ಕಳೆದ ಕೆಲ ಕಾಲದಿಂದ ಕರ್ನಾಟಕ ಸರಕಾರದ ಕಾಕದೃಷ್ಟಿಯು ಮಠಗಳ ಮೇಲೆ ಬಿದ್ದಿರುವುದನ್ನು, “ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳುವೆವು!” ಎನ್ನುವ ಸರಕಾರದ ಕೇಕೆಯನ್ನು ಕಾಣದವರಾರು, ಕೇಳದವರಾರು!?

ಮಠಗಳು ಸರ್ಕಾರದ ವಶವಾಗುವುದನ್ನು ನಾವು ಖಂಡತುಂಡವಾಗಿ ವಿರೋಧಿಸುತ್ತೇವೆ; ಮಾತ್ರವಲ್ಲ, ಸರ್ಕಾರವೇ ಮಠಗಳ ಮಾರ್ಗದರ್ಶನದ ಬೆಳಕಿನಲ್ಲಿ ಮುನ್ನಡೆಯುವ ಮಹಾದಿನವು ಬರಲೆಂದು ಆಶಿಸುತ್ತೇವೆ.

ಇಷ್ಟಕ್ಕೂ ಮಠವೆಂದರೇನು? ಗುರು~ಶಿಷ್ಯರು ಸಂಧಿಸುವ ಕೇಂದ್ರವದು; ಅಲ್ಲಿ ಮೂರನೆಯವರಿಗೆ ಪಾತ್ರವಿಲ್ಲ; ಸರ್ಕಾರಕ್ಕಂತೂ ಇಲ್ಲವೇ ಇಲ್ಲ! ಒಂದು ವೇಳೆ ದೊರೆಯು ಮಠಕ್ಕೆ ಬರುವುದಿದ್ದರೆ ಶಿಷ್ಯನಾಗಿ ಬರಬೇಕೇ ಹೊರತು ದೊರೆಯಾಗಿ ಅಲ್ಲ! ಅದನ್ನೇ ನಾವು ಲೇಖನದ ಶೀರ್ಷಿಕೆಯಲ್ಲಿ ಹೇಳಿದ್ದು “ಮಠಗಳನ್ನು ಸರ್ಕಾರದ ಸುಪರ್ದಿಗೆ ನೀಡುವುದರ ಬದಲು ಸರ್ಕಾರವನ್ನೇ ಮಠಗಳ ಸುಪರ್ದಿಗೆ ನೀಡುವುದೊಳಿತು!” ಎಂದು.
ಶ್ರೀರಾಮನಿಗೆ ವಸಿಷ್ಠರಿದ್ದಂತೆ, ಶಿವಾಜಿಗೆ ರಾಮದಾಸರಿದ್ದಂತೆ, ಹಕ್ಕಬುಕ್ಕರಿಗೆ ವಿದ್ಯಾರಣ್ಯರಿದ್ದಂತೆ, ದೊರೆತನಕ್ಕೆ ಗುರುತನದ ಹಿರಿತನವಿರಲೇಬೇಕು! ಗುರುವಿಲ್ಲದೆ ದಾರಿಯೆಲ್ಲಿ? ದಾರಿಯಿಲ್ಲದೇ ಗುರಿಯೆಲ್ಲಿ?
#LokaLekha by @SriSamsthana SriSri RaghaveshwaraBharati MahaSwamiji
ನೀರೊಳಗೆ ನಾವೆಯಿರಬೇಕು; ನಾವೆಯೊಳಗೆ ನೀರಿರಬಾರದು! ನೀರೊಳಗಿನ ನಾವೆಯ ಇರವು ಸಹಜ; ನಾವೆಯೊಳಗೆ ನೀರಿನ ಹರಿವು ಅಪಾಯ! ನೀರು ಹರಿಯುವುದು ಎಂದಿದ್ದರೂ ಕೆಳಮುಖವಾಗಿಯೇ; ಅಂತೆಯೇ ರಾಜಕಾರಣವೂ! ಪ್ರವಾಹದಲ್ಲಿ ಸಿಲುಕಿ ಮುಳುಗಿಹೋಗದಂತೆ ಪ್ರಜೆಗಳನ್ನು ಕಾಪಾಡುವುದು, ಪಾರುಗಾಣಿಸುವುದು ನಾವೆಯ ಸ್ವಭಾವ; ಅಂತೆಯೇ ಧರ್ಮವೂ!

ರಾಜಕಾರಣದಲ್ಲಿ ಧರ್ಮವಿರಬೇಕು, ಹಾಗಿಲ್ಲದಿದ್ದರೆ ಅದು ಅಧರ್ಮಶಾಸನವಾದೀತು; ರಾವಣರಾಜ್ಯವಾದೀತು! ಅದೇ, ರಾಜಕಾರಣವು ಧರ್ಮದೊಳಹೊಕ್ಕರೆ ದೋಣಿಯೊಳಗೆ ನೀರು ತುಂಬಿದಂತಾದೀತು!

ರಸ್ತೆಗಳು, ದೀಪಗಳು ಸರಕಾರದ ಹೊಣೆಯಾದರೆ, ಬೆಳಕಿನ ಬೆಳಕನ್ನು ಕಾಣುವ ಒಳಗಿನ ದಾರಿಗಳು ಸುಗಮವಾಗುವಂತೆ, ಬದುಕನ್ನು ಬೆಳಗುವ ಅಂತರ್ಜ್ಯೋತಿಯು ಆರದಿರುವಂತೆ ನೋಡಿಕೊಳ್ಳುವುದು ಮಠಗಳ ಹೊಣೆ. ಇಂತು, ಸರಕಾರಗಳ ಮತ್ತು ಮಠಗಳ ಕಾರ್ಯಕ್ಷೇತ್ರಗಳೇ ಸಂಪೂರ್ಣ ಭಿನ್ನ. ಮಠಗಳ ಕಾರ್ಯಕ್ಷೇತ್ರವು ಅಂತರಂಗ; ಸರಕಾರದ ಕಾರ್ಯಕ್ಷೇತ್ರ ಬಹಿರಂಗ.

ಅಂತರಂಗ ಬಹಿರಂಗಗಳು ಒಂದಕ್ಕೊಂದು ಪೂರಕವಾಗಿರಬೇಕು ಹೊರತು ಮಾರಕವಾಗಿ ಅಲ್ಲ. ಅಂತರಂಗವಿಲ್ಲದ ಬಹಿರಂಗವು – ಜೀವವಿಲ್ಲದ ದೇಹವು – ಶವ; ಬಹಿರಂಗವಿಲ್ಲದ ಅಂತರಂಗವು – ದೇಹವಿಲ್ಲದ ಜೀವವು – ಪ್ರೇತ! ದೇಹವು ಜೀವವನ್ನೊಳಗೊಂಡರೆ ಅದು ದೇಹದ ಚೈತನ್ಯ; ಹಾಗೆಯೇ ಪ್ರಭುತ್ವವು ಗುರುತ್ವವನ್ನು ಕೂಡಿಕೊಂಡರೆ ಅದು ದೇಶದ ಚೈತನ್ಯ. ಪ್ರಭುತ್ವವು ಶಕ್ತಿಯಾದರೆ, ಗುರುತ್ವವು ಬೆಳಕು; ಶಕ್ತಿ~ಬೆಳಕುಗಳು ಒಡಗೋಡಿ ಲೋಕಹಿತದ ಆಟವಾಡುವುದು ಅದೆಷ್ಟು ಚೆಂದ!

ನಮ್ಮ ನಾಡಿನ ಮಠಗಳು ತಮ್ಮ ಪಾಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು ಮಾತ್ರವಲ್ಲ, ಸರಕಾರವು ಮಾಡಬೇಕಾಗಿರುವ ಆದರೆ ಮಾಡದಿರುವ ಕಾರ್ಯಗಳನ್ನೂ ಬಹು ದೊಡ್ಡ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಅದೆಷ್ಟು ವಿದ್ಯಾದಾನ! ಅದೆಷ್ಟು ಅನ್ನದಾನ! ಅದೆಷ್ಟು ಆರೋಗ್ಯ ಪ್ರಕಲ್ಪಗಳು! ದೀನ-ದುರ್ಬಲರ, ದರಿದ್ರ-ದುಃಖಿತರ ಕಣ್ಣೀರೊರೆಸುವ ಅದೆಷ್ಟು ಪುಣ್ಯಕಾರ್ಯಗಳು! ಪರಿಸರ ಉಳಿಸುವ, ಬಡತನ ಅಳಿಸುವ, ಮತ್ತದೆಷ್ಟು ಮಹಾಯೋಜನೆಗಳು! #LokaLekha by @SriSamsthana SriSri RaghaveshwaraBharati MahaSwamiji

ಮಠಗಳ ಪಾಲಿಗೆ ಸರಕಾರವೆಂದೂ ಸಹಕಾರವಾಗಿ ಬರಲಿಲ್ಲ; ವಿಪರ್ಯಾಸವೆಂದರೆ ಅವು ಮಾಡುವ ಮಹತ್ಕಾರ್ಯಗಳಿಗೆ ಸಂಚಕಾರವಾಗಿಯೇ ಪರಿಣಮಿಸಿದವು.

