॥ ಹರೇರಾಮ ॥

ಒಲಿದರೂ ಮಾರಿಯೇ…….!

ಸಾಧನೆಯ ಕೊನೆಯಲ್ಲಿ ಧ್ಯಾನ-ಧ್ಯೇಯಗಳು ಸೇರುವಹಾಗೆ ವನವಾಸದ ಕೊನೆಯ ಚರಣದಲ್ಲಿ
ಮುನಿಕುಲೋತ್ತಮರಾದ ಅಗಸ್ತ್ಯರೊಡನೆ ರಘುಕುಲೋತ್ತಮನಾದ ಶ್ರೀರಾಮನ ಸಮಾಗಮವಾಯಿತು…

ಸಾಧನಗಳೊದಗಬೇಕಾದದ್ದು ಸಾಧನೆಗಳ ಸಮಯದಲ್ಲಿ..

ಕಾರ್ಯಕಾಲವು ಬಂತೆಂಬ ಸೂಚನೆಯೋ ಎಂಬಂತೆ ತನಗೆಂದೇ ಇಂದ್ರನಿರಿಸಿದ್ದ ವರಧನುಸ್ಸನ್ನು ಅಗಸ್ತ್ಯರಂದ ಪರಿಗ್ರಹಿಸಿ,
ನಿರ್ಮಲ ಗೋದಾವರಿಯ ತೀರದಲ್ಲಿ ಪಂಚವಟಿಯ ಶಾಂತ ಪರಿಸರದಲ್ಲಿ ನೆಲೆಸಿರುವಾಗ..
ಶಾಂತ ಸರೋವರವನ್ನು ಕದಡಿ ಕೆಸರಾಗಿಸುವ ಕಾಡೆಮ್ಮೆಯಂತೆ ಶೂರ್ಪನಖಿಯ ಪ್ರವೇಶವಾಯಿತು ಅಲ್ಲಿ…!
ಸುಂದರತೆ-ಸುಕುಮಾರತೆ-ಸುಜನತೆಯ ಸಾಕಾರನ ಮೇಲೆ ..
ಕ್ರೂರಿ -ಕರಾಳಿ…ಕಪಟಿ-ಕುರೂಪಿಯ ಕುದೃಷ್ಟಿಯು ಬಿದ್ದಾಗ ಪ್ರಶಾಂತ ಪಂಚವಟಿಯೇ ರಕ್ತಸಿಕ್ತ ರಣಭೂಮಿಯಾಗಬೇಕಾಯಿತು….!
ಶೂರ್ಪನಖಿಯ ದುರಾಸೆಯನ್ನು ಬೆಂಬಲಿಸಿ ಬಂದ ರಾಕ್ಷಸಕೋಟಿಯನ್ನು
ಅಸಹಾಯಶೂರನಾಗಿ ಅತ್ಯಲ್ಪ ಸಮಯದಲ್ಲಿಯೇ ಧರೆಗುರುಳಿಸುವ ಅದ್ಭುತ ಸಮರವನ್ನು ಶ್ರೀರಾಮನು ನಡೆಸುತ್ತಿದ್ದಾಗ..
ಹರಿದ ರಕ್ತದ ಹೊಳೆ ಗೋದಾವರಿಯನ್ನು ಮೀರಿತು….!

ಪಂಚವಟಿಯಿಂದ ಪಲಾಯನಗೈದ ಶೂರ್ಪನಖಿ ಲಂಕೆಯನ್ನು ಸೇರಿದರೆ,
ಆಕೆಯ ಹೃದಯದಲ್ಲಿ ಹುದುಗಿದ್ದ ದುಷ್ಟಭಾವಗಳು ರಾವಣನ ಹೃದಯವನ್ನು ಸೇರಿದವು….!
ಸೀತಾಪತಿಯನ್ನು ಬಯಸಿದ ತಂಗಿ ಮೂಗು ಕಳೆದುಕೊಂಡರೆ…… ರಾಮಸತಿಯನ್ನು ಬಯಸಿದ ಅಣ್ಣ ತಲೆಯನ್ನೇ ಕಳೆದುಕೊಳ್ಳುವ ಹಾದಿಯಲ್ಲಿ ಹೆಜ್ಜೆಗಳನ್ನಿಟ್ಟ….!

ಮನವಾಯಿತು ಮಾಯಾಮೃಗ..
ದುಷ್ಟನೊಬ್ಬ ಪರಿವರ್ತನೆಗೊಂಡು ಶಿಷ್ಟನಾದರೂ ಭೂತಕಾಲದ ಭೂತಗಳು ಅಂಥವರನ್ನು ಬೆಂಬಿಡದೆ ಪೀಡಿಸುವುದುಂಟು..
ಹಾಗಾಯಿತು ಮಾರೀಚನ ಸ್ಥಿತಿ….!
ರಾಮನೇನೆಂಬುದನ್ನು ಆತನ ಬಾಣಗಳಿಂದಲೇ ತಿಳಿದುಕೊಂಡಿದ್ದ ಮಾರೀಚ ರಾವಣನಿಗೆ ಅದನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗದಾದಾಗ ..
ಒಲ್ಲದ ಮನಸಿನಿಂದಲೇ ಚಿನ್ನದ ಜಿಂಕೆಯ ವೇಷ ಧರಿಸಿ ಸೀತೆಯ ಮುಂದೆ ಸುಳಿದಾಡಿದ….!
ಪಂಚವಟಿಯಲ್ಲಿ ಜಿಂಕೆಗಳಿಗೇನೂ ಕೊರತೆಯಿರಲಿಲ್ಲ…. ಆದರೆ, ನಕಲಿಯ ಸೆಳೆತದ ರೀತಿಯೇ ಬೇರೆ…..!
ಎಂದೂ ಬೇರೇನೂ ಬಯಸದ ಸೀತೆಗೆ ಅಂದು ಮಾಯಾಮೃಗ ಬೇಕೆನಿಸಿತು…!
ಪರಿಣಾಮ..? ಮಾರೀಚನಿಗೆ ಮೋಕ್ಷ……ಸೀತೆಗೆ ಬಂಧನ…..!

ಸುಳ್ಳಿಗೆ ಎಂದೆಂದೂ ಸತ್ಯದ ಭಯವಿದೆ……
ರಾಮನನ್ನು ಕಾಣುವ ಪೂರ್ವದಲ್ಲಿಯೇ ಆತನ ವಿಷಯದಲ್ಲಿ ರಾವಣನದೆಷ್ಟು ಭಯಪಟ್ಟಿದ್ದನೆಂದರೆ,
ನಾರೀಚೌರ್ಯದ ಘನಕಾರ್ಯಕ್ಕಾಗಿ ರಾಮ-ಲಕ್ಷ್ಮಣರಿಲ್ಲದ ವೇಳೆಯನ್ನಾತ ಸಾಧಿಸಬೇಕಾಯಿತು..!

ಪ್ರಾಣಾರ್ಪಣೆ ನಿನಗೆ ಪ್ರಭೂ..!
ಇನ್ನೊಬ್ಬರ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತೊಬ್ಬರನ್ನು ಬಲಿ ಕೊಡುವ ರಾವಣನಂಥವರು…
ಇನ್ನೊಬ್ಬರ ಮಾನರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯುವ ಜಟಾಯುವಿನಂಥವರು…
ಇವರುಗಳ ಮಧ್ಯೆ ಸಂಘರ್ಷ ಜಗತ್ತು ಇರುವಂದಿನಿಂದಲೂ ಇದೆ…!
ಸೀತೆಯ ಮಾನರಕ್ಷಣೆಗಾಗಿ ವಿಶಾಲವಾದ ಗೃಧ್ರರಾಜ್ಯದ ಒಡೆತನವನ್ನೂ, ಅಸಂಖ್ಯ ಬಂಧು-ಮಿತ್ರರನ್ನೂ, ಹೆಚ್ಚೇಕೆ…?
ತನ್ನ ಪಕ್ಷಗಳನ್ನೂ, ಪಾರ್ಶ್ವಗಳಮ್ನೂ, ಪಾದಗಳನ್ನೂ ಕೊನೆಗೆ ತನ್ನ ಪ್ರಾಣಗಳನ್ನೂ ರಾಮನಡಿಯಲ್ಲಿ ಸಮರ್ಪಿಸಿ ಜಟಾಯು ಅಮರನಾದ…..!

ಕಾದಿರುವೆನು ನಿನಗಾಗಿ…!
ಕರ್ಪೂರವು ತಾನುರಿಯುತ್ತಿದ್ದರೂ ಜಗತ್ತಿಗೆ ನೀಡುವುದು ಬೆಳಕನ್ನೇ…!
ಸಂಕಟಗಳ ಮಾಲೆಯನ್ನೇ ಹೃದಯದಲ್ಲಿ ಹೊತ್ತು ಹೊರಟ ಶ್ರೀರಾಮನ ಸೀತಾನ್ವೇಷಣೆಯ ಮಾರ್ಗ,
ಅದು ಶರಣಸಂದೋಹದ ಮುಕ್ತಿಮಾರ್ಗವೇ ಆಗಿತ್ತು…!
“ಕಾಯುವರನ್ನು ಕಾಯುವೆ”ನೆಂಬ ಕರುಣಾಮೂರ್ತಿಯ ಬಿರುದು ಕಬಂಧ-ಶಬರಿ-ಹನುಮಂತರ ವಿಷಯದಲ್ಲಿ ಸಾರ್ಥಕಗೊಂಡಿತು…!

