ಪ್ರಿಯರಾದವರ ಕುರಿತು ಅಪ್ರಿಯವಾದ ಮಾತುಗಳನ್ನು ಕೇಳಿದಾಗ ನೋವಾಗುತ್ತದೆ; ಅಪ್ರಿಯವಾದರೂ ಅದು ಸತ್ಯವಾದರೆ – ಪಥ್ಯವಾದರೆ ಹೇಗೋ ಸಹಿಸಬಹುದು; ಆದರೆ ಮಿಥ್ಯೆಯನ್ನು ಸಹಿಸಲಾಗದು! ಭಾರತಕ್ಕೆ ಭಾರತವೇ ಪ್ರೀತಿಸುವ – ಪೂಜಿಸುವ ವ್ಯಕ್ತಿತ್ವವೆಂದರೆ ಅದು ರಾಮ. ಭಕ್ತಿಯಿಂದ ಭಾವಿಸುವವರಿಗೆ ಅವನು ದೇವೋತ್ತಮ; ಭಾವದಿಂದ ಜೀವಿಸುವವರಿಗೆ ಅವನು ಮಾನವೋತ್ತಮ- ಮರ್ಯಾದಾ~ಪುರುಷೋತ್ತಮ! ಅವನ ಕುರಿತು ಬುದ್ಧಿಜೀವಿಗಳೆಂಬ ಹಣೆಪಟ್ಟಿಯ ಕೆಲವರು ಇತ್ತೀಚೆಗೆ ಇಲ್ಲದ ಮತ್ತು ಸಲ್ಲದ ಕೆಲವು ಅಪಶಬ್ದಗಳನ್ನಾಡುವಾಗ ಹೃದಯ ನೊಂದಿತು.

ಸತ್ಪುರುಷರ ನಿಂದೆ ನಡೆಯುವಾಗ, ಸತ್ಯಕ್ಕೆ ಅಪಚಾರವಾಗುತ್ತಿರುವಾಗ ತಿಳಿದೂ ಮೌನಧಾರಣೆ ಮಾಡುವುದು ಮಹಾಪಾತಕವೇ ಆಗಿದೆ! ಹಾಗೆ ಮಾಡುವವನು ಇದ್ದೂ ಇರದಂತೆ; ಆದುದರಿಂದ ರಾಮನ ಮೇಲಿನ ಈ ಮಿಥ್ಯಾಪವಾದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡುವೆವು.

ಇಷ್ಟಕ್ಕೂ ಬುದ್ಧಿಜೀವಿಗಳೆಂಬ ಬುದ್ಧಿಜೀವಿಗಳು ಹೇಳಿದ್ದೇನು?
ಪುನರುಚ್ಚಾರಕ್ಕೂ ಯೋಗ್ಯವಲ್ಲದ ಮಾತುಗಳವು. ವಿಷಯನಿರೂಪಣೆಯ ನೇರದಲ್ಲಿ ಗತ್ಯಂತರವಿಲ್ಲದೆ ಅವರ ಮಾತೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇವೆ:  “ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ.”

ಈ ಮಾತುಗಳನ್ನು ಕೇಳಿದಾಗ ಕಿವಿಗೆ ಕಾದ ಸೀಸವನ್ನು ಹೊಯ್ದಂತಾಗದೇ!?
ಸಕಲರಿಗೂ ಶುಭಗೈದ ಅಕಲಂಕಚರಿತರಿಗೆ ಮಿಥ್ಯಾಕಲಂಕ ಹಚ್ಚಿ- ಅವರ ಹೆಸರಿಗೆ ಕೆಸರೆರಚಿ, ತಾವು ಹೆಸರುಗಳಿಸಲೆಳಸುವುದು ಯಾರಿಗೂ ತರವಲ್ಲ; ಯತಿವೇಷದಲ್ಲಿರುವವರಿಗೆ ಅಲ್ಲವೇ ಅಲ್ಲ!

