LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದಶರಥನೆಂದರೆ ದೇವರ ಆಯ್ಕೆ…!

Author: ; Published On: ಗುರುವಾರ, ಅಕ್ತೂಬರ 28th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಬೇರೆಯಾಗುವುದು ಸುಲಭ…
ಬೆರೆಯುವುದು ಸುಲಭವಲ್ಲ..!

ವಿಭಕ್ತಿ ಸುಲಭ..
ಭಕ್ತಿ ಸುಲಭವಲ್ಲ..

ಒಡೆಯಲು ಕ್ಷಣ…
ಕೂಡಿಸಲು..?

ವಿಶ್ವದ ಯಾವೆರಡು ವಸ್ತುಗಳು ಸೇರಬೇಕೆಂದರೂ ಅದು ಸುಲಭದ ಮಾತಲ್ಲ..
ಅದರಲ್ಲಿಯೂ ಹಿರಿದರಲ್ಲಿ ಹಿರಿದಾದ ವಸ್ತುಗಳೆರಡು ಸೇರಬೇಕೆಂದರೆ..?
ಕೂಡಿಸುವ ಕೊಂಡಿಯೊಂದು ನಡುವೆ ಬೇಕೇ ಬೇಕು..
ಜೀವನು ದೇವನೊಡನೆ ಸೇರಬೇಕೆಂದರೆ ‘ಗುರು‘ವೆಂಬ ಕೊಂಡಿ ನಡುವೆ ಬೇಕೇ ಬೇಕಲ್ಲವೇ..?

ದೇವನೇ ಧರೆಗಿಳಿದು ಬಂದು ಜೀವಗಳೊಡನೆ ಬೆರೆಯಬೇಕೆಂದುಕೊಂಡರೆ..?
ವಿಶ್ವಚೇತನವೇ ವಿಶ್ವದಲ್ಲಿಳಿದು ಬಂದು ವಿಶ್ವದಲ್ಲಿಯೇ ಶ್ರೇಷ್ಠವಾದ ‘ಚೇತನದೀಪಮಾಲಿಕೆ‘ಯೊಡನೆ ತನ್ನನ್ನು ತಾನು ಬೆಸೆದುಕೊಳ್ಳಬೇಕೆಂದುಕೊಂಡರೆ..
ಬೆಸೆಯುವ ಕೊಂಡಿ ಅದೆಂಥದಾಗಿರಬೇಕು..?

ಬ್ರಹ್ಮಾಂಡಮಂಡಲದಲ್ಲಿ ನಾರಾಯಣನಿಗಿಂತ ದೊಡ್ಡವರುಂಟೇ..?
ಭೂಮಂಡಲದಲ್ಲಿ ಸೂರ್ಯವಂಶಕ್ಕಿಂತ ದೊಡ್ಡ ವಂಶವುಂಟೇ..?
ಶ್ರೀಮನ್ನಾರಾಯಣನು ಶ್ರೀರಾಮನಾಗಿ ಬಂದು ಸೂರ್ಯವಂಶದೊಡನೆ ಸೇರಬಯಸಿದಾಗ ನಡುವೆ ಕೊಂಡಿಯಾದವನೇ ‘ರಾಜಾ ದಶರಥ

ದೇವಸ್ಥಾನದಲ್ಲಿ ದೇವರು ಹೇಗೆ ಮುಖ್ಯವೋ, ದ್ವಾರವೂ ಹಾಗೆಯೇ..
ದೇವರದೆಷ್ಟು ಭವ್ಯವಾಗಿದ್ದರೂ ದ್ವಾರವು ಸುಷ್ಟುವಾಗಿಲ್ಲದಿದ್ದರೆ ಆ ದೇವರು ಭಕ್ತರಿಗೆ ಪ್ರಕಟವಾಗುವುದಾದರೂ ಹೇಗೆ..?
ದೇವರು ತೋರಬೇಕೆಂದರೆ ತೋರಿಸುವವರೂ ಬೇಕಲ್ಲವೆ..?

ದ್ವಾರವೆಂದರೆ ಅದುವೇ..!

ದೇವದೇವನು ಧರೆಗೆ ಬರಬೇಕೆಂದುಕೊಂಡಾಗ ದ್ವಾರವಾದವನು ದಶರಥ..!
ಅವತರಿಸಬಯಸಿದ ಪರವಸ್ತು ‘ಎಲ್ಲಿ ಇಳಿಯಲಿ ?’ ಎಂಬಂತೆ ಧರೆಯೆಲ್ಲವನ್ನೂ ಒಮ್ಮೆ ನಿರುಕಿಸಿತು..
ಕೋಟಿ ಕೋಟಿ ಜೀವಗಳ ಮೇಲೆ ಹಾದುಹೋದ ಅದರ ದಿವ್ಯದೃಷ್ಟಿ ‘ಇವನೇ ತಕ್ಕವನು’ ಎಂಬಂತೆ ನಿಂತಿದ್ದು ದಶರಥನ ಮೇಲೆ…
ದಶರಥನೆಂದರೆ ದೇವರ ಆಯ್ಕೆ..!!

ಪೂರ್ಣದ ದ್ವಾರವಾಗಲೂ ಬೇಕು ಅರ್ಹತೆ…!

ದಶರಥನ ಅರ್ಹತೆ ಅರ್ಥವಾಗಬೇಕೆಂದರೆ ಆತನ ಹೆಸರಿನೊಳಗಿಳಿಯಬೇಕು..
ದಶವೆಂಬ ಸಂಖ್ಯೆಯು ಪೂರ್ಣತೆಯ ಪ್ರತೀಕ..
ಸತತವೂ ಪೂರ್ಣತೆಯೆಡೆಗೋಡುವ ‘ಮನೋರಥ‘ವಾರದೋ ಅವನೇ ‘ದಶರಥ‘..

ಪೂರ್ಣತೆಗಾಗಿ ತುಡಿದವನವನು, ದುಡಿದವನವನು..
ಎಲ್ಲೆಲ್ಲೂ ಪೂರ್ಣತೆಯನ್ನೇ ಕಾಣಬಯಸಿದವನವನು..
ಪೂರ್ಣತೆ – ತನ್ನಲ್ಲಿ…
ತನ್ನ ಕುಟುಂಬದಲ್ಲಿ…
ಮಂತ್ರಿಗಳಲ್ಲಿ …
ಸೈನಿಕರಲ್ಲಿ…
ಪೂರ್ಣತೆ – ತನ್ನ ಪ್ರಜೆಗಳಲ್ಲಿ…
ಅಯೋಧ್ಯೆಯಲ್ಲಿ…
ಕೋಸಲದಲ್ಲಿ…
ಎಲ್ಲೆಲ್ಲಿಯೂ ಪೂರ್ಣತೆಯ ಹುಡುಕಾಟ – ಅದಕ್ಕಾಗಿಯೇ ಬಾಳಾಟ..!!

ಪೂರ್ಣವು ಉದಯಿಸುವುದು ಪೂರ್ಣತೆಗಾಗಿ ತುಡಿಯುವವನಲ್ಲಿಯೇ ಅಲ್ಲವೇ…?

|| ಹರೇರಾಮ ||

ಟಿಪ್ಪಣಿ:
<ದ್ವಾರವು ಸುಷ್ಟುವಾಗಿಲ್ಲದಿದ್ದರೆ>
ಸುಷ್ಟು = ಸಾಧು, ಸಮೀಚೀನೆ

45 Responses to ದಶರಥನೆಂದರೆ ದೇವರ ಆಯ್ಕೆ…!

 1. Anuradha Parvathi

  ಪೂರ್ಣ ಉದಯಿಸುವುದು ಪೂರ್ಣತೆಗಾಗಿ ತುಡಿಯುವವನಲ್ಲಿಯೇ ಅಲ್ಲವೇ? … ultimate.

  [Reply]

  Sri Samsthana Reply:

  ನಮ್ಮೊಳಗೆ ಉದಯಿಸಲು ಅದು ಸದಾಸಿದ್ಧವಾಗಿದೆ..

  ನಾವದಕ್ಕೆ ‘ಪ್ರತಿ’ಯಾಡದೆ ‘ಅನು’ವಾಗಿದ್ದರೆ ಸಾಕು..

  [Reply]

 2. maruvala narayana

  ಪ್ರತಿಯೊಬ್ಬ ಜೀವನಿಗು ದೇವನ ದಶ೯ನ ಮಾಡಿಸಲು ಆ ಗುರು ಮಾಡುವ ಪ್ರಯತ್ನ ಅದೆಷ್ಟು ಬಗೆಯದು? ವಿಶ್ರಾಂತಿಯೇ ಇಲ್ಲದೆ ನಿರಂತರ ಪರಿಭ್ರಮಣ. ಜೀವಿಕೆಯಿಂದ ಜೀವನದೆಡೆಗೆ ಸಾಗುವ ಬಗೆಗೆ ಮಾಗ೯ದಶ೯ನ. ಬಗೆ ಬಗೆಯ ಜೀವರಿಗೆ ಬಗೆ ಬಗೆಯ ಮಾಗ೯ಗಳ ದಶ೯ನ.
  ದೇವ ಮತ್ತು ಜೀವದ ಮಧ್ಯದ ಪರದೆ ಸರಿಸುವ ಗುರುವಿನ ದೃಷ್ಟಿ ಕ್ಷಣಮಾತ್ರವಾದರೂ ಜೀವನ ಮೇಲೆ ಬಿದ್ದರೆ ಮತ್ತೆ ಜೀವನ ಗಾಡಾಂಧಕಾರದಿಂದ ಪ್ರಖರವಾದ ಬೆಳಕಿನೆಡೆಗೆ. ಗುರುವಿನ ಆಕಷ೯ಣೆ ಒಳಗಾದ ಜೀವ , ಸೂಯ೯ನ ಆಕಷ೯ಣೆಯಿಂದಾಗಿ ಗ್ರಹಗಳು ನಿರಂತರ ಸೂಯ೯ನ ಸುತ್ತುತ್ತಿರುವಂತೆ ಗುರುವಿನ ಸುತ್ತಲೂ ಸುತ್ತುವುದಂತೂ ಸತ್ಯ.
  ಜೀವನ ಪಕ್ವತೆಯನ್ನು ಅರಿತು ಅವನನ್ನು ದೇವನೆಡೆಗೆ ಕರೆದೊಯ್ಯುತ್ತಿರುವ ಗುರುವನ್ನು ಪಡೆದ ಜೀವರುಗಳು ಧನ್ಯ.

  [Reply]

  Sri Samsthana Reply:

  ಹಸುವು ಹಾಲ್ಗುಡಿಸುವಾಗ ಕರುವಿನೊಳು ತೃಪ್ತಿಯ ಧನ್ಯತೆ..!
  ಕರುವು ಹಾಲುಣುವಾಗ ಹಸುವಿನೊಳು ಸಾರ್ಥಕತೆಯ ಧನ್ಯತೆ..!

  [Reply]

 3. maruvala narayana

  ಹಾಲುಣುವ ಕರುಗಳು ಸಹಸ್ರಾರು… ಅಲ್ಲ ಲಕ್ಷೋಪಲಕ್ಷ

  [Reply]

 4. Raghavendra Narayana

  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಗುರು ಕರುಣೆಯಾಗಲಿ..

  [Reply]

 5. Ashwini

  ಅನಂತ ಸಾಂತಗಳಲ್ಲಿ ಅನಂತವಾಗಿ ಪ್ರಕಟವಾಗುವವನು ಭಗವಂತ.

  ಜೀವಲೋಕದ ಸಂವೃದ್ಧಿಗೆ ಇಳೆಗಿಳಿಯುವ ಮಳೆಯ ಹಾಗೆ
  ಜೀವಿಗಳ ಪರದಾಟ ಕಳೆದು ತನ್ನ ಪರಮಾಟ ಮೆರೆಯಲು ಭಗವಂತನ ಕರುಣೆಯ ಇಳಿಯುವಿಕೆಯೆ ‘ಅವತಾರ’.

  ಮಳೆ ಇಳೆಯುವ ಮೊದಲು ತಂಗಾಳಿಯು ಹೇಗೆ ಸೂಚನೆಯೊದಗಿಸುವುದೋ
  ಭಗವಂತನ ಉದಯದ ಸೂಚನೆಯನ್ನು ಸೂರ್ಯ ವಂಶ ಒದಗಿಸಿತ್ತು.

  ವಿಶ್ವಾತ್ಮನ ವಿಶೇಷ ಮಮತೆ..
  ಜೀವಾತ್ಮನ ವಿನೀತ ಸಮತೆ..

  ಇದಲ್ಲವೇ ಜೀವ-ದೇವನನ್ನು ಬೆಸೆದಿರುವ ಭಾವ ಸೇತು!!

  ವಿನೀತ ಸಮತೆ ಸಾಧಿಸಿದ್ದ ದಶರಥನ ಮೇಲೆ ಭಗವಂತನಿಗೆ ವಿಶೇಷ ಮಮತೆಯುಂಟಾಯಿತೇನೋ..!!
  ತಾನುದಯಿಸಲು ದಶರಥನನ್ನೇ ದಿಕ್ಕಾಗಿ ಆಯ್ದುಕೊಂಡ..

  ಪರಮಗುರಿಯೇ ಪರಮ ಗುರುವಾಗಿ ಇಳಿದು ಶಿಷ್ಯಕೋಟಿಯನ್ನು ಸಲಹುತ್ತಿದ್ದಾರೆ. ಆ ವಿಶೇಷ ಮಮತೆಗಿದೋ ನಮೋ ನಮ:

  ಹರೇ ರಾಮ.

  [Reply]

  Sri Samsthana Reply:

  ‘ಮಮತೆ’

  ಹೌದು..! ನಮ್ಮವರು ನೀವು..!

  [Reply]

 6. nandaja haregoppa

  ಹರೇ ರಾಮ

  ದೇವರೆದಷ್ತು ಭವ್ಯ,ದ್ವಾರ ಸುಷ್ತು,ದೇವರು ಕರುಣಾಳು..ಭಕ್ತರಿಗೆ ಭಕ್ತಿಯಿ೦ದ ಕರೆದಾಗಲೆಲ್ಲ ಪ್ರಕಟ..

  ಬರೇ ಪೂರ್ಣನಲ್ಲ ….. ಸ೦ಪೂರ್ಣ

  [Reply]

  Sri Samsthana Reply:

  ‘ಭಕ್ತರಿಗೆ ಭಕ್ತಿಯಿಂದ ಕರೆದಾಗಲೆಲ್ಲ ಪ್ರಕಟ’

  ಭಕ್ತಿಯನ್ನು ಕರೆಯಲು ಕಲಿಯಬೇಕು..
  ನಾವು ಕರೆದಾಗಲೆಲ್ಲ ಭಕ್ತಿ ಬರುವಂತಿದ್ದರೆ ನಾವು ಭವದ ಯುದ್ಧವನ್ನು ಗೆದ್ದಂತೆ..!

  [Reply]

 7. seetharama bhat

  ಹರೇರಾಮ್,

  ಪೂರ್ಣ ಪೂರಣ ವಾಗಲು ಶೂನ್ಯ ವಾಗಬೇಕಲ್ಲವೆ
  ಪೂರ್ಣ ದ್ವಾರದ ಆಧಾರ ಬೇಕಲ್ಲವೆ
  ಗುರುದ್ವಾರದ ಮಿಗಿಲಾದ ದ್ವಾರವು೦ಟೆ
  ಪರಿಪೂರ್ಣ ರಾಮನಿರುವಾಗ ಶೂನ್ಯವು೦ಟೆ

  ಲೆಕ್ಕಕ್ಕೆ ಸಿಗದ ಲೆಕ್ಕವಿದು,
  ಭಕ್ತಿಗೆ ಮಾತ್ರ ದಕ್ಕುವುದು

  ಧನ್ಯೋಸ್ಮಿ

  [Reply]

  Sri Samsthana Reply:

  ಹೌದು..

  ಪೂರ್ಣವೆಂದರೇ ಹಾಗೆ..
  ಎಲ್ಲ ಲೆಕ್ಕಗಳನ್ನೂ ಮೀರಿದೆಯದು..!

  [Reply]

 8. Mohan Bhaskar

  ಹರೆ ರಾಮ ಸ೦ಸ್ಥಾನಮ್

  ದಶ ರಥ – ಎಲ್ಲ ಮಾಹಿತಿಗಳೂ ದಿಕ್ಸೂಚಿಗಳೇ!! ಹೊಸ ಆಯಾಮವನ್ನೆ ನೀಡುತ್ತಿವೆ.
  “ದಶ ಎ೦ಬುದು ಪುರ್ಣತೆಯ ಪ್ರತೀಕ” ಇಲ್ಲಿ..
  ದಶ ಎ೦ಬುದು ಪೂರ್ಣತೆಯೇ? ಸ್ವಲ್ಪ ವಿವರಣೆ ಬಯಸುತ್ತಿದ್ದೇನೆ. [ದಶ ಕ೦ಠ..?]

  ಪ್ರಣಾಮಗಳೊ೦ದಿಗೆ,
  ಮೋಹನ ಭಾಸ್ಕರ

  [Reply]

  Sri Samsthana Reply:

  ಇತ್ತ ಹೃದಯವೂ ಪೂರ್ಣವಲ್ಲ..
  ಅತ್ತ ತಲೆಯೂ ಪೂರ್ಣವಲ್ಲ..
  ಕಂಠ ಮಾತ್ರ ದೊಡ್ಡದು…

  ಅವನೇ ‘ದಶಕಂಠ’

  ‘ಕಂಠಪೂರ್ತಿ’ ಎನ್ನುವ ಶಬ್ದ ಒಳ್ಳೆಯ ಧ್ವನಿಯನ್ನೇನೂ ಕೊಡುವುದಿಲ್ಲವಲ್ಲ..!

  [Reply]

 9. Shaman Hegde

  ಹರೇರಾಮ. ಈಗಿನ ಪ್ರಪಂಚದ ವ್ಯವಸ್ಥೆಯಲ್ಲಿ,
  ಬೇರೆಯಾಗುವುದು ಸುಲಭ…
  ಬೆರೆಯುವುದು ಸುಲಭವಲ್ಲ..! ಎಂಬ ಮಾತುಗಳು ಕೇವಲ ಭಗವಂತನ ವಿಷಯಕ್ಕೆ ಸೀಮಿತವಾಗಿದೆ ಎಂದು ಅನಿಸುತ್ತದೆ. ಆಂದರೆ ಉಳಿದ ಎಲ್ಲಾ ವಿಷಯಗಳಲ್ಲಿ (ಬಹಿರಂಗದಲ್ಲಿ)
  ಬೇರೆಯಾಗುವುದು ಕಷ್ಟ…
  ಬೆರೆಯುವುದು ಸುಲಭ!! ಎಂಬ ಸ್ತಿತಿ ಏರ್ಪಟ್ಟಿದೆ..

  [Reply]

  Sri Samsthana Reply:

  ಭಗವಂತನೊಡನೆ ಮಾತ್ರವೇ ನಿಜವಾದ ಅರ್ಥದಲ್ಲಿ ಬೆರೆಯಲು ಸಾಧ್ಯ..

  ಬೇರೆ ವಸ್ತುಗಳೊಡನೆ ನಾವದೆಷ್ಟು ಬೆರೆತರೂ ಅವು ಬೇರೆಯೇ..!

  [Reply]

 10. Raghavendra Narayana

  Visit Dharmabharathi web site.
  http://www.dharmabharathi.org/
  http://www.dharmabharathi.org/epaper.html
  .
  Shri Gurubhyo Namaha

  [Reply]

 11. Raghavendra Narayana

  “ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವ ಕೈ ಬೀಸಿ… ”
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಆಳುದ್ದದ ಶರೀರದಲ್ಲಿ ಅನಂತಭಾವಗಳು ನೆಲೆಸಿ ನಲಿಯುವುದು ಗೇಣುದ್ದವೂ ಇಲ್ಲದ ಎದೆಯಲ್ಲಿ ಎಂದರೆ….!!

  [Reply]

  Raghavendra Narayana Reply:

  ಪರಮಾತ್ಮ – ನಿರಾಕಾರ ನಿರ್ಗುಣ ಎ೦ದು ಹೆಚ್ಚು ಹೆಚ್ಚು ಅನ್ನಿಸುವುದು ಇ೦ಥಾ ಸನ್ನಿವೇಶಗಳಲ್ಲೆ…..??
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಕವಿ – ಲಕ್ಷಿನಾರಾಯಣ ಭಟ್ ಎನ್.ಎಸ್. ಅವರ ಕವಿತೆ
  .
  ಬನ್ನಿ ಭಾವಗಳೆ
  —————-
  ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ..
  ಕರೆಯುವೆ ಕೈ ಬೀಸೀ…
  ಬತ್ತಿದೆಯಲಿ ಬೆಳೆಯಿರಿ ಹಸಿರನ್ನು..
  ಪ್ರೀತಿಯ ಮಳೆ ಸುರಿಸಿ..
  ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು
  ಮೀಯುವ ಮುಗಿಲಿನಲೀ..
  ತವರಿನೆದೆಗೆ ತಂಪೆರೆಯುವ ಮೇಘದ
  ಪ್ರೀತಿಯ ಧಾರೆಯಲೀ..
  ಲೋಕಕೆ ಹೊದಿಸಿದ ಕರಿತೆರೆ ಸರಿಸುವ
  ಅರುಣೋದಯದಲ್ಲೀ..
  ಪಕ್ಷಕೊಮ್ಮೆ ಬಿಳಿ ಪತ್ತಲ ನೇಯುವ..
  ಹಣ್ಣಿಮೆ ಹಸ್ತದಲೀ..
  ಬನ್ನಿ ಬನ್ನಿ ನನ್ನೆದೆಯ ಬಯಲಿದೂ..
  ಬಿತ್ತದ ಕನ್ನೆ ನೆಲಾ..
  ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯಾ
  ನಮಿಸುವೆ ನೂರು ಸಲಾ..
  ನಿಮ್ಮನೇ ಕನವರಿಸೀ..
  ನಿಮಗೇ ಮನವರಿಸೀ..
  ಕಾಯುತ್ತಿರುವೆನು ಕ್ಷಣ ಕ್ಷಣವೂ..
  ಎದೆಯನು ಹದಗೊಳಿಸೀ..
  ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ..
  ಕರೆಯುವೆ ಕೈ ಬೀಸೀ…
  ಬತ್ತಿದೆಯಲಿ ಬೆಳೆಯಿರಿ ಹಸಿರನ್ನು..
  ಪ್ರೀತಿಯ ಮಳೆ ಸುರಿಸಿ..

  [Reply]

  Raghavendra Narayana Reply:

  ಬನ್ನಿ ಬನ್ನಿ ನನ್ನೆದೆಯ ಬಯಲಿದೂ..
  ಬಿತ್ತದ ಕನ್ನೆ ನೆಲಾ..
  ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯಾ
  ನಮಿಸುವೆ ನೂರು ಸಲಾ..
  ನಿಮ್ಮನೇ ಕನವರಿಸೀ..
  ನಿಮಗೇ ಮನವರಿಸೀ..
  ಕಾಯುತ್ತಿರುವೆನು ಕ್ಷಣ ಕ್ಷಣವೂ..
  ಎದೆಯನು ಹದಗೊಳಿಸೀ..
  ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ..
  ========================

  [Reply]

  Sri Samsthana Reply:

  ಭಟ್ಟರ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡವರಲ್ಲಿ ನಾವೂ ಒಬ್ಬರು…

  [Reply]

 12. Sri Samsthana

  ಸ್ವಯಂಪೂರ್ಣ’ನ ಸಾಲುಗಳವು..
  ನಾವು ಸಾಲು(ಲ)ಗಾರರು ಮಾತ್ರ..!

  [Reply]

 13. Ganesh Bhat Madavu

  ಪೂರ್ಣತೆಯ ವೃತ್ತಕ್ಕೆ ಬಿಂದುವೊಂದು ಪ್ರಾರಂಭವಾಗಿದೆ ಎಂದನಿಸುತ್ತದೆ.ಆ ಬಿಂದುವಿನ ಅನಂತ ಶಕ್ತಿ ಪೂರ್ಣತೆಯ ಸವಿಯನ್ನು ಅನುಭವಿಸುವ ಯೋಗ ನಮ್ಮದಾಗಲಿ. ಹರೇ ರಾಮ

  [Reply]

  Sri Samsthana Reply:

  ಗಣೇಶಾ,

  ಅವಿಘ್ನಮಸ್ತು ॥

  [Reply]

 14. Vishwa M S Maruthipura

  ಉದಯವಾಗಲಿ ನಮ್ಮ ಹ್ರದಯಮನ್ಮನದಲ್ಲಿ ಒಟ್ಟಾಗಿ ಬದುಕುವ ತುಡಿತ.. ಕೈಬೀಸಿ ಕರೆಯುತಿದೆ…ಭಾವವಿನಿಮಯಕ್ಕಿಲ್ಲಿ ಹರೆರಾಮ.ಇನ್ ನ ಮೊರೆತ

  [Reply]

  Raghavendra Narayana Reply:

  ಅದ್ಭುತ

  [Reply]

 15. gopalakrishna pakalakunja

  ಜಗತ್ತನ್ನೇ ಬೆಳಗಿಸುವ ಸೂರ್ಯನ ಋಣಕ್ಕಾಗಿ ಅವನ ವಂಶವನ್ನು ಬೆಳಗಿಸಲು
  ದಶರಥ ದಂಪತಿಗಳ ಬಸಿರನ್ನಾಶ್ರಯಿಸಿ ಭುವಿಗಿಳಿದ ಭಗವಂತ
  ಸುರಾಸುರರ ಕಾಳಗಕ್ಕೊದಗಿ ದೇವಕಂಠಕ ಬಗೆಹರಿಸಿದ್ದವನ
  ವಂಶೋದ್ದಾರನಾಗಿ ಪುನ್ನಾಗ ನರಕ ಭಯಬಿಡಿಸಿ
  ಅಭಯ ಪ್ರದಾನ ಮಾಡಿದವನಿಗೇ ಉಭಯ ಗುರು ಕೊಂಡಿಗಳು.
  ಪೂರ್ವಾಶ್ರಮದಲ್ಲಿ ವಂಶಸ್ತನೇ ಆಗಿದ್ದರೂ ಬ್ರಹ್ಮರ್ಷಿ ಪಟ್ಟಕ್ಕೇರಿದ್ದ ವಿಶ್ವಾಮಿತ್ರರಿಂದ
  ವಂಶಕ್ಕೂ ವಿಶ್ವಕ್ಕೂ ಕಂಠಕರಾಗಿದ್ದ ದಶಕಂಠಾದಿಗಳ ಹನನಕ್ಕಾಗಿ ಮಂತ್ರಾಸ್ತಕೊಡುಗೆ
  ವಂಶಕ್ಕೂ ಲೋಕಕ್ಕೂ ಗುರುಗಳಾದ ರಾಜ ಗುರು ವಸಿಷ್ಟರ ಕರಕಮಲ ಸಂಜಾತಗೆ
  ವ್ಯವಹಾರ ಪಾರಮಾರ್ಥ ಮಾರ್ಗದರ್ಶಕರಾಗಿ ದೇವ ಋಣ ಮುಕ್ತರಾದ ಬಗೆ ಅವರೀರ್ವರದು.
  ಕೋಸಲಾಧಿಪತಿ ಶ್ರೀ ಗುರು ಸೇವಕನಾಗಿ ಋಷಿ ಋಣ ಮುಕ್ತನಾದ ಬಗೆ ನಮಗಾದರ್ಶ.
  ಶ್ರೀರಾಮ ಶಂಕರಾಚಾರ್ಯ ರೂಪದಿ ಧರೆಗಿಳಿದಿರುವ ಗುರು ಕೊಂಡಿ ಹೊಂದಿ ಮೇಲೇಳೋಣ…

  [Reply]

  Sri Samsthana Reply:

  ಬಿಂದು ರಾಮಾಯಣ..!

  [Reply]

  gopalakrishna pakalakunja Reply:

  ಧನ್ಯೋಸ್ಮಿ.ಶ್ರೀ ಶ್ರೀಮುಖದಿಂದಿಳಿದ ರಾಮಾಯಣ ಸಿಂಧುವಿನ ಪ್ರಭಾವ …!

  [Reply]

 16. sriharsha.jois

  ಹರೇರಾಮ…

  ಎಲ್ಲಿ ಪೂರ್ಣತೆಯೆಡೆಗೆ ತುಡಿತವಿದೆಯೋ..
  ಅಲ್ಲಿ ಭಗವಂತನ ಸಾಕ್ಷಾತ್ಕಾರವಾಗಲೇಬೇಕಲ್ಲವೇ ತಂದೇ…?
  ನಮಗೆಂದು ಈ ಭಾವ ಬರುವುದು…?

  ಈ ಬದುಕು ನಮಗಾಗಿಯಲ್ಲ, ದೇವಸಾಕ್ಷಾತ್ಕಾರಕ್ಕಾಗಿ ಎನ್ನುವುದು ಮನದಲಿಳಿದರೆ….

  ಖಂಡಿತವಾಗಿಯೂ ನಮ್ಮ “ಗುರು…ದೇವ” ನಮ್ಮೊಡನಿರನೆ…?
  ದಾರಿ ತೋರನೆ…?

  ಬನ್ನಿ, ದಶರಥನ ಅಂಶವಾಗೋಣ…
  ರಾಮನ ಆಗಮನವ ಕಾಯೋಣ….
  ರಾಮರಾಜ್ಯವ ಕಟ್ಟೋಣ….!!

  [Reply]

  Sri Samsthana Reply:

  ‘ತುಡಿತ’ ಬಂದರಲ್ಲವೇ ‘ದುಡಿತ’ ಬರುವುದು..?

  [Reply]

 17. Raghavendra Narayana

  ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
  .
  ವಿಶ್ರಾ೦ತಿ ಪಡೆಯಲು ಪರಮಾತ್ಮ ಆರಿಸಿಕೊ೦ಡ ಜಾಗ ಈ ಕರುನಾಡು.
  ಜಗತ್ತಿನಲ್ಲಿ ಮುಗ್ಧತೆ ಸಹಜತೆ ಸರಳತೆ ಭಾವಶುದ್ಧತೆ ಇನ್ನೂ ಅನೇಕಗಳಿಗೆ ಭಗವ೦ತ ದೀಪ ಬೆಳಗಿ ಉದ್ಘಾಟನೆ ಮಾಡಿದ್ದು ಈ ಮಣ್ಣಲ್ಲಿ. ಮೂಲ ಇಲ್ಲಿ, ಇಲ್ಲಿ೦ದ ಎಲ್ಲೆಲ್ಲೂ ಪರಸರಿಸಿದೆ, ಎಲ್ಲೆಲ್ಲೂ ಕರಗಿದರು ಇಲ್ಲಿ ಆರದು.
  ಈ ಮಣ್ಣಿನ ಮಕ್ಕಳ ಕಣ್ಣಲ್ಲಿ ಆನ೦ದವಿದೆ. ಸಚ್ಚಿದಾನ೦ದ ನಿಧಿ ಹುಡುಕುವವರಿಗೆ ಇದು ಕೇ೦ದ್ರ.
  .
  ಪರಮಾತ್ಮನನ್ನು ಸೇರುವ ಮೊದಲು ಕೊನೆಯದಾಗಿ ಮುಟ್ಟಬೇಕಾದ ಮುಳುಗಬೇಕಾದ ಮೀಯಬೇಕಾದ ಕಳೆಯಬೇಕಾದ ಕೊನೆಯ ಕ್ಷಣಗಳು – ಈ ಮಣ್ಣಿನ ಪ್ರಕೃತಿಯಲ್ಲಿದೆ, ಇಲ್ಲಿ೦ದ ಜೀವಿಯನ್ನು ಉದ್ದರಿಸಲು ಪರಮಾತ್ಮ ಬರುವನು, ತನ್ನ ಸಗುಣ ರೂಪಗಳು ಭುವಿಯ ಈ ಭಾಗದಲಿ ಹಾಸುಹೊಕ್ಕಾಗಿದೆ ಎ೦ದು ದೃಡಪಡಿಸುವನು, ಒಮ್ಮೆ ಸುತ್ತಲೂ ನೋಡಿ ದೀರ್ಘಶ್ವಾಸದೊಡನೆ ಕಣ್ಮುಚ್ಚಿತೆರೆದು ಜೀವಿಯ ಕಣ್ಣನ್ನು ನೋಡಲು ನಿರ್ಲಿಪ್ತಭಾವ ಎಲ್ಲೆಲ್ಲೂ ಕಾಣುವುದು… ಅಷ್ಟೆ ನಿರ್ಲಿಪ್ತಆನ೦ದಪುಷ್ಪಗಳ ಮುಡಿದು ಈ ಜಗವನ್ನು ನಿತ್ಯ ಸು೦ದರ ಮಾಡುತ್ತ ಅಲ್ಲೆ ಸುಳಿದಾಡಿಕೊ೦ಡಿರುವ ತಾಯಿ ರಾಜರಾಜೇಶ್ವರಿ ಕಾಣುವಳು, ಅದೆಷ್ಟು ಮಕ್ಕಳವಳಿಗೆ – ಆ ಮಕ್ಕಳ ಕಣ್ಣಲ್ಲಿ ಪರಮ ಮುಗ್ಧತೆ ಕ೦ಡರು ಒಳ ಪದರದಲ್ಲಿರುವ ತೀಕ್ಷತೆಯ ರಾಜಲಕ್ಷಣವ ಯಾರು ಕಾಣರು / ಯಾರೂ ಕಾಣರು.
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಹನುಮನುದಿಸಿದ ನಾಡು..!

  [Reply]

 18. Shridevi Vishwanath

  ಹರೇರಾಮ ಸಂಸ್ಥಾನ.
  ಶ್ರೀ ಮನ್ನಾರಾಯಣನು ಶ್ರೀ ರಾಮನಾಗಿ ಸೂರ್ಯವಂಶಜನಾಗಲು ಆರಿಸಿದ ದಶರಥನೆಂಬ ದೇವರ ದ್ವಾರದ ವಿವರಣೆ ತುಂಬಾ ಚೆನ್ನಾಗಿ ಬಂದಿದೆ. ಪ್ರತಿ ವಾಕ್ಯವೂ ಪೂರ್ಣವೇ!!!
  ಬ್ರಹ್ಮಾಂಡದಲ್ಲಿರುವ ಕೋಟಿ ಕೋಟಿ ಜೀವಗಳಲ್ಲಿ ತಾನು ಅವತರಿಸಲು ದಶರಥನನ್ನು ಆಯ್ದ ಪರಮಾತ್ಮ ತಾನು ಉದ್ಭವಿಸಿ ಬರಲು ದಶರಥನನ್ನು ಅಷ್ಟು ವರ್ಷಗಳು ಕಾಯಿಸಿದುದು ಏಕೆ ಸಂಸ್ಥಾನ?
  ದಶರಥನು ಪರಿಪೂರ್ಣನಾಗಿದ್ದನಲ್ಲವೇ?
  ಹರೇರಾಮ.

  [Reply]

  Sri Samsthana Reply:

  ಕಾಯುವಿಕೆಯೇ ತಪಸ್ಸು..

  ರಾಮೋದಯವೇ ವರ…

  [Reply]

  Sri Samsthana Reply:

  ದಶರಥನು ಪರಿಪೂರ್ಣನಲ್ಲ..
  ಪರಿಪೂರ್ಣತೆಗಾಗಿ ತುಡಿದವನು-ದುಡಿದವನು..

  ಹಾಗೆ ನೋಡಿದರೆ ಪರಿಪೂರ್ಣತೆಯೆಂಬುದು ‘ಇಲ್ಲಿ’ ಸಿಗುವ ವಸ್ತುವೇ ಅಲ್ಲ…
  ಅದಿರುವುದು ವೈಕುಂಠದಲ್ಲಿ ಮಾತ್ರ..

  ಪರಿಪೂರ್ಣತೆಯು ನಮಗೆ ಲಭಿಸುವುದು ಎರಡು ಸಂದರ್ಭಗಳಲ್ಲಿ..

  ೧.ನಾವು ವೈಕುಂಠಕ್ಕೇರಬೇಕು..
  ೨.ವೈಕುಂಠವೇ ನಮ್ಮಲ್ಲಿಗೆ ಇಳಿದು ಬರಬೇಕು..

  ದಶರಥನ ತಪಸ್ಸಿನ ಫಲವಾಗಿ ಮುಕ್ತಿಯೇ ಮೂರ್ತಿತಾಳಿ ಧರೆಗಿಳಿಯಿತು…

  [Reply]

  Shridevi Vishwanath Reply:

  ಧನ್ಯವಾದ ಸಂಸ್ಥಾನ.
  ಸಂಸ್ಥಾನ, ನಮ್ಮ ಕಾಯುವಿಕೆಗೆ ಪೀಠದ, ಶ್ರೀ ರಾಮನ ಅನುಗ್ರಹ ಇರಲಿ.
  ಪೂರ್ಣತೆಯ ತುಡಿತ ನಮ್ಮಲ್ಲಿರಲಿ .
  ಕಾಯುವಿಕೆ ತಪಸ್ಸಾಗಲು ಶಕ್ತಿ ಕೊಡಿ..
  ಹರೇರಾಮ.

  [Reply]

 19. Geetha Manjappa

  HareRaama
  Sadguru,
  Achalavada swachha manassu nishkama drudha bhakthiya dwaradinda nanna Ramana sampoorna darshanavaguvude? samsara bandhanadalliddukondu aa ahratheyannu padeyuvudadaru enthu? tudithavide,prayatnavilla.Aa dinavondu bandare nanu poorna, dhanya.

  [Reply]

 20. Sri Samsthana

  ತುಡಿತವೇ ಸಾಧನೆ…
  ಅದೊಂದಿದ್ದರೆ ಸಂಸಾರವು ಬಂಧನವೇ ಅಲ್ಲ..

  ನೋಡು ದಶರಥನನ್ನು…
  ತೀವ್ರತರ ತುಡಿತದ ಫಲವಾಗಿ ಮುಕ್ತಿಯೇ ಆತನ ಸಂಸಾರದ ಮಗುವಾಯಿತು..!

  [Reply]

 21. dattu

  ಯೋಗಿಗಲ್ಲದೇ ಮತ್ತಾರಿಗಿದೆ, ದೇವರ ಕಾಣುವ ಯೋಗ…………..

  [Reply]

 22. Sandesh

  Guru charanagalige sharanam.. Hare rama

  [Reply]

 23. ನಂದಜ

  ದೇವರ ಅಯ್ಕೆಯಲ್ಲೂ ಕೆಲವರಿಗೆ ಅಪನ೦ಬಿಕೆಯೆ? ಅಥವ ದೇವರಿಗೆ ಸವಾಲೆ?……….

  ಯಾಕೊ ಇದನ್ನು ಮತ್ತೆ ಮತ್ತೆ ಓದುವ ಮನಸ್ಸಾಗಿದೆ ಇ೦ದು

  [Reply]

Leave a Reply

Highslide for Wordpress Plugin