|| ಹರೇರಾಮ ||

ಪ್ರಶ್ನೆಗಳು ಎಲ್ಲಿ, ಯಾವಾಗ, ಯಾವ ರೂಪದಲ್ಲಿ ಉದ್ಭವಿಸಿದರೂ ಮಹರ್ಷಿಗಳು ಉತ್ತರವನ್ನು ಹುಡುಕುತ್ತಿದ್ದುದು ಅಂತರಂಗದಲ್ಲಿಯೇ..
ಬದುಕಿನ ಸಕಲ ಪ್ರಶ್ನೆಗಳ ಸಮಾಧಾನ ನಮ್ಮ ಅಂತರಂಗದಲ್ಲಿಯೇ ಹುದುಗಿದೆ.

ಕಣ್ಮುಚ್ಚಿ ರಾಮಾಯಣವನ್ನು ಕಂಡ, ವಿರಚಿಸಿದ ಮಹಾಕವಿಗೆ ಕಣ್ತೆರೆದಾಗ ಎದುರಾದ ಪ್ರಶ್ನೆ.. “ಈ ಅನರ್ಘ್ಯ ಕೃತಿಯನ್ನು ಲೋಕದ ಮುಂದಿಡಬಲ್ಲವರು ಯಾರು?”

ಕಣ್ತೆರೆದಾಗ ಮೂಡಿದ ಪ್ರಶ್ನೆಗೆ ಕಣ್ಮುಚ್ಚಿ ಉತ್ತರ ಹುಡುಕತೊಡಗಿದರವರು..
ರಾಮಾಯಣವೆಲ್ಲಿ ಕಂಡಿತೋ ಅಲ್ಲೇ ತಾನೇ ರಾಮಾಯಣದ್ವಾರವನ್ನು ಹುಡುಕಬೇಕಾದದ್ದು…!
ಮೈಮರೆತ ಧ್ಯಾನಮಗ್ನತೆಯಲ್ಲಿ ಮೈದೋರಿದ ರಾಮಸೂರ್ಯನಿಂದ ಹೊರಹೊಮ್ಮಿದ ಎಳೆಯ ಕಿರಣಗಳೆರಡು ಬಳಿಸಾರುವುದನ್ನು ಕಂಡ ಮುನಿ ಕಣ್ದೆರೆದರೆ..

ಅದೋ…!
ಕುಶ-ಲವರು ಪಾದಮೂಲದಲ್ಲಿ…!!

ಉತ್ತರವನ್ನು ಹುಡುಕಿಕೊಂಡು ಎಲ್ಲಿಯೊ ಅಲೆಯಬೇಕಾದ ಪ್ರಮೇಯವೇ ಇರಲಿಲ್ಲ..!
ಪ್ರಶ್ನೆ ಹುಟ್ಟುವ ಮೊದಲೇ ಉತ್ತರ ಹುಟ್ಟಿಯಾಗಿತ್ತು..!
ಅದು ಅಲ್ಲಿಯೇ..ಅವರ ಬಳಿಯಲ್ಲಿಯೇ..ಅವರ ಆಶ್ರಮದಲ್ಲಿಯೇ ನೆಲೆಸಿತ್ತು..!
ಅವರ ಶಿಷ್ಯ ವೃತ್ತಿಯನ್ನು ಕೈಗೊಂಡಿತ್ತು..!
ಅದನ್ನೇ ಕಾಯುತ್ತಿತ್ತೋ ಎಂಬಂತೆ, ಪ್ರಶ್ನೆ ಮೂಡಿದೊಡನೆ ಕಣ್ಮುಂದೆ ಬಂದು ನಿಂತಿತ್ತು..ಕಾಲಿಗೆರಗಿತ್ತು..!

ರಾಮಾಯಣದ ಉಪದೇಶಕ್ಕೆ ಅರ್ಹರಾದ ರಾಮನ ಪ್ರತಿಬಿಂಬಗಳು..!

