LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮಡಿಲ ಮಮತೆಗೆ ಮುಡಿ ಸಮರ್ಪಿತ…

Author: ; Published On: ರವಿವಾರ, ಜುಲಾಯಿ 4th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಕ್ಷೀರ ಸಾಗರ ತರಂಗ ಶೀಕರಾಸಾರ ತಾರಕಿತ ಚಾರುಮೂರ್ತಯೇ |
ಭೋಗಿ ಭೋಗ ಶಯನೀಯ ಶಾಯಿನೇ ಮಾಧವಾಯ ಮಧುವಿದ್ವಿಷೇ ನಮಃ ||

ಅಮೃತಸಾಗರದಲ್ಲಿ ಅದ್ವೈತದಂಪತಿಗಳು..!

ಹಾಲು…..ಹಾಲು……ಹಾಲು…!
ಎಲ್ಲೆಲ್ಲೂ ಹಾಲು..!
ಎಷ್ಟು ದೂರ ನೋಡಿದರೂ ಹಾಲು..!
ಎಷ್ಟು ಆಳಕ್ಕಿಳಿದರೂ ಹಾಲು…!
ಹಾಲೇ ಹಾಲು…!

ಕಣ್ದಣಿಯುವಷ್ಟು ವಿಶಾಲ..
ಕಣ್ತಣಿಯುವಂತೆ ಶೀತಲ…!

ಅದುವೇ ಕ್ಷೀರಸಾಗರ..!

ಅಗಾಧ ಅನಂತ ಅಮೃತ ಸಾಗರದ ಮಧ್ಯದಲ್ಲಿ ..ಆಶ್ಚರ್ಯ…ಆಶ್ಚರ್ಯ…!
ಆದಿಶೇಷ…ವಿಷಸರ್ಪಗಳ ರಾಜ…

ಅದೋ ಅಲ್ಲಿ…!
ಅಮೃತಸಾಗರದ ಶಯನಮಂದಿರದಲ್ಲಿ…
ವಿಷವಿಭೂಷಿತನಾದ ಆದಿಶೇಷನ ಪರ್ಯಂಕದಲ್ಲಿ ..
ಅಮೃತ- ವಿಷಗಳನ್ನು ಮೀರಿ ನಿಂತ ಮಹಾಪ್ರಭು…ಮಧುಮರ್ದನ..ಮಾಧವ…ಮಾರಮಣ..!

ಕರುಣಾಸಾಗರನನ್ನು ಸೇರುವ ಅಮೃತಸಾಗರದ ತವಕವೇ ತರಂಗಗಳಾಗಿ –
ಮತ್ತೆ ಮತ್ತೆ ಮೇಲೆದ್ದು ಮುಂದೊತ್ತಿ ಶೇಷಶರೀರವನ್ನು ಮುತ್ತಿಟ್ಟರೆ..
ಅಲ್ಲಿಂದ ಚಿಮ್ಮಿದ ದುಗ್ಧ ಬಿಂದುಗಳು ತುಂತುರು ಮಳೆಯಾಗಿ ಮಾರಮಣನ ಮಂಗಳ ಶರೀರವನ್ನಲಂಕರಿಸುತ್ತಿದ್ದವು…!
ನೀಲಶರೀರದಲ್ಲಿ ಪಡಿಮೂಡಿದ ಸ್ವರ್ಣವರ್ಣದ ಹಾಲಹನಿಗಳು
ನೀಲಾಕಾಶದಲ್ಲಿ ಮೂಡಿ ಮಿನುಗುವ ಕೋಟಿತಾರೆಗಳಂತೆ ಅತಿಶಯವಾಗಿ ಶೋಭಿಸುತ್ತಿದ್ದವು…

ಸುಧಾಸಿಂಧುವಿನಲ್ಲಿ ಸಂಭವಿಸಿದವಳು…
ದಯಾಸಿಂಧುವಿನ ಕೈ ಹಿಡಿದವಳು..
ನಂಬಿದವರಿಗೆ,
ಭವಸಿಂಧುವನ್ನು ದಾಟಿಸುವವಳು..
ಸಂಪತ್ಸಿಂಧುವನ್ನೇ ನೀಡುವವಳು…
ಮಂಗಳ ದೇವತೆ ಮಹಾಲಕ್ಷ್ಮಿ..!!

ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…!
ಶಾಂತಸಾಗರದಲ್ಲಿ ಒಮ್ಮಿಂದೊಮ್ಮೆಲೇ ಬೀಸುವ ಚಂಡಮಾರುತದಂತೆ ಭೃಗುಮುನಿಗಳ ಪ್ರವೇಶವಾಯಿತಲ್ಲಿ..

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ,
ಚಿನ್ನದಾತುರಕಿಂತ ಹೆಣ್ಣು- ಗಂಡೊಲವು |
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ,
ತಿನ್ನುವುದದಾತ್ಮವನೆ – ಮಂಕುತಿಮ್ಮ |
|

ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ಚಪಲವಿಲ್ಲದೇ ಹೋಗಿದ್ದರೆ..
ಈ ಜಗತ್ತಿನಲ್ಲಿ ಕ್ಲೇಶ- ಕಲಹಗಳೇ ಇರುತ್ತಿರಲಿಲ್ಲವೇನೋ…!!

ಭಾವದುಂಬಿ ಚಿನ್ಮಯನ ಚರಣದಲ್ಲಿ ತನ್ಮಯರಾದ ವೈಕುಂಠವಾಸಿಗಳು…
ಜಗದಗಲ ತೆರೆದ ತನ್ನ ಕಮಲ ನೇತ್ರಗಳಿಂದ ಅನುಗ್ರಹದ ಅಮೃತ ವರ್ಷವನ್ನೇ ಅವರೆಲ್ಲರ ಮೇಲೆ ಸುರಿಸುವ ವೈಕುಂಠದೊಡೆಯ…!
ಯಾರೂ .. ಮತ್ಯಾರನ್ನೂ ಗಮನಿಸುವ ವಾತಾವರಣವೇ ಅಲ್ಲವದು..!

ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.
ಎರಡೂ ಭಾವಗಳಿಂದ ಭಿನ್ನನಾಗಿ ನಿಂತ ಭೃಗುವಿಗೆ ತಾನೇ ಬೇರೆಯೆಂದೆನಿಸಿತು.
ಮಹಾವಿಷ್ಣುವೇ ತನ್ನನ್ನು ಉಪೇಕ್ಷಿಸಿದಂತೆನಿಸಿತು.

ವಿವೇಕದ ಕಣ್ಮುಚ್ಚಿ ಅಹಂಕಾರದ ಕಣ್ಣು ತೆರೆದಾಗ ಆಗುವದೇ ಹೀಗೆ..
ಮಸ್ತಕವೆಂಬ ಉತ್ತಮಾಂಗದಲ್ಲಿರಬೇಕಾದ ದೃಷ್ಟಿ ಪತನಗೊಂಡು ಪಾದಕ್ಕಿಳಿದರೆ ಮತ್ತೇನಾಗಬೇಕು..?

ಮನೆಯವರು ಮಾತನಾಡಿಸಲಿಲ್ಲವೆಂದು ಮನೆಯ ಯಜಮಾನನ ಎದೆಗೊದೆಯುವ ಅತಿಥಿ..
ಎದೆಗೊದೆಯುವ ಪಾದಗಳನ್ನೇ ಒತ್ತುವ, ಕಣ್ಣಿಗೊತ್ತಿಕೊಳ್ಳುವ ಯಜಮಾನ..

ವೈಕುಂಠದಲ್ಲಿ ನಡೆದಿದ್ದು ಹಾಗೆ…!!
ಶ್ರೀ ವತ್ಸ – ಕೌಸ್ತುಭಗಳಿಂದ ವಿಭೂಷಿತವಾದ ‘ಶ್ರೀ’-ನಿವಾಸವಾದ ವಿಷ್ಣುವಿನ ವಕ್ಷಸ್ಠಲವು ಭೃಗುವಿನ ಪಾದಗಳಿಂದ ಆಕ್ರಾಂತವಾಯಿತು.
ಭಗವತ್ಕರಕಮಲಗಳು ಸ್ಪರ್ಶಮಾತ್ರದಿಂದಲೇ ಭೃಗುವಿನ ಅಹಂಕಾರವನ್ನೇನೋ ಕೊನೆಗಾಣಿಸಿದವು..ಆದರೆ,
ಮಳೆಮುಗಿದರೂ ನೆರೆ ಇಳಿಯದಂತೆ ಭೃಗುವಿನ ಅವಿನಯದ ಪರಿಣಾಮಗಳು ಮುಂದುವರೆದವು..!
ಕ್ಷಣಮಾತ್ರದ ಆವೇಶದಲ್ಲಿ ನಡೆಯುವ ಘಟನೆಗಳ ಪರಿಣಾಮ ಯುಗ ಯುಗಗಳ ಕಾಲ ನಿಂತುಬಿಡಬಹುದಲ್ಲವೇ?

ತನ್ನ ಪರಮ ಪ್ರೇಮದ ನೆಲೆಯಾದ ಪ್ರಭುವಿನ ವಕ್ಷಸ್ಥಲವು ಭೃಗುವಿನ ಪಾದಾಘಾತಕ್ಕೊಳಗಾದುದನ್ನು ಕಂಡು ಖತಿಗೊಂಡ ಮಹಾಲಕ್ಷ್ಮೀ
ಪತಿಗೃಹವನ್ನೂ..ಪಿತೃಗೃಹವನ್ನೂ ತ್ಯಜಿಸಿ ಧರೆಯಲ್ಲಿ ಮರೆಯಾಗಿ ಹೋದಳು…!

ಗೃಹಿಣೀ ಗೃಹಮುಚ್ಯತೇ…|

ಗೃಹವು ಗೃಹವಲ್ಲ.. ಗೃಹಿಣಿಯೇ ನಿಜವಾದ ಗೃಹ..!!

ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ…?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖವು ಅರ್ಧವಾಗುವದು.. ಸುಖವು ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?ಸರಸವೆಲ್ಲಿ..?
ಲಕ್ಷ್ಮಿಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು…!!
ಅರಸಿಯನ್ನರಸುತ್ತಾ, ಸ್ಮರಿಸುತ್ತಾ, ಪರವೈಕುಂಠವನ್ನೇ ಪರಿತ್ಯಜಿಸಿ ಧರೆಗಿಳಿದನು ಸಿರಿಯರಸ..!

ಅಮೃತಸಾಗರದ ಜೊತೆಗೆ ಆಹಾರವನ್ನೂ, ಶೇಷಶಯನನ ಜೊತೆಗೆ ನಿದ್ರೆಯನ್ನೂ ಪರಿತ್ಯಜಿಸಿ,
ವೆಂಕಟಾದ್ರಿಯ ಹುತ್ತವೊಂದರಲ್ಲಿ ಹುದುಗಿ ತೀವ್ರತರ ತಪ:ಶ್ಚರ್ಯೆಯಲ್ಲಿ ಮಗ್ನನಾದನಾತ!
ಅಂತರ್ಭೂಮಿಯಲ್ಲಿ ಅಂತರ್ಮುಖನಾಗಿ ಕುಳಿತಿದ್ದ ಶ್ರೀನಿವಾಸನಿಗೆ ಜಗದ ಪರಿವೆಯೇ ಇರದಾಯಿತು.
ಅತ್ತ ಜಗತ್ತಿಗೂ ಜಗನ್ನಿಯಾಮಕನ ಇರವೇ ತಿಳಿಯದಂತಾಯಿತು.
ಅದೆಷ್ಟೋ ಕಾಲ ನಿರ್ನಿದ್ರನಾಗಿ, ನಿರಾಹಾರನಾಗಿ ಕುಳಿತಿದ್ದ ಹರಿಯ ಹಸಿವು –
ಭೂಲೋಕವಾಸಿಗಳ್ಯಾರಿಗೂ ಅರಿವಿಲ್ಲದಾಯಿತು..

ಹ್ಞಾ..! ಯಾರಿಗೂ ಅರಿವಾಗಲಿಲ್ಲವೆನ್ನುವಂತಿಲ್ಲ..!
ಕಣ್ಣರಿಯದಿದ್ದರೂ ಕರುಳರಿಯುವುದೆನ್ನುವರಲ್ಲವೇ..?
ವೆಂಕಟಾದ್ರಿಯ ವಲ್ಮೀಕಗರ್ಭದಲ್ಲಿ ಅಂತರ್ಹಿತನಾಗಿ ಕುಳಿತುಕೊಂಡಿದ್ದ –
ಶ್ರೀನಿವಾಸನ ಹಸಿವು ಚೋಳರಾಜನ ಅರಮನೆಯ ಒಡಲೊಂದರಲ್ಲಿ ಪ್ರತಿಧ್ವನಿಸತೊಡಗಿತ್ತು..!

ಅದು ಎನ್ನೋಣವೇ.?
ಅವಳು ಎನ್ನೋಣವೇ.?
ಅವರು ಎನ್ನೋಣವೇ..?
ಪಶು ಎನ್ನೋಣವೇ..?
ಮಾತೆ ಎನ್ನೋಣವೇ..?
ಜೀವ ಎನ್ನೋಣವೇ..
ದೇವನೆನ್ನೋಣವೇ..?
ಚಲಿಸುವ ದೇವಾಲಯ ಎನ್ನೋಣವೇ..?

ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!


ಚೋಳರಾಜನ ಗೋಶಾಲೆಯನ್ನಲಂಕರಿಸಿದ್ದ ಆ ಗೋಮಾತೆ ತನ್ನ ಕರುಳ ಕಣ್ಣಿನಿಂದಲೇ ಕಂಡಳು-
ಅನ್ನ-ಪಾನಗಳಿಂದ ವಿರಹಿತನಾಗಿದ್ದ ವಿಶ್ವಾಧಾರ ಮೂರ್ತಿಯನ್ನು..!

ಹಟ್ಟಿಯಲ್ಲಿ ಅಂಬೆಗರೆಯುವ ತನ್ನ ಎಳೆಗರುವನ್ನೇ ಮರೆತು ವೆಂಕಟಾದ್ರಿಯ ಹುತ್ತದೆಡೆಗೆ ಲಗುಬಗೆಯಿಂದ ಧಾವಿಸಿದಳಾಕೆ..!
ವಿಶ್ವಜನಕನನ್ನೇ ತನ್ನ ಕರುವಾಗಿಸಿಕೊಂಡು ವಿಶ್ವದ ವಾತ್ಸಲ್ಯವನ್ನೆಲ್ಲಾ ತನ್ನ ಜೀವರಸವಾದ ಹಾಲಿನಲ್ಲಿ ತುಂಬಿ ಹರಿಸಿದಳು ವಿಶ್ವಂಭರನಿಗಾಗಿ.
ಹಸುವಿದ್ದಲ್ಲಿ ಹಸಿವಿಲ್ಲ..
ಅಸುವುಳಿಸುವಳು..
ಕಸು ತುಂಬುವಳು..
ಹಸಿವಿಂಗಿಸುವಳು…
ಆ ವಿಶ್ವಜನನಿ…!

ಸಮಯ ಸರಿಯಿತು…

“ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||” – ಭಗವದ್ಗೀತೆ

“ಅಗ್ನಿಸ್ವರೂಪವನ್ನು ತಾಳಿ ನಾನು ಜೀವಿಗಳ ದೇಹವನ್ನಾಶ್ರಯಿಸುವೆನು.
ಪ್ರಾಣಾಪಾನಗಳ ಜೊತೆಗೂಡಿ ನಾಲ್ಕು ಬಗೆಯ ಆಹಾರಗಳನ್ನು ನಾನೇ ಜೀರ್ಣಗೊಳಿಸುವೆನು”

ಎನ್ನುವ ಸ್ವಾಮಿಯ ಒಡಲನ್ನು ತಂಪಾಗಿಡಲು ಪ್ರತಿನಿತ್ಯವೂ ವೆಂಕಟಾದ್ರಿಗೆ ಹೋಗಿ ಹಾಲಿಳಿಸತೊಡಗಿದಳಾ ಗೋಮಾತೆ!

ಅಸಾಮಾನ್ಯ ಸಂಗತಿಗಳು ಸಾಮಾನ್ಯರಿಗೆ ಹೇಗೆ ತಾನೆ ಅರ್ಥವಾಗಬೇಕು?
ಅರಮನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..
ಯಾವಾಗಲೂ ಸಮೃದ್ದವಾಗಿ ಹಾಲುಗರೆಯುತ್ತಿದ್ದ ಹಸುವೇಕೆ ಇದ್ದಕ್ಕಿದ್ದಂತೆ ಬರಿದಾಯಿತು..!?
ಕಾರಣ ತಿಳಿಯಲು ಗೋಪಾಲಕನಿಗೆ ರಾಜಾಜ್ಞೆಯಾಯಿತು.
ಮರುದಿನ ಹಸುವನ್ನು ಹಿಂಬಾಲಿಸಿದನಾತ..
ವೆಂಕಟಗಿರಿಯ ಹುತ್ತವೊಂದರ ಮೇಲೆ ಹಸುವು ಹಾಲಿಳಿಸುವುದನ್ನು ಪೊದೆಯ ಮರೆಯಲ್ಲಿ ನಿಂತು ಕಂಡ
ಗೋಪಾಲಕನ ಕೋಪ ನೆತ್ತಿಗೇರಿತು.. ಪ್ರಜ್ಞೆ ಪಾತಾಳಕ್ಕಿಳಿಯಿತು…!
ಕಣ್ಣು ಕೆಂಪಾಯಿತು ..ಮನಸ್ಸು ಕಪ್ಪಾಯಿತು..!

ಕ್ರೋಧಾತ್ ಭವತಿ ಸಂಮೋಹ: ಸಂಮೋಹಾತ್ ಸ್ಮೃತಿ ವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಢಿನಾಶ: ಬುದ್ಡಿನಾಶಾತ್ ಪ್ರಣಶ್ಯತಿ || – ಭಗವದ್ಗೀತೆ

ಕ್ರೋಧದಿಂದ ಸಂಮೋಹ;
ಸಂಮೋಹದಿಂದ ಸ್ಮೃತಿ ಭ್ರಂಶ ;
ಸ್ಮೃತಿಭ್ರಂಶದಿಂದ ಬುದ್ಢಿ ನಾಶ;
ಬುದ್ಢಿನಾಶದಿಂದ ಸರ್ವ ನಾಶ..

ಪ್ರತ್ಯಕ್ಷ ರಾಕ್ಷಸನಂತೆ ಕೈಯಲ್ಲಿ ಕೊಡಲಿ ಹಿಡಿದು ಆ ಗೋವಿನೆಡೆಗೆ ಧಾವಿಸಿದನಾತ..!
ಆದರೆ ವಾತ್ಸಲ್ಯ – ತನ್ಮಯತೆಗಳ ಪ್ರತಿಮೂರ್ತಿಯಾಗಿದ್ದ ಗೋವು ಶ್ರೀನಿವಾಸನಲ್ಲಿಟ್ಟ ತನ್ನ ಚಿತ್ತವನ್ನು ಕದಲಿಸಲಿಲ್ಲ..
ಆ ಸ್ಠಳವನ್ನು ಬಿಟ್ಟೋಡಲಿಲ್ಲ.. ಹಾಲ್ಗರೆಯುವುದನ್ನು ನಿಲ್ಲಿಸಲಿಲ್ಲ.!!!

ಅದೇನು ದುರ್ಬುದ್ಢಿಯೋ, ದುರ್ದೈವವೋ…
ಆ ಗೋವಳನು ಕೊಳಲು ಹಿಡಿಯಬೇಕಾದ ಕೈಯಲ್ಲಿ ಕೊಡಲಿ ಹಿಡಿದು ತನ್ನ ನೆತ್ತಿಯೆತ್ತರಕ್ಕೆತ್ತಿ ಸರ್ವಶಕ್ತಿಯಿಂದ ಗೋವಿನ ಕೊರಳ ಮೇಲೆ ಪ್ರಯೋಗಿಸಿದನು.. ಧರ್ಮ ದಯೆಗಳನ್ನು ಮರೆತು..
ಆ ಕ್ಷಣದಲ್ಲಿಯೂ ಬಾರದಿದ್ದರೆ ದೇವರು ದೇವರೆನಿಸುವುದಾದರೂ ಹೇಗೆ..?

ಪ್ರಹ್ಲಾದನ ಕಷ್ಟಕ್ಕೆ ಕರಗಿ ಕಂಬವನ್ನೊಡೆದು ಬಂದ ನರಸಿಂಹನಂತೆ…
ಘೋರ ಗೋಹತ್ಯೆಯನ್ನು ಸಹಿಸಲಾರದೆ ಹುತ್ತವನ್ನೊಡೆದು ಮೇಲೆದ್ದನಾ ಗೋವಿಂದ..!!

ಬ್ರಹ್ಮಾಂಡವೇ ಬೆಚ್ಚಿ ಬೆರಗಾಗಿ ನೋಡ ನೋಡುತ್ತಿದ್ದಂತೆ, ಗೋವಿನ ಕೊರಳ ಮೇಲೆ ಸಿಡಿಲಿನಂತೆರಗಿದ
ಕೊಡಲಿಯ ಹೊಡೆತವನ್ನು ತನ್ನ ಸಿರಿಮುಡಿಯಿಂದ ಪರಿಗ್ರಹಿಸಿದನು ಶ್ರೀನಿವಾಸ..

ಒಮ್ಮೊಮ್ಮೆ ನವಿಲುಗರಿಗಳಿಂದ,
ಒಮ್ಮೊಮ್ಮೆ ರತ್ನಮುಕುಟದಿಂದ,
ಒಮ್ಮೊಮ್ಮೆ ಸುಕೋಮಲ ಸುಮಗಳಿಂದ ವಿಭೂಷಿತವಾಗುವ ಆ ವರಶಿರದ ಮೇಲಾಯಿತು ಕುಠಾರ ಪ್ರಹಾರ!!

ಕ್ಷೀರಸಾಗರದೊಡೆಯನ ಶಿರವೊಡೆದು,ಚಿಲುಮೆಯಂತೆ ಚಿಮ್ಮಿದ ರಕ್ತಧಾರೆಯಿಂದ ಗೋಮಾತೆಗಾಯಿತು ಅಭಿಷೇಕ..
ಹಾಲಿತ್ತವಳಿಗೆ ರಕ್ತವಿತ್ತು ದೇವತ್ವವನ್ನು ಮೆರೆದನು ದೇವ ದೇವ..

ಆದರೆ ಗೋಪಾಲಕ..?
ಸೂರ್ಯೋದಯವಾದ ಮೇಲೆ ಕತ್ತಲೆ ಬದುಕುವುದುಂಟೆ..?
ಮಮತೆಯ ಮಾತೆಯ ಕೊರಳು ಕೊಯ್ಯುವ ಕ್ರೂರ ಕೃತ್ಯ ಕಂಡು ಖತಿಗೊಂಡು ನಿಂತ ಶ್ರೀನಿವಾಸನೆಂಬ ಪ್ರಳಯಾಗ್ನಿಯಲ್ಲಿ ಆ ಗೋವಳನು ಮಿಡತೆಯಾಗಿ ಹೋದ…!
ಯಾವ ಅಶುಭವನ್ನು ಗೋವಿಗೆ ಮಾಡಹೊರಟನೋ ಅದು ಆತನಿಗೇ ಆಯಿತು.

‘ರಾಜಾ ರಾಷ್ಟ್ರಗತಂ ಪಾಪಂ..’

ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪಕ್ಕೆ ರಾಜನೂ ಹೊಣೆಗಾರನಾಗಬೇಕಾಗುತ್ತದೆ.
ಗೋಹತ್ಯೆಗೆಳಸಿದ ಗೋಪಾಲಕನ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು.
“ರಾಕ್ಷಸ ಸದೃಶನಾದ ಗೋಪಾಲಕನ ಸ್ವಾಮಿಯಾದ ನೀನು ರಾಕ್ಷಸನೇ ಆಗು” ಎಂದು ಶ್ರೀನಿವಾಸನು ರಾಜನನ್ನು ಶಪಿಸಿದನು..

ಆದರೆ ಈ ಘಟನಾವಳಿಗಳಿಂದ ಭೂಲೋಕಕ್ಕೆ ಒಳಿತೇ ಆಯಿತು.
ವೈಕುಂಠವೇ ಧರೆಗಿಳಿದು ತಿರುಪತಿ-ತಿರುಮಲವಾಯಿತು..
ಶೇಷನು ಶೇಷಾಚಲವಾದ..
ಕ್ಷೀರಸಾಗರವು ಭಕ್ತಸಾಗರವಾಯಿತು..

ಆದರೆ..ಲಕ್ಷ್ಮಿ…?

ಸೂರ್ಯಪ್ರಭೆ ಸೂರ್ಯನನ್ನು ಬಿಟ್ಟಿರಲು ಸಾಧ್ಯವೇ ?
ಬೆಳದಿಂಗಳು ಚಂದ್ರನಿಂದ ದೂರವಿರಲು ಸಾಧ್ಯವೇ ?
ನಾರಾಯಣ ರಾಮನಾದಾಗ ಸೀತೆಯಾಗಿ ಜೊತೆಯಾದವಳು…
ಕೃಷ್ಣನಾದಾಗ ರುಕ್ಮಿಣಿಯಾಗಿ ಆತನನ್ನೇ ವರಿಸಿದವಳು…
ವಿಷ್ಣುವಿಗೆ ಅನಪಾಯಿನಿಯವಳು..
‘ವಿಷ್ಣೋ: ಏಷಾ ಅನಪಾಯಿನೀ’
ತಿರುಪತಿಯಲ್ಲಿ ಶ್ರೀನಿವಸನೊಡನೆ ಆಕೆ ಪ್ರಕಟಗೊಳ್ಳುವ ಬಗೆಯೇ ಅನ್ಯಾದೃಶವಾದುದು…
‘ಶ್ರೀ’ ಇಲ್ಲದೆ ಶ್ರೀನಿವಾಸನೆನಿಸುವುದೆಂತು..?
ಜಗತ್ತಿನ ಎಲ್ಲೆಡೆಯಿಂದ ಧನ ಕನಕಗಳ ರಾಶಿಯ ರೂಪದಲ್ಲಿ ಬಂದು ಕ್ಷಣ ಕ್ಷಣವೂ ಶ್ರೀನಿವಾಸನ್ನನ್ನಾವರಿಸುವಳವಳು, ಆಲಂಗಿಸುವಳವಳು…
ಆದುದರಿಂದಲೇ ತಿರುಪತಿಗೆ ಹರಿದುಬರುವಷ್ಟು ಸಂಪತ್ತು ಜಗತ್ತಿನ ಬೇರಾವ ದೇವಸ್ಠಾನಗಳಿಗೂ ಬಾರದು..!
ತಿರುಪತಿಯ ವೈಭವವಿನ್ನೆಲ್ಲಿಯೂ ಕಾಣದು.
ತಿರುಪತಿಯೆಂದಾಕ್ಷಣವೇ ಮನಸ್ಸ್ಸಿಗೆ ಬರುವದು ಅಲ್ಲಿಯ ವೈಭವ.
ಅದು…ಲಕ್ಷ್ಮಿ..!
ವಿರಹದ ನಂತರ ಬರುವ ಸಂಗಮ ಮತ್ತಷ್ಟು ಗಾಢವಾಗಿರುವದಲ್ಲವೇ?
ಒಮ್ಮೆ ಬಿಟ್ಟು ಹೋದ ಪಶ್ಚಾತ್ತಾಪವಿರಬೇಕು,
ಆಕೆ ನೂರಾರು ಸಾವಿರಾರು ರೂಪದಲ್ಲಿ ಹೆಚ್ಚೇಕೆ ವಿಶ್ವರೂಪಿಣಿಯಾಗಿ ವಿಶ್ವಂಭರನನ್ನು ಸೇರಿದಳು..!
ಆದರೆ ಈ ಎಲ್ಲಾ ವೈಭವಗಳ ಮಧ್ಯದಲ್ಲಿಯೂ ಒಂದು ಕೊರತೆ..
ಸಮಯ ಸರಿದಂತೆ ಶ್ರೀನಿವಾಸನ ಶಿರದ ಗಾಯ ಮಾಯವಾದರೂ ಕುಠಾರ ಪ್ರಹಾರವಾದ ಸ್ಠಾನದಲ್ಲಿ ಕೂದಲು ಬಾರದಿದ್ದುದರಿಂದ..
ಚೆಲ್ವಿಕೆಯ ಚಂದ್ರಮನಲ್ಲಿ ಚುಕ್ಕಿಯೊಂದು ಉಳಿದುಬಿಟ್ಟಿತ್ತು.!
ಕಲಂಕವಲ್ಲ.. ಆತನ ಗೋ ಪ್ರೇಮದ ಪ್ರತೀಕವದು…!
ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮುಡಿಕೊಡುವ ಪದ್ಢತಿ ಇಂದಿಗೂ ಚಾಲ್ತಿಯಲ್ಲಿರುವದು ಈ ಹಿನ್ನೆಲೆಯಲ್ಲಿ..!
ಅಂದು ನಮ್ಮವನೊಬ್ಬನೆಸಗಿದ ಅಪರಾಧದಿಂದಾಗಿ ಶ್ರೀನಿವಾಸನ ಕಳೆದ ಕೂದಲಿನ ಸಾಲವನ್ನು ತೀರಿಸಲು –
ಮನುಜ ಕೋಟಿ ಇಂದಿನವರೆಗೂ ಮುಡಿ ನೀಡುತ್ತಾ ಬಂದಿದೆ.
ಎಂದೆಂದೂ ತೀರದ ಸಾಲವದು..!
ಗೋವು...
ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗವೇ ಸರಿ.!
ಸುದೂರದಲ್ಲಿದ್ದ ಶ್ರೀನಿವಾಸನ ಹಸಿವಿನ ಕರೆಯನ್ನು ಕೇಳಿಸಿಕೊಂಡ ಕಿವಿಗಳೆಂತಹವು..?
ಬೆಟ್ಟದ ದಟ್ಟ ಕಾಡಿನಲ್ಲಿ ಯಾರೂ ಅರಿಯದಂತೆ ಹುತ್ತದಲ್ಲಿ ಹುದುಗಿ ಕುಳಿತಿದ್ದ ಶ್ರೀನಿವಾಸನನ್ನು ಕಂಡ ಕಣ್ಣುಗಳೆಂತಹವು..?
ಶ್ರೀನಿವಾಸನ ಕರೆಗೆ ಕರಗಿ ತನ್ನ ಕರುವನ್ನೇ ಬಿಟ್ಟೋಡಿದ ಕರುಳದೆಂತಹದು..?
ಕಟುಕನ ಕ್ರೂರ ಕೊಡಲಿಗೂ ನಡುಗದ, ಹಾಲ್ಗರೆಯುವದನ್ನು ಬಿಡದ ಆ ಧೀರ ಹೃದಯವೆಂತಹದು..!
‘ಋಷಿಶ್ಚ ಕಿಲ ದರ್ಶನಾತ್ ‘
ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ..
ಎಂದಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಯಾವ ಋಷಿಗೇನು ಕಡಿಮೆ..?
ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ..
ಶ್ರೀನಿವಾಸನನ್ನು ಕರುಳ ಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಯಾವ ಭಕ್ತನಿಗೇನು ಕಡಿಮೆ..?
ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು..
ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಯಾವ ಗುರುವಿಗೇನು ಕಡಿಮೆ..?
ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋಮಾತೆ ಯಾವ ಮಾತೆಗೇನು ಕಡಿಮೆ..?
ವಿಶ್ವಂಭರನನ್ನೇ ಸಂತರ್ಪಿಸಿದ ಆಕೆಯ ಹಾಲು ಕ್ಷೀರಸಾಗರಕ್ಕೇನು ಕಡಿಮೆ..?
[ತಿರುಪತಿಯನ್ನು ತ್ವರಿತವಾಗಿ ಹೇಳಿದರೆ ತೃಪ್ತಿ ಎಂದಾಗುವದು.. ವಿಶ್ವಂಭರೆನ ತೃಪ್ತಿ ಕ್ಷೇತ್ರವದು..!]

ಈ ಕಥಾನಕದಲ್ಲಿ ನಾವು ಕಂಡ ಶ್ರೀನಿವಾಸನ ಮೂರು ಸತ್ಯ ಸಂದೇಶಗಳು:
ಸಕಲ ಗೋ ಘಾತಕರಿಗೆ –
ಗೋವಿನ ಮೇಲೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೇ ಬಂದೀತು..
ಗೋವಂಶ ನಾಶದಿಂದ ನಿಮ್ಮ ಸರ್ವ ನಾಶವೇ ಆದೀತು..!!
ಸಕಲ ರಾಜರಿಗೆ (ಸಕಲ ಸರ್ಕಾರಗಳಿಗೆ) –
ತನ್ನ ಸೇವಕ, ಒಂದು ಗೋಹತ್ಯೆ ಮಾಡಲೆಳಸಿದ ಮಾತ್ರಕ್ಕೇ ರಾಕ್ಷಸತ್ವದ ಶಾಪ ತಟ್ಟಿತು.
ಅವ್ಯಾಹತವಾಗಿ ಕೋಟಿ ಕೋಟಿ ಗೋವುಗಳ ಹತ್ಯೆಯನ್ನು ಮುಂದೆ ನಿಂತು ಮಾಡಿಸಿದರೆ ನಿಮ್ಮ ಕತೆಯೇನಾದೀತು..!?
ನಿಮ್ಮ ಊಹೆಗೇ ಬಿಟ್ಟಿದ್ದು..!
ಅಂತಿಮವಾಗಿ,
ಸಕಲ ಪ್ರಜೆಗಳಿಗೆ (ನಮಗೆಲ್ಲರಿಗೆ) –
ಗೋಮಾತೆಯ ಕೊರಳ ಮೇಲೆರಗುವ ಕೊಡಲಿಗೆ ನಿಮ್ಮ ಮುಡಿಯನ್ನಾದರೂ ಕೊಡಿ..
ಗೋಹತ್ಯೆಯಾಗಲು ಬಿಡಬೇಡಿ.
ಚಿಮ್ಮುವುದಿದ್ದರೆ ಚಿಮ್ಮಲಿ ಗಗನಕ್ಕೆ ಗೋಭಕ್ತರ ರಕ್ತ…!
ಆದರೆ…
ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ..!!

|| ಹರೇರಾಮ ||

46 Responses to ಮಡಿಲ ಮಮತೆಗೆ ಮುಡಿ ಸಮರ್ಪಿತ…

 1. Sharada Jayagovind

  Hareraama samsthana

  Kambha odedu banda Narashima .. huttha odedu bandha Srinivasa thumba chennagide….

  Kshiira samudrada haalu kottavaru yaaru ?Vishnu yaake kshiira samudradalli malaguthane? Is it symbolic of wealth alone or anything else?

  [Reply]

  Sri Samsthana Reply:

  * ಇನ್ಯಾರು ಕೊಡಲು ಸಾಧ್ಯ..?
  ಭಗವಂತನ ಆನಂದವೇ ತುಂಬಿತುಳುಕಿದಾಗ ಅಮೃತಸಾಗರವಾಯಿತು..

  * ತಂಪಿನ ತುಟ್ಟ ತುದಿಯ ಪ್ರತೀಕವದು..

  * ಅನಂತ ಆನಂದದ ಪ್ರತೀಕವದು..

  [Reply]

 2. Sharada Jayagovind

  Hare rama samsthana

  I have attempted a brief literary appreciation of this piece of poetry

  1.The word pictures of the ocean of milk and Vaikunta appeal to the senses of touch and sight and hm taste too… great. ! .. a Ravi verma’s vision and colours !

  2. A deep psychological interpretation of human behaviour-
  Bruhu muni’s big ego and desire to be recognised causing a turmoil and destroying peace. Sri Vishnu’s magnanimity in managing the situation

  3The lucid narration which captures the divinity of Goumtha and the greatness of Govinda
  we hear the voice of Valmiki here… Dhanyaho

  3. The spirited reaction of Sri Lakshmi

  [Reply]

  Sri Samsthana Reply:

  A spirited reaction from sharada..

  [Reply]

 3. Dr J Thirumala Prasad

  “ಮಾರಮಣ” ಶಬ್ದದ ಅರ್ಥವೇನು ಸಂಸ್ತಾನ?

  [Reply]

  Sri Samsthana Reply:

  ‘ಮಾ’ ಎಂದರೆ ಲಕ್ಷ್ಮಿ..
  ಆಕೆಯಿಂದ ಆನಂದಗೊಳ್ಳುವವನು..
  ಆಕೆಯನ್ನು ಆನಂದಗೊಳಿಸುವವನು..

  [Reply]

 4. Dr J Thirumala Prasad

  ಬಹಳ ವಿಚಿತ್ರ…………
  ಯಾರನ್ನು ಪರಮಾಗತಿಯೆಂದು ಶ್ರುತಿ ಸಾರುತ್ತದೋ ಅಲ್ಲಿಗೆ ಹೋಗಿ ಅಹಂಕಾರದ ಪ್ರದರ್ಶನವೇ?
  ಯಾರಲ್ಲಿ ಹೋಗಿ ತನ್ನತನವನ್ನು ಬಿಟ್ಟು ಎಲ್ಲವೂ ಅದಾಗ ಬೇಕೋ ಅಲ್ಲಿ ನಾನು ಬೇರೆ ಎಂಬ ಭಾವ…………….!!!!!!!!

  [Reply]

  Sri Samsthana Reply:

  ಅಹಂಕಾರವು ತಲೆಯಲ್ಲಿ ಕೋಡು ಮೂಡಿಸುವುದು..
  ಕಾಲಲ್ಲಿ ಕಣ್ಣೂ ಮೂಡಿಸುವುದು..!

  [Reply]

 5. Shaila Ramachandra

  ಅಮೃತಸಾಗರದಲ್ಲಿ ಅದ್ವೈತದಂಪತಿಗಳು…… ಕೋಪ ಯೆನ್ನುವುದು ಅವರನ್ನೇ ಬಿಡಲಿಲ್ಲವೆಂದರೆ….. ನಮ್ಮಂತಹ ಹುಲು ಮಾನವರ ಗತಿ???

  [Reply]

  Sri Samsthana Reply:

  ಪರಿಣಾಮವನ್ನು ನೋಡಿ ಕೋಪವು ಒಳಿತೋ ಕೆಡುಕೋ ನಿರ್ಣಯಿಸಬೇಕು.
  ಮಹಾಪುರುಷರಲ್ಲಿ, ಮಹಾಸತಿಯರಲ್ಲಿ ಉಂಟಾದ ಕೋಪಗಳು ಜಗತ್ತಿಗೆ ಒಳಿತನ್ನೇ ಉಂಟುಮಾಡಿವೆ..

  [Reply]

 6. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  ಗುರುಪಾಠ.. ವೇದಾ೦ತ ಸಾರ.. ವಾಸ್ತವ ಪ್ರಪ೦ಚ.. ಕಥೆ.. ಕಾವ್ಯ.. ಭಕ್ತಿ.. ಜ್ಞಾನ.. ಪುರಾಣ.. ಏನಿಲ್ಲವೆ೦ದಿಲ್ಲ ಈ ಐದು ನಿಮಿಷದ ಓದಿನಲಿ..
  .
  ಗುರುವೇ ತಲೆ ಬಾಗುವೇ
  .
  ಗೋವಿನ ನೋವನ್ನು ಕೇಳಲು ಹುತ್ತದಿ೦ದ ನಾವೂ ಎದ್ದುಬರಬೇಕಾಗಿದೆ – ಇಲ್ಲದಿದ್ದರೆ ಅಲ್ಲೆ ಸಮಾಧಿಯಾಗಬಹುದು – ಹಾಲಿನ ಬದುಲು ರಕ್ತ ಸುರಿಯಲು ಶುರುವಾಗಬಹುದು.

  [Reply]

  Sri Samsthana Reply:

  ಒಳಗಿನ ನಾರಾಯಣ ಸಂತೋಷಗೊಂಡರೆ..
  ಹೊರಗಿನ ರಾಘವೇಂದ್ರನಿಗೆ ಸಂದೇಶ ಸಿಕ್ಕಿದರೆ ಬರಹ ಸಾರ್ಥಕ..

  [Reply]

 7. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  ೧. ಬೆಳೆಯುವ ವಯಸಲ್ಲಿ ನೋಡಿರದ ರಕ್ತದಲ್ಲಿ ಸೇರಿರದ, ಗೋವನ್ನು ಹೃದಯಗತ ಮಾಡಿಕೊಳ್ಳುವುದು ಹೇಗೆ?
  .
  ೨. ಶುದ್ಧ ಭಾರತೀಯ ತಳಿಯ ಗೋವಿನ ಹಾಲು ನಿತ್ಯ ಕುಡಿಯುವ ಭಾಗ್ಯ ಎ೦ದು?

  [Reply]

  Sri Samsthana Reply:

  ಗೋವು ನಮ್ಮ ಹೃದಯಗತ, ರಕ್ತಗತ, ಆತ್ಮಗತ, ವಂಶವಾಹಿಗತ…ಎಲ್ಲವೂ ಹೌದು.
  ಆದರೆ ಈಗ, ನಮ್ಮ ಮನೋಗತ, ಬುದ್ಧಿಗತ, ಕ್ರಿಯಾಗತವನ್ನಾಗಿ ಮಾಡಿಕೊಳ್ಳಬೇಕಿದೆ..!

  [Reply]

  Sri Samsthana Reply:

  ನೋವ ತರುವ ಪ್ರಶ್ನೆಯಿದು..

  [Reply]

  ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana Reply:

  Please read this

  http://hareraama.in/media-watch/raamachandraapura-matha-govugalige-bedike/

  [Reply]

  ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana Reply:

  ತಾಯೇ ಕ್ಷಮಿಸು.. ಕ್ಷಮಿಸದೇ ಶಿಕ್ಷಿಸು..
  ತಾಯಿ ತ೦ದೆ ಸಾಧು ತ್ಯಾಗಿ ಇತ್ಯಾದಿ ಪಟ್ಟ ಕೊಟ್ಟು, ಅದೇನೆಲ್ಲಾವನ್ನು ಅದೆಷ್ಟುನ್ನು ನಾಶ ಮಾಡಿದ್ದೇವೆ ಜಗದೊಳು, ಕ್ಷಮಿಸಿದವರಾರ್? ನಾಶವಾಗಿ ಎಲ್ಲಾ ಶಿಕ್ಷೆಗೊಳಪಟ್ಟವರೇ? ಸರ್ವನಾಶವಾಗುವ ಮೊದಲು ಜಾಡ್ಯವನ್ನು ಜಾಡಿಸಿ ಅಟ್ಟಬೇಕು?
  .
  ಭೂಮಿತಾಯೇ, ಗ೦ಗಾಮಾತೆ, ಗೋಮಾತೆ, ಪ್ರಕೃತಿಮಾತೆ, ಜನ್ಮದಾತೆ, ಹಲುನುಣಿಸಿದಾತೆ, ದುರ್ಗಾಮಾತೆ, ತಾಯೇ..
  ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು, ತಾಯೇ ಕ್ಷಮಿಸು +++++******(ಅನ೦ತ)

  [Reply]

 8. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  “ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.”
  ಸತ್ಯ. ಇದು ಎಲ್ಲದಕ್ಕು ಅನ್ವಯ?
  ನಾನಾಗಬೇಕು.. ನಾನವನಾಗಬೇಕು..
  ಭಕ್ತಿಯಿ೦ದ ನೀರು.. ಜ್ಞಾನದಿ೦ದ ಬೆಳಕು.. ಎರಡೂ ಕಣ್ಣಿನ ಕಾ೦ತಿಯೇ ಅಲ್ಲವೇ?

  [Reply]

 9. Prasanna Mavinakuli

  ಹರೇ ರಾಮ

  ಮೊಗೆದಸ್ಟೂ ಕೊಡುತ್ತಲೇ ಇರುವ ಅಕ್ಷಯ ಪಾತ್ರೆ ಯ ಬಗೆಗೆ ಕೇಳಿದ್ದೆ – ಅದರ ಪ್ರತ್ಯಕ್ಷ ದರ್ಶನ ಈಗ. ಪ್ರತಿ ಲೇಖನದಲ್ಲೂ ಪ್ರತಿ ಶಬ್ದದಲ್ಲೂ ಅದೆಷ್ಟು ಅರ್ಥಗಳು/ಸಂದೇಶಗಳು. ಆಧ್ಯಾತ್ಮಿಕ, ಸಾಹಿತ್ಯಕ ಮತ್ತು ಕಾವ್ಯಾತ್ಮಕ ಈ ಮೂರೂ ಕೋನಗಳಿಂದ, ನಿಜವಾಗಲೂ ಅದ್ಬುತ – ನಮ್ಮಂತವರಿಗೆ ಇದನ್ನು ಓದಿ ಜೀರ್ಣಿಸಿಕೊಳ್ಳುವ ಶಕ್ತಿ ಬರಲಿ ಎಂದು ಪ್ರಾರ್ಥನೆ ಬಿಟ್ಟು ಬೇರೇನೂ ಹೇಳುವುದಕ್ಕೆ ತೋಚುತ್ತಿಲ್ಲ.

  ಪ್ರನಾಮಗಳೊಂದಿಗೆ
  ಪ್ರಸನ್ನ.

  [Reply]

  Sri Samsthana Reply:

  ತಿರುಮಲನ ಅಕ್ಷಯಕೃಪೆಗೆ ನಾವು ಪಾತ್ರರಾಗೋಣ..

  [Reply]

 10. sriharsha.jois

  ಹರೇರಾಮ….

  ಕ್ಷೀರಸಾಗರ..
  ಅಲ್ಲಿ ವೈಕುಂಠದ ವೈಭವ..
  ಅದರೊಡೆಯ ಶೇಷಶಾಯಿ ಮಹಾವಿಷ್ನು..
  ಅವನೊಡತಿ ಲಕ್ಷ್ಮಿ…
  ಭೃಗು ಮಹರ್ಷಿ ಅವಿನಯ..
  ಅವನಹಂಕಾರ ಮರ್ದನ..
  ಭೃಗುವರ್ತನೆಯಿಂದ ಲಕ್ಷ್ಮೀ ನಿರ್ಗಮನ…
  ಹಿಂಬಾಲಿಸಿದ ಅವಳೊಡೆಯ…
  ತಿರುಮಲದ ಹುತ್ತದ ವಾಸ..
  ಶ್ರೀನಿವಾಸನ ನಿರ್ನಿದ್ರ-ನಿರಾಹಾರ..
  ಅದತಿಳಿದ ಗೋಮಾತೆ..
  ಹಾಲುಣಿಸಿದ ಅಮ್ಮ…
  ಕೋಪಗೊಂದ ರಾಜ…
  ಗೋವಳನ ಅಪರಾಧ..
  ಅವನ ಪತನ..
  ರಾಜನಿಗೆ ಶಾಪ…
  ತಿರುಪತಿಯ ವೈಭವ…
  ಮುಡಿ ಕೊಡುವುದರ ಹಿನ್ನೆಲೆ..
  ಗೋಮತೆಗಾಗಿ ಮಾದುವ ಕರ್ತವ್ಯ..
  ವೆಂಕಟೇಶನ ತಿರುಪತಿ ವಾಸ..
  ಇದು ತಿರುಪತಿಯ ಕಥೆ…

  ಇಷ್ಟೇ ಸಾಕೆ…?
  ಫಲಶೃತಿ ಬೇಡವೇ..?
  ಇನ್ನೂ ಮುಂದಿದೆ..ಓದಿ ಇನ್ನೂ..
  ಮನನವಾಗಲಿ ಎಲ್ಲವೂ..
  ಮನದಲುಳಿಯಲಿ ಸಕಲವೂ…
  ಮನಸಂಕಲ್ಪಿತವಾಗಲಿ…
  ಗೋಮಾತೆ ಬೇಕು ನಮಗೆ..
  ಅದೇ ನಮ್ಮ ಉಳಿವು

  [Reply]

  Sri Samsthana Reply:

  ಹಸುವಿದ್ದಲ್ಲಿ ಹರ್ಷ…!

  [Reply]

 11. Sathya Bhat

  ||ಹರೇ ರಾಮ||
  ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!
  ಅದರೆ ಆ ಮಾತೃಹೃದಯದ ಹಸಿವು ತಿಳಿವವರು ಯಾರು ಇಲ್ಲವೇ?
  ಅಥವಾ ಅ ತಾಯಿಗೆ ಹಸಿವು ಅಗುವುದೇ ಇಲ್ಲವೇ?

  [Reply]

  Sri Samsthana Reply:

  ಉಂಡು ಹೊಟ್ಟೆ ತುಂಬುವುದು ಮಕ್ಕಳಿಗೆ..
  ಉಣುವ ಮಕ್ಕಳನು ಕಂಡು ಹೊಟ್ಟೆ ತುಂಬುವುದು ತಾಯಿಗೆ..!

  [Reply]

 12. Vishwa M S Maruthipura

  ಗೋಮಾತೆಯ ರಕ್ಷಣೆಗೆ ರಕ್ತವೇ ಏನು ,ಜೀವವನ್ನೇ ಕೊಡುವೆವು ಗೋ ರಕ್ಷಣೆಯ ಹೋರಾಟದಲ್ಲಿ ಗುರುಗಳ ಜೊತೆಗೆ ನಾವೆಂದೂ ಇದ್ದೇವೆ ಗೋ ಮಾತಾಕಿ ….ಜೈ ….!

  [Reply]

  Sri Samsthana Reply:

  ವಿಶ್ವನ ಘೋಷಣೆಗೆ ವಿಶ್ವವೇ ದನಿಗೂಡಿಸಲಿ..!

  [Reply]

 13. nandaja haregoppa

  ಹರೇ ರಾಮ

  ಓದ್ತಾ ಓದ್ತಾ

  ಆ ಕಾಲಕ್ಕೆ ಎಳೆದುಕೊಂಡು ಹೋಗಿತ್ತು ಮನಸು ,ಆದರೆ ಕೊನೆಯ ಮೂರು ಸಂದೇಶಗಳು

  ಬೆಚ್ಚಿ ಬೀಳಿಸಿದವು, ಹೇ ಶ್ರೀನಿವಾಸ ಬೇಗ ಧರೆಗಿಳಿದು ಬಾ

  [Reply]

  Sri Samsthana Reply:

  ಅಕ್ಕರೆಯ ಕರೆಗೆ ಓಗೊಡದಿರುವನೇ ಆಪದ್ಬಂಧು..?

  [Reply]

 14. seetharama bhat

  Hareraam

  Shrinivasa nammalli nelesali
  namminda Shri karya nadesali

  [Reply]

  Sri Samsthana Reply:

  ನೆಮ್ಮದಿಯ ದಾರಿಯದೊಂದೇ..
  ಶ್ರೀನಿವಾಸನನ್ನು ನಮ್ಮೊಳಗಿರಿಸಿಕೊಳ್ಳುವುದು..!

  [Reply]

 15. shobha lakshmi

  shrinivasa neene paliso…………

  [Reply]

 16. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  ಸತ್ಯವೆ೦ಬುದದೆಲ್ಲಿ? ನಿನ್ನ೦ತರ೦ಗದೊಳೊ |
  ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
  ಯುಕ್ತಿಯಿ೦ದೊ೦ದನೊ೦ದಕೆ ತೊಡಿಸಿ ಸರಿನೋಡೆ |
  ತತ್ತ್ವದರ್ಶನವಹುದು – ಮ೦ಕುತಿಮ್ಮ ||

  [Reply]

 17. sriharsha.jois

  ಅದು ಎನ್ನೋಣವೇ.?
  ಅವಳು ಎನ್ನೋಣವೇ.?
  ಅವರು ಎನ್ನೋಣವೇ..?
  ಪಶು ಎನ್ನೋಣವೇ..?
  ಮಾತೆ ಎನ್ನೋಣವೇ..?
  ಜೀವ ಎನ್ನೋಣವೇ..
  ದೇವನೆನ್ನೋಣವೇ..?
  ಚಲಿಸುವ ದೇವಾಲಯ ಎನ್ನೋಣವೇ..?

  ಏನೆಂದು ಕರೆದರೂ …….
  ಅವಳು ಅವಳೇ….!

  [Reply]

  Sri Samsthana Reply:

  ಏನೂ ಕರೆಯದಿದ್ದರೂ ಅವಳು ಅವಳೇ..!

  [Reply]

 18. ಜಗದೀಶ್ B R

  ಲೇಖನ ಬಣ್ಣಿಸಲಸದಳ!!
  ಈ ಲೇಖನವನ್ನೋದಿ
  ಕಂಗಳು ಸಾರ್ಥಕವಾಯಿತು,
  ಮನಸ್ಸು ಪ್ರಸನ್ನವಾಯಿತು,
  ಬುದ್ದಿ ಶುದ್ಧವಾಯಿತು,
  ಜೀವನ ಪಾವನವಾಯಿತು.
  ಸುಂದರ ಬರಹದ ಸಾಕಾರಮೂರ್ತಿಗೆ ಸಾಷ್ಠಾಂಗ ನಮಸ್ಕಾರಗಳು.
  ಗೋ ವಿಂದ ಗೋವಿಂದ…

  [Reply]

  Sri Samsthana Reply:

  ಸಹೃದಯ ಹೃದಯವನ್ನು ಸೇರಿ ಲೇಖನ ಸಾರ್ಥಕವಾಯಿತು..

  [Reply]

 19. ಜಗದೀಶ್ B R

  ಓಹ್! ಎಂತಹ ಸುಂದರ ಹೆಸರು ‘ಶ್ರೀನಿವಾಸ’!! ಎಷ್ಟೊಂದು ಅರ್ಥಪೂರ್ಣ. ಈ ಹೆಸರನ್ನಿಟ್ಟರೆ ಕರೆಯುವವರು ಪೂರ್ಣ ಹೆಸರು ಕರೆಯದೆ ಶೀನು, ಶೀನ, ಶೀನಪ್ಪ ಅಂತೆಲ್ಲ ಕರೆದು ಹೆಸರಿನ ಸೌಂದರ್ಯವನ್ನೇ ಹಾಳು ಮಾಡುತ್ತಾರೆ. ಕರೆಸಿಕೊಳ್ಳುವವರಿಗೂ ಮುಜುಗರ. ಈಗೀಗ ಮಕ್ಕಳಿಗೆ ಇಂತ ಅರ್ಥಪೂರ್ಣವಾದ ಹೆಸರನ್ನಿಡುವ ಬದಲು ಡಿಫರೆಂಟಾಗಿರ್ಬೇಕು ಅಂತ ಅರ್ಥವಿಲ್ಲದ, ಹೇಸಿಗೆ ಎನಿಸುವ ಹೆಸರುಗಳನ್ನೆಲ್ಲಾ ಇಡುತ್ತಿದ್ದಾರೆ. ಇಂತಹ ಅಂಟುಜಾಡ್ಯ ಬದಲಾಗಬೇಕಾಗಿದೆ.
  ಹರೇರಾಮ

  [Reply]

  Sri Samsthana Reply:

  ದೇವರು ಕೊಟ್ಟ ಶುದ್ಧ ಗೋವನ್ನು ಸಂಕರಗೊಳಿಸುವ,
  ಗೋವು ಕೊಡುವ ಶುದ್ಧ ಹಾಲಿಗೆ ನೀರು ಸೇರಿಸುವ ಮನುಜೋತ್ತಮರಿಗೆ ಯಾವುದು ತಾನೇ ಅಸಾಧ್ಯ..?

  [Reply]

 20. Anuradha Parvathi

  ಗೋವಿನ ಈ ಸ್ಥಿತಿಗೆ ನಾವೂ ಹೊಣೆಗಾರರು. ಗುರುಗಳು ಎಚ್ಚರಿಸದಿದ್ದರೆ ನಾವು ಗೋವುಗಳಿಗೆ ಈಗಿನ ಪ್ರೀತಿ, ಕಾಳಜಿ ತೋರಿಸುತ್ತಿರಲಿಲ್ಲ. ಈ ಪಾಪವನ್ನು ಕೊಂಚ ಕಮ್ಮಿ ಮಾಡಿದ್ದಕ್ಕೆ ಗುರುಗಳಿಗೆ ನಾನು ಚಿರರುಣಿ.

  [Reply]

  Sri Samsthana Reply:

  ಹಂತಕರಿಗೂ ಹಾಲು ಕೊಡುವ ಗೋಮಾತೆಗೆ
  ನಾವೆಲ್ಲರೂ ಚಿರಋಣಿಗಳಾಗಿರಬೇಕಲ್ಲವೇ..?

  [Reply]

 21. Sri Samsthana

  ಈ ವರ್ಣನೆಗಳು ಮೂಲ ರಾಮಾಯಣದಲ್ಲಿಲ್ಲ ಲತಾ..
  ಇದ್ದರೆ ಮೂಲ ನಾರಾಯಣನಲ್ಲಿರಬೇಕು..
  ಇಲ್ಲಿಗೆ ಬಂದಿದ್ದರೆ ಅಲ್ಲಿಂದಲೇ ಬಂದಿರಬೇಕು..!

  [Reply]

  ಜಗದೀಶ್ B R Reply:

  ಓಹ್! ವರ್ಣನಾತೀತ ಗುರುವಾಣಿ!!
  ಹರೇರಾಮ

  [Reply]

 22. ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana

  Shri Gurubyo Nahama
  .
  Frankly speaking, after the works of Ramachandraputa Mutt, I started understanding the importance and difference of Indian Breed cows and our culture. I don’t get great feelings for foreign breed cows OR cross breed cows, infact feel sorry for them.
  .
  Definitely, I feel happy when I see any Indian breed cows, feel like see them – Indian breed cows are real, they respond, they are active, they love, and YES they are close to God; we also get close to God. The Milk of Indian breed cows are thousands times better, no testing is required, we just need to feel the difference when we drink it, and see its impact – instantly and within 4-10 hours. Again, all these are may be the impact of works by Mutt. How to make it come into play in daily life so that it becomes part of us? What the current generation, new, next generation should do in order to preserve+follow+practice Indian breed cows and culture?

  [Reply]

 23. ravi n

  ಪ್ರತೀಬಾರಿ ಅಹಂಕಾರ ಗರಿಗೆದರಿದಾಗ…. ಸಮಸ್ಯೆಯೊಂದು ಹುಟ್ಟುಕೊಂಡರೆ… ಅದರ ಅವಸಾನದಲ್ಲಿ ಜೀವಕೊಂದು ಹೊಸ ಹುಟ್ಟು ದೊರೆಯುತ್ತದೆ…..
  ಜಗದೊಡೆಯನ ಕರುಣೆಯು ಅತೀವ… ಜಗದುದ್ಧಾರಕ್ಕಾಗಿ ಆತ ತನ್ನನ್ನೇ ಪರೀಕ್ಷೆಗೆ ಒಡ್ಡಿಕೊಳ್ಳುವ ಪರಿ ಮನನೀಯ…
  ಪ್ರತೀಬಾರಿಯೂ ಆತ ಭಕ್ತರಿಗಾಗಿ ಅವತರಿಸುತ್ತಾನೆ… ಆದರೂ ಭಕ್ತರು ಅವನನ್ನು ಗುರುತಿಸುವುದಿಲ್ಲ…..
  ಇದು ಪೃಥ್ವಿಯ ದೌರ್ಭಾಗ್ಯವಲ್ಲವೇ?…..
  ದೇಶ ಕಾಲಗಳಾವುದೆ ಇರಲಿ… ಕರ್ತವ್ಯದ ಪರಿ ಎನಿತೇ ಇರಲಿ… ನಿನ್ನ ಕರುಣೆ ಅಪಾರ.
  ಈ ಚಂಚಲ ಮನ ಹರಿಯುವೆಡೆಯಲ್ಲೆಲ್ಲಾ… ನಿನ್ನ ಕರುಣೆಯ ಪದಕಮಲಗಳಿರಲಿ ಎನ್ನುವುದೊಂದೇ ಬೇಡಿಕೆ.

  [Reply]

  Raghavendra Narayana Reply:

  Read this comment properly now. Very Beautiful.
  Requesting “Ravi N” to write more in Hareraama.

  [Reply]

 24. shreemati Hegde

  ||ಹರೇ ರಾಮ॥

  ನನ್ನ ಇಡೀ ಜೇವನವನ್ನು ಗೋ ಮಾತೆಯ ಸೇವೆಗಾಗಿ ಮುಡಿಪಾಗಿಡಲು ಸಿದ್ಧನಿರುವೆ ತಂದೆ……
  ಈ ಗೋ ಸಂರಕ್ಶಣೆ ಎಂಬ ಮಹತ್ಕಾರ್ಯ್ದಲ್ಲಿ ನನ್ನ ಜೀವವನ್ನೆ ಕೊಡಲು ಸಿದ್ಧ ಇದ್ದೆ ಗುರುಗಳೆ…….
  ಗೋ ಮಾತಾಕಿ ಜೈ ………………………………….
  ಈ ಘೋಷಣೆ ಜಗತ್ತಿನಾದ್ಯಂತ ಮೊಳಗಲಿ…………………….
  ಎಲ್ಲರೂ ಸೇರಿ ಗೋಮಾತೆಯ, ಗುರುಗಳ ಕರಣಾ ಪ್ರೀತಿಗೆ ಪಾತ್ರರಾಗೋಣ……………

  ॥ವಂದೇ ಗೋ ಮಾತರಂ॥
  ॥ವಂದೇ ಗೋ ಮಾತರಂ॥
  ॥ವಂದೇ ಗೋ ಮಾತರಂ॥
  ॥ವಂದೇ ಗೋ ಮಾತರಂ॥ ………………..ಇದು ನಮ್ಮೆಲ್ಲರ ಪ್ರತಿ ಉಸಿರಿನ ಮಂತ್ರವಾಗಲಿ…..

  [Reply]

Leave a Reply

Highslide for Wordpress Plugin