||ಹರೇರಾಮ||
ರಾತ್ರಿಯನ್ನು ಹದಿನೈದು ಭಾಗ ಮಾಡಿದರೆ ಹದಿನಾಲ್ಕನೆಯ ಭಾಗಕ್ಕೆ ಬ್ರಾಹ್ಮೀಮುಹೂರ್ತವೆಂದು ಹೆಸರು…
ಈಶ್ವರನ ಸಮಯವದು….!!!
ಅಮೃತವೇಳೆಯದು…..!!!
ನೀನೆಷ್ಟು ದಿನ ಬದುಕುವೆಯೋ ಅಷ್ಟು ಸಂಖ್ಯೆಯ  ಅಮೃತ ಕಲಶಗಳನ್ನು ಈಶ್ವರನು ನಿನಗೆಂದೇ ತೆಗೆದಿರಿಸಿದ್ದಾನೆ…!!
ಆ ಸಮಯದಲ್ಲಿ ತನ್ನ ಮಕ್ಕಳಿಗೆಲ್ಲ ಅಮೃತವನ್ನು ಹಂಚಬೇಕೆನ್ನುವ ಸಂಪ್ರೀತಿಯಿಂದ ಅಮೃತಕಲಶದೊಡನೆ ಈಶ್ವರನು ನಿನ್ನೆಡೆಗೆ ಬರುತ್ತಾನೆ….!!!
ನಿನ್ನಲ್ಲಿಯೋ… ಆ ಸಮಯದಲ್ಲಿ ಕುಂಭಕರ್ಣನ ಆವೇಶವೇ ಆಗಿರುತ್ತದೆ….!!!
ನಿನಗಾಗಿ ತಂದ ಅಮೃತಕಲಶವನ್ನು ಕೊಡಲಾರದೆ ಈಶ್ವರನು ಹಿಂದಿರುಗಬೇಕಾಗುತ್ತದೆ…!!
ಹಾಗೆ ಹಿಂದಿರುಗುವ ಮುನ್ನ ಬಹಳ ವಾತ್ಸಲ್ಯದಿಂದ ನಿನ್ನ ತಲೆ ನೇವರಿಸಿ ಈಶ್ಚರನು ನುಡಿಯುತ್ತಾನೆ…!
“ಇರಲಿ ಮಗೂ…! ಏನೂ ಬೇಸರವಿಲ್ಲ,ನಾಳೆ ಪುನಃ ಬರುವೆ…”!!

ಮರುದಿನವೂ ಅದೇ ಸಮಯದಲ್ಲಿ ಈಶ್ವರನು ಬಂದೇ ಬರುತ್ತಾನೆ… ನೀನೋ ನಿದ್ರಿಸುತ್ತಲೇ ಇರುತ್ತೀಯೆ….!!!
ಈ ಘಟನೆ ದಿನಕ್ಕೊಮ್ಮೆಯಂತೆ ನಿನ್ನ ಜೀವನವಿಡೀ ಪುನರಾವರ್ತನೆಯಾಗುತ್ತದೆ…!
ಕೊನೆಗೊಮ್ಮೆ ಈಶ್ವರನ ಬದಲು ಯಮದೂತರು ಅಮೃತಕಲಶದ ಸ್ಥಾನದಲ್ಲಿ ಮೃತ್ಯುಪಾಶವನ್ನು ಹಿಡಿದು ನಿನ್ನೆಡೆಗೆ ಬರುತ್ತಾರೆ…!!
ಮತ್ತೆ ಅತ್ತೂ ಫಲವಿಲ್ಲ……ಎಚ್ಚೆತ್ತುಕೊಳ್ಳಲೂ ಸಾಧ್ಯವಿಲ್ಲ…

ಏಕೆಂದರೆ…

ಆಗ ಬರುವುದು ಚಿರನಿದ್ರೆ…!!!
(ಸರಿದಾಟಿದರೂಮಲಗದ ,ಸೂರ್ಯಮೇಲೇರಿದರೂಮೇಲೇಳದಅಭಿನವಕುಂಭಕರ್ಣರಿಗೆಕಲಕತ್ತೆಯಉದ್ಯೋಗಪತಿರಾಧೇಶ್ಯಾಮ್ಅಗರ್ವಾಲ್ಅವರುಹೇಳುವಮಾತುಗಳಿವು….!!)

