ಒಮ್ಮೊಮ್ಮೆ ಆನೆಯಿಂದಾಗದುದು ಇರುವೆಯಿಂದಾದೀತು!

ಸೂಕ್ಷ್ಮವಾದ ರಂಧ್ರವೊಂದನ್ನು ಪ್ರವೇಶಿಸಲು ಆನೆಗೆ ಸಾಧ್ಯವಾಗದು; ಆದರೆ ಇರುವೆ ಆ ಕಾರ್ಯವನ್ನು ಲೀಲಾಜಾಲವಾಗಿ ಮಾಡೀತು! ಪ್ರಕೃತ ವಿಭಾಂಡಕರೆಂಬ ಸಿಂಹದ ಗುಹೆಯನ್ನು ಹೊಕ್ಕು, ಋಷ್ಯಶೃಂಗನೆಂಬ ಸಿಂಹದ ಮರಿಯನ್ನು ಅಂಗರಾಜ್ಯಕ್ಕೆ ಕರೆತರಬೇಕಿದೆ. ಗೆದ್ದು ತರಲು ಸಾಧ್ಯವೇ ಇಲ್ಲ; ಕದ್ದು ತರುವುದೊಂದೇ ದಾರಿ! ವಿಪ್ರೋತ್ತಮರು ‘ತಮ್ಮಿಂದಾಗದ ಆ ಕಾರ್ಯಕ್ಕೆ ವಾರಾಂಗನೆಯರೇ ದಾರಿ’ ಎಂದು ಹೇಳಿಯಾಗಿದೆ. ವಿಭಾಂಡಕರ ಶಾಪಕ್ಕೆ ಬೆದರಿ ಮತ್ತೆಲ್ಲರೂ ಹೆಜ್ಜೆ ಹಿಂದಿಕ್ಕುವಾಗ, ನಾಡಿನ ಕ್ಷೇಮಕ್ಕಾಗಿ ತನ್ನ ಜೀವ-ಜೀವನಗಳನ್ನು ಪಣಕ್ಕಿಟ್ಟು, ಆ ಕಾರ್ಯಕ್ಕೆ ಸಜ್ಜಾದ ವೃದ್ಧ ವೇಶ್ಯೆಗೆ ಕೇಳಿದ್ದನ್ನು ಕೊಡುವೆನೆಂದನು ಅಂಗಾಧಿಪತಿ. ಕಾರ್ಯಸಾಧನೆಗೆ ಬೇಕಾದುದನ್ನು ಮಾತ್ರವೇ ಕೇಳಿದಳಾಕೆ! ಏಕೆಂದರೆ ಆಕೆಯಲ್ಲಿ ಸ್ವಾರ್ಥವಿರಲಿಲ್ಲ; ಸ್ವಾರ್ಥವಿರುವವರು ಆ ಕಾರ್ಯಕ್ಕೆ ಮುಂದಾಗಲು ಸಾಧ್ಯವೂ ಇರಲಿಲ್ಲ!

ರೂಪ-ಯೌವನಸಂಪನ್ನರಾದ ಕೆಲ ವರನಾರಿಯರು ಮತ್ತು ಪರಿಣತರಾದ ಗುಪ್ತಚರರ ಬಳಗದೊಡನೆ ಋಷ್ಯಶೃಂಗನಿರುವ ಕಾನನವ ಸೇರಿದಳಾ ವಾರಾಂಗನೆ. ಕಣ್ಸೆಳೆಯುವ ವಸ್ತ್ರ-ಮಾಲ್ಯಗಳು, ನಾಲಿಗೆಯಲ್ಲಿ ನೀರೂರಿಸುವ ಭಕ್ಷ್ಯ-ಪೇಯಗಳ ಸಂಗ್ರಹವು ಜೊತೆಯಲ್ಲಿದ್ದಿತು.

