ಕಾರ್ಯವಾಗಬೇಕೆಂದರೆ ಕಾಲ ಕಾಯಬೇಕು; ಏಕೆಂದರೆ ಕಾಲ ಕೂಡಿ ಬರದೆ ಕಾರ್ಯವಾಗದು! ಅದೆಷ್ಟೋ ಬಾರಿ, ಏನೂ ಮಾಡದಿದ್ದರೂ ಕಾಲ ಬರುತ್ತಿದ್ದಂತೆ ತಾನೇ ಕಾರ್ಯವಾಗಿಬಿಡುತ್ತದೆ; ಕಾಲ ಕೂಡಿ ಬರದಿದ್ದರೆ ಎಷ್ಟೇ ಪ್ರಯತ್ನಿಸಿದರೂ, ಏನೇ ಮಾಡಿದರೂ ಕಾರ್ಯ ಕೈಗೂಡುವುದೇ ಇಲ್ಲ!
ಭೂಮಿಯನ್ನು ಹದಗೊಳಿಸಬಹುದು; ಬೀಜವನ್ನು ಬಿತ್ತಬಹುದು; ನೀರು~ಸಾರಗಳನ್ನು ನೀಡಬಹುದು; ಇದೆಲ್ಲವೂ ಪುರುಷಪ್ರಯತ್ನದಿಂದ ಸಾಧ್ಯ. ಆದರೆ ಬೀಜದೊಳಗೆ ಅಡಗಿರುವ ಮೊಳಕೆಯು ಕಾಲ ಬಂದಾಗ ತಾನೇ ಹೊರಬರಬೇಕು; ಅದನ್ನು ಹೊರಗೆ ಎಳೆದು ತರಲಾಗದು! ಅಲ್ಲಿ, ಕಾಲಕ್ಕೆ ಕಾಯದೆ ಬೇರೆ ದಾರಿಯೇ ಇಲ್ಲ! ಅದರ ಸಮಯವಾಗುತ್ತಿದ್ದಂತೆಯೇ ಮೊಳಕೆಯು ಬೇಡವೆಂದರೂ ಬೆಳೆದು, ಬೀಜವನ್ನೊಡೆದು ಹೊರಹೊಮ್ಮುತ್ತದೆ. ಅಲ್ಲಿಯವರೆಗೆ ನಮಗೆ ತಾಳ್ಮೆ ಬೇಕಷ್ಟೇ..

ದಶರಥನಲ್ಲಿ ಸಂತತಿಯ ಬಯಕೆಯೆಷ್ಟಿತ್ತೋ ಕಾಲ ಕಾಯುವ ತಾಳ್ಮೆಯೂ ಅಷ್ಟೇ ಇತ್ತು. ಆದುದರಿಂದಲೇ ಋಷ್ಯಶೃಂಗರು ಬಂದಿಳಿದ ಮರುದಿನವೇ ‘ಯಾವಾಗ ಯಜ್ಞ ಮಾಡಿಸುತ್ತೀರಿ?’ ಎಂದು ಅವನು ಕೇಳಲಿಲ್ಲ; ಹಾಗೆಂದು ಸಮಯ ಬಂದಾಗ ಕೇಳದೆಯೂ ಇರಲಿಲ್ಲ.
ಋಷ್ಯಶೃಂಗರು ಬಂದು ಬಹುದಿನಗಳ ಬಳಿಕ, ಋತುರಾಜ ವಸಂತನ ಉದಯವಾದಾಗ ಅವನ ಅಂತರಂಗದಲ್ಲಿ ಕಾಲಘಂಟೆಯು ‘ಈಗ! ಈಗ!’ ಎಂದು ಒಳಗೊಳಗೇ ಮೊಳಗತೊಡಗಿತು!

ಅದೊಂದು ಕರೆ; ಕಾಲದ ಕರೆ; ಶುಭಕಾಲದ ಕರೆ!
ಅದೊಂದು ಪ್ರೇರಣೆ; ಅದು ಅಶ್ವಮೇಧದ ಕುರಿತಾಗಿ ಎರಡನೆಯ ಬಾರಿ ದಶರಥನಿಗಾದ ಅಂತಃಪ್ರೇರಣೆ!
ಮೊದಲಾದದ್ದು ಕಾರ್ಯ~ಪ್ರೇರಣೆ: “ಸಂತಾನಕ್ಕಾಗಿ ಅಶ್ವಮೇಧವನ್ನು ಮಾಡು” ಎಂದು.
ಈಗಿನದು ಕಾಲ~ಪ್ರೇರಣೆ: “ಅಶ್ವಮೇಧಯಾಗವನ್ನು ಈಗ ಮಾಡು” ಎಂದು.

ಯಜನದ ಮನಸಾಗುತ್ತಿದ್ದಂತೆಯೇ ಋಷ್ಯಶೃಂಗರ ಬಳಿ ಸಾರಿದನು ದೊರೆ. ಸಹಜಪ್ರಸನ್ನರಾದ ಆ ದೇವತೇಜಸ್ವಿಯನ್ನು ಮಧುರ ವಚನಗಳಿಂದ, ಮಂಗಲೋಪಚಾರಗಳಿಂದ ಸತ್ಕರಿಸಿ- ಸುಪ್ರಸನ್ನಗೊಳಿಸಿ, ಬಳಿಕ “ಸೂರ್ಯಕುಲದ ನಾಳೆಗಳಿಗೆ ಹಿಡಿದ ಸಂತಾನಾಭಾವದ ಗ್ರಹಣವನ್ನು ಕಳೆಯಲು ಅಶ್ವಮೇಧ ಮಹಾಯಾಗವನ್ನು ನಡೆಸಿಕೊಡಬೇಕು” ಎಂದು ಸಂಪ್ರಾರ್ಥಿಸಿದನು.

ಋಷ್ಯಶೃಂಗರು ಬೇಡವೆನ್ನುವ ಪ್ರಶ್ನೆಯೇ ಇರಲಿಲ್ಲ; ಏಕೆಂದರೆ ಅವರೂ ಅದನ್ನೇ ಬಯಸಿದ್ದರು; ಅದಕ್ಕಾಗಿಯೇ ಕಾದಿದ್ದರು! ಅವರು ಅಯೋಧ್ಯೆಗೆ ಬಂದ ಉದ್ದೇಶವೇ ಅದು! ಹೆಚ್ಚೇನು, ಅವರು ಭೂಮಿಗೆ ಬಂದ ಉದ್ದೇಶವೇ ಅದು! ರಾಮಜನ್ಮಕ್ಕಾಗಿಯೇ ಅಲ್ಲವೇ ಋಷ್ಯಶೃಂಗ ಜನ್ಮ!
ಜನ್ಮಸಾಫಲ್ಯದ ಮುನ್ನೋಟವು ಅವರನ್ನು ಆಪಾದಮಸ್ತಕ* ರೋಮಾಂಚನಗೊಳಿಸಿತು; ಅವರ ಮುಖದಿಂದ ಅಪ್ರಯತ್ನವಾಗಿ ‘ತಥಾಸ್ತು’ ಎಂಬ ಶಬ್ದ ಹೊರಹೊಮ್ಮಿತು!

ಮುನಿಯ ಮನಸ್ಸಂತೋಷಕ್ಕೆ ವಿಶಾಲ ಅರ್ಥವಿದೆ:
ಕೇವಲ ಓರ್ವ ವ್ಯಕ್ತಿಯ, ಒಂದು ಕುಟುಂಬದ ಕಲ್ಯಾಣದ ಕಾರ್ಯವು ಅದಾಗಿರಲಿಲ್ಲ; ಊರೊಂದರ, ರಾಜ್ಯವೊಂದರ ಕ್ಷೇಮಕ್ಕೆ ಸೀಮಿತವಾದ ಯಾಗವು ಅದಾಗಿರಲಿಲ್ಲ; ಸರ್ವ ಜೀವಗಳ, ಸಮಸ್ತ ಪ್ರಪಂಚದ ಹಿತವು ತಾನು ನಡೆಸಲಿರುವ ಯಾಗದಲ್ಲಿ ನಿಹಿತವಾಗಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದರು ಅವರು! ಆದುದರಿಂದಲೇ ಅಂದು ದಶರಥನು “ಅಯೋಧ್ಯೆಗೆ ಬರಬೇಕು” ಎಂದಾಗಲೂ, ಇಂದು “ಅಶ್ವಮೇಧವನ್ನು ನಡೆಸಿಕೊಡಬೇಕು” ಎಂದಾಗಲೂ ಅವರ ಶ್ರೀಮುಖದಿಂದ ಹೊರಹೊಮ್ಮಿದ್ದು ಸಿದ್ಧ-ಸಮ್ಮತಿಯನ್ನು ಸೂಚಿಸುವ ಅವೇ ಎರಡು ಶಬ್ದಗಳ ಅದ್ವೈತ — “ತಥಾ+ಅಸ್ತು”

ಸತ್ರ~ಸಮ್ಮತಿಯು ತಂದ ಸಮಾಧಾನದಲ್ಲಿ ಸುಖಿಸುತ್ತಿದ್ದ ದಶರಥನ ಕರ್ಣಪಟಲದಲ್ಲಿ ಮುಂದಿನ ಕರ್ತವ್ಯವನ್ನು ಬೋಧಿಸುವ ಮುನಿವರನ ಮೂರು ಮಾತುಗಳು ಮೊಳಗಿದವು:

  • “ಸಿದ್ಧತೆಯಿಲ್ಲದೆ ಸಿದ್ಧಿಯಿಲ್ಲ; ಯಾಗದ ಸಿದ್ಧತೆಗಳಲ್ಲಿ ತಡವಿಲ್ಲದೆ ತೊಡಗು.”
  • “ಅಶ್ವಪರಿಕ್ರಮವಿಲ್ಲದೆ ಅಶ್ವಮೇಧವೆಲ್ಲಿ? ಅಶ್ವಮೇಧಕ್ಕೆ ಸಲ್ಲುವ ಸುಲಕ್ಷಣಗಳಿಂದ ಒಪ್ಪುವ* ಅಶ್ವರತ್ನವನ್ನು ಪೂಜಿಸಿ, ಕಳುಹು.”
  • “ಯಾಗದ ನೆಲೆಯಾಗಲು ನೆಲಕ್ಕೂ ಯೋಗ ಬೇಕು; ಸರಯೂ ನದಿಯ ಉತ್ತರ ತೀರದಲ್ಲಿ ಯಾಗಯೋಗ್ಯವಾದ ಭೂಮಿಯನ್ನು ನಿಶ್ಚಯಿಸು.”

ಯಾವ ಮಣ್ಣಿಗೆ ಯಾವ ಕಾಲದಲ್ಲಿ ಎಂಥ ಯೋಗವೋ, ರಾಮನೇ ಬಲ್ಲ!
ಸರಯೂನದಿಯ ಉತ್ತರ ತೀರಕ್ಕೆ ಮಹಾಯಾಗದ ಯೋಗ; ದಕ್ಷಿಣ ತೀರಕ್ಕೆ ಯೋಗವೋ ಯೋಗ! ಮಹಾಪುರುಷನೋರ್ವನನ್ನು ಮಡಿಲಿಗೇರಿಸಿಕೊಳ್ಳುವ ಮಹಾಯೋಗ ದಕ್ಷಿಣ ತೀರದ ಮಣ್ಣಿಗೆ.
ಭಾಗ್ಯವೋ ಭಾಗ್ಯ – ಅಯೋಧ್ಯಾವಾಸಿಗಳ ಕಣ್ಣಿಗೆ!

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

  • ಆಪಾದಮಸ್ತಕ = ಪಾದದಿಂದ ತಲೆಯವರೆಗೆ; ಸಂಪೂರ್ಣವಾಗಿ

ತಿಳಿವು~ಸುಳಿವು*:

ಗೋವಿಂದರಾಜೀಯ ವ್ಯಾಖ್ಯೆಯ ಭಟ್ಟಭಾಸ್ಕರರ ಪ್ರಕಾರ, ಅಶ್ವಮೇಧತುರಗವಿಮೋಚನೆಯ ಲಕ್ಷಣಗಳು:

  • ” ದ್ವಾದಶಾರ್ತ್ನೀ ರಶನಾ ಭವತಿ “ಮುಂಜದಹುಲ್ಲಿನಿಂದ ನಿರ್ಮಿತವಾದ ( ಹನ್ನೆರಡು ಮೊಳ ಅಳತೆ) ಅಶ್ವಬಂಧನರಜ್ಜು
  • ” ಸಮರ್ಥೈಃ ಚತುಃಶತಾ ರಕ್ಷಂತಿ ” ನಾಲ್ಕುನೂರು ಸಮರ್ಥರಾಜಪುತ್ರಾದಿಗಳಿಂದ ರಕ್ಷಿತವಾದ ಅಶ್ವ.
  • ” ಚತ್ವಾರ ಋತ್ವಿಜಃ ಸಮುಕ್ಷಂತಿ ” ನಾಲ್ವರು ಉಪಾಧ್ಯಾಯರಿಂದ ಸಹಿತವಾದ ಯಜ್ನಾಶ್ವದ ಮೋಚನ.
  • ” ಶತೇನ ರಾಜಪುತ್ರೈಃ ಸಹ ಅಧ್ವರ್ಯುಃ ಶತೇನಾರಾಜಭಿಖ್ಯೈಃ ಸಹ ಬ್ರಹ್ಮಾ ಶತೇನ ಸೂತಗ್ರಾಮಣೀಭಿಃ ಸಹ ಹೋತಾ ಶತೇನ ಕ್ಷತ್ರಸಂಗ್ರಹೀತೃಭಿಃ ಸಹೋದ್ಗಾತಾ ” ಶ್ರೌತಪ್ರಯೋಗ.

ನಾಲ್ವರು ಋತ್ವಿಜರು, ನಾಲ್ಕುನೂರು ಯೋಧರು, ತತ್ಸಹಚರರು.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ63ನೇ ರಶ್ಮಿ.

 

62 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments