ಓರ್ವ ಸೂರ್ಯನಿಂದ ಸಾಸಿರ ಸಾಸಿರ ಕಿರಣಗಳು ಹೊರಸೂಸುವಂತೆ ಪರಮದೇವನೋರ್ವನಿಂದ ಮೂವತ್ತಮೂರು ಕೋಟಿ ದೇವತೆಗಳು, ಸಂಖ್ಯೆಗೆ ಸಿಗದಷ್ಟು ಜೀವಗಳು ವಿಕಸಿತಗೊಂಡಿವೆ. ಲೋಕವೆಲ್ಲವೂ ಅವನ ಮನೆ; ಲೋಗರೆಲ್ಲರೂ ಅವನ ಮಕ್ಕಳು.

ಮಹಾಯಾಗವೆಂದರೆ ಅಲ್ಲಿ ದೇವರೆಲ್ಲರಿಗೂ, ಜೀವರೆಲ್ಲರಿಗೂ ಆಹ್ವಾನವಿದೆ. ಏಕೆಂದರೆ ಅವರು ತೃಪ್ತರಾದರೆ ಅವನು ತೃಪ್ತನಾಗುವನು; ಜೀವರುಗಳು, ದೇವರುಗಳು ತೃಪ್ತರಾದರೆ ದೇವರದೇವನು ತೃಪ್ತನಾಗುವನು. ದೇವರುಗಳಿಗೆ ಯಾಗಮಧ್ಯದಲ್ಲಿ ಹವಿರ್ಭಾಗಕ್ಕಾಗಿ ಆಹ್ವಾನ, ಜೀವರುಗಳಿಗೆ ಸತ್ಕಾರ ಸ್ವೀಕಾರಕ್ಕಾಗಿ ಯಾಗಪೂರ್ವದಲ್ಲಿಯೇ ಆಹ್ವಾನ. ಧರೆಯ ಸಕಲ *ಜ್ಞಾನಜೀವಗಳಿಗೆ, *ಕರ್ಮಜೀವಗಳಿಗೆ, *ಭಾವಜೀವಗಳಿಗೆ ಕ್ರತುವಿನ ಕರೆ ಕಳುಹಿದರು ಕುಲಗುರು ವಸಿಷ್ಠರು. *ಜ್ಞಾನ-ಶೌರ್ಯ-ವಿನಿಮಯ-ಸೇವೆಗಳೆಂಬ ಜೀವನದ ನಾಲ್ಕು ಮಹಾಮೌಲ್ಯಗಳಲ್ಲಿ ಹಂಚಿಹೋದ ನಾಲ್ಕೂ ವರ್ಣಗಳಿಗೆ ಮಹಾಧ್ವರದ ಪರಮಾದರದ ಕರೆ ಹೋಯಿತು. ಧರೆಯ ಜನರೆಲ್ಲರಿಗೂ ಕರೆ ಹೋಯಿತೆಂದ ಮೇಲೆ ಧರೆಯನಾಳುವ ದೊರೆಗಳಿಗೆ ಕರೆ ಹೋಗಬೇಡವೇ? ಗುರುಶ್ರೇಷ್ಠರಾದ ವಸಿಷ್ಠರು ಮಂತ್ರಿಶ್ರೇಷ್ಠನಾದ ಸುಮಂತ್ರನನ್ನು ಕರೆದು ಧರೆಯನಾಳುವ ನರಶ್ರೇಷ್ಠರೆಲ್ಲರನ್ನೂ ರಾಜಶ್ರೇಷ್ಠನಾದ ದಶರಥನು ಋಷಿಶ್ರೇಷ್ಠರಾದ ಋಷ್ಯಶೃಂಗರ ಮೂಲಕ ಶ್ರೇಷ್ಠನಗರಿ ಅಯೋಧ್ಯೆಯಲ್ಲಿ ನಡೆಸುವ ಅತ್ಯಂತ ಶ್ರೇಷ್ಠಯಾಗವೆನಿಸಿದ ಅಶ್ವಮೇಧಕ್ಕೆ ಆಮಂತ್ರಿಸಲು ಆಜ್ಞಾಪಿಸಿದರು.

“ಆದರದ ಆಮಂತ್ರಣವೇ ಎಲ್ಲರಿಗೂ ಸಲ್ಲಬೇಕಿರುವುದು. ಆದರೆ ಮುಂದೆ ಹೇಳುವ ನಾಲ್ವರು ನರೇಶರಿಗೆ ಪರಮಾದರದ ಆಮಂತ್ರಣವನ್ನೇ ಸಲ್ಲಿಸು. ಮಿಥಿಲಾಧಿಪತಿ, ಕೇಕಯಾಧಿಪತಿ, ಕಾಶೀ ನರೇಶ ಮತ್ತು ಅಂಗೇಶ್ವರರು ಅನ್ಯಾನ್ಯಕಾರಣಗಳಿಂದ ಪರಮಾದರ ಭಾಜನರು” ಎಂದರು ವಸಿಷ್ಠರು ಸುಮಂತ್ರನಿಗೆ. ಅಂಗರಾಜನೋ ಋಷ್ಯಶೃಂಗರನ್ನಿತ್ತು ಯಾಗಕ್ಕೇ ಮೂಲನಾದವನು. ಕಾಶೀಶ್ವರನು ವಿಶ್ವೇಶ್ವರನ ಪ್ರತಿನಿಧಿ. ಕೇಕಯಾಧೀಶನು ದೊರೆಯ ಪ್ರಿಯಪತ್ನಿಯ ಪಿತ, ಜನಕನನ್ನು ವಿಶೇಷವಾಗಿ ಆಮಂತ್ರಿಸಲು ಅವನ ಪರಮಜ್ಞಾನವು ಪರ್ಯಾಪ್ತವಾಗಿದ್ದಿತು. ಆದರೆ ವಸಿಷ್ಠರು ಒಂದು ಹೆಜ್ಜೆ ಮುಂದೆ ಹೋಗಿ ಗೂಢಭಾಷೆಯಲ್ಲಿ, ‘ಜನಕನು ಮೊದಲ ಸಂಬಂಧಿ ಎಂದು ನಿನಗೆ ಮೊದಲಾಗಿ ಹೇಳುವೆ’ ಎಂದಾಗ ಅವರೋರ್ವ *ಮಂತ್ರದ್ರಷ್ಟಾ ಮಾತ್ರವಲ್ಲ *ಪೂರ್ವದ್ರಷ್ಟಾ ಎಂಬುದು ಸುಸ್ಪಷ್ಟ. ಜನಕನ ಮಡಿಲಲ್ಲಿ ಮುಂದೆ ಜಾನಕಿಯು ಜನಿಸಿ, ಜಗಜ್ಜನಕನನ್ನು ವರಿಸಿ, ಜಗತ್ಕಲ್ಯಾಣವನ್ನು ಸಾಧಿಸುವಳೆಂಬ ಭವ್ಯಭವಿತವ್ಯವು ಸೂರ್ಯಕುಲಗುರುವಿಗೆ ಈಗಲೇ ದೃಗ್ಗೋಚರ!

ಯಾಗಕ್ಕೆ ಯಾರು ಯಾರನ್ನು ಕರೆಯಬೇಕೆಂಬುದನ್ನು ಸೂಚಿಸಿದ ಬಳಿಕ ವಸಿಷ್ಠರು ಸುಮಂತ್ರನ ಕಿವಿಯಲ್ಲಿ ಕಿವಿಮಾತೊಂದನ್ನು ಹೇಳಿದರು. “ನಾವು ಕರೆಯುವುದು ದೊಡ್ಡದಲ್ಲ; ಕರೆದವರು ಬರುವುದೂ ದೊಡ್ಡದಲ್ಲ; ಬಂದವರು ನಮ್ಮ ಸತ್ಕಾರದಿಂದ ಸಂತೃಪ್ತಿಗೊಂಡು, ಸಂತಸದ ರಸದಲ್ಲಿ ನೆನೆದ ಜೀವವುಳ್ಳವರಾಗಿ ಮರಳುವುದು ದೊಡ್ಡದು! ಯಾವುದೇ ವರ್ಣದ ಯಾವುದೇ ಮನುಷ್ಯನಿಗೂ ಅರಸ ನಡೆಸುವ ಆಶ್ವಮೇಧದಲ್ಲಿ ಅಗೌರವ ಅಸಂತೋಷಗಳಾಗಕೂಡದು. ‘ಬಂದವನು ಭಗವಂತ’ ಎಂಬ ಭಾವದಲ್ಲಿ ಸತ್ಕರಿಸಬೇಕೆಂದು ಸೇವೆಗೈಯುವರಿಗೆ ತಿಳಿಸಿ ಹೇಳು ಸುಮಂತ್ರ. ಸೇವೆ ದೊಡ್ಡದು, ಸೇವೆಗಿಂತಲೂ ದೊಡ್ಡದು ಸೇವೆಗೈಯುವವರ ಮನೋಭಾವ!”

ದಶರಥನ ಹೃದಯದ ಉದಯಾದ್ರಿಯಲಿ ಉದಯಿಸಿ, ವಸಿಷ್ಠರ ಅರಿವಿನ ಸುಮೇರುವೇರಿ ಹೊರಹೊಮ್ಮಿದ ಕರೆಯ ಕಿರಣವು ಜಗದ ಜನವೆಲ್ಲವನ್ನೂ ಅಯೋಧ್ಯೆಗೆ ಕರೆತಂದಿತು.
“ಅನಾಹೂತೋsಧ್ವರಂಗಚ್ಛೇತ್* – ಕ್ರತುವಾದರೆ ಅಲ್ಲಿ ಕರೆಯಿಲ್ಲದಿದ್ದರೂ ಭಾಗಿಯಾಗಬೇಕು.” ಎಂದಮೇಲೆ ಸ್ವತಃ ರಾಜಾಧಿರಾಜನೇ “ಯುಗದ ಯಾಗದಲ್ಲಿ ಭಾಗಿಯಾಗಿ, ಬನ್ನಿ” ಎನ್ನುವಾಗ ಬಾರದಿರಲುಂಟೇ!?

ಹೀಗೆ ಯುಗದ ಯೋಗಿಗಳ, ಜಗದ ಜನರೆಲ್ಲರ, ದಿವಿಯ ದೇವರುಗಳ ಸಾಕ್ಷಿತ್ವದಲ್ಲಿ ಶುಭಾರಂಭಗೊಂಡಿತು ಅಯೋಧ್ಯಾಧಿಪತಿಯ ಅಶ್ವಮೇಧ!

 

~*~*~

(ಸಶೇಷ)

ಕ್ಲಿಷ್ಟ ಸ್ಪಷ್ಟ:

 • ಕ್ರತು = ಯಾಗ
 • ಮಂತ್ರದ್ರಷ್ಟಾ = ಮಂತ್ರವನ್ನು ಸಾಕ್ಷಾತ್ಕರಿಸಿಕೊಂಡವರು; ಮಂತ್ರವನ್ನು ಕಂಡವರು
 • ಪೂರ್ವದ್ರಷ್ಟಾ = ಮುಂದೆ ನಡೆಯಲಿರುವ ಘಟನೆಗಳೆಲ್ಲವನ್ನೂ ಯೋಗದೃಷ್ಟಿಯ ಮುಖಾಂತರ ಸದ್ಯಃಕಾಲದಲ್ಲಿ ಕಾಣುವವರು.

ತಿಳಿವು~ಸುಳಿವು:

 • <ಜ್ಞಾನ-ಶೌರ್ಯ-ವಿನಿಮಯ-ಸೇವೆ> : ಪ್ರಾಚೀನವಾದ ಭಾರತೀಯ ಆರ್ಷಪರಂಪರೆಯಲ್ಲಿ ಬದುಕಿನ ಉತ್ಕರ್ಷ ನಾಲ್ಕುಮೌಲ್ಯಗಳಿಂದ.
  ಈ ಮೌಲ್ಯಗಳ ಸಾಕ್ಷಾತ್ಕಾರಕ್ಕಾಗಿ ವಿಹಿತವಾದದ್ದು ವರ್ಣವ್ಯವಸ್ಥೆಯ ಚತುಷ್ಟಯ.
  ಪಾರಂಪರಿಕವಾದ ಈ ಸಂಘಟನೆಯಲ್ಲಿ ಬ್ರಹ್ಮ-ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ನಾಲ್ಕುವರ್ಣದವರೂ
  ಕ್ರಮವಾಗಿ ಜ್ಞಾನ, ಶೌರ್ಯ, ವಿನಿಮಯ, ಸೇವೆಗಳಿಗೆ ಪ್ರತೀಕರೂಪರು.ಈ ಚತುಷ್ಟಯದಲ್ಲಿ ಯಾವುದನ್ನೂ ಬಿಡುವಂತಿಲ್ಲ, ಒಂದು ಮತ್ತೊಂದಕ್ಕೆ ಪೂರಕ.
 • ಜ್ಞಾನಜೀವ-ಕರ್ಮಜೀವ-ಭಾವಜೀವ :  ಜ್ಞಾನಮಾರ್ಗವನ್ನು ಅನುಸರಿಸುತ್ತಿರುವವನು ಜ್ಞಾನಜೀವಿ; ಕರ್ಮ ಮಾರ್ಗದಲ್ಲಿ ನಡೆಯುವವನು ಕರ್ಮಜೀವಿ; ಭಕ್ತಿಮಾರ್ಗವನ್ನು ನಡೆಯುವವನು ಭಾವಜೀವಿ. ಈ ಮೂರು ಮಾರ್ಗದಲ್ಲಿ ನಡೆವ ಪ್ರಜೆಗಳೆಲ್ಲರೂ ಯಾಗಕ್ಕೆ ಆಹ್ವಾನಿತರು.
 • <ಅನಾಹೂತೋಧ್ವರಂಗಚ್ಛೇತ್> – ಯಾಗಕ್ಕಾಗುವಾಗ ಕರೆಯದೆಯೂ ಹೋಗಬೇಕು.ದೇವತೆಗಳ ಪ್ರಕೃಷ್ಟಸಾನ್ನಿಧ್ಯವುಳ್ಳ ಯಾಗದಲ್ಲಿ ಆಹ್ವಾನದ ಔಪಚಾರಿಕತೆಯ ಅಗತ್ಯವಿಲ್ಲ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ66ನೇ ರಶ್ಮಿ.

 

65 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments