ದಬ್ಬಾಳಿಕೆಯ ಆದಿ ಯಾವುದು..?
ವಿನಾಶದ ಪ್ರಾರಂಭ ಎಲ್ಲಿಂದ..?
ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು..
ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು..
ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..?
ಉತ್ತರವನ್ನು ನಾವಿಲ್ಲಿ ಕಂಡೆವು…..

ಒಂದಾನೊಂದು ಊರು,
ಆ ಊರಿಗೊಬ್ಬ ಜಮೀನ್ದಾರ,
ಊರಿಗೆ ಆತ ತುಂಡರಸನಂತಿದ್ದ,
ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ..
ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು..
ಪರೀಕ್ಷಿಸಿದ ವೈದ್ಯರಿಗೆ ಲೆಕ್ಕ ಇಲ್ಲ,ಪ್ರಯೋಗಿಸಿದ ಔಷಧಗಳಿಗೆ ಮಿತಿಯಿಲ್ಲ,
ರೋಗ ಮಾತ್ರ ಕಡಿಮೆಯಾಗಲೇ ಇಲ್ಲ..
ಕೊನೆಗೆ ಜಮೀನ್ದಾರ ಹಾಸಿಗೆ ಹಿಡಿದ..
ಈಮಧ್ಯೆ ಜಮೀನ್ದಾರನ ಮನೆಗೆ ಗುರುಗಳೊಬ್ಬರ ಆಗಮನವಾಯಿತು..

ರೋಗಿಯನ್ನು ಪರಿಶೀಲಿಸಿದ ಗುರುಗಳು ನೀಡಿದ ಸಲಹೆ “ಈ ವ್ಯಕ್ತಿ ಹಸಿರು ಬಣ್ಣವನ್ನಲ್ಲದೆ ಬೇರೆ ಯಾವ ಬಣ್ಣವನ್ನೂ ನೋಡಬಾರದು”

ಸರಿ,ಹಸಿರೀಕರಣ ಪ್ರಾರಂಭವಾಯಿತು..
ಮೊದಲಿಗೆ ಜಮೀನ್ದಾರನಿರುವ ಕೋಣೆಗೆ ಮತ್ತು ಅಲ್ಲಿರುವ ಎಲ್ಲಾ ವಸ್ತುಗಳಿಗೆ ಹಸಿರು ಬಣ್ಣ ಬಳಿಯಲಾಯಿತು..
ಏನಾಶ್ಚರ್ಯ..!! ರೋಗಿಯ ದೇಹಸ್ಥಿತಿಯಲ್ಲಿ ಅಸಾಧಾರಣ ಸುಧಾರಣೆ ಕಂಡುಬಂತು..
ಏಳಲಾರದ, ಮಾತನಾಡಲಾರದ ಸ್ಥಿತಿಯಲ್ಲಿದ್ದ ಜಮೀನ್ದಾರ ಕೋಣೆಯೊಳಗೆ ಸರಾಗ ಸಂಚರಿಸಲಾರಂಭಿಸಿದ..
ಆದರೆ ಆರೋಗ್ಯ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಆತನಿಗೆ ದಿನವಿಡೀ ಒಂದೇ ಕೋಣೆಯಲ್ಲಿದ್ದು ಬೇಸರವೆನಿಸತೊಡಗಿತು..
ಆದರೆ ಹಸಿರಲ್ಲದೆ ಬೇರೆ ಯಾವ ಬಣ್ಣವನ್ನೂ ನೋಡುವಂತಿರಲಿಲ್ಲವಾದುದರಿಂದ ಕೋಣೆಯ ಹೊರಗೆ ಬರುವಂತಿರಲಿಲ್ಲ..
ಜಮೀನ್ದಾರನ ಬೇಸರ  ತೀವ್ರವಾದಾಗ ಅನ್ಯಮಾರ್ಗವಿಲ್ಲದೆ ಮನೆಗೆಲ್ಲ ಹಸಿರು ಬಣ್ಣವನ್ನೇ ಬಳಿಯಲಾಯಿತು..
ಆದರೆ ಆರೋಗ್ಯ ವೃದ್ಧಿಯಾಗುತ್ತಿದ್ದಂತೆ ಹೊರಜಗತ್ತನ್ನು ನೋಡುವ ಜಮೀನ್ದಾರನ ತವಕವೂ ವೃದ್ಧಿಯಾಗುತ್ತಿತ್ತು..
ಕೊನೆಗೊಮ್ಮೆ ಆತ ಮನೆಯಿಂದ ಹೊರಬರಲು ನಿಶ್ಚಯಿಸಿದಾಗ ಇಡೀ ಊರಿಗೆ ಹಸಿರು ಬಣ್ಣ ಬಳಿಯಲು ಆಜ್ಞಾಪಿಸಿದ..
ಬಣ್ಣದ ಕಾರ್ಖಾನೆಗಳ ಭಾಗ್ಯವೋ ಭಾಗ್ಯ..!! ಆ ಊರಿಗೆ ಬಣ್ಣ ತುಂಬಿದ ಲಾರಿಗಳ ದಂಡು-ದಂಡೇ ಆಗಮಿಸಿತು..
ರಸ್ತೆಗಳು-ಪ್ರಾಕಾರಗಳು-ಮನೆಗಳು-ಮರಗಳು ಎಲ್ಲೆಲ್ಲೂ ಹಸಿರೇ ಹಸಿರು..!!
ಜಮೀನ್ದಾರ ಬೀದಿಯಲ್ಲಿ ಸಂಚರಿಸುವಾಗ ಊರಿನವರು ಯಾರೂ  ಮನೆಯಿಂದ ಹೊರಗೆ ಬರುವಂತೆಯೇ ಇರಲಿಲ್ಲ..
ಹಾಗೊಂದು ವೇಳೆ ಹೊರಗೆ ಬರುವುದಿದ್ದರೆ ಮೈಗೆಲ್ಲಾ ಹಸಿರು ಬಣ್ಣ ಬಳಿದುಕೊಂಡೇ ಹೊರಗೆ ಬರಬೇಕಾಗಿತ್ತು..
ಹೀಗೆ ಜಮೀನ್ದಾರನ ಕಷ್ಟ ಕರಗಿ ಊರಿನವರ ಕಷ್ಟ ಮುಗಿಲು ಮುಟ್ಟುವಾಗ….ಊರಿಗೆ ಮತ್ತೊಮ್ಮೆ ಗುರುಗಳ ಆಗಮನವಾಯಿತು..
ಗ್ರಾಮಸ್ಥರು ಗುರುಗಳಲ್ಲಿ ಗೋಳು ಹೇಳಿಕೊಂಡರು..
ಈ ಬಗ್ಗೆ ಗುರುಗಳು ಜಮೀನ್ದಾರನನ್ನು ವಿಚಾರಿಸಲಾಗಿ ನಡೆದ ಸಂವಾದ ;
ಗುರು – ಪರಪೀಡನೆಯಿಂದ ಬರುವ ಸುಖ ಸುಖವಲ್ಲ,ನೀನು ಆರೋಗ್ಯವಂತನಾದುದು ಸಂತೋಷ, ಆದರೆ ಊರಿಗೇಕೆ ಉಪದ್ರವ ನೀಡುತ್ತಿದ್ದೀಯೇ ?
ಜಮೀನ್ದಾರ – ಗುರುದೇವಾ,.ಹಸಿರಲ್ಲದೆ ಬೇರೆ ಏನೂ ನೋಡಬಾರದೆಂಬ  ನಿಮ್ಮ ಅಪ್ಪಣೆಯನ್ನು ನಾನು ಪಾಲಿಸಿದ್ದೇನೆ.
ನೋಡಬಯಸಿದ್ದಕ್ಕೆಲ್ಲಾ ಹಸಿರು ಹಚ್ಚದೆ ನನ್ನ ಬಳಿ ಬೇರೆ ಮಾರ್ಗವಾದರೂ ಏನಿದೆ ?
ಗುರು – ಹಾಗಿದ್ದರೆ ಸೂರ್ಯ-ಚಂದ್ರರನ್ನು ಹೇಗೆ ನೋಡುವೆ ? ನಕ್ಷತ್ರ-ನದಿಗಳನ್ನು ಹೇಗೆ ನೋಡುವೆ ? ಇವುಗಳನ್ನು ನೋಡದಿರುವುದಾದರೂ ಹೇಗೆ ? ಇವುಗಳಿಗೆ ಬಣ್ಣ ಬಳಿಯುವುದಾದರೂ ಹೇಗೆ ?
ಜಮೀನ್ದಾರ – ಪರಿಹಾರ ?

ಗುರು –  ಹಸಿರು ಕನ್ನಡಕ !! ಸೃಷ್ಟಿಗೆಲ್ಲ ಬಣ್ಣ ಬಳಿಯುವ ಬದಲು ನಿನ್ನ ದೃಷ್ಟಿಯಲ್ಲಿ ಸಣ್ಣ ಪರಿವರ್ತನೆ ಮಾಡಿಕೊಂಡಿದ್ದರೆ-ಹಸಿರು ಕನ್ನಡಕ ಧರಿಸಿದ್ದರೆ ನೀನು ಏನು ಬೇಕಿದ್ದರೂ ನೋಡಬಹುದಿತ್ತು,ಊರಿಗೆ ಯಾವ ಉಪದ್ರವವೂ ಇರುತ್ತಿರಲಿಲ್ಲ..

ಜಮೀನ್ದಾರ – ……………………..

ಕಥೆಯಲ್ಲಿ ಕಂಡಿದ್ದು……

ನಮ್ಮ ದೃಷ್ಟಿಗೆ ತಕ್ಕಂತೆ ಸೃಷ್ಟಿ ಬದಲಾಗದು.. ಸೃಷ್ಟಿಯನ್ನನುಸರಿಸಿ ನಮ್ಮ ದೃಷ್ಟಿಯೇ ಬದಲಾಗಬೇಕು..
ಸೃಷ್ಟಿಯಲ್ಲಾದ ಪರಿವರ್ತನೆಗಳನ್ನನುಸರಿಸಿ ತನ್ನಲ್ಲೂ ಪರಿವರ್ತನೆಗಳನ್ನು ತಂದುಕೊಂಡ ಜಿರಾಫೆ ಇಂದಿಗೂ ಉಳಿದುಕೊಂಡಿದೆ.ಹಾಗೆ ಮಾಡದ ಡೈನೋಸಾರಸ್ ನಾಮಾವಶೇಷವಾಗಿದೆ.
ನಮ್ಮ ದೃಷ್ಟಿಗೆ ತಕ್ಕಂತೆ ಇತರರು ಬದಲಾಗಬೇಕೆಂದು ನಾವು ಯಾವಾಗ ಬಯಸುತ್ತೇವೆಯೋ ಆಗಲೇ ದಬ್ಬಾಳಿಕೆಗಳು, ಕಲಹಗಳು,ಯುದ್ಧಗಳು ಪ್ರಾರಂಭವಾಗುತ್ತವೆ.ಅವನತಿಯ ಆರಂಭಬಿಂದು ಅದು..
ಸೃಷ್ಟಿಗೆ ಹೊಂದಿ ಬದುಕುವವನ್ನು ಶಾಂತಿ-ಪ್ರೀತಿಗಳು ವರಿಸುತ್ತವೆ..

|| ಹರೇ ರಾಮ ||

Facebook Comments