ಅರಸಿ-ಅರಸೊತ್ತಿಗೆಗಳ ಹರಸಿಕೊಟ್ಟವನು…..
ದೊಡ್ಡ ವರವನ್ನು ಕೊಡುವಾಗ ಸಣ್ಣ ಸೇವೆಯನ್ನಾದರೂ ಮಾಡಿಸದಿದ್ದರೆ ಕರ್ಮದ ಮರ್ಮವು ಮನಸಿಗೆ ಬರುವುದಾದರೂ ಹೇಗೆ…?
ಅಣ್ಣನಿಂದ ಅಪಹರಿಸಲ್ಪಟ್ಟಿದ್ದ ಅರಸಿಯನ್ನೂ, ಅರಸೊತ್ತಿಗೆಯನ್ನೂ ಸುಗ್ರೀವನಿಗೆ ಮರಳಿ ಕೊಡಿಸಿದ ರಾಮ, ಅವನಿಂದ ಅಪೇಕ್ಷಿಸಿದ್ದು ಸೀತಾನ್ವೇಷಣೆಯ ಸೇವೆಯನ್ನು…!
ತನ್ನ ಮದುವೆಗೆ ಮುನ್ನ ಅಹಲ್ಯಾ-ಗೌತಮರ ಮುರಿದ ಮದುವೆಯನ್ನು ಕೂಡಿಸುವಾಗ….
ಅಪಹೃತಳಾದ ತನ್ನ ಸತಿಯನ್ನು ಮರಳಿ ಪಡೆಯುವ ಮುನ್ನ ಸುಗ್ರೀವನಿಗೆ ಅವನ ಪತ್ನಿಯನ್ನು ಕೊಡಿಸುವಾಗ…
ಅಯೋಧ್ಯೆಯ ಚಕ್ರವರ್ತಿಸಿಂಹಾಸನದಲ್ಲಿ ತಾನು ಮಂಡಿಸುವ ಮುನ್ನ
ಕಿಷ್ಕಿಂಧೆಯ ಸಿಂಹಾಸನದಲ್ಲಿ ಸುಗ್ರೀವನನ್ನೂ…. ಲಂಕೆಯ ಸಿಂಹಾಸನದಲ್ಲಿ ವಿಭೀಷಣನನ್ನೂ ಕುಳ್ಳಿರಿಸುವಾಗ….
ಮರ್ಯಾದಾಪುರುಷೋತ್ತಮ ನಮಗಿತ್ತ “ಉಣಬಡಿಸಿ ಉಣ್ಣು” ಎಂಬ ಸಂದೇಶವನ್ನು ನಾವರಿಯಬೇಕಲ್ಲವೇ….!?

ಬಿಂದುವಾಯಿತು ಸಿಂಧು-ಬೆಂಕಿಯಾಯಿತು ಲಂಕೆ…!
ಸಾಧಕಕೋಟಿಯಲ್ಲಿ ಸಾಧಿಸುವವನು ಎಲ್ಲೋ ಒಬ್ಬ…
ಸೀತೆಯನ್ನು ಹುಡುಕಿ ಹೊರಟ ವಾನರಕೋಟಿಯಲ್ಲಿ ಆ ವಿಶ್ವಜನನಿಯ ಪದಕಮಲದ ಗಮ್ಯವನ್ನು ತಲುಪಿದವನು ಮಾರುತಿಯೊಬ್ಬನೇ…!
ಸಮುದ್ರವೆಂದರೆ ಬಹಳ ದೊಡ್ಡದು ಆದರೆ,

ಮಾತೆಯ ಮಮತೆಯ ಸಾಗರ”ದ ಮುಂದೆ ಅದೇನು ಮಹಾ…?
ಸೀತಾದರ್ಶನಕ್ಕಾಗಿ ಹಾತೊರೆದ ಆಂಜನೇಯನ ಪಾಲಿಗೆ ಸಿಂಧುವೂ ಬಿಂದುವಾಯಿತು…!
ರಾಕ್ಷಸರೆಂದರೆ ಅಜೇಯ ವೀರರು…..ಲಂಕೆಯೆಂದರೆ ಅಜೇಯ ನಗರಿ….
ಆದರೆ ಭಾವಬಲದ ಮುಂದೆ ಬಾಹುಬಲವೆಷ್ಟರದು…!?
ಅಶೋಕವನದಲ್ಲಿ ಬಂಧಿತಳಾಗಿದ್ದ ಶೋಕಮೂರ್ತಿಯನ್ನು ಕಣ್ಣಾರೆ ಕಂಡು ಕರಗಿದ-ಕೆರಳಿದ,ಆ೦ಜನೇಯನ ರೋಷದ ಮುಂದೆ
ರಾಕ್ಷಸರು ಧೂಲೀಪಟವಾದರು…ಲಂಕೆ ಬೂದಿಯಾಯಿತು..!

ಸೇತುಬಂಧ…ಇದು ಎಂದೂಮುರಿಯದ ಸಂಬಂಧ…!
ಕತ್ತಲೆಯು ಬೆಳಕಿನೊಳಗೆ ಕಲೆಯುವುದುಂಟೆ….?
ಉತ್ತರ-ದಕ್ಷಿಣಗಳೊಂದಾಗುವುದುಂಟೆ…?
ತಮೋಮಯವಾದ ರಾಕ್ಷಸಕುಲದಲ್ಲಿ ಜನಿಸಿದ ವಿಭೀಷಣನು, ಸೂರ್ಯಕುಲತಿಲಕನಾದ ಶ್ರೀರಾಮನೊಡನೆ ಕಲೆತಾಗ ಕತ್ತಲೆಯು ಬೆಳಕಿನೊಡನೆ ಸೇರಿ ಬೆಳಕೇ ಆಯಿತು….!
ವಾನರವೀರರ ಸೇವೆ-ಸಾಹಸಗಳಲ್ಲಿ ವಿಶ್ವಚರಿತ್ರೆಯ ಏಕೈಕ ಸಮುದ್ರಸೇತು ನಿರ್ಮಾಣಗೊಂಡಿತು…!
ಸೀತಾ-ರಾಮರ ಪ್ರೇಮದ ಮಧುರಸಾಗರದೆದುರು ಲವಣಸಾಗರ ಸೋತಿತು…!
ಸಂಧಿಸಿದವು ಉತ್ತರ-ದಕ್ಷಿಣ ದಿಶೆಗಳು……..!

ದೈತ್ಯಸಂಹಾರಿ…
ಒಳಿತು-ಕೆಡುಕುಗಳು ಕೋಟಿಕೋಟಿ ರೂಪ ತಾಳಿದವು….
ದಕ್ಷಿಣಸಮುದ್ರದ ದಕ್ಷಿಣತೀರದಲ್ಲಿ ದಕ್ಷಿಣದಿಕ್ಪಾಲಕನೂ ಬೆಚ್ಚಿಬೀಳುವಂತೆ ಹೊಡೆದಾಡಿದವು….!
ಸೋಮಸುಂದರ ರಾಮ ರಾವಣನ ಪಾಲಿಗೆ ಯಮಭಯಂಕರನಾದರೆ, ಆತನೊಡನಾಡಿಗಳು ಮತ್ತುಳಿದವರ ಪಾಲಿಗೆ ಯಮಕಿಂಕರರಾದರು..!!
ಕೆಡುಕಿನ ರಾಜಧಾನಿಯಲ್ಲಿ ಒಳಿತಿನ ರಾಜ್ಯಾಭಿಷೇಕವಾಯಿತು….
ದಶಕಂಠನೊಡನೆ ಧರ್ಮದ್ವೇಷವೂ ಅಳಿಯಿತು, ವಿಭೀಷಣನ ಆಳ್ವಿಕೆಯಲ್ಲಿ ಅಸುರರೂ ಸುರಸದೃಶರಾದರು…..!

ಅಗ್ನಿಯಲ್ಲಿಯೂ ಅರಳಿತು ಸೀತೆಯೆಂಬ ಸುಮ….!
ಸೂರ್ಯರಶ್ಮಿಯು ಮಲಿನವಾಗಲುಂಟೆ.?
ಕಾಮನಬಿಲ್ಲು ಕೆಸರಾಗಲುಂಟೆ…….?
ರಾಮಸೂರ್ಯನ ಸೀತೆಯೆಂಬ ರಶ್ಮಿಗೆ ರಾವಣರಾಹುವಿನ ಗ್ರಹಣ ಉಂಟಾಗಿರಬಹುದೆಂಬ ಲೋಕದ ಭ್ರಮೆಯನ್ನು ಕಳೆಯಲು ಅಗ್ನಿಯು ದ್ವಾರವಾಯಿತು..!
ರಣಭೂಮಿಯಲ್ಲಿ ಪ್ರಕಟವಾದ ರಾಮನ ಭುಜಬಲಕ್ಕಿಂತ-
ಯಜ್ಞೇಶ್ವರನ ನಡುವೆ ಪ್ರಕಟವಾದ ಸೀತೆಯ ಶೀಲವೇನೂ ಕಡಿಮೆ ದೊಡ್ಡದಲ್ಲ….!
ರಾಮಾಯಣವೆಂದರೆ ಪಂಚಭೂತಗಳ ಕಣ್ಣಾಮುಚ್ಚಾಲೆಯಾಟ…
.ಸಂಗಮಿಸುವ ಭುವಿ-ಬಾನುಗಳ ನಡುವೆ ಜಲವೇರ್ಪಡಿಸಿದ ತಡೆಯನ್ನು ಗಾಳಿ-ಬೆಂಕಿಗಳು ಪರಿಹರಿಸಿದವು….!
( ಭುವಿ=ಸೀತೆ– ಬಾನು=ರಾಮ– ಜಲ=ಮಧ್ಯಸಮುದ್ರದ ಲಂಕಾಧಿಪತಿ ಗಾಳಿ=ಹನುಮಂತ— ಬೆಂಕಿ=ಅಗ್ನಿಪರೀಕ್ಷೆ )

ಸಾಕೇತಕೆ ನೀ ದೊರೆಯಾಗಿರೆ…ಸಾಕೇತಕೆ(ಸಾಕು+ಏತಕೆ) ನಾಕ…!?
ಧರ್ಮವುಂಟು-ಅಧರ್ಮವಿಲ್ಲ.
ಸುಖವುಂಟು-ದುಃಖವಿಲ್ಲ…
ಪ್ರೀತಿಯುಂಟು-ದ್ವೇಷವಿಲ್ಲ…
ಸಮೃಧ್ಡಿಯುಂಟು-ದಾರಿದ್ರವಿಲ್ಲ…
ಸತ್ಯವುಂಟು-ಅಸತ್ಯವಿಲ್ಲ…
ಸುಭಿಕ್ಷವುಂಟು-ದುರ್ಭಿಕ್ಷವಿಲ್ಲ…
ಒಳಿತೆಲ್ಲವೂ ಉಂಟು…ಕೆಡುಕಾವುದೂ ಇಲ್ಲ….!!
ಸ್ವರ್ಗಮೋಕ್ಷಗಳು ಇರುವುದು ಹೀಗೇ…
ಧರ್ಮಸಿಂಹಾಸನವನ್ನು ಧರ್ಮಮೂರ್ತಿಯು ಅಲಂಕರಿಸಲು ಧರೆಯಾಯಿತು ಹಾಗೆ….!
ಕಾಲಪ್ರವಾಹದಲ್ಲಿ ರಾಮರಾಜ್ಯ ಮರೆಯಾಗಬಹುದು, ಆದರೆ ಭವಿಷ್ಯತ್ತಿನಲ್ಲಿ ಬರಬಹುದಾದ ಸಕಲ ರಾಜರಿಗೂ – ಪ್ರಜೆಗಳಿಗೂ ಶಾಶ್ವತ ಸ್ಫೂರ್ತಿಸೆಲೆಯಾಗಿ
ರಾಮರಾಜ್ಯದ ಅಮೃತಬೀಜಗಳು ಅವಿನಾಶಿಯಾದ ರಾಮಾಯಣದಲ್ಲಿ ಎಂದಂದಿಗೂ ಸಿಗುವಂತೆ ಉಳಿದುಕೊಂಡವು…!
“ಕವಿಗಣ್ಣನ್ನು ತೆರೆದು ನೋಡು ಮಹರ್ಷಿಯೇ..ಇದು ಸೃಷ್ಟಿಯ ಸರ್ವಶ್ರೇಷ್ಠ ಪುರುಷನ ಸಂಕ್ಷಿಪ್ತ ಕಥೆ…”

ನಾರದರ ಮಾತುಗಳು ನಿಂತವು…

ಆದರೆ ವಾಲ್ಮೀಕಿಗಳ ಮೌನವು ಮುಂದುವರೆಯುತ್ತಲೇ ಇತ್ತು..!

|| ಹರೇರಾಮ ||

Facebook Comments Box