“ಬೇಕಾದಾಗ ಬಳಸು; ಸಾಕೆನಿಸಿದರೆ ಬಿಸುಡು!”

ಅದ್ವೈತವಲ್ಲ, ದ್ವೈತವಲ್ಲ, ವಿಶಿಷ್ಟಾದ್ವೈತವೂ ಅಲ್ಲ; ಭಗವದ್ಗೀತೆಯಲ್ಲ, ಬೈಬಲ್ ಅಲ್ಲ, ಕುರಾನ್ ಅಲ್ಲ; ಇಂದಿನ ವ್ಯಾವಹಾರಿಕ ವಿಶ್ವವನ್ನು ಆಳುತ್ತಿರುವುದು ಈ ಮನೆಹಾಳ–ಊರುಹಾಳ–ದೇಶಹಾಳ–ವಿಶ್ವಹಾಳ Use & Throw ಸಿದ್ಧಾಂತ! ಅಲ್ಲಿ ಭಾವಕ್ಕೆ ಎಡೆಯೇ ಇಲ್ಲ; ಕನಿಕರಕ್ಕೆ ಅವಕಾಶವೇ ಇಲ್ಲ; ಬಾಂಧವ್ಯಕ್ಕೆ ಅರ್ಥವೇ ಇಲ್ಲ!

ಈಗಾಗಲೇ ಲಕ್ಷದಷ್ಟು ಭಾರತೀಯ ಇಂಜಿನಿಯರ್‌ಗಳು ಕೆಲಸ ಕಳೆದುಕೊಂಡಿದ್ದಾರೆ; ಒಂದು ಅಂದಾಜಿನಂತೆ ಮುಂಬರುವ ಸಮಯದಲ್ಲಿ ವರ್ಷಕ್ಕೆರಡು ಲಕ್ಷದಂತೆ ಕೆಲಸ ಕಳೆದುಕೊಳ್ಳಲಿದ್ದಾರೆ! ಈ ಪ್ರಕ್ರಿಯೆಗೆ ಹೆಸರು Layoff. ಅದರ ಅರ್ಥವೇ ಆ ಮೂರು ಪದಗಳು: USE and THROW.

Layoff ಬಗ್ಗೆ ಬಂದ ಈಚಿನ ಮಾಧ್ಯಮ ವರದಿಗಳು

ಬೇಸರವೆನಿಸದೇ? ಎಳವೆಯಲ್ಲಿ ಪುಸ್ತಕದ ಹುಳುವಿನಂತೆ ಓದಿ…ಓದಿ, ಪದವಿ ಪಡೆದು, ಇಂಟರ್ವ್ಯೂಗಳೆಂಬ ಲಾಟರಿಯ ಸಂತೆಯಲ್ಲಿ ಅಂತೂ ಇಂತೂ ಒಂದು ಕೆಲಸ ಹಿಡಿದು, ಕಾಣದ ಯಜಮಾನನಿಗಾಗಿ ಬೇಕಾಬಿಟ್ಟಿ ದುಡಿದು-ದಣಿದು, ಕೊನೆಗೊಂದು ದಿನ ಇದ್ದಕ್ಕಿದ್ದಂತೆ ‘ಎದ್ದು ಹೋಗು!’ ಎಂದರೆ ಎದೆ ಒಡೆಯದೇ!? ಲಕ್ಷ ಲಕ್ಷ ಭಾರತೀಯರ ಬದುಕಿನ ಆಧಾರವೇ ಕಳಚಿದಾಗ, ಅನ್ನಕ್ಕೆ ಕನ್ನ ಬಿದ್ದಾಗ ಭಾರತಮಾತೆಯು ಬೇಸರಿಸಿ, ಬಿಸಿಯುಸಿರುಗರೆಯಲಾರಳೇ? #LokaLekha blog by @SriSamsthana SriSri RaghaveshwaraBharati Mahaswamiji

ಇದು ಒಂದು ದೃಷ್ಟಿ; ಸರ್ವಸಾಮಾನ್ಯ ದೃಷ್ಟಿ; ಈಗ ಇನ್ನೊಂದು ದೃಷ್ಟಿಯಿಂದ ನೋಡಿ: ತನ್ನೊಳಗೆ ಒಳಿತನ್ನು ಹುದುಗಿಸಿಕೊಂಡಿರದ ಕೆಡುಕಿಲ್ಲ. ಇಲ್ಲಿಯೂ ಹಾಗೆಯೇ. ಇಂಡಿಯಾದಲ್ಲಿ ಕೆಲಸ ಕಳೆದುಕೊಂಡ ಇಂಡಿಯನ್ನರು ಭಾರತಕ್ಕೆ ಮರಳಿ ಭಾರತೀಯರಾದರೆ ತಾಯಿ ಭಾರತಿಗೆ ಅದಕ್ಕಿಂತ ಸುಖದ ಸಂಗತಿ ಇನ್ನೊಂದಿಲ್ಲ!

ಇಂಡಿಯಾದಿಂದ ಭಾರತಕ್ಕೆ ಮರಳುವುದೆಂದರೆ!? ಅವೆರಡೂ ಒಂದೇ ಅಲ್ಲವೇ?

ಅಲ್ಲವೇ ಅಲ್ಲ! ಒಂದೇ ಅಲ್ಲ, ಮಾತ್ರವಲ್ಲ; ಕತ್ತಲೆ-ಬೆಳಕುಗಳಂತೆ ಪರಸ್ಪರ ವೈರಿಗಳು; ಇಂಡಿಯಾವೆಂದರೆ ಭಾರತದೊಳಗಿನ ಪರದೇಶ; ಭಾರತವೆಂದರೆ ಇಂಡಿಯಾದಿಂದ ನುಂಗಲ್ಪಡುತ್ತಾ ಕ್ಷಣೇ ಕ್ಷಣೇ ಕ್ಷೀಣಿಸುತ್ತಿರುವ ನಮ್ಮ ಸ್ವದೇಶ!

ಇವುಗಳ ವೈರಕ್ಕೆ ಶತಮಾನಗಳ ಇತಿಹಾಸವಿದೆ. ಇಂಡಿಯಾ ಎಂದರೆ ಅದು ಭಾರತದ ಮೇಲೆ ಕ್ರೂರ ಆಕ್ರಮಣಗೈದ, ವ್ಯಾಪಾರದ ನೆಪದಲ್ಲಿ ಒಳನುಸುಳಿ, ನಮ್ಮವರ-ನಮ್ಮತನದ ಸಂಹಾರವನ್ನೇ ಗೈದ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆ! ತಾಯ್ತಂದೆಯರು ಇಟ್ಟ ಹೆಸರನ್ನು ಬಿಟ್ಟು, ಎಂದೋ ಮನೆಗೆ ನುಗ್ಗಿದ ಕಳ್ಳರು ಇಟ್ಟ ಹೆಸರನ್ನೇ ಇಂದೂ ಇಟ್ಟುಕೊಳ್ಳುವುದೇ!!??

ಇಂಡಿಯಾ ಶಬ್ದದ ಹುಟ್ಟನ್ನು ಗಮನಿಸಿ – ಭಾರತಕ್ಕೆ ಬಂದ ಪರ್ಷಿಯನ್ನರು ಇಲ್ಲಿ ಸಿಂಧೂ ನದಿಯನ್ನು ಕಂಡರು. ಸಕಾರವೇ ಇಲ್ಲದ ಅವರ ಭಾಷೆಯಲ್ಲಿ ಸಿಂಧು ‘ಹಿಂಡಶ್’ ಆಯಿತು; ಅದು ಗ್ರೀಕಿನಲ್ಲಿ ‘ಇಂಡಸ್’ ಎಂದಾಗಿ, ಹಳೆಯ ಇಂಗ್ಲೀಷಿನಲ್ಲಿ ‘ಇಂಡೀ’ ಎಂದಾಯಿತು; ಈಗಿನ ಇಂಗ್ಲೀಷಿನಲ್ಲಿ ಅದು ಇಂಡಿಯಾ ಎಂದಾಗಿದೆ! ಇಂಗ್ಲೀಷರು ನಮ್ಮ ನಾಡನ್ನು ಹಾಗೆಯೇ ಕರೆಯಲಿ; ಅಥವಾ ಹೇಗೆ ಬೇಕಾದರೂ ಕರೆಯಲಿ; ಆದರೆ ಆ ಅಪಭ್ರಂಶವನ್ನೇ ಇಂದಿಗೂ – ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳ ಬಳಿಕವೂ – ನಮ್ಮ ನಾಡಿನ ಹೆಸರಾಗಿ ಇಟ್ಟುಕೊಂಡಿರುವ ನಮಗೇನಾಗಿದೆ!?

ಪರಂಪರೆಯಿಂದಲೇ ನಮ್ಮ ದೇಶಕ್ಕೆ ತನ್ನದೇ ಆದ ಹೆಸರಿದೆ. “ವರ್ಷಂ ತತ್ ಭಾರತಂ ನಾಮ ಭಾರತೀ ಯತ್ರ ಸಂತತಿಃ” ಭಾರತವೆಂಬುದು ನಮ್ಮ ದೇಶದ ನಿಜಾಭಿಧಾನ. ಅದು ಅರ್ಥಪೂರ್ಣ ಎನ್ನುವುದಕ್ಕಿಂತ ಪರಮಾರ್ಥಪೂರ್ಣ ಎನ್ನುವುದೇ ಸೂಕ್ತ!

‘ಭಾ’ ಎಂದರೆ ಬೆಳಕು; ಅಲ್ಲಿ ನಿರತವೂ ರತರಾಗಿರುವವರು, ಒಳಬೆಳಕಿನಲ್ಲಿ ಸದಾ ರಮಿಸುವವರು-ವಿರಮಿಸುವವರು ‘ಭಾರತರು’. ಅಂಥವರ ಸಂತತಿಯು ‘ಭಾರತೀ ಸಂತತಿ’; ಅವರ ಸಂಸ್ಕೃತಿಯು ‘ಭಾರತೀಯ ಸಂಸ್ಕೃತಿ’. ಇನ್ನೊಂದು ಬಗೆಯಲ್ಲಿ ನಿರೂಪಿಸುವುದಾದರೆ, ಭಾ-ರಾ-ತಾಳಗಳು, ಅಥವಾ ಮನೋ-ವಾಕ್-ಕಾಯಗಳೆಂಬ ತ್ರಿಕರಣಗಳು ಯಾವ ದೇಶದ ಜೀವನಸಂಸ್ಕೃತಿಯಲ್ಲಿ ಸುಂದರವಾದ ಸಮನ್ವಯವನ್ನು ಸಾಧಿಸಿವೆಯೋ ಅದು ಭಾರತ. ವಿಶ್ವಶ್ರೇಷ್ಠವಾದ ಈ ದೇಶವನ್ನು, ಅರಿವಿನ ಹರಿವಿನ ಇಲ್ಲಿಯ ಸಂಸ್ಕೃತಿಯನ್ನು ಸಮರ್ಪಕವಾಗಿ ಪ್ರತಿನಿಧಿಸುವ, ಪರಮಪದಕ್ಕೆ ಅತಿಸನಿಹವಿರುವ ‘ಭಾರತ’ ಪದವನ್ನು ಬಿಟ್ಟು, ನಾವೇಕೆ ಇನ್ನೂ ‘ಇಂಡಿಯಾ’ಕ್ಕೇ ಜೋತುಬಿದ್ದಿದ್ದೇವೆ?

ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡರೂ ತಪ್ಪಿಲ್ಲ; ಶತ್ರುಗಳು ನೆಟ್ಟ ವಿಷವೃಕ್ಷವನ್ನು ಕಟ್ಟೆ ಕಟ್ಟಿ ಪೂಜಿಸಬಾರದು!

ವಿಪರ್ಯಾಸವೆಂದರೆ ದೇಶದ ಸಂವಿಧಾನವು ತನ್ನ ಮೊದಲ ಪರಿಚ್ಛೇದದಲ್ಲಿಯೇ “India, that is Bharat” ಎನ್ನುವ ಮೂಲಕ ಹೆಸರಿನಲ್ಲಿಯೇ ದ್ವಂದ್ವವನ್ನು ಸೃಷ್ಟಿಸಿಬಿಟ್ಟಿದೆ! ಆ ದ್ವಂದ್ವವು ದೇಶವೆಲ್ಲವನ್ನೂ ವಿಷವ್ಯಾಧಿಯಾಗಿ ವ್ಯಾಪಿಸಿದೆ! ಇಂಡಿಯಾ-ಭಾರತಗಳ ದ್ವಂದಯುದ್ಧವು ಇಡೀ ದೇಶದಲ್ಲಿ ನಡೆಯುತ್ತಿದೆ!

ಮೆಟ್ರೋ ಸಿಟಿಗಳು ಇಂಡಿಯಾದ ಪ್ರತೀಕಗಳು. ಅಲ್ಲಿ ವಾಸಿಸುವವರ ನಡೆ ಬ್ರಿಟಿಷ್; ನುಡಿ ಇಂಗ್ಲಿಷ್! ಅಲ್ಲಿ ಧೋತಿ ದುರ್ಲಭ; ತಿಲಕ ಅಸಂಗತ; ಜಡೆ-ಬಳೆಗಳು Outdated! ಆದರೆ ಸೂಟು-ಬೂಟು-ಕೋಟು-ಟೈಗಳು, ಇಲ್ಲಿ ಪ್ರಸ್ತಾಪಿಸಲು ಯೋಗ್ಯವಲ್ಲದ ಮತ್ತಿತರ ಪಾಶ್ಚಿಮಾತ್ಯ ವಿಕೃತಿಗಳು – ಅಲ್ಲಿ ಧಾರಾಳ ಸಲ್ಲುತ್ತವೆ!
ಹಳ್ಳಿಗಳಲ್ಲಿ ಭಾರತವಿದೆ. ಅಲ್ಲಿ ಭಾರತೀಯತೆ ಇನ್ನೂ ಉಸಿರು ಹಿಡಿದುಕೊಂಡಿದೆ! ಆದರೆ ಗ್ರಾಮಸಂಸ್ಕೃತಿ ಎಂಬ ಭಾರತವು ದಿನೇ ದಿನೇ, ಕ್ಷಣೇ ಕ್ಷಣೇ ಕ್ಷೀಣಿಸುತ್ತಿದೆ; ಇಂಡಿಯಾವು ಬಲಕಾಯಿಸುತ್ತಿದೆ. ಪೇಟೆಗಳು ಬೆಳೆಯುತ್ತಿವೆ; ಹಳ್ಳಿಗಳು ಕ್ಷಯಿಸುತ್ತಿವೆ! ಅಳಿದುಳಿದ ಹಳ್ಳಿಗಳೂ ಪೇಟೆಗಳಾಗಿ ಬದಲಾಗುತ್ತಿವೆ.

ಭಾರತದಲ್ಲಿ ಭಾರತೀಯತೆಯ ಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ ಅಪ್ಪಟ ಭಾರತೀಯರ ಉಡುಗೆ-ತೊಡುಗೆಯಲ್ಲಿ, ಕೇಶಶೈಲಿಯಲ್ಲಿ ನೀವು ಪೇಟೆಗೆ ಬಂದರೆ ಗೇಲಿಗೆ ಗುರಿಯಾಗುತ್ತೀರಿ! ಭಾರತದ(ಹಳ್ಳಿಯ)ಲ್ಲಿ, ಭಾರತೀಯತೆಯಲ್ಲಿ ಬದುಕುವ ಯುವಕರಿಗೆ ಹೆಣ್ಣು ಕೊಡುವವರಿಲ್ಲ! ಅದೇ ಕಾರಣಕ್ಕಾಗಿಯೇ ಭಾರತದ ವಿದ್ಯೆ-ಕಲೆಗಳನ್ನು ಕಲಿಯುವವರಿಲ್ಲ; ಅನ್ನಮೂಲವಾದ ಕೃಷಿ ಮಾಡುವವರಿಲ್ಲ; ಹಳ್ಳಿಗಳಲ್ಲಿ ವಾಸ ಮಾಡಲೂ ಯಾರೂ ಸಿದ್ಧರಿಲ್ಲ; ಮನೆದೇವರುಗಳು ಅಟ್ಟ ಸೇರುತ್ತಿವೆ; ಆಚರಣೆಗಳು ಅವಸಾನ ಕಾಣುತ್ತಿವೆ; ದೇಶದ ಆತ್ಮವೇ ಆದ ಪರಂಪರೆಯು ಪಾಳುಬಿದ್ದಿದೆ!

ಯುವಕರೆಲ್ಲರೂ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗವನ್ನರಸಿ ಪೇಟೆ(ಇಂಡಿಯಾ) ಸೇರುತ್ತಿದ್ದಾರೆ; ಒಂದೊಂದಾಗಿ ಮನೆಗಳ ಬಾಗಿಲುಗಳು ಮುಚ್ಚುತ್ತಿವೆ; ಹಳ್ಳಿಗಳು ಬರಿದಾಗುತ್ತಿವೆ; ಭೂಮಿ ಬರಡಾಗುತ್ತಿದೆ; ಅತ್ಯಪರೂಪದ ನಮ್ಮ ಸಂಸ್ಕೃತಿಯ ಸರ್ವನಾಶವಾಗುತ್ತಿದೆ!

ಒಂದು ಮನೆಯ ಬಾಗಿಲು ಹಾಕಿತೆಂದರೆ ಒಂದು ಪರಂಪರೆಯ ಅವಸಾನವಾಯಿತೆಂದೇ ಅರ್ಥ! #LokaLekha blog by @SriSamsthana SriSri RaghaveshwaraBharati Mahaswamiji

ಮೆಟ್ರೋ ಸಿಟಿಗಳೆಂದರೆ ಮಾಡರ್ನ್; ವೆಸ್ಟರ್ನ್; ಹಳ್ಳಿಗಳೆಂದರೆ ಪುರಾತನ; ಸನಾತನ; ಅದೇ ಸದಾತನ! ಮಾಡರ್ನ್, ವೆಸ್ಟರ್ನ್`ಗಳ ಭರಾಟೆಯಲ್ಲಿ ನಾವು ನಮ್ಮ ಮೂಲಸೆಲೆಯನ್ನೇ ಕಳೆದುಕೊಳ್ಳುತ್ತಿದ್ದೇವೆ! ಬದಲಿಗೆ ಪಡೆದುಕೊಳ್ಳುತ್ತಿರುವುದು ಇತಿಹಾಸವಿಲ್ಲದ, ಭವಿಷ್ಯವೂ ಇಲ್ಲದ, ಅರ್ಥವಿಲ್ಲದ, ಅನರ್ಥಗಳ ಗೂಡಾಗಿರುವ ವಿಕೃತ ಜೀವನಶೈಲಿಯೊಂದನ್ನು! ಶಹರಗಳು ತಮ್ಮ ಬೆಳವಣಿಗೆ-ಪ್ರಭಾವಗಳಿಂದ ಹಳ್ಳಿಗಳೆಂಬ ಭೂತಕಾಲದ ಭಾರತದ ನೆನಪನ್ನೇ ನಾಶ ಮಾಡುತ್ತಿವೆ; ಪರಿಸರ ಮಾಲಿನ್ಯ ಮತ್ತು ಪ್ರಕೃತಿನಾಶಗಳ ಮೂಲಕ ಭವಿಷ್ಯವನ್ನೂ ನಾಶ ಮಾಡುತ್ತಿವೆ!

ಈ ನಾಶಪರಂಪರೆಯ ಬೇರಿರುವುದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಮತ್ತು ನಗರಜೀವನದ ವ್ಯಾಮೋಹದಲ್ಲಿ. ನಾವಾಗಿಯೇ ಈ ಪಿಡುಗಿನಿಂದ ಹೊರಬರಬೇಕಿತ್ತು; ಅದು Layoffಗಳ ಮೂಲಕ ತಾನಾಗಿಯೇ ಆಗುವುದಿದ್ದರೆ ಆಗಲಿ. ‘ಆಗುವುದೆಲ್ಲ ಒಳ್ಳೆಯದಕ್ಕೇ’ ಎಂಬ ಮಾತಿಗೆ ಅರ್ಥ ಬರಲಿ. ಈ ವಿದೇಶೀ ಕಂಪನಿಗಳು ತಮ್ಮ ನೌಕರಿಯ ಚಾಕರಿಯಿಂದ ನಮ್ಮ ವಿದ್ಯಾವಂತ ಯುವಕರನ್ನು ಬಿಡುಗಡೆಗೊಳಿಸಿದರೆ ಅದು ಭಾರತದ ಪಾಲಿಗೆ Blessing in disguise! ಅದು ದಾಸ್ಯಮುಕ್ತಿ; ದೇಶಕ್ಕೆ ಶಕ್ತಿ!

ವಿದ್ಯಾವಂತ ಯುವಕರೇ! Layoff ಸವಾಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಭಾರತ-ಭಾರತೀಯತೆಗಳಿಗೆ ಮರಳಲು ಇದೊಂದು ಸದವಕಾಶವೆಂದು ಭಾವಿಸಿ. ಪರಕೀಯ-ಪ್ರಭುಗಳಿಗೆ ದೊಡ್ಡ ನಮಸ್ಕಾರ ಹೇಳಿ!
ಹಳ್ಳಿಗಳಿಗೆ ಮರಳಿ ಹೊಸ ಬದುಕನ್ನು ಕಟ್ಟಿ! ಬರಿದಾಗುತ್ತಿರುವ ಭಾರತ ಮಾತೆಯ ಮಡಿಲು ತುಂಬಿ! ಇಂಡಿಯಾದಿಂದ ಭಾರತದೆಡೆಗಿನ ನಿಮ್ಮ ಪಯಣವು ದೇಶದ ದಿಶೆಯನ್ನೇ ಬದಲಿಸುವ ಉತ್ತರಾಯಣವಾಗಲಿ!

ನೆನಪಿಡಿ! ನೀವು ಕಳೆದುಕೊಳ್ಳುವುದು ಪರಾವಲಂಬನೆಯನ್ನು; ಗಳಿಸಿಕೊಳ್ಳುವುದು ಎಂದೋ ಕಳೆದುಹೋಗಿದ್ದ ಸ್ವಾವಲಂಬನೆಯನ್ನು! ನೀವು ಮರಳುವುದು ಊರಿಗೆ; ನಿಮ್ಮ ನಿಜದ ಬೇರಿಗೆ! ಶಹರವೆಂಬ ಜಹರದಿಂದ ವಿಷಹರವಾದ ತವರಿಗೆ! ಉಸಿರೇ ವಿಷವಾದ, ಹಸಿರೆಂಬುದು ಕನಸಾದ, ಮಲವೇ ಜಲವಾದ, ನಿಜನೆಲವೇ ಕಾಣದ, ಪ್ರಕೃತಿಮಾತೆಯ ಪ್ರತಿದಿನದ ಕಗ್ಗೊಲೆಯ ಕೇಂದ್ರವಾದ, ನಗರವೆಂಬ ನರಕದಿಂದ ನಗುವ ನಾಕದಂತಿರುವ ಗ್ರಾಮರಾಜ್ಯದೆಡೆಗೆ, ನೈಜ ರಾಮರಾಜ್ಯದೆಡೆಗೆ!

ಹಳ್ಳಿಯಲ್ಲಿ ಖರ್ಚು ಕಡಿಮೆ; ಆದರೆ ಬದುಕು ಎಷ್ಟೋ ಶ್ರೇಷ್ಠತರವಾದುದು! Quantity of money needed is lesser; but Quality of life is greater!

 

ವಿದೇಶೀ ಕಂಪನಿಯ ನೌಕರಿಗಿಂತ ದೇಶೀ ಗೋವಿನ ಚಾಕರಿ ಲೇಸು!

ಕಾಣದ ಮಾಲೀಕನಿಗಾಗಿ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು, ಕದಲದೆ ದಿನವೆಲ್ಲ ಕುಳಿತು, ಕೃತಜ್ಞತೆಯಿಲ್ಲದ ಕಾಯಕಗೈಯುತ್ತಾ, ಜೀವಂತ ಯಂತ್ರವಾಗಿ, ಶವದ ಬದುಕು ಬದುಕುವ ಬದಲು ನೆಲ-ನಭಗಳ ನಡುವೆ, ಜಲ-ಜೀವಗಳೆಡೆಯಲ್ಲಿ, ಹಸಿರು ನಗುವಲ್ಲಿ, ಕೃತಕತೆಯು ಕಾಣದಲ್ಲಿ, ಸಹಜತೆಯು ರಾಜ್ಯವಾಳುವಲ್ಲಿ ನಿಮಗೆ ನೀವೇ ಪ್ರಭುವಾಗಿ ಬಾಳಿ!

ಊರಿನಲ್ಲಿ ನಮ್ಮ ಬೇರಿದೆ; ಶುದ್ಧ ನೀರಿದೆ; ನೈಜ ನೆಲವಿದೆ; ನೈಜ ನಲಿವಿದೆ; ವಿಷವಲ್ಲದ ಉಸಿರಿದೆ; ಹಚ್ಚ ಹಸಿರಿದೆ; ಎಲ್ಲಕಿಂತ ಮಿಗಿಲಾಗಿ ತನ್ನೂರು-ತನ್ನವರ ನೆರಳಲ್ಲಿ ಬಾಳುವ ನೆಮ್ಮದಿಯಿದೆ!

ನೂರು ಮಾತಿನಲ್ಲಿ ಹೇಳಿದ್ದನ್ನು ಕೊನೆಗೊಮ್ಮೆ ಒಂದೇ ಮಾತಿನಲ್ಲಿ ಹೇಳುವುದಿದ್ದರೆ –ಬೇರಿನಿಂದ ಬೇರೆಯಾದ ಕೊಂಬೆ ಬಾಳದು; ಬೇರಿನಿಂದ ಬೇರಾಗದ ಕೊಂಬೆ ಬಾಡದು!’

ಏಕೋ, ಈ ಲೇಖನವನ್ನು ನಿರಾಶೆಯಲ್ಲಿ ಪೂರ್ಣಗೊಳಿಸಲು ಮನಸ್ಸಾಗುತ್ತಿಲ್ಲ; ಮುಕ್ತಾಯದ ಮುನ್ನ ಮುಂದಿನ ಮಂಗಲದ ಮುನ್ಸೂಚನೆಯ ಮಾತೊಂದನ್ನು ಹೇಳಿಬಿಡುವೆವು:

ಇಂಡಿಯಾ ಭರತಸಂಸ್ಕೃತಿಯನ್ನು, ಭಾರತದ ಸ್ವಾಭಿಮಾನವನ್ನು ನುಂಗುತ್ತ ಬೆಳೆಯುತ್ತಿದೆ, ನಿಜ, ಆದರೆ ಭಾರತವೂ ಮತ್ತೊಮ್ಮೆ ಬೆಳೆಯತೊಡಗಿದೆ; ಕೋಟ್ಯನುಕೋಟಿ ಭಾರತೀಯರ ಹೃದಯದಾಳದಲ್ಲಿ ಗುಪ್ತವಾಗಿ, ತಮ್ಮತನದ ಹಸಿವಾಗಿ, ಸ್ವಾಭಿಮಾನದ ಜಾಗರಣವಾಗಿ.

ಇಂಡಿಯಾ ಸ್ಥಾವರವಾಗಿ ಹೊರಗೆ ಬೆಳೆದರೆ, ಭಾರತವು ಬೆಳೆಯುತ್ತಿರುವುದು ಭಾರತೀಯರ ಹೃದಯದಲ್ಲಿ, ಭಾವವಾಗಿ.

ಕೊನೆಗೆ ಗೆಲ್ಲುವುದು ಭಾರತವೇ; ಏಕೆಂದರೆ ಅಂತರಂಗದ ವಿಕಾಸವೇ ನಿಜವಾದ ವಿಕಾಸ!

~*~*~

ಮರಳಿ ಮಣ್ಣಿಗೆ ಬಂದ ಮಣ್ಣಿನ ಮಕ್ಕಳ ಯಶೋಗಾಥೆಗಳು:
(ಕೃಪೆ: ಪ್ರಸ್ತುತಿ ವಿಭಾಗ, ಶ್ರೀರಾಮಚಂದ್ರಾಪುರ ಮಠ)

(ಇನ್ನೂ ಇವೆ..)

~

ತಿಳಿವು-ಸುಳಿವು:

ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚಾಪಿ ದಕ್ಷಿಣಮ್
ವರ್ಷಂ ತತ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ॥ – (ವಿಷ್ಣು ಪುರಾಣ ೨-೩-೧)
ಸಮುದ್ರದಿಂದ ಉತ್ತರಕ್ಕೆ, ಹಿಮಾಲಯದ ದಕ್ಷಿಣಕ್ಕೆ ಚಾಚಿ ಹರಡಿರುವ ಭೂಪ್ರದೇಶವೇ ಭಾರತ ವರ್ಷ. ಇಲ್ಲಿನ ಜನಾಂಗವೇ ಭಾರತೀಯರು.

ಇದು ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ. ಇಂದಿನ ಯುವ ಪೀಳಿಗೆಯು ಐ.ಟಿ ಎಂಬ ಮಾಯಾಜಿಂಕೆಯ ಬೆನ್ನಟ್ಟುತ್ತಿರುವಾಗ, ಕೆಲಸ ಕಳೆದುಕೊಳ್ಳುವ ಭೀತಿಯ LayOff ಎಂಬ ವಿಲಕ್ಷಣ ಸಂಪ್ರದಾಯದ ಬಗ್ಗೆ ಹಾಗೂ ನಮ್ಮದೇ ಗ್ರಾಮಜೀವನದ ಬಗ್ಗೆ ಕಣ್ತೆರೆಸುವ ಲೇಖನಾಮೃತ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments