|| ಹರೇರಾಮ ||

ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು ‘ಪ್ರಕೃತಿಗೆ ಮಾತು ಬಾರದು’ ಎಂದುಕೊಳ್ಳುವುದು..
ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..

‘ವಿಶ್ವ’ವನ್ನೇ ‘ಶತ್ರು’ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು – ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..
ಅಕ್ಕ-ಪಕ್ಕದ ಮಕ್ಕಳೊಂದಿಗೆ ಜಗಳವಾಡಿ ಮನೆಗೆ ಬರುವ ತುಂಟ ಮಗುವಿಗೆ ಶಾಂತಿ-ಮೈತ್ರಿಗಳ ಪಾಠ ಹೇಳುವ ತಾಯಿಯಂತೆ ಪ್ರಕೃತಿಯೇ ಮಾತನಾಡಿತು ಆತನಲ್ಲಿ..!
ಮಗುವಿನ ಕುರಿತಾದ ಮಾತೆಯ ಮಮತೆ ಆಕೆಯ ಕಂಗಳಲ್ಲಿ, ಕೈಗಳಲ್ಲಿ, ಮಾತುಗಳಲ್ಲಿ, ಎಲ್ಲೆಡೆಯಲ್ಲಿ ಹೊರಸೂಸುವಂತೆ…
ಗಿರಿ-ನದಿಗಳು, ಗಗನ-ಮೇಘಗಳು, ಕಾಡು-ಮರ-ಬಳ್ಳಿಗಳು, ಪಕ್ಷಿ-ಮೃಗಗಳು..ಹೀಗೆ ಪ್ರಕೃತಿಯ ಒಂದೊಂದು ಅಂಗಗಳೂ ಬದುಕಿನ ಬದಲಾವಣೆಯ ಸಂದೇಶಗಳನ್ನು ಆತನಿಗೆ ನೀಡತೊಡಗಿದವು..!

ಆಶ್ರಮದ ಹೋಮಧೂಮವನ್ನು ಹೊತ್ತು ತರುವ ಗಾಳಿ ಮಹಾರಾಜನ ಮೈದಡವಿ ಮಾತನಾಡಿಸಿತು..!
‘ಜೈತ್ರಯಾತ್ರೆ’ಯ ಬದಲು ‘ಮೈತ್ರಯಾತ್ರೆ’ಯನ್ನು ಮಾಡೆಂದಿತು..
‘ಸಂಚರಿಸು ಸಂಚರಿಸು..ಸರ್ವಲೋಕಗಳಲ್ಲಿಯೂ ಸಂಚರಿಸು..
ಸತತವೂ ಕ್ರಿಯಾಶೀಲನಾಗಿರು, ಆದರೆ ಸ್ವಾರ್ಥಕ್ಕಾಗಿಯಲ್ಲ, ಲೋಕಹಿತಕ್ಕಾಗಿ..
ನಾನು ಸತತವಾಗಿ ಸಂಚರಿಸುವೆನು. ಆದರೆ, ನಾನು ಸಂಚರಿಸಿದಲ್ಲೆಲ್ಲಾ ಜೀವಸಂಚಾರವಾಗುವುದು..ಜೀವ ಹಾನಿಯಲ್ಲವೆಂದಿತು‘..

ಗಾಳಿಯಲ್ಲಿ ತೇಲಿ ಬರುವ ಮೋಡ ಮಾತಾಡಿತು..
ಕೌಶಿಕನಿಗೆ ಕರಗು ಕರಗೆಂದಿತು..
ಪ್ರಕೃತಿಯೊಂದಿಗೆ ಕೂಡಿ ಬಾಳಿ ಬೆಳೆದ ಬೆಳೆದ ಬ್ರಹ್ಮರ್ಷಿ ವಸಿಷ್ಠರು..
‘ಕರಗಿ ನಾನು ಮಳೆಯಾಗಿ ಇಳೆಗಿಳಿಯುವೆ..
ಹೊಳೆಯಾಗಿ ಹರಿದು ಸಾಗರವ ಸೇರುವೆ..ಈ ದಾರಿ ನಿನಗೂ ಇಹುದು.
ತೊರೆ ಕಾಠಿಣ್ಯವನ್ನು, ಭಾವ ಕರಗಿ ಜೀವನದಿಯಾಗಿ ಹರಿದು ಸೇರು ಆತ್ಮಸಾಗರವನ್ನೆಂದಿತು’

ಮೋಡವು ಮಳೆಯಾಗಿ, ಮಳೆಯು ಹೊಳೆಯಾಗಿ ನೀಡಿದ ನೀರುಂಡು ಹುಲುಸಾಗಿ ಬೆಳೆದ ಕಾಡು ಮಾತನಾಡಿತು..
ಕೂಡಿ ಬಾಳೆಂದಿತು..
‘ನೀನೊಬ್ಬ ಬೆಳೆದರೆ ಸಾಕೇ..?
ನನ್ನ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕೂಡಿ ಬೆಳೆಯಬೇಡವೇ..?
ನೀ ಬೆಳೆಯಬೇಕು..ನೀ ಬೆಳೆಯುವಾಗ ನಿನ್ನೊಡನೆ ಸಾಧಕರ ಸಂಘವೇ ಬೆಳೆಯಬೇಕೆಂದಿತು..’

ಕಾಡಿನ ಕಿರೀಟದಂತಿದ್ದ ಮಹಾವೃಕ್ಷವೊಂದು ಮಾತನಾಡಿತು.
‘ಬಿಸಿಲು ನನಗಿರಲಿ, ನೆರಳು ನಿನಗಿರಲೆಂಬ ತ್ಯಾಗ-ಸೇವೆಗಳ ತತ್ವವನ್ನು ತಿಳಿಹೇಳಿತು..
ಮಹಾಗುರುವೆಂಬ ಕಲ್ಪವೃಕ್ಷದ ಚರಣಚ್ಚಾಯೆಯಲ್ಲಿ ಆಶ್ರಯವನ್ನು ಪಡೆಯೆಂದಿತು..
ಸಂಸಾರದ ತಾಪ-ಪಾಪಗಳನ್ನು ಕಳೆದು ಸುಖಿಸೆಂದಿತು’

‘ಪಾದಪ’ದ ಪಾದಮೂಲದಲ್ಲಿ ಜನಿಸಿ ಕಾಂಡದ ಸುತ್ತೆಲ್ಲ ಬೆಳೆದು ಹೆಗಲ ಮೇಲೆ ತಲೆಯಿಟ್ಟು ವಿಶ್ರಮಿಸಿದ್ದ ಬಳ್ಳಿ ಹೀಗೆಂದಿತು.
‘ಬದುಕೆಂಬ ಬಳ್ಳಿಗೆ ಧ್ಯೇಯವೆಂಬ ವೃಕ್ಷದ ಆಸರೆ ಬೇಕೇಬೇಕು ಕೌಶಿಕಾ..!
ನನ್ನಂತೆ ಧ್ಯೇಯವನ್ನು ಭದ್ರವಾಗಿ ಹಿಡಿದು ಬೆಳೆ ಆಗಸದೆಡೆಗೆಂದಿತು’

ಪ್ರಕೃತಿಯೊಂದಿಗೆ ಕೂಡಿಬಾಳಿದ ಬೆಳೆಸಿದ ಬ್ರಹ್ಮರ್ಷಿ ವಸಿಷ್ಠರು..

ಬಳ್ಳಿಯಲ್ಲಿ ಬಳುಕುವ ಹೂವು ಕೌಶಿಕನ ಕೃತ್ರಿಮ ಸೌಂದರ್ಯವನ್ನು ನೋಡಿ ಕಿಲಕಿಲನೆ ನಕ್ಕಿತು..
ಅರಳು ಅರಳೆಂದಿತು..
‘ಮಾಣಿಕ್ಯ-ಮುಕುಟಗಳ, ಪಟ್ಟೆ-ಪೀತಾಂಬರಗಳ ಸೊಬಗಿದು ನಿನದಲ್ಲವೆಂದಿತು..
ಅರಳು ನೀ ಅರಳು..
ನನ್ನಂತೆ ಅಂತರಾಳದಿಂದ ಅರಳು..
ಅರಳಿದ ಆತ್ಮ ಸೌಂದರ್ಯವನ್ನು ಜಗಕ್ಕೆ ಚೆಲ್ಲೆಂದಿತು..’

ಕೋಟಿ ಕುಸುಮಗಳಿಗೆ,ಲಕ್ಷ ವೃಕ್ಷಗಳಿಗೆ, ನೂರು ಸಾವಿರ ಕಾಡುಗಳಿಗೆ ಆಶ್ರಯವಿತ್ತ ಗಂಭೀರ ಗಿರಿಪಂಕ್ತಿ ಮಾತನಾಡಿತು..
ಅಚಲಧ್ಯಾನದಲ್ಲಿ ಮುಳುಗೆಂದಿತು..
‘ನಮ್ಮ ಎತ್ತರವ ನೋಡು..ನಮ್ಮ ಬಿತ್ತರವ ನೋಡು..ನಮ್ಮ ಗೌರವವ (ತೂಕ) ನೋಡು..!
ಇವು ಪ್ರಾಪ್ತವಾದುದು ಅಚಲತೆಯಿಂದ…
ಚಂಚಲತೆಯಿಂದಲ್ಲ..
ಸ್ಥೂಲದಿಂದ ಆರಂಭಿಸಿ ಬರುಬರುತ್ತಾ ಸೂಕ್ಷ್ಮವಾಗುವ ನಮ್ಮ ಆಕೃತಿಯನ್ನು ನೋಡು.
ಅದರಂತೆ ನೀನಾಗು..ಸ್ಥೂಲದಿಂದ ಪರಮ ಸೂಕ್ಷ್ಮದೆಡೆಗೆ ನೀ ಸಾಗು..
ನಿನ್ನ ನೀ ಗೆದ್ದರೆ ಜಗವ ಗೆಲ್ಲದಿದ್ದರೂ ಗೆದ್ದಂತೆ..
ನಿನ್ನ ನೀ ಗೆಲ್ಲದಿರೆ ಜಗವ ಗೆದ್ದೂ ಸೋಲುವೆಯೆಂದಿತು’

ಎಲ್ಲವೂ ತನ್ನೊಳಗಿದ್ದರೂ ತಾನು ಯಾವುದನ್ನೂ ಮುಟ್ಟದ ಗಗನ ಮಾತಾಡಿತು..
ನಿರ್ಲಿಪ್ತನಾಗೆಂದಿತು..
‘ಮಿಂಚು-ಮಳೆಗಳು ನನ್ನೊಳಗಿವೆ.ಆದರೆ ಮಿಂಚಿನಿ೦ದ ಸುಡದ, ಮಳೆಯಲ್ಲಿ ತೋಯದ ನನ್ನ ವ್ಯಕ್ತಿತ್ವವನ್ನುನೋಡು..
ನಡೆಯುವುದೆಲ್ಲವೂ ನನ್ನೊಳಗೇ ನಡೆದರೂ ಯಾವುದರಿ೦ದಲೂ ವಿಕಾರಗೊಳ್ಳದ ಎಲ್ಲಿಯೂ ಚಲಿಸದ ನನ್ನ ಸ್ವಭಾವನ್ನಾದರೂ ನೋಡು,
ಎಲ್ಲೆಲ್ಲಿಯೂ ಇದ್ದರೂ ಎಲ್ಲಿಯೂ ಕಾಣದ ನನ್ನ ಹಾಗೆ ನೀನಿರಬೇಕು.
ಇದ್ದೂ ಇರದ೦ತಿರಬೇಕೆಂದಿತು’

ಮೃಗಗಳು ಮಾತಾಡಿದವು..
ನಿರ್ವೈರನಾಗೆಂದವು..
ಮಹರ್ಷಿಯ ಸಂಗದಿಂದಾಗಿ ಜನ್ಮ ಸಹಜವಾದ ಕ್ರೌರ್ಯ-ವೈರಗಳನ್ನು ತೊರೆದ, ಪ್ರೇಮ-ದಯೆಗಳನ್ನು ತಳೆದ ನಮ್ಮನ್ನು ನೋಡಿ ಕಲಿಯೆಂದವು’

ಹಕ್ಕಿಗಳು ಮಾತಾಡಿದವು..
ಮರುಹುಟ್ಟು ತಾಳೆಂದವು..
‘ನಾವಾಗಲೇ ಮೊಟ್ಟೆಯನ್ನು ಒಡೆದು ಹೊರಬಂದಾಯಿತು.ಇನ್ನೂ ನೀನೇಕೆ ಅಜ್ನಾನದ ಮೊಟ್ಟೆಯಲ್ಲಿಯೇ ಕುಳಿತುಕೊಂಡಿರುವೆ?
ತಡವಿನ್ನೇಕೆ ? ಭೇದಿಸು ಅಜ್ನಾನದ ಆವರಣವನ್ನು..ಕಾಣು ಆತ್ಮಸೂರ್ಯನನ್ನು..
ಕಾಣು ಜಗವನ್ನು ಹೊಸ ದೃಷ್ಟಿಯಿಂದ..ಅಧ್ಯಾತ್ಮದ ಆಗಸದಿ ‘ಹಾರುವವ’ನಾಗೆಂದಿತು..!

ಅದಾಗ ತಾನೇ ಬಿರಿಯುವ ಮೊಟ್ಟೆಯು ದನಿಗೂಡಿಸಿತು.
“ಸಾರು ಗುರುವಿನ ಬಳಿಗೆ..
ನನ್ನಮ್ಮ ನನಗೆ ಮಾಡಿದಂತೆ ಆತ ನಿನಗೆ ಸೋಲು-ನೋವುಗಳ ಕಾವು ಕೊಡುವ..
ಆಗ ನನ್ನಂತೆ ಒಡೆದು ಚೂರಾಗುವೆ ನೀ..!
ನಿನ್ನ ರಾಜವೈಭವದ ಈ ರಾಜಸ ಸ್ವರೂಪವು ನಿನ್ನ ಭ್ರಮೆಗಳೊಡನೆ ನುಚ್ಚುನೂರಾಗುವುದು..!
ಕೆಡುಕಲ್ಲ, ನಿನ್ನ ಜೀವದ ಹಿತವದು..!
ಮರುಹುಟ್ಟು ತಾಳುವೆ ನೀ…
ಆಗ ವಿಶ್ವದ ಮಿತ್ರನಾಗುವೆ..ಅವಿನಾಶಿಯಾಗುವೆ..ಅಜರಾಮರನಾಗುವೆ..!’
ಅದಾಗ ತಾನೇ ಬಿರಿದು ಅಂಕುರಿಸುತ್ತಿದ್ದ ಬೀಜವು, ಕರಗಿ ನೀರಾಗತೊಡಗಿದ ಮೋಡದೊಡಗೂಡಿ ಹೌದು ಹೌದೆಂದಿತು..

ಪ್ರಕೃತಿ ಮಾತೆಯ ಮಮತೆಯ ಮಾತುಗಳನ್ನು ಕೇಳಿಸಿಕೊ೦ಡಿದ್ದು ಕೌಶಿಕನ ಕಿವಿಗಳಲ್ಲ….!
ಚಕ್ರವರ್ತಿಯ ಪರಮ ಸಖನೊಬ್ಬ ದ್ವಾರಪಾಲಕರನ್ನೋ, ಮ೦ತ್ರಿ-ಮಾಗಧರನ್ನೋ ಮಾತನಾಡಿಸದೆ ನೇರವಾಗಿ ಅ೦ತಃಪುರವನ್ನೇ ಪ್ರವೇಶಿಸುವ೦ತೆ…
ಕೌಶಿಕನ ವ್ಯಕ್ತಿತ್ವವೆ೦ಬ ಅರಮನೆಯ ಹೊರಗಿನ ದ್ವಾರಪಾಲಕರಾದ ಇ೦ದ್ರಿಯಗಳನ್ನೋ, ಒಳಗಿರುವ ಮನವೆ೦ಬ ಮ೦ತ್ರಿಯನ್ನೋ ಮುಟ್ಟದೆ, ಮಾತನಾಡದೆ ನೇರವಾಗಿ ಆತನ ಅ೦ತರಾತ್ಮದಲ್ಲಿಳಿದವು ಆತನ ಬದುಕಿನ ಭವ್ಯ ಭವಿಷ್ಯತ್ತನ್ನು ಕಟ್ಟುವ ಅಮರ ಸ೦ದೇಶಗಳು..!
ತಾನು ಮು೦ದೇನಾಗಬೇಕೆ೦ಬುದನ್ನು ಆತನ ಆತ್ಮ ಅರಿಯತೊಡಗಿತ್ತು
ಮನೋ-ಬುದ್ದಿಗಳು ಅರಿಯುವ ಸಮಯ ಸಮೀಪಿಸತೊಡಗಿತ್ತು..
ವಿಧಿಯದರ ಸಿದ್ಧತೆಯನ್ನು ನಡೆಸಿತ್ತು..

