ಸಂಜೆಯಾಗುತ್ತಿದ್ದಂತೆಯೇ, ತನ್ನ ಕಂದನ ನೆನೆದುಕೊಂಡು ಗೋಷ್ಠದೆಡೆಗೆ ಮರಳಿ ಧಾವಿಸುವಳಲ್ಲವೇ ಪುಣ್ಯಕೋಟಿ? ವಿಭಾಂಡಕರೂ ಪುಣ್ಯಕೋಟಿಯೇ! ತಪಃಪರಿಪೂರ್ಣವಾದ ಬದುಕಿನಿಂದ ಕೋಟಿಪುಣ್ಯಗಳನ್ನು ಸಮಾರ್ಜಿಸಿದ ಘನಮಹಿಮರು ಅವರು. ಪುಣ್ಯಕೋಟಿಯಂತೆಯೇ ತನ್ನ ಏಕಮಾತ್ರ ಕಂದನೇ ಸರ್ವಸ್ವ ಅವರಿಗೆ. ಪಿಂಗಲನೇತ್ರನೆಂದು ವ್ಯಾಸರು ಬಣ್ಣಿಸಿದರು ವಿಭಾಂಡಕರನ್ನು‌. ಆ ಪಿಂಗಲನೇತ್ರಗಳಲ್ಲಿ ಮಗನ ಕುರಿತಾದ ಮಂಗಲಪ್ರೇಮ! ನಖಶಿಖಾಂತ ರೋಮರಾಜಿ(ರಾಶಿ)ಯಿಂದ ವ್ಯಾಪ್ತವಾದ, ಆದುದರಿಂದಲೇ ನೋಡುಗನನ್ನು ಒಮ್ಮೆಲೇ ದಿಗಿಲುಗೊಳಿಸುವ ರೂಪ ವಿಭಾಂಡಕರದು! ವ್ಯಾಸರ ಈ ವರ್ಣನೆಯು ಮತ್ತೆ ಪುಣ್ಯಕೋಟಿಯ ನೆನಪನ್ನೇ ತರುವ ತೆರನಾದುದು! ಪುಣ್ಯಕೋಟಿಯಂತೆಯೇ ಮೈಯೆಲ್ಲ ರೋಮ; ರೋಮರೋಮಗಳಲ್ಲಿ ತನ್ನ ವತ್ಸನ ಕುರಿತು ಮಿಡಿಯುವ ವಾತ್ಸಲ್ಯ! ರೋಮಗಳ ಮೈಯೊಳಗೊಂದು ಪ್ರೇಮಕೋಮಲ ಮನ!

‘ಮಗುವೂ ಅಹುದು – ಮುನಿಯೂ ಅಹುದು’ ‘ಮುಕ್ತನೂ ಅಹುದು – ಮುಗ್ಧನೂ ಅಹುದು’ ಎಂಬಂತಿರುವ, ಮುಗಿಲೆತ್ತರ ಬೆಳೆದು ನಿಂತರೂ ಇನ್ನೂ ಮಗುವಾಗಿಯೇ ಉಳಿದಿರುವ, ತನ್ನ ಕಂದ ಋಷ್ಯಶೃಂಗನನ್ನು ನೆನೆನೆನೆದು, ಪರಮಾರ್ದ್ರವಾದ ಅಂತಃಕರಣದಿಂದ ಭಾವಕ್ಷೀರಧಾರೆಯನ್ನಿಳಿಸುತ್ತ ಗೋಧೂಳಿಯ ಮುಹೂರ್ತದಲ್ಲಿ ಪರ್ಣಕುಟಿಯನ್ನು ಪ್ರವೇಶಿಸಿದರು ಮಹಾಮುನಿ ವಿಭಾಂಡಕರು.

ಒಂದು ದಿನದಂತೆ ಮತ್ತೊಂದು ದಿನವಿಲ್ಲ. ಬದುಕೆಂದರೆ ಅದು. ಆದರೆ ವಿಭಾಂಡಕರ ಕಣ್ಮುಂದಿನ ಆ ದಿನ ಆವರೆಗಿನ ಯಾವ ದಿನಗಳಂತೆಯೂ ಇರಲಿಲ್ಲ! ಯಾವ ಆಶ್ರಮದಲ್ಲಿಯಾದರೂ – ಅಲ್ಲಿ ಬೇರೆ ಯಾವುದಿಲ್ಲದಿದ್ದರೂ – ಇರಲೇಬೇಕಾದುದು ಶಾಂತಿ-ಸಮಾಧಾನಗಳು. ಅದಿಲ್ಲದಿದ್ದರೆ ಅದು ಆಶ್ರಮವಲ್ಲ, ಶ್ರಮ; ಕೇವಲ ಶ್ರಮ! ಆಶ್ರಮದ ನೆಲ-ಅನಿಲ-ಅನಲ-ಜಲಗಳಲ್ಲಿ ಸಹಜವಾಗಿಯೇ ಅನುಭವಕ್ಕೆ ಬರುತ್ತಿದ್ದ ಶಾಂತಿ-ಸಮಾಧಾನಗಳು ಇಂದೇಕೋ ಕಾಣದಾಗಿವೆ! ಪೂರ್ಣಭಾವವ ನುಂಗಿ ಮೆರೆದಿದೆ ಶೂನ್ಯಭಾವ! ಪ್ರಸಾದವಳಿದು ವಿಷಾದವುಳಿದಿದೆ ಆಶ್ರಮದ ಪರಿಸರದಲ್ಲಿ!

ಯೋಗಭೂಮಿಯಲ್ಲಿ ಗೋಚರಿಸಿವೆ ಭೋಗಾಂಕುರದ ಚಿಹ್ನೆಗಳು!

ಸಾಯಂಸಮಯದಲ್ಲಿ ಆಶ್ರಮದಲ್ಲಿ ಆಗಬೇಕಾದ – ಮಗನು ಮಾಡಬೇಕಾದ ಯಾವ ಕಾರ್ಯಗಳೂ ಆಗದಿರುವುದನ್ನು ಗಮನಿಸಿದರು ವಿಭಾಂಡಕರು. ಕಾನನದಿಂದ ಕುಶ-ಸಮಿಧೆಗಳ ತಂದಿರಿಸಿಲ್ಲ; ಸ್ರುಕ್-ಸ್ರುವಗಳ ತೊಳೆದಿರಿಸಿಲ್ಲ; ಹೋಮಧೇನುವ ಕಟ್ಟಿಲ್ಲ; ಸಮಯಕ್ಕೆ ಸರಿಯಾಗಿ ನೆರವೇರಲೇಬೇಕಿದ್ದ ಅಗ್ನಿಕಾರ್ಯವು ನೆರವೇರಿಲ್ಲ; ಎಲ್ಲಕ್ಕಿಂತ ಮಿಗಿಲಾಗಿ ಆಶ್ರಮವ ಹೊಕ್ಕೊಡನೆಯೇ ನಕ್ಕು, ಇದಿರುಗೊಳ್ಳುವ ಮುದ್ದುಮಗ ಎದುರಿಲ್ಲ!

ಯಾರಿಗಾಗಿ ಮನೆಗೆ ಬರಬೇಕೋ ಅವರೇ ಇಲ್ಲವಾದರೆ – ಅದರಲ್ಲಿಯೂ, ಇದ್ದೂ ಇಲ್ಲವಾದರೆ – ‘ಏಕಾದರೂ ಮನೆಗೆ ಬರಬೇಕು’ ಎನ್ನಿಸಿಬಿಡುವುದಲ್ಲವೇ? ಎಲ್ಲವೂ ಇದ್ದರೂ ಮನೆಯು ಶೂನ್ಯವೆನಿಸಿಬಿಡುವುದಲ್ಲವೇ?

ಹುಚ್ಚನಂತೆ ಹುಡುಕಿದರು ವಿಭಾಂಡಕರು ತನ್ನದೇ ನೆಲೆಯಲ್ಲಿ ತನ್ನದೇ ಮಗನನ್ನು!

ಮೂಲೆಯಲ್ಲಿ ಮರೆಯಾಗಿ, ಮೈವೆತ್ತ ದುಃಖವೇ ಆಗಿ, ಶೂನ್ಯದಲ್ಲಿ ದೃಷ್ಟಿ ನೆಟ್ಟು, ಕ್ಷಣಕ್ಕೊಮ್ಮೆ ನಿಟ್ಟುಸಿರಿಟ್ಟು, ತನ್ನ ಸಹಜತೆಯನ್ನೇ ಬಿಟ್ಟು, ದೃಶ್ಯದಾಚೆ ಚಿತ್ತವಿಟ್ಟು, ಇದ್ದೂ ಇಲ್ಲವಾಗಿ, ಸದ್ದಡಗಿ ಕುಳಿತ ಮಗನನ್ನು ಕೊನೆಗೂ ವಿಭಾಂಡಕರು ಕಂಡಾಗ, ಕಂಡ ಸಂತೋಷವು ಕ್ಷಣಮಾತ್ರವೂ ಉಳಿಯಲಿಲ್ಲ! ಅದೃಷ್ಟಪೂರ್ವವಾದ, ಮಗನ ಆ ಕಷ್ಟಸ್ಥಿತಿಯನ್ನು ಕಂಡು, ವಿಭಾಂಡಕರೆಂಬ ಬಂಡೆಯೂ ಕರಗಿತು!

ಮಗನ ನಗುವೇ ತಂದೆಯ ನಗವಲ್ಲವೇ!

ಬಳಿ ಕುಳಿತು, ಭುಜ ಬಳಸಿ, ಕಣ್ಣಲ್ಲಿ ಕಣ್ಣಿಟ್ಟು ಮಗನ ನುಡಿಸಿದರು ವಿಭಾಂಡಕರು:

“ಮಗನೇ, ಇಂದೇನಾಯಿತು ನಿನಗೆ!? ಕುಶ-ಸಮಿಧೆಗಳ ಹರಣವಿಲ್ಲ; ಸ್ರುಕ್-ಸ್ರುವಗಳ ನಿರ್ಣೇಜನವಿಲ್ಲ; ಧೇನು-ದೋಹನವಿಲ್ಲ; ಅಗ್ನಿಹೋತ್ರದ ಹವನವಿಲ್ಲ! ನಿತ್ಯಕಾರ್ಯಗಳು ನಿಂತುಹೋದವೇಕೆ?

ಮಗನೇ, ಇದೇನಾಯಿತು ನಿನಗೆ!? ಚಂದದ ಮೊಗ ಕಂದಿತೇಕೆ? ಎಂದಿನ ಆನಂದವು ಇಂದು ಮಂದವಾಯಿತೇಕೆ? ನಿಟ್ಟುಸಿರೇಕೆ? ನಭದೆಡೆ ನೋಟವೇಕೆ? ನಿರಾಸಕ್ತಿಯೇಕೆ?

ಏನಾಯಿತು ನಿನಗೆ? ನಿಜ ಹೇಳು, ನಾನಿಲ್ಲದ ಸಮಯದಲ್ಲಿ ಯಾರು ಬಂದರಿಲ್ಲಿ?”

ತಾನು ಮೊದಲೆಂದೂ ನೋಡದ ರೂಪವನ್ನು, ತನ್ನಲಿಲ್ಲದ ಭಾಷೆಯಲ್ಲಿ – ತನ್ನದೇ ಭಾಷೆಯಲ್ಲಿ ತಂದೆಗೆ ಬಣ್ಣಿಸತೊಡಗಿದನು ಋಷ್ಯಶೃಂಗ!

 

~*~*~

(ಸಶೇಷ)

ಕ್ಲಿಷ್ಟ-ಸ್ಪಷ್ಟ:

  • ಸಮಾರ್ಜಿಸಿದ = ಸಂಪಾದಿಸಿದ
  • ಪಿಂಗಲ = ಹಳದಿ ಮಿಶ್ರಿತ ಕೆಂಪು
  • ರೋಮರಾಜಿ = ರೋಮಗಳ ಸಾಲು
  • ಪರಮಾರ್ದ್ರ = ಅತಿಶಯವಾದ ಆರ್ದ್ರತೆ / ಪ್ರೀತಿ
  • ಅನಲ = ಬೆಂಕಿ
  • ಹರಣ = ತರುವುದು
  • ನಿರ್ಣೇಜನ = ತೊಳೆವುದು
  • ದೋಹನ = ಕರೆಯುವುದು
  • ಕುಶ-ಸಮಿಧೆ = ದರ್ಭೆ ಹಾಗೂ ಯಜ್ಞಕ್ಕೆ ಬಳಸುವ ವಿಶೇಷ ಮರಗಳ ಸಮಿತ್ತುಗಳು / ತುಂಡುಗಳು
  • ಸ್ರುಕ್-ಸ್ರುವ = ಯಜ್ಞಕ್ಕೆ ಆಹುತಿ ನೀಡಲು ಬಳಸುವ ಚಮಚದಂತಹ ಸಾಧನಗಳು

 

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ51ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box