ಅಕ್ಷರತಕ್ಷಶಿಲೆ-೧

~~~*~~~

ಭೋಗಸಾಮ್ರಾಜ್ಯವೊಂದನ್ನು ಭಂಗಗೊಳಿಸಿ ಶ್ರೀರಾಮನು ಅಲ್ಲಿ ಯೋಗಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ ಗೊತ್ತೇ ನಿಮಗೆ? ರಾಮನ ಯಾವ ಕಥೆಯನ್ನು ತೆಗೆದುಕೊಂಡರೂ ಅದು ಹೀಗೆಯೇ ಇರಬೇಕಲ್ಲದೇ ಬೇರೆ ಹೇಗಿರಲು ಸಾಧ್ಯ ಎನ್ನುವಿರೇ? ಅದು ನಿಜವೇ; ಆದರೆ ಇದು ನೀವು ಅಷ್ಟಾಗಿ ಕೇಳಿರದ, ಆದರೆ ಕೇಳಲೇಬೇಕಾದ ಕಥೆ; ಅದುವೇ ತಕ್ಷಶಿಲೆಯ ಪ್ರಾದುರ್ಭಾವದ ಪ್ರಸಂಗ!

~

Aksharatakshashile by Srismsthana

ಗಾಂಧಾರದ ದೊರೆಯಾದ ಯುಧಾಜಿತನು ಚಿಂತಾಕ್ರಾಂತನಾಗಿದ್ದ; ಏಕೆಂದರೆ ಗಂಧರ್ವರು ಗಾಂಧಾರದೊಳಗೆ ನುಗ್ಗಿ ಬಂದಿದ್ದರು; ಸಿಂಧೂನದಿಯ ಉಭಯಪಾರ್ಶ್ವಗಳಲ್ಲಿ ಕಂಗೊಳಿಸುತ್ತಿದ್ದ ರಮಣೀಯವಾದ ಭೂಭಾಗವನ್ನು ಕಬಳಿಸಿ ಕುಳಿತಿದ್ದರು! ಮೂರು ಕೋಟಿಯನ್ನು ಮೀರಿದ ಸಂಖ್ಯೆಯಲ್ಲಿದ್ದ ಗಂಧರ್ವರನ್ನು ಇದಿರಿಸುವ ಶಕ್ತಿ ಯುಧಾಜಿತನಿಗೆ ಇರಲಿಲ್ಲ; ಆದುದರಿಂದಲೇ ಗಾಂಧಾರನರೇಶನು ಚಿಂತಿತನಾಗಿದ್ದ.

ಆದರೆ ಅತಿಚಿಂತೆಗೆ ಅವಕಾಶವಿರಲಿಲ್ಲ; ಏಕೆಂದರೆ ಅವನಿಗೆ ರಾಮಬಲವಿತ್ತು! ರಾಮನ ಚಿಕ್ಕತಾಯಿಯಾದ ಕೈಕೇಯಿಯ ಸೋದರನಲ್ಲವೇ ಯುಧಾಜಿತ್? ಸಂಬಂಧದಲ್ಲಿ ಅವನು ರಾಮನಿಗೆ ಸೋದರಮಾವನಾಗಬೇಕು. ಗಾಂಧಾರಕ್ಕೆ ಬಂದೊದಗಿದ ಸಂಕಟವನ್ನು ತನ್ನ ಬಾಂಧವನೂ, ಭುವನಬಾಂಧವನೂ, ಆಪದ್ಬಾಂಧವನೂ ಆದ ರಾಮನಲ್ಲಿ ನಿವೇದಿಸಬಯಸಿದನು ಯುಧಾಜಿತ್; ಇಳೆಗೆ ಇಳಿದು ಬಂದು ಮಾನವೋತ್ತಮನೆನಿಸಿದ ದೇವೋತ್ತಮನ ಸನ್ನಿಧಿಗೆ ತನ್ನ ಕುಲಗುರುಗಳಾದ ಗರ್ಗರನ್ನು ನೆರವು ಕೋರಿ ಕಳುಹಿಕೊಟ್ಟನು ಕೇಕಯದ ದೊರೆ.

~

ಗಾಂಧಾರದ ಮೇಲೆ ನಡೆದಿರುವ ಗಂಧರ್ವರ ದೌರ್ಜನ್ಯವನ್ನು ಗರ್ಗರಿಂದ ಕೇಳಿ ಕ್ರುದ್ಧನಾದನು ರಾಮಪ್ರಭು; ಗಂಧರ್ವರ ಮೇಲೆ ವಿಜಯಯಾತ್ರೆಗೆ ಕ್ಷಣದಲ್ಲಿ ಅಣಿಯಾಯಿತು ರಾಮಸೇನೆ! ಗಾಂಧಾರಸಮರದ ನೇತೃತ್ವವನ್ನು ಗಾಂಧಾರದ ಮೊಮ್ಮಗನೇ ಆದ ಭರತನಿಗೆ ನೀಡಲಾಯಿತು. ಅವನ ಈರ್ವರು ಸುಪುತ್ರರಾದ ತಕ್ಷ ಮತ್ತು ಪುಷ್ಕಲರು ಸಮರಯಾತ್ರೆಯಲ್ಲಿ ತಂದೆಗೆ ಜೊತೆಯಾದರು;

~

ವಿಶೇಷವೆಂದರೆ ತಕ್ಷ ಮತ್ತು ಪುಷ್ಕಲರಿಗೆ ಆಗಲೇ, ಅಲ್ಲಿಯೇ, ಮುಂದೆ ಗೆಲ್ಲುವ ನಾಡಿನ ದೊರೆಗಳಾಗಿ ಪಟ್ಟ ಕಟ್ಟಿದನು ರಾಮ!

 

ಗಮನಿಸಿ: ಇನ್ನಷ್ಟೇ ಅಯೋಧ್ಯೆಯ ಸೇನೆಯು ಯುದ್ಧಯಾತ್ರೆಗೆ ಹೊರಡಬೇಕಿದೆ; ಮುಂದೆ ಗಾಂಧಾರವನ್ನು ಸೇರಿ, ಸಮರ ಸಾರಿ ಗಂಧರ್ವರನ್ನು ಗೆಲ್ಲಬೇಕಿದೆ; ಆ ಬಳಿಕ ಸಿಂಧೂನದಿಯ ಉಭಯ ಪಾರ್ಶ್ವಗಳಲ್ಲಿ ಎರಡು ನಗರಿಗಳನ್ನು ನೂತನವಾಗಿ ಸ್ಥಾಪಿಸುವ ಯೋಜನೆಯಿದೆ; ಅದಾದಬಳಿಕವಲ್ಲವೇ ಭರತನ ಮಕ್ಕಳಿಗೆ ಅಲ್ಲಿ ಪಟ್ಟ ಕಟ್ಟುವ ಪ್ರಸಕ್ತಿ ಉದ್ಭವಿಸುವುದು? ಆದರೆ ಈಗಾಗಲೇ ರಾಮನು ತಕ್ಷ-ಪುಷ್ಕಲರಿಗೆ ಪಟ್ಟ ಕಟ್ಟಿಯಾಗಿದೆ!

ರಾಮನ ಮುಂದಾಲೋಚನೆಯ ನಿಖರತೆ ಮತ್ತು ಆತ್ಮವಿಶ್ವಾಸದ ಪರಾಕಾಷ್ಠೆಯನ್ನು ನಾವು ಇಲ್ಲಿ ಕಾಣಬಹುದು.

~

ರಾಮನಿಗೆ ಇದು ಹೊಸದೇನಲ್ಲ;

ಇನ್ನೂ ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಮೊದಲೇ.. ರಾಮಸೇನೆಯು ಸಮುದ್ರವನ್ನು ದಾಟುವ ಮೊದಲೇ.. ರಾಮಾಯಣಯುದ್ಧವು ಮೊದಲಾಗುವುದಕ್ಕೆ ಮೊದಲೇ.. ರಾವಣಸಂಹಾರಕ್ಕೆ ಬಹು ಮೊದಲೇ.. ವಿಭೀಷಣನಿಗೆ ಲಂಕಾಧಿಪತಿಯಾಗಿ ಪಟ್ಟ ಕಟ್ಟಿದವನಲ್ಲವೇ ಅವನು?

