ಮಕ್ಕಳಿಲ್ಲವೆಂಬುದೊಂದನ್ನು ಹೊರತುಪಡಿಸಿದರೆ ಮತ್ತುಳಿದ ವಿಷಯಗಳಲ್ಲಿ ದಶರಥನನ್ನು ಹೋಲುವ ಭಾಗ್ಯಶಾಲಿ ಬೇರಿಲ್ಲ! ಅವನು ಜನಿಸಿದ ಕುಲವೋ ಬೆಳಕಿನ ಕುಲ, ಸೂರ್ಯಕುಲ; ರಾಜ್ಯವೋ ರತ್ನಗಳಿಂದ, ರತ್ನಪ್ರಾಯರಾದ ಜನರಿಂದ ರಾರಾಜಿಸುತ್ತಿದ್ದ ಕೋಸಲ; ಊರೋ ಉರ್ವರೆಯ ನಾರಿಗೆ ತಿಲಕವಿಟ್ಟಂತಿದ್ದ ಅಯೋಧ್ಯೆ; ಇನ್ನು ಉರ್ವರೆಯ ನಾರಿ*ಯರಿಗೆಲ್ಲ ತಿಲಕಪ್ರಾಯಳಾಗಿದ್ದ ಮಹಾನಾರಿ ಕೌಸಲ್ಯೆ ಅವನ ಕಲತ್ರ; ಮಂತ್ರಿಯೋ ಮಹಾಮತಿಯೂ, ಮಂಗಲಮತಿಯೂ ಆದ ಸುಮಂತ್ರ; ಇವೆಲ್ಲಕ್ಕೂ ತಿಲಕವಿಟ್ಟಂತೆ ಕುಲಗುರುವಾಗಿ ದೊರೆತ, *ದೊರೆಯದ ಗುರು, ಗುರುಗಳ ದೊರೆ, ಭಗವಾನ್ ವಸಿಷ್ಠರು!

ತಮ್ಮ ತಪೋಬಲದಿಂದಲೇ ಮೂರು ಲೋಕಗಳ ಒಡೆತನವನ್ನೂ ಪಡೆಯಬಲ್ಲ ಯೋಗ್ಯತೆಯ ವಸಿಷ್ಠರಿಗೆ ಪೌರೋಹಿತ್ಯದ ಅಗತ್ಯವೂ ಇರಲಿಲ್ಲ, ಅಪೇಕ್ಷೆಯೂ ಇರಲಿಲ್ಲ; ಆದರೆ, ಇಕ್ಷ್ವಾಕುವಂಶದಲ್ಲಿ ಮುಂದೊಂದು ದಿನ ಸಾಕ್ಷಾತ್ ಪರಮಪುರುಷನೇ ಅವತರಿಸಿ ಬರುತ್ತಾನೆ, ಆಗ ಅವನ ಸಾನ್ನಿಧ್ಯ-ಸಾಮೀಪ್ಯ-ಸೇವಾಭಾಗ್ಯಗಳು ಲಭಿಸುವುವೆಂಬ ಒಂದೇ ಕಾರಣಕ್ಕೆ ಕುಲಗುರು-ಪದವಿಯನ್ನು ಒಪ್ಪಿಕೊಂಡವರು ಅವರು! ವಸಿಷ್ಠರಂಥ ಗುರುಗಳ ಲಾಭವು ತಾನು ಜನಿಸುವ ಮೊದಲೇ ರಾಮನು ದಶರಥನಿಗೆ ಕೊಟ್ಟ ಕೊಡುಗೆ!

ಗುರುಕರುಣೆಯೊಂದಿರಲು ಮತ್ತೇನಿಲ್ಲದಿದ್ದರೇನು? ಗುರುಕರುಣೆಯಿಲ್ಲದಿರೆ ಮತ್ತೇನಿದ್ದೇನು?
ಕೊರತೆಯು ಒರತೆಯಾಗುವುದು, ಅಭಾವವು ಭಾವವಾಗುವುದು, ಅಲಭ್ಯವು ಲಭ್ಯವಾಗುವುದು, ಅಪ್ರಾಪ್ಯವು ಪ್ರಾಪ್ಯವಾಗುವುದು, ಕೊರಡೂ ಕೊನರುವುದು, ಜಡಕೆ ಜೀವ ಬರುವುದು, ಶವವೂ ಶಿವನಾಗುವುದು ಗುರುಕರುಣೆಯ ಚಮತ್ಕಾರ! ಗುರುಪಾದರಜವನ್ನು ಶಿರದ ಮೇಲೆ ಧರಿಸಿ ಹೊರಟವನು ಸೋಲುವ ಮಾತೇ ಇಲ್ಲ! ದಶರಥನ ದೈವ ದೊಡ್ಡದು! ಅವನಿಗೆ ವಸಿಷ್ಠರಂಥ ಶ್ರೇಷ್ಠ ಗುರುಗಳು ತಾನಾಗಿ ದೊರಕಿದ್ದರು; ಪ್ರಕೃತ ಹೊರಟ ಮಹತ್ಕಾರ್ಯಕ್ಕೆ ಅವರ ಪೂರ್ಣಾನುಗ್ರಹ~ಪೂರ್ಣಾನುಜ್ಞೆಗಳು ದೊರಕಿದ್ದವು!

ಮೂರೂ ಕೂಡಿದರೆ ಅಲ್ಲಿ ಮಹಾಫಲ: ಪ್ರೇರಣೆಯೊಂದು, ಸೂಚನೆಯೊಂದು, ಅನುಜ್ಞೆಯೊಂದು;ಇವು ಮೂರರ ಮೇಲನವು ಆ ಮಂಗಲ ಮುಹೂರ್ತದಲ್ಲಿ ಏರ್ಪಟ್ಟಿತ್ತು. ಋಷ್ಯಶೃಂಗರನ್ನು ಕರೆತರಲು ದಶರಥನು ಹೊರಟು ನಿಂತ ಘಳಿಗೆಯು ಮೂರೂ ಸೇರಿದ ಅಮೃತಘಳಿಗೆಯಾಗಿತ್ತು.

 • ಮೊದಲನೆಯದು, ಸಂತಾನಕ್ಕಾಗಿ ಅಶ್ವಮೇಧ ಮಹಾಯಾಗವ ಗೈಯಲು ದಶರಥನ ಅಂತರಂಗದಲ್ಲಿ ಉಂಟಾದ ಮಹಾಪ್ರೇರಣೆ.
 • ಎರಡನೆಯದು, ಸಂತಾನಕ್ಕಾಗಿ ಅಶ್ವಮೇಧ ಯಾಗ ನಡೆಯಬೇಕಾದುದು ಸರಿ; ಆದರದು ಋಷ್ಯಶೃಂಗರ ಮೂಲಕವೇ ನಡೆಯಬೇಕೆಂದು ದಶರಥನಿಗೆ ಸುಮಂತ್ರನ ಮೂಲಕವಾಗಿ ಸನತ್ಕುಮಾರರ ಸೂಚನೆ.
 • ಮೂರನೆಯದು, ಆಶ್ವಮೇಧವನ್ನು ನೆರವೇರಿಸಲು ಮತ್ತು ಅದಕ್ಕಾಗಿ ಋಷ್ಯಶೃಂಗರನ್ನು ಕರೆತರಲು ಲಭಿಸಿದ ಮಹಾಗುರುವಿನ ಅನುಜ್ಞೆ.

ತನ್ನ ಪ್ರೇರಣೆಗೆ ಅಗೋಚರ ದೈವದ ಅನುಮೋದನೆ ಮತ್ತು ಪ್ರತ್ಯಕ್ಷದೈವದ ಅನುಜ್ಞೆಗಳು ಲಭಿಸಿದ ಧನ್ಯತೆಯಲ್ಲಿ ರಥವೇರಿದನು ದಶರಥ. ಅಯೋಧ್ಯೆಯ ಭಾಗ್ಯವು ದೂರದ ಅಂಗರಾಜ್ಯಕ್ಕೆ ಬಂದು ಕುಳಿತಿತ್ತು! ಆ ಕಡೆಗೆ ದಶರಥನ ಮಹಾರಥವು ಧಾವಿಸಿತ್ತು! ಬಹುಕಾಲದಿಂದ ಜಡವಾಗಿದ್ದ ದಶರಥನ ಮನೋರಥವು ಮರುಜೀವ ತಾಳಿ, ದಶರಥನ ಮಹಾರಥವನ್ನೂ ಹಿಂದಿಕ್ಕಿ ಮುಂದೆ ಮುಂದೆ ಧಾವಿಸಿತ್ತು!

ದಾರಿಯಲ್ಲಿ ಧಾರಿಣಿ*ಯು ಧೂಳಾಗಿ ಮೇಲೆದ್ದು, ದೇವರ ತನ್ನೆಡೆ ಕರೆತರಹೊರಟ ದಶರಥನಿಗೆ ಧನ್ಯವಾದಗಳ ಪೇಳಿದಳು! ರಥವು ಮುಂದೆ ಮುಂದೆ ಸಾಗುತ್ತಿದ್ದಂತೆ ಪ್ರಯಾಣದ ಪರಿಣಾಮವಾಗಿ ಹಿಮ್ಮುಖವಾಗಿ ಸಾಗುವಂತೆ ತೋರುತ್ತಿದ್ದ ತರು-ಲತೆಗಳು, ಸರಿತ್-ಸರೋವರ*ಗಳು, ಬೆಟ್ಟ-ಬಯಲುಗಳು- ದೇವರನ್ನು ಕರೆತರಲು ದಶರಥನು ಅಂಗರಾಜ್ಯಕ್ಕೆ ತೆರಳುತ್ತಿದ್ದಂತೆಯೇ ಅಪರೂಪದಲ್ಲಿ ಧರೆಗಿಳಿಯುತ್ತಲಿರುವ ದೇವಾಧಿದೇವನನ್ನು ಸ್ವಾಗತಿಸಲು ಮುಂದಾಗಿ ಅಯೋಧ್ಯೆಗೆ ಧಾವಿಸಿದವೋ ಎಂಬಂತೆ ತೋರಿದವು!

ಅಂತೂ ಅಂಗಜಪಿತ*ನಿಗೆ ಪಿತನಾಗುವ ಯೋಗವು ದಶರಥನನ್ನು ಅಂಗರಾಜ್ಯಕ್ಕೆ ಕರೆತಂದಿತು!

ದಶರಥನಿಗೆ ಅಂಗರಾಜ್ಯವೂ ಹೊಸತಲ್ಲ; ಅಂಗರಾಜನೂ ಅಪರಿಚಿತನಲ್ಲ; ಆದರೆ ಆ ದಿನ ಏನೋ ನಡುಕ; ಮತ್ತೇನೋ ತವಕ!
ರೋಮಪಾದನ ಪಾರ್ಶ್ವದಲ್ಲಿ, ಋಷ್ಯಶೃಂಗರ ರೂಪದಲ್ಲಿ ವಿರಾಜಮಾನವಾಗಿರಬಹುದಾದ ಭುವನಭಾಗ್ಯದ ದ್ವಾರವನ್ನು ಕಾಣುವ ತವಕ; ‘ಋಷ್ಯಶೃಂಗರು ಯಾಗಕ್ಕಾಗಿ ಅಯೋಧ್ಯೆಗೆ ಬರಲಿ’ ಎಂದು ಯಾಚಿಸುವಾಗ, ಅಂಗರಾಜನು ಏನೆಂದುಕೊಳ್ಳುವನೋ, ಮುನಿವರೇಣ್ಯರು ಏನೆಂದುಬಿಡುವರೋ ಎಂದು ಸಣ್ಣ ನಡುಕ!

ಬೇಡಿದ್ದನ್ನು ನೀಡಿ ಗೊತ್ತೇ ಹೊರತು ಅಂದಿನವರೆಗೆ ಬೇಡಿ ಗೊತ್ತಿರಲಿಲ್ಲ ವರ್ತಮಾನಕಾಲದ ಇನಕುಲದ ಚಕ್ರವರ್ತಿಗೆ!

ಅಂದು ಭಗವಂತನ ಬರವಿನ ವರವನ್ನು ಬೇಡಿ ಸಾಕ್ಷಾತ್ ಧರಣೀ ದೇವಿಯು ಸೃಷ್ಟಿಯ ಸಕಲ ದಿವ್ಯಾತ್ಮರೊಡನೆ ವೈಕುಂಠವೆಂಬ ವಾಸುದೇವನ ವಾಸಸ್ಥಾನವನ್ನು *ಪ್ರವೇಶಿಸಿದ್ದಳು; ಅದು ತಿಳಿಯದಿದ್ದರೂ, ಬರುವವನು ‘ಅವನು’ ಎಂಬುದರ ಅರಿವಿರದಿದ್ದರೂ, ಇಂದು ಅದನ್ನೇ ಯಾಚಿಸಲು ಧರಣೀಶ ದಶರಥನು ಅಂಗರಾಜ ರೋಮಪಾದನ ಸಭಾಸ್ಥಾನವನ್ನು ಪ್ರವೇಶಿಸಿದನು..

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

 • ಉರ್ವರೆಯ ನಾರಿ = ಭೂಮಿಯೆಂಬ ನಾರಿ
 • ಧಾರಿಣಿ = ಭೂಮಿ
 • ಸರಿತ್ತು = ನದಿ
 • ಅಂಗಜಪಿತ = ಶ್ರೀಹರಿ (ಅಂಗಜ = ಮನ್ಮಥ; ಅಂಗಜಪಿತ = ಮನ್ಮಥನಿಗೆ ನಾಥನಾದ ವಿಷ್ಣು)

*ತಿಳಿವು-ಸುಳಿವು:

 • ದೊರೆಯದ ಗುರು = ಸುಲಭದಲ್ಲಿ ದೊರೆಯದ ಎಂಬರ್ಥ. ಭಗವಾನ್ ವಸಿಷ್ಠರು ದೊರೆಯ ಗುರುಗಳಾಗಿ ದೊರೆತುದು ಸುಲಭಲಭ್ಯ ವಿಷಯವಲ್ಲ ಎಂಬರ್ಥದಲ್ಲಿ.
 • ಧರಣೀದೇವಿಯು ವೈಕುಂಠದಲ್ಲಿ ವಾಸುದೇವನಲ್ಲಿ ಪ್ರಾರ್ಥಿಸಿದುದು = ಭೂಲೋಕದಲ್ಲಿ ರಾವಣಾಸುರನ ಪಾಪಕರ್ಮಗಳು, ಉಪಟಳಗಳು ಹೆಚ್ಚಿ, ಭೂಮಿಯು ಭಾರವಾಗಲಾರಂಭಿಸುತ್ತದೆ. ಆಗ ಭೂಮಾತೆಯು ದೇವ-ಯಕ್ಷ-ಕಿನ್ನರ-ಗಂಧರ್ವರೊಡಗೂಡಿ ಪರಿಹಾರಕ್ಕಾಗಿ ವೈಕುಂಠಕ್ಕೆ ಬಂದು ಶ್ರೀಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾಳೆ. ಆಗ ಮಹಾವಿಷ್ಣುವು ರಾಮಾವತಾರದ ಅಭಯವಾಕ್ಯವನ್ನು ಅನುಗ್ರಹಿಸುತ್ತಾನೆ.
  ಹಲವು ಕಾಲದ ಬಳಿಕ, ಅದೇ  ಧರಣೀದೇವಿಯಂತೆ, ಅದೇ ಅವತಾರಕ್ಕಾಗಿ ದಶರಥನು ಬೇಡುತ್ತಿದ್ದಾನೆ – ಎಂಬ ಸಾಮ್ಯತೆಯನ್ನು ರಾಮರಶ್ಮಿಯ ಈ ಉಪಮೆಯಲ್ಲಿ ತೋರಿಸಲಾಗಿದೆ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ58ನೇ ರಶ್ಮಿ.

 

57 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments