LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಕುಶಲವರೋ ? ಕುಶಲ ಕುಶೀಲವರೋ ?

Author: ; Published On: ಶುಕ್ರವಾರ, ಆಗಸ್ತು 13th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ದ್ವಾರವನ್ನು ದಾಟದೆ ದೇವರನ್ನು ತಲುಪಲುಂಟೇ..?!
ಸಂತರನ್ನು ಬಿಟ್ಟವರಿಗೆ ಭಗವಂತ ಸಿಗುವುದುಂಟೇ..?!

ತನ್ನನ್ನು ತಲುಪಲಾರದೇ ಬಳಲುವ ಜೀವಗಳನ್ನು ಕಂಡು ಕನಿಕರಿಸಿದ ಕರುಣಾಸಿಂಧುವು,
ಸರ್ವಕಾಲಗಳಲ್ಲಿಯೂ ಸರ್ವದೇಶಗಳಲ್ಲಿಯೂ ಸಂತರ ರೂಪದಲ್ಲಿ ತನ್ನ ದ್ವಾರಗಳನ್ನು ತೆರೆದಿಟ್ಟನಲ್ಲವೇ…!

ಮೊದಲು ಸಂತ..
ಮತ್ತೆ ಭಗವಂತ..!

ಆದುದರಿಂದಲೇ ಇರಬೇಕು..
ರಾಮಾಯಣದ ಪ್ರಸ್ತುತಿಯು ರಾಮನ ಮುಂದಾಗುವುದಕ್ಕೆ ಮುನ್ನ ಋಷಿಸಮೂಹದ ಸಮ್ಮುಖದಲ್ಲಿ ಆಯಿತು..

ಆಶ್ರಮದ ದಿವ್ಯಪರಿಸರವದು…
ಸೂರ್ಯನ ಸಾವಿರಾರು ಕಿರಣಗಳು ಜೊತೆಗೂಡಿ ಇಳಿದು ಬಂದು ಧರೆಯನ್ನು ಬೆಳಕಾಗಿಸುವಂತೆ
ಪರಮಾತ್ಮಸೂರ್ಯನ ಕಿರಣಗಳೇ ಆದ ತಾಪಸರ ಗಡಣವೊಂದು ಅಲ್ಲಿ ಸಮಾವೇಶಗೊಂಡಿತ್ತು..
ಸಾಧನೆ – ಸುಜ್ಞಾನಗಳ ಪ್ರಭೆಯನ್ನಲ್ಲಿ ಪಸರಿಸಿತ್ತು..

ಷಡ್ರಸೋಪೇತವಾದ ಮೃಷ್ಟಾನ್ನ ಭೋಜನದ ಸಂತೃಪ್ತಿಯಲ್ಲಿ ಗೃಹಸ್ಥರು ತಾಂಬೂಲವನ್ನು ಮೆಲ್ಲುತ್ತಾ ಜಗುಲಿಯಲ್ಲಿ ಕುಳಿತುಕೊಳ್ಳುವಂತೆ..
ದಿನದ ಸಾಧನೆಯ ಅಮೃತರಸೋಪೇತವಾದ ದರ್ಶನ-ಅನುಭೂತಿಗಳಿಂದ ತೃಪ್ತಾತ್ಮರಾಗಿ
ಅಂತರಂಗದಲ್ಲಿ ಅಂತಃಸುಖವನ್ನೇ ಮೆಲುಕು ಹಾಕುತ್ತಾ, ಅಂತಃಪ್ರಪಂಚದ ಮಾತುಕತೆಗಳನ್ನೇ ನಡೆಸುತ್ತಾ..
ಆಶ್ರಮದ ಅಂಗಳದಲ್ಲಿ ಸಂತರನೇಕರು ಸುಖೋಪವಿಷ್ಟರಾಗಿರುವಾಗ..

ಸುಮಗಳ ಸುಗಂಧವನ್ನು ಹೊತ್ತು ತರುವ ತಂಗಾಳಿಯಂತೆ,
ಹುಣ್ಣಿಮೆಯ ರಾತ್ರಿ ಹಿಮಶಿಖರಗಳಲ್ಲಿ ಹಿಮಕಿರಣನು ಸುರಿಸುವ ಅಮೃತವೃಷ್ಟಿಯಂತೆ,
ಅಲ್ಲಿ ಕೇಳಿ ಬಂದಿತೊಂದು ಸರ್ವಶ್ರುತಿಮನೋಹರವಾದ ದಿವ್ಯಗಾನ..

ಸುಕುಮಾರರ ಸುಮನಗಳಿಂದ, ಸುಮಧುರಕಂಠಗಳಿಂದ ಹೊರಹೊಮ್ಮಿದ ಅತಿಶಯಮನೋಜ್ಞವಾದ
ಆ ನಿನಾದವು ಋಷಿಸ್ತೋಮದ ಕಿವಿಗಳನ್ನು ಹೊಕ್ಕು ಕಣ್ಣುಗಳನ್ನೇ ಸೆಳೆದೊಯ್ದಿತೆನ್ನಬೇಕು.
ಸರ್ವರ ದೃಷ್ಟಿಗಳು ಅಪ್ರಯತ್ನವಾಗಿ ಧ್ವನಿಮೂಲದೆಡೆಗೆ ಹರಿದವು….

ಆಹಾ..! ಎಂಥ  ದೃಶ್ಯವದು..!

ಒಂದು ಎರಡಾಗಿ, ಎರಡು ಒಂದಾದಂತೆನಿಸುವ ಸುಂದರ ಸನ್ನಿವೇಶ..
ಎರಡು ರೂಪ ತಾಳಿದ ತತ್ತ್ವವೊಂದು ತನ್ನದೇ ಗಾನದಲ್ಲಿ ಸ್ವರ-ಭಾವಗಳನ್ನು ಬೆರೆಸಿ ಒಂದಾದಂತೆ…

ಸ್ವರದಲ್ಲಿ, ಆಕೃತಿಯಲ್ಲಿ, ಹಾವಭಾವಗಳಲ್ಲಿ ಸರ್ವವಿಧದಲ್ಲಿಯೂ ಒಬ್ಬರನ್ನೊಬ್ಬರು ಹೋಲುವ
ಕುಮಾರರಿಬ್ಬರ ಕೊರಳುಗಳು ಮಿಡಿಯುತ್ತಿವೆ…
ತಂಗಾಳಿಯಲ್ಲಿ ತೇಲಿ ಬರುವ ಸುಗಂಧದಂತೆ ಕುಮಾರರ ದಿವ್ಯಧ್ವನಿಗಳಲ್ಲಿ ರಾಮನ ಕಥೆ ಹರಿದು ಬರುತ್ತಿದೆ..

ಎಲ್ಲರ ಮುಖಗಳೂ ಕುಮಾರರಿಗೆ ಅಭಿಮುಖವಾದವು…
ಎಲ್ಲರ ಕಿವಿಗಳೂ ಗಾನಸುಮುಖವಾದವು…
ಎಲ್ಲರ ಮನಗಳೂ ರಾಮಕಥೆಯಲ್ಲಿ ಕರಗಿದವು…
ರಾಮಗಾನವನ್ನುಳಿದು ದಿವ್ಯನಿಶ್ಯಬ್ದವೇ ಆವರಿಸಿತಲ್ಲಿ..
ಮುನಿಗಳೇನು, ಮೃಗ-ಪಕ್ಷಿಗಳು, ತರು-ಲತೆಗಳೂ ತನ್ಮಯಗೊಂಡವು ಕಥಾಗಾನದಲ್ಲಿ…!
ಭೂಚಕ್ರವು‍ ಕಥೆಯ ಸುತ್ತಲೇ ಸುತ್ತತೊಡಗಿತು…
ಗಾಳಿ ತಲೆದೂಗಿತು…
ಗಗನ ತಲೆಬಾಗಿತು…
ರಾಮತತ್ತ್ವವನ್ನುಳಿದು ಜಗವೆಲ್ಲವೂ ಮರೆಯಾಯಿತು…
ಅಲೆಯಲೆಯಾಗಿ ರಾಮಾಯಣವು ಪಸರಿಸತೊಡಗಿತಲ್ಲಿ…

ಗಂಗೆಯು ಒಮ್ಮೊಮ್ಮೆ ಹರಿಯುವಳು,
ಒಮ್ಮೊಮ್ಮೆ ನಡೆಯುವಳು,
ಒಮ್ಮೊಮ್ಮೆ ನಿಂತೇ ಬಿಡುವಳು,
ಭೋರ್ಗರೆದು ಬಂಡೆಗಳಿಗೆ ಬಡಿಯುವಳೊಮ್ಮೆ,
ಸುಳಿದು ಸುತ್ತುವಳೊಮ್ಮೆ,
ನರ್ತಿಸುವಳಿನ್ನೊಮ್ಮೆ..

ಕುಮಾರರ ಕಂಠಗಳಿಂದ ಹರಿಯುತ್ತಿದ್ದ ರಾಮಾಯಣಗಂಗೆಯೂ ಅಂತೆಯೇ..
ಮುದಗೊಳಿಸುವ ಶೃಂಗಾರದ ಸೊಗವೊಮ್ಮೆ…
ಎದೆಸೆಟೆಸುವ ವೀರದ ಧೀರತೆಯಿನ್ನೊಮ್ಮೆ…
ಕರುಳು ಕರಗಿಸುವ ಕರುಣೆಯ ಕಣ್ಣೀರೊಮ್ಮೆ…
ನಕ್ಕು ನಗಿಸುವ ಹಾಸ್ಯ-ಲಾಸ್ಯವಿನ್ನೊಮ್ಮೆ…
ಒಮ್ಮೆ ಕಣ್ಣರಳಿಸುವ ಅದ್ಭುತದ ಬೆರಗು..
ಇನ್ನೊಮ್ಮೆ ಬೆಚ್ಚಿ ಬೀಳಿಸುವ ಭಯಾನಕದ ಬರ್ಬರತೆ..
ಇಲ್ಲಿ ರೋಮಗಳನ್ನು ನಿಮಿರಿಸುವ ರೌದ್ರದ ಕ್ರೋಧಾವೇಶ…
ಅಲ್ಲಿ ಮುಖ ಕಿವಿಚಿಸುವ ಬೀಭತ್ಸದ ಜುಗುಪ್ಸೆ..
ಆಳದಲ್ಲೆಲ್ಲೆಲ್ಲೂ  ಮಾನಸವನ್ನು ಮಾನಸಸರೋವರವಾಗಿಸುವ ಶಾಂತದ ಪರಮಶಾಂತಿ…!
ಹೀಗೆ ರಸವಿಶ್ವರೂಪದರ್ಶನವಾಯಿತಲ್ಲಿ..!

ವೈಕುಂಠವಿಹಾರಿಯಾದ ಪರಮಪುರುಷನು, ಸಹಸ್ರಾರ, ಆಜ್ಞಾ, ವಿಶುದ್ಧಿ, ಅನಾಹತ, ಮಣಿಪೂರ, ಸ್ವಾಧಿಷ್ಠಾನ, ಮೂಲಾಧಾರಗಳೆಂಬ ಏಳು ಹೆಜ್ಜೆಗಳನ್ನಿರಿಸಿ ಶ್ರೀರಾಮನಾಗಿ ಭುವಿಗೆ ಅವರೋಹಣ ಮಾಡಿ, ಅವತಾರ ಕಾರ್ಯವನ್ನು ನಡೆಸಿ, ಪುನಃ ಅವೇ ಏಳು ಹೆಜ್ಜೆಗಳಲ್ಲಿ  ದಿವಿಗೆ ಆರೋಹಣ ಮಾಡಿದಂತೆ,
ಷಡ್ಜ – ಋಷಭ – ಗಾಂಧಾರ – ಮಧ್ಯಮ – ಪಂಚಮ – ಧೈವತ – ನಿಷಾದಗಳೆಂಬ ಸಪ್ತಸ್ವರಗಳಲ್ಲಿ
ಆರೋಹಣ, ಅವರೋಹಣದ ಲೀಲೆಯೊಡನೆ ಗಾನವಿಮಾನದಲ್ಲಿ ಭೂಲೋಕ – ಭಾಲೋಕಗಳ ವಿಹಾರ ನಡೆಸಿದರು ಕುಶಲವರು..!

ಸಹಜ ಓದಿಗೇ ಮಧುರವಾದ ರಾಮಾಯಣವು ಕುಶಲವರಿಂದ ಹಾಡಲ್ಪಟ್ಟಾಗ, ಮನೋಜ್ಞವಾದ ಶೃಂಗಾರದಿಂದಾಗಿ ಅಧಿಕವಾಗಿ ಶೋಭಿಸುವ ಸಹಜಸೌಂದರ್ಯದಂತೆ ಅತಿಶಯವಾಗಿ ಶೋಭಿಸಿತ್ತು…

ಸಂಗೀತ-ಸಾಹಿತ್ಯಗಳ ಮಧ್ಯೆ ಮಾಧುರ್ಯದ ಸ್ಪರ್ಧೆ ಏರ್ಪಟ್ಟಿತ್ತಲ್ಲಿ..!
ಕವಿಹೃದಯವೋ, ಕುಮಾರರ ಕಂಠವೋ..
ಗೀತವೋ, ಶ್ಲೋಕವೋ..
ಯಾವುದು ಹೆಚ್ಚು ಮಧುರವೆಂದು ತಿಳಿಯದಾದರು ಮಹರ್ಷಿಗಳು..
ಕುಶಲವರೆಂಬ ಕುಶಲಸಾರಥಿಗಳು ರಾಮಾಯಣಸರಸ್ವತಿಯನ್ನು ಗಾನರಥದಲ್ಲಿ ಕುಳ್ಳಿರಿಸಿ ಋಷಿಹೃದಯಗಳಿಗೆ ಕರೆದೊಯ್ದರು….

ವರ್ತಮಾನವು ಭೂತವಾಗುವುದು ಲೋಕಸಹಜವಾದರೆ
ಕುಶಲವರು ರಾಮಯಣವನ್ನು ಹಾಡುವಾಗ ಭೂತವೇ ವರ್ತಮಾನವಾಯಿತು…
ಎಂದೋ ನಡೆದು ಹೋದ ರಾಮಾಯಣದ ಘಟನೆಗಳು ಇಂದು ನಡೆಯುವಂತೆ, ಈಗ ಕಣ್ಮುಂದೆ ನಡೆಯುತ್ತಲೇ…ಇರುವಂತೆ ಋಷಿಗಳಿಗೆ ಗೋಚರಿಸತೊಡಗಿದವು..

ಗಾನವು ಕಾಲದ ದ್ವಾರವನ್ನು ತೆರೆದಾಗ..
ವಾಲ್ಮೀಕಿಗಳ ಅಮೃತಾಕ್ಷರಗಳು ಅರಿವಿನ ಕಿರಣಗಳನ್ನು ಬೀರಿದಾಗ..
ಅಮರನಾಯಕನ ಇತಿಹಾಸದರ್ಶನವಾಯಿತು ಸುಕೃತಿಸಂತರಿಗೆ….

ಸಾರಸ್ವತಸಾಮ್ರಾಜ್ಯದ ಸ್ವರಸಿಂಹಾಸನದಲ್ಲಿ ರಾಮಾಯಣವೆಂಬ ರಸರಾಜನನ್ನು “ದೇವರ ಮಕ್ಕಳು” ಕುಳ್ಳಿರಿಸಿದಾಗ
“ದೈವೀಪ್ರಜೆ”ಗಳು ಆನಂದಬಾಷ್ಪಗಳಿಂದ ಅಭಿಷೇಕಗೈದರು…

ಭಾವದೊಳಮನೆಯನ್ನು ಹೊಕ್ಕು ಕುಶಲವರು ರಾಗವಾಗಿ ಹೊರಹೊಮ್ಮಿ ಋಷಿಗಳ ಕಿವಿದೆರೆಗಳನ್ನು ಪ್ರವೇಶಿಸಿದರೆ,
ಆಲಿಸುತ್ತಾ.. ಆಸ್ವಾದಿಸುತ್ತಾ.. ಋಷಿಗಳು ಮೂಕತನ್ಮಯಭಾವವನ್ನು ತಾಳಿದರು.

ಸಮಯ ಸರಿದಂತೆ ಮುನಿಗಳ ಮೌನವು, ಧರೆಯಿಂದ ಹೊರಚಿಮ್ಮುವ ಚಿಲುಮೆಯಂತೆ ಪ್ರಶಂಸೆಯ ಸಹಜೋದ್ಗಾರವಾಗಿ ಹೊರಹೊಮ್ಮಿತು.
ತಪಃಶ್ಲಾಘ್ಯರಾದ ಮಹರ್ಷಿಗಳ ಶ್ಲಾಘನೆಯಿಂದ ಅನುಗೃಹೀತರಾದ ಕುಶಲವರು ಮತ್ತಷ್ಟು ಮಧುರವಾಗಿ ಹಾಡತೊಡಗಿದರು….

ಸುಖಾನುಭವವು ನೈಜವಾದುದೇ ಆದರೆ ಅದು ಪರ್ಯವಸಾನವಾಗುವುದು ತ್ಯಾಗದಲ್ಲಿ..
ರಾಮಕಥಾ ಗಾನಸುಖವನ್ನು ಆಸ್ವಾದಿಸಿ…ಆಸ್ವಾದಿಸಿ…. ಮೈಮರೆತ ಋಷಿಗಳ ಸ್ಥಿತಿಯೂ ಹಾಗೆಯೇ ಆಯಿತು…!

ಭಾವಾವಿಷ್ಟರಾದ ಋಷಿಗಳು ಕಥಾಂತ್ಯದಲ್ಲಿ ಹಿಂದುಮುಂದಿನದನ್ನು ಮರೆತು
ತಮ್ಮಲ್ಲಿರುವ ವಸ್ತುಗಳನ್ನು ಕುಶಲವರಿಗೆ ಕೈಯೆತ್ತಿ ಕೊಡತೊಡಗಿದರು….
ಪ್ರೀತಿವಶನಾದ ಮುನಿಯೊಬ್ಬ ಸಭಾಮಧ್ಯದಲ್ಲಿ ಮೇಲೆದ್ದು ಕುಶಲವರಿಗೆ ಕಲಶವನ್ನಿತ್ತರೆ….
ಸುಪ್ರಸನ್ನನಾದ ಮತ್ತೊಬ್ಬ ಮುನಿ ಅವರೀರ್ವರಿಗೆ ನಾರುಬಟ್ಟೆಯನ್ನಿತ್ತನು…
ಮಗದೊಬ್ಬ ಕೃಷ್ಣಾಜಿನವಿತ್ತರೆ….
ಇನ್ನೊಬ್ಬ ಕಮಂಡಲುವನ್ನು…
ಮೌಂಜಿ…
ಯಜ್ಞಸೂತ್ರ…
ಯಜ್ಞಪಾತ್ರೆ…
ಆಸನ…
ಜಪಮಾಲೆ…
ಕಾಷಾಯವಸ್ತ್ರ…
ಜಟೆಯನ್ನು ಕಟ್ಟುವ ದಾರ…
ಸಮಿತ್ತುಗಳನ್ನು ಮಾಡಲು ಬಳಸುವ ಕೈಗೊಡಲಿ…
ಸೌದೆಹೊರೆ…!
ಕಟ್ಟಿಗೆಯನ್ನು ಕಟ್ಟುವ ಹಗ್ಗ…!
ಮತ್ತೊಬ್ಬನಂತೂ ಕೊಡಲು ಬೇರೇನೂ ಕಾಣದೆ ಉಡುಗೊರೆಯಾಗಿ ಕೌಪೀನವನ್ನೇ ಕೊಟ್ಟು ಬಿಟ್ಟ..!
ಹೃದಯದ ತುಂಬಾ..ಪ್ರೀತಿಯನ್ನು ತುಂಬಿಕೊಂಡ ಕೆಲವು ಋಷಿಗಳು ಕುಮಾರರಿಗೆ ದೀರ್ಘಾಯುಸ್ಸನ್ನು ಪ್ರದಾನ ಮಾಡಿದರೆ ಮತ್ತೆ ಕೆಲವರು ದುರ್ಲಭವಾದ ವರಗಳನ್ನು ಪ್ರದಾನಮಾಡಿದರು.

ಕಿರಿಯರು ಕೊಡಮಾಡಿದ ಹಿರಿದಾದ ಆನಂದಕ್ಕೆ ಪ್ರತಿಯಾಗಿ ಏನು ಕೊಟ್ಟರೆ ತಾನೇ ಅದು ಸರಿಯಾದೀತು..?ಆಯುಷ್ಯವಾಗಲಿ, ಆರೋಗ್ಯವಾಗಲಿ, ಐಶ್ವರ್ಯವಾಗಲಿ ಆ ಆನಂದಕ್ಕೆ ಸಾಟಿಯಲ್ಲ….
ಹಾಗಿರುವಾಗ ಕೌಪೀನವನ್ನೋ, ಕಟ್ಟಿಗೆಯನ್ನೋ ಉಡುಗೊರೆಯಾಗಿ ಕೊಡುವುದೇ…?
ಉತ್ತಮೋತ್ತಮ ಸಾಹಿತ್ಯ – ಸಂಗೀತಗಳ ಬೆಲೆ ಕೌಪೀನ ಮತ್ತು ಕಟ್ಟಿಗೆಯೇ…?

ಪೂಜ್ಯ ರಾಮಭದ್ರಾಚಾರ್ಯರು ಆಗಾಗ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತದೆ….

ನಟನೊಬ್ಬ ರಾಜಾಸ್ಥಾನದಲ್ಲಿ ಗೋವಿನ ವೇಷವನ್ನು ಅಭಿನಯಿಸಿದ…
ದೊರೆಗೆ ಅದೆಷ್ಟು ಮೆಚ್ಚುಗೆಯಾಯಿತೆಂದರೆ ತನ್ನ ಉತ್ತರೀಯವಾದ ಪೀತಾಂಬರವನ್ನೇ ಹೊದಿಸಿ ನಟನನ್ನು ಸಮ್ಮಾನಿಸಿದ…
ಉತ್ತೇಜಿತನಾದ ನಟ ಮತ್ತಷ್ಟು ಸೊಗಸಾಗಿ ಗೋವಿನ ಅಭಿನಯವನ್ನು ಮಾಡತೊಡಗಿದ…

ಸಭೆಯಲ್ಲಿ ಉಪಸ್ಥಿತನಿದ್ದ ಹಳ್ಳಿಗನೊಬ್ಬ ಪರೀಕ್ಷಿಸಲೋಸುಗವಾಗಿ ಪುಟ್ಟ ಕಲ್ಲೊಂದನ್ನು ಎತ್ತಿ ವೇಷದ ಗೋವಿನ ಬೆನ್ನಿನ ಮೇಲೆಸೆದ…
ಗೋವಿನಲ್ಲಿ ಮಾತ್ರ ಇರುವ, ಬೇರೆ ಪ್ರಾಣಿಗಳಲ್ಲಿ ಇಲ್ಲದಿರುವ ಒಂದು ವಿಶಿಷ್ಟ ಶಕ್ತಿಯೆಂದರೆ ಅದು ಮೈಮೇಲೆ ಕುಳಿತ ನೊಣವನ್ನೋ, ಇತರ ಕೀಟಗಳನ್ನೋ ಓಡಿಸಲು ಚರ್ಮದ ಅಷ್ಟೇ ಭಾಗವನ್ನು ಮಾತ್ರವೇ ಅಲ್ಲಾಡಿಸಬಲ್ಲುದು…

ನಟನಲ್ಲಿ ಅದೆಷ್ಟು ನೈಪುಣ್ಯವಿತ್ತೆಂದರೆ ಶರೀರದಲ್ಲಿ ಹಳ್ಳಿಗನು ಕಲ್ಲೆಸೆದ ಪ್ರದೇಶವನ್ನು ಮಾತ್ರವೇ ನಡುಗಿಸಿದನಾತ…
ನಟನ ಅದ್ಭುತ ಕೌಶಲವನ್ನು ನೋಡಿ ಮೆಚ್ಚಿದ ಹಳ್ಳಿಗ ತಾನು ಹೊದ್ದ ಕಂಬಳಿಯನ್ನೇ ಆತನಿಗಿತ್ತು ಕೈಮುಗಿದ…

ಆಗ ನಡೆಯಿತೊಂದು ವಿಚಿತ್ರ ಘಟನೆ…

ರಾಜನು ಪ್ರದಾನ ಮಾಡಿದ ಪೀತಾಂಬರವನ್ನು ತೆಗೆದಿರಿಸಿದ ನಟ ಹಳ್ಳಿಗನ ಹರಕು ಕಂಬಳಿಯನ್ನು ಅಭಿಮಾನದಿಂದ ಹೊದ್ದುಕೊಂಡ…
ಆಶ್ಚರ್ಯ – ಆಘಾತಗಳಿಗೊಳಗಾದ ರಾಜ, ಆ ವರ್ತನೆಯ ಔಚಿತ್ಯವನ್ನು ಪ್ರಶ್ನಿಸಿದಾಗ ನಟ ನೀಡಿದ ಉತ್ತರ ಬಹುಮಾನಕ್ಕೆ ಹೊಸ ವ್ಯಾಖ್ಯೆಯನ್ನೇ ಕೊಟ್ಟಿತು…

“ದೊರೆಯೇ, ಹಳ್ಳಿಗನಿಗಿಂತ ಬಹುದೊಡ್ಡವನು ನೀನು…
ಕಂಬಳಿಗಿಂತಲೂ ಬಹು ಮೂಲ್ಯವಾದುದು ನೀನಿತ್ತ ಪೀತಾಂಬರ…
‘ಮಾನ’ ಶಬ್ದಕ್ಕೆ ‘ಅಳತೆ’ ಎಂಬ ಅರ್ಥವಿದೆ…
ಅಳೆದು ನೋಡಿದಾಗ ‘ಬಹು’ವೆನಿಸಿದ ಸಂಗತಿಯನ್ನು ಮೆಚ್ಚಿ ನೀಡುವ ಕೊಡುಗೆಗೇ ಬಹುಮಾನವೆನ್ನುವರು..
ನೀನು ಮೇಲ್ನೋಟಕ್ಕೆ ಮೆಚ್ಚಿ ಉಡುಗೊರೆಯನ್ನಿತ್ತೆ…
ಆದರೆ ನನ್ನ ವಿದ್ಯೆಯನ್ನು ಚೆನ್ನಾಗಿ ಅಳೆದು ಯಥಾರ್ಥವಾದ ಬಹುಮಾನವಿತ್ತವನು ಹಳ್ಳಿಗ..
ಅಳೆದು ಅರಿತು ಕೊಟ್ಟ ಉಡುಗೊರೆಗೆ ನಿಜವಾದ ಬೆಲೆ…
ವಸ್ತುವಿನ ಬೆಲೆ ಬೆಲೆಯಲ್ಲ…
ಬಹುಮಾನದ ಹಿಂದಿನ ಭಾವ ಎಷ್ಟು ದೊಡ್ದದೋ ಬಹುಮಾನ ಅಷ್ಟೇ ದೊಡ್ಡದು…”

ಈ ಕಥೆಯ ಬೆಳಕಲ್ಲಿ ಕಣ್ಣಿಟ್ಟು ನೋಡಿದರೆ ಋಷಿಗಳಿತ್ತ ಕೌಪೀನ – ಕಾಷ್ಟಗಳಲ್ಲಿ ಕನಕರತ್ನಗಳನ್ನು ಮೀರಿದ ಮೌಲ್ಯವು ಕಂಡುಬರುವುದಲ್ಲವೇ…!?

ಹೀಗೆ ಆದಿಕವಿಯೆದೆಯಲ್ಲಿ ಆವಿರ್ಭವಿಸಿ, ಕುಶಲವರೆಂಬ ಕುಶಲ ಕುಶೀಲವರಲ್ಲಿ ಅಭಿವ್ಯಕ್ತವಾಗಿ, ಸಂತರ ಸಭೆಯಲ್ಲಿ ಸಮ್ಮಾನಗೊಂಡು, ಕಥಾನಾಯಕನಾದ ವಿಶ್ವನಾಯಕನ ಸಾನ್ನಿಧ್ಯ ಸೇರಲು ತವಕಿಸಿತು ಅಮರಕಥಾನಕ…

|| ಹರೇರಾಮ ||

…………………………………
ಟಿಪ್ಪಣಿ:
ಕುಶೀಲವ = ಗಾಯಕ

ಕೃಷ್ಣಾಜಿನ = ಜಿಂಕೆಯ ಚರ್ಮ.
ಕೌಪೀನ = ಮಾನ ಮುಚ್ಚುವ ಕನಿಷ್ಟ ಬಟ್ಟೆ.
ಕಾಷ್ಠ = ಕಟ್ಟಿಗೆ.
ಆವಿರ್ಭವಿಸಿ = ಹುಟ್ಟಿ.
ತಪ:ಶ್ಲಾಘ್ಯ = ತಪಸ್ಸಿನಿಂದಾಗಿ ಪ್ರಶಂಸೆಗೆ ಒಳಗಾದವನು
ಗಡಣ = ಗುಂಪು

-ಸಂಪಾದಕ

37 Responses to ಕುಶಲವರೋ ? ಕುಶಲ ಕುಶೀಲವರೋ ?

 1. jagadisha sharma

  ಸುಂದರ ಪದಸಂಯೋಜನೆ,
  ಒಳಗಿಳಿದಷ್ಟೂ ಅರಿವಿನೌನ್ನತ್ಯವನ್ನು ಹೆಚ್ಚಿಸುವ ಅರ್ಥಗರ್ಭಿತತೆ,
  ವಾಲ್ಮೀಕಿಗಳ ಹೃದಯವನ್ನು ತೆರೆದಿಡುವ ಸಹೃದಯತೆ….

  ಮನವನ್ನು ತುಂಬಿದ ಬರಹವಿದು.

  [Reply]

 2. Raghavendra Narayana

  ಭಗವ೦ತನಿಗೆ ಸೇತುವಾಗಿರುವ ಸ೦ತರನ್ನು ಕುಣಿದಾಡಿಸಿದವರಾರು? – ರಾಮ ರಾಮಾಯಣ ನಾರಾಯಣ ಆದರ್ಶ ಭಕ್ತಿ ವಿರಕ್ತಿ ಕಾವ್ಯ ಕುಶ-ಲವ ರಾಮನ ಪರಿವಾರ …. ????

  ಇವರು ಪಡುವ ಆನ೦ದಕ್ಕೆ ಸಾಟಿ ಇಲ್ಲ, ಯಾವುದೇ ಅಡೆ ತಡೆ ಇಲ್ಲ, ಬೇಕೆ೦ದಾಗ ಬೇಕಾದಷ್ಟು ಸವಿಯಬಹುದು. ಮತ್ತೆ ಮತ್ತೆ ಬಯಸಿ ಬರುವವರಿಗೆ ತುತ್ತ ತುದಿಯ ನೋಟ. ಮತ್ತೆ ಅಲ್ಲೇ ಬರಿದಾದ ಮನದಿ೦ದ ರಸ ಹೇಗೆ ಹುಟ್ಟುತ್ತದೆ ಕಣ್ಣಿನಲಿ?? ಮನದು೦ಬಿ ಹೊರ ಹರಿದ ಮೇಲೆ ಮನ ಬರಿದಾಗುವುದೊ…. ????

  [Reply]

  Sri Samsthana Reply:

  ತುಂಬುವುದು ಬಹಿರಂಗ…ಆದರೆ ಬರಿದಾಗದು ಅಂತರಂಗ…!

  [Reply]

 3. Raghavendra Narayana

  ಶಿವ ಶಿವ ಶ೦ಕರ ನಾರಾಯಣ ನಾವು ಓದಿರಲಿಲ್ಲ ಹಿ೦ದೆ ಎ೦ದೂ ಈ ರೀತಿಯ ಬರಹ, ಮು೦ದೆ ಓದುವುದಿದ್ದರೆ ಅದು ಈ ಗುರುವಿನ ಕರುಣೆಯ ಬೆಳಕಿನಲ್ಲಿ.
  ವಾರಾನುಗಟ್ಟಲೆ ಊಟ ಉಣದವನು ಅನ್ನವನ್ನು ಮುಕ್ಕುವ೦ತೆ ಮುಕ್ಕುವ೦ತಾಯಿತು ಈ ಲೇಖನ.
  .
  ___________________________________
  “ಅಂತರಂಗದಲ್ಲಿ ಅಂತಃಸುಖವನ್ನೇ ಮೆಲುಕು ಹಾಕುತ್ತಾ, ಅಂತಃಪ್ರಪಂಚದ ಮಾತುಕತೆಗಳನ್ನೇ ನಡೆಸುತ್ತಾ..”

  “ರಾಮತತ್ತ್ವವನ್ನುಳಿದು ಜಗವೆಲ್ಲವೂ ಮರೆಯಾಯಿತು…”
  “ಹೀಗೆ ರಸವಿಶ್ವರೂಪದರ್ಶನವಾಯಿತಲ್ಲಿ..!”
  “ಕುಶಲವರು ರಾಮಯಣವನ್ನು ಹಾಡುವಾಗ ಭೂತವೇ ವರ್ತಮಾನವಾಯಿತು…”

  “ಗಾನವು ಕಾಲದ ದ್ವಾರವನ್ನು ತೆರೆದಾಗ..”

  “ಸಾರಸ್ವತಸಾಮ್ರಾಜ್ಯದ ಸ್ವರಸಿಂಹಾಸನದಲ್ಲಿ ರಾಮಾಯಣವೆಂಬ ರಸರಾಜನನ್ನು ”ದೇವರ ಮಕ್ಕಳು” ಕುಳ್ಳಿರಿಸಿದಾಗ
  “ದೈವೀಪ್ರಜೆ” ಗಳು ಆನಂದಬಾಷ್ಪಗಳಿಂದ ಅಭಿಷೇಕಗೈದರು…”

  “ಅಳೆದು ಅರಿತು ಕೊಟ್ಟ ಉಡುಗೊರೆಗೆ ನಿಜವಾದ ಬೆಲೆ…”

  “ಬಹುಮಾನದ ಹಿಂದಿನ ಭಾವ ಎಷ್ಟು ದೊಡ್ದದೋ ಬಹುಮಾನ ಅಷ್ಟೇ ದೊಡ್ಡದು…”
  ___________________________________

  [Reply]

 4. Raghavendra Narayana

  ಕಷ್ಟ ಕಷ್ಟ ಅರ್ಥವಾಗಲು
  ___________________________________
  “ವೈಕುಂಠವಿಹಾರಿಯಾದ ಪರಮಪುರುಷನು, ಸಹಸ್ರಾರ, ಆಜ್ಞಾ, ವಿಶುದ್ಧಿ, ಅನಾಹತ, ಮಣಿಪೂರ, ಸ್ವಾಧಿಷ್ಠಾನ, ಮೂಲಾಧಾರಗಳೆಂಬ ಏಳು ಹೆಜ್ಜೆಗಳನ್ನಿರಿಸಿ ಶ್ರೀರಾಮನಾಗಿ ಭುವಿಗೆ ಅವರೋಹಣ ಮಾಡಿ, ಅವತಾರ ಕಾರ್ಯವನ್ನು ನಡೆಸಿ, ಪುನಃ ಅವೇ ಏಳು ಹೆಜ್ಜೆಗಳಲ್ಲಿ ದಿವಿಗೆ ಆರೋಹಣ ಮಾಡಿದಂತೆ,
  ಷಡ್ಜ – ಋಷಭ – ಗಾಂಧಾರ – ಮಧ್ಯಮ – ಪಂಚಮ – ಧೈವತ – ನಿಷಾದಗಳೆಂಬ ಸಪ್ತಸ್ವರಗಳಲ್ಲಿ
  ಆರೋಹಣ, ಅವರೋಹಣದ ಲೀಲೆಯೊಡನೆ ಗಾನವಿಮಾನದಲ್ಲಿ ಭೂಲೋಕ – ಭಾಲೋಕಗಳ ವಿಹಾರ ನಡೆಸಿದರು ಕುಶಲವರು..!”
  ___________________________________

  [Reply]

  Shaman Hegde Reply:

  yes… its difficult to follow… if time permits, need more explanation regarding those lines….its a request…

  [Reply]

  Sri Samsthana Reply:

  @ ಹರೇರಾಮ ಓದುಗರ ಬಳಗ… ಸಂಪಾದಕ ಬಳಗ… ವ್ಯವಸ್ಥಾಪಕ ಬಳಗ…

  ಲೇಖನಗಳ ಮೇಲೆ ಸಂವಾದ ನಡೆಸೋಣವೇ…?

  [Reply]

  Shaman Hegde Reply:

  ಹರೇರಾಮ…ಸಂವಾದ- ಎಲ್ಲಿ? ಯಾವಾಗ? ಹೇಗೆ? ಸಂಸ್ಥಾನದ ಸಮ್ಮುಖದಲ್ಲಿಯೋ ಅಥವಾ ಹರೇರಾಮ.ಇನ್ ನಲ್ಲಿಯೋ?

  [Reply]

  Raghavendra Narayana Reply:

  ಖ೦ಡಿತವಾಗಿ ನಡೆಸಬೇಕು. ಅದೊ೦ದು ಅದ್ಭುತ ಸೌಭಾಗ್ಯವೆ ಸರಿ.
  1. ಕಾನಫ಼ೆರೆನ್ಸ್ ಕಾಲ್ ಆಗಬಹುದೋ?
  2. ಚಾಟ್ ಮೂಲಕ ತಿ೦ಗಳಲ್ಲಿ ಒ೦ದು ಬಾರಿಯಾದರು ಪ್ರಶ್ನೋತ್ತರವಾದರೆ ಅದ್ಭುತ? ರಾಮಯಣದ ಬಗ್ಗೆ ಪ್ರಶ್ನೋತ್ತರ ಮೊದಲು ಮಾಡಿ, ನ೦ತರ ಯಾವುದೇ ವಿಷಯವನ್ನು ತೆಗೆದುಕೊಳ್ಳಬಹುದು, ಇನ್ನಿತರ ಜನರನ್ನು ಆಹ್ವಾನಿಸಬಹುದು?
  .
  ಹರೇರಾಮ

  [Reply]

  Editor@HareRaama.in Reply:

  ಅದ್ಭುತವಾದ ಯೋಚನೆ…..

  ಖಂಡಿತವಾಗಿ ನಾವಿದನ್ನು ಆಯೋಜಿಸಲೇಬೇಕು….

  [Reply]

 5. Raghavendra Narayana

  ಸ೦ಸ್ಥಾನ, ಯಾವ ಡಿಕ್ಷನರಿ ಹಿಡಿದುಕೊಳ್ಳಬೇಕು ದಯಮಾಡಿ ತಿಳಿಸಿ.
  ——————————————————————-
  ಗಡಣ – ?
  ತಪಃಶ್ಲಾಘ್ಯ – ?
  ತಪಃಶ್ಲಾಘ್ಯ – ?
  ಕೃಷ್ಣಾಜಿನ – ?
  ಕೌಪೀನ – ?
  ಕಾಷ್ಟ – ?
  ಆವಿರ್ಭವಿಸಿ – ?

  [Reply]

  Editor@HareRaama.in Reply:

  ನಮಸ್ತೆ,
  ಟಿಪ್ಪಣಿಯಲ್ಲಿ ಅರ್ಥ ಬರೆದಿದೆ, ಗಮನಿಸಿ

  [Reply]

  Raghavendra Narayana Reply:

  ಧನ್ಯವಾದಗಳು

  [Reply]

 6. seetharama bhat

  Hareram

  Shbdagalu Kastave adaru bhavada prabavadinda
  bhavisabahudu
  vishayagalu kastavenisidaru visheshathe yinda
  thiliyabahudu

  gurukrupe

  [Reply]

 7. Shaman Hegde

  ಹರೇರಾಮ….. ‘ಅಲೆಯಲೆಯಾಗಿ ರಾಮಾಯಣವು ಪಸರಿಸತೊಡಗಿತಲ್ಲಿ…’ ಅದೇ ರಾಮಾಯಣವು ಗುರು ಮುಖೇನ ಮನ ಮುಟ್ಟುವಂತೆ ಅಲೆಯಲೆಯಾಗಿ ಪಸರಿಸತೊಡಗಿತ್ತಿಲ್ಲಿ….

  [Reply]

 8. Madhu Dodderi

  ತುಂಬಾ ತುಂಬಾ ತುಂಬಾ…. ಸುಂದರವಾಗಿ ಬೈಂದು ಈ ಬ್ಲಾಗು..
  ಧನ್ಯವಾದಗಳು ಸಂಸ್ಥಾನ…

  [Reply]

 9. Shridevi Vishwanath

  ಹರೇರಾಮ..,
  ಭಗವಂತನು ಈ ಕಾಲದಲ್ಲಿ ತನ್ನ ಇರುವಿಕೆಯನ್ನು ಸಂತರ ರೂಪದಲ್ಲಿ ನಮಗೆ ತೋರಿಸುತ್ತಿರುವುದು ಹೌದಲ್ಲವೇ? ಸಂತರು ಸಾಕ್ಷಾತ್ ಭಗವಾನ್ ಸ್ವರೂಪರು.. ಕಣ್ಣಿಗೆ ಕಾಣುವ ದೇವರು, ನಮ್ಮೊಡನೆ ಮಾತನಾಡುವ ದೇವರು, ನಮ್ಮ ಇಚ್ಛೆಗಳನ್ನು ಆಲಿಸಿ ಅನುಗ್ರಹಿಸುವ ಪ್ರತ್ಯಕ್ಷ ಪರಮೇಶ್ವರರು, ಮನಕ್ಕೆ ಮುದ ನೀಡುವ ಮುಕುಂದರು, ತಾಳ್ಮೆಯಿಂದ ನಮ್ಮನ್ನು, ನಮ್ಮ ತಪ್ಪುಗಳನ್ನು ತಿದ್ದಿ, ಸರಿ ದಾರಿಯನ್ನು ತೋರಿಸುವ ದೇವೀ ಸ್ವರೂಪರು. ಭಗವಂತನಿಂದ ರೂಪಿಸಲ್ಪಟ್ಟ, ಭಗವಂತನ ಈ ದ್ವಾರಕ್ಕೆ ನಮೋ ನಮಃ..

  ಅದ್ಭುತ ಪರಿಕಲ್ಪನೆ!!! ಆತ್ಮ ಜೀವದೊಳಗೆ ಪ್ರವೇಶವಾಗುವುದೂ, ನಿರ್ಗಮಿಸುವುದೂ ಇದೇ ಏಳು ಹೆಜ್ಜೆಗಳನ್ನಿಟ್ಟಲ್ಲವೇ ಸಂಸ್ಥಾನ? ಶ್ರೀ ರಾಮನ ಭೂಮಿಗೆ ಅವತಾರದ ಅವರೋಹಣ, ಆರೋಹಣವನ್ನು ಏಳು ಹೆಜ್ಜೆಗಳಲ್ಲಿಯೂ, ಲವಕುಶರ ರಾಮಾಯಣ ಗಾನವನ್ನು, ಗಾನವಿಮಾನದಲ್ಲಿ ಕುಳ್ಳಿರಿಸಿ ಸಪ್ತ ಸ್ವರಗಳ ಏರಿಳಿತಗಳಲ್ಲಿ, ಭೂಲೋಕ ಭಾಲೋಕಗಳ ಸಂಚಾರ ಮಾಡಿದಂತೆ ಅತಿ ಸುಂದರವಾಗಿ, ಹೃದಯಕ್ಕಿಳಿಯುವಂತೆ ಮೂಡಿ ಬಂದಿದೆ.. ಓದುತ್ತಾ ಹೋದಂತೆ ಆ ಭಾವಗಂಗೆಯಲ್ಲಿ, ರಾಮಾಯಣಗಂಗೆಯ ಪ್ರವಾಹದಲ್ಲಿ ನಾವೂ ತೇಲಿದ ಅನುಭವ.. ಆ ವಾತಾವರಣದ ಮಧುರತೆಯನ್ನು ನಮಗೆ ಉಣಬಡಿಸಿದಿರಿ, ನಾವೂ ಉಂಡು ಸಂತೃಪ್ತರಾದೆವು ಸಂಸ್ಥಾನ.

  ಬಹುಮಾನದ ಮೌಲ್ಯಗಳನ್ನು ತಿಳಿಸಿಕೊಟ್ಟು, ಕೊಡುಗೆ ಕೊಡುವ ಯಾವುದೇ ವ್ಯಕ್ತಿಯ ಅಭಿಮಾನವನ್ನು ಗುರುತಿಸಿ, ನಮ್ಮ ಸ್ವೀಕರಣೆಯ ಗುಣವನ್ನೂ ಇನ್ನೂ ವಿಶಾಲ ಮಾಡಿಕೊಳ್ಳಲು ಅನುವು ಮಾಡಿದ ಶ್ರೀ ಗುರುಗಳಿಗೆ ಹೃದಯ ತುಂಬಿದ ನಮನಗಳು. ಹರೇರಾಮ…

  [Reply]

 10. shobha lakshmi

  ಸತ್ಯ ಹೇಳೆಕಾದರೆ ಎ೦ತ ಬರೆಯಕು ಗೊ೦ತಾವುತ್ತಿಲ್ಲೆ ….ಓದಿ ಮೂಕಳಾದೆ..

  ರಾಮಾಯಣದ ಪೂರ್ವಪೀಠಿಕೆ ಹೀಗಿರಬೇಕಾದರೆ ಇನ್ನು ರಾಮಾಯಣ ಹೇಗಿರಬಹುದೆ೦ಬ ಕುತೂಹಲ ಇದೆ..

  ವಸ್ಥುವಿನ ಬೆಲೆ ಬೆಲೆ ಅಲ್ಲ ಬಹುಮಾನದ ಹಿ೦ದಿನ ಭಾವ ದೊಡ್ಡದು….ಗುರುಗಳೇ ನೀವು ಅನುಗ್ರಹಿಸುತ್ತಿರುವ ಈ ರಾಮಾಯಣ ವೆ೦ಬ ಬಹುಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೆ? ಇಷ್ಟು ದೊಡ್ಡ ಬಹುಮಾನವನ್ನು ನಮಗೆ ಭರಿಸಲು ಸಾಧ್ಯವೆ ಗುರುದೇವ?
  ನಿಮ್ಮ ಪ್ರೀತಿಗೆ ನಮೋನ್ನಮಃ

  [Reply]

 11. shobha lakshmi

  ಮೊದಲು ಸ೦ತ ಮತ್ತೆ ಭಗವ೦ತ….

  ಗುರುಮುಖೇನ ಭಗವ೦ತನು ತನ್ನನ್ನು ತಾನು ಅಭಿವ್ಯಕ್ತಿಸುತ್ತಿದ್ದಾನೆ…ಇದು ಖ೦ಡಿತ ಸತ್ಯ…ಭಗವ೦ತ ಶ್ರಿರಾಮಚ೦ದ್ರ ಗುರುಗಳಿ೦ದ ರಾಮಾಯಣ ಪ್ರವಚನ ರೂಪದಲ್ಲಿ ನಮ್ಮ ಹ್ರುದಯದೊಳಗೆ ಪ್ರವೇಶಿಸುತ್ತಿದ್ದಾನೆ…

  ಭಗವ೦ತನ ಆಗಮನಕ್ಕೆ ಸ್ವಾಗತ..ಹ್ರುದಯದ ಬಾಗಿಲುತೆರೆದು ಪೂರ್ಣಕು೦ಭದೊ೦ದಿಗೆ (ಪೂರ್ಣ ಮನಸಿನಿ೦ದ) ತಯಾರಾಗಿದ್ದೇವೆ ಭಕ್ತ ಸಮೂಹ ಎನ್ನುವ ಇ೦ದ್ರಿಯಗಳು…

  [Reply]

 12. Raghavendra Narayana

  ೧. ಸ೦ಸ್ಥಾನ, “ರಾಮ ತತ್ತ್ವ”ವ ವಿವರಿಸುವಿರಾ?
  ೨. ರಾಮನನ್ನು ಹೇಗೆ ಜಪಿಸಬೇಕು ತಿಳಿಸುವಿರಾ?
  ೩. ಮೂಲ-ಮ೦ತ್ರ ಎ೦ದು ಇದೆಯೆ? ಇದ್ದರೆ ತಿಳಿಸುವಿರಾ?
  .
  ಸಾಸ್ಠಾ೦ಗ ಪ್ರಣಾಮಗಳೊ೦ದಿಗೆ.

  [Reply]

  Sri Samsthana Reply:

  ಖಂಡಿತವಾಗಿಯೂ ತಿಳಿಸಲು-ವಿವರಿಸಲು ಪ್ರಯತ್ನಿಸುವೆವು…

  ಒಮ್ಮೆ ಕುಳಿತುಕೊಳ್ಳೋಣ…

  [Reply]

 13. Anuradha Parvathi

  ಶಿವ ಶಿವ, ಪೂರ್ತ್ರಿ ಅರ್ಥ ಆಯ್ದಿಲ್ಲೆ ಇನ್ನೊ. ನಾಕು ಸರ್ತಿ ಓದೆಕ್ಕು. ಎಷ್ಟು ಅರ್ಥ ಆತೋ ಅಷ್ಟು ಅದ್ಭುತ.

  [Reply]

  Sri Samsthana Reply:

  ರಾಮಾಯಣದ ಬಗೆಗೆ ನಮ್ಮ ಅನುಭವವೂ ಇದುವೇ..!

  [Reply]

 14. dattu

  ಕುಶಲವರೋ…………………
  ಕುಶಲ ಕುಶೀಲವರಿವರೋ?………….

  [Reply]

 15. dattu

  ಕೊಡಮಾಡಿದ ಹಿರಿದಾದ ಆನಂದಕ್ಕೆ ಪ್ರತಿಯಾಗಿ ಏನು ಕೊಟ್ಟರೆ ತಾನೇ ಅದು ಸರಿಯಾದೀತು..?
  ಕೆರೆಯನೀರನು ಕೆರೆಗೆ ಚೆಲ್ಲಿದಂತಾಯಿತೇ?…………
  ಜಿಪುಣತೆಯಾಯಿತೇ?…………

  [Reply]

 16. Sharada Jayagovind

  Harerama Samsthana ii Raama lekana Soundarya lahari mathu gaanalahari… mana thumbide …

  bahumaanada upa kathe thumba chennagide…

  [Reply]

 17. gopalakrishna pakalakunja

  “………..ಅಳೆದು ಅರಿತು ಕೊಟ್ಟ ಉಡುಗೊರೆಗೆ ನಿಜವಾದ ಬೆಲೆ…
  ವಸ್ತುವಿನ ಬೆಲೆ ಬೆಲೆಯಲ್ಲ…
  ಬಹುಮಾನದ ಹಿಂದಿನ ಭಾವ ಎಷ್ಟು ದೊಡ್ದದೋ ಬಹುಮಾನ ಅಷ್ಟೇ ದೊಡ್ಡದು…”

  [Reply]

 18. Mohan Bhaskar

  “ಕುಶಲವರು ರಾಮಯಣವನ್ನು ಹಾಡುವಾಗ ಭೂತವೇ ವರ್ತಮಾನವಾಯಿತು…”

  ಎ೦ತಹ ಸು೦ದರ ಕಲ್ಪನೆ! ಎ೦ತಹ ಉದಾತ್ತ ಪ್ರಕೃತಿಯ ಸ್ಪ೦ದನ ! ಅಪೂರ್ವ ಕಾವ್ಯ ಹ೦ದರ.

  ಪ್ರಣಾಮಗಳು.. ಮೋಹನ ಭಾಸ್ಕರ ಹೆಗಡೆ

  [Reply]

 19. sriharsha.jois

  ಭಾವದುಂಬಿ ಓದಿದರೆ ಅರ್ಥವಾಗದುದು ಯಾವುದೂ ಇಲ್ಲವೇನೋ..?
  “ಗುರುರಾಮಾಯಣ”ದೊಳಗಿಳಿಯುತಿರೆ ಹೊರಬರುವ ಯೋಚನೆಯೂ ಬಾರದಿರಲಿ…
  ರಾಮಾ….! ಮುನ್ನಡೆಸು ನಮ್ಮನು…….

  [Reply]

 20. Ashwini Bhat

  ಕುಶಲವರ ಮೇಧಾಶಕ್ತಿಗೆ ಶರಣು ಶರಣು…

  [Reply]

 21. Geetha Manjappa

  Sadguru,
  Santharalle Bhagavanthana darshanavadaga Bhagavanthanannu berelladaru
  hudukuvudunte?

  [Reply]

  Sri Samsthana Reply:

  ಅಂಥಾ ಸಂತರು ಸಿಕ್ಕಿದರೆ ಬೇರೇಲ್ಲಿಯೂ ಹುಡುಕಬೇಕಿಲ್ಲ…!

  [Reply]

 22. nandaja haregoppa

  ಹರೇರಾಮ

  ಸಾರಸ್ವತಸಾಮ್ರಾಜ್ಯದ ಸ್ವರಸಿಂಹಾಸನದಲ್ಲಿ ರಾಮಾಯಣವೆಂಬ ರಸರಾಜನನ್ನು ”ದೇವರ ಮಕ್ಕಳು” ಕುಳ್ಳಿರಿಸಿದಾಗ
  “ದೈವೀಪ್ರಜೆ”ಗಳು ಆನಂದಬಾಷ್ಪಗಳಿಂದ ಅಭಿಷೇಕಗೈದರು…

  ಆನಂದಬಾಷ್ಪಗಳಿಂದ ಅಭಿಷೇಕಗೈವ ಭಾಗ್ಯ ಈಗ ನಮ್ಮದು

  ಪ್ರಣಾಮಗಳು

  [Reply]

 23. Sri Samsthana

  ಲೇಖನಿಯಲ್ಲಿ ಅಮೃತ ತುಂಬುವ ಓ…ಸ್ಫೂರ್ತಿಸೆಲೆಯೇ..!

  [Reply]

 24. Jayashree Neeramoole

  ” ದ್ವಾರದಲ್ಲೇ ಭಗವಂತನ ದರ್ಶನವನ್ನು ಪಡೆದ ನಾವು ಅದೆಂಥ ಭಾಗ್ಯಶಾಲಿಗಳು” . ಗುರುಚರಣಗಳಿಗೆ ಅನಂತ ಪ್ರಣಾಮಗಳು.

  [Reply]

 25. Dr J Thirumala Prasad

  ವೈಕುಂಠವಿಹಾರಿಯಾದ ಪರಮಪುರುಷನು, ಸಹಸ್ರಾರ, ಆಜ್ಞಾ, ವಿಶುದ್ಧಿ, ಅನಾಹತ, ಮಣಿಪೂರ, ಸ್ವಾಧಿಷ್ಠಾನ, ಮೂಲಾಧಾರಗಳೆಂಬ ಏಳು ಹೆಜ್ಜೆಗಳನ್ನಿರಿಸಿ ಶ್ರೀರಾಮನಾಗಿ ಭುವಿಗೆ ಅವರೋಹಣ ಮಾಡಿ, ಅವತಾರ ಕಾರ್ಯವನ್ನು ನಡೆಸಿ———– ಯೋಗದ ಅತಿ ದೊಡ್ಡ ರಹಸ್ಯವನ್ನೇ ಬಿಡಿಸಿದೆ ಈ ವಾಕ್ಯ. “ತತ್ ಸೃಷ್ಟ್ವಾ ತದೇವಾನಪ್ರವಿಷತ್”

  [Reply]

 26. G.S.Hegde- Dombivli(Mumbai)

  Harerama,
  the great think,should follow……….

  [Reply]

Leave a Reply

Highslide for Wordpress Plugin