ಜಗತ್ತು ಕಂಡ ಬಹುದೊಡ್ಡ ಆರೋಗ್ಯಶಾಸ್ತ್ರಜ್ಞರಾದ ವಾಗ್ಭಟರು ಅಷ್ಟಾಂಗ ಹೃದಯದಲ್ಲಿ ಆಡಿದ ಸಾವಿಲ್ಲದ, ಸರ್ವಕಾಲಪ್ರಸ್ತುತವಾದ ಮಾತುಗಳಿವು..

।।ಬ್ರಾಹ್ಮೇ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ ॥

ಸ್ವಸ್ಥ ಬದುಕನ್ನು ಬದುಕಬೇಕೆ…?
ಪೂರ್ಣ ಬದುಕನ್ನು ಬದುಕಬೇಕೇ…?
ಸತ್ತಂತೆ ನಿದ್ರಿಸಿರಬೇಡಿ ..ಅಮೃತವೇಳೆಯಲ್ಲಿ….!
ನಿತ್ಯಜೀವನವನ್ನು ಪ್ರಾರಂಭಿಸಿ ಆ ಹೊತ್ತಿನಲ್ಲಿ…!!

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮಿ ನಮ್ಮಯ್ಯ ರಥವೇರೀ…
ಸ್ವಾಮಿ ನಮ್ಮಯ್ಯ ರಥವೇರಿ ಬರುವಾಗ
ನಾವೆದ್ದು ಕೈಯಾ ಮುಗಿದೇವು…॥

ಚರಾಚರ ಪ್ರಪಂಚಕ್ಕೆ ಚೈತನ್ಯದ ಧಾರೆಯನ್ನೆರೆಯುವ ಸೂರ್ಯದೇವನುದಯಿಸಿ ಬರುವಾಗ ನಾವೆದ್ದು ಸ್ವಾಗತಿಸಬೇಡವೇ…?
ವಿಶ್ವದ ಸ್ವಾಮಿಯೇ ನಮ್ಮ ಬಳಿಸಾರುವಾಗ ..
ಅಮೃತ ಕಿರಣಗಳ ದೃಷ್ಟಿಯನ್ನು ನಮ್ಮೆಡೆಗೆ ಬೀರುವಾಗ…
ನಮ್ಮ ಕಣ್ಣುಗಳು ನಿದ್ರಾಜಾಡ್ಯದಲ್ಲಿ ಮುಳುಗಿರಬೇಕೆ…?
ಎಚ್ಚರದ ಸ್ವಾಮಿಗೆ ಮುಚ್ಚಿದ ಕಣ್ಣುಗಳ ಸ್ವಾಗತವೇ…!!

ಗುರುಗಳು ಬರುವರೆಂದರೆ ಮುಂಚಿತವಾಗಿ ಮನೆಯನ್ನು ಶುಚಿಗೊಳಿಸಿ, ಸಿಂಗರಿಸಿ, ನಾವೂ ಶುಚೀರ್ಭೂತರಾಗಿ ಅವರನ್ನು ಇದಿರ್ಗೊಳ್ಳಬೇಕಲ್ಲವೇ…?
ವಿಶ್ವದ ಗುರುವಾದ ಪರಮಾತ್ಮನ ಪ್ರಕಟರೂಪವೇ ಆಗಿದ್ದಾನೆ ಸೂರ್ಯದೇವ…!!
ದಿನದ ಆರಂಭದಲ್ಲಿ ಕಿರಣಗಳ ರೂಪದಲ್ಲಿ ಆ ತೇಜೋರಾಶಿ ನಮ್ಮನ್ನು ಪ್ರವೇಶಿಸುವಾಗ…
ಸೌಮ್ಯ-ಸುಂದರ ರೂಪದಲ್ಲಿ ನಮಗೆ ದರ್ಶನವೀಯುವಾಗ …
ನಾವು ಹೇಗಿದ್ದರೆ ಚೆನ್ನ ಎಂದು ಚಿಂತಿಸಬೇಡವೇ….!?
ಶರೀರದ ಮನೆಗೆ ಕಣ್ಣುಗಳೇ ಬಾಗಿಲುಗಳು….ಮನವೇ ವಾಸದ ಕೋಣೆ….!!
ಆ ಸಮಯದಲ್ಲಿ ನಾವು ಮಲಗಿದ್ದು, ಮಲಿನ ಮನೆ (ದೇಹ)-ಮನಗಳು…ಮುಚ್ಚಿದ ಬಾಗಿಲುಗಳು(ಕಣ್ಣುಗಳು)..ದೇವರನ್ನು  ಸ್ವಾಗತಿಸಬೇಕೇ…?
ಇನ್ನು ಆ ಸಮಯದಲ್ಲಿ ಕಣ್ಣು ಮುಚ್ಚಿರಬೇಕೆಂಬ ಹಠವೇ ಇದ್ದರೆ…..ಒಂದು ದಾರಿಯಿದೆ…!
ಅದು….ಒಳಗಣ್ಣು ತೆರೆಯುವುದು…!
ಒಳಗಣ್ಣು ತೆರೆಯುವಾಗ ಕೆಲವೊಮ್ಮೆ ಹೊರಗಣ್ಣು ಮುಚ್ಚಬೇಕಾಗುತ್ತದೆ…
ಧ್ಯಾನತನ್ಮಯತೆಯಲ್ಲಿ ಆಗ ಹೊರಗಣ್ಣು ಮುಚ್ಚಿ ಕುಳಿತಿದ್ದರೆ….
ಅಂತರಂಗದಲ್ಲಿ ಆತ್ಮಸೂರ್ಯನೇ ಉದಯವಾಗುವಂತಿದ್ದರೆ….
ಅದು ಅಮೃತಘಳಿಗೆಯ ಸಂಪೂರ್ಣ ಸಾರ್ಥಕತೆ…!!
ನಮ್ಮ ಬಹಿರಂಗದ ಮೇಲೆಲ್ಲಾ ಬಾಹ್ಯಸೂರ್ಯನ ಬೆಳಕು ಬಿದ್ದು ಅಂತರಂಗವನ್ನು ಆತ್ಮಸೂರ್ಯ ಆವರಿಸಿದ್ದರೆ…
ಒಳಗೂ ಹೊರಗೂ ಬೆಳಕೇ ಬೆಳಕಾದರೆ…..
ಮತ್ತೆ ಕತ್ತಲೆಗೆ ನೆಲೆಯೆಲ್ಲಿ…!!?
ಸರ್ವತ್ರ ಸೂರ್ಯ……!!

ಸೇವಕನಾದವನು ಸ್ವಾಮಿ ಮಲಗಿದ ಮೇಲೆಯೇ ಮಲಗಬೇಕು…!
ಸ್ವಾಮಿ ಏಳುವ ಸಾಕಷ್ತು ಮೊದಲೇ ಏಳಬೇಕು….!
ಸೂರ್ಯನೆಂಬ ಸ್ವಾಮಿಯ ಬಗೆಗೆ ಸೇವಕರಾದ ನಾವು ನಡೆದುಕೊಳ್ಳಬೇಕಾದ ರೀತಿ ಇದಲ್ಲವೇ….??
ತಾನು ಮಲಗಿದ ಮೇಲೆ ಮಲಗಿ, ತಾನೇಳುವ ಮುನ್ನವೇ ಏಳುವವರ ಬಗೆಗೆ ….
ಸ್ಥಾವರ-ಜಂಗಮಗಳ ಆತ್ಮವೇ ಆದ ಸೂರ್ಯದೇವನು ಸಂಪ್ರೀತನಾದಾನು…!!

ಬೆಳೆಯುವ ಸಿರಿ ಮೊಳಕೆಯಲ್ಲಿ….

ನಮ್ಮ ಬದುಕು ವಿಷಘಳಿಗೆಯಲ್ಲಿ ಆರಂಭವಾಯಿತೋ, ಅಮೃತಘಳಿಗೆಅಲ್ಲಿ ಆರಂಭವಾಯಿತೋ ನಾವರಿಯೆವು..
ಈಗ ನಮ್ಮ ಕೈಯಲ್ಲಿಲ್ಲದ ವಿಷಯವದು..
ಆದರೆ ಈಗ ಪ್ರತಿನಿತ್ಯದ ಬದುಕನ್ನು ಅಮೃತವೇಳೆಯಲ್ಲಿಯೇ ಆರಂಭಿಸುವುದು ನಮ್ಮ ಕೈಯಲ್ಲೇ ಇದೆ.

ಕಳ್ಳಿಯ ಬೀಜದಿಂದ ಕಲ್ಪವೃಕ್ಷ ಹುಟ್ಟಲು ಸಾಧ್ಯವಿಲ್ಲ.
ಬ್ರಾಹ್ಮೀಮುಹೂರ್ತವೆಂಬುದು ಸಂಪೂರ್ಣದಿನದ ಬೀಜವಿದ್ದಂತೆ.
ಅದು ಜಾಡ್ಯಮಯವಾದರೆ ಮತ್ತೆ ನಮ್ಮದಿನ ಚೈತನ್ಯಮಯವಾಗುವುದಾದರೂ ಹೇಗೆ..?

ಆರಂಭವಾದುದು ತಾನೆ ಮಂದುವರಿದು ಮುಕ್ತಾಯದಲ್ಲಿ ಪೂರ್ಣತೆಯನ್ನು ಕಾಣಬೇಕು..?
ನಮ್ಮ ಬದುಕು ಜಾಡ್ಯದಲ್ಲಿ ಆರಂಭವಾಗಿ, ಪರಮ ಜಾಡ್ಯದಲ್ಲಿ ಮುಂದುವರಿದು,
ಪರಿಪೂರ್ಣ ಜಾಡ್ಯದಲ್ಲಿ ಮುಕ್ತಾಯವಾಗಬೇಕೆ..?

ಅಥವಾ, ಜೀವ ಜಾಗೃತಿಯಲ್ಲಿ ಆರಂಭವಾಗಿ, ದೇವದಿವ್ಯತೆಯಲ್ಲಿ ಮುಂದುವರೆದು,
ಪರಮಾತ್ಮನ ಪರಿಪೂರ್ಣತೆಯಲ್ಲಿ ಪರ್ಯವಸನವಾಗಬೇಕೆ..?

ಆಯ್ಕೆ ನಮ್ಮದು….ಫಲವೂ ನಮ್ಮದೇ…….!!

ಉಠ್ ಜಾಗ್ ಮುಸಾಫಿರ್ ಬೋರ್ ಭಯೀ,
ಅಬ್ ರೈನ್ ಕಹಾ ಜೋ ಸೋವತ್ ಹೈ|
ಜೋ ಸೋವತ್ ಹೈ ಸೋ ಖೋವತ್ ಹೈ,
ಜೋ ಜಾಗತ್ ಹೈ ವೋ ಪಾವತ್ ಹೈ….||

ಟುಕ್ ನೀಂದ್ ಸೆ ಅಖಿಯಾ ಖೋಲ್ ಜರಾ,
ಔರ್ ಅಪನೇ ಪ್ರಭು ಸೆ ಧ್ಯಾನ್ ಲಗಾ|
ಯಹ್ ಪ್ರೀತ್ ಕರನ್ ಕೀ ರೀತ್ ನಹೀ,
ಪ್ರಭು ಜಾಗತ್ ಹೈ ತೂ ಸೋವತ್ ಹೈ…||

ಜೋ ಕಲ್ ಕರ್ನಾ ಹೈ ವೋ ಆಜ್ ಕರ್ ಲೇ,

ಜೋ ಆಜ್ ಕರ್ನಾ ಹೈ ವೋ ಅಬ್ ಕರ್ ಲೇ||

 

 

ರಾಮಬಾಣ-
ಬಾಳಿನಲ್ಲಿ ಏಳಬೇಕಾದರೆ ಬೇಗ ಏಳಬೇಕು..
ಬೇಗ ಏಳಲು ಸಾಧ್ಯವಾಗದಿದ್ದವರಿಗೆ ಇಲ್ಲಿದೆ ನೋಡಿ ಪರಿಹಾರ….
ಬೇಗ ಮಲಗಬೇಕು…!
|| ಹರೇರಾಮ ||

 


Facebook Comments