ಅಮೃತ ಬರುವವರೆಗೆ ಮಥನ ಅನಿವಾರ್ಯ; ಮಥನದ ಕೊನೆಯಲ್ಲಿ ಅಮೃತ ಬರುವುದೂ ಅವಶ್ಯಂಭಾವೀ*!

ಮಕ್ಕಳಿಲ್ಲದ ತನಗೆ ಮಕ್ಕಳನ್ನು ಕರುಣಿಸಬಲ್ಲ ಕರುಣಾಳು ಕಣ್ಮುಂದೆಯೇ ಇದ್ದರೂ… ಆ ಕಾರ್ಯಕ್ಕೆ ಮುನಿಯನ್ನು ಒಡಂಬಡಿಸಬಲ್ಲ ರೋಮಪಾದನು ತನಗೆ ಪ್ರಾಣಮಿತ್ರನೇ ಆಗಿದ್ದರೂ… ಕೇಳಬೇಕಾದುದನ್ನು ಕೇಳಲಾರದೆ ತಳಮಳಿಸುತ್ತಿದ್ದ ದಶರಥನಿಗೆ ಕೊನೆಗೂ ಕೇಳಲೇಬೇಕಾದ ಹೊತ್ತು ಬಂದಿತ್ತು. ಅಂಗರಾಜನನ್ನು ಬೀಳ್ಕೊಟ್ಟು ಅಯೋಧ್ಯೆಗೆ ಹೊರಡಲೇಬೇಕಾದ ಸನ್ನಿವೇಶ ಕಣ್ಮುಂದಿತ್ತು.

ಕೊನೆಗೂ ಮಥನವು ಮುಗಿದು ಕಥನವು ಮೊದಲಾಯಿತು; ದೈವದ ಮೇಲೆ ಭಾರ ಹಾಕಿ(ನಾವು ಹಾಕದಿದ್ದರೂ ನಮ್ಮೆಲ್ಲರ ಭಾರವಿರುವುದು ಅಲ್ಲಿಯೇ!) ಅಯೋಧ್ಯಾಧಿಪತಿಯು ಅಂಗಾಧಿಪತಿಯನ್ನು ಕೇಳಿಯೇಬಿಟ್ಟ! “ತವ ಸುತೆಯು ತನ್ನೊಡೆಯನೊಡನೆ ನನ್ನ ನಾಡಿಗೆ ಬರಬಹುದೇ? ಅಲ್ಲಿ ಮಹತ್ಕಾರ್ಯವೊಂದು ಅವರನ್ನೇ ಕಾಯುತ್ತಿದೆ!” ಎಂದು.

ಬರಗಾಲದ ಬಳಿಕ ಮೂಡಿದ ಮೋಡವು ಹುಟ್ಟಿಸಿದ ನಿರೀಕ್ಷೆಯಲ್ಲಿ ಬೀಜವನ್ನು ಬಿತ್ತಿ, ಅದು ಮೊಳಕೆಯೊಡೆಯಲೆಂದು ಕಾತರದಲ್ಲಿ ಹಾತೊರೆಯುವ ಕೃಷೀವಲ*ನಂತೆ, ದಶರಥನು ರೋಮಪಾದನ ಪ್ರತಿವಚನಕ್ಕಾಗಿ ಕಾತರದಿಂದ ಕಾಯುತ್ತಿರಲು…..

ಪ್ರತಿವಚನದ ಬದಲು ರೋಮಪಾದನಿತ್ತ ವಚನವು ದಶರಥನ ಕಿವಿಗಳಿಗೆ ಅಮೃತವೆರೆಯಿತು! ಅಹುದು, ದಶರಥನ ಕೇಳಿಕೆಯು ಮುಗಿಯುವುದರೊಳಗಾಗಿ “ಮಗಳನ್ನೂ, ಅಳಿಯನನ್ನೂ ಅಯೋಧ್ಯೆಗೆ ಕಳುಹಿಸುವೆ”ನೆಂಬ ರೋಮಪಾದನ ಹೇಳಿಕೆಯು ಬಂದಾಗಿತ್ತು! ಮಾತ್ರವಲ್ಲ, ಜಗತ್ತಿಗೇ ಗುರುವಾಗಿದ್ದರೂ ತನಗೆ ಅಳಿಯನೇ ಆಗಿದ್ದ ಋಷ್ಯಶೃಂಗರಲ್ಲಿ ಅಯೋಧ್ಯೆಗೆ ತೆರಳುವ ಪ್ರಸ್ತಾಪವನ್ನು ಇರಿಸಿಯೂ ಆಗಿತ್ತು. ಮುನಿಯ ಮುಖದಿಂದ ಹೊರಹೊಮ್ಮಿದ “ತಥಾಸ್ತು!” ಎನ್ನುವ ಆಶೀರ್ವಚನವು ದಶರಥನೊಳಗಿನ ರಾಶಿ-ವಚನಗಳನ್ನು ಕಟ್ಟಿತ್ತು! ಆನಂದದ ಕಟ್ಟೆಯನ್ನೇ ಒಡೆದಿತ್ತು!
ತೀರದ ಸುಖದಲ್ಲಿ, ಅಥವಾ ಮನದಾಸೆಯು ತೀರಿದ ಸುಖದಲ್ಲಿ ನಿರ್ವಾಕ್ಯನಾಗಿ ನಿಂತನು ಚಕ್ರವರ್ತಿ!

