LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹೀಗೊಂದು ನಾಟಕದ ಜಾಹಿರಾತು..!

Author: ; Published On: ಗುರುವಾರ, ಫೆಬ್ರವರಿ 18th, 2010;

Switch to language: ಕನ್ನಡ | English | हिंदी         Shortlink:

ಅತ್ಯಂತ ಪುರಾತನ ನಾಟಕ ಕಂಪನಿಯೊಂದರ ಹಳೆಯ – ಒಳ್ಳೆಯ ಒಂದು ನಾಟಕದ ಪರಿಚಯ ಪತ್ರ. . :

ಕಂಪನಿಯ ಹೆಸರು: ಬ್ರಹ್ಮಾಂಡ . .
ಕಂಪನಿಯ ಕೇಂದ್ರ ಕಛೇರಿ
: ವೈಕುಂಠ..
ಕಂಪನಿಯ ಯಜಮಾನರು : ನಾರಾಯಣಪ್ಪ . . .

ಜಗದೀಶನಾಡುವಾ . . . ಜಗವೇ ನಾಟಕರಂಗ . . . !

ಕಂಪನಿಯ ಯಜಮಾನಿ: ಮಹಾಲಕ್ಷ್ಮಮ್ಮ . .
ಕಂಪನಿಯ ಇತಿಹಾಸ
: ಎಷ್ಟು ಹಿಂದಿನದೆಂಬುದು ಯಾರಿಗೂ ಗೊತ್ತಿಲ್ಲ…!!
ನಾಟಕ ಪ್ರದರ್ಶನ ಸಮಯ
: ಪ್ರತಿ ಕ್ಷಣ. .!
ನಾಟಕ ಪ್ರದರ್ಶನ ಸ್ಥಳ
: ಎಲ್ಲೆಲ್ಲಿಯೂ. .!!

ಲೆಖ್ಖವೇ ಇಲ್ಲದಷ್ಟು ನಾಟಕಗಳು ಈ ಕಂಪನಿಯ ಕಡೆಯಿಂದ ಪ್ರದರ್ಶಿತಗೊಂಡಿವೆ,
ಆದರೆ, ಯುಗಗಳ ಹಿಂದೆ ಪ್ರದರ್ಶಿತಗೊಂಡ ರಾಮಾಯಣದಂಥ ನಾಟಕ ಮತ್ತೊಂದಿಲ್ಲ…!

ಇದು ಮೊದಲಬಾರಿಗೆ ಪ್ರದರ್ಶನಗೊಂಡಿದ್ದು  ತ್ರೇತಾಯುಗದಲ್ಲಿ, ಭಾರತವರ್ಷವೆಂಬ  ರಂಗಮಂದಿರದಲ್ಲಿ..!
ಸಾಮಾನ್ಯ  ನಾಟಕಗಳು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡರೆ, ಈ ನಾಟಕ ಕಂಡದ್ದು ಹಾರ್ಟ್ ಫುಲ್ ಪ್ರದರ್ಶನಗಳನ್ನು..!
ಪ್ರಥಮ ಪ್ರದರ್ಶನದಲ್ಲಿಯೇ ಕಂಪೆನಿಗೆ ‘ರಾಮರಾಜ್ಯ’ ಪ್ರಶಸ್ತಿಯನ್ನು  ತಂದುಕೊಟ್ಟುದು ಇದರ ಹೆಗ್ಗಳಿಕೆ..!

ವಿಶೇಷ ಆಕರ್ಷಣೆ: ಕಂಪೆನಿಯ ಮಾಲೀಕರೇ ರಾಮ-ಲಕ್ಷ್ಮಣ-ಭರತ-ಶತ್ರುಘ್ನರೆಂಬ ಚತುಷ್ಪಾತ್ರಗಳಲ್ಲಿ..!
ಸ್ವಾರಸ್ಯವೆಂದರೆ: ಮಾಲೀಕರು ಖುದ್ದಾಗಿ ನಾಯಕನ ಪಾತ್ರವಹಿಸಿದ್ದಲ್ಲದೇ, ಅವರ ಹೆಂಡತಿ, ಮಕ್ಕಳು ಸೇವಕರು ಎಲ್ಲರೂ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದುದು..!

ನಾರಣಪ್ಪನವರು ನಾಯಕಪಾತ್ರ ವಹಿಸಿದ ಮೇಲೆ ಮಹಾಲಕ್ಷ್ಮಮ್ಮನವರು ಅವರೆದುರು ನಾಯಕಿಯ ಪಾತ್ರವಹಿಸಿದರೆ, ಅದು ಸಹಜ..!
ಮಗ ಬ್ರಹ್ಮಪ್ಪನಿಗೆ ಅವನ ಸಾತ್ವಿಕ ಸ್ವಭಾವಕ್ಕನುಗುಣವಾಗಿ ವಯೋವೃದ್ಧ ಜಾಂಬವಂತನ ಪಾತ್ರ..!
ನಾರಣಪ್ಪನವರ ಮನಸ್ಸು ಬಹಳ ದೊಡ್ಡದು – ಆದುದರಿಂದಲೇ ಮಾಲಿಕರ ಮನೆಯ ಗೇಟ್ ಕೀಪರುಗಳಾದ ಜಯಪ್ಪ – ವಿಜಯಪ್ಪರು ನಾಟಕದಲ್ಲಿ ರಾವಣ – ಕುಂಭಕರ್ಣರೆಂಬ ಖಳನಾಯಕರ ಪ್ರಧಾನ ಪಾತ್ರಗಳನ್ನೇ ಗಿಟ್ಟಿಸಿದ್ದು..!

ನಾರಾಯಣಪ್ಪನವರು ‘ಸ್ವರ್ಗ ‘ ಎಂಬ ಪಂಚತಾರಾ ಹೋಟೇಲನ್ನು ನಡೆಸುತ್ತಾರೆ. . !
ಈ ದುಬಾರಿ ಹೊಟೇಲಿನ ಮ್ಯಾನೇಜರ್ ಇಂದ್ರಕುಮಾರ್. . ಈತನದ್ದು ರಾಮಾಯಣ ನಾಟಕದಲ್ಲಿ ಕಿಷ್ಕಿಂದೆಯ ರಾಜ ವಾಲಿಯ ಪಾತ್ರ. .!
ಸೂರಜ್ ನಾರಯಣಪ್ಪನವರ ಕಂಪೆನಿಯಲ್ಲಿ ಲೈಟ್ ಬಾಯ್ – ವಾಲಿಯ ತಮ್ಮ ಸುಗ್ರೀವನ ಪಾತ್ರ ಇವನದು..

ನೀರಾವರಿ ಇಲಾಖೆಯ ವರುಣಯ್ಯ ಸುಷೇಣನ ಪಾತ್ರದಲ್ಲಿ, ಪುರೋಹಿತ ಬೃಹಸ್ಪತಿ ಶಾಸ್ತ್ರಿಗಳು ತಾರನ ಪಾತ್ರದಲ್ಲಿ..
ನಾರಣಪ್ಪನವರ ಖಾಯಂ ಆರ್ಕಿಟೆಕ್ಟ್ ವಿಶ್ವಕರ್ಮನಿಗೆ ನಾಟಕದಲ್ಲಿಯೂ ಆರ್ಕಿಟೆಕ್ ನಲನ ಪಾತ್ರವೇ. . !
ನಾರಾಯಣಪ್ಪನವರಿಗೆ ತಮ್ಮ ಕಂಪೆನಿಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ನೋಡಿಕೊಳ್ಳುವ ಪವನ್ ಕುಮಾರ್ ಮೇಲೆ ಅದೇನು ಪ್ರೀತಿಯೋ – ಬಹುಮುಖ್ಯವಾದ ಹನುಮಂತನ ಪಾತ್ರವೇ ಆತನ ಪಾಲಾಗಿದೆ..!

ಹೀಗೆ ನಾರಾಯಣಪ್ಪನವರು ತಮ್ಮ ಹೆಂಡತಿ, ಮಕ್ಕಳು, ಸೇವಕರನ್ನೆಲ್ಲ ಕಟ್ಟಿಕೊಂಡು ನಮ್ಮೂರಿಗೆ ಬಂದರು..
ಎಂಥಾ ನಾಟಕತೋರಿಸಿದರೂಂತೀರಿ..!!?

ಸರಿಯಾಗಿ ನೋಡಿದವರ ಮನಸ್ಸಿನ ಬೇಸರವೆಲ್ಲಾ ಖಾಯಂ ಆಗಿ ಕಳೆದುಹೋಗುವಂತೆ..!!
ನಾಟಕ ನೋಡಿದವರ ಜೀವನದಲ್ಲಿ ಇರಬಹುದಾದ  ಸಮಸ್ಯೆಗಳಿಗೆಲ್ಲಾ ಸಮಾಧಾನ ಸಿಗುವಂತೆ..!

ಪ್ರಪಂಚದ ಎಲ್ಲಾ ಪ್ರಶ್ನೆಗಳಿಗೆ ಒಂದೇಕಡೆ ಉತ್ತರ ಸಿಗುವಂತೆ..!!
ಸಂತೋಷ – ಸಂದೇಶಗಳು ಒಟ್ಟಿಗೇ ಸಿಗುವಹಾಗೆ..!
ನಾಟಕ ನೋಡಿದಾಕ್ಷಣಕ್ಕೆ  ಸಂತೋಷ….!
ಅಲ್ಲಲ್ಲಿ ಜೀವಮಾನಪೂರ್ತಿ ಉಪಯೋಗಕ್ಕೆ ಬರುವ ಸಂದೇಶಗಳು..!

ಸಕಲ ಜೀವಗಳಿಗಿದೋ ಸಪ್ರೇಮ ಸಂದೇಶ..

ನಿಮ್ಮ ಬೇಸರ ಕಳೆಯಬೇಕೇ..?
ದುಃಖ ದೂರಾಗಬೇಕೇ..?
ಖುಷಿ – ಋಷಿಗಳು ತುಂಬಿ ತುಳುಕಬೇಕೇ ನಿಮ್ಮೊಳಗೆ..!!?
ಜೀವನದ ಜಿಜ್ಞಾಸೆಗಳಿಗೆ ಬೇಕೇ ಪರಿಹಾರ..?
ಜೀವನದ ಜಡಕುಗಳಿಗೆ ಬೇಕೇ ಮಾರ್ಗದರ್ಶನ..?

ಆಡಿಸಿ…ಆಡಿಸಿ…
ಮತ್ತೆ ಮತ್ತೆ ಆಡಿಸಿ..!!

ನಿಮ್ಮದೇಹದ ಮನೆಯೊಳಗಿನ ಹೃದಯ ರಂಗ ಮಂದಿರದಲ್ಲಿ ಈ ರಾಮಾಯಣ ಮಹಾನಾಟಕವನ್ನು . . !
ಒಂದುಬಾರಿಗೆ ಎಷ್ಟುಕಡೆಯೂ ಆಡಿಸಲು ಬರುವ ಸೋಜಿಗವಿದು..
ಸಂಪೂರ್ಣ ಉಚಿತ..!
ಉಚಿತವೆಂದರೆ ಬಿಟ್ಟಿಯೆಂದಲ್ಲ, ಉಚಿತವೆಂದರೆ ಸಮುಚಿತವೆಂದೇ ಅರ್ಥ
. . !!

ನೋಡಿರೋ ನೋಡಿರಿ . . !
ತಪ್ಪದೇ ನೋಡಿರಿ . . .!
ಮರೆಯದೇ ನೋಡಿರಿ..
ಮರೆತು ಮೂರ್ಖರಾಗದಿರಿ..
ಆಡಿಸಿ, ನೋಡಿ – ಆನಂದಿಸಿ..

ರಾಮಬಾಣ :-
ವಿ.ಸೂ
: ಈ ನಾಟಕವನ್ನು ಸಮರ್ಪಕವಾಗಿ ಆಡಿಸಿ ನೋಡಿದವರಿಗೆ ವೈಕುಂಠದಲ್ಲಿ ನಡೆಯುವ ಸಂತೋಷ ಕೂಟದಲ್ಲಿ ನಾರಾಯಣಪ್ಪನವರು, ಪರಿವಾರದವರೊಂದಿಗೆ ಭಾಗವಹಿಸುವ ಅವಕಾಶವುಂಟು..!!!

|| ಹರೇ ರಾಮ ||

15 Responses to ಹೀಗೊಂದು ನಾಟಕದ ಜಾಹಿರಾತು..!

 1. Anuradha Parvathi

  Superb.

