LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶಬಲೆ ಬಂದಳು..!

Author: ; Published On: ರವಿವಾರ, ದಶಂಬರ 19th, 2010;

Switch to language: ಕನ್ನಡ | English | हिंदी         Shortlink:

॥ಹರೇ ರಾಮ॥

ಕೆಲವೊಮ್ಮೆ ನಾವು ಸಾಮಾನ್ಯವೆಂದುಕೊಳ್ಳುವ ಘಟನೆಗಳು ಬದುಕಿನಲ್ಲಿ ಅಸಾಮಾನ್ಯವಾದ ಪರಿವರ್ತನೆಗಳನ್ನು ತಂದುಬಿಡುತ್ತವೆ…ದಿಗ್ವಿಜಯದ ಯಾತ್ರೆಯ ಮಾರ್ಗದಲ್ಲಿ ತಾನಾಗಿಯೇ ಪ್ರಾಪ್ತವಾದ ವಸಿಷ್ಠಾಶ್ರಮದ ಸಹಜ ಭೇಟಿಯು ತನ್ನ ಬದುಕಿನಲ್ಲಿ ಉಂಟುಮಾಡಬಹುದಾದ ಮಹತ್ತರ ಪರಿವರ್ತನೆಗಳನ್ನು ಕೌಶಿಕನು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ..ಬೇರೆಡೆಗೆ ಸಾಮಾನ್ಯವೆಂದು ಕರೆಸಿಕೊಳ್ಳುವ ಸಂಗತಿಗಳೂ ಇಲ್ಲಿ ವಿಶೇಷವಾಗಿಯೇ ತೋರತೊಡಗಿದವು ಆತನಿಗೆ..!

ಬ್ರಹ್ಮರ್ಷಿಯ ಅಪೂರ್ವ ದರ್ಶನ, ಆತ್ಮೀಯ ಕುಶಲಪ್ರಶ್ನೆಗಳ ವಿನಿಮಯದ ಬಳಿಕ ಸಹಜ ಸಂಭಾಷಣೆಯು ಆರಂಭವಾಯಿತು..
‘ಸಂಭಾಷಣೆಯೆಂಬುದು ಜೀವಗಳ ನಡುವೆ ನಡೆಯುವ ಭಾವವಿನಿಮಯ’
‘ಜೀವಗಳು ಒಂದನ್ನೊಂದು ಅರಿಯಲು-ಒಂದಕ್ಕೊಂದು ಬೆರೆಯಲು ದೇವನಿತ್ತ ಅಪೂರ್ವ ಸಾಧನವದು’

ಇತ್ತ ಕೌಶಿಕನು ವಸಿಷ್ಠರೊಡನೆ ಸಂಭಾಷಣೆ ನಡೆಸುತ್ತಿದ್ದಂತೆಯೇ ಅತ್ತ  ಕೌಶಿಕನೊಳಗಿನ ಬಿಂದುಚೇತನವು  ಆತನಿಗೆ ಗೊತ್ತೇ ಆಗದಂತೆ ವಸಿಷ್ಠರೊಳಗಿನ ಸಿಂಧುಚೇತನದೊಂದಿಗೆ ಬೆರೆತು ಸಂಭಾಷಣೆ ನಡೆಸತೊಡಗಿತು..ತನ್ನನ್ನು ‘ರಾಜಸ-ಬಂಧ’ ಗಳಿಂದ’  ‘ರಾಜ್ಯ-ಸಂಬಂಧ’ಗಳಿಂದ ಬಿಡಿಸೆಂದು ಬೇಡಿತು…ನನ್ನನ್ನು ನಿನ್ನ ಹಾಗೆಯೇ ಮಾಡೆಂದಿತು…

ವಸಿಷ್ಠರೂ ಕೌಶಿಕನೊಳಗಿನ ಜೀವದ ದನಿಯನ್ನು ಆಲಿಸಿದರು… ಅರ್ಥೈಸಿದರು…ಆತನನ್ನು ವಿಶ್ವಚೇತನ-ವಿಶ್ವಾಮಿತ್ರನನ್ನಾಗಿಸಲು ಸಂಕಲ್ಪಿಸಿದರು..
ದೈವವದಕ್ಕೆ ‘ತಥಾಸ್ತು’ ಎಂದಿತು…ಕೌಶಿಕನ ಒಳಗೂ-ಹೊರಗೂ ಆ ಕುರಿತಾದ ಸಿದ್ಧತೆಗಳು ಅರಂಭವಾದವು…

ಇದ್ಯಾವುದರ ಪರಿವೆಯೇ ಇಲ್ಲದ ಕೌಶಿಕನು ವಸಿಷ್ಠರೊಡನೆ ಮಾತುಕಥೆ ನಡೆಸುತ್ತಲೇ ಇದ್ದನು…ಮಹಾಮೇರುಗಳೀರ್ವರು ಮಾತಿಗೆ ಕುಳಿತರೆ ಕಾಲ-ದೇಶಗಳು ಮರೆಯುವುದು, ಮರೆಯಾಗುವುದು ಸಹಜ…ಸ್ವಾಭಾವಿಕವಾದ ಕುಶಲಪ್ರಶ್ನೆಯು ಸುದೀರ್ಘ-ಸ್ವರಸ-ಸಂಭಾಷಣೆಯಾಗಿ ಮಾರ್ಪಟ್ಟಿತು..

ಹೇಳಿಕೇಳಿ ಮಿತಭಾಷಿಗಳಾದ ವಸಿಷ್ಠರು ಅದೇಕೆ ಕೌಶಿಕನೊಡನೆ ಸುದೀರ್ಘ ಸಂಭಾಷಣೆ ನಡೆಸಿದರೋ..?
ಏನಿತ್ತೋ ಅವರ ಅಂತರಾಳದಲ್ಲಿ..?
ಮಾತುಕಥೆಯಲ್ಲಿ ಪ್ರಸ್ತಾಪವಾಗುತ್ತಿದ್ದ ವಿಷಯಗಳು ಅವರಿಗೆ ವಿಷಯವೇ ಅಗಿರಲಿಲ್ಲ..! ಅವರ ದೃಷ್ಟಿ ವಿಶ್ವಾಮಿತ್ರನ -ವಿಶ್ವದ ಭವಿಷ್ಯದಲ್ಲಿ ನೆಟ್ಟಿತ್ತು…

ದ್ವೀಪಾದನ್ಯಸ್ಮಾದಪಿ ಮಧ್ಯಾದಪಿ ಜಲನಿಧೇ: ದಿಶೋಪ್ಯಂತಾತ್|
ಆನೀಯ ಝಟಿತಿ ಘಟಯತಿ ವಿಧಿಃ ಅಭಿಮತಂ ಅಭಿಮುಖೀಭೂತ:||

ಯಾರು-ಯಾರನ್ನೋ ಎಲ್ಲಿಂದೆಲ್ಲಿಗೋ ಕರೆತಂದು, ಯಾರುಯಾರ ಜೊತೆಗೋ ಜೋಡಿಸಿ  ವಿಧಿ ಏನೇನೋ ಮಾಡುವನಂತೆ ..!!

ಎಲ್ಲಿಂದೆಲ್ಲಿಗೋ ಹೊರಟಿದ್ದ ಕೌಶಿಕನನ್ನು ಮಾರ್ಗಮಧ್ಯೆ  ವಿಧಿ ಸೆಳೆದು ತಂದು ವಸಿಷ್ಠರ ಮುಂದೆ ನಿಲ್ಲಿಸಿತ್ತು…
ಸಮಾಗಮವು ಸಾಮೀಪ್ಯದಲ್ಲಿ..
ಸಾಮೀಪ್ಯವು ಸಂಭಾಷಣೆಯಲ್ಲಿ…
ಸಂಭಾಷಣೆಯು ಪರಸ್ಪರ ಸಂಪ್ರೀತಿಯಲ್ಲಿ
ಸಂಪ್ರೀತಿಯು ಅತಿಶಯವಾದ ಸಂತೋಷದಲ್ಲಿ.. ಪರ್ಯವಸಾನಗೊಂಡಿತ್ತು..!!

ವಸಿಷ್ಠ-ಕೌಶಿಕರ ಮಧ್ಯೆ ಅತ್ತಿಂದಿತ್ತ-ಇತ್ತಿಂದತ್ತ ಹರಿದಾಡುತ್ತಿದ್ದ ಸಂತಸವು ಕೌಶಿಕನ ಸೇನೆಯೆಲ್ಲವನ್ನೂ ವ್ಯಾಪಿಸಹೊರಟಿರಬೇಕು..
ವಸಿಷ್ಠರ ಮನದಲ್ಲಿ ಮೂಡಿತೊಂದು ಅಪೇಕ್ಷೆ..ಅಸಾಮಾನ್ಯರ ಮನದಲಿ ಅಸಾಮಾನ್ಯವಾದ ಅಪೇಕ್ಷೆಗಳೇ ಮೂಡುತ್ತವೆ..
ವಸಿಷ್ಠರ ಬಯಕೆ ‘ಕೌಶಿಕನ ಸರ್ವಸೈನ್ಯದ ತೃಪ್ತಿ’
ಕನಸು-ಕಲ್ಪನೆಗಳಿಗೂ ನಿಲುಕದ, ದೇವತೆಗಳಿಗೂ ದುರ್ಲಭವಾದ, ತೃಪ್ತಿಯ ನಿಜವಾದ ರೂಪವನ್ನು  ಪರಿಚಯಿಸಬಲ್ಲ ಆತಿಥ್ಯವೊಂದನ್ನು ಕೌಶಿಕನಿಗೂ, ಆತನೊಡನೆ ಬಂದ ಜನರಾಶಿಗೆ ನೀಡಬಯಸಿದ  ವಸಿಷ್ಠರು ಸಂಭಾಷಣೆಯ ಕೊನೆಯಲ್ಲಿ ಹೀಗೆಂದರು..

“ಹೇ ಕೌಶಿಕ ! ಉಣುವ ತೃಪ್ತಿಗಿಂತ ಉಣಿಸುವ ತೃಪ್ತಿ ಹಿರಿದೆನ್ನುವರು..
ಬ್ರಹ್ಮಚರ್ಯ-ವಾನಪ್ರಸ್ಥ-ಸನ್ಯಾಸಗಳು ಉಣುವ ಆಶ್ರಮಗಳು..
ಉಣಿಸುವ ಆಶ್ರಮವೆಂದರೆ ಅದು ಗೃಹಸ್ಥಾಶ್ರಮವೊಂದೇ..!
ಅತಿಥಿ ಸತ್ಕಾರವೇ ಅಲ್ಲವೇ  ಈ ಆಶ್ರಮದ ಜೀವಾಳ ..?
ಇಂದು ನಾನಿತ್ತ ಕಂದ-ಮೂಲ-ಫಲಗಳನ್ನುಂಡು ತೃಪ್ತನಾಗಿರುವೆ ನೀನು..
ಆದರೆ ಉಣಿಸುವಲ್ಲಿ ನನಗಿನ್ನೂ ತೃಪ್ತಿಯಾಗಿಲ್ಲ…
ನಿನ್ನ ತೃಪ್ತಿಯನ್ನು ನೂರ್ಮಡಿಗೊಳಿಸಿ, ತನ್ಮೂಲಕ ನನ್ನ ತೃಪ್ತಿಯನ್ನು ಸಾಸಿರಮಡಿಗೊಳಿಸಿಕೊಳ್ಳುವ ಹ೦ಬಲ ನನ್ನದು..
ಆದುದರಿ೦ದ ಇತ್ತ ಕರೆ ನಿನ್ನ ಸೇನೆಯನ್ನು..
ಹೇ ಮಹಾಬಲನೇ ! ನಿನ್ನ ಬಲವೆಲ್ಲವನ್ನೂ ಆತಿಥ್ಯದ ಮೂಲಕ ತೃಪ್ತಿಪಡಿಸಬೇಕು ನಾನಿಂದು”

ಮುನಿಯ ಮುಖದಲ್ಲಿ ನಗುವಿತ್ತು,ಆದರೆ ಮನದಲ್ಲಿ ಕರುಣವಿತ್ತು..!

ಅಚ್ಚರಿಗೊ೦ಡನು ಕೌಶಿಕ…
ತನ್ನ ಅಸ೦ಖ್ಯೇಯವಾದ ಸೇನೆಯನ್ನು ಆಶ್ರಮವೊ೦ದು ತೃಪ್ತಿಪಡಿಸಬಲ್ಲುದೇ..?
ಸಾಮಗ್ರಿಗಳೆಷ್ಟು ಬೇಕು..?
ಸಮಯವೆಷ್ಟು ಬೇಕು..?
ಸ್ಥಳವೆಷ್ಟು ಬೇಕು..?
ಅಡುಗೆಯವರೆಷ್ಟು ಬೇಕು..?
ಸಾಧ್ಯವೇ ಇಲ್ಲವೆನಿಸಿತು..!
ದೊಡ್ಡವರು! ಏನೋ ದೊಡ್ಡ ಮಾತಾಡಿ ಬಿಟ್ಟಿದ್ದಾರೆ..ಒಪ್ಪಿಕೊ೦ಡು ತಾನು ಅವರನ್ನು ಮುಜುಗರಕ್ಕೆ ಸಿಕ್ಕಿಸಬಾರದೆನಿಸಿತು..!
ಮಾರ್ನುಡಿದನು ಕೌಶಿಕ…

“ಹೇ ಗುರುವರನೇ! ಪರಿಗ್ರಹಕ್ಕೂ ಒಂದು ಮಿತಿಯಿರಬೇಕಲ್ಲವೆ..?
ಆಶ್ರಮವೊ೦ದು ಯಾವೆಲ್ಲ ಬಗೆಯ ಆತಿಥ್ಯಗಳನ್ನು ಮಾಡಬಹುದೋ, ಅವೆಲ್ಲವನ್ನು ನೀ ನೆರವೇರಿಸಿರುವೆ..
ನಿನ್ನ ಪ್ರಿಯ ವಾಕ್ಯಗಳು ಕಿವಿದುಂಬಿವೆ, ಮನ ಬೆಳಗಿವೆ..
ನಿನ್ನ ಸ೦ಸರ್ಗದಿ೦ದ ಪವಿತ್ರಗೊ೦ಡ ಆಶ್ರಮಜಲವು ಆಚಮನೀಯ-ಅಘ್ಯ೯-ಪಾದ್ಯಗಳ ರೂಪದಲ್ಲಿ ನನ್ನ ಮುಖ-ಹಸ್ತ-ಪಾದಗಳಲ್ಲಿ ಪವಿತ್ರತೆಯನ್ನು ತಂದಿವೆ..
ಈ ದೇವಧರೆಯಲ್ಲಿ ಬೆಳೆದ ಕ೦ದ-ಮೂಲ ಫಲಗಳು ನನ್ನುದರದ ಜನ್ಮ-ಜನ್ಮಾ೦ತರದ ಹಸಿವನ್ನೇ ನೀಗಿವೆ..
ಇವೆಲ್ಲಕ್ಕಿ೦ತ ಮಿಗಿಲಾದುದು ‘ಗುರುದರ್ಶನ’ ವೆ೦ಬ ಆತಿಥ್ಯ..
ಭಗವದ್ದರ್ಶನವು ನನ್ನ ಕಣ್ತು೦ಬಿದೆ… ಕಣ್ತೆರೆಸಿದೆ..
ನನಗಿನ್ನೇನು ಬೇಕು..?
ತಮ್ಮ ಅನುಗ್ರಹ ದೃಷ್ಟಿಯೊ೦ದಿದ್ದರೆ ಸಾಕೇ ಸಾಕು”