ಒಂದು ದಿನವೂ ಬಿಡದೆ ವಾಲ್ಮೀಕಿ ರಾಮಾಯಣವನ್ನು ಅವಲೋಕಿಸುವವರು ನಾವು ;  ‘ಅಲ್ಲಿ ಏನಿದೆ / ಏನಿಲ್ಲ’ ಎಂಬುದರ ಸ್ಪಷ್ಟ ತಿಳಿವಳಿಕೆಯನ್ನಾಧರಿಸಿ ಮೂರೇ ಮೂರು ಮಾತುಗಳಲ್ಲಿ ಮರ್ಯಾದಾಪುರುಷೋತ್ತಮನ ಕುರಿತಾದ ದುಷ್ಪ್ರಚಾರವನ್ನು ನಿರಾಕರಿಸುವೆವು:

ಒಂದನೆಯ ಮಾತು: ವಾಲ್ಮೀಕಿ ರಾಮಾಯಣದ ಏಳು ಕಾಂಡಗಳ, 500 ಅಧ್ಯಾಯಗಳ, 24 ಸಾವಿರ ಮೀರಿದ ಶ್ಲೋಕಗಳಲ್ಲಿ ಎಲ್ಲಿಯೂ “ರಾಮ-ಸೀತೆಯರು ಗೋಮಾಂಸ ಸೇವಿಸುತ್ತಿದ್ದರು” ಎಂಬ ಉಲ್ಲೇಖವಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನ ಆಹಾರದ ಕುರಿತಾದ ವರ್ಣನೆಗಳು ಹಲವಿವೆ; ಅಲ್ಲೆಲ್ಲಿಯೂ ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಗೋಮಾಂಸದ ಉಲ್ಲೇಖ ಇಲ್ಲವೇ ಇಲ್ಲ! ಗೋವನ್ನು ಕೊಲ್ಲುವ/ತಿನ್ನುವ ಮಾತು ಹಾಗಿರಲಿ, ಆ ಕಾಲದಲ್ಲಿ ಗೋವಿನ ವಿಷಯದಲ್ಲಿ ಮಾಡುವ ಸಣ್ಣ ತಪ್ಪೂ ಮಹಾಪಾಪವೆಂದು ಪರಿಗಣಿಸಲ್ಪಡುತ್ತಿತ್ತು ಎಂಬುದಕ್ಕೆ ರಾಮಾಯಣದಲ್ಲಿ ಪ್ರತ್ಯಕ್ಷ ಉಲ್ಲೇಖಗಳಿವೆ.

ರಾಮಾಯಣದ ಒಂದು ಸಂದರ್ಭ: ಕೌಸಲ್ಯೆಯು “ರಾಮನ ವನಗಮನದ ಸಂಚಿನಲ್ಲಿ ನೀನೂ ಭಾಗಿ!” ಎಂಬಂತೆ ಭರತನನ್ನು ಶಂಕಿಸುತ್ತಾಳೆ. ವ್ಯಥೆಗೊಂಡ ಭರತನು ‘ತಾನು ಅಂಥವನಲ್ಲ’ ಎಂದು ಸಿದ್ಧಪಡಿಸಲು ಘೋರ ಶಪಥಗಳನ್ನು ಗೈಯುತ್ತಾನೆ. ಮಹಾಪಾಪಗಳನ್ನು ಒಂದೊಂದಾಗಿ ಹೆಸರಿಸಿ ‘ಒಂದು ವೇಳೆ ರಾಮನ ವನಗಮನವು ತನಗೆ ಸಹಮತವಾದರೆ ಆ ಮಹಾಪಾಪಗಳು ತನಗೆ ಬರಲಿ’ ಎಂದು ಉದ್ಘೋಷಿಸುವುದು ಶಪಥದ ಸ್ವರೂಪ. ಅತ್ಯಂತ ಹೇಯವಾದ ಮಹಾಪಾಪಗಳ ಪಟ್ಟಿಯಲ್ಲಿ ಕೆಳಕಾಣುವ ಮೂರು ಪಾಪಗಳು ಗೋವಿನ ಕುರಿತಾಗಿವೆ:

 • ಗಾಶ್ಚ ಸ್ಪೃಶತು ಪಾದೇನ” – ಗೋವುಗಳಿಗೆ ಕಾಲು ತಗುಲಿಸಿದರೆ ಬರುವ ಪಾಪವು ನನಗೆ ಬರಲಿ.
  – ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 31
 • “ಹನ್ತು ಪಾದೇನ ಗಾಂ ಸುಪ್ತಾಂ” – ಮಲಗಿರುವ ಗೋವನ್ನು ಕಾಲಿನಿಂದ ಒದ್ದರೆ ಬರುವ ಪಾಪವು ನನಗೆ ಬರಲಿ.
  – ವಾಲ್ಮೀಕಿರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 22
 • “ಬಾಲವತ್ಸಾಂಚ ಗಾಂ ದೋಗ್ಧು” – ಎಳೆಗರುವಿರುವ ಹಸುವಿನ ಹಾಲು ಕರೆದವನಿಗೆ ಬರುವ ಪಾಪವು ನನಗೆ ಬರಲಿ.
  – ವಾಲ್ಮೀಕಿರಾಮಾಯಣ, ಅಯೋಧ್ಯಾಕಾಂಡ, ಸರ್ಗ 75 ಶ್ಲೋಕ 56

ಶಪಥಗಳ ಕೊನೆಯಲ್ಲಿ ಕೌಸಲ್ಯೆಯು ಕರಗುತ್ತಾಳೆ; ಭರತ ನಿಷ್ಕಲಂಕನೆಂದು ಹೃದಯಾಂತರಾಳದಿಂದ ಸ್ವೀಕರಿಸುತ್ತಾಳೆ.

ಗಮನಿಸಿ, ಅಂದಿನ ಕಾಲದಲ್ಲಿ ಗೋವಿಗೆ ಕಾಲು ತಗುಲಿಸಿದರೂ ಮಹಾಪಾಪವೆಂದು ಪರಿಗಣಿಸಲಾಗಿತ್ತು. ಎಳೆಗರುವಿನ ಪಾಲಿನ ಹಾಲನ್ನು ಕರೆದು ಕುಡಿಯುವುದೂ ಪಾತಕವೆನಿಸಿತ್ತು! ತಥಾಕಥಿತ ಬುದ್ಧಿಜೀವಿಗಳೇ, ಈ ಎತ್ತರದ ನ್ಯಾಯಪ್ರಜ್ಞೆ ಮತ್ತು ಈ ಮಟ್ಟದ ಪ್ರಾಣಿದಯೆ ನಿಮ್ಮಲ್ಲಿದೆಯೇ? ಆತ್ಮಾವಲೋಕನ ಮಾಡಿಕೊಳ್ಳಿ.

ಇದು ರಾಮನ ತಮ್ಮ ಮತ್ತು ರಾಮನ ತಾಯಿಯ ನಡುವೆ ನಡೆದ ಸಂವಾದ; ಆ ಕಾಲದ, ಆ ದೇಶದ, ಆ ಕುಟುಂಬದ ನಿಲುವನ್ನು -ಗೋವಿನ ಕುರಿತಾದ ನಿಲುವನ್ನು- ಈ ಸಂದರ್ಭವು ಸಂದೇಹಕ್ಕೆ ಎಡೆಯೇ ಇಲ್ಲದಂತೆ ನಿರೂಪಿಸುತ್ತದೆ. ಹೀಗಿರುವಾಗ ರಾಮ-ಸೀತೆಯರು ಗೋಮಾಂಸವನ್ನು ಸೇವಿಸುವ ಕಲ್ಪನೆಯನ್ನಾದರೂ ಹೇಗೆ ಮಾಡಲು ಸಾಧ್ಯ!? ಹೇಳಿ ಕೇಳಿ ಯಾವುದೇ ವೈಯಕ್ತಿಕ/ಸಾಮಾಜಿಕ ನಿಯಮಗಳನ್ನು ಯಾವ ಕಾರಣಕ್ಕೂ ಮುರಿಯುವವನಲ್ಲ ರಾಮಚಂದ್ರ; ಆ ಪಾತ್ರದ ರಚನೆಯೇ ಹಾಗೆ! ಆದುದರಿಂದಲೇ ತಾನೇ ಅವನು ಮರ್ಯಾದಾ~ಪುರುಷೋತ್ತಮನೆನಿಸಿಕೊಂಡಿರುವುದು!?

ನೀವು ಹೀಗೆ ನಿರಾಧಾರವಾಗಿ ರಾಮನಲ್ಲಿ ಗೋಮಾಂಸ-ಭಕ್ಷಕತ್ವವನ್ನು ಆರೋಪಿಸುವುದಾದರೆ ನಾಳೆ ನಿಮ್ಮನ್ನು ಯಾರಾದರೂ ನರಮಾಂಸ-ಭಕ್ಷಕರೆಂದು ನಿರಾಧಾರವಾಗಿ ಆರೋಪಿಸಿದರೆ ಸುಮ್ಮನಿರಬೇಕಾದೀತು!

ಹೇಗಿದ್ದರೂ ಆರೋಪಕ್ಕೆ ಆಧಾರ ಬೇಡವಲ್ಲವೇ?

ಎರಡನೆಯ ಮಾತು: ರಾಮನ ಮಾತು ಹಾಗಿರಲಿ, ರಾಮಾಯಣದ ಪ್ರಕಾರ ರಾವಣನೂ ಗೋಮಾಂಸ ಸೇವಿಸುತ್ತಿರಲಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ಇದೋ ಇಲ್ಲಿದೆ ಆಧಾರ:

ಸಂದರ್ಭ: ಲಂಕೆಯಲ್ಲಿ ಸೀತೆಯನ್ನು ಅರಸುತ್ತಾ ಆಂಜನೇಯನು ರಾವಣನ ಪಾನಭೂಮಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಕುಡಿದುಳಿದ ಪೇಯಗಳು, ತಿಂದುಳಿದ ಮಾಂಸಗಳು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಗೋಚರಿಸುತ್ತವೆ; ವಾಲ್ಮೀಕಿಗಳು ಅಲ್ಲಿ ಕಂಡುಬರುವ ಅರ್ಧಭಕ್ಷಿತವಾದ ಮಾಂಸಗಳ ಉದ್ದವಾದ ಪಟ್ಟಿಯನ್ನೇ ನೀಡುತ್ತಾರೆ:

ವಾಲ್ಮೀಕಿರಾಮಾಯಣ ಸುಂದರಕಾಂಡ ಸರ್ಗ 11:

 • ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಭಾಗಶಃ |
  ತತ್ರ ನ್ಯಸ್ತಾನಿ ಮಾಂಸಾನಿ ಪಾನಭೂಮೌ ದದರ್ಶ ಸಃ ||೧೩||
  ಕತ್ತರಿಸಿ ಇಡಲ್ಪಟ್ಟ ಜಿಂಕೆ,ಕೋಣ,ಹಂದಿಗಳ ಮಾಂಸಗಳನ್ನು ಹನುಮನು ರಾವಣನ ಪಾನಭೂಮಿಯಲ್ಲಿ ಕಂಡನು.
 • ರೌಕ್ಮೇಷು ಚ ವಿಶಾಲೇಷು ಭಾಜನೇಷ್ವರ್ಧಭಕ್ಷಿತಾನ್ |
  ದದರ್ಶ ಕಪಿಶಾರ್ದೂಲೋ ಮಯೂರಾನ್ ಕುಕ್ಕುಟಾಂಸ್ತಥಾ ||೧೪||
  ಸ್ವರ್ಣ ಭಾಜನಗಳಲ್ಲಿ ಅರ್ಧ ತಿಂದುಳಿದ, ನವಿಲು ಮತ್ತು ಕೋಳಿಗಳ ಮಾಂಸಗಳನ್ನು ಅಲ್ಲಿ ಕಪಿವರನು ಕಂಡನು.
 • ವರಾಹವಾಧ್ರೀಣಸಕಾನ್ ದಧ್ರಿಸೌವರ್ಚಲಾಯುತಾನ್ |
  ಶಲ್ಯಾನ್ ಮೃಗಮಯೂರಾಂಶ್ಚ ಹನೂಮಾನನ್ವವೈಕ್ಷತ ||೧೫||
  ಮೊಸರು ಮತ್ತು ಉಪ್ಪುಗಳಿಂದ ಸಂಸ್ಕರಿಸಲ್ಪಟ್ಟ ಹಂದಿ, ಮುಳ್ಳುಹಂದಿ, ಖಡ್ಗಮೃಗ, ಜಿಂಕೆ, ನವಿಲುಗಳ ಮಾಂಸವನ್ನೂ ಹನುಮಂತನು ಅಲ್ಲಿ ಕಂಡನು.
 • ಕ್ರಕರಾನ್ ವಿವಿಧಾನ್ ಸಿದ್ಧಾಂಶ್ಚಕೋರಾನರ್ಧಭಕ್ಷಿತಾನ್ |
  ಮಹಿಷಾನೇಕಶಲ್ಯಾಂಶ್ಚ ಚ್ಛಾಗಾಂಶ್ಚ ಕೃತನಿಷ್ಠಿತಾನ್ ||೧೬||
  ಇನ್ನೊಂದೆಡೆ, ಕತ್ತರಿಸಿ, ಸಂಸ್ಕರಿಸಿದ ಕಾಡುಕೊಕ್ಕರೆ ಮತ್ತು ಚಕೋರಪಕ್ಷಿಗಳ ಮಾಂಸಗಳನ್ನು ಮತ್ತು ಅರ್ಧಭಕ್ಷಿತವಾದ ಎಮ್ಮೆ, ಆಡು, ಮತ್ತು ಮೀನುಗಳ ಮಾಂಸವನ್ನು ಮಾರುತಿಯು ನೋಡಿದನು.

ಇಲ್ಲೆಲ್ಲಿಯೂ ಗೋಮಾಂಸದ ಸುಳಿವಿಲ್ಲ!
ಬೇರೆ ಅನೇಕ ಪ್ರಾಣಿಗಳ ಮಾಂಸಗಳು ಉಲ್ಲೇಖಗೊಂಡಿವೆ; ಆದರೆ ಗೋಮಾಂಸದ ಪ್ರಸ್ತಾಪವೇ ಇಲ್ಲ!

ತದ್ವಿರುದ್ಧವಾಗಿ, ಮುಂದೆ ಒಂದೆಡೆಯಲ್ಲಿ ರಾವಣನು ಗೋವುಗಳನ್ನು ಪ್ರಶಂಸಿಸುವ ಪ್ರಸ್ತಾಪವಿದೆ!
“ವಿದ್ಯತೇ ಗೋಷು ಸಂಪನ್ನಮ್”  – “ಗೋವುಗಳಲ್ಲಿ ಸಂಪತ್ತಿದೆ!”
(ವಾಲ್ಮೀಕಿ ರಾಮಾಯಣ, ಯುದ್ಧಕಾಂಡ, ಸರ್ಗ 16, ಶ್ಲೋಕ 9)

ಇದು ರಾವಣವಾಣಿ!
ಹೇಗಿದ್ದರೂ ಈ ಬುದ್ಧಿಜೀವಿಗಳಿಗೆ ರಾಮನು ಬೇಡ; ಈ ವಿಷಯದಲ್ಲಿ ಅವರುಗಳು ರಾವಣನನ್ನಾದರೂ ಅನುಸರಿಸಿದ್ದರೆ ರಾಷ್ಟ್ರಕ್ಕೆ ಒಳಿತಾಗುತ್ತಿತ್ತು!!

ಮೂರನೆಯ ಮಾತು: ಸಂಪೂರ್ಣ ರಾಮಾಯಣದ ಯಾವುದೇ ಭಾಗದಲ್ಲಿ, ಯಾವುದೇ ಶ್ಲೋಕದಲ್ಲಿ ಯಾರೂ ಗೋಮಾಂಸ ಸೇವಿಸಿದ ಉಲ್ಲೇಖವಿಲ್ಲ!
#LokaLekha by @SriSamsthana SriSri RaghaveshwaraBharati MahaSwamiji
ರಾಮಸೀತೆಯರು ಗೋಮಾಂಸ ಸೇವಿಸಿದರೆಂದು ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿರುವರೆಂದು ಗಳಹುವ ಬುದ್ಧಿಜೀವಿಗಳಿಗೂ ಅವರ ಬಾಲಬಡುಕರಿಗೂ ಇದು ಬಹಿರಂಗ ಸವಾಲ್!!

ರಾಮಾಯಣದಲ್ಲಿ ಎಲ್ಲಿಯಾದರೂ ಒಂದು ಕಡೆ, ಯಾರಾದರೂ ಗೋಮಾಂಸ ಸೇವಿಸುವ ವರ್ಣನೆಯನ್ನು ಕಾಂಡ~ಸರ್ಗ~ಶ್ಲೋಕ-ಸಂಖ್ಯೆಯೊಡನೆ ತೋರಿಸಿ!!
ಕೊನೆಯ ಪಕ್ಷ, ಇಡಿಯ ರಾಮಾಯಣದಲ್ಲಿ ಎಲ್ಲಿಯಾದರೂ ಒಂದು ಕಡೆ ‘ಗೋಮಾಂಸ’ ಶಬ್ದದ ಬಳಕೆಯಾಗಿದ್ದರೆ ಅದನ್ನು ತೋರಿಸಿಬಿಡಿ!
ಸಾಕೇ ಸಾಕು!!

~

ನೋಡದೆಯೇ ಇಡುವ ಹೆಜ್ಜೆ ಮುಳ್ಳಿನ ಮೇಲೆ ಬಿದ್ದೀತು; ನಡೆಯುವವನನ್ನು ಪ್ರಪಾತಕ್ಕೆ ಬೀಳಿಸೀತು!
ತಿಳಿಯದೇ ಆಡುವ ಮಾತು ಆಡುವವನನ್ನು ಮಾತ್ರವಲ್ಲ; ಕೇಳುವವನನ್ನೂ ಮಹಾಪತನಕ್ಕೆ ಒಳಪಡಿಸೀತು!
ತಿಳಿದು ಮಾತನಾಡಬೇಕೆಂಬ ಮೊದಲ ತಿಳಿವಳಿಕೆಯಿಂದ ಬುದ್ಧಿಜೀವಿತ್ವದೆಡೆಗೆ ನೈಜಪ್ರಯಾಣ ಆರಂಭವಾಗಲಿ.

ಶುಭಪ್ರಯಾಣ!
#LokaLekha by @SriSamsthana SriSri RaghaveshwaraBharati MahaSwamiji

~*~

ತಿಳಿವು~ಸುಳಿವು:

 • <ಇಲ್ಲದ ಮತ್ತು ಸಲ್ಲದ ಕೆಲವು ಅಪಶಬ್ದಗಳನ್ನಾಡುವಾಗ>
  ಇಲ್ಲಿ, ಇಲ್ಲದ – ಎಂದರೆ, ಯತಾರ್ಥವಾಗಿ ಮೂಲವೇ ಇಲ್ಲದ ಮಾತುಗಳು ಎಂದು; ಸಲ್ಲದ ಎಂದರೆ – ರಾಮನ ವ್ಯಕ್ತಿತ್ವಕ್ಕೆ ಹೇಳಬಾರದ ಎಂಬ ಅರ್ಥ.
 • ದುಷ್ಪ್ರಚಾರ = ಕೆಟ್ಟದಾದ ಪ್ರಚಾರ, ಅಪಪ್ರಚಾರ

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments