LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಜ್ಯದಿಂದ ರಾಮನವರೆಗೆ……….

Author: ; Published On: ರವಿವಾರ, ಜುಲಾಯಿ 18th, 2010;

Switch to language: ಕನ್ನಡ | English | हिंदी         Shortlink:

॥ ಹರೇರಾಮ॥

ಅಬ್ಬಾ..!
ಆಸೆಯ ಆಳವೇನು..ಅಗಲವೇನು..?
ಅದು ಸೃಷ್ಟಿಸುವ ಆಶ್ಚರ್ಯಗಳೇನು..?
ಅಧಃಪತನವೇನು..?ಆನಂದವೇನು..?
ಪರಿತಾಪವೇನು..? ಪರಿಪಾಕವೇನು..? ಪರಿವರ್ತನೆಯೇನು..?

ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!

ಮುಕುಟವೋ ? ಮಾಯೆಯೋ ?

ಮುಕುಟವೋ ? ಮಾಯೆಯೋ ?

ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!
ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!


ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!

ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..
ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!
ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!
ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!
ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!
ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!
ಒಮ್ಮೆ ಆಸೆಯ ರಾಜಸ -ತಾಮಸ ರೂಪ..
ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..
ಇವೆರಡೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿಒಂದಾದ ಮೇಲೊಂದರಂತೆ ತಾಂಡವ- ಲಾಸ್ಯಗಳನ್ನಾಡಿದ್ದುಂಟು..
ಇವೆಲ್ಲವೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿ ಘಟಿಸಿದ್ದುಂಟು ಎಂದರೆ ನಂಬುತ್ತೀರಾ..?
ರಾಜಾಧಿರಾಜ ಪದವಿಯಲ್ಲಿದ್ದುಕೊಂಡು, ಆಸೆಯ ರಾಜಸ-ರೌದ್ರ ರೂಪದ ದಾಳಿಗೆ ತನ್ನದೆಲ್ಲವನ್ನೂ ತೆತ್ತು ಸೊನ್ನೆಯಾಗಿ,
ಮತ್ತದೇ ಆಸೆ ತನ್ನ ಸಾತ್ವಿಕ -ತಾತ್ವಿಕ ರೂಪದಲ್ಲಿ ಮೈದೋರಿದಾಗ ಮರುಹುಟ್ಟು ಪಡೆದು.. ಭುವಿಯಗಲ ಹರಡಿದ, ಬಾನೆತ್ತರ ಬೆಳೆದ ಮಹಾಪುರುಷನ ಕುರಿತು ಮಾತನಾಡುವ ಮನವಾಗುತಿದೆಯಿಂದು…
ಅವನೇ…! ಅಲ್ಲಲ್ಲ..ಅವರೇ.. ರಾಜರ್ಷಿ ಪದ ತೊರೆದು ಬ್ರಹ್ಮರ್ಷಿ ಪದಕೇರಿದ ಮಹಾಚೇತನ “ವಿಶ್ವಾಮಿತ್ರ”

ಭವ್ಯ ಭವನಕ್ಕೆ ಭದ್ರವಾದ ಅಡಿಪಾಯವೇ ಬೇಕಲ್ಲವೇ..!?
ಸಾಕ್ಷಾತ್ ಸೃಷ್ಟಿಕರ್ತನಿಂದಲೇ ಆರಂಭವಾದ ಕುಶಿಕವಂಶದಲ್ಲಿ ವಿಶ್ವಾಮಿತ್ರನ ಆವಿರ್ಭಾವವಾಯಿತು..
ಕುಶಿಕ ವಂಶಕ್ಕೆ ಆ ಹೆಸರು ಬರಲು ಮೂಲ ಕಾರಣನಾದವನು ಆ ವಂಶದ ಮೂಲ ಪುರುಷನಾದ, ಬ್ರಹ್ಮಮಾನಸ ಪುತ್ರನಾದ ಕುಶ..
‘ಕು’
ಎಂದರೆ ಭೂಮಿ..ಅಲ್ಲಿ ನೆಲೆಸಿದುದರಿಂದಲೇ ಆತ ಕುಶ..

ಭುವಿಯ ಜೀವಿಗಳು ಪಡುವ ಬವಣೆಯನ್ನು ಕಂಡು ಕನಿಕರಿಸಿದವನವನು..
ಇಳೆಗೊಳಿತು ಮಾಡಲೆಂದು ಬ್ರಹ್ಮಲೋಕವನ್ನೇ ಪರಿತ್ಯಜಿಸಿ ಇಳಿದುಬಂದವನವನು..
ಅನುರೂಪಳಾದ ವೈದರ್ಭಿಯೆಂಬ ವನಿತೆಯನ್ನು ವರಿಸಿ ಪಡೆದ ನಾಲ್ಕು ಮಕ್ಕಳಿೆಗೆ ಧರ್ಮಸಾಮ್ರಾಜ್ಯ ಕಟ್ಟಿರೆಂದು ಆದೇಶವಿತ್ತವನವನು..
ಹೀಗೆ ಭುವಿಯ ಮೇಲಣ  ದಿವಿಯ ಕರುಣೆಯ ಫಲವಾಗಿಯೇ ಕುಶಿಕ ವಂಶವು ಆರಂಭವಾಯಿತು..
ತಂದೆಯ ಆಣತಿಯಂತೆ ಮಹೋದಯವೆಂಬ ನಗರಿಯಯನ್ನು ನಿರ್ಮಿಸಿ, ಪಾಲಿಸುತ್ತಿದ್ದ ಕುಶಪುತ್ರನಾದ ಕುಶನಾಭನು ಪುತ್ರಕಾಮೇಷ್ಟಿಯ ಫಲವಾಗಿ ಪಡೆದುಕೊಂಡ ಸುಪುತ್ರನೇ ಗಾಧಿ ..
ಪ್ರತಿಸೃಷ್ಟಿಕರ್ತನ ಸೃಷ್ಟಿಯಾದದ್ದು ಸೃಷ್ಟಿಕರ್ತನ ಐದನೆಯ ತಲೆಮಾರಿನಲ್ಲಿ, ಗಾಧಿಯ ಮಗನಾಗಿ..ವಿಶ್ವಾಮಿತ್ರನೆಂಬ ಅಭಿಧಾನದಲ್ಲಿ..
ಭೃಗು ವಂಶದ ಸೊಸೆಯಾಗಿ , ಜಮದಗ್ನಿಗೆ ಜನ್ಮವಿತ್ತು, ವಿಶ್ವಮಂಗಲಕ್ಕಾಗಿ ನದಿಯಾಗಿ ಹರಿದ ಕೌಶಿಕೀ ವಿಶ್ವಾಮಿತ್ರನ ಸೋದರಿ..
ಗಾಧಿಯ ಕಾಲ ಮುಗಿಯಿತು..ವಿಶ್ವಾಮಿತ್ರನ ಕಾಲ ಆರಂಭವಾಯಿತು..
ಮುತ್ತಾತನಾದ ಕುಶನು ಯಾವ ಆಶಯವನ್ನು ಹೊತ್ತು ಬ್ರಹ್ಮಲೋಕದಿಂದ ಭುವಿಗಿಳಿದು ಧರ್ಮರಾಜ್ಯವನ್ನು ಸಂಸ್ಥಾಪಿಸಿದ್ದನೋ..
ಅದಕ್ಕನುಗುಣವಾಗಿ ಪ್ರಜಾರಂಜಕನಾಗಿ ರಾಜ್ಯಭಾರ ಮಾಡತೊಡಗಿದನಾತ…!
ಬಾಹುಬಲ-ಬುದ್ದಿಬಲಗಳು ವಿಶ್ವಾಮಿತ್ರನಲ್ಲಿ ನೈಸರ್ಗಿಕವಾಗಿಯೇ ಇದ್ದವು..
ಅಸ್ತ್ರಬಲ-ಶಸ್ತ್ರಬಲಗಳು ಶಿಕ್ಷಣ -ಸಾಧನೆಗಳಿಂದ ಪ್ರಾಪ್ತವಾಗಿದ್ದವು..
ಜನ-ಧನ-ಸೇನಾಬಲಗಳು ತಂದೆಯಿಂದ ಮುಂದುವರಿದು ಬಂದಿದ್ದವು..
ಹೀಗೆ ಸರ್ವಬಲ ಸಂಪನ್ನನಾದ ರಾಜಾ ವಿಶ್ವಾಮಿತ್ರನು ಸೇನೆಯನ್ನು ಕೂಡಿಕೊಂಡು ದಿಗ್ವಿಜಯಾಕಾಂಕ್ಷಿಯಾಗಿ ಭೂಮಂಡಲ ಯಾತ್ರೆ ಹೊರಟನು..
ಬಾನಂಗಳದಲ್ಲಿ ಸೂರ್ಯನುದಯಿಸಿ ಮೇಲೇರುತ್ತಿದ್ದಂತೆಯೇ ತಾರೆಗಳು ಮರೆಯಾಗುವಂತೆ, ಮೇಲೇರಿ ಬರುವ ವಿಶ್ವವಿಜಯಿ ವಿಶ್ವಾಮಿತ್ರನೆದುರು ವಿಶ್ವದ ಭೂಪತಿಗಳೆಲ್ಲರೂ ಮುದುರಿದರು..!

ವಿಜಯದ ಮೇಲೆ ವಿಜಯಗಳನ್ನು ಸಾಧಿಸುತ್ತಾ..
ನಗರ-ರಾಷ್ಟ್ರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತಾ..
ನದೀ-ಸರೋವರಗಳಲ್ಲಿ ಮೀಯುತ್ತಾ..
ಗಿರಿವನಗಳ ಸೊಬಗನ್ನು ಸವಿಯುತ್ತಾ..
ಮುಂದೊತ್ತಿ ಬರುವ ವಿಶ್ವಾಮಿತ್ರನ ಜೈತ್ರಯಾತ್ರೆ, ಭುವಿಗಿಳಿದ ಬ್ರಹ್ಮಲೋಕದಂತಿದ್ದ ಅದೊಂದು ದಿವ್ಯಸ್ಥಳವನ್ನು ಪ್ರವೇಶಿಸುತ್ತಿರಲು..

ಹಿಮಾಲಯದ ಬಳಿಸಾರುವಾಗ ತಾನಾಗಿ ಉಂಟಾಗುವ ಶೈತ್ಯಾನುಭೂತಿಯಂತೆ ಆತನಿಗುಂಟಾಯಿತೊಂದು ಶಬ್ದಗಳಿಗೆ ನಿಲುಕದ ದಿವ್ಯಾನುಭೂತಿ..!

(ಮುಂದಿನ ಭಾಗಕ್ಕಾಗಿ ಮುಂದಿನ ಭಾನುವಾರ ಬನ್ನಿ..)

॥ ಹರೇರಾಮ॥

18 Responses to ರಾಜ್ಯದಿಂದ ರಾಮನವರೆಗೆ……….

 1. Mohan Bhaskar

  ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!

  ಹೌದು. ಎಷ್ಟು ಸು೦ದರ ವಾಕ್ಯ ..ಆಚರಣೆಗೆ ಎಷ್ಟು ದೀರ್ಘ ಮನೋಬಲ, ಸಹನೆ, ತಾಳ್ಮೆ ಬೇಕಲ್ಲವೇ?
  ಇ೦ದಿನ ರಾಜ್ಯದಲ್ಲಿ ಇದೆಷ್ಟು ಪ್ರಸ್ತುತ. ಈಗ ರಾಮದಿ೦ದ ರಾಜ್ಯದೆಡೆಗೆ ಪಯಣ..ಮನಗಮನ ಸದಾ…

  ಪ್ರಣಾಮಗಳು… ಮೋಹನ

  [Reply]

 2. Ashwini Bhat

  ಮಂಕುತಿಮ್ಮನ ಕಗ್ಗವೊಂದು ನೆನಪಿಗೆ ಬರುತ್ತಿದೆ…

  ಏಸು ಸಲ ತಪವಗೈದೇಸು ಬನ್ನವನಾಂತು
  ಕೌಶಿಕಂ ಬ್ರಹ್ಮರ್ಷಿ ಪದಕರ್ಹನಾದನ್?||
  ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ
  ಲೇಸಾಗಿಸಾತ್ಮವನು ಮಂಕುತಿಮ್ಮ||

  [Reply]

 3. Raghavendra Narayana

  ಹೊಸತನವೇ ಬಾಳು; ಹಳಸಿಕೆಯೆಲ್ಲ ಸಾವು ಬಿಡು |
  ರಸವು ನವನವತೆಯಿ೦ದನುದಿನವು ಹೊಮ್ಮಿ ||
  ಹಸನೊ೦ದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |
  ಪಸರುತಿರೆ ಬಾಳ್ ಚೆಲುವು – ಮ೦ಕುತಿಮ್ಮ ||
  .
  ಗುರುಗಳಿ೦ದ ಬರುವಾಗ ಪ್ರತಿಬಾರಿಯೂ ನೂತನವಾಗುತ್ತದೆ. ಸರ್ವವೂ ಈ ಸಾರಾ೦ಶದಲ್ಲಿದೆ, ಅದ್ಭುತ.
  .
  ಶ್ರೀ ಗುರುಭ್ಯೋ ನಮಃ ಶ್ರೀ ಗುರುಭ್ಯೋ ನಮಃ ಶ್ರೀ ಗುರುಭ್ಯೋ ನಮಃ ಶ್ರೀ ಗುರುಭ್ಯೋ ನಮಃ ಶ್ರೀ ಗುರುಭ್ಯೋ ನಮಃ
  .
  ರಾಮನವಮಿಯಲ್ಲಿ ಕುಡಿಯುವ ಪಾನಕದ೦ತೆ, ಗುರುಗಳ ಬರಹ ಸೀದಾ ಒಳಹೋಗುತ್ತದೆ ಯಾವ ಅಡೆತಡೆಯಿಲ್ಲದೆ. ಆಯಾಸಗೊ೦ಡವರು ಕುಡಿದರ೦ತು ರುಚಿಯೋ ರುಚಿ, ಖುಷಿಯೋ ಖುಷಿ.
  .
  ರಾಮಾಯಣದ ಈ ಭಾಗ ನಮಗೆ ತು೦ಬಾ ಇಷ್ಟ. ಅದ್ಭುತವಾಗಿದೆ, ಸಿನಿಮಾದ ಹಾಗಿದೆ. ಹಾಗೆ ನೋಡಿದರೆ, ಗುರುಗಳ ಪ್ರವಚನ ನೋಡಿ ಕೇಳಿ ಸಣ್ಣ ಮಟ್ಟಿಗಾದರು ಕೆಲವರು ಕುಶಲವರಾದರೆ ಅಚ್ಚರಿಯಿಲ್ಲ. (ಕುಶಲವರ ಮೂಲಕ ಪ್ರಥಮ ಬಾರಿ ರಾಮಾಯಣವ ಕೇಳಿ, ನೆರೆದವರು ಕುಶಲವರಿಗೆ ಏನೇನೋ ದಾನ ಕೊಡುತ್ತಿರುವಾಗ, ಕೆಲವರು ಏನು ಇಲ್ಲದೆ ಜನಿವಾರವ ದಾನ ಕೊಟ್ಟದ್ದು ಎ೦ದೂ ಮರೆಯಲಸದಳ). ಯಾವುದೇ ಪ್ರಸಿದ್ಧ ಸ್ಥಳವನ್ನು ಒಬ್ಬ ಒಳ್ಳೆಯ ಗೈಡ ಮೂಲಕ ಕೇಳಿದರೆ, ಸಿಗುವ ಮಾಹಿತಿ ಮತ್ತು ಧನ್ಯತೆ ಅಪಾರ.
  .
  ವಿಶ್ವಾಮಿತ್ರರು ಬಿ೦ದುವಾಗಲೆ೦ದು ಶ್ರಮಿಸಿದ ವಸಿಷ್ಠರಿಗೆ; ವಿಶ್ವಾಮಿತ್ರರು ಅನುಕ್ಷಣವೂ ಅಖ೦ಡ ಸಿ೦ಧುವಾಗಿ ಋಣವ ತೀರಿಸುತಲಿಹರು ಗಾಯತ್ರಿ ಮ೦ತ್ರದಿ೦ದ??
  .
  ಅದ್ಭುತ – ಟ್ವೆ೦ಟಿ ಟ್ವೆ೦ಟಿ ಪ೦ದ್ಯ
  __________________________________________________
  “ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
  ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
  ಉಂಡ ಮನೆಗೆ ಎರಡೆಣಿಸಬಹುದು..!
  ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
  ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
  ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
  ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
  ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
  ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!
  ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!
  ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!”
  .
  .
  “ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!
  ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..
  ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!
  ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!
  ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!
  ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!
  ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!
  ಒಮ್ಮೆ ಆಸೆಯ ರಾಜಸ -ತಾಮಸ ರೂಪ..
  ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..”
  __________________________________________________
  .
  .
  ಕಾತುರರಾಗಿ ನಿರೀಕ್ಷಿಸುತ್ತಿದ್ದೇವೆ, ರವಿವಾರದ ಆದಿತ್ಯ ಸೂರ್ಯನ ಸವಿತ್ರ ಕಿರಣಗಳನ್ನು.

  [Reply]

  Raghavendra Narayana Reply:

  “ಸಾತ್ವಿಕ ಆಸೆ” ಕಡಿಮೆ ಓವರಗಳಲ್ಲಿ “ಸಲ್ಲದ ಆಸೆ”ಯನ್ನು ಸದೆಬಡಿದಿದೆ :-)

  [Reply]

  Sri Samsthana Reply:

  ಅದ್ಭುತ ಲೆಕ್ಕ..!

  [Reply]

 4. sriharsha.jois

  ಪೂರ್ಣ ಪಾಠಕೆ ಕಾದಿರುವೆವು ತಂದೇ…!

  [Reply]

 5. Anuradha Parvathi

  Waiting for the next episode.

  [Reply]

 6. aruna shyam

  ಎಲ್ಲರಲ್ಲೂ ಸಾತ್ತ್ವಿಕ ಆಸೆ ಬಂದರೆಷ್ಟು ಚೆನ್ನ???????????!!!!!!!!!!!!

  [Reply]

 7. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು. ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ ಹೇಳಿ ಬೇಡ್ತ ಇದ್ದೆ. ಆನು “ರಾಮ ಬ್ಲಾಗ್” ನ ಲೇಖನಂಗಳ ಇತ್ತೀಚೆಗೆ ಓದುತ್ತಾ ಇದ್ದೆಷ್ಟೆ. ಅದರ ಓದುವಾಗ ಆದ ಅನುಭವಂಗಳ ಹೆಳುಲೆ ಶಬ್ದಂಗಳೇ ಸಿಕ್ಕುತ್ತಿಲ್ಲೆ. ಅಷ್ಟೂ ಖುಷಿ ಆತು. ಅದರ ಓದಿಕ್ಕಿ ಅಲ್ಲೇ ಮೇಲೆ ಗುರುಗಳ ನೋಡಿದರೆ, “ಸಿಹಿ ತಿಂಡಿ ಕೊಟ್ಟಿಕ್ಕಿ ಅದರ ತಿಂಬ ಮಗುವಿನ ಕಂಡು ಖುಷಿ ಪಡುವ ಅಮ್ಮನ ಹಾಂಗೆ ಕಾಣುತ್ತು”. ಆ ಬ್ಲಾಗ್ ಲ್ಲಿ ದಶಂಬರ ೩ರ ನಂತರ ಫೆಬ್ರುವರಿ ೧೧ ರ ಲೇಖನ ಕಾಣ್ತಾ ಇದ್ದು. ಅದರ ಮಧ್ಯೆ ಅಥವಾ ಈಗ ಬ್ಲಾಗ್ ಲ್ಲಿ ಕಾಣದ್ದ ಲೇಖನಂಗ ಇದ್ದರೆ, ಎನಗೆ ಅದರ ಓದುಲೆ ಅವಕಾಶ ಮಾಡಿ ಕೊಡುವಿರಾ? ಪುನಃ ಪ್ರಣಾಮಗಳೊಂದಿಗೆ “ಮನ್ನಿಸಿ ಅನುಗ್ರಹಿಸಿ ದಾರಿ ತೋರಿ ಮುನ್ನಡೆಸಿ” ಹೇಳಿ ಬೇಡ್ತ ಇದ್ದೆ.

  [Reply]

  Sri Samsthana Reply:

  ಬರಹಕ್ಕೆ ಸಾರ್ಥಕತೆಯನ್ನು ತರುವ ಪ್ರತಿಕ್ರಿಯೆ…

  ನಿನ್ನಂಥ ಸಹೃದಯರೇ ಇನ್ನಷ್ಟು ಲೇಖನಗಳು ಬರಲು ಮತ್ತು ಬರುವ ಲೇಖನಗಳು ಇನ್ನಷ್ಟು ಸೊಗಸಾಗಲು ಕಾರಣರು…

  @ ಹರೇರಾಮ ತಂಡ…

  ಜಯಶ್ರೀಗೆ ಬಂದ ಸಂದೇಹಕ್ಕೆ ಪ್ರತಿಕ್ರಿಯಿಸಿ…..

  [Reply]

  Sri Samsthana Reply:

  ಉಣ್ಣುವ ಸುಖಕ್ಕಿಂತ ಉಣಬಡಿಸುವ ಸುಖವೇ ದೊಡ್ಡದು…

  [Reply]

 8. Editor@HareRaama.in

  ನಮಸ್ತೆ,
  ನೀವು ತಿಳಿಸಿದ ಸಮಯದ ಬರಹಗಳು ‘ರಾಜ್ಯ’ ಬ್ಲಾಗ್ ನಲ್ಲಿ ಲಭ್ಯ.

  ಮೊದಲು ‘ರಾಮ’ ಬ್ಲಾಗ್ ಅಧ್ಯಾತ್ಮಕ್ಕೆ ಎಂದು; ‘ರಾಜ್ಯ’ ಬ್ಲಾಗ್ ಉಳಿದ ಬರಹಗಳಿಗೆ ಎಂದು ಆಗಿತ್ತು. ಈಗ ‘ರಾಮ’ ಬ್ಲಾಗ್ ರಾಮಾಯಣಕ್ಕೆ ಮತ್ತು ‘ರಾಜ್ಯ’ ಬ್ಲಾಗ್ ಬೇರೆ ಬರಹಗಳಿಗೆ ಎಂದು ಆಗಿದೆ. ಇದರಿಂದಾಗಿ ‘ರಾಮ’ದಲ್ಲಿದ್ದ ಬರಹಗಳನ್ನು ‘ರಾಜ್ಯ’ಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಓದಿ. ವಂದನೆಗಳು.

  [Reply]

 9. Jayashree Neeramoole

  ಧನ್ಯವಾದಗಳು

  [Reply]

 10. Shaman Hegde

  “ಆಸೆಯೇ ದುಃಖಕ್ಕೆ ಮುಲ ಕಾರಣ”ಎಂಬ ಗಾದೆ ಕೇವಲ ಸಲ್ಲದ ಆಸೆಗೆ ಎಂಬುದು ಅರ್ಥವಾಗುತ್ತದೆ.

  [Reply]

 11. Raghavendra Narayana

  ರಾಜ್ಯವು ಇಲ್ಲ, ರಾಮನು ಇಲ್ಲ.
  ಸ೦ಸ್ಥಾನ, ರಾಮ ಮತ್ತು ರಾಜ್ಯ ಲೇಖನಕ್ಕಾಗಿ ಕಾಯುತ್ತಿದ್ದೇವೆ.
  .
  ಹಾಗೇ, ಈ ಹಾಗು ಪ್ರತಿ ಶನಿವಾರ ಮತ್ತು ಭಾನುವಾರ ಅಶೋಕೆಯಲ್ಲಿ ನಡೆಯುವ ಶಿವಾನ೦ದಲಹರಿಯ ಮೇಲಿನ ಪ್ರವಚನದ ಬರಹಕ್ಕಾಗಿ ಕೂಡ ಕಾಯುತ್ತಲಿರುವ ಶಿಷ್ಯಕೋಟಿ.
  .
  ಪ್ರತಿ ಶಿಷ್ಯ “ಕಾಯುತ್ತಿದ್ದೇವೆ” ಎ೦ದು ಬರೆದ್ದಿದ್ದಾರೆ, ಅ೦ದರೆ, ಕೋಟಿ ಬಾರಿ “ಕಾಯುತ್ತಿದ್ದೇವೆ” ಎ೦ದು ಬರೆದ ಹಾಗಾಯಿತು.
  – ಶಿಷ್ಯಕೋಟಿ.

  [Reply]

 12. Sri Samsthana

  ರಾಜ್ಯೋದಯವಾಗಿದೆ…

  [Reply]

  Raghavendra Narayana Reply:

  ಧನ್ಯೋಸ್ಮಿ
  .
  ಜಳಕವಾಗಿದೆ, ಪುಳಕವಾಗಿದೆ

  [Reply]

 13. dattu

  ಅಹೋ!!……………..
  ಯಾದೇವೀ ಸರ್ವಭೂತೇಷು ಮಾಯಾರೂಪೇಣ ಸಂಸ್ಥಿತಾ|
  ನಮಸ್ತಯೈ ನಮಸ್ತಯೈ ನಮಸ್ತಯೈ ನಮೋ ನಮಃ||
  ಮಾಯೆಯ ಮುಸುಕನ್ನು ಕಿತ್ತೆಸೆಯಲು, ಗುರುತತ್ವವನ್ನುಕಾಣಲು ಗುರುವಿನಿಂದ ಧ್ಯಾನಯೋಗದ ಮೊದಲ ಸೋಪಾನಕ್ಕೆ ಮಾರ್ಗದರ್ಶನ……………ಬ್ರಹ್ಮ ತೇಜೋ ಬಲಂ ಬಲಂ!!!
  ಏನಿದ್ದರೇನು ಮನೆಯ ಮಕ್ಕಳೇ ನಿದ್ರಿಸುತಿದ್ದರೆ………….
  ಜಾನಾಮಿ ಧರ್ಮಂ ನಚಮೇ ಪ್ರವೃತ್ತಿಃ……………………….

  [Reply]

Leave a Reply

Highslide for Wordpress Plugin