|| ಹರೇರಾಮ ||

ಕ್ಷೀರ ಸಾಗರ ತರಂಗ ಶೀಕರಾಸಾರ ತಾರಕಿತ ಚಾರುಮೂರ್ತಯೇ |
ಭೋಗಿ ಭೋಗ ಶಯನೀಯ ಶಾಯಿನೇ ಮಾಧವಾಯ ಮಧುವಿದ್ವಿಷೇ ನಮಃ ||

ಅಮೃತಸಾಗರದಲ್ಲಿ ಅದ್ವೈತದಂಪತಿಗಳು..!

ಹಾಲು…..ಹಾಲು……ಹಾಲು…!
ಎಲ್ಲೆಲ್ಲೂ ಹಾಲು..!
ಎಷ್ಟು ದೂರ ನೋಡಿದರೂ ಹಾಲು..!
ಎಷ್ಟು ಆಳಕ್ಕಿಳಿದರೂ ಹಾಲು…!
ಹಾಲೇ ಹಾಲು…!

ಕಣ್ದಣಿಯುವಷ್ಟು ವಿಶಾಲ..
ಕಣ್ತಣಿಯುವಂತೆ ಶೀತಲ…!

ಅದುವೇ ಕ್ಷೀರಸಾಗರ..!

ಅಗಾಧ ಅನಂತ ಅಮೃತ ಸಾಗರದ ಮಧ್ಯದಲ್ಲಿ ..ಆಶ್ಚರ್ಯ…ಆಶ್ಚರ್ಯ…!
ಆದಿಶೇಷ…ವಿಷಸರ್ಪಗಳ ರಾಜ…

ಅದೋ ಅಲ್ಲಿ…!
ಅಮೃತಸಾಗರದ ಶಯನಮಂದಿರದಲ್ಲಿ…
ವಿಷವಿಭೂಷಿತನಾದ ಆದಿಶೇಷನ ಪರ್ಯಂಕದಲ್ಲಿ ..
ಅಮೃತ- ವಿಷಗಳನ್ನು ಮೀರಿ ನಿಂತ ಮಹಾಪ್ರಭು…ಮಧುಮರ್ದನ..ಮಾಧವ…ಮಾರಮಣ..!

ಕರುಣಾಸಾಗರನನ್ನು ಸೇರುವ ಅಮೃತಸಾಗರದ ತವಕವೇ ತರಂಗಗಳಾಗಿ –
ಮತ್ತೆ ಮತ್ತೆ ಮೇಲೆದ್ದು ಮುಂದೊತ್ತಿ ಶೇಷಶರೀರವನ್ನು ಮುತ್ತಿಟ್ಟರೆ..
ಅಲ್ಲಿಂದ ಚಿಮ್ಮಿದ ದುಗ್ಧ ಬಿಂದುಗಳು ತುಂತುರು ಮಳೆಯಾಗಿ ಮಾರಮಣನ ಮಂಗಳ ಶರೀರವನ್ನಲಂಕರಿಸುತ್ತಿದ್ದವು…!
ನೀಲಶರೀರದಲ್ಲಿ ಪಡಿಮೂಡಿದ ಸ್ವರ್ಣವರ್ಣದ ಹಾಲಹನಿಗಳು
ನೀಲಾಕಾಶದಲ್ಲಿ ಮೂಡಿ ಮಿನುಗುವ ಕೋಟಿತಾರೆಗಳಂತೆ ಅತಿಶಯವಾಗಿ ಶೋಭಿಸುತ್ತಿದ್ದವು…

ಸುಧಾಸಿಂಧುವಿನಲ್ಲಿ ಸಂಭವಿಸಿದವಳು…
ದಯಾಸಿಂಧುವಿನ ಕೈ ಹಿಡಿದವಳು..
ನಂಬಿದವರಿಗೆ,
ಭವಸಿಂಧುವನ್ನು ದಾಟಿಸುವವಳು..
ಸಂಪತ್ಸಿಂಧುವನ್ನೇ ನೀಡುವವಳು…
ಮಂಗಳ ದೇವತೆ ಮಹಾಲಕ್ಷ್ಮಿ..!!

ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…!
ಶಾಂತಸಾಗರದಲ್ಲಿ ಒಮ್ಮಿಂದೊಮ್ಮೆಲೇ ಬೀಸುವ ಚಂಡಮಾರುತದಂತೆ ಭೃಗುಮುನಿಗಳ ಪ್ರವೇಶವಾಯಿತಲ್ಲಿ..

