ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ . .
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ . . .
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ…

ಅಲ್ಲಿ. . .
ಮೈಮೇಲೆ ಹುತ್ತವೇ ಬೆಳೆದರೂ ಅರಿವಾಗದಂತೆ ಮೈಮರೆತ ಪರಮ ತನ್ಮಯತೆಯ ಮಹಾಮುನಿ. . .
ಆ ಮುನಿಯ ಮಹಾಮನದಲ್ಲಿ ಮೂಡಿಬಂದಿತ್ತೊಂದು ಮಹಾಪುರುಷನ ದಿವ್ಯ ಮೂರ್ತಿ. . .
ತಮಸೆಯ ಪರಿಶುದ್ಧಿ. .
ಗಿರಿಶಿಖರಗಳ ಅಚಲತೆ, ಉನ್ನತಿ, ಗಾಂಭೀರ್ಯ. .
ಕಾನನಗಳ ಸೌಂದರ್ಯ,ಸೌಮ್ಯತೆ . .
ಆಶ್ರಮದ ಪವಿತ್ರತೆ . .
ಮುನಿಯತ್ಯಾಗ..

ಚಿನ್ಮಯಮೂರ್ತಿಯ ಧ್ಯಾನದಲ್ಲಿ ಮೃಣ್ಮಯಿಯಾದ ಮಹಾಮುನಿ..!



ಇವೆಲ್ಲವೂ ಮೇಳೈಸಿದ್ದವು ಆ ಮೂರ್ತಿಯಲ್ಲಿ..


ಕೋಟಿಸೂರ್ಯ ಪ್ರಕಾಶ..!!!
ಆದರೆ ಕೋಟಿ ಚಂದ್ರರ ತಂಪು..!!!!!
ಆ ಮೂರ್ತಿಯ ಮೂಲದ್ರವ್ಯ ಶಿಲೆಯಾಗಿರಲಿಲ್ಲ – ಚೈತನ್ಯದ ಸೆಲೆಯಾಗಿತ್ತು..!!
ಮರದ ಮೂರ್ತಿಯದಲ್ಲ – ಅಮರ ಮೂರ್ತಿ..!!
ಮೃಣ್ಮಯವಲ್ಲ – ಚಿನ್ಮಯಮೂರ್ತಿ..!!
ಒಂದೇ ಒಂದೂ ಕುಂದೂ ಇಲ್ಲದ ಚಂದದ ಮೂರ್ತಿ…


ಒಮ್ಮೆ ನೋಡಿದರೆ ಮತ್ತೊಮ್ಮೆ..
ಮತ್ತೊಮ್ಮೆ ನೋಡಿದರೆ ಮಗದೊಮ್ಮೆ..
ನೋಡುತ್ತಲೇ ಇರುವಂತೆ ಮಾಡುವ ಮಾಟ..
ಜೀವಕೋಟಿಯ ನೋಟವನ್ನೆಲ್ಲ ತನ್ನೆಡೆಗೆ ಸೆಳೆಯುವ ಹೂಟ..
ಕಬ್ಬಿಣದ ದೃಷ್ಟಿಯನ್ನೂ ಕದಲಗೊಡದ ಚುಂಬಕಮೂರ್ತಿ…


ಹೃದಯಕಮಲದಲ್ಲಿ ಕುಳಿತು ಆ ಮೂರ್ತಿ ಮುನಿಯ ಹೊರಗಣ್ಣು ಮುಚ್ಚಿಸಿ…ಜಗವ ಮರೆ ಮಾಡಿತು…
ಒಳಗಣ್ಣು ತೆರೆಯಿಸಿ ತನ್ನನ್ನು ತಾನೇ ತೋರಿಸಿತು…!!

ಸೂರ್ಯನ ಗುರುತ್ವಾಕರ್ಷಣೆಗೆ ಸಿಕ್ಕಿ, ಸೂರ್ಯನಿಂದ ದೂರ ಸರಿಯಲಾರದೇ, ಸೂರ್ಯನ ಸುತ್ತವೇ ಸತತವಾಗಿ ಸುತ್ತುವ ಭೂಮಿಯಂತಾಯ್ತು ಮುನಿಯ ಮನ..
ತನ್ನೊಳಗೇ ತಾನು ಆ ಮಂಗಲಮೂರ್ತಿಯನ್ನೇ ಕಾಣುತ್ತಾ . . . .
ಕಣ್ಣು ಹಿಂದಿರುಗಿಸಲಾರದೇ……….
ಸ್ವಯಂ ಮೂರ್ತಿಯಂತೆಯೇ ಕುಳಿತ ಮುನಿಗೆ ಮೈಮೇಲೆ ಹುತ್ತ ಬೆಳೆದರೂ ಗೊತ್ತಾಗಲೇ ಇಲ್ಲ . . . ! ! !

Facebook Comments Box