ರಾಮಾಯಣದ ಉಪದೇಶಕ್ಕೆ ಕುಶ-ಲವರೇ ಅರ್ಹರು…
ರಾಮಕಥೆಯನ್ನು ಬೇರಾರು ತಾನೇ ಹೇಳಬಲ್ಲರು..?
ಹೇಳಿದರೆ ರಾಮನೇ ಹೇಳಬೇಕು..!
ಆತನಿಗೂ ತನ್ನ ಮಹಾಕಥೆಯನ್ನು ತಾನೊಬ್ಬನೇ ಹೇಳಲಾರೆನೆಂದೆನಿಸಿ ಇಬ್ಬರಾಗಿ ಕುಶ-ಲವರ ರೂಪದಲ್ಲಿ ಬಂದಿರಬಹುದೆನಿಸಿತು ಆ ಕ್ರಾಂತದರ್ಶಿಗೆ…!

ಕುಶ-ಲವರನ್ನು ಕಣ್ದಣಿಯೆ ನೋಡಿದರು ಆದಿಕವಿಗಳು..
ಭೂಮಂಡಲಾಧೀಶ್ವರನ ಮಕ್ಕಳು ಮುನಿವೇಷದಲ್ಲಿ,ಅನಾಥರಂತೆ ಆಶ್ರಮವಾಸಿಗಳಾಗಿರುವುದನ್ನು ಕಂಡು ಕರಗಿ ಮರುಗಿತು ಅವರ ಹೃದಯ..
ಅನರ್ಘ್ಯವಾದ ಈ ಜೋಡಿಮುತ್ತುಗಳು ಆಶ್ರಮಕ್ಕಿಂತ ಅರಮನೆಯಲ್ಲಿ ಭೂಷಣವಲ್ಲವೇ..? ಎಂದು ಕೇಳಿತು ಅವರ ಮನಸ್ಸು..
ಕುಶ-ಲವರನ್ನು ಲೋಕಕ್ಕೆ ತಂದ, ಲೋಕದ ತಂದೆಯೊಡನೆ ಪುನರಪಿ ಬೆಸೆಯುವ ಬಗೆ ಯಾವುದೆಂದು ಚಿಂತಿಸತೊಡಗಿದ ಮುನಿಗಳಿಗೆ ಉತ್ತರ ರೂಪದಲ್ಲಿ ಹೊಳೆದಿದ್ದು ರಾಮಾಯಣವೇ..!

ತಾಯಿಯಿಂದ ತಂದೆಯೆಡೆಗೆ…
ಗುರುವಿನಿಂದ ಪ್ರಭುವಿನೆಡೆಗೆ..
ಆಶ್ರಮದಿಂದ ಅರಮನೆಯೆಡೆಗೆ.. ಈ ಮಕ್ಕಳನ್ನು ರಾಮಾಯಣವೇ ಕರೆದೊಯ್ಯಬಹುದಲ್ಲವೇ..?

ಮಕ್ಕಳಾದರೋ ಮೇಧಾವಿಗಳಾಗಿದ್ದರು..
ಸಂಪೂರ್ಣ ವೇದಾಧ್ಯಯನ ಸಂಪನ್ನರಾಗಿದ್ದರು..

ಆದರೆ ವೇದಾಕ್ಷರಗಳು ಕಂಠಸ್ಥವಾದರೆ ಸಾಲದು..
ವೇದಾರ್ಥವು ಹೃದಯಸ್ಥವಾಗಬೇಕು..!
ಶಬ್ದವು ದೇಹವಾದರೆ ಅರ್ಥವು ಅದರ ಜೀವವಲ್ಲವೇ..?
ಜೀವವಿಲ್ಲದ ದೇಹಕ್ಕೆ ಎಷ್ಟು  ಬೆಲೆಯೋ, ಅರ್ಥಗ್ರಹಣವಿಲ್ಲದ ಶಬ್ದಗ್ರಹಣಕ್ಕೂ ಅಷ್ಟೇ ಬೆಲೆಯಲ್ಲವೇ..?
ವೇದಗಳನ್ನು ಮುಖೋದ್ಗತವನ್ನಾಗಿ ಮಾಡಿಕೊಂಡಿದ್ದ ಆ ಮಕ್ಕಳಿಗೆ, ವೇದಗಳ ಸಾರ-ವಿಸ್ತಾರಗಳನ್ನು ಮನಸ್ಸಿಗೆ ತಂದುಕೊಡುವ ವೇದೋಪಬೃಂಹಣದ ಕಾರ್ಯವು ಇನ್ನಷ್ಟೇ ಆಗಬೇಕಾಗಿದ್ದಿತು..!
ವೇದಗಳ ಸಾರ-ಸಂದೇಶಗಳೆಲ್ಲವೂ ವಿಸ್ತಾರವಾಗಿ ರಾಮಾಯಣದಲ್ಲಿರುವಾಗ ವೇದೋಪಬೃಂಹಣಕ್ಕೆ ರಾಮಾಯಣಕ್ಕಿಂತ ಮಿಗಿಲಾದ ಸಾಧನವಾದರೂ ಬೇರೆ ಯಾವುದಿದೆ..!?

[ರಾಮಾಯಣವು ಬಾಲಶಿಕ್ಷಣದ, ಅಷ್ಟೇ ಏಕೆ ಲೋಕಶಿಕ್ಷಣದ ಶ್ರೇಷ್ಠ ಸಾಧನವೆಂಬುದನ್ನು ಮೊದಲಾಗಿ ಅರಿತವರು ವಾಲ್ಮೀಕಿಗಳೇ..!]

ಮಹಾಕಾವ್ಯವೊಂದನ್ನು ಮಹಾಜನತೆಯ ಮುಂದಿಡಬೇಕಾದವರಲ್ಲಿ ಏನಿರಬೇಕು..?
ಕವಿ ಹೃದಯಕ್ಕೆ ಸಂವಾದಿಯಾದ ರಸಪೂರ್ಣವಾದ ಹೃದಯ..
ಹೃದಯದಲ್ಲಿ ಮನೋಜ್ಞವಾದ ಭಾವಗಳು..
ಮನೋಜ್ಞ ಭಾವಗಳಿಗೆ ಕನ್ನಡಿಯಾಗಬಲ್ಲ ಮುಗ್ಧ ಮುಖ,..
ಮುಖದ ಮುಗ್ಧತೆಯೊಡನೆ ಮೇಳೈಸುವ ಮಧುರ ಸ್ವರ,..
ಮಧುರ ಸ್ವರವನ್ನು ದಿವ್ಯರಾಗವಾಗಿ ಪರಿವರ್ತಿಸಬಲ್ಲ ಉತ್ಕೃಷ್ಟವಾದ ಗಾಯನ ಕೌಶಲ..
ಇವುಗಳಲ್ಲಿ ಯಾವುದೊಂದು ಇಲ್ಲದಿದ್ದರೂ ಪ್ರಸ್ತುತಿ ಪರಿಪೂರ್ಣವಾಗಲಾರದು..
ಇವೆಲ್ಲವೂ ಇರುವ ಎರಡು ವ್ಯಕ್ತಿತ್ವಗಳು ಲಭಿಸಿ, ಅವರಲ್ಲಿ ಪರಸ್ಪರ ಪರಿಪೂರ್ಣ ತಾಳಮೇಳ ಇರುವುದಾದರೆ ಬೇರೇನು ಬೇಕು ?

ಎಲ್ಲಕ್ಕಿಂತ ಮಿಗಿಲಾಗಿ ಅವರೀರ್ವರೂ ರಾಮನ ಮಕ್ಕಳಾಗಿದ್ದರು..!

ಅಂಗಾತ್ ಅಂಗಾತ್ ಸಂಭವಸಿ ಹೃದಯಾತ್ ಅಧಿಜಾಯಸೇ |
ಆತ್ಮಾವೈ ಪುತ್ರನಾಮಾಸಿ..”

ಅವರ ಅಂಗ-ಪ್ರತ್ಯಂಗಗಳು ರಾಮನ ಅಂಗ-ಪ್ರತ್ಯಂಗಗಳಿಂದಲೇ ಸಂಭವಿಸಿದ್ದವು..
ಅವರ ಅಂತಸ್ತತ್ವಗಳು ರಾಮನ ಅಂತಸ್ತತ್ವಗಳಿಂದಲೇ ವಿಕಸಿತವಾಗಿದ್ದವು..
ಬಿಂಬವೊಂದರ ಅವಳಿ ಪ್ರತಿಬಿಂಬಗಳಂತೆ ರಾಮನಿಂದಲೇ ತತ್ವ-ತನುಗಳನ್ನು ಪಡೆದು ರಾಮನ ಪ್ರತಿಮೂರ್ತಿಗಳಾಗಿ ಮೈವೆತ್ತಿದ್ದ ಕುಶ-ಲವರಿಗಿಂತ ರಾಮಾಯಣವನ್ನು ಹಾಡಲು ಬೇರೆ ಯಾವ ಆಯ್ಕೆ ತಾನೇ ಸೂಕ್ತವಾದೀತು..!?

ರಾವಣಸಂಹಾರಕ್ಕೆಂದೇ ರಾಮ ಹುಟ್ಟಿದಂತೆ,
ರಾಮಾಯಣ ಪ್ರಸಾರಕ್ಕೆಂದೇ ಹುಟ್ಟಿಬಂದಿದ್ದ ರಾಮನ ಮಕ್ಕಳಿಗೆ ರಾಮಾಯಣ ಪಾಠ ಪ್ರಾರಂಭವಾಯಿತು..!

ವಾಲ್ಮೀಕಿಗಳ ಪಾಠವದು ಅಂತಃಕರಣದ ಆಟವಾಗಿತ್ತು..
ಅಲ್ಲಿ ಉಪಕರಣಗಳ ಕಾಟವಿರಲಿಲ್ಲ..
ಕಂಟ(ಲೇಖನಿ)ವೆಂಬ ಸ್ಮರಣಶಕ್ತಿಕಂಟಕದ ಪ್ರವೇಶವೇ ಇಲ್ಲದೆ ಕೇವಲ ಕಂಠಗಳ ಮಾಧ್ಯಮದಿಂದಲೇ ಮೊದಲ ಕಾವ್ಯದ ಮೊದಲ ಪಾಠ ನಡೆಯಿತು..!

ಮುನಿಗಳ ಹೃದಯದಿಂದ ಕಂಠಕ್ಕೆ ..ಅಲ್ಲಿಂದ ಕುಶಲವರ ಕಿವಿಗಳಿಗೆ..ಮತ್ತವರ ಹೃದಯಗಳಿಗೆ ನಿರಂತರವಾಗಿ ರಾಮಾಯಣವು ಪ್ರವಹಿಸತೊಡಗಿತು…
ಮುನಿಹೃದಯದ ರಾಮಾಯಣಧ್ವನಿಯು ಒಂದಕ್ಕೆರಡಾಗಿ ಕುಮಾರರ ಕಂಠಗಳಲ್ಲಿ ಪ್ರತಿಧ್ವನಿಸತೊಡಗಿತ್ತು..
ರಾಮಬಿಂಬದ ಆ ಅವಳಿ ಪ್ರತಿಬಿಂಬಗಳಲ್ಲಿ ರಾಮಾಯಣದ ಪ್ರತಿಬಿಂಬವೂ ಮೂಡತೊಡಗಿತ್ತು..!

ಆಶ್ಚರ್ಯವೆಂದರೆ..
ಸಾವಿರ ಸಾವಿರ ಶ್ಲೋಕಗಳನ್ನು ಬರಹದ ನೆರವಿಲ್ಲದೆಯೆ ಬುದ್ದಿಯಿಂದಲೇ ಬಾಯಿಗೆ ತಂದುಕೊಳ್ಳುವ ಗುರು….!
ಒಂದೇ ಒಂದು ಬಾರಿ ಗುರುಮುಖದಿಂದ ಹೊರಹೊಮ್ಮಿದ್ದನ್ನು ಹಾಗೆಯೇ ಗ್ರಹಿಸಿ, ಧರಿಸಿ, ಪುನರುಚ್ಚರಿಸುವ ಏಕಸಂಧಿಗ್ರಾಹಿಗಳಾದ ಶಿಷ್ಯರು…!!
ಅಲ್ಲಿ ಬರಹದ ಮಧ್ಯಪ್ರವೇಶವಿರಲೇ ಇಲ್ಲ..!
ಅಬ್ಬಾ…!
ಆ ಸ್ಮರಣಶಕ್ತಿಗೆ ಶರಣು ಶರಣು..!

ಇದು ಹೇಗೆ ಸಾಧ್ಯ..?

ಒಂದು ವೇಳೆ ಇದು ಸಾಧ್ಯವೇ ಹೌದಾದರೆ, ಇಂದು ನಮಗೇಕೆ ಸಾಧ್ಯವಾಗುತ್ತಿಲ್ಲ..?
ಎರಡಕ್ಕೆ ಎರಡು ಸೇರಿದರೆ ಎಷ್ಟಾಗುವುದೆಂಬುದನ್ನು ತಿಳಿಯುವಲ್ಲಿಯೂ ಯಂತ್ರಕ್ಕೆ ಪರತಂತ್ರರಾಗುವಷ್ಟು ಬುದ್ದಿ ದೌರ್ಬಲ್ಯವೇಕೆ ಬಂದಿತು ನಮಗಿಂದು..?

ಯಾವುದನ್ನು ಹೆಚ್ಚು ಹೆಚ್ಚು ಬಳಸುತ್ತೇವೆಯೋ ಅದರಲ್ಲಿ ಹೆಚ್ಚು ಹೆಚ್ಚು ಬಲವನ್ನು ತುಂಬುವಳು ಪ್ರಕೃತಿ..
ಬಳಕೆ ಕಡಿಮೆಯಾದಂತೆ ಆ ಅಂಗದ ಬಲವು ಕ್ಷೀಣಿಸುತ್ತಾ.. ಕ್ಷೀಣಿಸುತ್ತಾ.. ಕ್ರಮೇಣ ಆ ಅಂಗವೇ ಇಲ್ಲವಾಗಿಬಿಡುತ್ತದೆ..!

ನಮ್ಮ ಪೂರ್ವಜರು ಉಪಕರಣಗಳಿಗಿಂತ ಹೆಚ್ಚಾಗಿ ಅಂತಃಕರಣವನ್ನೇ ನೆಚ್ಚಿಕೊಂಡಿದ್ದರು..!
ಅಂತಃಕರಣದ ಬಳಕೆಯ ಅನಂತ ಅದ್ಭುತ ವಿಧಾನಗಳನ್ನು ಅವರು ತಿಳಿದಿದ್ದರು..
ಆದುದರಿಂದಲೇ ಅವರ ಅಂತಃಕರಣದಲ್ಲಿ ಅಪಾರ ಶಕ್ತಿಸಂಚಯವಿದ್ದಿತು..!
ಅಂದು ಬಾಹ್ಯವಾದ ಉಪಕರಣಗಳ ಅನ್ವೇಷಣೆ-ಬಳಕೆಗಳಿಗೆ ಇಂದಿರುವ ಪ್ರಾಶಸ್ತ್ಯವಿರಲಿಲ್ಲ..

ಕಾಲ ಸರಿದಂತೆ ಅಂತರಂಗ ಉಪೇಕ್ಷಿತವಾಗತೊಡಗಿತು…
ಬದುಕಿನಲ್ಲಿ ಬಹಿರಂಗಕ್ಕೆ ಒತ್ತು ಹೆಚ್ಚಾಗತೊಡಗಿತು…
ಬುದ್ಧಿ ಬಡವಾಗತೊಡಗಿತು..
ಬರಹದ ಅವಲಂಬನ ಹೆಚ್ಚತೊಡಗಿತು…

ತ್ರೇತಾಯುಗದ ರಾಮಾಯಣಕ್ಕೆ ಲಿಪಿಯ ಅಗತ್ಯವೇ ಬೀಳಲಿಲ್ಲ…
ಮುಂಬರುವ ಯುಗದ ಜನರು ಬಡಬುದ್ಧಿಯವರೆಂಬುದು ಮೊದಲೇ ವ್ಯಾಸರ ಮನಸ್ಸಿಗೆ ಬಂದಿರಬೇಕು…
ಆದುದರಿಂದಲೇ ದ್ವಾಪರದ ಮಹಾಭಾರತವನ್ನು ಬರೆಯಲು ಗಣಪತಿ ಧರೆಗಿಳಿಯಬೇಕಾಯಿತು…!

ಇಂದು..?
ನೂರು ಶ್ಲೋಕಗಳನ್ನೂ ಸರಿಯಾಗಿ ಚಿತ್ತದಲ್ಲಿ ಧರಿಸುವ ಶಕ್ತಿ ನಮಗಿಲ್ಲ..!
ನೆನಪಿಟ್ಟುಕೊಳ್ಳುವುದಕ್ಕೂ ಯಂತ್ರಗಳು ಬಳಕೆಯಾಗುವ ಕಾಲವಿದು…
ಉಪಕರಣಗಳ ಬಳಕೆ ಹೆಚ್ಚಿದಂತೆ ಅಂತಃಕರಣದ ಶಕ್ತಿ ಕುಗ್ಗಲೇಬೇಕು…
ಪ್ರಕೃತಿ ನಿಯಮವಿದು…!

ಬರಹವು ಬುದ್ಧಿವಂತಿಕೆಯ ಪ್ರತೀಕವೆಂದುಕೊಂಡಿದೆ ಆಧುನಿಕ ಸಮಾಜ…
ಆದರೆ ವಾಸ್ತವವಾಗಿ ಬರಹವು ಬುದ್ಧಿದೌರ್ಬಲ್ಯದ ಕುರುಹು..!

ಜಗತ್ತಿನ ಪ್ರಥಮಕಾವ್ಯದ ಪ್ರಥಮಪಾಠವು ನೀಡುವ ಸಂದೇಶವಿದು…
ದೇಹವೆಂಬ ಪೆಟ್ಟಿಗೆಯಲ್ಲಿ ಬದುಕಿಗೆ ಬೇಕಾಗಬಹುದಾದ ಸಕಲಸಂಗತಿಗಳನ್ನೂ ಇರಿಸಿಯೇ ದೇವರು ನಮ್ಮನ್ನು ಭುವಿಗೆ ಕಳುಹಿಸಿದ್ದಾನೆ…
ಅವುಗಳನ್ನು ಉಪೇಕ್ಷಿಸಿ ಉಪಕರಣಗಳ ದಾಸರಾಗುವುದು ದೇವರ ದಯೆಗೆ ಮಾಡಿದ ಅವಮಾನ…

ಆತನಿತ್ತ ಮೈಮನಗಳನ್ನು ಅಧಿಕಾಧಿಕ ಸದುಪಯೋಗ ಮಾಡಿದಂತೆ ಅವುಗಳಲ್ಲಿ ಆತ ಮತ್ತಷ್ಟು ಚೈತನ್ಯವನ್ನು ತುಂಬುತ್ತಾನೆ..
ಹಾಗೆ ಮಾಡದಿದ್ದಾಗ ದೇವರು ಕೊಟ್ಟಿದ್ದು ಕಳೆದುಹೋಗುತ್ತದೆ…ಮನುಷ್ಯನಿರ್ಮಿತವಾದದ್ದು ಹೇಗೂ ಉಳಿಯದು..!

ಹೀಗೆ ಆದಿಕಾವ್ಯವು ಆದಿಕವಿಯ ಹೃದಯದಿಂದ ಆದಿಶಿಷ್ಯರೀರ್ವರ ಹೃದಯಗಳನ್ನು ಪ್ರವೇಶಿಸಿತು..
ಒಂದು ಹೃದಯದ ಭಾವ ಎರಡು ಕಂಗಳ ದ್ವಾರಾ ಜಗದೆಡೆಗೆ ಹರಿಯುವಂತೆ ವಾಲ್ಮೀಕಿಗಳ ರಾಮಾಯಣಾನುಭೂತಿಯು ಕುಶಲವರ ಮೂಲಕ ಜಗದೆಡೆಗೆ ಹರಿಯತೊಡಗಿತು..

ಕಾಶಿಯ ವಿಶ್ವೇಶ್ವರನನ್ನು ಸೇರುವ ಗಂಗೆ ಮೊದಲು ಹರಿದ್ವಾರದ ಮೂಲಕವೇ ಹರಿಯಬೇಕಲ್ಲವೇ..?
ಅಯೋಧ್ಯೆಯಲ್ಲಿ ವಿಶ್ವನಾಯಕನನ್ನು ಸೇರಹೊರಟ ರಾಮಾಯಣಗಂಗೆಯು ಮೊದಲು ಹರಿಯಿತು ಸಂತಸಮೂಹದೆಡೆಗೆ…

ಸಂತರೆಂದರೆ ಹರಿ-ದ್ವಾರವೇ ಅಲ್ಲವೇ..?

|| ಹರೇರಾಮ ||

(ಚಿತ್ರಕೃಪೆ : ಅಂತರ್ಜಾಲ)

Facebook Comments Box