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ,
ಚಿನ್ನದಾತುರಕಿಂತ ಹೆಣ್ಣು- ಗಂಡೊಲವು |
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ,
ತಿನ್ನುವುದದಾತ್ಮವನೆ – ಮಂಕುತಿಮ್ಮ |
|

ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ಚಪಲವಿಲ್ಲದೇ ಹೋಗಿದ್ದರೆ..
ಈ ಜಗತ್ತಿನಲ್ಲಿ ಕ್ಲೇಶ- ಕಲಹಗಳೇ ಇರುತ್ತಿರಲಿಲ್ಲವೇನೋ…!!

ಭಾವದುಂಬಿ ಚಿನ್ಮಯನ ಚರಣದಲ್ಲಿ ತನ್ಮಯರಾದ ವೈಕುಂಠವಾಸಿಗಳು…
ಜಗದಗಲ ತೆರೆದ ತನ್ನ ಕಮಲ ನೇತ್ರಗಳಿಂದ ಅನುಗ್ರಹದ ಅಮೃತ ವರ್ಷವನ್ನೇ ಅವರೆಲ್ಲರ ಮೇಲೆ ಸುರಿಸುವ ವೈಕುಂಠದೊಡೆಯ…!
ಯಾರೂ .. ಮತ್ಯಾರನ್ನೂ ಗಮನಿಸುವ ವಾತಾವರಣವೇ ಅಲ್ಲವದು..!

ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.
ಎರಡೂ ಭಾವಗಳಿಂದ ಭಿನ್ನನಾಗಿ ನಿಂತ ಭೃಗುವಿಗೆ ತಾನೇ ಬೇರೆಯೆಂದೆನಿಸಿತು.
ಮಹಾವಿಷ್ಣುವೇ ತನ್ನನ್ನು ಉಪೇಕ್ಷಿಸಿದಂತೆನಿಸಿತು.

ವಿವೇಕದ ಕಣ್ಮುಚ್ಚಿ ಅಹಂಕಾರದ ಕಣ್ಣು ತೆರೆದಾಗ ಆಗುವದೇ ಹೀಗೆ..
ಮಸ್ತಕವೆಂಬ ಉತ್ತಮಾಂಗದಲ್ಲಿರಬೇಕಾದ ದೃಷ್ಟಿ ಪತನಗೊಂಡು ಪಾದಕ್ಕಿಳಿದರೆ ಮತ್ತೇನಾಗಬೇಕು..?

ಮನೆಯವರು ಮಾತನಾಡಿಸಲಿಲ್ಲವೆಂದು ಮನೆಯ ಯಜಮಾನನ ಎದೆಗೊದೆಯುವ ಅತಿಥಿ..
ಎದೆಗೊದೆಯುವ ಪಾದಗಳನ್ನೇ ಒತ್ತುವ, ಕಣ್ಣಿಗೊತ್ತಿಕೊಳ್ಳುವ ಯಜಮಾನ..

ವೈಕುಂಠದಲ್ಲಿ ನಡೆದಿದ್ದು ಹಾಗೆ…!!
ಶ್ರೀ ವತ್ಸ – ಕೌಸ್ತುಭಗಳಿಂದ ವಿಭೂಷಿತವಾದ ‘ಶ್ರೀ’-ನಿವಾಸವಾದ ವಿಷ್ಣುವಿನ ವಕ್ಷಸ್ಠಲವು ಭೃಗುವಿನ ಪಾದಗಳಿಂದ ಆಕ್ರಾಂತವಾಯಿತು.
ಭಗವತ್ಕರಕಮಲಗಳು ಸ್ಪರ್ಶಮಾತ್ರದಿಂದಲೇ ಭೃಗುವಿನ ಅಹಂಕಾರವನ್ನೇನೋ ಕೊನೆಗಾಣಿಸಿದವು..ಆದರೆ,
ಮಳೆಮುಗಿದರೂ ನೆರೆ ಇಳಿಯದಂತೆ ಭೃಗುವಿನ ಅವಿನಯದ ಪರಿಣಾಮಗಳು ಮುಂದುವರೆದವು..!
ಕ್ಷಣಮಾತ್ರದ ಆವೇಶದಲ್ಲಿ ನಡೆಯುವ ಘಟನೆಗಳ ಪರಿಣಾಮ ಯುಗ ಯುಗಗಳ ಕಾಲ ನಿಂತುಬಿಡಬಹುದಲ್ಲವೇ?

ತನ್ನ ಪರಮ ಪ್ರೇಮದ ನೆಲೆಯಾದ ಪ್ರಭುವಿನ ವಕ್ಷಸ್ಥಲವು ಭೃಗುವಿನ ಪಾದಾಘಾತಕ್ಕೊಳಗಾದುದನ್ನು ಕಂಡು ಖತಿಗೊಂಡ ಮಹಾಲಕ್ಷ್ಮೀ
ಪತಿಗೃಹವನ್ನೂ..ಪಿತೃಗೃಹವನ್ನೂ ತ್ಯಜಿಸಿ ಧರೆಯಲ್ಲಿ ಮರೆಯಾಗಿ ಹೋದಳು…!

ಗೃಹಿಣೀ ಗೃಹಮುಚ್ಯತೇ…|

ಗೃಹವು ಗೃಹವಲ್ಲ.. ಗೃಹಿಣಿಯೇ ನಿಜವಾದ ಗೃಹ..!!

ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ…?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖವು ಅರ್ಧವಾಗುವದು.. ಸುಖವು ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?ಸರಸವೆಲ್ಲಿ..?
ಲಕ್ಷ್ಮಿಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು…!!
ಅರಸಿಯನ್ನರಸುತ್ತಾ, ಸ್ಮರಿಸುತ್ತಾ, ಪರವೈಕುಂಠವನ್ನೇ ಪರಿತ್ಯಜಿಸಿ ಧರೆಗಿಳಿದನು ಸಿರಿಯರಸ..!

ಅಮೃತಸಾಗರದ ಜೊತೆಗೆ ಆಹಾರವನ್ನೂ, ಶೇಷಶಯನನ ಜೊತೆಗೆ ನಿದ್ರೆಯನ್ನೂ ಪರಿತ್ಯಜಿಸಿ,
ವೆಂಕಟಾದ್ರಿಯ ಹುತ್ತವೊಂದರಲ್ಲಿ ಹುದುಗಿ ತೀವ್ರತರ ತಪ:ಶ್ಚರ್ಯೆಯಲ್ಲಿ ಮಗ್ನನಾದನಾತ!
ಅಂತರ್ಭೂಮಿಯಲ್ಲಿ ಅಂತರ್ಮುಖನಾಗಿ ಕುಳಿತಿದ್ದ ಶ್ರೀನಿವಾಸನಿಗೆ ಜಗದ ಪರಿವೆಯೇ ಇರದಾಯಿತು.
ಅತ್ತ ಜಗತ್ತಿಗೂ ಜಗನ್ನಿಯಾಮಕನ ಇರವೇ ತಿಳಿಯದಂತಾಯಿತು.
ಅದೆಷ್ಟೋ ಕಾಲ ನಿರ್ನಿದ್ರನಾಗಿ, ನಿರಾಹಾರನಾಗಿ ಕುಳಿತಿದ್ದ ಹರಿಯ ಹಸಿವು –
ಭೂಲೋಕವಾಸಿಗಳ್ಯಾರಿಗೂ ಅರಿವಿಲ್ಲದಾಯಿತು..

ಹ್ಞಾ..! ಯಾರಿಗೂ ಅರಿವಾಗಲಿಲ್ಲವೆನ್ನುವಂತಿಲ್ಲ..!
ಕಣ್ಣರಿಯದಿದ್ದರೂ ಕರುಳರಿಯುವುದೆನ್ನುವರಲ್ಲವೇ..?
ವೆಂಕಟಾದ್ರಿಯ ವಲ್ಮೀಕಗರ್ಭದಲ್ಲಿ ಅಂತರ್ಹಿತನಾಗಿ ಕುಳಿತುಕೊಂಡಿದ್ದ –
ಶ್ರೀನಿವಾಸನ ಹಸಿವು ಚೋಳರಾಜನ ಅರಮನೆಯ ಒಡಲೊಂದರಲ್ಲಿ ಪ್ರತಿಧ್ವನಿಸತೊಡಗಿತ್ತು..!

ಅದು ಎನ್ನೋಣವೇ.?
ಅವಳು ಎನ್ನೋಣವೇ.?
ಅವರು ಎನ್ನೋಣವೇ..?
ಪಶು ಎನ್ನೋಣವೇ..?
ಮಾತೆ ಎನ್ನೋಣವೇ..?
ಜೀವ ಎನ್ನೋಣವೇ..
ದೇವನೆನ್ನೋಣವೇ..?
ಚಲಿಸುವ ದೇವಾಲಯ ಎನ್ನೋಣವೇ..?

ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!


ಚೋಳರಾಜನ ಗೋಶಾಲೆಯನ್ನಲಂಕರಿಸಿದ್ದ ಆ ಗೋಮಾತೆ ತನ್ನ ಕರುಳ ಕಣ್ಣಿನಿಂದಲೇ ಕಂಡಳು-
ಅನ್ನ-ಪಾನಗಳಿಂದ ವಿರಹಿತನಾಗಿದ್ದ ವಿಶ್ವಾಧಾರ ಮೂರ್ತಿಯನ್ನು..!

ಹಟ್ಟಿಯಲ್ಲಿ ಅಂಬೆಗರೆಯುವ ತನ್ನ ಎಳೆಗರುವನ್ನೇ ಮರೆತು ವೆಂಕಟಾದ್ರಿಯ ಹುತ್ತದೆಡೆಗೆ ಲಗುಬಗೆಯಿಂದ ಧಾವಿಸಿದಳಾಕೆ..!
ವಿಶ್ವಜನಕನನ್ನೇ ತನ್ನ ಕರುವಾಗಿಸಿಕೊಂಡು ವಿಶ್ವದ ವಾತ್ಸಲ್ಯವನ್ನೆಲ್ಲಾ ತನ್ನ ಜೀವರಸವಾದ ಹಾಲಿನಲ್ಲಿ ತುಂಬಿ ಹರಿಸಿದಳು ವಿಶ್ವಂಭರನಿಗಾಗಿ.
ಹಸುವಿದ್ದಲ್ಲಿ ಹಸಿವಿಲ್ಲ..
ಅಸುವುಳಿಸುವಳು..
ಕಸು ತುಂಬುವಳು..
ಹಸಿವಿಂಗಿಸುವಳು…
ಆ ವಿಶ್ವಜನನಿ…!

ಸಮಯ ಸರಿಯಿತು…

“ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||” – ಭಗವದ್ಗೀತೆ

“ಅಗ್ನಿಸ್ವರೂಪವನ್ನು ತಾಳಿ ನಾನು ಜೀವಿಗಳ ದೇಹವನ್ನಾಶ್ರಯಿಸುವೆನು.
ಪ್ರಾಣಾಪಾನಗಳ ಜೊತೆಗೂಡಿ ನಾಲ್ಕು ಬಗೆಯ ಆಹಾರಗಳನ್ನು ನಾನೇ ಜೀರ್ಣಗೊಳಿಸುವೆನು”

ಎನ್ನುವ ಸ್ವಾಮಿಯ ಒಡಲನ್ನು ತಂಪಾಗಿಡಲು ಪ್ರತಿನಿತ್ಯವೂ ವೆಂಕಟಾದ್ರಿಗೆ ಹೋಗಿ ಹಾಲಿಳಿಸತೊಡಗಿದಳಾ ಗೋಮಾತೆ!

ಅಸಾಮಾನ್ಯ ಸಂಗತಿಗಳು ಸಾಮಾನ್ಯರಿಗೆ ಹೇಗೆ ತಾನೆ ಅರ್ಥವಾಗಬೇಕು?
ಅರಮನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..
ಯಾವಾಗಲೂ ಸಮೃದ್ದವಾಗಿ ಹಾಲುಗರೆಯುತ್ತಿದ್ದ ಹಸುವೇಕೆ ಇದ್ದಕ್ಕಿದ್ದಂತೆ ಬರಿದಾಯಿತು..!?
ಕಾರಣ ತಿಳಿಯಲು ಗೋಪಾಲಕನಿಗೆ ರಾಜಾಜ್ಞೆಯಾಯಿತು.
ಮರುದಿನ ಹಸುವನ್ನು ಹಿಂಬಾಲಿಸಿದನಾತ..
ವೆಂಕಟಗಿರಿಯ ಹುತ್ತವೊಂದರ ಮೇಲೆ ಹಸುವು ಹಾಲಿಳಿಸುವುದನ್ನು ಪೊದೆಯ ಮರೆಯಲ್ಲಿ ನಿಂತು ಕಂಡ
ಗೋಪಾಲಕನ ಕೋಪ ನೆತ್ತಿಗೇರಿತು.. ಪ್ರಜ್ಞೆ ಪಾತಾಳಕ್ಕಿಳಿಯಿತು…!
ಕಣ್ಣು ಕೆಂಪಾಯಿತು ..ಮನಸ್ಸು ಕಪ್ಪಾಯಿತು..!

ಕ್ರೋಧಾತ್ ಭವತಿ ಸಂಮೋಹ: ಸಂಮೋಹಾತ್ ಸ್ಮೃತಿ ವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಢಿನಾಶ: ಬುದ್ಡಿನಾಶಾತ್ ಪ್ರಣಶ್ಯತಿ || – ಭಗವದ್ಗೀತೆ

ಕ್ರೋಧದಿಂದ ಸಂಮೋಹ;
ಸಂಮೋಹದಿಂದ ಸ್ಮೃತಿ ಭ್ರಂಶ ;
ಸ್ಮೃತಿಭ್ರಂಶದಿಂದ ಬುದ್ಢಿ ನಾಶ;
ಬುದ್ಢಿನಾಶದಿಂದ ಸರ್ವ ನಾಶ..

ಪ್ರತ್ಯಕ್ಷ ರಾಕ್ಷಸನಂತೆ ಕೈಯಲ್ಲಿ ಕೊಡಲಿ ಹಿಡಿದು ಆ ಗೋವಿನೆಡೆಗೆ ಧಾವಿಸಿದನಾತ..!
ಆದರೆ ವಾತ್ಸಲ್ಯ – ತನ್ಮಯತೆಗಳ ಪ್ರತಿಮೂರ್ತಿಯಾಗಿದ್ದ ಗೋವು ಶ್ರೀನಿವಾಸನಲ್ಲಿಟ್ಟ ತನ್ನ ಚಿತ್ತವನ್ನು ಕದಲಿಸಲಿಲ್ಲ..
ಆ ಸ್ಠಳವನ್ನು ಬಿಟ್ಟೋಡಲಿಲ್ಲ.. ಹಾಲ್ಗರೆಯುವುದನ್ನು ನಿಲ್ಲಿಸಲಿಲ್ಲ.!!!

ಅದೇನು ದುರ್ಬುದ್ಢಿಯೋ, ದುರ್ದೈವವೋ…
ಆ ಗೋವಳನು ಕೊಳಲು ಹಿಡಿಯಬೇಕಾದ ಕೈಯಲ್ಲಿ ಕೊಡಲಿ ಹಿಡಿದು ತನ್ನ ನೆತ್ತಿಯೆತ್ತರಕ್ಕೆತ್ತಿ ಸರ್ವಶಕ್ತಿಯಿಂದ ಗೋವಿನ ಕೊರಳ ಮೇಲೆ ಪ್ರಯೋಗಿಸಿದನು.. ಧರ್ಮ ದಯೆಗಳನ್ನು ಮರೆತು..
ಆ ಕ್ಷಣದಲ್ಲಿಯೂ ಬಾರದಿದ್ದರೆ ದೇವರು ದೇವರೆನಿಸುವುದಾದರೂ ಹೇಗೆ..?

ಪ್ರಹ್ಲಾದನ ಕಷ್ಟಕ್ಕೆ ಕರಗಿ ಕಂಬವನ್ನೊಡೆದು ಬಂದ ನರಸಿಂಹನಂತೆ…
ಘೋರ ಗೋಹತ್ಯೆಯನ್ನು ಸಹಿಸಲಾರದೆ ಹುತ್ತವನ್ನೊಡೆದು ಮೇಲೆದ್ದನಾ ಗೋವಿಂದ..!!

ಬ್ರಹ್ಮಾಂಡವೇ ಬೆಚ್ಚಿ ಬೆರಗಾಗಿ ನೋಡ ನೋಡುತ್ತಿದ್ದಂತೆ, ಗೋವಿನ ಕೊರಳ ಮೇಲೆ ಸಿಡಿಲಿನಂತೆರಗಿದ
ಕೊಡಲಿಯ ಹೊಡೆತವನ್ನು ತನ್ನ ಸಿರಿಮುಡಿಯಿಂದ ಪರಿಗ್ರಹಿಸಿದನು ಶ್ರೀನಿವಾಸ..

ಒಮ್ಮೊಮ್ಮೆ ನವಿಲುಗರಿಗಳಿಂದ,
ಒಮ್ಮೊಮ್ಮೆ ರತ್ನಮುಕುಟದಿಂದ,
ಒಮ್ಮೊಮ್ಮೆ ಸುಕೋಮಲ ಸುಮಗಳಿಂದ ವಿಭೂಷಿತವಾಗುವ ಆ ವರಶಿರದ ಮೇಲಾಯಿತು ಕುಠಾರ ಪ್ರಹಾರ!!

ಕ್ಷೀರಸಾಗರದೊಡೆಯನ ಶಿರವೊಡೆದು,ಚಿಲುಮೆಯಂತೆ ಚಿಮ್ಮಿದ ರಕ್ತಧಾರೆಯಿಂದ ಗೋಮಾತೆಗಾಯಿತು ಅಭಿಷೇಕ..
ಹಾಲಿತ್ತವಳಿಗೆ ರಕ್ತವಿತ್ತು ದೇವತ್ವವನ್ನು ಮೆರೆದನು ದೇವ ದೇವ..

ಆದರೆ ಗೋಪಾಲಕ..?
ಸೂರ್ಯೋದಯವಾದ ಮೇಲೆ ಕತ್ತಲೆ ಬದುಕುವುದುಂಟೆ..?
ಮಮತೆಯ ಮಾತೆಯ ಕೊರಳು ಕೊಯ್ಯುವ ಕ್ರೂರ ಕೃತ್ಯ ಕಂಡು ಖತಿಗೊಂಡು ನಿಂತ ಶ್ರೀನಿವಾಸನೆಂಬ ಪ್ರಳಯಾಗ್ನಿಯಲ್ಲಿ ಆ ಗೋವಳನು ಮಿಡತೆಯಾಗಿ ಹೋದ…!
ಯಾವ ಅಶುಭವನ್ನು ಗೋವಿಗೆ ಮಾಡಹೊರಟನೋ ಅದು ಆತನಿಗೇ ಆಯಿತು.

‘ರಾಜಾ ರಾಷ್ಟ್ರಗತಂ ಪಾಪಂ..’

ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪಕ್ಕೆ ರಾಜನೂ ಹೊಣೆಗಾರನಾಗಬೇಕಾಗುತ್ತದೆ.
ಗೋಹತ್ಯೆಗೆಳಸಿದ ಗೋಪಾಲಕನ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು.
“ರಾಕ್ಷಸ ಸದೃಶನಾದ ಗೋಪಾಲಕನ ಸ್ವಾಮಿಯಾದ ನೀನು ರಾಕ್ಷಸನೇ ಆಗು” ಎಂದು ಶ್ರೀನಿವಾಸನು ರಾಜನನ್ನು ಶಪಿಸಿದನು..

ಆದರೆ ಈ ಘಟನಾವಳಿಗಳಿಂದ ಭೂಲೋಕಕ್ಕೆ ಒಳಿತೇ ಆಯಿತು.
ವೈಕುಂಠವೇ ಧರೆಗಿಳಿದು ತಿರುಪತಿ-ತಿರುಮಲವಾಯಿತು..
ಶೇಷನು ಶೇಷಾಚಲವಾದ..
ಕ್ಷೀರಸಾಗರವು ಭಕ್ತಸಾಗರವಾಯಿತು..

ಆದರೆ..ಲಕ್ಷ್ಮಿ…?

ಸೂರ್ಯಪ್ರಭೆ ಸೂರ್ಯನನ್ನು ಬಿಟ್ಟಿರಲು ಸಾಧ್ಯವೇ ?
ಬೆಳದಿಂಗಳು ಚಂದ್ರನಿಂದ ದೂರವಿರಲು ಸಾಧ್ಯವೇ ?
ನಾರಾಯಣ ರಾಮನಾದಾಗ ಸೀತೆಯಾಗಿ ಜೊತೆಯಾದವಳು…
ಕೃಷ್ಣನಾದಾಗ ರುಕ್ಮಿಣಿಯಾಗಿ ಆತನನ್ನೇ ವರಿಸಿದವಳು…
ವಿಷ್ಣುವಿಗೆ ಅನಪಾಯಿನಿಯವಳು..
‘ವಿಷ್ಣೋ: ಏಷಾ ಅನಪಾಯಿನೀ’
ತಿರುಪತಿಯಲ್ಲಿ ಶ್ರೀನಿವಸನೊಡನೆ ಆಕೆ ಪ್ರಕಟಗೊಳ್ಳುವ ಬಗೆಯೇ ಅನ್ಯಾದೃಶವಾದುದು…
‘ಶ್ರೀ’ ಇಲ್ಲದೆ ಶ್ರೀನಿವಾಸನೆನಿಸುವುದೆಂತು..?
ಜಗತ್ತಿನ ಎಲ್ಲೆಡೆಯಿಂದ ಧನ ಕನಕಗಳ ರಾಶಿಯ ರೂಪದಲ್ಲಿ ಬಂದು ಕ್ಷಣ ಕ್ಷಣವೂ ಶ್ರೀನಿವಾಸನ್ನನ್ನಾವರಿಸುವಳವಳು, ಆಲಂಗಿಸುವಳವಳು…
ಆದುದರಿಂದಲೇ ತಿರುಪತಿಗೆ ಹರಿದುಬರುವಷ್ಟು ಸಂಪತ್ತು ಜಗತ್ತಿನ ಬೇರಾವ ದೇವಸ್ಠಾನಗಳಿಗೂ ಬಾರದು..!
ತಿರುಪತಿಯ ವೈಭವವಿನ್ನೆಲ್ಲಿಯೂ ಕಾಣದು.
ತಿರುಪತಿಯೆಂದಾಕ್ಷಣವೇ ಮನಸ್ಸ್ಸಿಗೆ ಬರುವದು ಅಲ್ಲಿಯ ವೈಭವ.
ಅದು…ಲಕ್ಷ್ಮಿ..!
ವಿರಹದ ನಂತರ ಬರುವ ಸಂಗಮ ಮತ್ತಷ್ಟು ಗಾಢವಾಗಿರುವದಲ್ಲವೇ?
ಒಮ್ಮೆ ಬಿಟ್ಟು ಹೋದ ಪಶ್ಚಾತ್ತಾಪವಿರಬೇಕು,
ಆಕೆ ನೂರಾರು ಸಾವಿರಾರು ರೂಪದಲ್ಲಿ ಹೆಚ್ಚೇಕೆ ವಿಶ್ವರೂಪಿಣಿಯಾಗಿ ವಿಶ್ವಂಭರನನ್ನು ಸೇರಿದಳು..!
ಆದರೆ ಈ ಎಲ್ಲಾ ವೈಭವಗಳ ಮಧ್ಯದಲ್ಲಿಯೂ ಒಂದು ಕೊರತೆ..
ಸಮಯ ಸರಿದಂತೆ ಶ್ರೀನಿವಾಸನ ಶಿರದ ಗಾಯ ಮಾಯವಾದರೂ ಕುಠಾರ ಪ್ರಹಾರವಾದ ಸ್ಠಾನದಲ್ಲಿ ಕೂದಲು ಬಾರದಿದ್ದುದರಿಂದ..
ಚೆಲ್ವಿಕೆಯ ಚಂದ್ರಮನಲ್ಲಿ ಚುಕ್ಕಿಯೊಂದು ಉಳಿದುಬಿಟ್ಟಿತ್ತು.!
ಕಲಂಕವಲ್ಲ.. ಆತನ ಗೋ ಪ್ರೇಮದ ಪ್ರತೀಕವದು…!
ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮುಡಿಕೊಡುವ ಪದ್ಢತಿ ಇಂದಿಗೂ ಚಾಲ್ತಿಯಲ್ಲಿರುವದು ಈ ಹಿನ್ನೆಲೆಯಲ್ಲಿ..!
ಅಂದು ನಮ್ಮವನೊಬ್ಬನೆಸಗಿದ ಅಪರಾಧದಿಂದಾಗಿ ಶ್ರೀನಿವಾಸನ ಕಳೆದ ಕೂದಲಿನ ಸಾಲವನ್ನು ತೀರಿಸಲು –
ಮನುಜ ಕೋಟಿ ಇಂದಿನವರೆಗೂ ಮುಡಿ ನೀಡುತ್ತಾ ಬಂದಿದೆ.
ಎಂದೆಂದೂ ತೀರದ ಸಾಲವದು..!
ಗೋವು...
ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗವೇ ಸರಿ.!
ಸುದೂರದಲ್ಲಿದ್ದ ಶ್ರೀನಿವಾಸನ ಹಸಿವಿನ ಕರೆಯನ್ನು ಕೇಳಿಸಿಕೊಂಡ ಕಿವಿಗಳೆಂತಹವು..?
ಬೆಟ್ಟದ ದಟ್ಟ ಕಾಡಿನಲ್ಲಿ ಯಾರೂ ಅರಿಯದಂತೆ ಹುತ್ತದಲ್ಲಿ ಹುದುಗಿ ಕುಳಿತಿದ್ದ ಶ್ರೀನಿವಾಸನನ್ನು ಕಂಡ ಕಣ್ಣುಗಳೆಂತಹವು..?
ಶ್ರೀನಿವಾಸನ ಕರೆಗೆ ಕರಗಿ ತನ್ನ ಕರುವನ್ನೇ ಬಿಟ್ಟೋಡಿದ ಕರುಳದೆಂತಹದು..?
ಕಟುಕನ ಕ್ರೂರ ಕೊಡಲಿಗೂ ನಡುಗದ, ಹಾಲ್ಗರೆಯುವದನ್ನು ಬಿಡದ ಆ ಧೀರ ಹೃದಯವೆಂತಹದು..!
‘ಋಷಿಶ್ಚ ಕಿಲ ದರ್ಶನಾತ್ ‘
ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ..
ಎಂದಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಯಾವ ಋಷಿಗೇನು ಕಡಿಮೆ..?
ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ..
ಶ್ರೀನಿವಾಸನನ್ನು ಕರುಳ ಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಯಾವ ಭಕ್ತನಿಗೇನು ಕಡಿಮೆ..?
ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು..
ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಯಾವ ಗುರುವಿಗೇನು ಕಡಿಮೆ..?
ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋಮಾತೆ ಯಾವ ಮಾತೆಗೇನು ಕಡಿಮೆ..?
ವಿಶ್ವಂಭರನನ್ನೇ ಸಂತರ್ಪಿಸಿದ ಆಕೆಯ ಹಾಲು ಕ್ಷೀರಸಾಗರಕ್ಕೇನು ಕಡಿಮೆ..?
[ತಿರುಪತಿಯನ್ನು ತ್ವರಿತವಾಗಿ ಹೇಳಿದರೆ ತೃಪ್ತಿ ಎಂದಾಗುವದು.. ವಿಶ್ವಂಭರೆನ ತೃಪ್ತಿ ಕ್ಷೇತ್ರವದು..!]

ಈ ಕಥಾನಕದಲ್ಲಿ ನಾವು ಕಂಡ ಶ್ರೀನಿವಾಸನ ಮೂರು ಸತ್ಯ ಸಂದೇಶಗಳು:
ಸಕಲ ಗೋ ಘಾತಕರಿಗೆ –
ಗೋವಿನ ಮೇಲೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೇ ಬಂದೀತು..
ಗೋವಂಶ ನಾಶದಿಂದ ನಿಮ್ಮ ಸರ್ವ ನಾಶವೇ ಆದೀತು..!!
ಸಕಲ ರಾಜರಿಗೆ (ಸಕಲ ಸರ್ಕಾರಗಳಿಗೆ) –
ತನ್ನ ಸೇವಕ, ಒಂದು ಗೋಹತ್ಯೆ ಮಾಡಲೆಳಸಿದ ಮಾತ್ರಕ್ಕೇ ರಾಕ್ಷಸತ್ವದ ಶಾಪ ತಟ್ಟಿತು.
ಅವ್ಯಾಹತವಾಗಿ ಕೋಟಿ ಕೋಟಿ ಗೋವುಗಳ ಹತ್ಯೆಯನ್ನು ಮುಂದೆ ನಿಂತು ಮಾಡಿಸಿದರೆ ನಿಮ್ಮ ಕತೆಯೇನಾದೀತು..!?
ನಿಮ್ಮ ಊಹೆಗೇ ಬಿಟ್ಟಿದ್ದು..!
ಅಂತಿಮವಾಗಿ,
ಸಕಲ ಪ್ರಜೆಗಳಿಗೆ (ನಮಗೆಲ್ಲರಿಗೆ) –
ಗೋಮಾತೆಯ ಕೊರಳ ಮೇಲೆರಗುವ ಕೊಡಲಿಗೆ ನಿಮ್ಮ ಮುಡಿಯನ್ನಾದರೂ ಕೊಡಿ..
ಗೋಹತ್ಯೆಯಾಗಲು ಬಿಡಬೇಡಿ.
ಚಿಮ್ಮುವುದಿದ್ದರೆ ಚಿಮ್ಮಲಿ ಗಗನಕ್ಕೆ ಗೋಭಕ್ತರ ರಕ್ತ…!
ಆದರೆ…
ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ..!!

|| ಹರೇರಾಮ ||

Facebook Comments Box