  [Reply]

 2. Anuradha Parvathi

  ತ್ರೇತಾಯುಗದ ಆ ನಾಟಕದಲ್ಲಿ ನಮ್ಮದೂ ಒಂದು ಪಾತ್ರ ಇದ್ದಿರಬಹುದು (ರಾಮನ ಪ್ರಜೆಯ ಪಾತ್ರ ಅಥವಾ ಯಾವುದಾದರು ಪ್ರಾಣಿಯ, ಪಕ್ಶಿಯ ಪಾತ್ರ) ಎಂದು ಕಲ್ಫನೆ ಮಾಡಿಕೊಂಡರೆ ಮೈ ಪುಳಕಗೊಲ್ಲುವುದು.

  ನಮ್ಮ ಮನಸಲ್ಲೇ ರಾಮಯಣದ ಪಾತ್ರಗಳ ಗುಣಗಳಿವೆ. ರಾಮ, ಸೀತೆ, ಲಕ್ಶ್ಮಣ, ಹನುಮಂತ, ರಾವಣ ಇತ್ಯಾದಿ. ಗುರುಗಳು ಮುಂಚಿನ ಒಂದು ಲೇಖನದಲ್ಲಿ ಹೇಳಿದ ಹಾಗೆ ರಾಮನನ್ನೇ ನೆನೆಸಿದರೆ ಅವನ ಗುಣಗಳು ನಮ್ಮಲ್ಲಿ ಬರುವುದು.

  [Reply]

 3. Raghavendra Narayana

  Simply Superb.. cheers..
  Heart is Houseful.
  .
  Shri Gurubyo Namaha.

  [Reply]

 4. Raghavendra Narayana

  ಈ ಲೇಖನವೇ ಒ೦ದು ನಾಟಕದ ಹಾಗೆ ಇದೆ,
  .
  ನಾಟಕವ ನಾವು ನೋಡಿದೆವು, ಮತ್ತೆ ಮತ್ತೆ ನೋಡುತ್ತೇವೆ..
  .
  ಪ್ರತಿಬಾರಿಯು ಹೊಸ ಸ೦ತೋಷ ಮತ್ತು ಸರಿ ಸ೦ದೇಶ ಎದೆಯಾಳಕ್ಕೆ ಇಳಿಯಲಿ ಎ೦ದು ಬೇಡುವ ಆಶೀರ್ವಾದಗಳು.

  [Reply]

 5. sree guru

  ಅತ್ಯದ್ಭುತ !

  [Reply]

 6. vdaithota

  ಸಪ್ರೇಮ ಸ೦ದೇಶದೊಡೆಯನಿಗೆ
  ಸದ್ಬಕ್ತಿಪೂರ್ವಕ ನಮನ…

  [Reply]

 7. shobha lakshmi

  ಈ ನಾಟಕ ವನ್ನೂ ನಾರಾಯಣಪ್ಪನೇ ಬರೆದ೦ತೆ ಕಾಣುತ್ತದೆ….ಅವನಲ್ಲದೆ ಇನ್ನಾರಿಗೂ ಹೀಗೆ ಬರೆಯಲು ಸಾಧ್ಯ?

  ಆ ರಾಮಾಯಣ ಕಾಲದಲ್ಲೂ ನಾವು ಏನಾದರೊ೦ದು ಪಾತ್ರದಲ್ಲಿ ಇದ್ದಿರಬಹುದಲ್ಲವೆ? ಈಗ ಈ ನಾಟಕದಲ್ಲಿ ಈ ಪಾತ್ರ….ಈ ಪಾತ್ರ ಚೆನ್ನಾಗಿದೆ……ಆ ರಾಮನ ಪ್ರತಿರೂಪ ಈ ಗುರುದೇವ….ನಿಮ್ಮ ಶಿಶ್ಯಳಾಗಿ,,,ಭಕ್ತೆಯಾಗಿ….ಸೇವಕಿಯಾಗಿ….ಇರುವ ಪಾತ್ರ…ಹೀಗೆ ಲೇಖನಗಳನ್ನು ಓದಿ ಉತ್ತರಿಸುವ ಪಾತ್ರ ಸಿಕ್ಕಿದೆ…ಅಲ್ಲ ಇದು ನೀವು ಕೊಟ್ಟಿರುವಿರು….ಇದಕ್ಕೆ ಕ್ರುತಜ್ನತೆ ಸಲ್ಲಿಸಲೂ ಹೇಗೆ೦ದು ಗೊತಾಗುದಿಲ್ಲ….ಹೇ ನಾರಾಯಣಪ್ಪ ನಿನ್ನಲ್ಲಿ ಒ೦ದು ಮನವಿ..ಅಲ್ಲ ಪ್ರಾರ್ಥನೆ…ನಿನ್ನ ಈಗಿನ ವರ್ತಮಾನದ ನಾಟಕದಲ್ಲಿ ನನಗೆ ಕೊಟ್ಟ ಪಾತ್ರವನ್ನು ನಿನಗಿಷ್ಟವಾಗುವ೦ತೆ ನಿರ್ವಹಿಸುವ೦ತೆ ಅನುಗ್ರಹಿಸು ದೇವಾ……………

  [Reply]

 8. shobha lakshmi

  ಗುರು ದೇವಾ….ಒ೦ದು ಪ್ರಶ್ಣೆ…

  ಆ ನಾರಾಯಣಪ್ಪ ಅವನಿಗಿಷ್ಟ ಬ೦ದ೦ತೆ ನಾಟಕವಾಡುತ್ತಿದ್ದಾನೆ..ಪ್ರತಿಕ್ಷಣವೂ….

  ಈಗ ಈ ಕ್ಸಣದಲ್ಲಿ ಆಡುತ್ತಿರುವ ಈ ಪ್ರಪ೦ಚದ ನಾಟಕದಲ್ಲಿ ಏನೇನೋ ಆಗಬಾರದ್ದು ಆಗುತ್ತಲ್ಲ? ದುಃಖಿತರಲ್ಲೂ ಆರ್ತರಲ್ಲೂ ಆ ನಾರಾಯಣಪ್ಪನ ಪರಿವಾರವೇ ನಾಟಕ ವಾಡುವುದೆ ? ಈಗ ನಡೆಯುತ್ತಿರುವ ಅವನ ನಾಟಕದಿ೦ದ ನಾವೇನು ಕಲಿಬಹುದು? ಯಾರನ್ನು ಆದರ್ಷ ಎ೦ದು ತಿಳಿಬಹುದು?

  ಪ್ರಪ೦ಚದಲ್ಲಿ ಹಲವಾರು ದೇವರು ಧರ್ಮ,ಜನಾ೦ಗ,ವಿವಿಧತೆ ಇದೆ..ವ್ಯತ್ಯಾಸ ಇದೆ…ಇದರಲ್ಲಿ ನಾರಾಯಣಪ್ಪ ನನ್ನು ಹಾಗೂ ಅವನ ಪರಿವಾರವನ್ನು ಎಲ್ಲಿ ಹುಡುಕಲಿ? ಯಾವಧರ್ಮದಲ್ಲಿ? ಯಾವ ದೇಶದಲ್ಲಿ? ದಯಮಾಡಿ ಉತ್ತರಿಸಬೇಕು ಎ೦ದು ಪ್ರಾರ್ಥಿಸುತ್ತಿರುವ ಶೋಭಾ

  [Reply]

 9. Sharada Jayagovind

  Naarayannappanavara naataka companya expert director matthu lightman guru Raghavappa

  Hare Rama. Superb allegory.

  sharadakka

  [Reply]

 10. shobha lakshmi

  ಅದ್ಭುತ ಅತ್ಯದ್ಭುತ ………..

  [Reply]

 11. Raghavendra Narayana

  ಕಣ್ದೆರೆದು ನೋಡು, ಚಿತ್ಸತ್ತ್ವ ಮೂರ್ತಿಯ ನೃತ್ಯ |
  ಕಣ್ಮುಚ್ಚಿನೋಡು ನಿಶ್ಚಲ ಶುದ್ಧ ಸತ್ತ್ವ ||
  …………………………. ಮ೦ಕುತಿಮ್ಮ
  .
  ಕಣ್ತೆರದರೆ ನಾಟಕ,
  ಕಣ್ಮುಚ್ಚಿದರೆ ನಾಟಕದ ನೆನಪು,
  ಕಣ್ತೆರದು ನಾಟಕದ ಬುತ್ತಿ ಬುತ್ತಿಯನೆ ಕಣ್ಣಿನ ಬುಟ್ಟಿಯಲಿ ಗಟ್ಟಿ ಗಟ್ಟಿ ಕಟ್ಟಿಕೊ೦ಡು,
  ಕಣ್ಮುಚ್ಚಿ ಬುತ್ತಿಯನು ಬಿಚ್ಚಿ ಮನಕೆ ಉಣಿಸಿದರೆ, ರ೦ಗನ ಪ್ರವೇಶ ರ೦ಗದಲಿ, ರ೦ಗು ರ೦ಗಿನ ರಾಗ ರ೦ಗಿನಲ್ಲಿ ಶಿಳ್ಳೆ ಚಪ್ಪಾಳೆ,
  ಕಣ್ತೆರದರೆ ನಾರಾಯಣಪ್ಪನ ಕುಣಿತ,
  ಕಣ್ಮುಚ್ಚಿದರೆ ನಗುತ್ತ ಕುಳಿತ ನಾರಾಯಣಪ್ಪನ ಕಾಗುಣಿತ – ಅ೦ಕ ತೆರೆಯಲು, ಅ೦ಕ ತೊರೆಯಲು.
  _
  ಶಿಳ್ಳೆ ಚಪ್ಪಾಳೆ – ರಾಗ ತಾಳ,
  ಹೊರ ರಾಗಕ್ಕೆ ಒಳ ತಾಳ, ಒಳ ರಾಗಕ್ಕೆ ಹೊರ ತಾಳ ಕೂಡಿದರೆ, ಪರಮಪ್ಪನ ಶಿಳ್ಳೆ ಚಪ್ಪಾಳೆಯ ಉಡುಗೊರೆ.
  .
  ಅಪ್ಪರ ಅಪ್ಪ ನಾರಾಯಣಪ್ಪನ ಪರಕಾಯ ಪ್ರವೇಶ ಹೇಗೆ, ಪ್ರತಿ ಪಾತ್ರ ನಾರಾಯಣಪ್ಪನ ಪ್ರದೇಶದೊಳಗೆ ಇರಲು
  .
  ಕಣ್ಣು ಮುಚ್ಚುವುದೋ, ಕಣ್ಣು ತೆರೆಯುವುದೋ,
  ಕಣ ಕಣವು ಅವನೇ ಆಗಿರುವಾಗ ಕಣ್ ತೆರೆಯುವುದು ಏಕೆ,
  ಕಣ ಕಣವು ಅವನೇ ಆಗಿರುವಾಗ ಕಣ್ ಮುಚ್ಚುವುದು ಹೇಗೆ

  [Reply]

 12. chs bhat

  ಸುಂದರ ದೃಶ್ಯದಲ್ಲಿ ಭಾಗವಹಿಸಿದ ಅನುಭವ.ಇದು ದೃಶ್ಯ ಮಾತ್ರವಲ್ಲ.ಕಾವ್ಯವೂ ಹೌದು. ಎಂಥ ಸುಂದರ ಕಲ್ಪನೆ! ಬಹುಷಃ ರಾಮಾಯಣಕ್ಕೆ ಈ ರೀತಿಯ ಕಲ್ಪನೆಯನ್ನು ಇದುವರೆಗೆ ಯಾರೂ ಕೊಟ್ಟಿರಲಿಕ್ಕಿಲ್ಲ.(ವಾಸುಕಿ ಹೊರಬೇಕಾದ ಭಾರ ಇನ್ನಷ್ಟು ಹೆಚ್ಚಾಯ್ತು!) ಹರೇ ರಾಮ.
  ಸೀಹೆಚ್ಚೆಸ್ಸ್.

  [Reply]

 13. Ashwini Bhat

  ನಾರಯಣಪ್ಪ-ಮಹಾಲಕ್ಶ್ಮಮ್ಮನವರ ಈ ಕಥೆ (ಶೈಲಿ) ತುಂಬಾ ಚೆನ್ನಾಗಿದೆ ಸಂಸ್ಥಾನ…

  [Reply]

 14. Vishwa M S Maruthipura

  ಆ ನಾಟಕದಲ್ಲಿ ಸೇತುವೆ ಕಟ್ಟಿದವರು…. ಈಗಿನ ನಾವೇ.. ಶ್ರೀ ಕಾರ್ಯಕರ್ತರು…!

  [Reply]

 15. vdaithota

  ಈ ಅದ್ಬುತ ನಾಟಕ ಎಂದಾದರೂ ಮರುಪ್ರಸಾರವಾಗುವ ಅವಕಾಶವಿದೆಯೇ????!!!!!

  [Reply]

Leave a Reply

Highslide for Wordpress Plugin