ಓ ರಾಜಕಾರಣಿಗಳೇ, ನಿಮ್ಮ ಸಿಂಹಾಸನಕ್ಕೆ ಪ್ರಜೆಗಳ ಮತಗಳೇ ಮೆಟ್ಟಿಲು; ಪ್ರಜೆಗಳ ಕಷ್ಟಾರ್ಜಿತವಾದ ಹಣವು ನಿಮ್ಮ ಐಷಾರಾಮದ ತೊಟ್ಟಿಲು! ಇಂದು ನೀವೇನಾದರೂ ಆಗಿದ್ದರೆ, ಅದೆಲ್ಲವೂ ಪ್ರಜೆಗಳಿಂದಲೇ! ನಿಜ ಹೇಳಿ – ಪ್ರಜೆಗಳಿಗೆ ನೀವು ಗೈದ, ಗೈಯುತ್ತಿರುವ ಒಳಿತೇನು? ಪ್ರಜಾಧನದಲ್ಲಿ ಕೆಲವನ್ನು ಬಾಚಿ, ಹಲವನ್ನು ದೋಚಿ ಬದುಕುವ ನಿಮ್ಮಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲವೆಂಬುದನ್ನು ಚೆನ್ನಾಗಿ ಬಲ್ಲೆವು!
ನಿಮ್ಮ ಕಾರ್ಯವೈಖರಿಯ ಸಾರವಿವರವನ್ನು ಎರಡೇ ಮಾತಿನಲ್ಲಿ ಹೇಳುವೆವು. ಹೌದೇ, ಅಲ್ಲವೇ ಎಂಬುದನ್ನು ನಿಮ್ಮ ಅಂತಃಸಾಕ್ಷಿಯಲ್ಲಿ ಕೇಳಿ:
“ಮಾಡಬೇಕಾದುದನ್ನು ಮಾಡದೇ ಇರುವುದು; ಮಾಡಬಾರದುದನ್ನು ಮಾಡಿಯೇ ಮಾಡುವುದು!”

“ಶವವಾದೇನು; ಎಂದೂ ನಿನ್ನ ವಶವಾಗಲಾರೆ” – ತನ್ನನ್ನು ಅತಿಕ್ರಮಿಸಲೆಳಸಿದ ರಾವಣನಿಗೆ ಸೀತೆಯಾಡಿದ ವೀರವಾಣಿಯಿದು! ಧರ್ಮದ ಲಕ್ಷ್ಮಣರೇಖೆಯನ್ನು ದಾಟಿ ಮಠಗಳನ್ನು ವಶಪಡಿಸಲು ಮುಂದಾಗುವ ಸರಕಾರೀ ರಾವಣರಿಗೆ ಅಂದು ಮಾತೆಯಾಡಿದ ಆ ಮಾತನ್ನೇ ಇಂದು ಮಠಾಧೀಶರು ಆಡಬೇಕಾದೀತು!

ಸರಕಾರಗಳ ಸೆರಗಿನ ಮರೆಯಲ್ಲಿ ಅಡಗಿ, ಸಮಾಜವನ್ನೇ ಸುಡುವ ಆಳುವವರೆಂಬ ಅಸುರರೇ, ನಿಮ್ಮ ಅಪವಿತ್ರ ಹಸ್ತಗಳನ್ನು ಪವಿತ್ರವಾದ ಮಠಗಳ ಮೇಲಿಡದಿರಿ! ಮಠವೆಂಬ ಮಂಗಳಾರತಿಯಲ್ಲಿ ಕರ್ಪೂರವಾಗಿ ಉರಿದು, ಭುವಿಯ ಬೆಳಕಾಗಿ ಬದುಕು ಕಳೆಯುವ ಮಂಗಲಾತ್ಮರಾದ ಗುರುಗಳ ಅಮೃತಹಸ್ತಗಳನ್ನು ನಿಮ್ಮ ತಲೆಯ ಮೇಲಿರಿಸಿಕೊಂಡರೆ ನೀವೂ ಶುದ್ಧ; ನಾಡೂ ಕ್ಷೇಮ!

~*~

ಸೂ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಇತ್ತೀಚಿಗೆ ಹೊರಡಿಸಿದ್ದ ಸುತ್ತೋಲೆ:

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box