ತನ್ನ ಮಕ್ಕಳನ್ನು ಕಳೆದುಕೊಂಡು ಮಾತ್ರವೇ ಗೊತ್ತು ಸನಾತನ~ಧರ್ಮವೆಂಬ ಸುಮಾತೆಗೆ; ಮರಳಿ ಪಡೆದುಕೊಂಡು ಗೊತ್ತೇ ಇಲ್ಲ! ಕಳೆದೊಂದೆರಡು ಸಹಸ್ರಮಾನಗಳಲ್ಲಿ ಮತಾಂತರವೆಂಬ ಗಂಡಾಂತರದ ಮೂಲಕ ಆಕೆ ಕಳೆದುಕೊಂಡ ಕಂದಮ್ಮಗಳ ಸಂಖ್ಯೆ ಗಣಿತದ ಪರಿಧಿಯನ್ನೇ ಮೀರಿದ್ದು! ಇದು ಮುಗಿದ ಕಥೆಯಲ್ಲ; ಇನ್ನೂ ಮುಗಿಯದ ವ್ಯಥೆ! ದಿನ ಬೆಳಗಾದರೆ ಆಮಿಷದ / ಬಲವಂತದ / ಲವ್-ಜಿಹಾದಿನ ಮತಾಂತರದ ದುರ್ವಾರ್ತೆಗಳನ್ನು ನಮ್ಮ-ನಿಮ್ಮ ದೌರ್ಭಾಗ್ಯಶಾಲಿ ಕಿವಿಗಳು ಕೇಳುತ್ತಲೇ ಇವೆ. ವಿಧರ್ಮೀಯ ಗೂಗೆಗಳು ಕಚ್ಚಿಕೊಂಡು ಹೋದ ಸ್ವಧರ್ಮೀಯ ಗಿಳಿಮರಿಗಳು ಗೂಡಿಗೆ ಮರಳಿದ ಸಮಾಚಾರಗಳು ಅಮಾವಾಸ್ಯೆಯ ಬೆಳದಿಂಗಳಿನಂತಾಗಿವೆ!

ಹೀಗಿರಲು ಜಕಾರ್ತಾದಿಂದ ಬಂದ ಸುವಾರ್ತೆಯೊಂದು ಧರ್ಮಜನನಿಯ, ಧರ್ಮಬಂಧುಗಳ ಹೃದಯಕ್ಕೆ ತಂಪೆರೆದಿದೆ. ಜಾವಾ ದ್ವೀಪದ ರಾಣಿ ‘ಕಂಜೆಂಗ್ ರಾಡೆನ್ ಆಯು ಮಹೀಂದ್ರಾನಿ ಕೋಸ್ವಿದಿಯಂತಿ ಪರಮಾಸಾರಿ’ಇಸ್ಲಾಮಿನಿಂದ ಮಾತೃಧರ್ಮಕ್ಕೆ ಮರಳಿದ್ದಾಳೆ! 2017ರ ಜುಲೈ17ರಂದು, ಬಾಲಿ ದ್ವೀಪದ ಪುರೋಹಿತ ‘ಶ್ರೀ ಭಗವಾನ್ ಪುತ್ರ ನಾತಾ ನಾವಾ ವಾಂಗ್ಸಾ ಪಮಾಯೂನ್’ ನಡೆಸಿಕೊಟ್ಟ ‘ಸುಧಿ ವದನಿ’ ಪ್ರಕ್ರಿಯೆಯ ಮೂಲಕ ಆಕೆ ವಿಧ್ಯುಕ್ತವಾಗಿ ಮರಳಿ ಸನಾತನ ಧರ್ಮದ ಮಡಿಲು ಸೇರಿದಳು.

#LokaLekha by @SriSamsthana SriSri RaghaveshwaraBharati MahaSwamiji

ಸನಾತನ ಧರ್ಮಕ್ಕೆ ಸೇರಿದ ಬಳಿಕ ಆಕೆ ನುಡಿದಿದ್ದು ‘ನಾನು ಹೊಸ ಮನೆಗೆ ಹೋಗಿಲ್ಲ; ಹೊಸತೇನನ್ನೂ ಮಾಡಿಲ್ಲ; ನನ್ನ ಮೂಲ ಮನೆಗೇ ಮರಳಿದ್ದೇನೆ; ಮರಳಿ ನಾನು ನಾನಾಗಿದ್ದೇನೆ!’