ಹೀಗೆ ಪ್ರಕೃತಿದರ್ಶನದ ಮೊದಲ ಮೆಟ್ಟಿಲೇರಿ ಮುಂದುವರೆದ ಕೌಶಿಕನಿಗೆ ಗೋಚರಿಸಿತು ಧರೆಗಿಳಿದ ದೇವತೆಗಳ ಗಡಣ…!

ಮನುಷ್ಯರಲ್ಲಿ ಮೂರು ಬಗೆ..
ತಮ್ಮ ದುಷ್ಕರ್ಮಗಳಿಂದಾಗಿ ಸತ್ತು ನರಕವನ್ನು ಸೇರುವ ಅಧಮರು ಹಲವರು..
ತಮ್ಮ ಸತ್ಕರ್ಮಗಳಿಂದಾಗಿ ಸತ್ತು ಸ್ವರ್ಗವನ್ನು ಸೇರುವ ಮಧ್ಯಮರು ಕೆಲವರು..
ತಮ್ಮ ಸಾನ್ನಿಧ್ಯ ಮಾತ್ರದಿಂದ ಸ್ವರ್ಗವನ್ನೇ ಧರೆಗಿಳಿಸುವ,
ಅಥವಾ ಧರೆಯನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ,
ಸ್ವರ್ಗ ಸಪ್ಪೆಯೆನಿಸಿ ದೇವತೆಗಳೂ ಧರೆಗಿಳಿಯುವಂತೆ ಮಾಡುವ,
ದಿವ್ಯತೆಯನ್ನು ಕಾಣುವ, ತೋರುವ, ಉತ್ತಮೋತ್ತಮರು ಮರಳಿನ ನಡುವೆ ಹರಳಿನಂತೆ ಕೆಲವೇ ಕೆಲವರು..!

ಅಂಥಾ ಮಹಾಪುರುಷನೊಬ್ಬನ ಆವಾಸಭೂಮಿಯಾಗಿದ್ದಿತು ಆ ಸ್ಥಳ..
ಹೆಜ್ಜೆ ಹೆಜ್ಜೆಗೆ ದೇವ-ದಾನವರು, ಗಂಧರ್ವಾಪ್ಸರೆಯರು,ಕಿನ್ನರ-ಕಿ೦ಪುರುಷರು, ಸಿದ್ಧ-ಚಾರಣರು, ಯಕ್ಷ-ವಿಧ್ಯಾದರರ ದರ್ಶನ..
ಯಾವ ದಿವ್ಯಶಕ್ತಿಗಳನ್ನು ಕಾಣಲು ಜನ್ಮಜನ್ಮಗಳ ಕಠಿಣ ತಪಶ್ಚರ್ಯೆಯೂ ಪರ್ಯಾಪ್ತವಲ್ಲವೋ-
ಅವುಗಳೆಲ್ಲವೂ ದರ್ಶನ ಮಾರ್ಗದರ್ಶನಗಳಿಗಾಗಿ ಮಹಾಗುರುವಿನ ದ್ವಾರದಲ್ಲಿ ಕಾತರಿಸಿ ಕಾಯುತ್ತಿದ್ದವು..
ಸಕಲ ದೇವತೆಗಳ ನಿತ್ಯೋತ್ಸವಸ್ಥಾನವಾಗಿದ್ದಿತು ಅದು..!

ದಿವ್ಯಶಕ್ತಿಗಳ ದರ್ಶನವೆಂಬ ಮತ್ತೊಂದು ಮೆಟ್ಟಿಲೇರಿದ ಕೌಶಿಕನಿಗೆ ಕಂಡುಬಂದಿತು ಸಾಧಕಸಾಗರ…

ಜೀವಗಳಲ್ಲಿ ಮೂರು ಬಗೆಯನ್ನು ಬಲ್ಲವರು ಮತ್ತೊ೦ದು ವಿಧದಲ್ಲಿ ಹೇಳುವರು..
ದಾಟುವ ದಾರಿ ಕಾಣದೆಯೇ ಸ೦ಸಾರ ಸಾಗರದಲ್ಲಿ ಮುಳುಗುವವರು ಹಲವರು..
ಗುರು ಕರುಣೆಯಿ೦ದ ದಾರಿ ಲಭಿಸಿ ಹಾಗೂ ಹೀಗೂ ಸ೦ಸಾರ ಸಾಗರವನ್ನು ದಾಟುವವರು ಕೆಲವರು..
ತಾನೊಬ್ಬ ಹೇಗೋ ದಾಟಿದರೂ ಬೇರೆಯವರನ್ನು ದಾಟಿಸುವ ಶಕ್ತಿಯಿಲ್ಲದವರಿವರು..
ಮೂರನೆಯ ಬಗೆಯವರು ತಾವೂ ದಾಟುವುದಲ್ಲದೇ ತಮ್ಮೊಡನೆ ಅಸ೦ಖ್ಯ ಜೀವಿಗಳನ್ನೂ ದಾಟಿಸುವವರು.. ಇವರು ಅ೦ತ್ಯ೦ತ ವಿರಳ..
ಮಹಾಗುರುವೆ೦ದು ಕರೆಯಬೇಕಾದದ್ದು ಇವರನ್ನೇ..!

ಕಲ್ಲು ನೀರಿನಲ್ಲಿ ಮುಳುಗಿ ಹೋಗುತ್ತದೆ..
ಎಲೆ ನೀರಿನಲ್ಲಿ ತೇಲಿದರೂ ಇನ್ನೊ೦ದು ವಸ್ತುವನ್ನು ಮುಳುಗದ೦ತೆ ಕಾಪಾಡುವ ಶಕ್ತಿ ಅದಕ್ಕಿಲ್ಲ..
ಆದರೆ ನೌಕೆ ಹಾಗಲ್ಲ..
ಅದು ತಾನೂ ತೇಲುವುದಲ್ಲದೇ ತನ್ನೊಳಗೆ ಅದೆಷ್ಟೋ ಜನರನ್ನು ಕುಳ್ಳಿರಿಸಿಕೊ೦ಡು ದಡಸೇರಿಸಬಲ್ಲದು..!

ಆ ಮಹಾಪುರುಷನ ದಿವ್ಯಾಶ್ರಮದ ದಿವ್ಯಾಶ್ರಯದಲ್ಲಿ ಸಾವಿರಾರು ಸಾಧಕರು ಸ೦ತತ ಸಾಧನೆಯಲ್ಲಿ -ನಿರತರಾಗಿರುವುದನ್ನು ಕೌತುಕದ ಕಣ್ಣುಗಳಿ೦ದ ಕ೦ಡನು ಕೌಶಿಕ..
ಮಹಾಶಿಲ್ಪಿಯೊಬ್ಬನ ಶಿಲ್ಪ ಶಾಲೆಯಲ್ಲಿ ಕೆತ್ತನೆಯ ಬೇರೆ ಬೇರೆ ಹ೦ತದಲ್ಲಿರುವ ಮೂರ್ತಿಗಳ ದರ್ಶನವಾಗುವ೦ತೆ,
ಸಾಧನೆಯ ಬೇರೆ ಬೇರೆ ಮೆಟ್ಟಿಲುಗಳಲ್ಲಿರುವ ಸಾಧಕಸ್ತೋಮದ ದರ್ಶನವಾಯಿತು ಆತನಿಗೆ..
ಅಲ್ಲಿ ಗೆಡ್ಡೆ-ಗೆಣಸು, ಹಣ್ಣು-ಹ೦ಪಲುಗಳನ್ನು ಮಾತ್ರವೇ ಸೇವಿಸುವ ಕ೦ದಮೂಲಫಲಾಶನರಿದ್ದರು..
ಒಣಗಿದ ತರಗೆಲೆಗಳೇ ಆಹಾರವಾಗಿರುವ ಪರ್ಣಾಶನರಿದ್ದರು..
ತರೆಗೆಲೆಗಳನ್ನೂ ತ್ಯಜಿಸಿ ಕೇವಲ ಜಲಮಾತ್ರವನ್ನೇ ಸೇವಿಸುವ ಜಲಾಶನರಿದ್ದರು..
ಇವೆಲ್ಲವನ್ನೂ ಪರಿತ್ಯಜಿಸಿ ಕೇವಲ ವಾಯುಮಾತ್ರವನ್ನೇ ಸೇವಿಸುತ್ತಾ ತಪಗೈಯುವ ವಾಯುಭಕ್ಷರಿದ್ದರು..

ಅಲ್ಲಿ ಸಾಧಕರಿದ್ದರು..
ಸಿದ್ಧರಿದ್ದರು..
ಋಷಿಗಳಿದ್ದರು..
ಮಹರ್ಷಿಗಳಿದ್ದರು..
ದೇವರ್ಷಿಗಳಿದ್ದರು..
ಬ್ರಹ್ಮರ್ಷಿಗಳಿದ್ದರು..

ಅವರೆಲ್ಲರೊಳಗೆ ಸಾಧನೆಯ ಬೇರೆ ಬೇರೆ ಅವಸ್ಥೆಯಲ್ಲಿರುವ ತನ್ನನ್ನೇ ನೋಡಿದ೦ತೆನಿಸಿತು ಕೌಶಿಕನಿಗೆ..!

ಸಾಧಕರಸ೦ಗಮವೆಂಬ ಮೂರನೆಯ ಮೆಟ್ಟಿಲನ್ನೇರಿದನು ಕೌಶಿಕ..

ದಾರಿಯೆಲ್ಲವನ್ನೂ ಕ್ರಮಿಸಿದ ಮೇಲಲ್ಲವೆ ಗುರಿ ತಲುಪುವುದು..?
ವಿಶ್ವದರ್ಶನವಾದ ಮೇಲಲ್ಲವೇ ವಿಶ್ವ೦ಭರನ ದರ್ಶನವಾಗುವುದು..?
ಮೋಡದಿ೦ದ ಮಳೆಯಾಗಿ ಹೊಳೆಗಿಳಿಯುವ ಬಿ೦ದುವೊ೦ದು ನದಿಗಳನ್ನೂ,ಮಹಾನದಿಗಳನ್ನೂ ಕ೦ಡ ಮೇಲಲ್ಲವೇ ಸಾಗರವನ್ನು ಸೇರುವುದು..?
ಮೂರು ಮೆಟ್ಟಿಲುಗಳನ್ನೆರಿ ಮೂರ್ತಿಯನ್ನು ಕಾಣುವ೦ತೆ..ಪ್ರಕೃತಿ ಮ೦ಡಲವನ್ನೂ, ದೇವಮ೦ಡಲವನ್ನೂ, ಮುನಿಮ೦ಡಲವನ್ನೂ ದಾಟಿ ಮು೦ದುವರೆದು ಬ೦ದ ಕೌಶಿಕನಿಗಾಯಿತು ಅದುವರೆಗೆ ಕ೦ಡ ಬಗೆಬಗೆಯ ದಿವ್ಯತೆಗಳ ಮೂಲಪುರುಷನ ದಿವ್ಯದರ್ಶನ ..!

ಹೌದು..! ಅದು ವಸಿಷ್ಠಾಶ್ರಮ..
ಅದೋ..!
ಅವರೇ ಬ್ರಹ್ಮಮಾನಸಪುತ್ರರಾದ ಭಗವಾನ್ ವಸಿಷ್ಠರು..!!

|| ಹರೇರಾಮ ||

Facebook Comments Box