ಕೌಶಿಕನು ಬಯಸಿದ್ದು ವಸಿಷ್ಠರ ಪ್ರೀತಿ ತು೦ಬಿದ ನೋಟವನ್ನು ಮಾತ್ರ.. ಊಟವನ್ನಲ್ಲ..
ಆದರೆ ‘ಅದಾಗಲೇ ವಸಿಷ್ಠರ ಅನುಗ್ರಹ ದೃಷ್ಟಿ ತನ್ನನಾವರಿಸಿದೆ, ತನ್ನೊಳಗಿನ ಕಲ್ಮಷ- ವಿಷವನ್ನು ಹೊರಹಾಕಲು ಸನ್ನಿವೇಶವನ್ನು ನಿರ್ಮಿಸುತ್ತಿದೆ’ಎಂಬುದರ ಅರಿವು ಕೌಶಿಕನಿಗಿರಲಿಲ್ಲ…

ಕೆಲಸಮಯ ನಡೆಯಿತಲ್ಲಿ ಸಮುದ್ರಮಥನ …
ಸಂತರ್ಪಿಸುವೆನೆನುವ ಮುನಿ..
ಬೇಡ..ಬೇಡವೆನುವ ದೊರೆ..
ಬ್ರಾಹ್ಮದ ಅಮೃತವನ್ನು ಕೌಶಿಕನೊಳಗೆ ತುಂಬಲು ಕಾತರರಾಗಿದ್ದರು ವಸಿಷ್ಠರು ..
ಬೆಳಕು ಒಳಗೆ ಬರುವೆನೆಂದರೆ ಕತ್ತಲೆಗೆ ಭಯವಾಗದೇ..?
ವಸಿಷ್ಠರು ಕಾಮಧೇನುವಿನಿಂದ ಹರಿಸುವ ‘ಅಮೃತ-ಸತ್ತ್ವ’ ಒಳಬಂದ ಮೇಲೆ ಇನ್ನು ರಜೋಗುಣ-ತಮೋಗುಣಗಳಿಗೆ ಉಳಿಗಾಲವುಂಟೇ..?ಕೌಶಿಕನೊಳಗೆ ಬಹುಕಾಲದಿಂದ ಹುದುಗಿ ಕುಳಿತಿದ್ದ  ರಜೋಗುಣವು ‘ಬೇಡ-ಬೇಡ’ ವೆಂದು ಬಡಬಡಿಸಿತ್ತು ಆತನ ಮುಖದಿಂದ..

ಬೆಳಕಿನ ಮು೦ದೆ ಕತ್ತಲೆಯ ಆಟ ನಡೆಯುವುದಕ್ಕು೦ಟೇ?
ಬ್ರಾಹ್ಮಬಲದ ಮು೦ದೆ ಕ್ಷಾತ್ರದ ರಜೋಗುಣವು ಬಾಗದಿರಲು೦ಟೆ..?
ಔದಾರ್ಯಸಾಗರನ ಆಗ್ರಹದ ಮು೦ದೆ ಕೌಶಿಕನು ಕೊನೆಗೂ ತಲೆಬಾಗಲೇ ಬೇಕಾಯಿತು…

ಮಹಾಮುನಿಯ ಆತಿಥ್ಯದ ಪ್ರಸ್ತಾವನೆಯನ್ನು ಮಹಾರಾಜನು ಸ್ವೀಕರಿಸುತ್ತಿದ್ದಂತೆಯೇ ಎರಡು ಕರೆಗಳು ಆಶ್ರಮದ ಪರಿಸರದಲ್ಲಿ ಮಾರ್ಮೊಳಗಿದವು..
ಕೌಶಿಕನು ಔತಣವುಣಲು ತನ್ನ ಮಹಾಸೇನೆಯನ್ನು ಕರೆದರೆ..
ವಸಿಷ್ಠರು ಔತಣವನ್ನು ನೆರವೇರಿಸಲು ತಮ್ಮ ‘ಮಂಗಲಧೇನು’ವನ್ನು ಕರೆದರು..

ಒಂದು ಅಧಿಕಾರದ ಕರೆಯಾದರೆ ಇನ್ನೊದು ಪ್ರೀತಿಯ ಕರೆ..
ಒಂದೆಡೆಯಿಂದ ಸಾಲು ಸಾಲಾಗಿ ಸಾವಿರ ಸಾವಿರ ಸೈನಿಕರು..!
ಮತ್ತೊಂದೆಡೆಯಿಂದ ‘ಏಕಮೇವಾದ್ವಿತೀಯಳು’ ಕಾಮಧೇನು..!
ಅತ್ತ ಕೆಚ್ಚಿನ ರಾಶಿ..!
ಇತ್ತ ಪ್ರೇಮದ ಮೂರ್ತಿ..!
ರಕ್ತದ ಹೊಳೆಯನ್ನೇ ಹರಿಸುವುದು ಅವರಿಗೆ ಅಭ್ಯಾಸ..!
ಹಾಲಿನ ಹೊಳೆಯನ್ನೇ ಸ್ರವಿಸುವುದು ಇವಳಿಗೆ ಸ್ವಭಾವ..!
ಅಲ್ಲಿ ಕೌಶಿಕನು ಅನ್ನ-ವಸ್ತ್ರಗಳನ್ನಿತ್ತು ಸಾಕಿದ ಸೈನಿಕರು…
ಇಲ್ಲಿ ಹಾಲನ್ನವಿತ್ತು ವಸಿಷ್ಠರನ್ನು ಪೋಷಿಸುವ ಮಮತಾಮಯೀ ಮಾತೆ..
ಇವರು ಕೌಶಿಕ ’ಬಲ’ವೆನಿಸಿದವರು..
ಆಕೆ ’ಅಬಲೆ’ ಯಂತೆ ತೋರುವ ‘ಶಬಲೆ’

ಅತ್ತ ಕೌಶಿಕನ ಅಪ್ಪಣೆಯನ್ನು ಪಾಲಿಸಿದ ಆತನ ಸೇನೆ ಆಶ್ರಮದ ಪರಿಸರದಲ್ಲಿ ಉಪಸ್ಥಿತವಾಯಿತು..
ಇತ್ತ ವಸಿಷ್ಠರು ವಾತ್ಸಲ್ಯವೇ ವಚನವಾದ ಸ್ವರದಲ್ಲಿ ಕರೆಯುತ್ತಿದ್ದಂತೆಯೇ…
ಅದೋ..
ಬಂದಳು…ಬಂದಳು..
ಅನ್ನವರ್ಷಿಣೀ…
ಅಮೃತವರ್ಷಿಣೀ…
ಆನಂದವರ್ಷಿಣೀ…

॥ಹರೇ ರಾಮ॥

16 Responses to ಶಬಲೆ ಬಂದಳು..!

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು

  [Reply]

 2. gopalakrishna pakalakunja

  ಭೂತಕಾಲದಲ್ಲಡಗುವ ಕಳೆದ ಕ್ಷಣಗಳ ರಾಶಿ…..
  ಕಲ್ಪನೆಗೇ ಮತ್ತು ನಿಯಂತ್ರಣಕ್ಕೆ ನಿಲುಕದ ಬರಲಿರುವ ಭವಿಷ್ಯದ ಕ್ಷಣಗಳ ರಾಶಿ….
  ಮಧ್ಯದ ಕೊಂಡಿಯಾಗಿರುವ ಕೇವಲ ಕ್ಷಣಕಾಲವಿರುವ ವರ್ತಮಾನ ಕಾಲದ
  ಪ್ರಾಮುಖ್ಯತೆ ಹಾಗೂ ನಿರ್ಣಾಯಕ ಪಾತ್ರತೆ ಅಪಾರ…ಕವಲು ದಾರಿಗಳು ಧಾರಾಳವಲ್ಲಿ…
  ಕೆಲವೊಮ್ಮೆ ಕರ್ಮಾನುಸಾರಿಣಿಯಾಗಿ ಬುದ್ದಿ ವರ್ತಿಸಿದರೆ,ಹಲವುಬಾರಿ ವಿವೇಚನಾನುಸಾರಿಯಾಗಿ ಇರಬಲ್ಲುದು.
  ಅಲೋಚನೆ ವಿವೇಚನೆಗಳು ಸಂಸ್ಕಾರ, ಸಂಸರ್ಗಕ್ಕನುಗುಣ.
  ಜನ್ಮಾಂತರದ ಸಂಸ್ಕಾರ ಪೂರ್ವಕರ್ಮಫಲಾನುಭವ ಗಳಲ್ಲಿ ಹಸ್ತಕ್ಷೇಪ ಹೆಚ್ಹು ಸಲ್ಲದಿದ್ದರೂ ,
  ಸಂಸರ್ಗ ಮತ್ತು ವಿವೇಚನೆಗಳು ಮತ್ತದಕ್ಕನುಸಾರ ವಾದ ಆಯ್ಕೆ ವೈಯಕ್ತಿಕ…
  ಅದಕ್ಕನುಗುಣವಾದ ಇಹ ಪರ ಜನ್ಮಾಂತರದ ಫಲಕ್ಕೆ ಅವರವರೇ ಪೂರ್ಣ ಜವಾಬ್ದದಾರರು.
  ವಸಿಷ್ಟ ಕೌಶಿಕರ ಅಧ್ಯಯನಕ್ಕೆ ಈ ಹಿನ್ನಲೆ ನಮಗಾದರ್ಶವೇ ಗುರುದೇವ ?

  [Reply]

 3. Raghavendra Narayana

  ಹರೇರಾಮ
  .
  ಶ್ರೀ ಗುರುಭ್ಯೋ ನಮಃ

  [Reply]

 4. ಮಂಗ್ಳೂರ ಮಾಣಿ...

  ಹರೇ ರಾಮ. ಆನನ್ದ ಆಯಿತು.

  [Reply]

 5. K.N.BHAT

  ಹರೇ ರಾಮ
  ಗುರು ಅದೆಷ್ಟು ದೊಡ್ದವ.. ಎಷ್ಟು ಕರುಣಾಮಯಿ.. ಊಹೆಗೆ ನಿಲುಕದ್ದು.
  ಶಿಷ್ಯ ಬೇಡ ಬೇಡೆಂದರೂ ಕತ್ತಲ ಕಳೆವ… ಅಮೃತವನೀವ…
  ತಾ ಕಂಡ ಸತ್ಯದ ಆನಂದದ ಸವಿಯ ಶಿಷ್ಯರಿಗೂ ಉಣಿಸುವ….
  ರಾಮಾಯಣದ ಒಳಹೂರಣವ ಒಂದೊಂದಾಗಿ ಹೊರತಂದು ಬಿಡಿಸಿ ಉಣಿಸುವ
  ಗುರುದೇವರಿಗಿದೋ ಅನಂತ ಕೋಟಿ ನಮನ…..

  [Reply]

 6. sriharsha.jois

  ಅಧಿಕಾರಯುಕ್ತವಾದ ಕರೆಯಲ್ಲಿ ಭಾವವಿರದು, ಶುಷ್ಕವದು..
  ಅದೇ ಪ್ರೀತಿಯಿಂದ ಕರೆದರೆ ಎಲ್ಲಿದ್ದರೂ ಹುಡುಕಿಕೊಂಡು ಬರಲೇ ಬೇಕು ..
  ಅಮ್ಮನನ್ನು ಮಗು ಕರೆದರೆ ಬರುವ ಹಾಗೆ..

  ಕೌಶಿಕನಿಗೆ ಅನುಮಾನ ಅತಿಥಿ ಸತ್ಕಾರದ ಬಗ್ಗೆ..
  ಹೇಗೆ ನಡೆಯುವುದೆಂಬುದರ ಬಗ್ಗೆ ಕುತೂಹಲ..
  ವಸಿಷ್ಠರಿಗೆ ಆತ್ಮಬಲವೊಂದೇ..
  ಅವರು ಕರೆದಿದ್ದು ಅಮ್ಮನನ್ನು..!
  ಮಕ್ಕಳಿಗೆ ಉಣಬಡಿಸಲಿನ್ನಾವ ಹೆದರಿಕೆ ಅವರಿಗೆ..?

  ನೋಡೋಣವೇ..? ಮುಂದೆ ಹಾಯಲಿ ನಮ್ಮ ದೃಷ್ಟಿ..
  ಅನುಮಾನವಿರದ ಮನ ನಮ್ಮದಾದರೆ ಗುರುಸೃಷ್ಟಿ ನಮಗೆಂದಿಗೂ ವರವೇ..!

  [Reply]

  mamata hegde Reply:

  hare raama Harshanna

  koneya salu noorakke nooru nija…

  [Reply]

  Jayashree Neeramoole Reply:

  ನಿಜವಾಗಿಯೂ ಹೌದು. ನಂಬಿಕೆಯೇ ನಮ್ಮನ್ನು ಮುನ್ನಡೆಸುತ್ತದೆ. ನಂಬಿ ಕೆಟ್ಟವರಿಲ್ಲವೋ…..

  [Reply]

 7. Raghavendra Narayana

  ಅದ್ಭುತ, ರಾಜ್ಯ ಸದಾ ಬೆಳಗುತಿರಲಿ..
  ದೀಪವಿರುವ ಒ೦ದು ಸು೦ದರ ಆಲಯದ೦ತೆ ಸದಾ ತೆರೆದಿರಲಿ, ಜ್ಯೋತಿ ಬೆಳಗಲು ಎಣ್ಣೆ ಎರಕವಾಗುತ್ತಿರಲಿ..
  ಬರಲಿ ಬಳಲಿದವರು, ಬರಲಿ ಚಿತ್ತವ ಬದಲಿಸಿದವರು, ಕೂಡಲಿ ಕೂಡಲಸ೦ಗಮನೆದುರಲಿ, ರಾಜ್ಯಜ್ಯೋತಿ ಬೆಳಗಲಿ..
  ರಾಜ್ಯ ಬ್ಲಾಗ್ ಸದಾ ಬೆಳಗುತಿರಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 8. yashodhadevi

  ॥ಹರೇ ರಾಮ॥
  ಶ್ರೀ ಗುರುಭ್ಯೋ ನಮಃ….

  [Reply]

 9. govindaraj korikkar

  Hareraama,
  Bhojanamritha padeyuva sarathi Koushika sthomaddu,Kathamrithava beduva kara nammadu,Shree Guruve………

  [Reply]

 10. Sharada Jayagovind

  Hareraama Samsthana

  we know Shabale is not just an ordinary cow…what does she stand for? what does she symbolise?–is it the spiritual wealth of Vashista?it is this wealth that Vishwamithra wants ?

  [Reply]

 11. mamata hegde

  hare raama

  Vande Gou Mataram.

  [Reply]

 12. ravi n

  ಆವ ಋಣಕೋಸುಗವೋ… ಆರ ಹಿತಕೋಸುಗವೋ…. ಆವಾವ ಕಾರಣಕೋ, ಆವ ಯೋಜನೆಗೋ…
  ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೇ… ದೈವ ಕುರುಡೆನ್ನದಿರು…
  ಎಂತಹ ವಿಚಿತ್ರ ವಿಧಿ.
  ಕೊಡು ಕೊಳ್ಳುವ ಪ್ರಕ್ರಿಯೆಯಲ್ಲಿ ಪಡೆದುಕೊಂಡವರೆಷ್ಟೋ… ಕಳೆದು ಕೊಂಡವರೆಷ್ಟೋ…. ಲೆಕ್ಖವಿಟ್ಟವರಾರು.
  ಪ್ರಭು ಶ್ರೀರಾಮನ ಸಂಕಲ್ಪಗಳೇ ವಿಚಿತ್ರ.
  ಹರೇರಾಮ

  [Reply]

 13. Sathyanarayana sharma

  ಆತ್ಮೀಯ ಕರೆಗೆ ಆನ೦ದದ ಅಮೃತಧಾರೆಯನೀವ ಶಬಲೆಗೆ ಸಾಶ್ಟಾ೦ಗ ಪ್ರಣಾಮಗಳು.

  [Reply]

 14. Raghavendra Narayana

  ಶಬಲೆ ಬ೦ದು, ಅಲ್ಲಿಯೇ ಕಾದುಕೊ೦ಡಿರುವಳು, ಗುರುಗಳು ಸತ್ಕರಿಸಬೇಕು.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin