॥ ಹರೇರಾಮ॥

ಅಬ್ಬಾ..!
ಆಸೆಯ ಆಳವೇನು..ಅಗಲವೇನು..?
ಅದು ಸೃಷ್ಟಿಸುವ ಆಶ್ಚರ್ಯಗಳೇನು..?
ಅಧಃಪತನವೇನು..?ಆನಂದವೇನು..?
ಪರಿತಾಪವೇನು..? ಪರಿಪಾಕವೇನು..? ಪರಿವರ್ತನೆಯೇನು..?

ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!

ಮುಕುಟವೋ ? ಮಾಯೆಯೋ ?

ಮುಕುಟವೋ ? ಮಾಯೆಯೋ ?

ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!
ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!


ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!

ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..
ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!
ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!
ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!
ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!
ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!
ಒಮ್ಮೆ ಆಸೆಯ ರಾಜಸ -ತಾಮಸ ರೂಪ..
ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..
ಇವೆರಡೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿಒಂದಾದ ಮೇಲೊಂದರಂತೆ ತಾಂಡವ- ಲಾಸ್ಯಗಳನ್ನಾಡಿದ್ದುಂಟು..
ಇವೆಲ್ಲವೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿ ಘಟಿಸಿದ್ದುಂಟು ಎಂದರೆ ನಂಬುತ್ತೀರಾ..?
ರಾಜಾಧಿರಾಜ ಪದವಿಯಲ್ಲಿದ್ದುಕೊಂಡು, ಆಸೆಯ ರಾಜಸ-ರೌದ್ರ ರೂಪದ ದಾಳಿಗೆ ತನ್ನದೆಲ್ಲವನ್ನೂ ತೆತ್ತು ಸೊನ್ನೆಯಾಗಿ,
ಮತ್ತದೇ ಆಸೆ ತನ್ನ ಸಾತ್ವಿಕ -ತಾತ್ವಿಕ ರೂಪದಲ್ಲಿ ಮೈದೋರಿದಾಗ ಮರುಹುಟ್ಟು ಪಡೆದು.. ಭುವಿಯಗಲ ಹರಡಿದ, ಬಾನೆತ್ತರ ಬೆಳೆದ ಮಹಾಪುರುಷನ ಕುರಿತು ಮಾತನಾಡುವ ಮನವಾಗುತಿದೆಯಿಂದು…
ಅವನೇ…! ಅಲ್ಲಲ್ಲ..ಅವರೇ.. ರಾಜರ್ಷಿ ಪದ ತೊರೆದು ಬ್ರಹ್ಮರ್ಷಿ ಪದಕೇರಿದ ಮಹಾಚೇತನ “ವಿಶ್ವಾಮಿತ್ರ”

ಭವ್ಯ ಭವನಕ್ಕೆ ಭದ್ರವಾದ ಅಡಿಪಾಯವೇ ಬೇಕಲ್ಲವೇ..!?
ಸಾಕ್ಷಾತ್ ಸೃಷ್ಟಿಕರ್ತನಿಂದಲೇ ಆರಂಭವಾದ ಕುಶಿಕವಂಶದಲ್ಲಿ ವಿಶ್ವಾಮಿತ್ರನ ಆವಿರ್ಭಾವವಾಯಿತು..
ಕುಶಿಕ ವಂಶಕ್ಕೆ ಆ ಹೆಸರು ಬರಲು ಮೂಲ ಕಾರಣನಾದವನು ಆ ವಂಶದ ಮೂಲ ಪುರುಷನಾದ, ಬ್ರಹ್ಮಮಾನಸ ಪುತ್ರನಾದ ಕುಶ..
‘ಕು’
ಎಂದರೆ ಭೂಮಿ..ಅಲ್ಲಿ ನೆಲೆಸಿದುದರಿಂದಲೇ ಆತ ಕುಶ..

ಭುವಿಯ ಜೀವಿಗಳು ಪಡುವ ಬವಣೆಯನ್ನು ಕಂಡು ಕನಿಕರಿಸಿದವನವನು..
ಇಳೆಗೊಳಿತು ಮಾಡಲೆಂದು ಬ್ರಹ್ಮಲೋಕವನ್ನೇ ಪರಿತ್ಯಜಿಸಿ ಇಳಿದುಬಂದವನವನು..
ಅನುರೂಪಳಾದ ವೈದರ್ಭಿಯೆಂಬ ವನಿತೆಯನ್ನು ವರಿಸಿ ಪಡೆದ ನಾಲ್ಕು ಮಕ್ಕಳಿೆಗೆ ಧರ್ಮಸಾಮ್ರಾಜ್ಯ ಕಟ್ಟಿರೆಂದು ಆದೇಶವಿತ್ತವನವನು..
ಹೀಗೆ ಭುವಿಯ ಮೇಲಣ  ದಿವಿಯ ಕರುಣೆಯ ಫಲವಾಗಿಯೇ ಕುಶಿಕ ವಂಶವು ಆರಂಭವಾಯಿತು..
ತಂದೆಯ ಆಣತಿಯಂತೆ ಮಹೋದಯವೆಂಬ ನಗರಿಯಯನ್ನು ನಿರ್ಮಿಸಿ, ಪಾಲಿಸುತ್ತಿದ್ದ ಕುಶಪುತ್ರನಾದ ಕುಶನಾಭನು ಪುತ್ರಕಾಮೇಷ್ಟಿಯ ಫಲವಾಗಿ ಪಡೆದುಕೊಂಡ ಸುಪುತ್ರನೇ ಗಾಧಿ ..
ಪ್ರತಿಸೃಷ್ಟಿಕರ್ತನ ಸೃಷ್ಟಿಯಾದದ್ದು ಸೃಷ್ಟಿಕರ್ತನ ಐದನೆಯ ತಲೆಮಾರಿನಲ್ಲಿ, ಗಾಧಿಯ ಮಗನಾಗಿ..ವಿಶ್ವಾಮಿತ್ರನೆಂಬ ಅಭಿಧಾನದಲ್ಲಿ..
ಭೃಗು ವಂಶದ ಸೊಸೆಯಾಗಿ , ಜಮದಗ್ನಿಗೆ ಜನ್ಮವಿತ್ತು, ವಿಶ್ವಮಂಗಲಕ್ಕಾಗಿ ನದಿಯಾಗಿ ಹರಿದ ಕೌಶಿಕೀ ವಿಶ್ವಾಮಿತ್ರನ ಸೋದರಿ..
ಗಾಧಿಯ ಕಾಲ ಮುಗಿಯಿತು..ವಿಶ್ವಾಮಿತ್ರನ ಕಾಲ ಆರಂಭವಾಯಿತು..
ಮುತ್ತಾತನಾದ ಕುಶನು ಯಾವ ಆಶಯವನ್ನು ಹೊತ್ತು ಬ್ರಹ್ಮಲೋಕದಿಂದ ಭುವಿಗಿಳಿದು ಧರ್ಮರಾಜ್ಯವನ್ನು ಸಂಸ್ಥಾಪಿಸಿದ್ದನೋ..
ಅದಕ್ಕನುಗುಣವಾಗಿ ಪ್ರಜಾರಂಜಕನಾಗಿ ರಾಜ್ಯಭಾರ ಮಾಡತೊಡಗಿದನಾತ…!
ಬಾಹುಬಲ-ಬುದ್ದಿಬಲಗಳು ವಿಶ್ವಾಮಿತ್ರನಲ್ಲಿ ನೈಸರ್ಗಿಕವಾಗಿಯೇ ಇದ್ದವು..
ಅಸ್ತ್ರಬಲ-ಶಸ್ತ್ರಬಲಗಳು ಶಿಕ್ಷಣ -ಸಾಧನೆಗಳಿಂದ ಪ್ರಾಪ್ತವಾಗಿದ್ದವು..
ಜನ-ಧನ-ಸೇನಾಬಲಗಳು ತಂದೆಯಿಂದ ಮುಂದುವರಿದು ಬಂದಿದ್ದವು..
ಹೀಗೆ ಸರ್ವಬಲ ಸಂಪನ್ನನಾದ ರಾಜಾ ವಿಶ್ವಾಮಿತ್ರನು ಸೇನೆಯನ್ನು ಕೂಡಿಕೊಂಡು ದಿಗ್ವಿಜಯಾಕಾಂಕ್ಷಿಯಾಗಿ ಭೂಮಂಡಲ ಯಾತ್ರೆ ಹೊರಟನು..
ಬಾನಂಗಳದಲ್ಲಿ ಸೂರ್ಯನುದಯಿಸಿ ಮೇಲೇರುತ್ತಿದ್ದಂತೆಯೇ ತಾರೆಗಳು ಮರೆಯಾಗುವಂತೆ, ಮೇಲೇರಿ ಬರುವ ವಿಶ್ವವಿಜಯಿ ವಿಶ್ವಾಮಿತ್ರನೆದುರು ವಿಶ್ವದ ಭೂಪತಿಗಳೆಲ್ಲರೂ ಮುದುರಿದರು..!

ವಿಜಯದ ಮೇಲೆ ವಿಜಯಗಳನ್ನು ಸಾಧಿಸುತ್ತಾ..
ನಗರ-ರಾಷ್ಟ್ರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತಾ..
ನದೀ-ಸರೋವರಗಳಲ್ಲಿ ಮೀಯುತ್ತಾ..
ಗಿರಿವನಗಳ ಸೊಬಗನ್ನು ಸವಿಯುತ್ತಾ..
ಮುಂದೊತ್ತಿ ಬರುವ ವಿಶ್ವಾಮಿತ್ರನ ಜೈತ್ರಯಾತ್ರೆ, ಭುವಿಗಿಳಿದ ಬ್ರಹ್ಮಲೋಕದಂತಿದ್ದ ಅದೊಂದು ದಿವ್ಯಸ್ಥಳವನ್ನು ಪ್ರವೇಶಿಸುತ್ತಿರಲು..

ಹಿಮಾಲಯದ ಬಳಿಸಾರುವಾಗ ತಾನಾಗಿ ಉಂಟಾಗುವ ಶೈತ್ಯಾನುಭೂತಿಯಂತೆ ಆತನಿಗುಂಟಾಯಿತೊಂದು ಶಬ್ದಗಳಿಗೆ ನಿಲುಕದ ದಿವ್ಯಾನುಭೂತಿ..!

(ಮುಂದಿನ ಭಾಗಕ್ಕಾಗಿ ಮುಂದಿನ ಭಾನುವಾರ ಬನ್ನಿ..)

॥ ಹರೇರಾಮ॥

Facebook Comments Box