“ತಡವಿರುವುದು ನೀ ಕೇಳುವಲ್ಲಿ; ನಾನು ಕೊಡುವಲ್ಲಿ ತಡವೇ ಇಲ್ಲ!” ಎಂದು ಕಿವಿಯಲ್ಲಿ ಹೇಳಿ, ಭಗವಂತ ನಕ್ಕಂತೆನಿಸಿತು ಭಾವೀ ಭಗವತ್ಪಿತ*ನಿಗೆ..

ಕೇಳಿದಾಕ್ಷಣವೇ ಸಿದ್ಧವಾಗಬಹುದಾದ ಕಾರ್ಯವೊಂದನ್ನು, ಯಾವ-ಯಾವುದೋ ಅಕಾರಣ-ಆತಂಕಗಳಿಗೆ ಒಳಗಾಗಿ ಕೇಳದೆಯೇ ಕಳೆದುಬಿಡುವುದು ನಮ್ಮ-ನಿಮ್ಮಲ್ಲಿ ಅನೇಕರ ಸ್ವಾನುಭವ. ನೆಮ್ಮದಿ ಬೇಕೆನ್ನುವವರು ನಿಶ್ಚಯದಲ್ಲಿ ನಿಲ್ಲಬೇಕು; ಸಂಶಯದಲ್ಲಿ ತೂಗಾಡುತ್ತಿರಕೂಡದು. ಈ ದಡದಲ್ಲಿರುವವನೂ ಮುಳುಗುವುದಿಲ್ಲ; ಆ ದಡದಲ್ಲಿರುವವನೂ ಮುಳುಗುವುದಿಲ್ಲ; ಮುಳುಗುವುದು ಎರಡೂ ದಡಗಳಲ್ಲಿರದವನು; ಅಥವಾ ಎರಡೂ ಕಡೆ ಓಲಾಡುವವನು! ಸರಿ ಯಾವುದೆಂಬುದನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವೊಂದು; ನಮ್ಮಾತ್ಮಕ್ಕೆ ಸರಿಯೆನಿಸಿದ್ದನ್ನು ಮಾಡಿಯೇಬಿಡುವ ಗಟ್ಟಿತನವಿನ್ನೊಂದು; ಉತ್ಥಾನಭವನ*ದ ಕದಗಳೆನಿಸಿದ ಇವೆರಡಿರುವಲ್ಲಿ ಮೂರನೆಯದಾದ ದೈವಾನುಗ್ರಹವು ತಾನಾಗಿ ಬರುವುದು ನಿಶ್ಚಯ!

ವಿಶ್ವದ ತಂದೆಗೆ ತಂದೆಯಾಗುವಲ್ಲಿ, ತನಗರಿವಿಲ್ಲದೆಯೇ ದಶರಥನು ಮತ್ತೊಂದು ದೊಡ್ಡ ಹೆಜ್ಜೆಯನ್ನಿರಿಸಿದ್ದನು! ತಂದೆಯರೆಲ್ಲರ ತಂದೆಯನ್ನು ತನ್ನ ಮಗನಾಗಿ ತಂದು ಕೊಡುವಲ್ಲಿ ಒದಗಿ ಬರಲು ಮಹಾಮುನಿಯು ಅಂಗೀಕಾರವನ್ನಿತ್ತಾಗಿತ್ತು. ಬಂದ ಕಾರ್ಯವು ನೆರವೇರಿದ ಸಂಭ್ರಮದಲ್ಲಿ, ಬರಲಿರುವ ಭಾಗ್ಯದ ಭದ್ರ ಭರವಸೆಯಲ್ಲಿ ಮರು ಪ್ರಯಾಣಕ್ಕೆ ಸಜ್ಜಾದನು ಕೋಸಲಭೂಪತಿ.

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

  • ಅವಶ್ಯಂಭಾವೀ = ಅವಶ್ಯವಾಗಿ ನಡೆಯಲಿರುವುದು.
  • ಕೃಷೀವಲ = ಕೃಷಿಕ
  • ಭಾವೀ ಭಗವತ್ಪಿತ = ಭವಿಷ್ಯದಲ್ಲಿ ಅವತಾರವೆತ್ತಲಿರುವ ಭಗವಂತನ – ರಾಮನ – ತಂದೆ
  • ಉತ್ಥಾನಭವನ = ಏಳಿಗೆಯ ಭವನ. ಉತ್ಥಾನಭವನದ ಕದ = ಏಳಿಗೆಯೆಂಬ ಮಾಳಿಗೆಯ ಬಾಗಿಲು.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ60ನೇ ರಶ್ಮಿ.

 

59 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments