದುಕಿನ ಪ್ರಥಮಚರಣದಲ್ಲಿ ಅಮ್ಮನಿತ್ತ ಅಮೃತ ದ್ರವದ ಶ್ರೇಷ್ಠತೆಯಾಗಲಿ,  ಪ್ರೇಮದ ಆ ಪರಾಕಾಷ್ಠೆಯಾಗಲಿ, ಎಲ್ಲಾದರೂ, ಎಂದಾದರೂ ಮತ್ತೊಮ್ಮೆ ಸಿಕ್ಕಿತೇ..?
ಬದುಕಿನ ಮೊದಮೊದಲೇ ಸಿಗುವ, ಮತ್ತೆಂದೂ ಸಿಗದ ಸೌಭಾಗ್ಯವದು..!

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಈ ಗಾದೆಮಾತನ್ನೊಮ್ಮೆ ಗಾಢವಾಗಿ ಚಿಂತಿಸು!
ಯಾವ ಇಬ್ಬರಲ್ಲಿ ಬಂಧವಿದೆಯೋ ಅವರು ಬಂಧುಗಳು
.ನಿಜವಾದ ಬಂಧುವೆಂದರೆ ತಾಯಿಯೇ ಸರಿ..!
ಜಗತ್ತಿನ ಇತರ ಸಂಬಂಧಗಳೆಲ್ಲ ಭಾವಾತ್ಮಕ..!
ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದು, ಮಾತುಗಳಲ್ಲಿ ಆಡಬಹುದು, ಆದರೆ ಬರಿಗಣ್ಣಿನಿಂದ ನೋಡಲಾಗದು – ಎನ್ನುವರೀತಿಯವು.
ಆದರೆ, ನಿನ್ನ ಮತ್ತು ಅಮ್ಮನದ್ದು ಬೇರೆಯೇ ರೀತಿಯದ್ದು, ಅದು ಕಣ್ಣಿಗೆ ಕಾಣುವ ಕರುಳಬಳ್ಳಿಯ ಸಂಬಂಧ..!
ಅಂಥ ಸಂಬಂಧ ಒಂದು ಜನ್ಮಕ್ಕೆ ಒಂದೇ ಸರಿ..!
ಅತ್ಯಂತ ಅಸಹಾಯಕ ಸ್ಥಿತಿಗಳಲ್ಲಿ ಜೀವಸೆಲೆ ಅಮ್ಮನಿಂದ ನಿನ್ನೆಡೆಗ ಹರಿದು ಬರುವುದು ಕರುಳ ಬಳ್ಳಿಯೆಂಬ ಅಮೃತ ಸೇತುವಿನಿಂದಲ್ಲವೇ..!?

ಅಬ್ಬಾ….!!
ಕರುಳಬಳ್ಳಿಯೆಂಬ ಪರಮಾಶ್ಚರ್ಯವೇ! ಬರಿಗಣ್ಣಿಗೇ ಕಾಣುವ, ಭಾವಿಸಿದಷ್ಟೂ ಮುಗಿಯದ, ಜೀವ-ಜೀವಗಳ ನಡುವಿನ ಇಂಥದ್ದೊಂದು ಬೆಸುಗೆ ಬೇರೆಲ್ಲಿ ಕಾಣಲು ಸಾಧ್ಯ?
ಹೇಗೆ ತಾನೇ ಕತ್ತರಿಸುವರೋ…..?
ಕಲ್ಲು ಮನಸ್ಸೇ!!!
ದೇವರು ದೊಡ್ಡವನು, ನಾಭಿಯೊಂದು ಉಳಿದಿದೆ ನಮ್ಮ ಶರೀರದಲ್ಲಿ.  ನಾಭಿ ಇರುವವರೆಗೂ ನೀನು ಮರೆಯಬಾರದ ಸಂಬಂದ ಅದು.
ನೀನು ಹುಟ್ಟುವಾಗಲೇ ಇರುವ – ಅಷ್ಟೇ ಏಕೆ, ಅದಕ್ಕಿಂತ ಮೊದಲೇ ಇದ್ದ ಸಂಬಂಧವಿದು.

ಅದೇ ಬದುಕಿನ ಆದಿ ಸಂಬಂಧ.
ಮತ್ತೆಲ್ಲರೂ ಅಮ್ಮನ ಮುಖಾಂತರವೇ ಸಂಬಂಧಿಗಳು..!

ಈ ಜಗತ್ತಿನಲ್ಲಿ ಅದೆಷ್ಟೋ ಬಗೆಯ ಮೃದು ಮೃದುವಾದ – ಹಂಸತೂಲಿಕಾ ತಲ್ಪಗಳಿರಬಹುದು, ಆದರೆ ಅಮ್ಮನ ಮಡಿಲಿನ ಮಾರ್ದವಕ್ಕೆ ಅವು ಯಾವವೂ ಸಾಟಿಯಲ್ಲ..!!
ಭೌತಿಕ ಮಾರ್ದವಕ್ಕಿಂತ ಭಾವದ ಮಾರ್ದವ ಹಿರಿದಲ್ಲವೇ..?
ನಿರ್ಜೀವ ಮಾರ್ದವಕ್ಕಿಂತ ಚೈತನ್ಯಮಯವಾದ ಮಾರ್ದವ ಜೀವಕ್ಕೆ ಹೆಚ್ಚು ಹಿತವಲ್ಲವೇ..?

ವಿಶ್ವದಲ್ಲಿ ದೊಡ್ಡವರೆನಿಸಿಕೊಂಡವರು ಎಷ್ಟಿಲ್ಲ?
ಆದರೆ ಅವರೆಲ್ಲ ಅಮ್ಮನಮುಂದೆ ಚಿಕ್ಕವರೇ..!
ಭಯಂಕರವಾದ ಜೀವನರಣಾಂಗಣವನ್ನು ಪ್ರವೇಶಿಸುವ ಮುನ್ನ ಅವರೆಲ್ಲಾ ಅಮ್ಮನ ಮಡಿಲಲ್ಲಿ ಆಡಿದವರೇ..!
ಅಮ್ಮನೆಂದರೆ ದೊಡ್ಡವರಿಗಿಂತ ದೊಡ್ಡವಳು.

4225,1152307231,1

ಕೈ ಹಿಡಿದು ನಡೆಸೆನ್ನನು. . . .!

ನೀನಿಂದು ಜಗತ್ತನ್ನೇ ನಡೆಸುತ್ತಿರಬಹುದು, ಆದರೆ ನಡೆಯಲುಬಾರದ ಸ್ಥಿತಿಯಲ್ಲಿ ನಿನ್ನನ್ನು ಕೈ ಹಿಡಿದು ನಡೆಸಿದ ಅಮ್ಮನ ಮರೆಯದಿರು..!
ಹೃದಯದ ಹಾಲಿತ್ತವಳನ್ನು ಎಂದೂ ಉಪವಾಸ ಕೆಡಹದಿರು..
ಮಾತು ಕಲಿಸಿದ ಮಾತೆಯ ಮೇಲೆ ಅಪಶಬ್ಧಗಳನ್ನು ಪ್ರಯೋಗಿಸದಿರು..!
ತನ್ನ ರಕ್ತ ಮಾಂಸಗಳನ್ನೇ ನಿನಗೆ ಧಾರೆಯೆರೆದವಳಿಗೆ ಪ್ರತಿಯಾಗಿ ನೀನೇನು ತಾನೇ ಕೊಡಬಲ್ಲೆ?
ಅಮ್ಮ ಹಾಸಿಗೆ ಹಿಡಿದಾಗ ಆಕೆಯ ಮಡಿಲೇ ನಿನಗೆ ಹಾಸಿಗೆಯಾದ್ದುದನ್ನು ನೆನಪಿಸಿಕೊ..
ಏಳಲಾರದ ಅಶಕ್ತ ಅಮ್ಮನ ಶರೀರವನ್ನು ಶುಚಿಯಾಗಿಡಬೇಕಾಗಿ ಬಂದರೆ “ಛೀ” ಎನ್ನಬೇಡ..!
ಎಳವೆಯಲ್ಲಿ ನಿನ್ನ ಮಲಮೂತ್ರಗಳನ್ನು ಶುಚಿಗೊಳಿಸುವಾಗ ಎಂದೂ ಹೇಸಿಕೊಳ್ಳಲಿಲ್ಲ ಅವಳು..
ತನ್ನುದರವನ್ನೇ ನಿನಗೆ ಮನೆಯಾಗಿ ಮಾಡಿ ಕೊಟ್ಟವಳನ್ನು ಎಂದೂ ಮನೆಯಿಂದ ಹೊರನೂಕದಿರು..!

ತಾಯಿಯ ರೂಪದಲ್ಲಿ ವಿಶ್ವದ ತಂದೆಯೇ ಬಂದಾಗ,
ಮಮತೆಯ ಸಾಗರವನ್ನೇ ತಂದಾಗ,
ಕಣ್ಣಿದ್ದೂ ಕುರುಡನಾಗಿ ಮತ್ತೆ “ದೇವರು ಕಾಣಲಿಲ್ಲ” ವೆನ್ನುವವನಿಗೆ. . . . . . . . .
ಏನೆನ್ನ ಬೇಕು..?

|| ಮಾತೃದೇವೋ ಭವ.. ||

(ಮುಂದುವರಿಯುವುದು.. ಎಂದೂ ಮುಗಿಯದು.!)

Facebook Comments Box