ಆಕೆಯ ಮಾತು ಅಕ್ಷರಶಃ ನಿಜ. ಒಂದು ಕಾಲದಲ್ಲಿ ಇಂಡೋನೇಷಿಯಾವನ್ನು ಸನಾತನ ಧರ್ಮವೇ ಸಂಪೂರ್ಣವಾಗಿ ಆವರಿಸಿತ್ತು. ಅಲ್ಲಿ ಬೇರಾವ ಮತ-ಸಂಪ್ರದಾಯಗಳ ಸುಳಿವೂ ಇರಲಿಲ್ಲ. ಕ್ರಮೇಣ ಬೌದ್ಧ ಮತದ ಪ್ರವೇಶವಾಯಿತು. ಬಳಿಕ ಇಸ್ಲಾಮ್ ಹೊಕ್ಕಿತು; ಅದು ಇಡಿಯ ಇಂಡೋನೇಷಿಯಾವನ್ನೇ ನೆಕ್ಕಿತು! ಇಂದು ಅಲ್ಲಿ 225 ಮಿಲಿಯನ್ ಮುಸಲ್ಮಾನರಿದ್ದಾರೆ! ಅಲ್ಲಿಯ ಒಟ್ಟು ಜನಸಂಖ್ಯೆಯ ಪ್ರತಿಶತ 87.2 ರಷ್ಟು! ಇಂದು ಜಗತ್ತಿನಲ್ಲಿಯೇ ಸರ್ವಾಧಿಕ ಸಂಖ್ಯೆಯ ಮುಸಲ್ಮಾನರಿರುವುದು ಇಂಡೋನೇಷಿಯಾದಲ್ಲಿ! ಬಡಪಾಯಿ ಹಿಂದುಗಳು ಈಗ ಉಳಿದುಕೊಂಡಿರುವುದು ಕೇವಲ ನಾಲ್ಕು ಮಿಲಿಯನ್(1.7%) ಮಾತ್ರ!

ಅಲ್ಲಿಯ ಹೆಸರುಗಳೇ ಹಿಂದೂ ಧರ್ಮದ ಕರುಣ ಕಥೆ ಹೇಳುತ್ತವೆ. ಉದಾಹರಣೆಗೆ ಈ ರಾಣಿಯ ಹೆಸರನ್ನೇ ತೆಗೆದುಕೊಳ್ಳಿ. ‘ಮಹೀಂದ್ರಾನಿ ಕೋಸ್ವಿದಿಯಂತಿ ಪರಮಾಸಾರಿ’ ಎಂಬಲ್ಲಿ ‘ಮಹೇಂದ್ರನ ರಮಣಿ’ ಎನ್ನುವ ಅರ್ಥದ ‘ಮಹೇಂದ್ರಾಣಿ’ ಎಂಬ ಸಂಸ್ಕೃತ ಪದವು ‘ಮಹೀಂದ್ರಾನಿ’ಯಾಗಿದೆ; ‘ಕೋಸ್ವಿದಿಯಂತಿ’ಯ ಒಂದು ಭಾಗವಾದ ವಿದಿಯಂತಿಯು ‘ವಿದ್ಯಾ’ ಪದದ ರೂಪಾಂತರ; ‘ಪರಮಾಸಾರಿ’ಯು ‘ಪರಮೇಶ್ವರಿ’ಯ ನೇರ ಅಪಭ್ರಂಶ! ಇಂಡೋನೇಷಿಯಾದಲ್ಲಿ ರಾಜನನ್ನು ‘ಪರಮೇಶ್ವರ’ ಎಂದೂ ರಾಣಿಯನ್ನು ‘ಪರಮೇಶ್ವರಿ’ ಎಂದೂ ಕರೆಯುವ ವಾಡಿಕೆಯಿತ್ತು.

ಇನ್ನು, ಆಕೆಯನ್ನು ಮೂಲ ಧರ್ಮಕ್ಕೆ ಮರಳಿ ಕರೆತರುವ ಪ್ರಕ್ರಿಯೆ ನಡೆಸಿದ ಪುರೋಹಿತರ ಹೆಸರು: ‘ಶ್ರೀ ಭಗವಾನ್ ಪುತ್ರ ನಾತಾ ನಾವಾ ವಾಂಗ್ಸಾ ಪಮಾಯುನ್’. ಇಲ್ಲಿ ‘ಶ್ರೀ ಭಗವಾನ್ ಪುತ್ರ’ ಎಂಬುದು ಶುದ್ಧ ಸಂಸ್ಕೃತವೇ; ‘ನಾತಾ’ ಶಬ್ದವು ನಮ್ಮ ‘ನಾಥ’ ಶಬ್ದದಿಂದ ಬಂದಿದೆ; ನಮ್ಮ ‘ನವ’ ಶಬ್ದವು ಇಲ್ಲಿ ‘ನಾವಾ’ ಆಗಿದೆ! ಅವರು ನಡೆಸಿದ ‘ಸುಧಿ ವದನಿ’ಯಲ್ಲಿ ಸುಧಿಯೆಂದರೆ ನಮ್ಮ ಶುದ್ಧಿಯೇ! ವದನವೆಂದರೆ ಮುಖ; ವದನಿಯೆಂದರೆ ಮುಖದಿಂದ ಹೊರಹೊಮ್ಮುವ- ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಉಚ್ಚರಿಸಲ್ಪಡುವ ಮಂತ್ರಗಳು! ನಮ್ಮ ‘ಯವ ದ್ವೀಪ’ವೇ ರಾಣಿಯ ‘ಜಾವಾ ದ್ವೀಪ’. ಪುರೋಹಿತರ ‘ಬಾಲಿ’ ದ್ವೀಪವು ರಾಮಾಯಣದ ವಾಲಿಯಿಂದ ಬಂದಿದೆ.

ಇಂಡೋನೇಷಿಯಾವೇನು, ಇಡಿಯ ಜಗತ್ತೇ ಸನಾತನ ಧರ್ಮದ ಕಕ್ಷೆಗೆ ಒಂದು ಕಾಲದಲ್ಲಿ ಒಳಪಟ್ಟಿತ್ತು. ರಾಮಾಯಣದಲ್ಲಿ ವಾಲಿಗೆ ರಾಮನು ಹೇಳುವ ಈ ಮಾತುಗಳನ್ನು ಗಮನಿಸಿ:

ಇಕ್ಷ್ವಾಕೂಣಾಮ್ ಇಯಂ ಭೂಮಿಃ ಸಶೈಲ-ವನ-ಕಾನನಾ |
ಮೃಗ-ಪಕ್ಷಿ-ಮನುಷ್ಯಾಣಾಂ ನಿಗ್ರಹ-ಪ್ರಗ್ರಹಾವಪಿ ||

ಎಂದರೆ, ರಾಮನ ಪೂರ್ವದಲ್ಲಿಯೇ ಭೂಮಂಡಲವೆಲ್ಲವೂ ಸನಾತನ-ಧರ್ಮ-ಪರಿಪಾಲಕರಾದ ಇಕ್ಷ್ವಾಕುವಂಶೀಯ ಚಕ್ರವರ್ತಿಗಳ ಪ್ರಭುತ್ವಕ್ಕೆ ಒಳಪಟ್ಟಿತ್ತು; ಮೃಗ-ಪಕ್ಷಿ-ಮನುಷ್ಯರೆಲ್ಲರ ಶಿಕ್ಷೆ~ರಕ್ಷೆಗಳೂ ಸನಾತನ ಧರ್ಮವನ್ನನುಸರಿಸಿಯೇ ನಡೆಯುತ್ತಿದ್ದವು!

ಸನಾತನ ಧರ್ಮವು ಎಲ್ಲರದು; ಎಲ್ಲರೂ ಸನಾತನ ಧರ್ಮಕ್ಕೆ ಸಹಜವಾಗಿಯೇ ಸೇರಿದವರು!
ಸುಖ ಬಯಸದ ಜೀವವಿಲ್ಲ; ಆದರೆ ನಿಜಸುಖವು ಎಲ್ಲಿಯೂ ಲಭ್ಯವಿಲ್ಲ! ಜೀವಗಳು ಸುಖವೊಂದನ್ನೇ ಬಯಸುತ್ತವೆ; ಅದಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತವೆ! ಆದರೆ ಸುಖ ಮಾತ್ರ ಸಿಕ್ಕದು; ಸಿಕ್ಕಿದರೂ ದಕ್ಕದು! ಹೀಗಿರಲು ಸನಾತನ ಭಾರತದ ಪರಮರ್ಷಿಗಳು ಪರಮ ತಪಸ್ಸನ್ನು ತಪಿಸಿ, ತುಟ್ಟತುದಿಯ ಸುಖದ ಒಟ್ಟು ಮೊತ್ತವು ಸಿಗುವ ಸೃಷ್ಟಿ-ಸಹಜವಾದ ವಿಧಾನವೊಂದನ್ನು ಕಂಡುಕೊಂಡರು; ಅದನ್ನು ಧರ್ಮವೆಂದು ಕರೆದರು.

#LokaLekha by @SriSamsthana SriSri RaghaveshwaraBharati MahaSwamiji

ಪರಮಕಾರುಣಿಕರಾದ ಆ ಮಹಾಚೇತನರು ತಾವು ಕಂಡುಕೊಂಡ ಜೀವನವಿಧಾನವನ್ನು ತಾವು ಮಾತ್ರ ಇಟ್ಟುಕೊಳ್ಳದೇ ಪ್ರಪಂಚಕ್ಕೆಲ್ಲ ಹಂಚಿದರು; ಏಕೆಂದರೆ ಸನಾತನ ಧರ್ಮವು ನಮ್ಮದು ಹೌದಾದರೂ ನಮ್ಮದು ಮಾತ್ರವಲ್ಲ; ಸೂರ್ಯನಂತೆ, ಭೂಮಿಯಂತೆ, ಗಾಳಿಯಂತೆ ಸಕಲ ಜೀವಗಳಿಗೆ ಸೃಷ್ಟೀಶ್ವರನಿತ್ತ ಅಮೂಲ್ಯ ಕೊಡುಗೆಯದು! ತನ್ನಿಂದ ಬೇರ್ಪಟ್ಟ ಜೀವವು ಪುನರಪಿ ತನ್ನೊಡನೆ ಸೇರಲು ಈಶ್ವರನು ಕರುಣಿಸಿದ ಸೇತುವದು! ಭುವಿಯ ಬವಣೆಯ ಬಾಣಲೆಯಲ್ಲಿ ಬೇಯುವ ಜೀವಗಳೆಡೆಗೆ ದೇವನು ಹರಿಸಿದ ಶೀತಲ ಅಮೃತದ ಝರಿಯದು! ಅದು ಸರ್ವ ಜೀವಗಳ ಪರಮಪಿತ್ರಾರ್ಜಿತ ಆಸ್ತಿ!

ಸತ್ಯಯುಗದಲ್ಲಿ ಧರ್ಮವು ಜಗತ್ತೆಲ್ಲವನ್ನೂ ಆಳುತ್ತಿತ್ತು, ಅಥವಾ ಯಾವಾಗಲೆಲ್ಲ ಧರ್ಮವು ಜಗತ್ತೆಲ್ಲವನ್ನೂ ಆಳುತ್ತಿರುತ್ತದೋ ಆ ಕಾಲವೇ ಸತ್ಯಯುಗ!

ಅದೊಂದು ಕಾಲವಿತ್ತು; ಧರ್ಮವು ಅಯೋಧ್ಯೆಯ ಸಿಂಹಾಸನದಲ್ಲಿ ಮಂಡಿಸಿ, ವಿಶ್ವವೆಲ್ಲವನ್ನೂ ಆಳುತ್ತಿತ್ತು. ಈಗೊಂದು ಕಾಲ ಬಂದಿದೆ; ಸನಾತನ ಧರ್ಮವು- ಎಂದರೆ ಜೀವಗಳ ನಿಜಧರ್ಮವು ತನ್ನ ತವರೂರಿನಲ್ಲಿಯೇ ನೆಲೆ ಕಳೆದುಕೊಳ್ಳುತ್ತಿದೆ! ರಾಮ ಮಂದಿರವು ಬಾಬ್ರಿ ಮಸೀದಿಯಾಗಿದೆ; ಅಯೋಧ್ಯೆಯು ಫೈಜಾಬಾದ್ ಆಗಿದೆ; ಭಾರತವು ಇಂಡಿಯಾ ಆಗಿದೆ.

ನಷ್ಟ ಯಾರಿಗೆ? ಧರ್ಮಕ್ಕಲ್ಲ, ಲೋಕಕ್ಕೆ! ಧರ್ಮದ ಪರಿಧಿಯಿಂದ ಹೊರಗಾದ ಒಂದೊಂದು ಜೀವವೂ ನೀರಿನಿಂದ ಹೊರಗೆಸೆದ ಮೀನು! ಧರ್ಮದಿಂದ ಹೊರತಾದ ದೇಶಗಳು ನೀರಿಲ್ಲದ ಮರುಭೂಮಿಗಳು! ಈ ಮಾತುಗಳನ್ನು ಹೇಳುವಾಗ ನಮಗೆ ನೆನಪಾಗುವುದು – ನಿಜವಾಗಿ ನಮ್ಮವರಾಗಿದ್ದು, ಮತಾಂತರಕ್ಕೊಳಗಾಗಿ ಪರಕೀಯರಾಗಿಹೋದ ಅಸಂಖ್ಯಾತ ಜೀವಬಂಧುಗಳು! ಒಂದೊಮ್ಮೆ ಈ ದೇಶದ ಅಂಗವೇ ಆಗಿದ್ದು, ಮತಾಂತರದ ಅವಾಂತರದಿಂದಲೇ ಪಾಲಾಗಿ ಪರರಾಷ್ಟ್ರವಾಗಿಹೋದ – ವೈರಿರಾಷ್ಟ್ರವೇ ಆಗಿಹೋದ – ಸನಾತನ ಭಾರತದ ಪವಿತ್ರ ಭೂಖಂಡಗಳು!

ಕೊನೆಯದಾಗಿ, ಜಗದೀಶ್ವರನಲ್ಲಿ ಎದೆಯಾಳದಿಂದ ಪ್ರಾರ್ಥಿಸುವೆವು: ಮತಾಂತರದಿಂದಾಗಿ ಹೊರಗೆಸೆಯಲ್ಪಟ್ಟ ಪ್ರತಿಯೊಂದು ಜೀವಮೀನವೂ ಮರಳಿ ಸನಾತನ ಧರ್ಮದ ಸರೋವರವನ್ನು ಸೇರಲಿ; ಮತಾಂತರದ ಮುಂದಿನ ಹೆಜ್ಜೆಯಾಗಿ ದೇಶಾಂತರವೇ ಆಗಿ ಹೋದ ಭೂಖಂಡವೆಲ್ಲವೂ ಮರಳಿ ಭಾರತವನ್ನು ಸೇರಲಿ; ವಿಶ್ವವೆಲ್ಲವೂ ಧರ್ಮದ ನೆರಳಿಗೆ ಮರಳಿ, ಸನಾತನ~ಸುಕುಟುಂಬವು ಮೊದಲಿನಂತೆ ವಿಶ್ವಕುಟುಂಬವೇ ಆಗಲಿ..

ಮಾತೃಧರ್ಮಕ್ಕೆ ಮರಳಿದ ರಾಣಿ ಮಹೇಂದ್ರಾಣಿಯು ನವ ಮನ್ವಂತರದ ಮಹಾದ್ವಾರವನ್ನೇ ತೆರೆಯಲಿ.

~*~*~

ಚಿತ್ರಕೃಪೆ: ಅಂತರ್ಜಾಲ

 

ಸುದಿ ವದನಿ - ಶುದ್ಧಿ ಪ್ರಕ್ರಿಯೆ ನಡೆಸಿಕೊಳ್ಳುತ್ತಿರುವ ರಾಣಿ ಚಿತ್ರಕೃಪೆ: TribalNews

ಸುದಿ ವದನಿ – ಶುದ್ಧಿ ಪ್ರಕ್ರಿಯೆ ನಡೆಸಿಕೊಳ್ಳುತ್ತಿರುವ ರಾಣಿ |
ಚಿತ್ರಕೃಪೆ: TribalNews

 

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments