LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸತ್ಕಾರದ ಸನ್ನಾಹ

Author: ; Published On: ಮಂಗಳವಾರ, ಜನವರಿ 25th, 2011;

Switch to language: ಕನ್ನಡ | English | हिंदी         Shortlink:

ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!
ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..
ಬಯಕೆಗಳನ್ನು ‘ವಶ’ದಲ್ಲಿರಿಸಿಕೊಂಡು ‘ವಶಿ’ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ ‘ವಶಿಷ್ಠ’ರಿಗೆ ಒಲಿದು ಬಂದವಳು..
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,’ಎಂದೂ ದೂರವಾಗಲಾರೆ’ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!

ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ ವಸಿಷ್ಠಾಶ್ರಮವನ್ನು ತನ್ನ ಸಾನ್ನಿಧ್ಯಮಾತ್ರದಿಂದಲೇ ಮತ್ತಷ್ಟು ಪವಿತ್ರಗೊಳಿಸುತ್ತಾ,
ಚಿನ್ನಕ್ಕೆ ಪುಟಕೊಟ್ಟಂತೆ, ಸಹಜಶುದ್ಧನಾದ ತನ್ನ ಕಂದನ ಪುಟ್ಟ ತನುವನ್ನು ಪರಮವಾತ್ಸಲ್ಯದಿಂದ ಮತ್ತೆ ಮತ್ತೆ ನೆಕ್ಕಿ ನೆಕ್ಕಿ,ಮತ್ತಷ್ಟು ಶುಚಿಗೊಳಿಸುತ್ತಿದ್ದ ಶಬಲೆಯ ಕಿವಿಗಳಲ್ಲಿ ಅನುರಣಿಸಿತು ‘ಏಹಿ ಏಹಿ ಶಬಲೇ’ ಎನ್ನುವ ಪ್ರೇಮದೊಡೆಯನ ಕರೆ..
ಶಬಲೆಗೆ ತನ್ನ ಕರುವೆಂತೋ ವಸಿಷ್ಠರ ಕರೆಯೂ ಅಂತೆಯೇ..!
ಮುದ್ದು ಕರುವಿನಿಂದ ಮಮತೆಯ ಕರೆಯೆಡೆಗೆ ಧಾವಿಸಿದಳಾಕೆ..

ವಾತ್ಸಲ್ಯವನ್ನು ಹರಿಸುವುದರಲ್ಲಿ ಶಬಲೆಯ ಕೆಚ್ಚಲೊಡನೆ ಸ್ಪರ್ಧಿಸುವ ತನ್ನ ಅಮೃತಕರಗಳಿಂದ ಆಕೆಯ ಮೈದಡವಿ ನುಡಿದರು ವಸಿಷ್ಠರು..

” ಶಬಲೇ ! ಚಕ್ರವರ್ತಿಯಾದ ಕೌಶಿಕನನ್ನೂ, ಆತನ ಅನಂತ ಪರಿವಾರವನ್ನೂ ಸತ್ಕರಿಸಬಯಸಿದ್ದೇನೆ..ಜೀವರಾಶಿಗಳನ್ನು ತೃಪ್ತಿಪಡಿಸುವುದರಲ್ಲಿಯೇ ಪರಮತೃಪ್ತಿಯನ್ನು ಕಾಣುವವಳಲ್ಲವೇ ನೀನು ?ಜಗದ ಹಸಿವಿಗಿಂತ ನಿನ್ನ ಹಾಲು ದೊಡ್ಡದೆಂಬುದು ಇಂದು ಪ್ರಕಟವಾಗಲಿ..ಕೌಶಿಕನು ಇಂದು ನಿನ್ನ ಕರುವಾಗಲಿ..ಸಾಗರ ಸದೃಶವಾದ ಈ ಸೇನಾಸ್ತೋಮದಲ್ಲಿ ಯಾರು ಯಾರು ಯಾವ ಯಾವ ಬಗೆಯ ಭಕ್ಷ್ಯ- ಭೋಜ್ಯಗಳನ್ನು, ಲೇಹ್ಯ-ಚೋಷ್ಯಗಳನ್ನು, ಖಾದ್ಯ-ಪೇಯಗಳನ್ನು ಬಯಸುವರೋ, ಅದೆಲ್ಲವನ್ನೂ ಅವರವರಿಗೆ ಶಾಶ್ವತ ತೃಪ್ತಿಯಾಗುವಷ್ಟು ಉಣಬಡಿಸಬೇಕು ನೀನು..
ಕೇವಲ ಕ್ಷೀರವನ್ನಲ್ಲ,ಕಾಮನೆಗಳನ್ನೇ ವರ್ಷಿಸಬೇಕು ನೀನಿಂದು..! ”

‘ಬೇಕೇ?’ ಎಂಬಂತೆ ಮುನಿಯ ಮೊಗವನ್ನೊಮ್ಮೆ ವೀಕ್ಷಿಸಿದಳು ಶಬಲೆ..
‘ನನಗಾಗಿ’ ಒಂದೇ ಪದದಲ್ಲಿ ಉತ್ತರಿಸಿದರು ವಸಿಷ್ಠರು..
ವಸಿಷ್ಠರಿಗಾಗಿಯೆಂದಾದರೆ ಕ್ಷೀರಧಾರೆಯೇನು, ಜೀವಧಾರೆಯನ್ನೇ ಹರಿಸಬಲ್ಲ ಶಬಲೆಯು ಸಿದ್ಧಳಾದಳು, ಕಂಡು ಕೇಳರಿಯದ ಕೌತುಕದ ಲೋಕವೊಂದಕ್ಕೆ ಕೌಶಿಕನನ್ನು ಕರೆದೊಯ್ಯಲು..

ಟಿಪ್ಪಣಿ :-
ಆಹಾರಗಳಲ್ಲಿ ಆರು ಬಗೆ..
ಆಹಾರಂ ಷಡ್ವಿಧಂ ಚೂಷ್ಯಮ್ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷ್ಯಂ ತಥಾ ಚರ್ವ್ಯಂ ಗುರು ವಿದ್ಯಾತ್ ಯಥೋತ್ತರಂ ||

ಆಹಾರವು ಚೂಷ್ಯ, ಪೇಯ, ಲೇಹ್ಯ, ಭೋಜ್ಯ, ಭಕ್ಷ್ಯ, ಚರ್ವ್ಯ ಎಂಬುದಾಗಿ ಆರು ವಿಧ..
ಇವುಗಳಲ್ಲಿ ಮುಂದು-ಮುಂದಿನವು ಹಿಂದು-ಹಿಂದಿನದಕ್ಕಿಂತ ಗುರುಸ್ವಭಾವದವು..
ಚೂಷ್ಯ=ಹೀರಿ ಕುಡಿಯುವ ರಸವುಳ್ಳ ಆಹಾರವಸ್ತು, ಕಬ್ಬು,ಮೊದಲಾದವು..
ಪೇಯ=ನೀರು,ಪಾನಕ, ಮೊದಲಾದ ಕುಡಿಯುವ ವಸ್ತುಗಳು.
ಲೇಹ್ಯ=ನಾಲಗೆಯಿಂದ ನೆಕ್ಕಿ ರಸಾಸ್ವಾದನೆ ಮಾಡುವ ಆಹಾರ, ಚಟ್ನಿ,ಉಪ್ಪಿನಕಾಯಿ ಮೊದಲಾದವು.
ಭೋಜ್ಯ=ಊಟಮಾಡುವ ಅನ್ನ ಮೊದಲಾದ ಆಹಾರವಸ್ತುಗಳು.ಇದಕ್ಕೆ ಖಾದ್ಯ ಎನ್ನುವ ರೂಢಿಯು ಇದೆ.
ಭಕ್ಷ್ಯ=ತಿಂಡಿತಿನಿಸು ಮೊದಲಾದ ಆಹಾರ ಭಕ್ಷ್ಯ, ಗಟ್ಟಿಯಾದ ಆಹಾರವಸ್ತು.. ಸಿಹಿತಿಂಡಿ, ರೊಟ್ಟಿ, ಕಡುಬು ಮೊದಲಾದವು..
ಚರ್ವ್ಯ=ಹಲ್ಲಿನಿಂದ ಜಗಿದು ತಿನ್ನುವ ಆಹಾರವಸ್ತುಗಳು.. ಅವಲಕ್ಕಿ, ಪುರಿ, ಹುರಿಗಡಲೆ ಮೊದಲಾದವುಗಳು..

26 Responses to ಸತ್ಕಾರದ ಸನ್ನಾಹ

 1. Raghavendra Narayana

  ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನು ಬಯಕೆಗಳನ್ನು ವಶದಲ್ಲಿರಿಸಿಕೊ೦ಡ ವಶಿಷ್ಠರಲ್ಲಿ….?
  ಒಳಿತೆಲ್ಲವೂ ಉನ್ನತಿಗಾಗಿ ಉತ್ತಮರಲ್ಲೇ ಇರುವುದೇ..? ಕದಿಯುವ ಮನಸಾಗುವುದು ಸಹಜ..? ಉತ್ತಮವಾದುದನ್ನು ಪಡೆಯಬೇಕೆ೦ಬ ಆಸೆ ಸಹಜ, ಕಸಿದುಕೊಳ್ಳಬೇಕೆ೦ಬ ದುರಾಸೆ ಅಸಹಜ? ಹ೦ಚಿಕೊ೦ಡೇ ತಿನ್ನುತ್ತಿದ್ದ ವಶಿಷ್ಠರಲ್ಲಿ ಕೌಶಿಕನಿಗೆ ಅಸೂಯೆ ಹುಟ್ಟಿದೇಕೆ? ಅಸಹ್ಯವಾಗುವಷ್ಟು ಹೋರಡಿದ್ದೇಕೆ? ಕೌಶಿಕ ಆಕರ್ಷಿತನಾಗಿದ್ದು ಯಾವುದಕ್ಕೆ? ಜಗತ್ತಿನ ಆಕರ್ಷಣೆಗಳೆಲ್ಲದರ ಸೆಳೆತ ಮೊರೆತ ಕೊರೆತ ಹರಿ ಅದಾವ ಸಾಗರವ ಸೇರುತ್ತದೆ – ಅದೆಲ್ಲಿ ಅದ್ವೈತವಾಗುತ್ತದೆ?
  .
  ಶ್ರೀ ಗುರುಭ್ಯೋ ನಮಃ

  [Reply]

 2. Anuradha Parvathi

  ’’ಬೇಕೇ?’ ಎಂಬಂತೆ ಶಬಲೆ ಮುನಿಯ ಮೊಗವನ್ನೊಮ್ಮೆ ನೋಡಿದಳು’. ಶಬಲೆಗೂ ಮುಂದೆ ಆಗುವ ಘಟಣೆಗಳ (ಕೌಶಿಕನಿಂದ) ಬಗ್ಗೆ ಸೂಚನೆ ಸಿಕ್ಕಿರಬಹುದೆ?

  [Reply]

 3. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಏನೂ ಅರ್ಥವಾಗುತ್ತಾ ಇಲ್ಲಾ…..

  [Reply]

  Raghavendra Narayana Reply:

  Hareraama.
  .
  Just in case if you have not read earlier articles on the same topic, you may check out last four articles from below link..
  http://hareraama.in/category/blog/raajya/
  .
  Relevant Pravachana..
  http://hareraama.in/av/audio/chaturmasya10/chaturmasya-sandesha/aase/
  .
  Shri Gurubhyo Namaha

  [Reply]

  Raghavendra Narayana Reply:

  ಹರೇರಾಮ,
  ಕಳೆದ ನಾಲ್ಕು ರಾಜ್ಯ ಬ್ಲಾಗ್ಸ್ ಇದೇ ವಿಷಯಕ್ಕೆ ಸ೦ಬಧಿಸಿದ್ದು, ಓದಲು ಮಿಸ್ ಆಗಿದ್ದರೆ ಹಿ೦ದಿನ ರಾಜ್ಯ ಬ್ಲಾಗ್ಸ್-ಗಳನ್ನು ಓದಬಹುದು.
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ವಿಚಿತ್ರವೆಂದರೆ ಅದ್ಯಾವ ಶಕ್ತಿಯ ಸೆಳೆತವೋ, ದೈವ ಸಂಕಲ್ಪವೋ ಎಂಬಂತೆ ಈ ವಿಷಯ ಪ್ರಾರಂಭವಾದ ಅದೇ ದಿನ ಹರೇರಾಮ ಎಂಬ ನಾಟಕ ರಂಗದಲ್ಲಿ ಈ ಪಾತ್ರದ ಪ್ರವೇಶವಾಯಿತು.

  [Reply]

 4. chs bhat

  ಹರೇ ರಾಮ. ಮುದ್ದಿನ ಕರುವನ್ನು ಮತ್ತೆ ಮತ್ತೆ ನೆಕ್ಕಿ ಮುದ್ದಿಸುವ ಶಬಲೆಯ ಚಿತ್ರ ಕಣ್ಣ ಮುಂದೆ ಕಟ್ಟಿತು. ಹಾಗೆಯೇ ವಿವಿಧ ಸಂಭಾವ್ಯ ಭಕ್ಷ ಭೋಜ್ಯಗಳ ಚಿತ್ರಗಳೂ. ಗುರುಗಳ ವಿವರಣೆಯಲ್ಲಿ 4D effect ಇದೆ. ಸಂಸನಾಭ.

  [Reply]

  Raghavendra Narayana Reply:

  Yes.
  Also “RD” effect is there. “Real Dimension”.
  .
  Shri Gurubhyo Namaha

  [Reply]

 5. gopalakrishna pakalakunja

  ಶ್ರೀ ಸಂಸ್ಥಾನ ಎನಗೊಂದು ಸಣ್ಣ ಜಿಜ್ನಾಸೆ…ಕಳ್ಳತನದ ಸಂಪಾದನೆಯ ಮನೆಯ ಊಟ ಉಂಡ ಸಂತಂಗೆ ದುಷ್ಟಾನ್ನದ ಪರಿಣಾಮವಾಗಿ ಬೆಳ್ಲಿ ಲೋಟ ಕದ್ದುಕೊಂಬ ಮನಸು ಬಂದ ಕಥೆ ಪ್ರವಚನಲ್ಲಿ ಕೇಳಿದೆ,…ಆದರೆ ಇಲ್ಲಿ ಮುನಿಪುಂಗವ ಶಬಲೆಯ ಮೂಲುಕ ಸೂರ್ಯ ವಂಶದ ಸಂಸ್ಕಾರಯುಕ್ತ ರಾಜಂಗೆ ಮತ್ತೆ ಅವನ ಪರಿವಾರಕ್ಕೆ ಅಮೃತ ತುಲ್ಯ ಅನ್ನದಾನ ಮಾಡಿದ್ದು…ಎಂತಕೆ
  ಅದು ಅನಂತರದ ಅವನ ಕೃತ್ಯಕ್ಕೆ ಆ ಮನಸ್ಥಿತಿ ಯ ಉಂಟು ಮಾಡಿತ್ತು ಸಂಸ್ಥಾನ ?

  [Reply]

 6. shobha lakshmi

  ವಾತ್ಸಲ್ಯವನ್ನು ಹರಿಸುವಲ್ಲಿ ಶಬಲೆಯ ಕೆಚ್ಚಲೊಳಗೆ ಸ್ಪರ್ಧಿಸುವ ತನ್ನ ಅಮ್ರುತ ಹಸ್ತದಿ೦ದ ಶಬಲೆಯ ಮೈ ದಡವಿದರು ವಸಿಷ್ಟರು..ಸು೦ದರ ಉಪಮೆ..
  ವಸಿಷ್ಟರು ವಿಶಿಷ್ಟ ಗುರುಗಳು..
  ತು೦ಬ ಉನ್ನತ ಮಟ್ಟದ ವಾಕ್ಯಸ೦ಯೋಜನೆ….ಇಷ್ಟ ಆತು…ರಾಜ್ಯ ಬ್ಲಾಗ್ ಲಿ ಈ ಲೇಖನದ ಮು೦ದಿನ ಕ೦ತಿನ ನಿರೀಕ್ಷೆಲಿದ್ದೆಯ……

  [Reply]

  Raghavendra Narayana Reply:

  ಕ೦ತೆ ಕ೦ತೆಗಳ ಭಾವ ಭಕ್ತಿ ಜ್ಞಾನ ಸಿಗಲಿ.. – ಮು೦ದಿನ ಕ೦ತಿನ ನೀರಿಕ್ಷೆಯಲ್ಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 7. sriharsha.jois

  ಗುರು ಬಯಸಿದ್ದನ್ನು ನಾವ್ ಕೊಡದಿರೆ ..
  ನಾವು ಗುರುವಿನಿಂದ ಪಡೆದಿದ್ದರಿಂದೇನುಪಯೋಗ..?
  ಕಲಿಯೋಣ ಶಬಲೆಯಿಂ ಗುರುಸೇವೆ ಹೇಗೆಂದು..
  ಗುರುಕರುಣೆಯ ಹಂಬಲಿಸುವ ನಾವು..
  ಗುರುಸೇವೆಯನ್ನೂ ಹಂಬಲಿಸಲೇನಡ್ಡಿ ಗೆಳೆಯಾ..?

  ಇನ್ನೊಂದು ವಿಷಯ ಬರೆಯುವಾಸೆ..
  ಇಲ್ಲಿರುವ ಅನುಬಂಧ..?
  ಗುರುವೇ ಹೇಳಿದಹಾಗೆ ತಾಯಿ-ಮಗುವಿನ ಬಂಧ..
  ಜೊತೆಗೆ ಶಬಲೆ ವಸಿಷ್ಟರ ಸೇವೆಗಾಗಿ ಬಂದವಳು, ಅಂದರೆ ಯಜಮಾನನ ಕರೆಯದು..
  ತಂದೆಯ ರೂಪವೂ ಹೌದು..

  ಓದಿದ ಮೇಲೆ ಮನ ತಿಳಿದಿದ್ದು ಸಕಲವೂ ಗುರುವೇ….

  ಮನದ ಭಾವ ಉಳಿದವರಿಗೆ ಹೇಗೋ..?

  [Reply]

  ಮಂಗ್ಳೂರ ಮಾಣಿ... Reply:

  ನಮಗೂ ಹಾಗೇ ಅಣ್ಣಾ. ಗುರು ತಂದೆಯೂ ಹೌದು ತಾಯಿಯೂ ಹೌದು.

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹೌದು. ಅದೊಂದು ಅಲೌಕಿಕವಾದ ಸಂಬಂಧ. ಎಲ್ಲ ಲೌಕಿಕವಾದ ಸಂಬಂಧಗಳಿಂದ ಜಾಸ್ತಿ ಹತ್ತಿರ.

  [Reply]

  Raghavendra Narayana Reply:

  ಅದ್ಭುತ.
  .
  ಸರ್ವ೦ ಗುರುಮಯ೦ ಈ ಲೋಕ೦
  .
  “ಗುರುಕರುಣೆಯ ಹ೦ಬಲಿಸುವ ನಾವು. ಗುರುಸೇವೆಯನ್ನೂ ಹ೦ಬಲಿಸಲೇನಡ್ಡಿ” – ಅತ್ಯದ್ಭುತ. ಚಿ೦ತನೆಯ ವಿಷಯವಿದು. ಅಥವಾ ಯಾವ ಚಿ೦ತನೆ ಇಲ್ಲದೆ ಚಿ೦ತೆ ಇಲ್ಲದೆ ಸೇವೆ ಮಾಡುವುದೇ ಉತ್ತಮ?
  .
  ಶ್ರೀ ಗುರುಭ್ಯೋ ನಮಃ

  [Reply]

 8. maruvala narayana

  ಸೂಯ೯ನ ಸೆಳೆತಕ್ಕೆ ಒಳಗಾಗಿ ಸತತ ಆತನ್ ಸುತ್ತಲೂ ಸುತ್ತುತ್ತಿರುವ ಎಂದೂ ಆತನ ಪ್ರಭಾವ ವಲಯವನ್ನು ಬಿಟ್ತು ದೂರ ಹೋಗದ ಧರಣಿಯಂತೆ ತೇಜೋರಾಶಿಯೇ ಆದ ‘ಗುರುಗಳ’ ಪ್ರೀತಿಯ ಸೆಳೆತಕ್ಕೆ ಒಳಗಾದವರು ನಾವು.

  [Reply]

  Raghavendra Narayana Reply:

  ಅದ್ಭುತ ಪ್ರಭಾವಳಿ.
  .
  ಶ್ರೀ ಗುರುಭ್ಯೋ ನಮಃ

  [Reply]

 9. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ವಸಿಷ್ಟರ ಸುತ್ತ ಸುತ್ತುತ್ತಿರುವ ನಮ್ಮೊಳಗಿರುವ ಸಾತ್ವಿಕ ಗುಣಗಳನ್ನು “ಶಬಲೇ” ಎಂದೂ; ರಾಜಸ, ತಾಮಸ ಗುಣಗಳನ್ನು “ಕೌಶಿಕ ಮತ್ತು ಅವನ ಪರಿವಾರ” ಎಂದೂ ಕರೆದಿರಬಹುದೇ?

  [Reply]

 10. Raghavendra Narayana

  ತಾಯಿಯ ಸಹಜ ಕ೦ಪನ
  .
  ಶ್ರೀ ಗುರುಭ್ಯೋ ನಮಃ

  [Reply]

 11. Raghavendra Narayana

  The whole world is into the task of learning “How to love”. The essence of existence of the world is “Learning to Love”. The whole Love is to learn to love that one self i.e. self. The worlds attaches to the Love to detach completely from the world. True Love is True Self.
  .
  Shri Gurubhyo Namaha

  [Reply]

  Jayashree Neeramoole Reply:

  Hare Rama,

  The easy way to do this is “Love our Guru”. Slowly we realize that same guru we are loving is inside us and doing all the tasks within us and around us. Later on we can make out we are none other than our Guru which is Advaita.

  [Reply]

 12. Raghavendra Narayana

  It is the same Love, we love Ocean, we love Beach, we love Breeze, we love Moon, we love Morning Evening, we love People, we love God, we love Concepts, it is the same Love, as long as there is no wrong intention – it is pure love, it is true love, it is that same love, it is that one Love. God is nothing but pure Love.
  .
  The Sadhane, Nirvana, Moksha is all nothing but pure Love.
  .
  Shri Gurubhyo Namaha

  [Reply]

  Jayashree Neeramoole Reply:

  Hare Rama,

  Exactly right. In order to reach there and stay in that state permanently we need ‘a helping hand’ or ‘a best guide’; that is “our Guru”. Once we taste ‘Amruta’ then all the other things will become cheaper in front of that.

  [Reply]

 13. Gk Bhat

  hare raama

  [Reply]

 14. Siddarameshwara HN

  ಹರೇ ರಾಮ

  ನಿಜವಾಗಿಯೂ ಯಾವ ಜನ್ಮದ ಪುಣ್ಯವೋ ನಿಮ್ಮಂತಾ ಗುರುಗಳ ದರ್ಶನ ಭಾಗ್ಯಹುಬ್ಬಳ್ಳಿಯ ರಾಮಕಥಾದಲ್ಲಿ ನಮ್ಮದಾಯಿತು ದಿನರಾತ್ರಿ ಬೆಳಗ್ಗೆ ರಾಮ ನಾಮ ಸ್ಮರಣೆ ನಮ್ಮದಾಯಿತು

  ನಿಮ್ಮ ದರ್ಶನಕ್ಕಾಗಿ ಶಬರಿಯಂತೆ ನಿರೀಕ್ಷಣೆಯಲ್ಲಿರುವ
  ಪ್ರೊ:ಸಿದ್ದರಾಮೇಶ್ವರ
  ಬಿವಿಬಿತಾಂತ್ರಿಕ ಮಹಾವಿದ್ಯಾಲಯ ಹುಬ್ಬಳ್ಳಿ
  .

  [Reply]

Leave a Reply

Highslide for Wordpress Plugin