|| ಹರೇರಾಮ ||

ವಾಲ್ಮೀಕಿಗಳ ಪ್ರಶ್ನೆ:-

1. ಕೆಲವು ಗುಣಗಳಿರುವ ಹಲವರಿರಬಹುದು…

ಹಲವು ಗುಣಗಳಿರುವ ಕೆಲವರಿರಬಹುದು…

ಆದರೆ ಎಲ್ಲಾ ಸದ್ಗುಣಗಳನ್ನೂ ಹೊಂದಿ ಗುಣಸಾಗರ ನೆನಿಸುವ ಒಬ್ಬ ವ್ಯಕ್ತಿ ಇಂದು ಇದೇ ಲೋಕದಲ್ಲಿ ಕಾಣಸಿಗಬಹುದೇ?

2. ಆತ ಗುಣವಂತನಾದರೆ ಸಾಲದು, ಜಗದ ವೀರಾಧಿವೀರರನ್ನೆಲ್ಲಾ ಮಣಿಸಬಲ್ಲ ಮಹಾವೀರ ನಾಗಿರಬೇಕು.

3. ವಿವೇಚನೆ ಇಲ್ಲದ ವೀರತ್ವ ರಾಕ್ಷಸತ್ವದಲ್ಲಿ ಪರ್ಯಾವಸಾನಗೊಳ್ಳುತ್ತದೆ.

ಆದುದರಿಂದ ಆತ ವೀರನಾದರೆ ಸಾಲದು.

ಧರ್ಮದ ಮರ್ಮವನ್ನರಿತು ತನ್ನ ವೀರತೆಯನ್ನು ಪ್ರಕಟಿಸುವವನಾಗಿರಬೇಕು.

4. ಆತ ಕೃತಜ್ಞನೂ ಆಗಿರಬೇಕು.

ಜೀವಿಯೊಬ್ಬನಿಗೆ ಏನೂ ಲಭಿಸಿದರೂ, ಅದು ಪ್ರಕೃತಿಯಿಂದಲೇ ಲಭಿಸಬೇಕು.

ನಮ್ಮೊಡನೆ ಧರೆಯಲ್ಲಿ ಬದುಕುವ ಇತರ ಜೀವಿಗಳ ಸಹಕಾರ ಅಲ್ಲಿ ಇದ್ದಿರಲೇಬೇಕು.

ದೇವ ದೇವನ ಕರುಣೆಯ ಕರವಂತೂ ಎಲ್ಲಕ್ಕಿಂತ ಮೊದಲು ಇರಲೇಬೇಕು.

ಇವೆಲ್ಲವನ್ನೂ ಮರೆತು ಬದುಕುವವನ ಬದುಕಿಗೆ ಅರ್ಥವೇ ಇಲ್ಲ..!


5. ಅರ್ಥದೊಡಗೂಡಿರುವ ಶಬ್ದಕ್ಕೆ – ವಾಸ್ತವವನ್ನು ಬಿಡದ ಮಾತಿಗೆ  ಸತ್ಯವೆಂದು ಹೆಸರು.

ಶಬ್ದಾರ್ಥಗಳು ಸತಿಪತಿಗಳು. ಸರಸ್ವತಿ ಬ್ರಹ್ಮ ಸ್ವರೂಪರು. ಸತಿಪತಿಗಳನ್ನು ಬೇರ್ಪಡಿಸಿದರೆ, ಬೇರೆಡೆ ಜೋಡಿಸಿದರೆ ಅದು ಮಹಾಪಾಪವಲ್ಲವೇ?

ಸುಳ್ಳಾಡಿದರೆ – ವಾಸ್ತವದಿಂದ ಬೇರ್ಪಡುವಂತೆ ಮಾತುಗಳನ್ನು ಪ್ರಯೋಗಿಸಿದರೆ – ಅದು ಸರಸ್ವತಿ ಬ್ರಹ್ಮರಿಗೆ ಎಸಗಿದ ಅಪಚಾರ..!

ಆದುದರಿಂದ ಆತ ಸತ್ಯವಾಕ್ಯ ನೂ ಆಗಿರಬೇಕು.

6. ನಿಯಮಕ್ಕೊಳಪಡದ ಬದುಕು ಸೂತ್ರ ಕಿತ್ತ ಗಾಳಿಪಟದಂತೆ… ಚೌಕಟ್ಟಿಲ್ಲದ ಚಿತ್ರದಂತೆ…

ಆದುದರಿಂದ ಆತ ತನ್ನ ಬದುಕಿಗೆ ತಾನೇ ಚೌಕಟ್ಟನ್ನು ಹಾಕಿಕೊಳ್ಳುವವನಾಗಿರಬೇಕು.

ತಾನು ಕೈಗೊಂಡ ನಿಯಮಗಳನ್ನು ಎಂದೆಂದೂ ಮುರಿಯದವನಾಗಿರಬೇಕು.

7. ಬದುಕಿನ ಪರಮ ಲಕ್ಸ್ಯದೆಡೆಗಿನ ನಡಿಗೆಗೆ ನಡತೆ ಯೆಂದು ಹೆಸರು.

ಅದು ತಪ್ಪಿದರೆ ಮತ್ತೆ ಬದುಕಿಗೆ ಗುರಿಯೆಲ್ಲಿ..?

ಆದುದರಿಂದ ಆತ ಮೇಲ್ಪಂಕ್ತಿಯ ನಡತೆಯವನಾಗಿರಬೇಕು.

8. ತನ್ನವರು ಪರರೆಂಬ ಬೇಧವಿಲ್ಲದೆ ಸಕಲ ಜೀವರಾಶಿಗಳ ಹಿತಚಿಂತಕನಾಗಿರಬೇಕು ಆತ.

ಹಾಗಿರಲು ಬಹುದೊಡ್ಡ ಹೃದಯವಿರಲೇಬೇಕಲ್ಲವೆ?

ತನ್ನೆದೆಯಲ್ಲಿ ಸಮಸ್ತ ಜೀವಿಗಳಿಗೆ ಆಸರೆ ನೀಡುವ ವಿಶ್ವಹೃದಯಿ ಯಾಗಿರಬೇಕು ಆತ..!

9. ಜೀವಿಯ ಜೀವನದ ಜೀವರೇಖೆಯೆಂದರೆ ಜ್ಞಾನ.

ಅದೆಲ್ಲಿ ಹೆಚ್ಚಿದೆಯೋ ಅವನೇ ದೊಡ್ಡವನು. ಕೇವಲ ವಯಸ್ಸಿನಿಂದ ದೊಡ್ಡವನು ದೊಡ್ಡವನಲ್ಲ.

ಆದುದರಿಂದ  ಆತ ಪರಿಪೂರ್ಣ ಜ್ಞಾನಿ ಯೂ ಆಗಿರಬೇಕು.

10. ಜನರಲ್ಲಿ ಮೂರು ಬಗೆ…

೧. ಬರಬಹುದಾದ ವಿಘ್ನಗಳನ್ನು ನೆನೆ ನೆನೆದು ಕಾರ್ಯವನ್ನೇ ಆರಂಭ ಮಾಡದವರು…
ಇವರು ಅಧಮರು.

೨. ಕಾರ್ಯಾರಂಭ ಮಾಡಿ ವಿಘ್ನ ಬಂದಾಗ ಕಂಗೆಟ್ಟು ಕೈಬಿಡುವವರು…
ಇವರು ಮಧ್ಯಮರು.

೩.  ಬಾರಿ ಬಾರಿಗೂ ವಿಘ್ನಗಳು ಬಂದಪ್ಪಳಿಸುತ್ತಿದ್ದರೂ ಕಂಗೆಡದೆ, ಹಿಡಿದ ಕಾರ್ಯವನ್ನು ಯಾವುದೇ ಕಾರಣಕ್ಕೂ ಕೈಬಿಡದೆ ಪೂರ್ತಿ ಮಾಡಿಯೇ ಮಾಡುವವರು…

ಉತ್ತಮರಿವರು.

ಮೂರನೆಯದಾದ ಉತ್ತಮ ವರ್ಗಕ್ಕೆ ಸೇರುವ ಪುರುಷೋತ್ತಮ ನಾಗಿರಬೇಕು ಆತ.

11. ಚಂದ್ರನಂತೆ ಎಂದು ನೋಡಿದರೂ, ಹೇಗೆ ನೋಡಿದರೂ ಆನಂದ – ಆಹ್ಲಾದಗಳನ್ನೇ ಈಯುವ ಶಾಶ್ವತಪ್ರಿಯದರ್ಶನ ನಾತನಾಗಿದ್ದರೆ…. ಅದೆಷ್ಟು ಸೊಗಸು..!

12. ತಮ್ಮ ಮೈಮನಗಳನ್ನೇ ವಶದಲ್ಲಿಟ್ಟುಕೊಳ್ಳಲಾರದವರು ಜಗತ್ತನ್ನು ವಶದಲ್ಲಿಟ್ಟುಕೊಂಡರೇನು ಫಲ…? ತನ್ನ ತನು ಮನಗಳೆಲ್ಲವನ್ನು ತನ್ನ ವಶದಲ್ಲಿಯೇ ಇರಿಸಿಕೊಳ್ಳಬಲ್ಲ ಮಹಾಸಂಯಮಿ ಆತನಾಗಿರಬೇಕು.

13. ಕ್ರೋಧವೆಂಬುದು ಬೆಂಕಿಯಿದ್ದಂತೆ…

ಬಳಕೆ ಸರಿಯಾಗದಿದ್ದರೆ ಕೈ ಮೈ ಸುಟ್ಟೀತು… ಬದುಕೇ ಕೆಟ್ಟೀತು… !!

ಹೊರಗಿನ ಶತ್ರುಗಳನ್ನು ಗೆದ್ದವರನೇಕರು ಕೊನೆಗೆ ಕ್ರೋಧವೇ ಮೊದಲಾದ ಅಂತರಂಗ ಶತ್ರುಗಳಿಗೆ ಸೋತು ಪತಿತರಾಗುವುದುಂಟು.

ಹಾಗಿರಬಾರದು ಆತ.. ಕ್ರೋಧವನ್ನು ಗೆದ್ದವನಾಗಿರಬೇಕು.

14. ಸೂರ್ಯನಂತೆ, ಚಂದ್ರನಂತೆ, ನಕ್ಷತ್ರಗಳಂತೆ, ಅಗ್ನಿಯಂತೆ, ಆತ್ಮನಂತೆ ತಾನೇ ತಾನಾಗಿ ಬೆಳಗುವ, ಬಳಿ ಸಾರುವವರ ಬದುಕನ್ನು ಬೆಳಗಿಸುವ ಮಹಾತೇಜಸ್ವಿ ಯವನಾಗಿರಬೇಕು.

15. ಅಸೂಯೆಯೆಂಬುದು ಹಲವು ದುರ್ಗುಣಗಳ ತಾಯಿ..

ಅಸೂಯೆಯೆಂಬ ರೋಗ ಬಂದರೆ ಮೊಸರಲ್ಲಿ ಕಲ್ಲು ಕಾಣುವುದು…!

ಪರರ ಗುಣಗಳಲ್ಲಿ ದೋಷ ಕಾಣುವುದು…!

ಪರರ ಏಳಿಗೆ ನೋಡಿ ಆನಂದಿಸಬೇಕಾದಲ್ಲಿ ಪರಿತಪಿಸುವಂತೆ ಆಗುವುದು..!
[ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ |
ಹೊಟ್ಟೆ ತುಂಬಿದ ತೋಳ ಮಲಗೀತು, ನೀಂ ಪೆರರ
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ || ]
ಆದುದರಿಂದ ಅಸೂಯೆಯಂತಹ ದೋಷಗಳಿಂದ ಮುಕ್ತವಾದ ವಿಶುದ್ದ ವ್ಯಕ್ತಿತ್ವ ಅವನದಾಗಿರಬೇಕು.

16.  ಆತನೇನಾದರೂ ರಣಕಣದಲ್ಲಿ ರೋಷಗೊಂಡರೆ ನರರಿರಲಿ, ಸುರಾಸುರರೂ ಬೆಚ್ಚಿ ಬೀಳುವಂತಿರಬೇಕು… ಹಾಗಿಲ್ಲದಿದ್ದರೆ ’ ಮೆತ್ತಗಿದ್ದಲ್ಲಿ ಒಂದು ಗುದ್ದಲಿ ಪೆಟ್ಟು ಜಾಸ್ತಿ ’ ಎನ್ನುವಂತಾದೀತು..!

ಹದಿನೈದು ಕಲೆಗಳ ಚಂದ್ರನಿಗೆ ವೃದ್ಧಿ – ಕ್ಷಯಗಳಿವೆ.. ಅಮವಾಸ್ಯೆ- ಗ್ರಹಣಗಳಿವೆ..

ಆದರೆ ಶಿವನ ಶಿರದಲ್ಲಿ ಶೋಭಿಸುವ ಹದಿನಾರನೆಯದಾದ ಜೀವ ಚೈತನ್ಯ ಕಲೆಯಲ್ಲಿ ಏರುಪೇರುಗಳಿಲ್ಲ.

ಪರಿಪೂರ್ಣವಾದ ಶಾಶ್ವತವಾದ ಬೆಳಕಿನ ಸೆಲೆಯದು..!

ವಾಲ್ಮೀಕಿಗಳು ಹುಡುಕುತ್ತಿದ್ದುದು ಅಂತಹ ಷೋಡಶ ಗುಣ ಪರಿಪೂರ್ಣನನ್ನು…!!


|| ಹರೇರಾಮ ||

Facebook Comments