LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸೂರ್ಯನಂಥಾ ವಂಶ..!

Author: ; Published On: ಗುರುವಾರ, ಅಕ್ತೂಬರ 7th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

“ಕಾರಣಗುಣಗಳು ಕಾರ್ಯಗಳಲ್ಲಿ ಕಾಣಿಸಿಕೊಳ್ಳುವುದು ನಿಸರ್ಗ ನಿಯಮ”..
ನೂಲಿನ ಬಣ್ಣ ಬಟ್ಟೆಯಲ್ಲಿ, ಬೀಜದ ಗುಣ ವೃಕ್ಷದಲ್ಲಿ, ತಾಯಿಯ ಸ್ವಭಾವ ಮಕ್ಕಳಲ್ಲಿ ಸಂಕ್ರಮಿಸುವುದು ಲೋಕದಲ್ಲಿ ನಿತ್ಯದರ್ಶನದ ವಿಷಯ…
ಅಂತೆಯೇ ಕಾರಣಪುರುಷನಾದ ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು..
ಸೂರ್ಯನು ದಿವಿಯ ಮಧ್ಯದಲ್ಲಿ ನಿಂತು ಭುವಿಯನ್ನು ಬೆಳಗಿದರೆ, ಸೂರ್ಯವಂಶೀಯರು ಭುವಿಯ ಮಧ್ಯದಲ್ಲಿ ನಿಂತು ಜೀವರಾಶಿಗಳ ಜೀವನವನ್ನೇ ಬೆಳಗಿದರು..!
ಸೂರ್ಯನು ಕತ್ತಲೆಯ ವೈರಿಯಾದರೆ..
ಸೂರ್ಯವಂಶೀಯರು ಕೆಡುಕಿನ ವೈರಿಗಳು..

ಭುವಿಯ ಬದುಕನ್ನು ಬಾಧಿಸುವ ಕೆಡುಕಿಗೆ ರೂಪಗಳೆರಡು…
ಅದು ಸದ್ದಿಲ್ಲದಂತೆ ದುರ್ಗುಣಗಳ ರೂಪದಲ್ಲಿ ನಮ್ಮೊಳಗೇ ಉದಯಿಸಿ ಅಂತರಂಗವನ್ನೇ ಹಾನಿಗೈಯುವುದುಂಟು…
ಬೆಳೆಯಗೊಟ್ಟರೆ ಬಹಿರಂಗವನ್ನೂ ವ್ಯಾಪಿಸಿ, ವ್ಯಕ್ತಿತ್ವನ್ನೇ ಕೆಡಿಸಿ, ದುರ್ಜನರ ರೂಪದಲ್ಲಿ ಸಮಾಜವನ್ನು ಪೀಡಿಸುವುದುಂಟು…
ಸೂರ್ಯವಂಶೀಯರು ಶಾಸನ-ಶಿಕ್ಷಣಗಳ ಮೂಲಕ ಪ್ರಜೆಗಳ ಅಂತರಂಗದ ಕೆಡುಕುಗಳನ್ನು ಪರಿಹರಿಸಿದರು..
ಸಮಾಜವನ್ನು ಪಿಡುಗಾಗಿ ಕಾಡುವ ಕೆಡುಕರನ್ನು ಸಂಗ್ರಾಮಮುಖೇನ ಸಂಹರಿಸಿದರು…

ಚಂದ್ರನಲ್ಲಿ ಬೆಳದಿಂಗಳಿದ್ದರೂ ಜೊತೆಯಲ್ಲಿ ಕಳಂಕವೂ ಇದೆ..
ಆದರೆ ಬೆಳಕೀಯುವ ಸೂರ್ಯ ನಿಷ್ಕಳಂಕ..!
ಅಂತೆಯೇ ಸಕಲ ಸುಗುಣಗಳಿಂದ ಬೆಳಗುವ ಸೂರ್ಯಕುಲದರಸರ ಬದುಕಿನಲ್ಲಿ ಕಳಂಕಗಳ ಸುಳಿವೇ ಇರಲಿಲ್ಲ..

ಜ್ಯೌತಿಷವು ನವಗ್ರಹಗಳಲ್ಲಿ ಸೂರ್ಯನನ್ನು ತಂದೆಯೆಂದು ಕರೆಯುತ್ತದೆ..
ತಮ್ಮನ್ನು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ ಪಾಲಿಸುತ್ತಿದ್ದ ಸೂರ್ಯವಂಶದ ದೊರೆಗಳಲ್ಲಿ ಪ್ರಜೆಗಳು ನಿಜವಾದ ಪಿತೃಪ್ರೀತಿಯನ್ನು ಕಂಡುಕೊಂಡಿದ್ದರು..!
ಕ್ಷಿತಿಜದಲ್ಲಿ ಸೂರ್ಯನು ಪ್ರಕಟವಾಗುತ್ತಿದ್ದಂತೆಯೇ ಮಿಕ್ಕೆಲ್ಲಾ ಗ್ರಹಗಳು, ನಕ್ಷತ್ರಗಳು ಮಸುಕಾಗಿ ಮರೆಯಾಗಿಬಿಡುತ್ತವೆ..
ಕ್ಷಿತಿಯಲ್ಲಿಯೂ ಹಾಗೆಯೇ,
ಸೂರ್ಯವಂಶೀಯರ ಪ್ರಭಾವ-ಪ್ರಭಾವಲಯಗಳೆದುರು ಮತ್ತುಳಿದ ರಾಜರುಗಳು ಕಾಣದಾದರು..!

ಗಗನಕ್ಕೊಬ್ಬನೇ ಸೂರ್ಯ..
ಧರಣಿಗೊಂದೇ ಸೂರ್ಯವಂಶ…

ಚರಾಚರ ಪ್ರಪಂಚಕ್ಕೆ ಸೂರ್ಯನೇ ಆತ್ಮ..
ಸೂರ್ಯವಂಶೀಯರು ಜನಜೀವನ ಚೈತನ್ಯ.
ಅವರಿಲ್ಲದ ಭೂಮಿ ನಿರ್ಜೀವ..ಜನಜೀವನ ಸ್ಮಶಾನ…
ಗ್ರಹಗಳೆಲ್ಲವೂ ಸೂರ್ಯನ ಆಕರ್ಷಣೆಗೊಳಪಟ್ಟು ಅವನ ಸುತ್ತಲೇ ಸುತ್ತುತ್ತವೆ..
ಸೌರವ್ಯೂಹವನ್ನೆಂದೂ ಮೀರಿಹೋಗುವುದಿಲ್ಲ…
ಅಂತೆಯೇ ಸಕಲಪ್ರಜೆಗಳೂ ಸೂರ್ಯವಂಶದ ದೊರೆಗಳ ಆಕರ್ಷಣೆಗೊಳಗಾದರು,
ಅವರನ್ನೇ ತಮ್ಮ ಬದುಕಿನ ಕೇಂದ್ರವಾಗಿರಿಸಿಕೊಂಡರು..
ಅವರು ತೋರಿದ ಹಾದಿಯಲ್ಲಿಯೇ ನಡೆದರು..
ಎಂದೂ ದೊರೆಗಳ ಅಂಕೆಯನ್ನು – ವಾತ್ಸಲ್ಯವ್ಯೂಹವನ್ನು -ಮೀರಿ ಹೋಗಲಿಲ್ಲ..!

ಕಮಲಬಂಧುವಲ್ಲವೇ ಸೂರ್ಯ…?
ಅವನ ಮುಖದರ್ಶನಮಾತ್ರದಿಂದಲೇ ಅರಳುವವಲ್ಲವೇ ಕಮಲಗಳು…!?
ಅಂತೆಯೇ ಅರಳಿದವು ಲೋಕಸಾಮಾನ್ಯರ ಬದುಕುಗಳು, ಸೂರ್ಯವಂಶೀಯರ ಸಂತತಸೇವೆಯಲ್ಲಿ..

ಅದಮ್ಯಸೆಳೆತದಿಂದಾಗಿ ಸೂರ್ಯನೆತ್ತಲೋ, ಅತ್ತಲೇ ಮುಖ ಮಾಡುವ ಸೂರ್ಯಕಾಂತಿಸುಮದ ತೆರದಿ,
ಮಹಾಜನತೆಯ ಸುಮನ-ಗಮನಗಳು ಸೂರ್ಯಕುಲವನ್ನು ಬಿಟ್ಟು ಅತ್ತಿತ್ತ ಚಲಿಸಲಿಲ್ಲ..!

ಸೂರ್ಯನಲ್ಲಿ ಮುಚ್ಚುಮರೆಯೆಲ್ಲಿ…!?
ಬಾನಬಯಲ ಮಧ್ಯೆ ನಿಂತು ಬ್ರಹ್ಮಾಂಡಕ್ಕೆ ತನ್ನನ್ನು ತಾನೇ ತೆರೆದುಕೊಳ್ಳುವವನವನು…
ಸೂರ್ಯಾನ್ವಯಕ್ಕೂ ಅನ್ವಯಿಸುವ ಸಂಗತಿಯಿದು..
ಅಲ್ಲಿ ಮಾಯೆ-ಮೋಸಗಳಿರಲಿಲ್ಲ..
ತೆರೆದಿಟ್ಟ ಪುಸ್ತಕದಂತೆ ನಿರ್ವಂಚನೆಯಲ್ಲಿ, ನೇರ ನಡೆ-ನುಡಿಯಲ್ಲಿ ಬದುಕಿದರಾ ವಂಶದವರು..

ಸೂರ್ಯನಿರುವಲ್ಲಿಯೂ ಮುಚ್ಚುಮರೆಯಿಲ್ಲ..
ಆತನ ಬೆಳಕು ಬಿದ್ದಲ್ಲಿ ಎಲ್ಲವೂ ಸ್ಪಷ್ಟ…
ಸೂರ್ಯವಂಶೀಯರ ಶಾಸನವಂತೂ – ಅಲ್ಲಿ ಎಲ್ಲವೂ ಸ್ಪಷ್ಟ..
ಕುಟಿಲತೆ-ಜಟಿಲತೆಗಳಿಗೆ ಎಳ್ಳಷ್ಟೂ ಎಡೆಯಿರಲಿಲ್ಲ…

ತನ್ನ ನೆಲೆಯಿಂದ ಬಹುದೂರವಿರುವ ಭುವಿಯ ಕೊನೆಯ ಹುಲ್ಲುಕಡ್ಡಿಯನ್ನೂ ತಲುಪಿ, ಅದರೊಳಗೂ ಚೇತನ ಸಂಚಾರವನ್ನೇರ್ಪಡಿಸುವವನಲ್ಲವೇ ಸೂರ್ಯದೇವ..!
ಸಮಾಜದ ಕಟ್ಟಕಡೆಯ, ದಟ್ಟದರಿದ್ರ ದುರ್ಬಲ ವ್ಯಕ್ತಿಯನ್ನೂ ತಲುಪಿದರು, ಆತನ ಬದುಕನ್ನೂ ಬೆಳಗಿದರು ಸೂರ್ಯಸಂತತಿಯವರು..
ಬದುಕಿಗೆ ಬೇಕೇಬೇಕಾದ ಬೆಳಕೀಯುವುದರಿಂದ ಸೂರ್ಯನು ಸಕಲರಿಗೂ ಅಭಿಗಮ್ಯ..
ಹಾಗೆಂದು ಆತನನ್ನು ತುಡುಕಲಾಗದು, ಏಕೆಂದರೆ ನಮಗೆಟುಕದ ಎತ್ತರವವನದು…!
ನಮ್ಮ ಕಲ್ಪನೆಗೆ ಮೀರಿದ ಬಿಸಿ ಅವನದು..!
ಅಪಾರವಾದ ಬೆಳಕು-ಬಿಸಿಗಳ ಆಗರವಾದ ಸೂರ್ಯನಂತೆ ಅವನ ಪೀಳಿಗೆಯೂ ..!
ಬದುಕಿಗೆ ಬೇಕಾದುದೆಲ್ಲವನ್ನೂ ನೀಡುತ್ತಿದ್ದ ಆ ದೊರೆಗಳು ಸಕಲ ಪ್ರಜೆಗಳಿಗೂ ಅಭಿಗಮ್ಯರಾಗಿದ್ದರು..
ಹಾಗೆಂದು ಅವರನ್ನು ಅತಿಕ್ರಮಿಸುವುದು- ಆಕ್ರಮಿಸುವುದು ಸಾಧ್ಯವೇ ಇರಲಿಲ್ಲ..!
ತಪ್ಪಿ ನಡೆದಲ್ಲಿ ಯಾರಿಗೂ ಶಿಕ್ಷೆ ಕೊಡಬಲ್ಲ ಸಾಮರ್ಥ್ಯವು ಅವರಲ್ಲಿ ಸಹಜವಾಗಿಯೇ ಇದ್ದಿತು..!

ಅನನ್ಯ ಗುಣಸಂಪತ್ತಿಯ, ಅಖಿಲಲೋಕೋಪಕಾರಕವಾದ ಬಾನರಸನ ಸಂತತಿಯು ಭುವಿಯಲ್ಲಿ ಮನುಚಕ್ರವರ್ತಿಯ ಮೂಲಕವಾಗಿ ಅನಾವರಣಗೊಂಡಿತು..
ದಿನದ ಆರಂಭದಲ್ಲಿ ಸೂರ್ಯನ ಪ್ರಥಮಕಿರಣವು ಇಳೆಯನ್ನು ಬೆಳಗಲು ಇಳಿದು ಬರುವಂತೆ, ಸೃಷ್ಟಿಯ ಆರಂಭದ ಆ ಕಾಲಘಟ್ಟದಲ್ಲಿ ಭುವಿಯ ಬದುಕನ್ನು ರೂಪಿಸಲು ಸೂರ್ಯನ ತೇಜೋಂಶವೊಂದು ಇಳೆಗಿಳಿದು ಬಂದಿತು..
ಅದುವೇ ಸೂರ್ಯಸುತನಾದ ಮನು..
ಮಾನವರ ಮೊದಲ ಮಹಾರಾಜನವನು..!

ಮಾನವರು ಮಾನವರೆನಿಸಿಕೊಂಡಿರುವುದು ಮನುವಿನಿಂದಾಗಿಯೇ..
ಯಾರೋ ನಿರ್ಮಿಸಿದ ದಾರಿಯಲ್ಲಿ ನಡೆಯುವುದು ಬಲು ಸರಳ….!
ದಾರಿಯಿಲ್ಲದಲ್ಲಿ ದಾರಿ ಮಾಡುವುದು ಬಲು ಕಠಿಣ..
ಬದುಕಿನ ಪ್ರಾಥಮಿಕ ಪರಿಚಯವೇ ಇಲ್ಲದ ಆ ಆದಿಕಾಲದಲ್ಲಿ ನಿತ್ಯಸತ್ಯ ಸುಖದೆಡೆಗೆ ಕರೆದೊಯ್ಯುವ ಜೀವನಪದ್ಧತಿಯನ್ನು ನಿರೂಪಿಸಿದವನು ಮನು..
ಆದರ್ಶ ಬದುಕು – ಆದರ್ಶ ಸಮಾಜಕ್ಕೆ ಕಾರಣವಾಗುವ ಶಾಶ್ವತ ಸುವ್ಯವಸ್ಥೆಯನ್ನು ನಿರ್ಮಿಸಿದವನು ಮನು..
ಏನು ಬದುಕೆಂದರೆ..?
ಏಕೆ ಬಂತು ಈ ಬದುಕು..?
ಹೇಗೆ ಬದುಕಿದರೆ ಬದುಕು ಸಂಪೂರ್ಣವಾದೀತು -ಸಫಲವಾದೀತು..?
ಎಂಬ ಮೂರು ಮೂಲಭೂತ ಪ್ರಶ್ನೆಗಳಿಗೆ ಮೊದಲು ಉತ್ತರವಿತ್ತವನು ಮನು..!
ಪಾವನಸರಯೂತೀರದಲ್ಲಿ ಆದಿನಗರಿ ಅಯೋಧ್ಯೆಯನ್ನು ನಿರ್ಮಿಸಿ, ಸಕಲ ಭೂಮಂಡಲವನ್ನಾಳುವ ಆದಿಸಿಂಹಾಸನವನ್ನು ಅಲ್ಲಿ ಪ್ರತಿಷ್ಠಾಪಿಸಿದನು ಮನು..

ಅಸ್ತಮಿಸುವ ಸೂರ್ಯನು ತನ್ನೆಲ್ಲ ಬೆಳಕನ್ನು ಚಂದ್ರನಿಗೀಯುವಂತೆ,
ಮಾನವರ ಮಧ್ಯದಿಂದ ಮರೆಯಾಗುವ ಮುನ್ನ ಲೋಕಹಿತಂಕರವಾದ ತನ್ನ ತೇಜಸ್ಸನ್ನು ಹಿರಿಯ ಮಗನಾದ ಇಕ್ಷ್ವಾಕುವಿನಲ್ಲಿ ನಿಕ್ಷೇಪಿಸಿದನು ಆದಿರಾಜ..
ನದಿ-ಸರೋವರಗಳಿಂದ..ಕಾನನ-ಪರ್ವತಗಳಿಂದ..ಗ್ರಾಮ-ನಗರಗಳಿಂದ ಪರಿವೃತವಾದ ಸಮಗ್ರ ಭೂಮಂಡಲವು ಸಕಲ ಜೀವರಾಶಿಗಳ ಶಿಕ್ಷೆ-ರಕ್ಷೆಗಳ ಹೊಣೆಯೊಡನೆ ಇಕ್ಷ್ವಾಕುವಿನದಾಯಿತು..

‘ಇಂದಿನಿಂದ ಭೂಮಿಯೆಲ್ಲವೂ ನಿನ್ನದು’ ಎಂದು ಮನು ಹೇಳಿದಾಗ ಇಕ್ಷ್ವಾಕುವು ಭ್ರಮೆಗೊಳ್ಳಲಿಲ್ಲ..
‘ಭೂಮಿ ತನ್ನದು’ ಎಂದರೆ ‘ಭೂಮಿ ಇರುವುದು ತನಗಾಗಿ’ ಎಂದಲ್ಲ ,
‘ತಾನಿರುವುದು – ತನ್ನ ಬದುಕಿರುವುದು ಭೂಮಿಗಾಗಿ’ ಎಂಬ ಪಿತೃವಾಕ್ಯದ ಮರ್ಮವನ್ನರಿತು ಅದರಂತೆಯೇ ನಡೆದುಕೊಂಡನವನು..!
ಮನೆಯ ಹಿರಿಯ ಮಗನು ಮನೆಯನ್ನೂ, ಮನೆಯವರೆಲ್ಲರ ಯೋಗಕ್ಷೇಮವನ್ನೂ ನೋಡಿಕೊಳ್ಳುವಂತೆ..

ವಿಶ್ವಕುಟುಂಬಿ ಮನುವಿನ ಆ ಜ್ಯೇಷ್ಠಪುತ್ರನು ಭೂಗ್ರಹವೆಂಬ ಗೃಹವನ್ನೂ, ಸಕಲ ಭೂಲೋಕವಾಸಿಗಳನ್ನೂ ಹಿರಿಯಣ್ಣನಂತೆಯೇ ವಾತ್ಸಲ್ಯದಿಂದ ನೋಡಿಕೊಂಡನು..
ರಾಜ್ಯವೆಲ್ಲವೂ ತನ್ನ ಸುಖಕ್ಕಿರುವುದು-ತನ್ನ ಉಪಭೋಗಕ್ಕಿರುವುದು ಎಂಬುದು ಉಪಭೋಗವಾದ..
ಭೂಮಿಯಲ್ಲಿರುವುದೆಲ್ಲವನ್ನೂ ಮುರಿದು ಮುಕ್ಕಬಯಸುವ ರಾವಣನಂಥವರು ಇದಕ್ಕೆ ಉದಾಹರಣೆ..!

ರಾಜ್ಯ ತನ್ನದೆಂದರೆ, ತನ್ನ ರಾಜ್ಯದ ಸಕಲ ಪ್ರಜೆಗಳ, ಪ್ರಕೃತಿಯ ಯೋಗಕ್ಷೇಮವು ತನ್ನ ಹೊಣೆ ಎಂದು ರಾಜನು ಭಾವಿಸಿದರೆ ಅದು ಯೋಗಕ್ಷೇಮವಾದ..
ಆದರ್ಶ ರಾಜ್ಯ ಪರಿಪಾಲನೆಯ ಯೋಗಕ್ಷೇಮವಾದಕ್ಕೆ ಪ್ರವರ್ತಕನಾದವನು ಇಕ್ಷ್ವಾಕು..

ಸಿಂಹದ ಪೀಳಿಗೆಯಲ್ಲಿ ಸಿಂಹಗಳೇ ಜನಿಸುವಂತೆ,
ಇಕ್ಷ್ವಾಕುವಂಶದಲ್ಲಿ ಸ್ವರೂಪ- ಸ್ವಭಾವಗಳಲ್ಲಿ ಇಕ್ಷ್ವಾಕುವನ್ನೇ ಹೋಲುವ ಹಲವು ಮಹಾಮಹಿಮರಾದ ಚಕ್ರವರ್ತಿಗಳು ಆವಿರ್ಭವಿಸಿದರು…

~~~ *** ~~~15 Responses to ಸೂರ್ಯನಂಥಾ ವಂಶ..!

 1. ಮಂಗ್ಳೂರ ಮಾಣಿ...

  :)

  [Reply]

 2. sriharsha.jois

  ಹರೇರಾಮ..

  ತಂದೆಯ ಹೋಲಿಕೆ ಮಕ್ಕಳಲ್ಲಿ ಸಹಜವಲ್ಲವೇ..?
  ಆದರೆ, ಪೂರ್ಣ ಸಾಮ್ಯತೆ ಎಲ್ಲೂ ಕಂಡುಬರದು..!
  ಸೂರ್ಯವಂಶ ಹಾಗಲ್ಲ..
  ಸೂರ್ಯನ ಪ್ರಖರತೆ ವಂಶಪೂರ್ಣ ಕಾಣುವುದು..!
  ಇದಲ್ಲವೇ ವಂಶವನ್ನು ಬೆಳಗಿಸುವುದೆಂದರೆ…?

  ಇಂದು..?
  ನಾವು ವಂಶವನ್ನು ಬೆಳೆಸುವುದಿರಲಿ, ಉಳಿಸಿಕೊಳ್ಳುವುದಕ್ಕೂ ತಕ್ಕವರಾಗಿ ಉಳಿದಿದ್ದೇವೆಯೇ..?
  ಖಂಡಿತ ಇಲ್ಲ..
  ವಂಶದ ಮೂಲ ಬೇಡ ನಮಗೆ..
  ಹಿಂದಿನದನ್ನು ಯೋಚಿಸಿ ಮುನ್ನಡೆಯುವ ಮನಸ್ಥಿತಿಯೇ ಇಲ್ಲ ನಮ್ಮಲ್ಲಿ..
  ಸುಖವೆಂಬ ಮರೀಚಿಕೆಯ ಹಿಂದೆ ಓಡುತ್ತಿದ್ದೇವೆ ದಾಪುಗಾಲು ಹಾಕಿಕೊಂಡು…!
  ನಮಗೆ ಬರುವ ಕಷ್ಟಕ್ಕೆ ಪೂರ್ವಜರು ಕಾರಣರಾಗುತ್ತಾರೆ…!
  ಅದೇ ಸುಖ- ಸಂಪತ್ತಿದ್ದರೆ..?
  ಅಹಂ ತಲೆಯೆತ್ತುತ್ತದೆ..ಎಲ್ಲವೂ ನನ್ನಿಂದಲೇ ಎಂಬ ರೀತಿಯಲ್ಲಿ ವರ್ತಿಸುತ್ತೇವೆ..!

  ಓ ಬಾಂಧವರೇ, ನಮ್ಮ ವಂಶವನ್ನು ನಾವು ಗೌರವಿಸೋಣ..
  ನಮ್ಮ ಎಷ್ಟೋ ಪಾಪಕರ್ಮಗಳು ಹಿರಿಯರ ಪುಣ್ಯಕರ್ಮಗಳಿಂದಾಗಿ ಕಳೆಯುತ್ತವೆ..!
  ಆ ಸರಪಳಿಯನ್ನು ತುಂಡರಿಸಬಾರದು ನಾವು..
  ಮುಂದೆ ನಮ್ಮ ನಂತರದವರಿಗೂ ಅದು ಬೇಕಲ್ಲವೇ..?

  ಸೂರ್ಯವಂಶೀಯರು ಎಷ್ಟು ತಲೆಗಳು ಕಳೆದರೂ ತಮ್ಮ ಮೂಲಪುರುಷನನ್ನನುಸರಿಸಿಯೇ ಹೊಸದನ್ನು ಬೆಳೆಸಿದರು.
  ಕೊನೆಯ ಪಕ್ಷ ನಮ್ಮ ತಂದೆ-ತಾಯಿಯನ್ನಾದರೂ ಗೌರವಿಸಿ ಅನುಸರಿಸೋಣವೇ..

  ವಂಶೋದ್ಧಾರಕರಾಗದಿದ್ದರೂ…..
  ವಂಶದ ಗೌರವವನ್ನಾದರೂ ಉಳಿಸುವವರಾಗೋಣವೇ….

  ಗುರುದೇವಾ..ಇವೆನ್ನ ಮನಸಿನನಿಸಿಕೆಗಳು..
  ಅರ್ಪಿಸುವೆ ಚರಣದೊಳು….

  [Reply]

  Raghavendra Narayana Reply:

  Beautiful.
  .
  Let us go back to roots and redefine our life…???…
  .
  Culture Roots, Roots search specified in Bhagavadgita, our own Roots.. Moolada Smarane…
  .
  Shri Gurubhyo Namaha

  [Reply]

 3. Raghavendra Narayana

  ಸೂರ್ಯನಿದ್ದರೆ ನಡೆ, ಸೂರ್ಯನಿಲ್ಲದಿರೆ ಅಡೆ ತಡೆ.
  ನಾಯಕರು ಅಗತ್ಯ – ಬಹು ಸಾಮನ್ಯರ, ವಿರಳ ಅಸಾಮಾನ್ಯರ ಲೋಕವಿದು. ಸಾಮಾನ್ಯರಿಗ೦ತು ಬೇಕೇ ಬೇಕು. ಅಸಾಮಾನ್ಯರಾಗಲು ವಾತಾವರಣ ಸೃಷ್ಟಿಸಲೂ ಬೇಕು.
  ಸೃಷ್ಟಿಯ ಕಾರ್ಯ ಮೇಲ್ವಿಚಾರಕ ಕರ್ತರಿ೦ದ ಕುಶಲ.
  .
  ಶ್ರೀ ಗುರುಭ್ಯೋ ನಮಃ

  [Reply]

 4. Raghavendra Narayana

  “ಯಾರೋ ನಿರ್ಮಿಸಿದ ದಾರಿಯಲ್ಲಿ ನಡೆಯುವುದು ಬಲು ಸರಳ….!
  ದಾರಿಯಿಲ್ಲದಲ್ಲಿ ದಾರಿ ಮಾಡುವುದು ಬಲು ಕಠಿಣ..”
  ——————————————————————

  [Reply]

 5. gopalakrishna pakalakunja

  ‘……ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು…..’

  ಆದಿ ಶಂಕರರ ಗುಣಗಳೆಲ್ಲವೂ ಅವಿಛಿನ್ನ ಪರಂಪರೆಯ ಶಂಕರಾಚಾರ್ಯರುಗಳಲ್ಲಿ ಸ್ಪಷ್ಟವಾಗಿ ತೋರಿಬರುವಂತೆ..

  [Reply]

 6. Ashwini Hakkare

  ಕತ್ತಲೆ ಎಂಬುದು ಬೆಳಕಿನ ಅನುಪಸ್ಥಿತಿ. ಬೆಳಕಿನ ರಾಜ್ಯದಿ ಕತ್ತಲೆಗೆ ಅಸ್ತಿತ್ವವಿಲ್ಲ.
  ಬೆಳಕಿನ ಮೂಲ ಒಂದೆ. ಆದರೆ ಪ್ರಭೆ ಜೀವತಂತುವಿನ ಕೊನೆಯವರೆಗೊ ವ್ಯಾಪಿಸಿಹುದು.
  ಸಾಮಾನ್ಯ ದೃಷ್ಟಿಗೆ ಅಗೋಚರವಾದ ‘ಮೂಲ’, ಸತ್ಯವೆಂದು ತೋಚಿದರೂ..
  ಮುಕ್ತ ದೃಷ್ಟಿಯೊದಗಿದಾಗ ಸಕಲವೂ ‘ಮೂಲ ಬೆಳಕೇ’ ಎಂಬುದು ಅರಿವಾಗುವುದು.

  ಪರಮಾತ್ಮನು, ಈ ತತ್ವ ನಿರೂಪಣೆಗೆ ಸೂರ್ಯವಂಶ ರೂಪದಿ ಅನಾವರಣಗೊಂಡನೆನೋ..!!

  ಸೂರ್ಯ ಗುಣ ತೇಜೋವಂತರಾಗಿ, ಸೂರ್ಯ ವಂಶ ದೊರೆಗಳು ಜೀವಲೋಕಕ್ಕೆ ಬೆಳಕುಚೆಲ್ಲಿ
  ಜನ್ಮಾಂತರದ ಕತ್ತಲೆ ಕಳೆಯುತಿದ್ದರೇನೋ ಅನಿಸುತ್ತದೆ.

  ಪರಮ ತೇಜೋವಂಶದ ತೇಜಸ್ಸು ಪದರೂಪದ ಗುರು ಅನುಗ್ರಹವಾಗಿ ಹರಿದಂತಿದೆ ಈ ಲೇಖನ.

  ಹರೇ ರಾಮ.

  [Reply]

 7. Raghavendra Narayana

  ಹೈಮವತಿ ಶಿವೆ ತಾನೆ ಕಾಳಿ ಚ೦ಡಿಕೆಯ೦ತೆ |
  ಪ್ರೇಮ ಘೋರಗಳೊ೦ದೆ! – ಮ೦ಕುತಿಮ್ಮ||
  .
  ಡಿ.ವಿ.ಜಿ. – ದೇವಿ/ದುರ್ಗೆಯ ಬಗ್ಗೆ ಹೆಚ್ಚು ಕಗ್ಗಗಳಿಲ್ಲವೆ?
  .
  ಶ೦ಕರಾಚಾರ್ಯರು ಬೇಕು ವಿಶ್ವಜನನಿಯ ಸ್ತುತಿಸಲು…. ಅವರ ವ೦ಶದಲ್ಲೆ ಬ೦ದಿರುವ ಗುರುಗಳ “ದುರ್ಗಾ ಸಪ್ತ ಶತಿ” ಪ್ರವಚನ ಕೇಳಲು ಶಿವಶಿವೆ ಜನನಿಜನಕರಿಬ್ಬರು ಅಕ್ಕಪಕ್ಕ ನಿ೦ತು ಕರುಣಾಪೂರ ದೃಷ್ಟಿ ಹರಿಸರಬೇಕು ನಮ್ಮ ಮೇಲೆ. (ಗಿರಿನಗರ ರಾಮಾಶ್ರಮದಲ್ಲಿ ದುರ್ಗೆಯ ಪ್ರವಚನ ಈ ನವರಾತ್ರಿ ಪೂರ, ರಾತ್ರಿ 8.15).
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಶಿವೆ ತನ್ನವರಲ್ಲಿ ಇರಿಸಿಹಿಳು ಗರ್ವವೆ೦ಬ ಹಿರಿದಾದ ಪ್ರಕೃತಿಯ.
  ಶಿವೆ, ನೀನಿತ್ತ ಕಾಯವ, ನೀನಿತ್ತ ಪೃಥ್ವಿ ಆಕಾಶ ವಾಯು ಜಲ ಅಗ್ನಿ ಒಡನೆ ನಿನ್ನ ನೆರಳಲ್ಲಿ ಕ್ರ‍ೀಡಿಸುವೆ. ಕಾಣುವೆ, ಕೇಳುವೆ, ಕುಣಿಯುವೆ, ಶಿವೆ ಹೊಸಲೋಕಗಳ ಸೃಷ್ಟಿಸು – ಕಲ್ಪನೆಗೂ ಸಿಗದ ಕಲ್ಪ ಕಾಲವಾದರು ಶಿವನ ಕೇಳೆನು.
  ದುರ್ಗೆ, ಗಳಿಸುವೆ, ತೊಡಿಸುವೆ ನಿನಗೆ ಆಭರಣವ, ನೀ ಉಣಿಸಿದ ಕಲ್ಪನೆಯೆ೦ಬ ಅನ್ನದಿ೦ದ, ಅಸ೦ಖ್ಯ ಬ್ರಹ್ಮಾ೦ಡಗಳೇನು, ಅಸ೦ಖ್ಯ ದುರ್ಗೆಯರ ದರ್ಶನ ಮಾಡಿಸುವೆ. ಅರ್ಪಿಸುವೆ ದುರ್ಗೆ, ನಾ ಎ೦ಬ ಗರ್ವ ಬೀಳುವ ಮೊದಲು, ಗಳಿಸಿದ್ದೆಲ್ಲಾ ಅರ್ಪಿಸುವೆ. ನೀ ಪ್ರಕೃತಿಯಾದರೆ ನಾ ಪರಪ್ರಕೃತಿಯಾಗಿ ನಿನ್ನ ಕ೦ದನೆ೦ದು ಸ್ಥಾಪಿಸುವೆ. ತಾಯೇ ವರ್ಣಗಳ ತೋರಿಸಿದೆ, ನಾನೇನ ನೀಡಲಿ, ನಿನ್ನಲಿರುವುದೆ ನಿನಗೆ ನೀಡಲೆ, ನಿನ್ನಲಿಲ್ಲದಿರುವುದೇನಿದೆ, ನಿನ್ನನ್ನು ಪರಮಾತ್ಮನನ್ನು ಅಕ್ಕಪಕ್ಕ ಕೂಡಿಸಿ ಸಾಷ್ಠಾ೦ಗ ವ೦ದನೆಯಿ೦ದ ಒ೦ದಾದರೆ ನೀ ಮೆಚ್ಚುವೆಯ, ಮೆಚ್ಚಿದರೂ ಬಿಡಲೊಪ್ಪುವೆಯ????
  .
  ಶ್ರೀ ಗುರುಭ್ಯೋ ನಮಃ

  [Reply]

 8. SHREEKRISHNA SHARMA

  “ತಾನಿರುವುದು ತನ್ನ ಬದುಕಿರುವುದು ಭೂಮಿಗಾಗಿ” ಇದನ್ನು ತಿಳ್ಕೊಂಡು ಜೀವನ ನಡೆಸಿದರೆ ಭೂಮಿ ಸ್ವರ್ಗವಾಗುವುದರಲ್ಲಿ ಸಂಶಯ ಇಲ್ಲ.
  ಬಾಹ್ಯ ಜಗತ್ತಿಗೆ ಬೆಳಕು ನೀಡಲು ಸೂರ್ಯ ತತ್ವ. ಅಂತರಂಗಕ್ಕೆ ಬೆಳಕು ನೀಡಲು ರಾಮ ತತ್ವ
  ಹರೇ ರಾಮ

  [Reply]

 9. k.b adithya

  ನಿಜ ವಾಗಿಯು ಸತ್ಯ

  [Reply]

 10. chs bhat

  ಹರೇ ರಾಮ. ಸೂರ್ಯ ಈ ಭುವಿಯ ಕಟ್ಟ ಕಡೆಯ ವ್ಯಕ್ತಿ/ವಸ್ತುವನ್ನೂ ಬೆಳಗುವಂತೆ ಸೂರ್ಯ ವಂಶೀಯರು ಅವರ ಸಾಮ್ರಾಜ್ಯದ ಕಟ್ಟ ಕಡೆಯ ವ್ಯಕ್ತಿಯ ಬಾಳನ್ನೂ ಬೆಳಗಿದರು ಎಂಬ ಹೋಲಿಕೆ ತುಂಬಾ ಆಪ್ಯಾಯಮಾನ. ಹರೇ ರಾಮ.

  [Reply]

 11. ganeshbhat bayar

  ಅಂತಹವರೆಲ್ಲಾ ಬಂದು ಹೋದ ಭಾರತದಲ್ಲಿ ನಾವೂ ಜನ್ಮ ತಾಳಿದ್ದೇವೆ ಎಂಬ ಹೆಮ್ಮೆ ರಾಮಾ!!!

  [Reply]

 12. ganeshbhat bayar

  ಅಂತಹವರೆಲ್ಲಾ ಬಂದು ಹೋದ ಭಾರತದಲ್ಲಿ ನಾವೂ ಜನ್ಮ ತಾಳಿದ್ದೇವೆ ಎಂಬ ಹೆಮ್ಮೆ ರಾಮಾ!!! ಆದರೆ ಒಂದು ಜಿಜ್ನಾಸೆ….. ಈಗ ಇನ್ನೊಬ್ಬ ರಾಮನೋ ಅಲ್ಲ ಪರಶುರಾಮನೋ ಆವಿರ್ಭವಿಸಿ ದುಶ್ತ ಕ್ಶತ್ರಿಯ ಸಂಹಾರ ಆಗಬೇಕೋ ಏನೋ….

  [Reply]

 13. dattu

  ವಂಶದ ಗೌರವವನ್ನು ಕಾಪಾಡಬೇಕೆಂಬ ಪಾಠವೋ……….

  ಅಧಿಕಾರಕ್ಕೆ ಬಂದಕೂಡಲೇ ಸ್ವಾರ್ಥವನ್ನು ಮೆರೆವ ರಾಜಕಾರಣಿಗಳಿಗೆ ನಿಃಸ್ವಾರ್ಥದಪಾಠವೋ……………

  ಎಲ್ಲವನ್ನೂ ಕೃತಿಯಲ್ಲಿ ಮಾಡಿ ತೋರಿದ ಸೂರ್ಯವಂಶಕ್ಕೆ ಇದೋ ನಮನ.

  [Reply]

Leave a Reply

Highslide for Wordpress Plugin