ಆ ಊರಿನಲ್ಲಿ ಹಾಲು ಹರಿಯದ ಮನೆಯಿಲ್ಲ; ಮೃಷ್ಟಾನ್ನವುಣ್ಣದ ಬಾಯಿಲ್ಲ; ಸುಗಂಧ ಪೂಸದ ತನುವಿಲ್ಲ; ತೃಪ್ತವಲ್ಲದ ಮನವಿಲ್ಲ; ಧರ್ಮವಿಲ್ಲದ ಜನರಿಲ್ಲ; ಶೀಲವಿಲ್ಲದ ಬದುಕಿಲ್ಲ!
ಆ ಊರಿನಲ್ಲಿ ಕುಂಡಲವಿಲ್ಲದ ಕಿವಿಯಿಲ್ಲ; ಕಂಕಣವಿಲ್ಲದ ಕರವಿಲ್ಲ; ಹಾರವಿಲ್ಲದ ಕೊರಳಿಲ್ಲ; ಮುಕುಟವಿಲ್ಲದ ಶಿರವಿಲ್ಲ!

ಕಾಮಿಯಿಲ್ಲದ ಊರು; ಕ್ರೂರಿಯಿಲ್ಲದ ಊರು; ಕಪಟಿ-ಕಾಪುರುಷ*ರಿಲ್ಲದ ಊರು; ಹುಡುಕಿದರೊಬ್ಬ ಕುಡುಕ ಸಿಗದೂರು!
ಅಲ್ಪರಿಲ್ಲದ, ಅತೃಪ್ತರಿಲ್ಲದ, ಅಜ್ಞಾನಿಗಳಿಲ್ಲದ, ಅಧರ್ಮಿಗಳಿಲ್ಲದ, ಅನ್ಯಾಯಿಗಳಿಲ್ಲದ ಅತಿವಿಚಿತ್ರದ ಊರು!
ದೀನ-ದರಿದ್ರರಿಲ್ಲ; ದುರ್ಬಲ-ದುರ್ಜನರಿಲ್ಲ; ಸುಳ್ಳರಿಲ್ಲ; ಕಳ್ಳರಿಲ್ಲ; ಕೊಲೆಗಡುಕರಿಲ್ಲ; ತಲೆಹಿಡುಕರಿಲ್ಲವೇ ಇಲ್ಲವಲ್ಲಿ!

“ಎಲ್ಲೆಲ್ಲಿಯೂ ಶುಭ! ಎಲ್ಲೆಲ್ಲಿಯೂ ಸುಖ!” ಈ ಪರಿಯ ರಾಜ್ಯವೊಂದು ಎಲ್ಲಿಯಾದರೂ, ಎಂದಾದರೂ ಇರಬಹುದೇ?
ಚಿತ್ರದಲ್ಲಿಯೋ, ಚಲನಚಿತ್ರದಲ್ಲಿಯೋ ಇರಬಹುದೆನ್ನುವಿರೇ? ಇತಿಹಾಸವೆಂದೇ ಕರೆಯಲ್ಪಡುವ ಶ್ರೀರಾಮಾಯಣ ಈ ಪರಿಯ ಊರೊಂದನ್ನು ಉಲ್ಲೇಖಿಸಿಯೇ ಆರಂಭಗೊಳ್ಳುತ್ತದೆ. ಅದೇ ಅಯೋಧ್ಯೆ! ಕೋಸಲದ ರಾಜಧಾನಿ! ರಾಮಾವಿರ್ಭಾವ ಭೂಮಿ! ಭಕ್ತಭಾವಭೂಮಿ!

ಶುದ್ಧಾಂತರಂಗರ ಪರಿಶುದ್ಧ ಸ್ವಪ್ನದಲ್ಲಿ ಮಾತ್ರವೇ ಕಾಣಬಹುದಾದ ರಾಜ್ಯವೊಂದನ್ನು, ಮತ್ತು ಅದಕ್ಕೆ ತಕ್ಕ ರಾಜಧಾನಿಯೊಂದನ್ನು ಹಾಗೆ ಕಟ್ಟಿದ್ದನು, ಮತ್ತು ಹಾಗೆಯೇ ಇಟ್ಟಿದ್ದನು ದೊರೆ ದಶರಥ. ಮಹಾದೈವಾನುಗ್ರಹ ಮತ್ತು ಮಹತ್ತಮವಾದ ಪುರುಷ ಪ್ರಯತ್ನವಲ್ಲದಿದ್ದರೆ ಕಾರ್ಯವಿದು ಕನಸು ಮಾತ್ರ! ಗುರುಗಳು ಮತ್ತು ಸಚಿವರ ರೂಪದಲ್ಲಿ ಇವೆರಡೂ ದಶರಥನಿಗೊಲಿದಿತ್ತು. ದೈವಾನುಗ್ರಹದ ದ್ವಾರವಾಗಿ ಗುರು ವಸಿಷ್ಠರಿದ್ದರು. ವಾಮದೇವರೇ ಮೊದಲಾದ ಮತ್ತೇಳು ಮಹರ್ಷಿಗಳಿದ್ದರು. ಪುರುಷ ಪ್ರಯತ್ನದ ಪ್ರಧಾನ ಸಾಧನವಾಗಿದ್ದವರೇ ಅವನ ಅಷ್ಟ ಸಚಿವರು‌.

ಚರಣಗಳೆರಡು ದೇಹದ ಭಾರವನ್ನು ಹೊತ್ತಂತೆ ದೇಶದ ಭಾರವನ್ನು ದೊರೆಯ ಎಂಟು ಗುರುಗಳು ಮತ್ತೆಂಟು ಮಂತ್ರಿಗಳು ಹೊತ್ತಿದ್ದರು. ವಸಿಷ್ಠರನ್ನು ಹೋಲುವ ಗುರುವೆಲ್ಲಿ? ಸುಮಂತ್ರನಿಗೆ ಸಮನಾದ ಮಂತ್ರಿಯೆಲ್ಲಿ? ವಸಿಷ್ಠರು ಮೂರ್ತಿಮತ್ತಾದ ಧರ್ಮಶಾಸ್ತ್ರವಾದರೆ ಸುಮಂತ್ರನು ಮೈವೆತ್ತ ಅರ್ಥಶಾಸ್ತ್ರ!

ಧ್ಯಾನದಿಂದಲೇ ಇಹಲೋಕ-ಪರಲೋಕಗಳ ಸಕಲವನ್ನೂ ತಿಳಿದು, ದೊರೆಗೆ, ದೇಶಕ್ಕೆ ಯಾವ ಅಶುಭವೂ ತಗುಲದಂತೆ ಗುರುಗಳು ನೋಡಿಕೊಂಡರೆ, ಚಾರರ ಮೂಲಕ ಸ್ವದೇಶ-ಪರದೇಶಗಳ ಸಮಸ್ತ ವಿದ್ಯಮಾನಗಳನ್ನೂ ತಿಳಿದು, ದೇಶಕ್ಕೂ, ದೊರೆಗೂ ಯಾವ ಆಪತ್ತೂ ಬಾರದಂತೆ ಮಂತ್ರಿಗಳು ನೋಡಿಕೊಳ್ಳುತ್ತಿದ್ದರು. ಅರಸನ ಆತ್ಮಗತವಾದ ಶುಭಾಶುಭಗಳನ್ನು ಅಂತರ್ದೃಷ್ಟಿಯಿಂದ ಕಂಡು, ಕೆಲವೊಮ್ಮೆ ಕರ್ಮತಂತ್ರದಿಂದ, ಕೆಲವೊಮ್ಮೆ ತಮ್ಮ ಅನುಗ್ರಹಮಾತ್ರದಿಂದ ಅಶುಭವಾಗದಂತೆ, ಶುಭವೇ ಆಗುವಂತೆ ನೋಡಿಕೊಳ್ಳುತ್ತಿತ್ತು ಗುರುವೃಂದ. ದೊರೆಯು ಏನನ್ನೂ ಹೇಳದೆಯೇ ಅವನ ಹೃದಯದಲ್ಲಿರುವುದನ್ನು ತಾವಾಗಿಯೇ ತಿಳಿದು, ಕಾರ್ಯಾನ್ವಯಗೊಳಿಸುತ್ತಿದ್ದರು ಮಂತ್ರಿಗಳು.
ಮುಂದಿನ ದಾರಿ ತೋರಲು ಪರಮರ್ಷಿಗಳಾದ ಗುರುಗಳಿದ್ದಾಗ, ಗುರು ತೋರಿದ ದಾರಿಯಲ್ಲಿ ರಾಜ್ಯರಥವನ್ನು ಮುನ್ನಡೆಸಲು ಮನೀಷಿಗಳಾದ ಮಂತ್ರಿಗಳಿದ್ದಾಗ ದೊರೆಗೇತರ ಚಿಂತೆ!?
ಆದರೂ ಚಿಂತೆಯೊಂದಿತ್ತು ದೊರೆಗೆ..

ಸುಖೀ ರಾಜ್ಯದ ಪರಮಸುಖಿಯಾದ ದೊರೆಯಾಗಿ ನಂದನವನದಲ್ಲಿ ಇಂದ್ರನಂತೆ ವಿಹರಿಸಬೇಕಿತ್ತು ದಶರಥ! ಆದರೆ ಇದು ಭೂಮಿ, ಸ್ವರ್ಗವಲ್ಲ! ಇಲ್ಲಿ ಕೇವಲ ಸುಖವಿರಲು ಸಾಧ್ಯವಿಲ್ಲ. ಅನಂತ ಸುಖವು ಸ್ವರ್ಗದಲ್ಲಿಯೂ ಇರಲು ಸಾಧ್ಯವಿಲ್ಲ. ದುಃಖಸ್ಪರ್ಶವೇ ಇಲ್ಲದ ಮುಕ್ತಿಯಲ್ಲಿ ಮಾತ್ರವೇ ಸುಖವಿರಲು ಸಾಧ್ಯ! ಭೂಮಿಯಲ್ಲಿ ‘ಥೋಡಾ ಸುಖ ತೋ ಥೋಡಾ ದುಃಖ ಹೈ!’.

ನಿಜ, ಸಮಸ್ತ ರಾಜ್ಯದಲ್ಲಿ ಸುಖವಿತ್ತು; ಆದರೆ ದಶರಥನ ಮನದಲ್ಲಿ ಬಿಡದೆ ಕಾಡುವ ಕೊರಗಿತ್ತು. ಕೊರಗದೇ ಅವನಾದರೂ ಏನು ಮಾಡಿಯಾನು? ಬಂಗಾರದ ರಾಜ್ಯವಾದರೇನು, ಭವಿಷ್ಯ ಬೇಡವೇ!? ಅಂತಃಪುರದಲ್ಲಿ ಎಷ್ಟು ರಾಣಿಯರಿದ್ದರೇನು, ಅಂತಕಾಲದಲ್ಲಿ ಗಂಗೋದಕವೀಯಲು ಒಂದಾದರೂ ಸಂತತಿ ಬೇಡವೇ? ರಾಣೀರತ್ನ ಕೌಸಲ್ಯೆಯು ದಶರಥನ ಬದುಕನ್ನು ಬೆಳಗಿದ್ದಳು. ಅವಳಲ್ಲಿ ನಾಡನ್ನು ಬೆಳಗುವ ಪುತ್ರರತ್ನದ ಪ್ರತೀಕ್ಷೆಯಿತ್ತು. ಅತಿ ದೀರ್ಘಸಮಯದಿಂದ ಆ ಪ್ರತೀಕ್ಷೆಯು ಪ್ರತೀಕ್ಷೆಯಾಗಿಯೇ ಉಳಿದಿತ್ತು. ದಶರಥನ ಬದುಕೆಲ್ಲವೂ ಪುತ್ರಪ್ರತೀಕ್ಷೆಯೆಂದರೆ ಅದು ಅತಿಶಯೋಕ್ತಿಯಲ್ಲ, ನಿಜೋಕ್ತಿ! ಇದೀಗ ಪುತ್ರಪ್ರತೀಕ್ಷೆಯು ಫಲಿಸದೇ, ಬದುಕೇ ಮುಗಿಯುವ ಸಮಯವು ಸನಿಹವಾಗುತ್ತಲಿತ್ತು.

ಯಾವುದಕ್ಕೂ ಸಮಯ ಬರಬೇಕಲ್ಲವೇ? ಅದೊಂದು ದಿನ ಇದ್ದಕ್ಕಿದ್ದಂತೆ ದಶರಥನ ಹೃದಯದಲ್ಲೊಂದು ಸ್ಫುರಣೆ! ಪುತ್ರಪ್ರಾಪ್ತಿಯ ಪ್ರೇರಣೆ! ಕಾರ್ಗತ್ತಲಿನಲ್ಲಿ ಅನಂತ ದೂರ ನಡೆದ ಬಳಿಕ, ದೂರದಲ್ಲೆಲ್ಲೋ ಬೆಳಕಿನ ಸೆಲೆಯ ಸುಳಿವು!
ಅಶ್ವಮೇಧದ ಯಜ್ಞಾಗ್ನಿಯ ಪ್ರಭೆಯೇ ತನ್ನ ಬಾಳ ಬೆಳಕಿನ ಶುಭಾಗಮನದ ದ್ವಾರವೆಂಬ ಹೊಳಹು!

~*~*~

(ಸಶೇಷ..)

ಕ್ಲಿಷ್ಟ-ಸ್ಪಷ್ಟ:

  • ಕಾಪುರುಷ = ಹೇಡಿ
  • ಮನೀಷಿ = ಜ್ಞಾನಿ
  • ದಶರಥನ ಅಷ್ಟ ಗುರುಗಳು: ವಸಿಷ್ಠ, ವಾಮದೇವ, ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ, ಕಾತ್ಯಾಯನ
  • ದಶರಥನ ಅಷ್ಟ ಮಂತ್ರಿಗಳು: ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ, ಸುಮಂತ್ರ
Facebook Comments Box