LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಮ್ಮನಿತ್ತಳು ಅಮೃತಾನ್ನವನು..

Author: ; Published On: ಸೋಮವಾರ, ಜುಲಾಯಿ 11th, 2011;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಕೌತುಕದುಂಬಿ ವೀಕ್ಷಿಸಿಯೇ ವೀಕ್ಷಿಸಿದನು ಕೌಶಿಕ..

“ಶೂನ್ಯದಲ್ಲಿ ಪೂರ್ಣವುದಯಿಸಲುಂಟೇ ?
ಏನೊಂದೂ ಇಲ್ಲದಲ್ಲಿ ಬೇಕಾದುದೆಲ್ಲವೂ ಸಿಗುವಂತಾಗುವುದು ಸಾಧ್ಯವೇ ?
ಹರಿಗೋಲಿನಲ್ಲಿ ಸಾಗರ ತರಣ ಸಂಭವವೇ.. ?
ಆಶ್ರಮವು ಅರಸೊತ್ತಿಗೆಗೆ ಆತಿಥ್ಯ ಮಾಡಲು ಶಕ್ಯವೇ ?”

ವಸಿಷ್ಠರು ಅದಾವ ಭರವಸೆಯ ಮೇಲೆ ‘ಸಕಲ ಸೇನೆಯನ್ನೂ ಸತ್ಕರಿಸುವೆ’ನೆಂದರೆಂಬುದೇ ಅರ್ಥವಾಗಲಿಲ್ಲ ಕೌಶಿಕನಿಗೆ..
“ಬೆಟ್ಟ – ಕಣಿವೆಗಳ, ದಟ್ಟ ಕಾಡುಗಳ ಈ ಪರಿಸರದಲ್ಲಿ ಸಹಸ್ರ-ಸಹಸ್ರ ಸೈನಿಕರಿಗೆ ನಿಲ್ಲಲಾದರೂ ಸ್ಥಳವೆಲ್ಲಿ ?
ದೊಡ್ಡದೊಂದು ಮಡಕೆಯೂ ಇಲ್ಲದ, ಒಬ್ಬನೇ ಒಬ್ಬ ಬಾಣಸಿಗನೂ ಇಲ್ಲದ ಆಶ್ರಮದಲ್ಲಿ ಸೇನಾಸತ್ಕಾರಕ್ಕೆ ಪರ್ಯಾಪ್ತವಾದ ಸಾಮಗ್ರಿಯೆಲ್ಲಿಂದ ಬಂದೀತು ?
ಸನ್ನಾಹವಾದರೂ ಹೇಗೆ ನಡೆದೀತು ?”

ಆದರೆ ವಸಿಷ್ಠರ ಬಳಿ ಎರಡೇ ಎರಡು ಅಕ್ಷರದ ಒಂದು ಮಹಾ ಚಮತ್ಕಾರವಿದ್ದಿತು..
ಅದು “ತಾಯಿ
ಅದು “ಗೋವು
ಅದು “ಧೇನು
ಬರಿಯ ಹಾಲು ಕೊಡುವ ಹಸುವಲ್ಲ, ಕೇಳಿದ್ದನ್ನು ಕೊಡುವ ಕಾಮಧೇನು..!

ತಾಯಿಯೆಂದರೇ ತೃಪ್ತಿ..
ತುತ್ತನ್ನಿತ್ತು ಹಸಿವಿನ ಕುತ್ತನ್ನು ದೂರ ಮಾಡುವವಳು…
ಬದುಕಿನ ಮೊತ್ತ ಮೊದಲ ತುತ್ತನ್ನಿತ್ತವಳು..
ಕರುಳ ಕುಡಿಯ ತೃಪ್ತಿಗಾಗಿ ತನ್ನ ದೇಹವನ್ನೇ ದ್ರವವಾಗಿ ಹರಿಸಿದವಳು…
ತಾಯಿಯಿಲ್ಲದ-ತಾಯಿಯಿಂದಲ್ಲದ ತುತ್ತೂ ತಬ್ಬಲಿಯೇ..
ಇದು ಸಾಧಾರಣ ತಾಯಿಯ ಮಹಿಮೆ..
ಗೋಮಾತೆಯಾದರೋ ತಾಯಿಯರ ತಾಯಿ – ಮಹಾತಾಯಿ, ತಾಯಿಗೂ ಹಾಲುಣಿಸುವವಳು..
ಹೆಚ್ಚೇನು?
ಭೂಮಾತೆಗೇ ಭೋಜನ ನೀಡುವವಳು…
ಗೋಮಾತೆಯು ನೀಡುವ ಗೋಮಯ, ಗೋಮೂತ್ರಗಳನ್ನುಂಡಲ್ಲವೇ ಭೂಮಾತೆಯು ವಿಶ್ವಕ್ಕೆಲ್ಲಾ ಅನ್ನವನ್ನು ನೀಡುವುದು…?
ವಿಶ್ವವನ್ನೇ ತರ್ಪಿಸುವವಳಿಗೆ ಸೇನಾಸಂತರ್ಪಣೆ ಒಂದು ಲೆಕ್ಕವೇ ?

ಗಗನದಲ್ಲಿ ಬೆಳಗುವ ಸೂರ್ಯನ ಬೆಳಕು ಧರಣಿಯಲ್ಲಿ ಪ್ರತಿಬಿಂಬಿಸುವಂತೆ, ವಸಿಷ್ಠರ ಸತ್ಕಾರದ ಸತ್ಸಂಕಲ್ಪವು ಶಬಲೆಯಲ್ಲಿ ಪ್ರತಿಫಲಿಸಿತು..
ರೈತನ ಹಸ್ತದಿಂದ ಬೀಜವನ್ನು ಸ್ವೀಕರಿಸಿ,ತನ್ನ ಸಾರ-ಸತ್ವಗಳನ್ನು ಅದಕ್ಕೆ ಸೇರಿಸಿ, ಹೆಮ್ಮರವಾಗಿ ಬೆಳೆಸುವ ಫಲವತಿಯಾದ ಭೂಮಿಯಂತೆ, ವಸಿಷ್ಠರ ಮನದಾಶಯವನ್ನು ಪರಿಗ್ರಹಿಸಿ ಅದಕ್ಕೆ ತನ್ನ ಮಮತೆ-ಮಹತಿಗಳನ್ನು ಬೆರೆಸಿ, ವಿಸ್ತರಿಸಿ, ವಿರಾಡ್ರೂಪವಾಗಿ ಪ್ರಕಟಿಸಿದಳು ವಿಶ್ವಜನನಿ..!

ನೋಡಲು ಬರಿಯ ದನ
ಆದರೆ ಅದರ ಮಮತೆಗೆ ಸೃಷ್ಟಿಯೆಲ್ಲ ಸ್ಪಂ-ದನ !!

ಸೈನ್ಯಸಂತರ್ಪಣೆಗೆ ಸಮುದ್ಯುಕ್ತಳಾದ ಶಬಲೆಯು ಒಮ್ಮೆ ತನ್ನ ದಕ್ಷಿಣಚರಣವನ್ನೆತ್ತಿ ಕೆಳಗಿರಿಸಿದಳು..
ಗೋಮಾತೆಯ ಚರಣವು ಭೂಮಾತೆಯನ್ನು ಸೋಕುತ್ತಿದ್ದಂತೆಯೇ – ಸ್ಪರ್ಶಮಾಧ್ಯಮದಲ್ಲಿಯೇ ಆ ಮಹಾತಾಯಿಯರಿಬ್ಬರು ಅದೇನು ಮಾತನಾಡಿಕೊಂಡರೋ – ಕೌಶಿಕನ ಸೈನ್ಯವು ಪರಮಾಶ್ಚರ್ಯದಿಂದ ವೀಕ್ಷಿಸುತ್ತಿದ್ದಂತೆಯೇ ಹಳ್ಳ-ದಿಣ್ಣೆಗಳಿಂದ ಕೂಡಿದ್ದ, ವಿಸ್ತಾರವಾದ, ಆಶ್ರಮ ಪರಿಸರದ ನೆಲವೆಲ್ಲವೂ ಕ್ಷಣಮಾತ್ರದಲ್ಲಿ ಸಮತಲವಾಗಿ ಪರಿವರ್ತಿತವಾಗಿಹೋಯಿತು..!
ಅಲ್ಲಿ ಕಲ್ಪವೃಕ್ಷವನ್ನು ಹೋಲುವ, ಬಗೆ ಬಗೆಯ ಶುಭ ವೃಕ್ಷಗಳು ಉಗಮಿಸಿದವು..
ಅವುಗಳಲ್ಲಿ ಸೌಂದರ್ಯ-ಸೌರಭಗಳಿಂದೊಪ್ಪುವ ಸುಪುಷ್ಪಗಳು, ಸುಮಧುರ ಸುಫಲಗಳು ಕಾಣಿಸಿಕೊಂಡವು..
ಮುದ ನೀಡುವ ಮೃದು-ಮಧುರಸ್ಪರ್ಶದ, ಕಣ್ತಣಿಸುವ, ಹಚ್ಚಹಸುರ ಹುಲ್ಲುಹಾಸುಗಳು ಅಲ್ಲಿ ಅನಾವರಣಗೊಂಡವು..
ಮಧ್ಯಕೇಂದ್ರದಲ್ಲಿ ಭೂದೇವಿಯ ಬೈತಲೆಯಂತೆ ಕಂಗೊಳಿಸುವ, ಸುವಿಶಾಲ ರಾಜಮಾರ್ಗ..
ಅಲ್ಲಿ ಚೆಲ್ಲಿದ ಚೆಲುಚೆಲುವಿನ ಹೂವುಗಳ ರಂಗು ರಂಗು..
ಸಿಂಪಡಿಸಿದ ಸುಗಂಧಜಲದ ತಂಪು-ಕಂಪು..
ಕೌಶಿಕನ ಒಡನಾಡಿಗಳ ವಿಶ್ರಾಂತಿಗಾಗಿ ಇಕ್ಕೆಲಗಳಲ್ಲಿ ಬೆಳ್ಳಿಬೆಟ್ಟಗಳ ಮಾಲಿಕೆಯನ್ನು ನೆನಪಿಸುವ ಸೌಧಗಳ ಪಂಕ್ತಿ..
ಮಹಾಮಾರ್ಗದ ಪರ್ಯವಸಾನದಲ್ಲಿ ಬೆಳ್ಳಿಮೋಡದಂತೆಸೆವ, ರತ್ನಚಿತ್ರಿತವಾದ ರಾಜಭವನ..

ಮಾತು ಬಾರದವೂ ಮಾತೆಯ ಮಮತೆಗೆ ಹೊರತಾಗಲಿಲ್ಲ..
ಅನತಿ ದೂರದಲ್ಲಿ ಅಶ್ವಗಳಿಗಾಗಿ ಅಶ್ವ ಶಾಲೆ, ಆನೆಗಳಿಗಾಗಿ ಗಜಶಾಲೆ, ಒಂಟೆ – ಹೇಸರಗತ್ತೆಗಳಿಗಾಗಿ ಪ್ರತ್ಯೇಕ ಲಾಯಗಳು..
ನೋಡನೋಡುತ್ತಿದ್ದಂತೆಯೇ ಕೌಶಿಕನ ರಾಜಧಾನಿಯನ್ನೂ ಮೀರಿಸುವ, ಮೈಮನಗಳನ್ನು ಮರೆಸುವ ವೈಭವದ ಮಹಾನಗರಿಯೊಂದು ಅಲ್ಲಿ ವಿನಿರ್ಮಿತವಾಯಿತು..

ಚರಣಸ್ಪರ್ಶಮಾತ್ರದ ಚಮತ್ಕಾರವಿದು !!

ಅಮೃತಲತೆಯಂತಿದ್ದ ತನ್ನ ಪುಚ್ಛವನ್ನೊಮ್ಮೆ ಆಕೆ ಬೀಸುತ್ತಿದ್ದಂತೆಯೇ ಅಲ್ಲಿ ಹಿಮಶೀತಲವಾದ ಮಾರುತವು ಮಂದ – ಮಂದವಾಗಿ ಬೀಸತೊಡಗಿತು..
ಆ ಅಭೂತಪೂರ್ವ ಆತಿಥ್ಯದಲ್ಲಿ ಸಹಭಾಗಿಯಾಗಲು ಸೃಷ್ಟಿಯ ಸಕಲ ಸುಂದರ-ಸ್ವಾದಿಷ್ಠ ಸಂಗತಿಗಳನ್ನು ಆಹ್ವಾನಿಸುತ್ತಿರುವಳೋ ಎಂಬಂತೆ ಆಕೆ
ಗೈದ ‘ಅಂಬಾ’ ಧ್ವನಿಗೆ ಅಂಬರದಲ್ಲಿ ದೇವ ದುಂದುಭಿಗಳು ಮಾರ್ದನಿಗೈದವು..
ಅವ್ಯಕ್ತಮಧುರವಾದ ಗಾಯನ-ವಾದನಗಳು ಹಿಂಬಾಲಿಸಿದವು ಅಂಬಾಧ್ವನಿ-ಅಂಬರಧ್ವನಿಗಳನ್ನು..
ಶಬಲೆಯ ಶೃಂಗದ ಸನ್ನೆಗೆ ದಿವಿಯಿಂದ ದಿವ್ಯಸ್ತ್ರೀಯರ ದಂಡು-ದಂಡುಗಳೇ ಭುವಿಗಿಳಿದವು..

ದೇವ-ದೇವಿಯರು, ಗಂಧರ್ವಾಪ್ಸರೆಯರು, ಸಿದ್ಧ-ಚಾರಣರು, ಯಕ್ಷ-ವಿದ್ಯಾಧರರು, ದೇವರ್ಷಿ-ಬ್ರಹ್ಮರ್ಷಿಗಳು, ಕಾಮಧೇನು-ಕೌಶಿಕರ ಕೌತುಕಸಮಾಗಮವನ್ನು ವೀಕ್ಷಿಸಲು ನಭೋಮಂಡಲದಲ್ಲಿ ಸಮಾವೇಶಗೊಳ್ಳುತ್ತಿದ್ದಂತೆಯೇ……

ಹೃದಯದಲ್ಲಿ ವಸಿಷ್ಠರನ್ನು ಧರಿಸಿ, ಅಚ್ಚೊತ್ತಿದ್ದ ಅಚ್ಚರಿಯೊಡನೆ ಅವಾಕ್ಕಾಗಿ ನಿಂತಿದ್ದ ಕೌಶಿಕನನ್ನೊಮ್ಮೆ ಕರುಣೆಯ ಕಣ್ತೆರೆದು ವೀಕ್ಷಿಸಿದಳು ವಿಶ್ವಜನನಿ…
ಮರುಕ್ಷಣವೇ…..
ಒಡಲಲ್ಲಿ ತುಂಬಿದ ವಾತ್ಸಲ್ಯವು ಒಳ ಹಿಡಿಸಲಾರದೇ ಹೊರ ತುಳುಕಿತು ಹಾಲಾಗಿ…
ಇಳಿಯಿತು ಇಳೆಗೆ ಮೊದಮೊದಲು ಹನಿ-ಹನಿಯಾಗಿ …
ಬರಬರುತ್ತಾ ಧಾರೆ- ಧಾರೆಯಾಗಿ … ತೊರೆಯಾಗಿ… ತೆರೆ-ತೆರೆಯಾಗಿ…
ಕೊನೆಗೆ ನೊರೆ-ನೆರೆದು ಹರಿಯಿತು ಪ್ರತಿಗಂಗೆಯಾಗಿ…..

ಹಾಲು ಹೊಳೆಯಾಗಿ ಹರಿಯಿತು..
ಜೇನು ಮಳೆಯಾಗಿ ಸುರಿಯಿತು…
ಮೊಸರಿನ ಮಡುಗಳಾದವು…
ಬೆಣ್ಣೆಯ ಬೆಟ್ಟಗಳೆದ್ದವು…
ತುಪ್ಪದ ಕಾಲುವೆಗಳು ಹರಿದವು…
ಕಬ್ಬಿನ ಹಾಲಿನ ಝರಿಗಳು ಧುಮ್ಮಿಕ್ಕಿದವು..
ಆ ಕ್ಷೀರವಾಹಿನಿಯ ಕಿನಾರೆಯಲ್ಲಿ ಸಕ್ಕರೆಯೇ ಮರಳಾಯಿತು..

ಹಾಲಹೊಳೆಯಿಂದಲಾಗಿ ವಸಿಷ್ಠಾಶ್ರಮಕ್ಕೆ ವೈಕುಂಠದಕಳೆ ಬಂದಿತು..
ಅಂತರವೊಂದೇ…
ವೈಕುಂಠದ ಹಾಲಲ್ಲಿಹರಿವಿಲ್ಲ, ಇಲ್ಲಿ ಹರಿವಿತ್ತು..!
ಬಿಳಿ ಬಿಳಿ ಬಣ್ಣದ, ಬಿಸಿ ಬಿಸಿ ಅನ್ನದ ಬೃಹದಾಕಾರದ ರಾಶಿಗಳನ್ನು ಕಂಡ ಸಿದ್ಧ – ಚಾರಣರು
‘ಇದೇನು ! ಕೈಲಾಸವೇ ಇಳಿದುಬಂತೇ ಇಲ್ಲಿಗೆ? ಎಂದು ಬೆರಗಾದರು..
ಆದರೊಂದು ಭಿನ್ನತೆ..
ವಿಶ್ವೇಶ್ವರನ ಕೈಲಾಸವು ತಂಪು ಚೆಲ್ಲಿದರೆ, ವಿಶ್ವಾಮಿತ್ರನಿಗಾಗಿ ನಿರ್ಮಿತವಾದ ಆ ಅನ್ನ(ಅಗ್ನಿ?)ಪರ್ವತವು ಬಿಸಿಯುಗುಳುತ್ತಿತ್ತು..!

ಶಬಲೆಯ ನಿಶ್ವಾಸದಿಂದ ಹೊರಹೊಮ್ಮಿತೊಂದು ಅನಿರ್ವಚನೀಯ ದಿವ್ಯಸುಗಂಧ…
ಮೆಲ್ಲಮೆಲ್ಲನೆ ವಾತಾವರಣವನ್ನೆಲ್ಲಾ ವ್ಯಾಪಿಸುತ್ತ ಅದು ಕೌಶಿಕಪರಿವಾರವನ್ನು ಘ್ರಾಣಸೌಖ್ಯದ ಅದ್ಯಾವುದೋ ಉತ್ತುಂಗಸ್ಥಿತಿಗೆ ಕರೆದೊಯ್ದಿತು..
ಶಬಲೆಯು ಒಮ್ಮೆ ಮೈಕೊಡವುತ್ತಿದ್ದಂತೆಯೇ ಆಕೆಯ ರೋಮರಾಜಿಗಳಿಂದ ಅನಂತಸೇವಕ-ಸೇವಕಿಯರು ಹೊರಹೊಮ್ಮಿದರು..
ಕೌಶಿಕನ ಒಬ್ಬೊಬ್ಬ ಸೈನಿಕನಿಗೆ ಎಂಟೆಂಟು – ಹತ್ತತ್ತು ಜನರಂತೆ ಉಪಚರಿಸತೊಡಗಿದರು..

