LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮನಿಂದ ರಾಜ್ಯದವರೆಗೆ… ಗೋವಿನಿಂದ ಗಾಯತ್ರಿಯವರೆಗೆ…

Author: ; Published On: ರವಿವಾರ, ಆಗಸ್ತು 8th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…

ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…

ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…

ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…

ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ…

ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ…?

ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು…!

ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?

ಒಬ್ಬ ಜಯಿಸುವವರಲ್ಲಿ ಶ್ರೇಷ್ಠ…

ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!

ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..

ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!

ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ…

ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!

ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ…

ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ…!

ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ…

ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ…!

ಒಬ್ಬನದು ಅರಮನೆ…

ಇನ್ನೊಬ್ಬನಿಗೆ ಅರಣ್ಯವೇ ಮನೆ!

ಒಬ್ಬನದು ಜೈತಯಾತ್ರೆಯಾದರೆ ಮೈತ್ರಯಾತ್ರೆ ಇನ್ನೊಬ್ಬನದು..!

ಒಬ್ಬನ ಶೋಭೆಗೆ ಕಾರಣ ಆಭೂಷಣವಾದರೆ ಇನ್ನೊಬ್ಬನಿಗೆ ಆತ್ಮವೇ ಆಭರಣ..!

ವಿಶ್ವದ ಯಾವುದೇ ಎರಡು ಮಹಾಶಕ್ತಿಗಳ ನಡುವೆ ಸಂಗಮವಾಗಲೀ, ಸಂಘರ್ಷವಾಗಲೀ ಏರ್ಪಟ್ಟಾಗ ಅದಕ್ಕೊಂದು  ಮಹಾಫಲವೇ ಇರಬೇಕಲ್ಲವೇ?

ವಿಧಿಚಿತ್ತವೇನಿತ್ತೋ?

ಬ್ರ್ರಹ್ಮ-ಕ್ಷತ್ರಗಳ ಮಹಾಮೇರುಗಳೆರಡು ವಸಿಷ್ಠ-ಕೌಶಿಕರ ರೂಪದಲ್ಲಿ ಸಂಧಿಸಿದವು ಅಲ್ಲಿ…

ಎತ್ತರದವರೆಲ್ಲ ಹತ್ತಿರದವರಲ್ಲ…

ಹತ್ತಿರದವರೆಲ್ಲ ಎತ್ತರದವರಾಗಿರಬೇಕಿಲ್ಲ…

ಎತ್ತರವಾಗಿದ್ದೂ ಹತ್ತಿರವಾಗುವವರು ಎಲ್ಲೋ ಭುವಿಗೊಬ್ಬರು…ಯುಗಕ್ಕೊಬ್ಬರು..!

ಎತ್ತರವನ್ನು ಕಂಡಾಗ ಕೌಶಿಕನಿಗೆ ವಸಿಷ್ಠರು ಸಾಕ್ಷಾತ್ ಪರಮಾತ್ಮನೇ ಎಂಬಂತೆ ತೋರಿಬಂದರು..

ಆದರೆ ಹತ್ತಿರವಾದಾಗ ಅವರು ತನ್ನಾತ್ಮವೇ ಎನ್ನಿಸುವಷ್ಟು ಆಪ್ತವಾದರು..!

ವಸಿಷ್ಠರ ಎತ್ತರ ಕೌಶಿಕನಲ್ಲಿ ವಿನಯವನ್ನು ಹುಟ್ಟುಹಾಕಿತು..

ಅವರ ಆಪ್ತತೆ ಕೌಶಿಕನಲ್ಲಿ ಪ್ರೀತಿಯನ್ನು ಮೂಡಿಸಿತು..

ಪ್ರೀತಿಯು ಆತನನ್ನು ಸಮೀಪಿಸುವಂತೆ ಮಾಡಿತು..

ವಿನಯವು ಆತನನ್ನು ಅವರ ಶ್ರೀಚರಣಗಳಲ್ಲಿ ಮಣಿಸಿತು..

ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?

ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?

ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ ‘ಸ್ವರಾಟ್’ ಆಗಲೆಂಬ ಆಶಯವಿದ್ದಿತು..

ರತ್ನಸಿಂಹಾಸನ ವಿರಾಜಿತನಾದ, ಮೃಷ್ಟಾನ್ನಭೋಜಿಯಾದ ಕೌಶಿಕನಿಗೆ ವಸಿಷ್ಠರಿತ್ತ ದರ್ಭಾಸನ, ಕಂದ-ಮೂಲ-ಫಲಗಳು, ಬದಲಾಗುವ ಭವಿಷ್ಯತ್ತಿನ ಅವ್ಯಕ್ತ ಸಂದೇಶವನ್ನು ನೀಡುವಂತಿದ್ದಿತು..

ಮತ್ತೆ ನಡೆಯಿತು ಮಹಾಮುನಿ ಮತ್ತು ಮಹಾರಾಜರ ನಡುವೆ ಕುಶಲಪ್ರಶ್ನೆಗಳ ವಿನಿಮಯ..

ಮಹೋನ್ನತ ವ್ಯಕ್ತಿತ್ವಗಳ ನಡುವೆ ನಡೆಯುವ ಕುಶಲಪ್ರಶ್ನೆಗಳು ಲೋಕಸಾಮಾನ್ಯರ ಬದುಕಿಗೆ ಆತ್ಮವಿಸ್ತರಣೆಯ ಕೈದೀವಿಗೆಗಳು..!

ಕೌಶಿಕನು ಪ್ರಶ್ನಿಸಿದ್ದು ತಪಸ್ಸು-ಅಗ್ನಿಹೋತ್ರಗಳ, ಶಿಷ್ಯ-ಶ್ರದ್ಧಾಳುಗಳ, ಗಿಡಮರಗಳ, ಮೃಗಪಕ್ಷಿಗಳ ಯೋಗಕ್ಷೇಮವನ್ನು..

ಮಹರ್ಷಿಯೊಬ್ಬರ ಆತ್ಮ ಅವರ ಶರೀರಕ್ಕಷ್ಟೇ ಸೀಮಿತವಾಗಿರಬಾರದು…

ಅದು ಶಿಷ್ಯರಲ್ಲಿ, ಮೃಗಪಕ್ಷಿಗಳಲ್ಲಿ, ಹೆಚ್ಚೇಕೆ ಗಿಡಮರಗಳಲ್ಲಿಯೂ ವಿಸ್ತರಿಸಿ ವ್ಯಾಪಿಸಿರಬೇಕು…

ಇವುಗಳಲ್ಲಿ ಎಲ್ಲಿ ನೋವಾದರೂ ತಾನು ನೋಯುವ, ಎಲ್ಲಿ ನಗುವಿದ್ದರೂ ತಾನು ನಲಿಯುವ ತಾದಾತ್ಮ್ಯ ಆತನಿಗಿರಬೇಕು …

ತನ್ನೊಡನಾಡಿಗಳಲ್ಲೆಲ್ಲ ತನ್ನನ್ನೇ ಕಾಣುವ ವಿಸ್ತೃತಾತ್ಮನಾಗಿರಬೇಕು ಆತ…

ಸರ್ವತ್ರ ಕುಶಲವೆಂದ ವಸಿಷ್ಠರು ಅಂತೆಯೇ ಕೌಶಿಕನ, ರಾಜ್ಯ-ಕೋಶಗಳ, ಸೈನ್ಯ-ಸಾಮಂತರ, ಪುತ್ರ-ಪೌತ್ರರ, ಮಂತ್ರಿ-ಮಿತ್ರರ, ಪರಿಜನ-ಪುರಜನರ ಕುಶಲ ವಿಚಾರಿಸಿದರು…

‘ದೇಶವು ದೇಹವಾದರೆ, ರಾಜನೇ ಅದರ ಆತ್ಮ.. ಸೈನ್ಯ-ಕೋಶಗಳು, ಮಂತ್ರಿಗಳು, ಪ್ರಜೆಗಳೇ ಅದರ ಅಂಗಾಂಗಗಳು-ಇಂದ್ರಿಯಗಳು’ ಎಂಬ ತತ್ತ್ವದ ಅಭಿವ್ಯಕ್ತಿ ವಸಿಷ್ಠರ ಕುಶಲ ಪ್ರಶ್ನೆಯಲ್ಲಿತ್ತು…!

ಮಹಾಪುರುಷರು ಕುಶಲವನ್ನು ಪ್ರಶ್ನಿಸುವ ಪರಿಯೇ ಬದುಕಿಗೆ ಇಷ್ಟು ದೊಡ್ಡ ಸಂದೇಶವನ್ನು ನೀಡುವುದಾದರೆ, ಅವರ ಬದುಕು ಇನ್ನೆಷ್ಟು ದೊಡ್ಡ ಸಂದೇಶವನ್ನು ಜೀವಿಗಳ ಜೀವನಕ್ಕೆ ನೀಡೀತು?

ವಸಿಷ್ಠ-ಕೌಶಿಕರ ಕುಶಲಸಂಭಾಷಣೆಯು ಜೀವಲೋಕದ ಕುಶಲಕ್ಕೇ ಕಾರಣವಾಗಬಹುದಾದ ಮಹತ್ತರಘಟನಾವಳಿಗಳನ್ನು ಅನಾವರಣಗೊಳಿಸಬಹುದೆಂಬುದನ್ನು ಯಾರು ತಾನೇ ಊಹಿಸಿದ್ದರು…!?

|| ಹರೇರಾಮ ||

18 Responses to ರಾಮನಿಂದ ರಾಜ್ಯದವರೆಗೆ… ಗೋವಿನಿಂದ ಗಾಯತ್ರಿಯವರೆಗೆ…

 1. Shaman Hegde

  hareraama……. the difference between Vasishtha and koushika is very picturesque…….ವಸಿಷ್ಠ-ಕೌಶಿಕರ ಕುಶಲಸಂಭಾಷಣೆ (the whole journey, right from nature’s talk)is very inspiring…..

  [Reply]

 2. gopalakrishna pakalakunja

  ಹರೇ ರಾಮ
  …ಗೋವಿನ ನೆವದ ಪರಿಣಾಮ ಗಾಯತ್ರೀ ದರ್ಶನ,,,
  ಸಾಮಾನ್ಯ ರಾಜ ನೋರ್ವನ ಸಾಹಸದ ಇತಿಹಾಸ…
  ಬ್ರಹ್ಮಋಷಿ ಪಟ್ಟದ ಪುರಸ್ಕಾರ….
  …ಶ್ರೀ ಗುರುವಿನ ಪರಮಾನುಗ್ರಹ ವಿಲ್ಲದೆಂತು ಸಾಧ್ಯ..?

  [Reply]

 3. nandaja haregoppa

  ಹರೇ ರಾಮ

  ಎತ್ತರದವರು ದೂರವಿದ್ದರೂ ಮನಸ್ಸಿಗೆ ಹತ್ತಿರವಾಗಬಲ್ಲರೆ ?

  ಆ ಎತ್ತರವನ್ನು ಸಾಮಾನ್ಯರು ನೋಡಬಲ್ಲರೆ?

  ಎತ್ತರದವರು ಹತ್ತಿರವಾಗಬೇಕೆಂಬ ಅಪೇಕ್ಷೆ ಸಹಜವಲ್ಲವೇ ?

  ಎತ್ತರದವರು ಹತ್ತಿರ ಬರುವುದು ಯಾವಾಗ ?

  [Reply]

  seetharama bhat Reply:

  Hareram,

  Navu atha hodantella avaru nammatha baruthirutharanthe

  Nija thane?

  [Reply]

  Sri Samsthana Reply:

  ಮಗು ಕೈ ಮೇಲೆತ್ತಿದರೆ ತಾಯಿ ಬಗ್ಗಿ(ಹತ್ತಿರವಾಗಿ) ಎತ್ತಿಕೊಳ್ಳುವಳು…

  [Reply]

 4. Raghavendra Narayana

  ಶ್ರೀ ಗುರುಭ್ಯೋ ನಮಃ
  .
  ಇದೇ ರೀತಿ ರಾಮನ ಬಗ್ಗೆ ಬರೆದರೆ ಎರಡೂ ಸಾಲುಗಳಲ್ಲಿ ಏನೇನು ಬದಲಾಗಬಹುದೆ೦ಬ ಕೌತುಕ….
  .
  ಕುರಿಯಾಗಬೇಕು ಗುರುವೆ೦ಬ ಕುರುಬನಿರಲು. ಕರೆದುಕೊ೦ಡು ಹೋದಲ್ಲಿ ತೋರಿಸದಲ್ಲಿ ತಿ೦ದು ಉ೦ಡು ಮಲಗುವುದಷ್ಟೆ ಕೆಲಸ, ಶ್ರಮವೇನು.
  ಸಹಸ್ರ ಸಾಧನೆಗಳೆ೦ಬ ಅಸಹಜತೆ ಏಕೆ, ಸಹಜ ಬದುಕಿನೊ೦ದಿಗೆ ಸರಳ ತತ್ವದೊಡನೆ ಸತತ ಕ್ರೀಡಿಸುವ.
  ಆಧುನಿಕ ಸಮಾಜದ ವ್ಯವಸ್ಥೆ ನಮ್ಮನ್ನು ಕುರಿಯಾಗಿ ಮಾಡುತಿದ್ದೆಯೆ? – ಒ೦ದು ಅರ್ಥದಲ್ಲಿ ಸ೦ತೋಷವೆ – ಸರಿಯಾದ ಕುರುಬನನ್ನು ಹುಡುಕಿ – ಸದಾ ಅವನ ಕಾಲ ಬಳಿಯೇ ಸುಳಿಯುವ – ಕುರಿಯ ಕೆಲಸ ಸರಿ ಮಾಡಿದರೆ – ಆದಿ ಕಿರಾತಕ ಶಿವನನ್ನು ಸೇರಬಹುದು ಕುರುಬನೊಡನೆ ಪ್ರತಿನಿತ್ಯ ಏಕೆ೦ದರೆ ಈ ಕುರುಬನ ಮನೆ ಅದುವೆ.
  .
  ಕಾಲಿಗು ಕಾಲಕ್ಕು ಸ೦ಬ೦ಧವಿದೆಯೆ?
  .
  ಗುರಿಯನ್ನು ಸೇರಲು ಹೊರಟ ಗುರುವಿನ ನಾವೆ, ಲ೦ಕೆಯಿ೦ದ ಅಯೋಧ್ಯಗೆ ಹೊರಟ ಪುಷ್ಪಕವಿಮಾನದ ಹಾಗೆ, ರಾವಣನನ್ನು ವಧಿಸಿ ರಾಮನೊಡ ಹೊರಟಿದೆ ಸವಾರಿ……
  .
  ಶ್ರೀ ಗುರುಭ್ಯೋ ನಮಃ

  [Reply]

 5. Raghavendra Narayana

  Unlike many other articles of Samsthana, this has few things which requires our mind to apply to understand more, it pauses us at many places.
  .
  Samsthana articles are always been free flow of pure water as Alakaananda river near Badari.

  [Reply]

 6. Raghavendra Narayana

  ಕವಿ ಎಲ್ಲಿಹಿರೊ, ಚಿತ್ರಗಾರ ಎಲ್ಲಿಹಿರೊ, ಎತ್ತ ಸುತ್ತುವಿರೋ- ಇತ್ತ ಕಾಣಿರೊ
  [ “ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…
  ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…
  ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…
  ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…” ]
  .
  .
  ಪ್ರತಿ ಜೀವಿಯ ಸೂಕ್ಷವಾಗಿರುವ ಮೋಡ ಮುಚ್ಚಿರುವ ಆಸೆ ಇದೇ ಅಲ್ಲವೆ?
  [ “ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?
  ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?
  ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ ‘ಸ್ವರಾಟ್’ ಆಗಲೆಂಬ ಆಶಯವಿದ್ದಿತು..” ]

  [Reply]

 7. Anuradha Parvathi

  We need both type of people.

  [Reply]

 8. Sharada Jayagovind

  Samsthana , Vishwamithra means ‘ friend of the Universe”… What is the meaning of the word Vashishta?

  If Vishwamithra symbolises the world( people ) does Vashishta symbolise the world of Athma?

  “Balli saaruva Jeevagala aatha thannathe maaduvudu nischayavallave? ” the thought beautifully captures the Sadhguru!

  Hareraama

  [Reply]

  Sri Samsthana Reply:

  ವಸಿಷ್ಠ : ಕರಣ-ಕಲೇವರಗಳನ್ನು ವಶದಲ್ಲಿರಿಸಿಕೊಳ್ಳುವರಲ್ಲಿ ಶ್ರೇಷ್ಠ…

  [Reply]

 9. shobha lakshmi

  ಸಮ್ಸ್ಥಾನ… ಈ ಲೇಖನಲ್ಲಿ .ತು೦ಬ ಗುರುತ್ವ ಇದ್ದು…ಬೇಗ ಜೀರ್ಣ ಆವುತ್ತಿಲ್ಲೆ…೪ ಸಲ ಓದಿದೆ…ಈಗ ರಕ್ತಕ್ಕೆ ಸೇರುತ್ತಿದ್ದು…ಇನ್ನೊ೦ದೆರಡು ಬಾರಿ ಓದಿರೆ ಮನಸು ಹ್ರುದಯಲ್ಲಿ ತು೦ಬುಗಲ್ಲದಾ?

  [Reply]

  Sri Samsthana Reply:

  ತುಂಬಲಿ…

  [Reply]

 10. sriharsha.jois

  ಗುರುದೇವಾ….

  ಏನೆಂದು ಬರೆಯಲಿ…?
  “ಎತ್ತರ”ದ “ಅಡಿ”ಗಳಲಿ..
  ಶರಣೆಂದು ಶಿರವಿಟ್ಟೆವು ನಾವು..
  ಮುಂದಿನದು ಅಂತರಾಳದನುಭವ ನಮ್ಮದು..
  ಏನೊಂದೂ ಬರೆಯಲಾರೆ..
  ಬರೆಯಲೂ ಬರದೆನಗೆ…
  ಭಾವದುಂಬಿಹುದು ಅರ್ಪಿಸಿಕೋ ತಂದೇ….

  [Reply]

 11. ಜಗದೀಶ್ ಬಿ. ಆರ್.

  ಭಾವಬಲದಿಂದ ನಮ್ಮೆಲ್ಲರ ಅಂತ:ಪ್ರಪಂಚದಲ್ಲಿ ಬೆಳಗುತ್ತಿರುವ ಗುರುಗಳ ಚರಣಕಮಲಗಳಿಗೆ ಅನಂತ ಪ್ರಣಾಮಗಳು.

  [Reply]

 12. Mohan Bhaskar

  ಇದು ಅಮೃತ ವಾಣೀ….. ಜೀವ ತು೦ಬಿ ಬ೦ದ ಅನುಭವ….
  ಓದುತ್ತ… ಓದುತ್ತ… ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎ೦ಬುದು ನಮ್ಮ ಹೊಣೆ, ಪ್ರತಿಕ್ರಿಯಿಸಲಾರೆ..

  ಪ್ರಣಾಮಗಳು – ಮೋಹನ ಭಾಸ್ಕರ

  [Reply]

 13. mamata hegde

  Hare Rama Gurugale.

  Idu nanu HareRaamadalli bareta ippa modalane baraha…Nijvaglu jeevana sartaka kanta iddu… Manassalli este novu iddru ondsala HareRaama nodidre eno ontara shakti battu.dinkke ondsala adru Hareraama noddiddre eno kalkandang annistu.Istu dina HareRaama nodidnille heli bejaru agtu.

  Sada HareRaamadalli bappa nimma.. sandeshagalannu nanna jeevanadalli alavadiskamba shakti barli heli harsi…

  [Reply]

 14. Sri Samsthana

  ಓದುವ ನಿನ್ನ ತುಡಿತಕ್ಕಿಂತ ಬರೆಯುವ ನಮ್ಮ ತುಡಿತ ಖಂಡಿತವಾಗಿಯೂ ಕಡಿಮೆಯಲ್ಲ..

  ಕಾಲದ ಅನುಕೂಲಕ್ಕಾಗಿ ಕಾಯುತ್ತಿರುವೆವು..

  [Reply]

Leave a Reply

Highslide for Wordpress Plugin