~

Aksharatakshashile by Srismsthana

ಈ ನಡುವೆ ಭರತನು ಅಣ್ಣನ ಚರಣಗಳಲ್ಲಿ ಹಣೆಯಿಟ್ಟು, ಅವನ ಪಾದಧೂಳಿಯನ್ನು ಶ್ರೀರಕ್ಷೆಯಾಗಿ ಶಿರದಲ್ಲಿ ಧರಿಸಿ, ಸೇನಾಸಮೇತನಾಗಿ ಸಮರೋತ್ಸಾಹದಲ್ಲಿ ಗಾಂಧಾರದೆಡೆಗೆ ಮುನ್ನಡೆದ; ಗಾಂಧಾರದಲ್ಲಿ ಗಂಧರ್ವರು-ರಾಘವರ ನಡುವೆ ಘೋರಯುದ್ಧವು ಪ್ರಾರಂಭವಾಯಿತು; ಏಳು ಹಗಲು-ಏಳು ರಾತ್ರಿಗಳ ಕಾಲ ಅವಿರತವಾಗಿ ಮುಂದುವರಿಯಿತು ಯೋಗ-ಭೋಗಗಳ ಮಹಾಸಮರ! ಕೊನೆಯಲ್ಲಿ ಭರತನು ಪ್ರಯೋಗಿಸಿದ, ಕಾಲಯಮನನ್ನೇ ದೇವತೆಯನ್ನಾಗಿ ಹೊಂದಿದ, ಸಂವರ್ತವೆಂಬ ಮಹಾಸ್ತ್ರಕ್ಕೆ ಆಹುತಿಯಾಯಿತು ಗಂಧರ್ವರ ಹಿಂಡು! ಅಲ್ಲಿಗೆ ರಾಮಾಜ್ಞೆಯ ಪೂರ್ವಾರ್ಧವು ಪಾಲಿತವಾದಂತಾಯಿತು.

~

ಸಂಹಾರಕಾಂಡದ ಬಳಿಕ ಮೊದಲಾಯಿತು ಸೃಷ್ಟಿಕಾಂಡ; ಕಾಲಾಸ್ತ್ರದಿಂದ ಗಂಧರ್ವರನ್ನು ನಿಗ್ರಹಿಸಿದ ಭರತನು ಬಳಿಕ ಸಿಂಧೂನದಿಯ ಉಭಯ ತೀರಗಳಲ್ಲಿ ತಕ್ಷಶಿಲೆ ಮತ್ತು ಪುಷ್ಕಲಾವತವೆಂಬ ಅಭಿಧಾನಗಳೊಡನೆ ನಗರಯುಗಲವನ್ನು ನೆಲೆಗೊಳಿಸಿದನು. ರಾಮಾನುಜನು ರಾಮಾದೇಶವನ್ನು ಪರಿಪಾಲಿಸುತ್ತ, ಐದು ವರ್ಷಗಳ ಕಾಲ ಗಾಂಧಾರದಲ್ಲಿದ್ದುಕೊಂಡು, ಗಂಧರ್ವರಾಜ್ಯವು ಮೊದಲಿದ್ದ ಪರಿಸರದಲ್ಲಿ ಎರಡು ರಾಜ್ಯಗಳನ್ನು ಮತ್ತು ಎರಡು ರಾಜಧಾನಿಗಳನ್ನು ನಿರ್ಮಿಸಿ, ಅಲ್ಲಿ ತನ್ನ ಮಕ್ಕಳೀರ್ವರನ್ನು ದೊರೆಗಳಾಗಿ ಸಂಸ್ಥಾಪಿಸಿ, ರಾಮಸನ್ನಿಧಿಗೆ ಮರಳಿದನು.

~

Aksharatakshashile by Srismsthana

ಹೀಗೆ ತಕ್ಷಶಿಲೆಯು ರಾಮಸಂಕಲ್ಪಸಂಭೂತೆ! ರಾಮಾನುಜಸಂಸ್ಥಾಪಿತೆ! ರಾಮಸುತಪಾಲಿತೆ!

 

ರಾಮನು ಹಚ್ಚಿದ ದೀಪವು ಜಗವನ್ನು ಯುಗಯುಗಗಳ ಕಾಲ ಬೆಳಗಿದರೆ ಅದರಲ್ಲಿ ಆಶ್ಚರ್ಯವೇನಿದೆ? ಅಹುದದು, ಕಾಲಕ್ರಮದಲ್ಲಿ ತನ್ನೊಳಗೆ ಉದಯಿಸಿದ ಶ್ರೇಷ್ಠತಮವಾದ ವಿಶ್ವವಿದ್ಯಾಲಯದ ದ್ವಾರಾ ತಕ್ಷಶಿಲೆಯು ಬಹುಕಾಲ ಭೂಮಂಡಲವನ್ನೇ ಬೆಳಗಿತು!

ಆಧಾರ: ವಾಲ್ಮೀಕಿರಾಮಾಯಣದ, ಉತ್ತರಕಾಂಡದ, ‘ಗಂಧರ್ವವಿಷಯವಿಜಯಯಾತ್ರಾ’ ಮತ್ತು ‘ತಕ್ಷ-ಪುಷ್ಕಲನಿವೇಶ’ವೆಂಬ ೧೦೦ ಮತ್ತು ೧೦೧ನೆಯ ಸರ್ಗಗಳು.

Facebook Comments Box