ಗೋಮಾತೆಯ ಶ್ರೀಮುಖದಿಂದ ಸ್ರವಿಸಿತೊಂದು ಅಮೃತಬಿಂದು..
ಪ್ರಣವನಾದವೊಂದರಿಂದಲೇ ಬಗೆಬಗೆಯ ಶಬ್ದಗಳು ಪ್ರಾದುರ್ಭವಿಸುವಂತೆ , ಪರಮಾತ್ಮ ಬಿಂದುವೊಂದರಿಂದಲೇ ಅನಂತಪ್ರಕಾರದ ಪ್ರಪಂಚವು ಪ್ರಕಟವಾಗುವಂತೆ,
ಗೋಮುಖದಿಂದ ಹೊರಹೊಮ್ಮಿದ ಲಾಲಾಬಿಂದುವೊಂದರಿಂದಲೇ ನೂರು-ಸಾವಿರಬಗೆಯ ಭಕ್ಷ್ಯ – ಭೋಜ್ಯಗಳು, ಲೇಹ್ಯ – ಚೋಷ್ಯಗಳು, ಖಾದ್ಯಗಳು ಆವಿರ್ಭಾವಗೊಂಡವು..

ಉತ್ತಮೋತ್ತಮವಾದ ಸ್ವಾದ-ಸುಗಂಧಗಳು ಉತ್ತಮೋತ್ತಮವಾದ ಭಕ್ಷ್ಯಗಳಲ್ಲಿ ..
ಉತ್ತಮೋತ್ತಮವಾದ ಭಕ್ಷ್ಯಗಳು ಹೇಮ-ರತ್ನವಿಭೂಷಿತವಾದ, ಶಿಲ್ಪಚಿತ್ರಿತವಾದ ಉತ್ತಮೋತ್ತಮ ಪಾತ್ರಗಳಲ್ಲಿ..
ಉತ್ತಮೋತ್ತಮವಾದ ಪಾತ್ರಗಳು ಅತಿಶಯಿತ ಲಾವಣ್ಯದ ಸ್ವರ್ಗದ ವರನಾರಿಯರ ಕಮನೀಯ ಕರಕಮಲಗಳಲ್ಲಿ..
ಉನ್ಮಾದವೇ ಆವರಿಸಿತು ಸಕಲರನ್ನೂ..

ಸಾಮಾನ್ಯ ತಾಯಿಯು ಮಗುವಿಗೆ ಚಂದ್ರನನ್ನು ತೋರಿಸಿ, ಇಂದ್ರಲೋಕದ ಕಥೆ ಹೇಳಿ ಭೂಮಿಯ ತುತ್ತನ್ನು ಮಗುವಿಗೆ ಉಣಬಡಿಸುವುದುಂಟು..
ಆದರೆ ಮಾತೇ ಇಲ್ಲದ ಈ ಮಾತೆಯು ಇಂದ್ರಲೋಕವನ್ನೇ ಭುವಿಗಿಳಿಸಿದಳೆಂದರೆ,ಅಮೃತಾನ್ನವನ್ನೇ ಉಣಬಡಿಸಿದಳೆಂದರೆ ಅಚ್ಚರಿಯಾಗದಿರದೇ?

ಅಚ್ಚರಿಯಾಗಬೇಕಿಲ್ಲ..
ಅನಂತ ಪ್ರೇಮದೊಡನೆ ಅಸದೃಶ ಮಹಿಮೆಯು ಸಮ್ಮಿಳಿತಗೊಂಡಲ್ಲಿ ಆಗುವುದು ಹೀಗೆಯೇ ..
ಮಾತೆಯ ಮಮತೆಯ ಮಹತಿಯು ಮನಸ್ಸಿಗೆ ಬಂದವರಿಗೆ, ಮಹಿಮೆಯ ಮರ್ಮಗಳು ಅರಿವಾದವರಿಗೆ ಇದು ಅಚ್ಚರಿಯಲ್ಲ,ಸಹಜ..
ಅತ್ಯಂತಸಹಜ..
ಹಾಗಲ್ಲದಿದ್ದರೆ ಅಂತವಿಲ್ಲದ ಅಚ್ಚರಿ…
ಕೌಶಿಕನಿಗೆ ತೀರದ ಅಚ್ಚರಿಯೆನಿಸಿದ ಶಬಲೆಯ ನವ ಸೃಷ್ಟಿಯು ವಸಿಷ್ಠರಿಗೆ ತೀರಾ ಸಹಜವೇ ಆಗಿತ್ತು..!

~*~*~*~

<< ಅಮ್ಮನೂ – ಅನ್ನವೂ – ತೃಪ್ತಿಯೂ

32 Responses to ಅಮ್ಮನಿತ್ತಳು ಅಮೃತಾನ್ನವನು..

 1. ಜಗದಿಶ

  ಅಂತಹ ಪುಣ್ಫ್ಯ ಕೋಟಿಯೇ ಇಂದು ದುರ್ಜನರ ಆಹಾರವಾಗುತ್ಫ್ತಿರುವುದು ದುರಂತವೇ ಸರಿ.

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಾಟಕವನ್ನು ನೋಡಿದ ಮೇಲಾದರೂ ಒಂದೊಂದು ವಾಕ್ಯಗಳು ಸರಿಯಾಗಿ ಅರ್ಥವಾಗಬಹುದೇನೋ…

  [Reply]

 3. ಮರುವಳ ನಾರಾಯಣ

  ಹರೇ ರಾಮ
  ವಾಲ್ಫ್ಮೀಕಿ ರಾಮಯಣದಲ್ಫ್ಲಿ ಇಂತಹ ಸನ್ಫ್ನಿವೇಶಗಳ ಬಗೆಗೆ ಉಲ್ದ್ಫ್ಲೇಖವಿರುವುದು ತಿಳಿದೇ ಇರಲಿಲ್ಫ್ಲ.

  ಮರುವಳ ನಾರಾಯಣ

  [Reply]

 4. ನಂದ ಕಿಶೋರ ಬೀರಂತಡ್ಕ

  :)

  [Reply]

 5. Dr Amrita Prasad

  ಹರೇ ರಾಮ’– ಶ್ರೀ ಸಂಸ್ಥಾನ ವಿವರಿಸಿದ ವೈಭವಗಳು ಶ್ರೀ ಮಟ ನಡೆಸಿದ ಎಲ್ಲಾ ಕಾರ್ಯಕ್ರಮದಲ್ಲಿ ಕಾಣಬಹುದು.ರಾಮಾಯಣ ಮಹಾಸತ್ರವಿರಬಹುದು,ರಾಮ ಕಥಾ ,ಕೋಟಿ ನೀರಾಜನ ,ವಿರಾಟ ಪೂಜಾ ……………..

  ಇಂಥದೊಂದು ಕಾರ್ಯಕ್ರಮ ಸಾಧ್ಯವಾ ಎಂದು ಯೋಚಿಸುತ್ತಿರುವಾಗಲೇ ಅವು ಅಷ್ಟು ವಿಜೃಂಭಣೆ ಯಿಂದ ನಡೆದೇ ಹೋಗಿರುಥದೆ.ಇಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ವರದ ಹಸ್ತರಾದ ವಸಿಷ್ಟರು ಮಂಗಳಪ್ರದವಾದ ‘ಕಾಮಧೇನು

  ಸದಾ ವಿರಾಜಮಾನರಾಗಿರುವುದು ನಮ್ಮೆಲ್ಲರಿಗೂ ಗೋಚರಿಸುತ್ತದೆಯಲ್ಲವೇ ?

  [Reply]

 6. Raghavendra Narayana

  “ಗಗನದಲ್ಲಿ ಬೆಳಗುವ ಸೂರ್ಯನ ಬೆಳಕು ಧರಣಿಯಲ್ಲಿ ಪ್ರತಿಬಿಂಬಿಸುವಂತೆ, ವಸಿಷ್ಠರ ಸತ್ಕಾರದ ಸತ್ಸಂಕಲ್ಪವು ಶಬಲೆಯಲ್ಲಿ ಪ್ರತಿಫಲಿಸಿತು..
  ರೈತನ ಹಸ್ತದಿಂದ ಬೀಜವನ್ನು ಸ್ವೀಕರಿಸಿ,ತನ್ನ ಸಾರ-ಸತ್ವಗಳನ್ನು ಅದಕ್ಕೆ ಸೇರಿಸಿ, ಹೆಮ್ಮರವಾಗಿ ಬೆಳೆಸುವ ಫಲವತಿಯಾದ ಭೂಮಿಯಂತೆ, ವಸಿಷ್ಠರ ಮನದಾಶಯವನ್ನು ಪರಿಗ್ರಹಿಸಿ ಅದಕ್ಕೆ ತನ್ನ ಮಮತೆ-ಮಹತಿಗಳನ್ನು ಬೆರೆಸಿ, ವಿಸ್ತರಿಸಿ, ವಿರಾಡ್ರೂಪವಾಗಿ ಪ್ರಕಟಿಸಿದಳು ವಿಶ್ವಜನನಿ..!”
  .
  “ಚರಣಸ್ಪರ್ಶಮಾತ್ರದ ಚಮತ್ಕಾರವಿದು !!”
  .
  “ಅಮೃತಲತೆಯಂತಿದ್ದ ತನ್ನ ಪುಚ್ಛವನ್ನೊಮ್ಮೆ ಆಕೆ ಬೀಸುತ್ತಿದ್ದಂತೆಯೇ ಅಲ್ಲಿ ಹಿಮಶೀತಲವಾದ ಮಾರುತವು ಮಂದ – ಮಂದವಾಗಿ ಬೀಸತೊಡಗಿತು..”
  .
  “ಒಡಲಲ್ಲಿ ತುಂಬಿದ ವಾತ್ಸಲ್ಯವು ಒಳ ಹಿಡಿಸಲಾರದೇ ಹೊರ ತುಳುಕಿತು ಹಾಲಾಗಿ…
  ಇಳಿಯಿತು ಇಳೆಗೆ ಮೊದಮೊದಲು ಹನಿ-ಹನಿಯಾಗಿ …
  ಬರಬರುತ್ತಾ ಧಾರೆ- ಧಾರೆಯಾಗಿ … ತೊರೆಯಾಗಿ… ತೆರೆ-ತೆರೆಯಾಗಿ…
  ಕೊನೆಗೆ ನೊರೆ-ನೆರೆದು ಹರಿಯಿತು ಪ್ರತಿಗಂಗೆಯಾಗಿ…..”
  .
  “ಪರಮಾತ್ಮ ಬಿಂದುವೊಂದರಿಂದಲೇ ಅನಂತಪ್ರಕಾರದ ಪ್ರಪಂಚವು ಪ್ರಕಟವಾಗುವಂತೆ”
  .
  “ಉನ್ಮಾದವೇ ಆವರಿಸಿತು ಸಕಲರನ್ನೂ..”
  .
  “ಆದರೆ ಮಾತೇ ಇಲ್ಲದ ಈ ಮಾತೆಯು ಇಂದ್ರಲೋಕವನ್ನೇ ಭುವಿಗಿಳಿಸಿದಳೆಂದರೆ”
  .
  “ಅನಂತ ಪ್ರೇಮದೊಡನೆ ಅಸದೃಶ ಮಹಿಮೆಯು ಸಮ್ಮಿಳಿತಗೊಂಡಲ್ಲಿ ಆಗುವುದು ಹೀಗೆಯೇ ..”
  .
  “ಕೌಶಿಕನಿಗೆ ತೀರದ ಅಚ್ಚರಿಯೆನಿಸಿದ ಶಬಲೆಯ ನವ ಸೃಷ್ಟಿಯು ವಸಿಷ್ಠರಿಗೆ ತೀರಾ ಸಹಜವೇ ಆಗಿತ್ತು..!”
  .
  .
  ಗುರುವೇ, ಸಹಸ್ರ ಸಹಸ್ರ ನಮನಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  ಉನ್ಮಾದವೇ ಆವರಿಸಿದೆ ಇಲ್ಲಿ..
  ಆಹಾ.. ಆಹಾ.. ಆ ಲೋಕ ಇಲ್ಲಿ ಸೃಷ್ಟಿಯಾದ೦ತಿದೆ, ತೇಲಾಡಿದ೦ತಿದೆ, ಉನ್ಮಾದವೇ ಆವರಿಸಿದೆ.. ಉನ್ಮಾದವೇ ಆವರಿಸಿದೆ.. ಆಹಾ.. ಆಹಾ..
  .
  ಶ್ರೀ ಗುರುಭ್ಯೋ ನಮಃ

  [Reply]

 8. ಪ್ರೇಮಲತಾ.

  ಅಮ್ಮನೂ… ಅಮೃತಾನ್ನವೂ….. !!!!!

  ಅನಂತ ಪ್ರೇಮ, ಅಸದೃಶ ಮಹಿಮಾ ಸಿರಿಯಾಗಿ – ಶಾಂತತೆ, ಸದ್ಗುಣಗಳ ಶಕ್ತಿಯೇ ಆಗಿ – ಕಾಮಧೇನು ಕರುಣೆ ಪ್ರಕಟಗೊಳಿಸಿದ ಈ ಅದ್ಭುತ ಲೋಕದ ವರ್ಣನೆ ಅತಿ ರೋಚಕ..! ಅನುಪಮ..!!
  ಓದುವಾಗಲೇ ಇಷ್ಟೊಂದು ಅಚ್ಚರಿ..ಬೆರಗು.. , ಇನ್ನು ಕಣ್ಣಾರೆ ಕಂಡ ಕೌಶಿಕನ ಪರಿವಾರದ ಪಾಡೆನ್ತಿರಬಹುದು??!!!
  ಮತ್ತೆ ಮತ್ತೆ ಓದಿಸಿಕೊಳ್ಳುತ್ತಿದೆ…. :)

  ಶ್ರದ್ಧಾನಮನಗಳು ,
  ಹರೇರಾಮ.

  [Reply]

 9. ಶ್ರೀಹರ್ಷಜೋಯ್ಸ್

  ಸಂಸ್ಥಾನಾ… ನನ್ನದೊಂದು ಸಂದೇಹ, ಕೇಳಲೆ..?

  ವೈಕುಂಠವೆಂದರೆ ಎಲ್ಲವೂ ಸ್ಥಿರವಲ್ಲವೇ..?
  ವಸಿಷ್ಠರು ಸೃಷ್ಟಿಸಿದ್ದು ವಿಶ್ವಾಮಿತ್ರನಿಗಾಗಿ, ಅಲ್ಲಿ ಎಲ್ಲದಕ್ಕೂ ಚಲನೆ ಇದೆಯಲ್ಲಾ?
  ಎರಡಕ್ಕೂ ಹೇಗೆ ಹೋಲಿಕೆ ಗುರುವೇ ?

  [Reply]

 10. ಅಶ್ವಿನಿ

  ಭೂತ ಭವಿತವ್ಯಗಳ ಸುಂದರ ವರ್ತಮಾನವಾಗಿಸಿ ಕೊಡುವ ಗುರು ಕರುಣೆಯ ವರ್ಣನೆಗೆ ಪದಗಳಿಲ್ಲ.

  ಅದ್ಭುತ ಲೋಕವೊಂದರ ಪರಮಾದ್ಭುತ ಅನಾವರಣ..!!

  ಹರೇ ರಾಮ.

  [Reply]

 11. GGHEGDE TALEKERI

  Gurugala charanaravindagalige koti koti pranamagalu.
  Bhagavadlileeya munde ennenide.Adu gurukarunyadinda gocharavaguttide.

  [Reply]

 12. nandaja haregoppa

  ಹರೇ ರಾಮ

  ಕನಸಿನ ಲೋಕವೊ೦ದು ತೆರೆದ೦ತಿದೆ ,ಇದು ನನಸಾಗುವುದೆ೦ದು? ಅಮ್ಮನಿತ್ತ ಅಮ್ರತ ಕುಡಿದ ಮಕ್ಕಳು ವಿಷ ಕಾರುವದೇಕೆ?

  ಶಬಲೆ ಇಳಿದ ಈ ಲೋಕ ವಿಷಮಯವಾಯಿತೇಕೆ? ಮತ್ತೆ ಶಬಲೆಯನ್ನು ಕರೆದು ತ೦ದು ಈ ಲೋಕವನ್ನು

  ಅಮ್ರತಮಯವಾಗಿಸಬಹುದೆ?

  [Reply]

 13. CH S BHAT

  ಶಬಲೆಯ ಸೃಷ್ಟಿಯ ಅದ್ಭುತಗಳನ್ನು ವರ್ಣಿಸಿದ ಆದಿಕವಿಯ ಕೃತಿ ವರ್ಣನಾತೀತ. ಪರಮಹಂಸರು ಪಾಮರರಿಗೆ ಅದನ್ನು ಉಣಬಡಿಸಿದ ಶೈಲಿ ಇನ್ನೂ ಅದ್ಭುತ. “ಅಬ್ಬ” ಎಂದು ಕೌಶಿಕನಂತೆ ನಾವೂ ಬಾಯಿ ತೆರೆಯುವುದೇ!!!
  ಹರೇರಾಮ. ಸೀಎಚ್ಚೆಸ್ಸ್.

  [Reply]

 14. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಮಕ್ಕಳು ಹಸಿದಾಗ ನೀಡಲು ಅಮ್ಮನ ಬಳಿ ಅಮೃತವಿಲ್ಲದಿದ್ದರೂ, ಅಮೃತ ತುಂಬಿಕೊಂಡಿರುವಾಗ ಮಕ್ಕಳು ಸ್ವೀಕರಿಸದಿದ್ದರೂ ಅಮ್ಮನಿಗೆ ಸಮಾನ ಅತೃಪ್ತಿ…

  [Reply]

 15. gopalakrishna pakalakunja

  ಕೇವಲ ಕ್ಷತ್ರಿಯ ರಾಜ ಕೌಶಿಕನನ್ನು ಮಹಾ ಬ್ರಾಹ್ಮಣ ಬ್ರಹ್ಮ ಋಷಿ ವಿಶ್ವಾಮಿತ್ರ ನನ್ನಾಗಿಸುವುದಕ್ಕೆ ನಡೆದ ಪೂರ್ವ ತಯಾರಿಯಲ್ಲಿ ಸಂಭ್ರಮಿಸಿದ ” ಮಾಯೆ ” ಶಬಲೆ ಯ ರೂಪದಿಂದ ಸಮಸ್ತ ವನವನ್ನೂ ಆತನ ಮನವನ್ನೂ ಆವರಿಸಿದ್ದು ತೆರೆ ಸರಿಸಿ ನೋಡಿದರೆ ಸ್ಪಷ್ಟ ವಾಗಿ ಅರಿವಾಗುತ್ತದಲ್ಲವೇ ಗುರುವರ್ಯ ?

  ಮುಂದಿನದು ಅರಿಯದ ಜನ ಸಾಮಾನ್ಯರು ವರ್ತಮಾನದ ಘಟನೆ ಯನ್ನೇ ಅವಲಂಬಿಸಿ ಕೊಡುವ ತೀರ್ಮಾನ ಒಂದಾದರೆ ದೈವ ಸಂಕಲ್ಪ ಬೇರೆಯೇ ಇರುತ್ತದೇ ಎನ್ನಲು ಇದು ಯೋಗ್ಯ ಉದಾಹರಣೆ ಯಲ್ಲವೇ ?

  [Reply]

 16. Raghavendra Narayana

  “ಅಮ್ಮನಿತ್ತಳು ಅಮೃತಾನ್ನವನು..” – ಅಮ್ಮನ ಅಮೃತಾನ್ನವನ್ನು ಉ೦ಡು ಬಹುದಿನಗಳಾದವು.
  .
  ರಾಮ ರಾಜ್ಯ ಲೇಖನಗಳು ಜನರಿಗೆ ಲೋಕಕ್ಕೆ ಬೇಕು. ಅಣ್ಣಾ ಹಜಾರೆಯ ಹಾಗೆ ಉಪವಾಸ ಮಾಡುವ ಅಶೋಕೆಯಲ್ಲಿ???
  ಚಾತುರ್ಮಾಸ್ಯ ಒಳ್ಳೆಯ ಕಾಲ ಉಪವಾಸ ಮಾಡಿ ಒಳ್ಳೆಯದು ಎ೦ದು ಗುರುಗಳು ಹೇಳಿದರೆ ಸ್ವಲ್ಪ ಕಷ್ಟ.
  ಸ್ವಲ್ಪ ಸ್ವಲ್ಪ ಕಾಫೀ ತಿ೦ಡಿ ಊಟ ರಾಮಕಥೆ ಸೇವಿಸುತ್ತಾ ಉಪವಾಸ ಮಾಡಬಹುದೇನೊ…
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಉತ್ತರಕೆ ಬಾಯಿಲ್ಲವಯ್ಯಾ..

  [Reply]

  Raghavendra Narayana Reply:

  ಗುರುಕರುಣೆಯಿ೦ದ ಒ೦ದಲ್ಲ ಒ೦ದು ರೀತಿಯಲ್ಲಿ ಅಮೃತಾನ್ನ ಸಿಕ್ಕುತ್ತಲೆ ಇದೆ..
  ಹಸು ಹಾಗು ಹಶುವಾಗಬೇಕು..
  .
  ಜಗದ ತೃಷೆ ಇ೦ಗಬೇಕು, ಈಶನ ತೃಷೆ ಹಿ೦ಡಬೇಕು ನಮ್ಮೊಡಲ?
  .
  ಶ್ರ‍ೀ ಗುರುಭ್ಯೋ ನಮಃ

  [Reply]

 17. Vidya Ravishankar

  ಹರೇರಾಮ। ”ಸರ್ವಾಭೀಷ್ಟ ಫಲದಾಯಕ” ಈ ಅಮೃತಾನ್ನವ ನೀಡುವ ಅಮ್ಮ.

  [Reply]

 18. B.V.Narayana Bhat

  ಶ್ರೀ ಗುರುಭ್ಯೋನಮಃ ಅಶೋಕೆಯಲ್ಲಿ ಬಹಳ ಉತ್ತಮ ಕಾರ್ಯಗಳು ನವೆಯಲಿ. ಜಗತ್ತಿಗೆ ಒಳಿತಾಗಲಿ. ಶ್ರೀ ಗುರುಗಳಿಂದ ರಾಮರಾಜ್ಯ ಉಂಟಾಗಲಿ. ಹರೇ ರಾಮ.

  [Reply]

 19. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮೃತ ತುಂಬಿಕೊಳ್ಳದೆ ಅಮೃತ ಹರಿಯುವುದೆಂತು… ಅಮೃತ ತುಂಬಿ ತುಳುಕಬೇಕಾದರೆ ಪ್ರಯತ್ನ ಬೇಕೋ, ಸಮಯ ಬರಬೇಕೋ… ಏನು ಆಟವೋ, ಲೀಲಾ ನಾಟಕವೋ… ರಾಮ… ಸರ್ವಸ್ವವೂ ನೀನೆ…

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹುಟ್ಟು ಗುಣ ಗಟ್ಟ ಹತ್ತಿದರೂ ಬಿಡದು… ಅಮೃತ ಧಾರೆಯು ಬಾಯಿಗೆ ಬೀಳುತ್ತಿದ್ದರೂ, ಬಾಯಿ ಮುಚ್ಚಿಕೊಂಡು ಅಮೃತಕ್ಕಾಗಿ ಹುಡುಕಾಡಿದರೆ ಏನೆನ್ನೋಣ?

  [Reply]

 20. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮ್ಮನಾದವಾಗಲೇ ತಿಳಿಯುವುದು ಅಮ್ಮನ ಕಷ್ಟ. ಒಂದೆರಡು ಮಕ್ಕಳನ್ನೇ ಸಲಹಲು ಇಷ್ಟು ಕಷ್ಟ ಪಡುವ ನಾವು ಇಷ್ಟೊಂದು ಮಕ್ಕಳನ್ನು ಒಮ್ಮೆಲೇ ಸಲಹುತ್ತಿರುವ ಈ ಅಮ್ಮನು ಅದೆಷ್ಟು ಕಷ್ಟ ಪಡುತ್ತಿರಬಹುದು ಎಂದು ಯೋಚಿಸಬೇಕಾಗಿದೆ… ಅಮ್ಮನ ಜೊತೆಗೆ ಕೈ ಜೋಡಿಸೋಣ… ಅಮ್ಮನ ದನಿಗೆ ದನಿ ಕೂಡಿಸೋಣ…

  [Reply]

 21. Vasantha Harish

  ಗುರುಚರಣಗಳಿಗೆ ಅನಂತ ಪ್ರಣಾಮಗಳು ಅಮೃತಾನ್ನವ ನೀಡುವ ಅಮ್ಮ

  [Reply]

 22. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಎಂತು ಬಣ್ಣಿಸಲಿ ಅಮೃತಾನ್ನದ ಸವಿಯ???

  [Reply]

 23. Shrikant Hegde

  || ಹರೇ ರಾಮ ||

  ಶ್ರೀ ಗುರುಗಳ ಸಾಕ್ಷಾತ್ಕಾರ ಸುಭಾಗ್ಯ ಲಭಿಸಿತು
  ಈ ಬಾಳು ಧನ್ಯವೆನಿಸಿತು
  ಮನಸ್ಸು ಹಿಗ್ಗಿ ಹುವಾಯಿತು
  ಈ ಜಗವೆಲ್ಲ ಗುರುವೆಂಬ ತಾಯಿಯಲ್ಲಿ ಲೀನವಾಯಿತು

  ಅದೊಂದು ದಿನ ಕುಳಿತಿದ್ದೆ
  ಎಲ್ಲರೊಡನೆ ಮಾತನಾಡುತ್ತ
  ಎದುರು ಗೋಡಯ ಮೇಲೆ ಇತ್ತು
  ಶ್ರೀ ಗುರುಗಳ ಭಾವ ಚಿತ್ರವೊಂದು ಭಾವತೀತ

  ನೋಟ ನೆಟ್ಟಿತು ಭಾವ ಚಿತ್ರದಿ
  ಮನಸು ಮಿಂದಿತು ಭವಾತೀತದಿ
  ಕೆಲ ಕ್ಷಣ ಉರುಳಿತು ಜಗ ಶುನ್ಯದಿ ಗುರು ಪುರ್ನದಿ
  ಬೇಕೆನಿಸಿತು ಮನಕೆ ದಾಹದಿ ಗುರು ಸನ್ನಿಧಿ

  || ಹರೇ ರಾಮ ||

  [Reply]

 24. Dharini

  Maharaj,
  Nammannu Nimma rajyadolage seriskoli maharaj.

  Hare ram.
  Shri ram jay ram jay jay ram

  [Reply]

 25. Dharini

  Hare Ram,

  Maharaj, Nammannu nimma rajyadholage seriskoli Maharaj.

  Sri Ram Jai Ram Jai Jai Ram
  Jai Shri Krishna
  Radhe Radhe

  [Reply]

 26. Dharini

  jai gurudev,
  Why is it so difficult to get ur darshan? What should I do to get ur darshan?
  Kindly answer.

  hare ram

  [Reply]

 27. ಶಿವಕುಮಾರ ನೇಗಿಮನಿ

  ನಮಸ್ಕಾರ ಗುರುಗಳೆ,
  ನಿಮ್ಮ ಈ ಆದ್ಯಾತ್ಮದ ತಾಣದಲ್ಲಿ ಎಷ್ಟು ಎಷ್ಟು ಸುಂದರವೋ ಹಾಗೆಯೆ ನಿಮ್ಮ ತಾಣದಲ್ಲಿ ಇರುವ ವಿಷಯಗಳು ಸುಂದರ.
  ..
  ನನ್ನ ಪರಿಸರ ಸ್ನೇಹಿ ಹಾಗೂ ಕನ್ನಡ (81) ಭಾಷೆ ಯಕ್ಕಿ ಒದಬಹುದು.

  http://www.spn3187.blogspot.com

  [Reply]

 28. thirumala raya halemane

  very nice. beautiful writing. enjoyed reading it.

  [Reply]

 29. Aruna

  ಗುರು ಚರಣಗಳಿಗೆ ಪ್ರಣಾಮಗಳು.
  ಸೈನ್ಯಸಂತರ್ಪಣೆಗೆ ಸಮುದ್ಯುಕ್ತಳಾದ ಶಬಲೆಯು ಒಮ್ಮೆ ತನ್ನ ದಕ್ಷಿಣಚರಣವನ್ನೆತ್ತಿ ಕೆಳಗಿರಿಸಿದಳು..
  ಗೋಮಾತೆಯ ಚರಣವು ಭೂಮಾತೆಯನ್ನು ಸೋಕುತ್ತಿದ್ದಂತೆಯೇ – ಸ್ಪರ್ಶಮಾಧ್ಯಮದಲ್ಲಿಯೇ ಆ ಮಹಾತಾಯಿಯರಿಬ್ಬರು ಅದೇನು ಮಾತನಾಡಿಕೊಂಡರೋ – ಕೌಶಿಕನ ಸೈನ್ಯವು ಪರಮಾಶ್ಚರ್ಯದಿಂದ ವೀಕ್ಷಿಸುತ್ತಿದ್ದಂತೆಯೇ ಹಳ್ಳ-ದಿಣ್ಣೆಗಳಿಂದ ಕೂಡಿದ್ದ, ವಿಸ್ತಾರವಾದ, ಆಶ್ರಮ ಪರಿಸರದ ನೆಲವೆಲ್ಲವೂ ಕ್ಷಣಮಾತ್ರದಲ್ಲಿ ಸಮತಲವಾಗಿ ಪರಿವರ್ತಿತವಾಗಿಹೋಯಿತು..!
  ಅಲ್ಲಿ ಕಲ್ಪವೃಕ್ಷವನ್ನು ಹೋಲುವ, ಬಗೆ ಬಗೆಯ ಶುಭ ವೃಕ್ಷಗಳು ಉಗಮಿಸಿದವು..
  ಅವುಗಳಲ್ಲಿ ಸೌಂದರ್ಯ-ಸೌರಭಗಳಿಂದೊಪ್ಪುವ ಸುಪುಷ್ಪಗಳು, ಸುಮಧುರ ಸುಫಲಗಳು ಕಾಣಿಸಿಕೊಂಡವು..
  ಮುದ ನೀಡುವ ಮೃದು-ಮಧುರಸ್ಪರ್ಶದ, ಕಣ್ತಣಿಸುವ, ಹಚ್ಚಹಸುರ ಹುಲ್ಲುಹಾಸುಗಳು ಅಲ್ಲಿ ಅನಾವರಣಗೊಂಡವು..
  ಮಧ್ಯಕೇಂದ್ರದಲ್ಲಿ ಭೂದೇವಿಯ ಬೈತಲೆಯಂತೆ ಕಂಗೊಳಿಸುವ, ಸುವಿಶಾಲ ರಾಜಮಾರ್ಗ..
  ಅಲ್ಲಿ ಚೆಲ್ಲಿದ ಚೆಲುಚೆಲುವಿನ ಹೂವುಗಳ ರಂಗು ರಂಗು..
  ಸಿಂಪಡಿಸಿದ ಸುಗಂಧಜಲದ ತಂಪು-ಕಂಪು…..
  – ಎಲ್ಲವನ್ನು ಓದುತ್ತಿದ್ದರೆ ಕ್ಷಣ ಮಾತ್ರದಲ್ಲೇ ಪ್ರಪಂಚವನ್ನೇ ಮರೆತಂತಾಯಿತು. ನಿಜ ಆ ಶಬಲೆಯಿಂದಲೇ ಮಮತೆ-ತೃಪ್ತಿ-ಆನಂದ. ಗುರುಗಳೆ ಶ್ರೀಮಂತ ಸಾಹಿತ್ಯ/ಸಂದೇಶದೊಂದಿಗೆ ಎಂಥಾ ಆದ್ಯಾತ್ಮ ತತ್ವವನ್ನು ಉಣಬಡಿಸಿದಿರಿ.
  || ಹರೇ ರಾಮ||

  [Reply]

Leave a Reply

Highslide for Wordpress Plugin