ಯಾವುದೇ ಕಾರ್ಯವು ಕೈಗೂಡಬೇಕಾದರೆ, ಮೊದಲು ಅಂತರಂಗದಲ್ಲಿ ಒಡಮೂಡಬೇಕು; ಅದು ಯೋಜನೆ. ಬಳಿಕ ಬಹಿರಂಗದಲ್ಲಿ ಕೃತಿರೂಪಕ್ಕಿಳಿಯಬೇಕು; ಅದು ಕ್ರಿಯಾನ್ವಯ. ಯೋಜನೆಯಲ್ಲಿ ಸೋತವನು ಜೀವನದಲ್ಲಿ ಗೆಲ್ಲಲಾರ! ಆ ವೇಶ್ಯೆಗೆ ಸೋಲುವ ಅವಕಾಶವೇ ಇಲ್ಲ; ಏಕೆಂದರೆ ಅವಳ ಸೋಲು ರಾಜ್ಯದ ಸಾವು! ಆದುದರಿಂದ ಕಾರ್ಯಕ್ಕಿಳಿಯುವ ಮೊದಲು ವಿವರವಾದ ಕಾರ್ಯಯೋಜನೆಯಲ್ಲಿ ತೊಡಗಿದಳವಳು.

ಋಷ್ಯಶೃಂಗನಿರುವ ಕಾನನವನ್ನು, ಮತ್ತು ಅಲ್ಲಿಂದ ಅಂಗರಾಜ್ಯವನ್ನು ಸೇರುವ ಮಾರ್ಗವನ್ನು ಸುಸೂಕ್ಷ್ಮವಾಗಿ ಆಕೆ ಪರಿಶೀಲಿಸಿದಳು. ಆಶ್ರಮಕ್ಕೆ ಅನತಿದೂರದಲ್ಲಿಯೇ ನದಿಯೊಂದು ಹರಿಯುತ್ತಿತ್ತು. ನದಿಯನ್ನು ದಾಟಿ, ಅಂಗರಾಜ್ಯವನ್ನು ಸೇರಲು ಸಮೀಪದ ದಾರಿಯೂ ಇತ್ತು. ಋಷ್ಯಶೃಂಗನನ್ನು ಕರೆದೊಯ್ಯಲು ಅದೇ ಮಾರ್ಗವು ಸೂಕ್ತವೆಂದು ನಿಶ್ಚಯಿಸಿದಳು ವೃದ್ಧ ವೇಶ್ಯೆ.

ಆದರೆ ಎಂದೂ ನದಿಯನ್ನೇ ದಾಟಿರದ, ನಾವೆಯನ್ನೇ ನೋಡಿರದ ಋಷ್ಯಶೃಂಗನು ಆ ಸಮಯದಲ್ಲಿ ಗಾಬರಿಗೊಂಡರೆ ಕಾರ್ಯವು ಕೆಟ್ಟು ಹೋಗುವ ಸಂಭವವಿದ್ದಿತು. ಚತುರಮತಿಯಾದ ವಾರಾಂಗನೆಯು ಅದಕ್ಕೊಂದು ಪರಿಹಾರವನ್ನು ಕಂಡುಕೊಂಡಳು. ಋಷ್ಯಶೃಂಗನಿಗೆ ಆಶ್ರಮ ಗೊತ್ತು; ನಾವೆ ಗೊತ್ತಿಲ್ಲ. ನಾವೆಗೇ ಆಶ್ರಮದ ರೂಪ ನೀಡಿದರೆ? ನಿಜವಾಗಿ ನಾವೆ; ಹೊರನೋಟಕ್ಕೆ ಆಶ್ರಮ! ಎಂದೂ, ಯಾರೂ, ಎಲ್ಲೂ, ಕಂಡು ಕೇಳರಿಯದ ನಾವ್ಯಾಶ್ರಮ!! ಋಷ್ಯಶೃಂಗನಿಗೆ ಅದು ಹೊಸತೆನಿಸದು; ಹಿತವೆನಿಸೀತು. ಬೇರೆಯೆನಿಸದು; ತನ್ನ ಆಶ್ರಮದಲ್ಲಿರುವ ಅನುಭೂತಿಯೇ ಮುಂದುವರೆದೀತು!

ಸರಿ, ನಾವ್ಯಾಶ್ರಮದ ನಿರ್ಮಾಣವು ಆರಂಭವಾಯಿತು.

ನಾವೆಯೇ ನೆಲವಾಗಿ, ತದುಪರಿ – ಮಣ್ಣಿನ ಗೋಡೆಯ, ಮರದ ಮಾಡಿನ, ಎಲೆಗಳ ಮುಚ್ಚಿಗೆಯ ಆಶ್ರಮದ ಅಪರೂಪದ ತದ್ರೂಪವು ಯಾರನ್ನಾದರೂ ಭ್ರಮೆಗೊಳಿಸುವಂತೆ ವಿರಚಿತಗೊಂಡಿತು!

ಆಶ್ರಮವೆಂದ ಮೇಲೆ ಅದು ಕಾನನದ ನಡುವೆ ಇರಬೇಕಲ್ಲವೇ? ಋಷ್ಯಶೃಂಗನ ಆಶ್ರಮವೂ ಹಾಗೆಯೇ ಇದೆಯಲ್ಲವೇ? ಆದುದರಿಂದ, ನಾವೆಯೊಳಗಿನ ಕೃತ್ರಿಮ ಪರ್ಣಶಾಲೆಯನ್ನು ಸುತ್ತುವರಿದು ಬಗೆಬಗೆಯ ಕೃತ್ರಿಮ ವೃಕ್ಷಗಳು-ಲತೆಗಳು-ಗುಲ್ಮಗಳು ಕಲ್ಪಿತಗೊಂಡವು! ಅಲ್ಲಿ ಕಣ್ತಣಿಸುವ, ಮೂಗರಳಿಸುವ, ಬಣ್ಣಬಣ್ಣದ, ಬಗೆಬಗೆಯ ಪರಿಮಳದ ಹೂವುಗಳು; ಉದರವ ತಣಿಸುವ, ಜಿಹ್ವೆಯ ಕುಣಿಸುವ, ನಾನಾ ಸ್ವಾದುಫಲಗಳು ಗೋಚರಗೊಂಡವು! ಕಂಡವನ ಕಣ್ಣರಳಿ, “ಅತೀವ ರಮಣೀಯ!” “ನಯನಮನೋಹರ!” “ಅದ್ಭುತ!” ಎಂಬುದ್ಗಾರಗಳು ತಾನಾಗಿ ಹೊರಹೊಮ್ಮುವಂತೆ ಅಪರೂಪದ ಆ ನೀರನಿಲಯವು ನಿರ್ಮಿತಗೊಂಡಿತು!

ನಾಕಸದೃಶ-ನಾವ್ಯಾಶ್ರಮದ ಸಾಕ್ಷಾತ್ಕಾರವೆಂಬ ಚಮತ್ಕಾರದ ಹಿಂದೆ ಇರುವುದು ಯಾವುದೋ ಮಂತ್ರವಾಗಲೀ, ಮತ್ತಾವುದೋ ಸಿದ್ಧಿಯಾಗಲೀ ಆಗಿರಲಿಲ್ಲ. ಮೂರು ಅಳಲುಗಳು –
ಬರದಲ್ಲಿ ಉರಿದುಹೋಗುತ್ತಿರುವ ಅಂಗರಾಜ್ಯದ ಅಳಲು,
ಮಕ್ಕಳಂತೆ ಪಾಲಿಸಿದ ಪ್ರಜೆಗಳ ಸಮೂಹ-ಸಂಹಾರವನ್ನು ಕಂಡು ಕೊರಗುವ ರಾಜನ ಅಳಲು,
ತನ್ನ ರಾಜ್ಯದ ನಾಶ ಮತ್ತು ತನ್ನ ರಾಜನ ಶೋಕವನ್ನು ಕಂಡು ಸಹಿಸದಾದ ಆ ವೃದ್ಧ ವೇಶ್ಯೆಯ ಅಳಲು
– ಆ ಅದ್ಭುತ ಕಲಾಕೃತಿಯ ಕಾರಣದ್ರವ್ಯಗಳಾಗಿದ್ದವು!

ಜೀವಗಳ ನೋವುಗಳೇ ಅದೆಷ್ಟೋ ಅಮೂಲ್ಯ ಕಲಾಕೃತಿಗಳ ಮೂಲಸೆಲೆ; ಜೀವಲೋಕದ ಇತಿಹಾಸದಲ್ಲಿ ನೊಂದ ಜೀವಗಳ ಆನಂದದ ಹುಡುಕಾಟವು ನಿರ್ಮಿಸಿದಷ್ಟು ಕಲಾಕೃತಿಗಳನ್ನು ಬೇರಾವುದೂ ನಿರ್ಮಿಸಿಲ್ಲ!

ವಿಭಾಂಡಕರ ಆಶ್ರಮಕ್ಕೆ ಸಾಧ್ಯವಾದಷ್ಟೂ ಸನಿಹದಲ್ಲಿ ನಾವ್ಯಾಶ್ರಮವನ್ನು ನಿಬದ್ಧಗೊಳಿಸಿದಳು ವಾರಾಂಗನೆ. ಬಳಿಕ ಚತುರ ಗುಪ್ತಚರರನ್ನು ಬಳಿ ಕರೆದು, ಆಶ್ರಮದ ಸಮಸ್ತ ಆಗುಹೋಗುಗಳನ್ನು ಸವಿವರವಾಗಿ ತಿಳಿದು, ತನಗೆ ತಿಳುಹಲು ಸೂಚಿಸಿದಳು. ಋಷ್ಯಶೃಂಗಾಶ್ರಮದ ಮೇಲೆ ದೊರೆಯ ಬೇಹುಗಾರರ ಕಣ್ಗಾವಲು ಪ್ರಾರಂಭವಾಯಿತು. ಋಷ್ಯಶೃಂಗನು ತಂದೆಯಿಂದ ವಿರಹಿತನಾಗಿ, ಏಕಾಕಿಯಾಗಿ ಇರುವ ಸಮಯವನ್ನು ತಿಳಿಯುವುದು ಅದರ ಮುಖ್ಯ ಉದ್ದೇಶವಾಗಿದ್ದಿತು.

ಏತನ್ಮಧ್ಯೆ, ‘ಋಷಿಪುತ್ರನ ಬಳಿಗೆ ಹೋಗುವವರು ಯಾರು?’ ‘ಅಗ್ನಿಚಕ್ರದೊಳಹೊಕ್ಕು ಅಮೃತವನ್ನೆತ್ತಿಕೊಂಡು ಬರುವವರು ಯಾರು?’ ಎಂಬ ಪ್ರಶ್ನೆಯು ಹಾಗೆಯೇ ಉಳಿದಿತ್ತು. ತನ್ನ ಮಗಳನ್ನೇ ಆಯ್ಕೆ ಮಾಡಿದಳು ವೃದ್ಧ ವೇಶ್ಯೆ! ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವ ಲೋಕದ ಪರಿಪಾಠಕ್ಕೆ ಸಂಪೂರ್ಣ ಭಿನ್ನವಾಗಿದ್ದಿತು ಆಕೆಯ ಆ ನಿರ್ಣಯ! ರಾಜ್ಯದೊಳಿತಿಗಾಗಿ ತನ್ನ ಕರುಳ ಕುಡಿಯನ್ನೇ ಪಣಕ್ಕಿಟ್ಟ ಆ ನಾರಿಯು ಇದೀಗ ಊರಿನ ವೇಶ್ಯೆಯಾಗಿರಲಿಲ್ಲ; ರಾಜ್ಯದ ತಾಯಿಯೇ ಆಗಿದ್ದಳು!

ಇನ್ನೀಗ ಮಗಳನ್ನು ಮುಂದಿನ ಮಹತ್ಕಾರ್ಯಕ್ಕೆ ಸಜ್ಜುಗೊಳಿಸಬೇಕಾಗಿದೆ; ಸಹಜವಾಗಿಯೇ ಬುದ್ಧಿಸಮ್ಮತಳೆನಿಸಿದ್ದ ಮಗಳನ್ನು ಬಳಿ ಕೂರಿಸಿಕೊಂಡು, ಮತ್ತಷ್ಟು ಬುದ್ಧಿ ಹೇಳಿದಳಾ ತಾಯಿ! ಸನ್ನಿವೇಶದ ಗಾಂಭೀರ್ಯ, ಕಾರ್ಯಾಚರಣೆಯ ವಿಧಾನ, ಕಾರ್ಯವು ಕೈಗೂಡಿದರೆ ನಾಡಿಗೇ ಆಗಬಹುದಾದ ಮಹದುಪಕಾರ, ಹೆಜ್ಜೆ ತಪ್ಪಿದರೆ ಆಗಬಹುದಾದ ಮಹದನರ್ಥ, ಇವೆಲ್ಲವನ್ನೂ ಮಗಳ ಮನ ಮುಟ್ಟುವಂತೆ – ಅವಳ ಕಣ್ಣಿಗೆ ಕಟ್ಟುವಂತೆ ಶ್ರುತಪಡಿಸಿ, ಶಿರದ ಮೇಲೆ ಕರವಿಟ್ಟು, ಗೆದ್ದು ಬಾರೆಂದು ಹರಸಿದಳು ಜನನಿ. ಕಾರ್ಯದ ಕಣಕ್ಕಿಳಿದಾಗ ಎದುರಾಗಬಹುದಾದ ಸನ್ನಿವೇಶಗಳು, ಅವುಗಳನ್ನು ಇದಿರಿಸುವ-ನಿಭಾಯಿಸುವ ವಿಧಾನಗಳು, ಆಗ ನುಡಿಯಬೇಕಾದ ನುಡಿಗಳು, ನಡೆಯಬೇಕಾದ ನಡೆಗಳು, ಇವೆಲ್ಲವನ್ನೂ – ಮಗಳ ಮನದಲ್ಲಿ ಸಂದೇಹಕ್ಕೆ ಒಂದಿನಿತೂ ಎಡೆಯಿಲ್ಲದಂತೆ – ಮುದ್ರಿತಗೊಳಿಸಲು ಆಕೆ ಮರೆಯಲಿಲ್ಲ.

ಈ ನಡುವೆ, ವಿಭಾಂಡಕರು ಇರದ ಮತ್ತು ಕೂಡಲೇ ಮರಳಿ ಬರದ ಸಮಯವನ್ನು ಗುಪ್ತಚರರ ದ್ವಾರಾ ತಿಳಿದು, ಮಗಳನ್ನು ಕಾರ್ಯಕ್ಕೆ ಕಳುಹಲು ಬಳಿ ಕರೆದಳು ತಾಯಿ. ಋಷ್ಯಶೃಂಗನನ್ನು ಅಂಗರಾಜ್ಯಕ್ಕೆ ಕರೆದೊಯ್ಯಲು ಸರ್ವಸನ್ನದ್ಧಳಾಗಿ ನಿಂತಿದ್ದ ಆ ಬಾಲೆಯು ತನ್ನ ತಾಯ ಕಣ್ಣಲ್ಲಿ, ಮಹಾಸಾಗರವನ್ನೇ ತನ್ನೊಳಗೆ ತುಂಬಿಕೊಳ್ಳಲು ಸಿದ್ಧವಾದ ಪುಟ್ಟ ಕಲಶದಂತೆ ಕಂಡು ಬಂದಳು! ಅದುಮಿಡಲಾಗದ ಉತ್ಸಾಹ; ಹೇಳಲಾಗದ ಧನ್ಯತೆ; ಕ್ಷಣವೂ ಮೈಮರೆಯದ ಎಚ್ಚರಿಕೆಗಳ ತ್ರಿವೇಣೀಸಂಗಮವಾಗಿದ್ದಳು ಆ ಕನ್ನಿಕೆ!

ಅಂತರಂಗದ ಸಿದ್ಧತೆ ಪರಿಪೂರ್ಣವಾಗಿತ್ತು. ಬಾಹ್ಯಸಿದ್ಧತೆ ಇನ್ನಾಗಬೇಕಿತ್ತು. ಮದುವೆಗೆಂಬಂತೆ ಹೊರಟು ನಿಂತ ಮಗಳನ್ನು ಮದುಮಗಳಂತೆ ಸಿಂಗರಿಸಿದಳು ಮಾತೆ. ಮುಗ್ಧಮುನಿಯನ್ನು ಮಂತ್ರಮುಗ್ಧಗೊಳಿಸಲೆಂದು ಹೊಳೆಹೊಳೆಯುವ ವಸ್ತ್ರ-ಒಡವೆಗಳನ್ನೂ, ರುಚಿರುಚಿಯಾದ ಭಕ್ಷ್ಯ-ಪೇಯಗಳನ್ನೂ ಕೈಯಲ್ಲಿರಿಸಿ, ನಾಡಿಗೆ ಮಳೆ ತರಿಸಿಕೊಡೆಂದು ಮಗಳ ಬೀಳ್ಕೊಡುವಾಗ ತಾಯಿಯ ಕಣ್ಣಲ್ಲಿ ಕಣ್ಣೀರ ಮಳೆ! ಮಗಳ ಕಣ್ಣಲ್ಲಿ ಕಾರ್ಯಸಿದ್ಧಿಯ ಕಳೆ!

ಮಮತೆಯ ಮೂರ್ತಿಯನ್ನು ಬೀಳ್ಕೊಂಡು, ಮಹಿಮೆಯ ಮೂರ್ತಿಯೆಡೆಗೆ ನಡೆದಳು ಮಗಳು…ಅಲ್ಲ, ಮಳೆ-ಮುಗುಳು!!

~*~*~

(ಸಶೇಷ)

ತಿಳಿವು-ಸುಳಿವು:
ಮಳೆ ಮುಗುಳು ಎಂಬ ಪದಪ್ರಯೋಗವು ಎರಡು ವಿಶೇಷ ಸಂದರ್ಭಗಳ ಸೂಚನೆಯಾಗಿದೆ. ಮುಗುಳು ಎಂದರೆ ಮೊಗ್ಗು ಎಂದರ್ಥ; ಇಲ್ಲಿ – ಎಳೆ ಹುಡುಗಿ ಎಂಬ ಸೂಚಕ. ಮಳೆ-ಮುಗುಳು ಎಂದರೆ ಮಳೆ ತರಿಸುವ ಮಹತ್ಕಾರ್ಯಕ್ಕೆ ಹೊರಟ ಹುಡುಗಿ ಎಂಬ ವಿಶೇಷಣ.

ಕ್ಲಿಷ್ಟ-ಸ್ಪಷ್ಟ:

 • ಮಾಲ್ಯ = ಮಾಲೆ
 • ಕ್ರಿಯಾನ್ವಯ = ಕೆಲಸದ ಕೈಗೂಡಿಸುವಿಕೆ / Implementation
 • ನಾವ್ಯಾಶ್ರಮ = ಆಶ್ರಮದ ರೂಪದ ನಾವೆ
 • ಗುಲ್ಮ = ಪೊದರು ಗಿಡಗಳು
 • ಕೃತ್ರಿಮ = ಸುಳ್ಳು / fake
 • ಸ್ವಾದುಫಲ = ರುಚಿಯಾದ ಹಣ್ಣುಗಳು
 • ನೀರನಿಲಯ = ನೀರಿನ ಮೇಲೆ ರಚನೆಯಾದ ಆಶ್ರಮ
 • ಬುದ್ಧಿಸಮ್ಮತ = ಒಪ್ಪಿಗೆಯಾಗುವ ಬುದ್ಧಿಮತ್ತೆಯಿರುವ
 • ಕಾರಣದ್ರವ್ಯ = ಮೂಲ ಕಾರಣಗಳು
 • ನಿಬದ್ಧ = ಸ್ಥಾಪಿಸು / Install
 • ಶ್ರುತಪಡಿಸು = ಕೇಳಿಸು / ತಿಳಿಸು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 48ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments