“ನ ಕಶ್ಚಿನ್ನಾಪರಾಧ್ಯತಿ” “ಈ ಜಗತ್ತಿನಲ್ಲಿ ತಪ್ಪು ಮಾಡದವರಿಲ್ಲ!” – ಸೀತೆ.

ಮನುಷ್ಯನಾದವನು ತಪ್ಪು ಮಾಡುವುದು ಸಾಮಾನ್ಯ; ಬಳಿಕ ಪಶ್ಚಾತ್ತಾಪ ಪಡುವುದು ವಿಶೇಷ. ಪಶ್ಚಾತ್ತಾಪವು ಪ್ರಾಯಶ್ಚಿತ್ತದ ದ್ವಾರವನ್ನು ತೆರೆಯುತ್ತದೆ. ಪ್ರಾಯಶ್ಚಿತ್ತವು ತಪ್ಪಿನಿಂದುಂಟಾದ ಕಲ್ಮಷದ ಕಲೆಯನ್ನು ಕಳೆದು, ಜೀವವನ್ನು ಶುದ್ಧಗೊಳಿಸುತ್ತದೆ. ಪಶ್ಚಾತ್ತಾಪವಿಲ್ಲದವನಿಗೆ ಪ್ರಾಯಶ್ಚಿತ್ತವೂ ಇಲ್ಲ! ಪಶ್ಚಾತ್ತಾಪವು ಯಥಾಯೋಗ್ಯವಾಗಿ ಬಂದರೆ ಬೇರೆ ಪ್ರಾಯಶ್ಚಿತ್ತವೇ ಬೇಕಾಗದು!

ಅಂಗರಾಜ ರೋಮಪಾದನಿಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಕೇಳಿದ್ದನ್ನು ಕೊಡುವೆನೆಂದು ಹೇಳಿ, ಬಳಿಕ ಕೊಡದಿದ್ದರೆ ತನ್ನ ನಾಲಿಗೆಯನ್ನು ತಾನೇ ಕೊಯ್ದುಕೊಂಡಂತಲ್ಲವೇ? ತನ್ನ ವಚನಭಂಗದಿಂದ ವ್ಯಥೆಗೊಂಡು ರಾಜ್ಯವನ್ನೇ ಪರಿತ್ಯಜಿಸಿ, ಹೊರಟುಹೋದ ವಿಪ್ರರೆಡೆಗೆ ತಾನೇ ಹೊರಟನು ದೊರೆ‌‌. ನಡೆದುಹೋದ ಚ್ಯುತಿಗೆ ಕ್ಷಮಾಯಾಚನೆಗೈವ, ವಿಪ್ರರನ್ನು ಮರಳಿ ನಾಡಿಗೆ ಕರೆತರುವ ಶುಭಮನ ಅವನದು.

ಗರ್ವಪರ್ವತವನ್ನಿಳಿದು ತಮ್ಮೆಡೆಗೆ ಬರುವ ಅರಸನನ್ನು ಕಂಡು ಅಚ್ಚರಿಗೊಂಡರು ವಿಪ್ರೋತ್ತಮರು‌! ತಾನು ಗೈದ ತಪ್ಪನ್ನೇ ಸಮರ್ಥಿಸಿಕೊಂಡು, ಒಂದು ತಪ್ಪಿನಿಂದ ಮತ್ತೊಂದು ತಪ್ಪಿಗೆ, ಅಲ್ಲಿಂದ ಮತ್ತಷ್ಟು – ಮತ್ತೂ ದೊಡ್ಡ ತಪ್ಪುಗಳಿಗೆ ಜಾರುವುದು ಸಾಮಾನ್ಯರಿಗೆ ಸಹಜ. ದೊರೆಗಳಿಗಂತೂ ಅದು ಸ್ವಭಾವ! ಅಧಿಕಾರದ ಪಕ್ಕದಲ್ಲಿಯೇ ಅಲ್ಲವೇ ಅಹಂಕಾರದ ತಾವು? ಹಾಗಿರುವಾಗ “ಮಾಡಿದಾ ಪಾಪಗಳ ಹೊರೆ ಹೊತ್ತ ಶಿರವಿಂದು ಬಾಗುತಿದೆ ನಿನ್ನಡಿಗೆ ಕ್ಷಮೆ ಬೇಡಲೆಂದು” ಎಂಬಂತೆ, ಪಶ್ಚಾತ್ತಾಪದ ಪುರುಷಾಕಾರವಾಗಿ, ಬಾಡಿದ ಮುಖ, ಬಾಗಿದ ತಲೆಯಲ್ಲಿ, ಬಳಿ ಸಾರುವ ಅರಸನನ್ನು ಕಂಡು ಕರಗಿದರು, ಕರುಣೆಗೊಂಡರು ಜ್ಞಾನಿಜನರು‌.

ನೀರಿಗೆ ತಂಪು ಸಹಜ. ಅದು ಬಿಸಿಯಾದರೆ ಅದಕ್ಕೆ ಅಗ್ನಿಸಂಸರ್ಗವು ಕಾರಣ; ಹಾಗೆ ಬಂದ ಬಿಸಿಯೂ ತಾತ್ಕಾಲಿಕವೇ; ಸಮಯ ಸರಿದಂತೆ ನೀರು ತಾನಾಗಿ ತಂಪಾಗುವುದು. ಅಂತೆಯೇ ಸಂತನಿಗೆ ಸಹಜ ಕರುಣೆ. ಕ್ರೋಧವು ಆಗಂತುಕ; ತಾತ್ಕಾಲಿಕ. ಅದರಲ್ಲಿಯೂ ದೇಶಕ್ಕೆ ದುರ್ಭಿಕ್ಷ ಬರಲೆಂದು – ಅದೂ ತನ್ನಿಂದಾಗಿ – ಯಾವ ಸಂತ ತಾನೇ ಬಯಸುತ್ತಾನೆ? ಬಯಸಿದರೆ ಹೇಗೆ ತಾನೇ ಅವನು ಸಂತನೆನಿಸುತ್ತಾನೆ?
ಪಶ್ಚಾತ್ತಾಪತಪ್ತನಾದ ದೊರೆಯನ್ನು ಪೂರ್ಣಕಾರುಣ್ಯದಿಂದ ಕ್ಷಮಿಸಿ, ಅವನ ಕೋರಿಕೆಯಂತೆ ನಾಡಿಗೆ ಮರಳಿತು ವಿಪ್ರವರ್ಗ. ಸುಭಿಕ್ಷವೇ ನಾಡಿಗೆ ಮರಳಿತೆಂಬಂತೆ ಸಂಭ್ರಮಿಸಿತು ಪ್ರಜಾವರ್ಗ!

ಮರೆಯಾದ ಮಳೆಯು ಮರಳಲು ಸಾಧಿತವಾಗಬೇಕಿದ್ದ ಎರಡು ಮಹತ್ಕಾರ್ಯಗಳಲ್ಲಿ ಒಂದು ನೆರವೇರಿತ್ತು; ಊರಿನ ವಿಪ್ರರು ಹಳತು ಮರೆತು, ಸುಪ್ರಸನ್ನ-ಮಾನಸರಾಗಿ ಊರಿಗೆ ಮರಳಿದ್ದರು.ಇನ್ನಾಗಬೇಕಿದ್ದುದು ಊರಿಗೆ ಋಷಿತನಯ ಋಷ್ಯಶೃಂಗನ ಪಾದಸ್ಪರ್ಶ. ವಿಭಾಂಡಕರ ಕೋಪದ ಕೋಟೆಯೊಳಗಿರುವ ಆ ಮುಗ್ಧಮುನಿಯನ್ನು ಹೊರ ಕರೆತರುವುದು ಸಣ್ಣ ಸಾಹಸವೇನಲ್ಲವಲ್ಲ!

ಉಪಾಯಾನ್ವೇಷಣೆಗಾಗಿ ಸಚಿವರ, ಪುರೋಹಿತರ ಸಭೆ ಕರೆದನು ಅರಸ. “ಹೇಗಾದರೂ ಋಷ್ಯಶೃಂಗನನ್ನು ಕರೆತನ್ನಿ” ಎಂಬ ರಾಜಾಜ್ಞೆಗೆ ಸಭೆಯ ನೀರವದ, ನಿರಾಶೆಯ ಮೌನವೇ ಉತ್ತರವಾಯಿತು! ಋಷ್ಯಶೃಂಗನನ್ನು ಕದ್ದು, ಕರೆತರುವಾಗ, ಎಲ್ಲಿಯಾದರೂ ತಂದೆ ವಿಭಾಂಡಕರಿಗೆ ಅದು ತಿಳಿದು ಹೋದರೆ ಆಗಬಹುದಾದ ಅನಾಹುತಗಳನ್ನು ಊಹಿಸಿ, ಕುಳಿತಲ್ಲಿಯೇ ಅವರೆಲ್ಲರೂ ಬೆವರತೊಡಗಿದ್ದರು. ಆದರೆ ಅನ್ಯ ಮಾರ್ಗವೆಲ್ಲಿ? ಋಷ್ಯಶೃಂಗ ಬಾರದೇ ಮಳೆ ಬಾರದು; ಮಳೆ ಬಾರದೇ ಬರ ನೀಗದು!

ಅಳೆದು-ಸುರಿದು, ಕಡೆದು-ಹೊಯ್ದು, ಕಡೆಗೆ ದೊರೆಗೆ ಅವರಲ್ಲರೂ ಸೇರಿ ನೀಡಿದ ಸಲಹೆ ‘ಈ ಕಾರ್ಯಕ್ಕೆ ವೇಶ್ಯೆಯರನ್ನು ನಿಯೋಜಿಸೋಣ’ ಎಂಬುದು!

ಅದಕ್ಕೊಂದು ಕಾರಣವಿದ್ದಿತು; ವಿಭಾಂಡಕರು ತಮ್ಮ ಮಗನನ್ನು ಹೊರಜಗತ್ತಿನ ಗಂಧ-ಗಾಳಿಯೂ ಸುಳಿಯದಂತೆ ಬೆಳೆಸಿದ್ದರು. ತಾನಿರುವ ಕಾಡಿನ ಹೊರತಾಗಿ, ಬೇರಾವ ಕಾಡನ್ನಾಗಲೀ, ನಾಡನ್ನಾಗಲೀ ಋಷ್ಯಶೃಂಗನು ನೋಡಿರಲೇ ಇಲ್ಲ! ತನ್ನ ತಂದೆಯನ್ನುಳಿದು ಬೇರಾವುದೇ ಮನುಷ್ಯರ ಸಂಪರ್ಕವೂ ಆತನಿಗಾಗಿರಲೇ ಇಲ್ಲ! ‘ಹೆಣ್ಣು’ ಎಂಬ ಜಾತಿಯೊಂದು ಜಗತ್ತಿನಲ್ಲಿದೆ ಎಂಬುದೇ ಅವನಿಗೆ ತಿಳಿಯದು! ಕಾಡಿನಲ್ಲಿ ಸಹಜವಾಗಿ ಸಿಗುವ ಹಣ್ಣು-ಹಂಪಲುಗಳ ಹೊರತಾದ ಬೇರಾವ ತಿಂಡಿ-ತಿನಿಸುಗಳ ಕುರಿತು ಅವನಿಗೆ ಕೇಳಿಯೂ ಗೊತ್ತಿರಲಿಲ್ಲ! ನಾರುಡೆಯನ್ನುಳಿದು ಬೇರೆ ಬಟ್ಟೆಗಳಿವೆಯೆಂಬದನ್ನೇ ತಿಳಿಯನು ಅವನು!

ಆದುದರಿಂದ, ಹೊಸತನ್ನು ಕಂಡಾಗ ಸೆಳೆತಕ್ಕೊಳಗಾಗುವ ಜೀವಸಹಜವಾದ ಗುಣವನ್ನೇ ಬಳಸಿಕೊಂಡು, ಅವನರಿಯದ ಹೆಣ್ಜಾತಿ ಮತ್ತು ನಗರದ ಸುಖಸಾಧನಗಳನ್ನು ಮುಂದಿಟ್ಟು, ಮೈಮರೆಸಿ, ಅವನನ್ನು ಅಂಗರಾಜ್ಯಕ್ಕೆ ಕರೆತರಬಹುದೆಂಬುದು ಸಚಿವ-ಪುರೋಹಿತರ ಕಾರ್ಯಯೋಜನೆಯಾಗಿತ್ತು.

ಋಷ್ಯಶೃಂಗನನ್ನು ಅಂಗನೆಯರು ಅಂಗರಾಜ್ಯಕ್ಕೆ ಕರೆತರುವ ಯೋಜನೆಯು ಹೇಳುವುದಕ್ಕೆ-ಕೇಳುವುದಕ್ಕೇನೋ ಸೊಗಸಾಗಿಯೇ ಇತ್ತು. ಆದರೆ ಆ ಯೋಜನೆಯನ್ನು ಕೃತಿಗಿಳಿಸಬೇಕಾದವರು ಕಂಗಾಲಾಗಿಹೋಗಿದ್ದರು! ಪಾಪ, ವಾರಾಂಗನೆಯರದೂ ಜೀವವೇ ಅಲ್ಲವೇ!? ಜೀವದಾಸೆ-ಜೀವನದಾಸೆಗಳನ್ನು ಮೀರಲು ಅವರೇನು ಮುನಿಗಳೇ? ಲಜ್ಜೆಯಲ್ಲಲ್ಲ, ಭಯದಲ್ಲಿ ಬಾಗಿದವು ಅವರ ತಲೆಗಳು.

ಅದೂ ಭಯದ್ವಯ! ಇತ್ತ ರಾಜಭಯ; ಅತ್ತ ಋಷಿಭಯ! ರಾಜಾಜ್ಞೆಯನ್ನು ಪಾಲಿಸದಿದ್ದರೆ ರಾಜನು ಉಗ್ರವಾಗಿ ದಂಡಿಸಬಹುದು; ಋಷಿಪುತ್ರನನ್ನು ಮೋಹಗೊಳಿಸುವಾಗ ಸಿಕ್ಕಿಬಿದ್ದರೆ ಋಷಿಯು ಘೋರವಾಗಿ ಶಪಿಸಬಹುದು! ಹೀಗೆ ‘ಅತ್ತ ದರಿ; ಇತ್ತ ಪುಲಿ’ ಎಂಬಂತಾಗಿ, ಮುಂದುಗಾಣದೇ ಮಂಕುಬಡಿದು ನಿಂತ ವೇಶ್ಯಾವೃಂದದ ನಡುವಿನಿಂದ ಭರವಸೆಯ ಮೂರ್ತಿಯಾಗಿ, ದೃಢತೆಯೇ ಇಡುವ ಹೆಜ್ಜೆಯಾಗಿ, ನಡೆದು ಬಂದಳು ಓರ್ವ ವೃದ್ಧ ವೇಶ್ಯೆ!

ಆ ಕಾರ್ಯದಲ್ಲಿ ತನಗೆದುರಾಗಬಹುದಾದ ಅಪಾಯಗಳ ಪರಿವೆ ಆಕೆಗಿರಲಿಲ್ಲ; ಕಾರ್ಯವು ಕೈಗೂಡಿದರೆ ರಾಜ್ಯಕ್ಕೆ ಉಂಟಾಗಬಹುದಾದ ಶ್ರೇಯಸ್ಸು ಮಾತ್ರವೇ ಅವಳ ಕಣ್ಮುಂದಿತ್ತು!

ದೊರೆಯನ್ನು ಸಂಬೋಧಿಸಿ ಧೀರಭಾವದಲ್ಲಿ ಆಕೆ ನುಡಿದಳು:

“ಪ್ರಭುಗಳೇ! ರಾಜ್ಯಕ್ಕಾಗಿ ತಾವು ಹೇಳುವುದನ್ನು ಮಾಡಲು ನಾನು ಸಿದ್ಧಳಿದ್ದೇನೆ; ಆದರೆ‌ ಕಾರ್ಯಕ್ಕಾಗಿ ನಾನು ಕೇಳುವುದನ್ನು ತಾವು ನಡೆಸಿಕೊಡಬೇಕು”

ತನ್ನ ನಾಡನ್ನು ಮತ್ತೆ ಹಸಿರಾಗಿಸಲು, ಉಸಿರನ್ನು ಕೇಳಿದರೂ ನೀಡಲು ಅರಸ ಸಿದ್ಧನಿದ್ದ!

ಆದರೆ, ವಿಪ್ರೋತ್ತಮರಿಂದಾಗದ ಕಾರ್ಯವು ಆ ವೃದ್ಧವೇಶ್ಯೆಯಿಂದ ಆದೀತೇ!?

~*~*~

(ಸಶೇಷ)

ಕ್ಲಿಷ್ಟ-ಸ್ಪಷ್ಟ:

  • ವಾರಾಂಗನೆ = ವೇಶ್ಯೆ
  • ಪಶ್ಚಾತ್ತಾಪತಪ್ತ = ಪಶ್ಚಾತ್ತಾಪದಿಂದ ಬೆಂದ
  • ನಾರುಡೆ = ನಾರಿನಿಂದ ಮಾಡಿದ ಉಡುಗೆ
  • ಹೆಣ್ಜಾತಿ = ಹೆಣ್ಣು ಜಾತಿ / ಸ್ತ್ರೀಕುಲ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 47ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments