ಎಂದಿನಂತೆ ಸಭಾಸ್ಥಾನವನ್ನು ಸೇರಿ, ಪರಂಪರೆಯ ಪೀಠವನ್ನೇರಿ, ಶಿಷ್ಯಕೋಟಿಯ ಕೋಟೆಯ ನಡುವೆ ಜೀವಗಳ ತಾಪಹರಣದ ನಿತ್ಯಕಾಯಕದಲ್ಲಿ ನಾವು ಮಗ್ನರಾಗಿದ್ದ ಸಮಯ; ನೀಲಗಗನದಲ್ಲಿ ಮೂಡಿಬರುವ ಬಣ್ಣದ ಬಿಲ್ಲಿನಂತೆ, ಶ್ವೇತ ಚಿತ್ರಪಟವನ್ನು ಪ್ರವೇಶಿಸುವ ಬಣ್ಣದಲ್ಲದ್ದಿದ ಕುಂಚದಂತೆ, ಬಣ್ಣ ಬರೆದ ಯಕ್ಷಗಾನದ ಮಸ್ತಕದ ಮೇಲೆ ಇಡಲ್ಪಡುತ್ತಿರುವ, ಕಾಂತಿಯೇ ಮೈವೆತ್ತ ಕಿರೀಟದಂತೆ, ನೆರೆದವರ ಮುಖದಲ್ಲಿ ರಂಗು ತುಂಬುತ್ತಾ ಪ್ರವೇಶಿಸಿದರು ಯಕ್ಷಗಾನಸಾಮ್ರಾಜ್ಯದ ನಿತ್ಯಾಭಿಷಿಕ್ತ ಚಕ್ರವರ್ತಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು!

ತನ್ನ ಗುರುವಿನ ಕುರಿತು ತನ್ನೊಳಗೆ ತುಂಬಿ ಹರಿಯುವ ಅಭಿಮಾನ-ಗೌರವಗಳನ್ನು ಪ್ರೀತಿ-ಪ್ರಣಾಮವಾಗಿಸಿ ಪಾದಮೂಲದಲ್ಲಿ ಚೆಲ್ಲಿ, ಮರುಕ್ಷಣದಲ್ಲಿ ಅವರು ದೃಷ್ಟಿ ಹಾಯಿಸಿದ್ದು ಪಾರ್ಶ್ವದಲ್ಲಿ ನಿಂತು ಗಾಳಿ ಬೀಸುವ ಪರಿವಾರದವನ ಹಸ್ತದಲ್ಲಿ ಹಿಂದಕ್ಕೂ-ಮುಂದಕ್ಕೂ ತೊನೆದಾಡುವ ಬೀಸಣಿಗೆಯ ಮೇಲೆ! ಆ ದೃಷ್ಟಿಯಲ್ಲಿ ‘ಗುರುವಿಗೆ ವ್ಯಜನದ ಪರಿವೀಜನವು ನನ್ನದೇ ಹಕ್ಕು; ನಾನಿರುವಾಗ ನಾನೇ! ನೀನೇಕೆ?’ ಎಂಬ ಭಾವ!

ಸರಿ, ಮತ್ತೇಕೆ ತಡ? ಚಿಟ್ಟಾಣಿಯವರು ಬೀಸಣಿಗೆಯವನ ಬಳಿ ಸಾರಿ ‘ಇತ್ತ ತಾ ಬೀಸಣಿಗೆಯನ್ನು’ ಎಂದು ಪ್ರೇಮಾಧಿಕಾರವಾಣಿಯಲ್ಲಿ ಕೇಳಿಯಾಯಿತು; ಅವನು ನೀಡಲು ಹಿಂದೆ ಮುಂದೆ ನೋಡುವಾಗ, ಪ್ರೇಮಬಲಪ್ರಯೋಗದಲ್ಲಿ ಬೀಸಣಿಗೆಯನ್ನು ಸೆಳೆದು ಕೈವಶಗೈದೂ ಆಯಿತು! ಮುಂದೆ ನರ್ತನಲೋಕದ ನಿತ್ಯಚಕ್ರವರ್ತಿಯಿಂದ ತನ್ನ ಗುರುವಿಗೆ “ಚಾಮರಸೇವಾಂ ಅವಧಾರಯ!”.

ಗುರುವಿಗೋ, ಕಲಾಚಕ್ರವರ್ತಿಯ ಕರದಿಂದ ಹರಿದು ಬರುವ ಪ್ರೀತಿ~ಶೀತಲ~ಮಾರುತದಲ್ಲಿ ಆ ಮಹಾಮೇರುಶೃಂಗದ ವಿನಮ್ರ~ವಿನಯಾನುಭೂತಿ!

ಚಿಟ್ಟಾಣಿಯವರು ಚಾಮರಸೇವೆ ಮಾಡುವ ನಿರೀಕ್ಷೆಯಲ್ಲಿ ಅಲ್ಲಿ ಯಾರೂ ಇರಲಿಲ್ಲ. ಅದರಿಂದ ಭೌತಿಕವಾಗಿ ಅವರು ಪಡೆದುಕೊಳ್ಳುವಂತಹುದೂ ಏನೂ ಇರಲಿಲ್ಲ. ಅದು ಅವರ ಸಹಜ ಸೇವಾಭಾವದ ಸಹಜಾತಿಸಹಜವಾದ ಅಭಿವ್ಯಕ್ತಿಯಾಗಿತ್ತು.

ಕ್ಷುಲ್ಲಕ ಲಾಭಕ್ಕಾಗಿಯಲ್ಲ; ಆ ಸೇವೆಯು ಆತ್ಮದ ಭಾವಕ್ಕಾಗಿ!
ಅದು ಸೇವೆಯ ನಟನೆಯಾಗಿರಲಿಲ್ಲ;ನೈಜ ನಟನ ಸಹಜ ಸೇವೆಯಾಗಿತ್ತು!

ರಂಗದ ಮೇಲೆ ಮೆರೆಯುವ ಮಹಾನಾಯಕನ ಅಂತರಂಗದೊಳಗೆ ಹುದುಗಿದ್ದ ವಿನಮ್ರ ಸೇವಕನ ಸಾಕ್ಷಾತ್ಕಾರವದು!

ನಮಗೋ, ಆ ವಯೋವೃದ್ಧ~ಕಲಾವೃದ್ಧ~ಪಕ್ವ ಜೀವವು ಗಾಳಿ ಬೀಸತೊಡಗಿದರೆ ಅದು ಮುಜುಗರವೇ. ಆದರೆ ಮೂರು ತಿಂಗಳ ಮಗುವನ್ನು ನೆನಪಿಸುವ ಆ ಮುಗ್ಧತೆ, ಸ್ವಾರ್ಥದ ಸುಳಿವೇ ಇಲ್ಲದ ಆ ಪರಿಶುದ್ಧ ಪ್ರೀತಿಗಳಿಗೆ ಸೋತ ಹೃದಯವು ಮುಜುಗರವನ್ನು ಮರೆತು, ಚಿಟ್ಟಾಣಿಯವರ ಚಾಮರ-ಸಂಭ್ರಮವನ್ನು ಕಂಡು ಸಂತೋಷಿಸುತ್ತಿತ್ತು. ನಮ್ಮ ಮುಜುಗರಕ್ಕಿಂತ ಅವರ ಸಂತೋಷ ದೊಡ್ಡದಲ್ಲವೇ?

ಇದು ಒಂದು ದಿನದ ಪ್ರಸಂಗವಲ್ಲ, ಚಿಟ್ಟಾಣಿಯವರ ಬಹುಜನಪ್ರಿಯವಾದ ಯಕ್ಷಗಾನಪ್ರಸಂಗಗಳಂತೆ ಆಗಾಗ-ಆಗಾಗ, ಅವರು ಬಂದಾಗ-ಬಂದಾಗ ಪುನರಾವರ್ತನೆಯಾಗುತ್ತಿತ್ತು!

ಎತ್ತರವೇರಿದವನು ಹತ್ತಿರವಾಗುವುದೆಂದರೆ ಅದು ಹೀಗೆ! ಬದುಕಿನಲ್ಲಿ ಏರಿದಷ್ಟೂ ಒಳ್ಳೆಯದೇ; ಆದರೆ ನಾವು ಏರುವಾಗ ಗರ್ವದ ಪಿತ್ತ ನಮ್ಮ ನೆತ್ತಿಗೆ ಏರಬಾರದು!

ಸರ್ವವೂ ಇದ್ದರೂ ಗರ್ವವೇ ಇಲ್ಲದ ಚಿಟ್ಟಾಣಿಯೆಂದರೆ ವಿನಮ್ರ-ವಾಮನನನ್ನು ತನ್ನೊಳಗೆ ಹುದುಗಿಸಿಕೊಂಡ ಕಲಾತ್ರಿವಿಕ್ರಮ!

ಅದಲ್ಲದಿದ್ದರೆ ‘ಇಂದಿನ ಯಕ್ಷಗಾನ ಕಲಾವಿದರೆಲ್ಲರೂ ಕಂಡಕೂಡಲೇ ಎದ್ದು ನಿಂತುಕೊಳ್ಳುವ’ ಗರಿಮೆಯ ಚಿಟ್ಟಾಣಿ, ಬದುಕಿನ ಕೊನೆಯವರೆಗೂ, ಚೌಕಿಯಲ್ಲಿ ಗಣಪತಿ ಪೂಜೆ ನಡೆಯುವಾಗ, ನಿಂತು ಜಾಗಟೆ ಬಾರಿಸಲುಂಟೇ!?

ಅದಲ್ಲದಿದ್ದರೆ, ಭೀಕರ ಬರಗಾಲದಿಂದ ಸಾಮೂಹಿಕವಾಗಿ ಸಾವಿಗೀಡಾಗುತ್ತಿದ್ದ, ಮಲೆಮಹದೇಶ್ವರ ಬೆಟ್ಟದ ಎಪ್ಪತ್ತು ಸಹಸ್ರ ಗೋವುಗಳಿಗೆ ಮೇವು ನೀಡಿ, ಸಾವು ತಪ್ಪಿಸಲು ಮಠವು ಗೋಪ್ರಾಣಭಿಕ್ಷಾ ಅಭಿಯಾನವನ್ನು ನಡೆಸುತ್ತಿದ್ದಾಗ, ಚಿಟ್ಟಾಣಿಯವರು ಸ್ವತಃ ಭಿಕ್ಷಾಪಾತ್ರೆ ಹಿಡಿದು, ಹೊನ್ನಾವರದ ಬೀದಿಗಳಲ್ಲಿ ಗುರುವಿಗಾಗಿ, ಗೋವುಗಳಿಗಾಗಿ, ಭಿಕ್ಷಾಟನೆಗೈಯುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ!?

ನಮಗಂತೂ ‘ಬ್ರಹ್ಮಕಪಾಲ’ ಪ್ರಸಂಗದಲ್ಲಿ ‘ಶಿವನು ಭಿಕ್ಷೆಗೆ ಬಂದ’ ಪದ್ಯಕ್ಕೆ ಶಿವನಾಗಿ ಭಿಕ್ಷಾಟನೆಗೈವ ಚಿಟ್ಟಾಣಿಯವರ ನೆನಪಾಯಿತು!

ಜೀವದ ನೋವಿಗೆ ಸ್ಪಂದಿಸದವನು ಮನುಷ್ಯನೇ ಆಗಲಾರ; ಇನ್ನು ಕಲಾವಿದನಾಗುವುದು ಬಲು ದೂರದ ಮಾತು!#LokaLekha blog by SriSri *RaghaveshwaraBharati Mahaswamiji* , via:HareRaama.in

ಕಲಾಧರನೇ ಕಲಾವಿದ!:
ಕಲೆಯೆಂದರೆ ಜೀವದ ನೋವಿನ ಪರಿಹಾರ; ನಲಿವಿನ ಸಾಕ್ಷಾತ್ಕಾರ. ಬದುಕಿನ ಬವಣೆಯಲ್ಲಿ ಬೇಯುವ-ನೋಯುವ ಜೀವಗಳು, ಒಂದಿಷ್ಟು ಹೊತ್ತಾದರೂ ನೋವ ಮರೆತು, ಕಲೆಯ ಕಲ್ಪವೃಕ್ಷದ ನೆರಳಲ್ಲಿ ತಂಪು ಕಾಣುವವಲ್ಲವೇ! ಭವನಾದರೂ ಭವದ ಬವಣೆಯನ್ನು ನೀಗಲೆಂದೇ, ಅನುಭವದ ಆನಂದವನ್ನು ನೀಡಲೆಂದೇ ಅಲ್ಲವೇ ಜೀವಕ್ಕೆ ಬೇಕಾಗುವುದು?

ಆದುರಿಂದ ಕಲಾವಿದನು ಪಾತ್ರದಲ್ಲಿ ಮಾತ್ರವಲ್ಲ, ನಿಜವಾಗಿಯೂ ಶಿವಸ್ವರೂಪ!

ನಟನೆಂಬ ನಿತ್ಯಯೋಗಿ!:
ಕಲೆಯು ಯೋಗವಾದರೆ ಕಲಾವಿದನು ಯೋಗಿ. ಯೋಗದ ಮಹಾಸಿದ್ಧಿಗಳಲ್ಲಿ ಪರಕಾಯಪ್ರವೇಶವೂ ಒಂದು. ಯೋಗಿಗೆ ಪರಕಾಯಪ್ರವೇಶವು ಸಾಧನೆಯಾದರೆ ಕಲಾವಿದನಿಗದು ಸಹಜತೆ! ತನ್ನತನವನ್ನು ತ್ಯಜಿಸಿ, ತಾನಲ್ಲದ ವ್ಯಕ್ತಿತ್ವವನ್ನು ಪ್ರವೇಶಿಸಿ, ಅದರೊಳಗಿನ ಭಾವಗಳನ್ನು ಅನುಭವಿಸುವ, ಅಭಿನಯಿಸುವ ಕಲಾವಿದನು ಯಾವ ಯೋಗಿಗೆ ಕಡಿಮೆ!?

ಯಾವ ಗುರುವಿಗೇನು ಕಡಿಮೆ ಕಲಾಸಾಧಕ?:
ಕಾಣದ ದೇವರನ್ನು ಅಂತರಂಗದಲ್ಲಿ ಕಾಣಿಸುವವನು ಗುರು; ರಂಗದಲ್ಲಿ ಕಾಣಿಸುವವನು ಕಲಾವಿದ! ಕಾಲಗರ್ಭದಲ್ಲಿಯೋ, ಪ್ರಕೃತಿಗರ್ಭದಲ್ಲಿಯೋ ಮರೆಯಾಗಿರುವ ರಾಮ~ಕೃಷ್ಣ~ದುರ್ಗೆ~ಶಿವರನ್ನು ರಂಗದಲ್ಲಿ ತೋರಿಸುವ, ಅಂತರಂಗದಲ್ಲಿ ಮೂಡಿಸುವ ಕಲಾವಿದನೂ ಗುರುವೇ ಅಲ್ಲವೇ?

ಸಂತೋಷ+ಸಂದೇಶ=ಕಲೆ:
ಗುರುವು ಬದುಕಿಗೆ ಬೇಕಾದ ಸಂದೇಶವನ್ನು ನೀಡುತ್ತಾನೆ. ಅದನ್ನು ಸ್ವೀಕರಿಸಲೂ ಯೋಗ್ಯತೆ ಬೇಕು. ಎಲ್ಲರಿಗೂ ಅದು ರುಚಿಸದು; ಆದುದರಿಂದಲೇ ಎಲ್ಲರಿಗೂ ಅದು ಲಭ್ಯವಾಗದು! ಆದರೆ ಕಲಾವಿದ ಅದೇ ಸಂದೇಶವನ್ನು ಎಲ್ಲರೂ ಬಯಸುವ ಸಂತೋಷದಲ್ಲಿ ಬೆರೆಸಿ ನೀಡುತ್ತಾನೆ! ಗುರುವು ತಲುಪಲಾರದ ವರ್ಗವನ್ನು ಕಲೆಯ ಮೂಲಕ ತಲುಪಿ, ವೇದಶಾಸ್ತ್ರಗಳ ಸಾರವನ್ನು ಸರಳಗೊಳಿಸಿ, ಸಕ್ಕರೆ ಲೇಪಿಸಿ, ಸರ್ವರಿಗೂ ಉಣಬಡಿಸುತ್ತಾನೆ.#LokaLekha blog by SriSri *RaghaveshwaraBharati Mahaswamiji* , via:HareRaama.in

ನಿಜವಾದ ಕಲಾವಿದನದು ನಿಜವಾದ ಗುರುತ್ವ! 

ಸಮಾಜವು ಇದನ್ನರಿತಾಗ ಕಲಾವಿದನನ್ನು ಎತ್ತರದಲ್ಲಿ ನೋಡುತ್ತದೆ. ಕಲಾವಿದನು ಇದನ್ನರಿತುಕೊಂಡರೆ ಅವನ ಕಲೆಯೂ ಎತ್ತರವಾಗುತ್ತದೆ; ಬದುಕೂ ಎತ್ತರವಾಗುತ್ತದೆ.

ರಂಗದ ಮೇಲೆ ಖಳ; ಅಂತರಂಗದಲ್ಲಿ ಮಗು!:
ಚಿಟ್ಟಾಣಿಯವರು ಇನ್ನಿಲ್ಲದಂತೆ ಮೆರೆದಿದ್ದು ಖಳ ಪಾತ್ರಗಳಲ್ಲಿಯೇ. ಆದರೆ ಅವರ ನಿಜಜೀವನದಲ್ಲಿ ಖಳತ್ವದ ಸುಳಿವಿಲ್ಲ!
ರಂಗದ ಮೇಲೆ ಕೀಚಕನಾಗಿ, ಭಸ್ಮಾಸುರನಾಗಿ, ದುಷ್ಟಬುದ್ಧಿಯಾಗಿ ಅತ್ಯದ್ಭುತವಾಗಿ ಮೆರೆಯುವ ಚಿಟ್ಟಾಣಿಯವರ ನೈಜ ಬದುಕಿನಲ್ಲಿ ದುಷ್ಟಬುದ್ಧಿಯ ಕುರುಹೇ ಇಲ್ಲ! ಯಾರ ಏಳ್ಗೆಗೂ ಕಲ್ಲು ಹಾಕದ, ಯಾರೊಡನೆಯೂ ಕಲಹಕ್ಕಿಳಿಯದ, ಯಾರಿಗೂ ಕೇಡೆಣಿಸದ, ಮುಗ್ಧ ಮನದ ಶುದ್ಧ ಮಾನವ ಚಿಟ್ಟಾಣಿ.

ಕೇಡುಬುದ್ಧಿಯ ತೊಡೆಯಲೆಂದೇ-ತಡೆಯಲೆಂದೇ ಕಲೆ-ಕ್ರೀಡೆಗಳು!:
ಹಾಗೆ ನೋಡಿದರೆ ಮಾನವನೊಳಗೆ ಅವನಿಗೇ ಗೊತ್ತಿಲ್ಲದಂತೆ ಹುದುಗಿರುವ ದೌಷ್ಟ್ಯ-ಕ್ರೌರ್ಯಗಳನ್ನು ಲಕ್ಷ್ಯವಾಗಿರಿಸಿಕೊಂಡೇ ಪುರಾತನರು ಕಲೆ-ಕ್ರೀಡೆಗಳನ್ನು ಬದುಕಿನಲ್ಲಿ ಅಳವಡಿಸಿದರು. ಕ್ರೀಡೆಗಳೆಂದರೆ ಯುದ್ಧದ ಸೌಮ್ಯರೂಪ. ಪರಸ್ಪರ ಶತ್ರುಭಾವ, ಕೆಚ್ಚು, ಹೋರಾಟ, ಸೋಲು-ಗೆಲುವುಗಳು ಯುದ್ಧದಲ್ಲಿ ಹೇಗಿವೆಯೋ ಹಾಗೆಯೇ ಕ್ರೀಡೆಗಳಲ್ಲಿಯೂ ಇವೆ! ಯುದ್ಧದಲ್ಲಿರುವ ಅಂಗಾಂಗಭಂಗ-ಪ್ರಾಣಹಾನಿಗಳು ಅಲ್ಲಿರುವ ಪ್ರಮಾಣದಲ್ಲಿ ಕ್ರೀಡೆಗಳಲ್ಲಿಲ್ಲ; ಮತ್ತೆಲ್ಲ ದೃಷ್ಟಿಯಿಂದ ಕ್ರೀಡೆಯೆಂದರದು ಲಘುಯುದ್ಧವೇ!

‘ಮಾನವನ ಮನದೊಳಗೆ ಗುಪ್ತವಾಗಿರುವ ಕ್ರೌರ್ಯ-ಕಲಹಗಳು ಈ ಆಟಗಳನ್ನು ಆಡಿ, ನೋಡಿ, ಅಲ್ಲಿಯೇ ವಿನಿಯೋಗವಾಗಲಿ; ಜೀವನಕ್ಕೆ ಬಾರದಿರಲಿ’ ಎಂಬ ಪುರಾತನರ ಭಾವನೆ-ಯೋಜನೆಗಳು ಅದೆಷ್ಟು ಅರ್ಥಪೂರ್ಣ!

ಕಲೆಯಲ್ಲಿ ಖಳಪಾತ್ರಗಳ ಔಚಿತ್ಯದ ರಹಸ್ಯವೂ ಇಲ್ಲಿಯೇ ಅಡಗಿದೆ. ಬಿಲದೊಳಗಿನ ವಿಷಸರ್ಪದಂತೆ ನಮ್ಮೊಳಗೆ ಗುಪ್ತವಾಗಿ, ಸುಪ್ತವಾಗಿರುವ ದೌಷ್ಟ್ಯ-ಕ್ರೌರ್ಯಗಳನ್ನು, ಕಲಾವಿದನಾಗಿ ಖಳಪಾತ್ರಗಳನ್ನು ಅಭಿನಯಿಸಿ, ಪ್ರೇಕ್ಷಕನಾಗಿ ಖಳಪಾತ್ರಗಳನ್ನು ವೀಕ್ಷಿಸಿ ಕಳೆದುಕೊಂಡರೆ ನಿಜ ಜೀವನವು ಆ ಕೇಡುಗಳಿಂದ ಮುಕ್ತವಾಗಿ, ಸಾತ್ತ್ವಿಕವಾಗಿರಲು ಸಾಧ್ಯ!

ಕಲಾಕುಬೇರನ ಋಣದಲ್ಲಿ ಅದೆಷ್ಟೋ ಕಲಾವಿದರು!:
ನೋಟು-ನಾಣ್ಯಗಳಲ್ಲಿಯಲ್ಲದಿದ್ದರೂ ಕಲೆಯಲ್ಲಿ ಚಿಟ್ಟಾಣಿ ಕುಬೇರನೇ! ಒಂದೊಂದು ಭಾವವನ್ನು ಎಷ್ಟೆಷ್ಟೋ ಬಗೆಯಲ್ಲಿ ಅಭಿವ್ಯಕ್ತಿಗೊಳಿಸಬಲ್ಲ ಅಭಿನಯ-ನರ್ತನಗಳ ಅಕ್ಷಯಭಂಡಾರವೇ ಅವರಲ್ಲಿದ್ದಿತು! ಅದನ್ನು ಹೀಗೆ ಬಣ್ಣಿಸಬಹುದು:

ಚಿಟ್ಟಾಣಿಯು ತನಗೆ ಮಿಕ್ಕಿ, ಬಿಕ್ಕಿದ್ದನ್ನು ಹೆಕ್ಕಿದರೆ, ಹೆಕ್ಕಿದವನ ಬೊಕ್ಕಸ ತುಂಬೀತು!

ಹೀಗೆ ಚಿಟ್ಟಾಣಿಯ ಭಿಕ್ಷೆಯಿಂದ ಬೊಕ್ಕಸ ತುಂಬಿಕೊಂಡ ಕಲಾವಿದರ ಬಹುದೊಡ್ಡ ದಂಡೇ ಇಂದು ಯಕ್ಷಗಾನಲೋಕದಲ್ಲಿದೆ!#LokaLekha blog by SriSri *RaghaveshwaraBharati Mahaswamiji* , via:HareRaama.in

ಇಲ್ಲ ಒಂದಿನಿತೂ ಕಲಾಕಾರ್ಪಣ್ಯ! :
ಚಿಟ್ಟಾಣಿಯವರ ಇನ್ನೊಂದು ಸುಗುಣವನ್ನು ಎತ್ತಿಯಾಡದೇ ಮಾತು ಮುಗಿಸಲು ಸಾಧ್ಯವಾಗದು. ಅವರ ಕಲೆಯಲ್ಲಿ ವಂಚನೆಯಿರಲಿಲ್ಲ. ಪ್ರೇಕ್ಷಕರ ಸಂಖ್ಯೆ ಮತ್ತು ಮಟ್ಟವನ್ನು ಅಂದಾಜಿಸಿ, ‘ಇವರಿಗೆ ಇಷ್ಟು ಸಾಕು’ ಎಂಬ ಭಾವದಲ್ಲಿ ಅರೆ-ಕೊರೆ ಕಲೆ ತೋರುವ ಕಲಾವಿದರಿಗೆ ನಮ್ಮಲ್ಲಿ ಏನೂ ಕೊರತೆಯಿಲ್ಲ. ಚಿಟ್ಟಾಣಿ ಹಾಗಲ್ಲ; ಬಣ್ಣ ಹಚ್ಚಿ ರಂಗಕ್ಕೆ ಬಂದರೆ ಸಮ್ಮುಖದಲ್ಲಿ ಮೂರು-ಮತ್ತೊಂದು ಪ್ರೇಕ್ಷಕರಿರಲಿ, ಚಿಕ್ಕ ಮಕ್ಕಳೇ ಇರಲಿ, ತನ್ನಲ್ಲಿರುವುದನ್ನೆಲ್ಲ ಸುರಿದು ಹೋಗದಿದ್ದರೆ ಅದು ಚಿಟ್ಟಾಣಿಯಲ್ಲ!

ಏನೇನೂ ಹಿಡಿದಿಟ್ಟುಕೊಳ್ಳದೇ, ಇದ್ದಷ್ಟೂ ಹಾಲು ಸುರಿಸಿಬಿಡುವ ಮುಗ್ಧ ಗೋವಿನ ಭಾವಕ್ಕೆ ಸಮಾನ ಚಿಟ್ಟಾಣಿಯವರ ಸ್ವಭಾವ.

ಅನಂತವಾಗಲಿ ಅಗ್ನಿಪರ್ವ!:

ತನ್ನ ಅಸ್ತಮಾನ ತರುವ ಕತ್ತಲನ್ನು, ಬಳಿಕ ಉದಯಿಸುವ ಚಂದ್ರನು ಕಳೆಯುವನೆಂಬ ಸಮಾಧಾನದಲ್ಲಿ ಅಸ್ತಮಿಸುವ ಸೂರ್ಯನಂತೆ, ಬದುಕೆಂಬ ರಂಗಸ್ಥಳವನ್ನು ತೊರೆದು, ಮರಣವೆಂಬ ಚೌಕಿಯನ್ನು ಸೇರಹೊರಟ ಚಿಟ್ಟಾಣಿಯವರಿಗೆ, ಕೊನೆಯ ಆ ದಿನಗಳಲ್ಲಿ, ತಾನು ತೆರವುಗೊಳಿಸುವ ಸ್ಥಾನವನ್ನು ತನ್ನ ಮೊಮ್ಮಗ ಕಾರ್ತಿಕ ತುಂಬುವನೆಂಬ ಸಮಾಧಾನವಿದ್ದಿತು. ಅಗ್ನಿನಕ್ಷತ್ರವಾದ ಕೃತ್ತಿಕೆಯಲ್ಲಿ ಜನಿಸಿ, ಅಗ್ನಿಯ ಪಾತ್ರದಲ್ಲಿಯೇ ಕಲಾಲೋಕವನ್ನು ಪ್ರವೇಶಿಸಿ, ಏಳು ದಶಕಗಳ ಕಾಲ ಅಗ್ನಿಗೋಳದಂತೆ ಯಕ್ಷಗಾನರಂಗವ ಬೆಳಗಿದ ಚಿಟ್ಟಾಣಿಯವರು ಈ ಲೋಕವನ್ನು ತ್ಯಜಿಸಿ, ಆ ಲೋಕಕ್ಕೆ ಪ್ರಸ್ಥಾನಗೈದಿದ್ದೂ ಅಗ್ನಿಗ್ರಹವಾದ ಮಂಗಳನ ವಾರದಂದೇ!
ಚಿಟ್ಟಾಣಿಯವರು ಕೃತ್ತಿಕಾಸಂಜಾತ; ಕಾರ್ತಿಕನೆಂದರೂ ಅರ್ಥವು ಕೃತ್ತಿಕಾಸಂಜಾತನೆಂದೇ! ಅದೆರಡೂ ಒಂದೇ!! ಅದು ಇಡಿ; ಇದು ಕಿಡಿ!

ಈ ಕಿಡಿಯು ಇಡಿಯಾಗಿ ಬೆಳೆಯಲಿ; ಮಹಾಚಿಟ್ಟಾಣಿಯು ಪ್ರಾರಂಭಿಸಿದ ಅಗ್ನಿಪರ್ವವು ಮರಿಚಿಟ್ಟಾಣಿಯ ರೂಪದಲ್ಲಿ ಮರುಹುಟ್ಟು ಪಡೆದು, ಚಿರಕಾಲ ಯಕ್ಷಗಾನರಂಗವನ್ನೂ, ಪುಣ್ಯದ ಕಣ್ಣಿನವರ ಅಂತರಂಗವನ್ನೂ ಬೆಳಗುತ್ತಿರಲಿ.

~*~*~

 

ಇದು ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ. ಯಕ್ಷಗಾನದ ಮೇರು ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸುದೀರ್ಘ ಕಲಾಬದುಕಿಗೆ ಮಂಗಳಹಾಡಿ ಅಮರರಾದ ಸಂದರ್ಭದಲ್ಲಿ ಈ ಲೇಖನಾಮೃತ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments