|| ಹರೇರಾಮ ||

ಬೇರೆಯಾಗುವುದು ಸುಲಭ…
ಬೆರೆಯುವುದು ಸುಲಭವಲ್ಲ..!

ವಿಭಕ್ತಿ ಸುಲಭ..
ಭಕ್ತಿ ಸುಲಭವಲ್ಲ..

ಒಡೆಯಲು ಕ್ಷಣ…
ಕೂಡಿಸಲು..?

ವಿಶ್ವದ ಯಾವೆರಡು ವಸ್ತುಗಳು ಸೇರಬೇಕೆಂದರೂ ಅದು ಸುಲಭದ ಮಾತಲ್ಲ..
ಅದರಲ್ಲಿಯೂ ಹಿರಿದರಲ್ಲಿ ಹಿರಿದಾದ ವಸ್ತುಗಳೆರಡು ಸೇರಬೇಕೆಂದರೆ..?
ಕೂಡಿಸುವ ಕೊಂಡಿಯೊಂದು ನಡುವೆ ಬೇಕೇ ಬೇಕು..
ಜೀವನು ದೇವನೊಡನೆ ಸೇರಬೇಕೆಂದರೆ ‘ಗುರು‘ವೆಂಬ ಕೊಂಡಿ ನಡುವೆ ಬೇಕೇ ಬೇಕಲ್ಲವೇ..?

ದೇವನೇ ಧರೆಗಿಳಿದು ಬಂದು ಜೀವಗಳೊಡನೆ ಬೆರೆಯಬೇಕೆಂದುಕೊಂಡರೆ..?
ವಿಶ್ವಚೇತನವೇ ವಿಶ್ವದಲ್ಲಿಳಿದು ಬಂದು ವಿಶ್ವದಲ್ಲಿಯೇ ಶ್ರೇಷ್ಠವಾದ ‘ಚೇತನದೀಪಮಾಲಿಕೆ‘ಯೊಡನೆ ತನ್ನನ್ನು ತಾನು ಬೆಸೆದುಕೊಳ್ಳಬೇಕೆಂದುಕೊಂಡರೆ..
ಬೆಸೆಯುವ ಕೊಂಡಿ ಅದೆಂಥದಾಗಿರಬೇಕು..?

ಬ್ರಹ್ಮಾಂಡಮಂಡಲದಲ್ಲಿ ನಾರಾಯಣನಿಗಿಂತ ದೊಡ್ಡವರುಂಟೇ..?
ಭೂಮಂಡಲದಲ್ಲಿ ಸೂರ್ಯವಂಶಕ್ಕಿಂತ ದೊಡ್ಡ ವಂಶವುಂಟೇ..?
ಶ್ರೀಮನ್ನಾರಾಯಣನು ಶ್ರೀರಾಮನಾಗಿ ಬಂದು ಸೂರ್ಯವಂಶದೊಡನೆ ಸೇರಬಯಸಿದಾಗ ನಡುವೆ ಕೊಂಡಿಯಾದವನೇ ‘ರಾಜಾ ದಶರಥ

ದೇವಸ್ಥಾನದಲ್ಲಿ ದೇವರು ಹೇಗೆ ಮುಖ್ಯವೋ, ದ್ವಾರವೂ ಹಾಗೆಯೇ..
ದೇವರದೆಷ್ಟು ಭವ್ಯವಾಗಿದ್ದರೂ ದ್ವಾರವು ಸುಷ್ಟುವಾಗಿಲ್ಲದಿದ್ದರೆ ಆ ದೇವರು ಭಕ್ತರಿಗೆ ಪ್ರಕಟವಾಗುವುದಾದರೂ ಹೇಗೆ..?
ದೇವರು ತೋರಬೇಕೆಂದರೆ ತೋರಿಸುವವರೂ ಬೇಕಲ್ಲವೆ..?

ದ್ವಾರವೆಂದರೆ ಅದುವೇ..!

ದೇವದೇವನು ಧರೆಗೆ ಬರಬೇಕೆಂದುಕೊಂಡಾಗ ದ್ವಾರವಾದವನು ದಶರಥ..!
ಅವತರಿಸಬಯಸಿದ ಪರವಸ್ತು ‘ಎಲ್ಲಿ ಇಳಿಯಲಿ ?’ ಎಂಬಂತೆ ಧರೆಯೆಲ್ಲವನ್ನೂ ಒಮ್ಮೆ ನಿರುಕಿಸಿತು..
ಕೋಟಿ ಕೋಟಿ ಜೀವಗಳ ಮೇಲೆ ಹಾದುಹೋದ ಅದರ ದಿವ್ಯದೃಷ್ಟಿ ‘ಇವನೇ ತಕ್ಕವನು’ ಎಂಬಂತೆ ನಿಂತಿದ್ದು ದಶರಥನ ಮೇಲೆ…
ದಶರಥನೆಂದರೆ ದೇವರ ಆಯ್ಕೆ..!!

ಪೂರ್ಣದ ದ್ವಾರವಾಗಲೂ ಬೇಕು ಅರ್ಹತೆ…!

ದಶರಥನ ಅರ್ಹತೆ ಅರ್ಥವಾಗಬೇಕೆಂದರೆ ಆತನ ಹೆಸರಿನೊಳಗಿಳಿಯಬೇಕು..
ದಶವೆಂಬ ಸಂಖ್ಯೆಯು ಪೂರ್ಣತೆಯ ಪ್ರತೀಕ..
ಸತತವೂ ಪೂರ್ಣತೆಯೆಡೆಗೋಡುವ ‘ಮನೋರಥ‘ವಾರದೋ ಅವನೇ ‘ದಶರಥ‘..

ಪೂರ್ಣತೆಗಾಗಿ ತುಡಿದವನವನು, ದುಡಿದವನವನು..
ಎಲ್ಲೆಲ್ಲೂ ಪೂರ್ಣತೆಯನ್ನೇ ಕಾಣಬಯಸಿದವನವನು..
ಪೂರ್ಣತೆ – ತನ್ನಲ್ಲಿ…
ತನ್ನ ಕುಟುಂಬದಲ್ಲಿ…
ಮಂತ್ರಿಗಳಲ್ಲಿ …
ಸೈನಿಕರಲ್ಲಿ…
ಪೂರ್ಣತೆ – ತನ್ನ ಪ್ರಜೆಗಳಲ್ಲಿ…
ಅಯೋಧ್ಯೆಯಲ್ಲಿ…
ಕೋಸಲದಲ್ಲಿ…
ಎಲ್ಲೆಲ್ಲಿಯೂ ಪೂರ್ಣತೆಯ ಹುಡುಕಾಟ – ಅದಕ್ಕಾಗಿಯೇ ಬಾಳಾಟ..!!

ಪೂರ್ಣವು ಉದಯಿಸುವುದು ಪೂರ್ಣತೆಗಾಗಿ ತುಡಿಯುವವನಲ್ಲಿಯೇ ಅಲ್ಲವೇ…?

|| ಹರೇರಾಮ ||

ಟಿಪ್ಪಣಿ:
<ದ್ವಾರವು ಸುಷ್ಟುವಾಗಿಲ್ಲದಿದ್ದರೆ>
ಸುಷ್ಟು = ಸಾಧು, ಸಮೀಚೀನೆ

Facebook Comments Box