LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ವಿರಾಧ ವಧ ಪಂಡಿತನೆಂದರೆ..??

Author: ; Published On: ಗುರುವಾರ, ಫೆಬ್ರವರಿ 11th, 2010;

Switch to language: ಕನ್ನಡ | English | हिंदी         Shortlink:

ಅದೊಂದು ಕಾಡು. . !
ಕಾಡೆಂದರೆ ಪ್ರಕೃತಿಮಾತೆಯ ಮುಗುಳ್ನಗು..
ಆದರೆ ಈ ಕಾಡು ಹಾಗಿರಲಿಲ್ಲ..!!
ಬರ್ಬರ ಆಕ್ರಮಣಕ್ಕೀಡಾದ ಮಾತೃತ್ವದ ಭಯ – ಸಂಕಟಗಳ ಪ್ರತೀಕದಂತಿತ್ತದು..!!
ಅಲ್ಲಿ ಸೌಮ್ಯ ಮೃಗಗಳ ಸುಳಿವಿರಲಿಲ್ಲ..
ಎತ್ತೆತ್ತಲೂ ಕ್ರೂರ – ಘೋರ ಮೃಗಗಳೇ..!!!
ಮುರಿದ ಮರಗಳು..!!
ಬಿದ್ದು ಬಾಡಿ ಬಿಸುಡಿದ ಬಳ್ಳಿಗಳು..!!
ಸಂಕಟ ಮಿತಿಮೀರಿದರೆ ಕಣ್ಣೀರೂ ಬತ್ತಿಹೋಗುವಂತೆ….
ಆ ಕಾಡಿನಲ್ಲಿ ಅದೆಷ್ಟು ನೋಡಿದರೂ . . . ಅದೆಷ್ಟು ನಡೆದರೂ . . ಜೀವಜಲದ ಸುಳಿವಿಲ್ಲ. .!!
ಹಾಡುವ ಹಕ್ಕಿಗಳಿಲ್ಲ..!
ಎಲ್ಲಿನೋಡಿದರಲ್ಲಿ ರಣಹದ್ದುಗಳು, ಗಿಡುಗ, ಗೂಬೆಗಳು..!!!
ಕಾಡಿಗೆ ಕಾಡೇ ಮೊಳಗುವಂತಿದ್ದ ಮಿಡತೆ- ಜೀರುಂಡೆಗಳ ಕಿವಿ ಸೀಳುವ ಕರ್ಕಶ ಕೂಗುಗಳು..!!

ಯಾಕೆ ಹೀಗಾಯಿತು ಈ ಕಾಡು..!?
ಅದಾರ ಕ್ರೂರ ಆಕ್ರಮಣದಿಂದ ಪ್ರಕೃತಿಯಲ್ಲಿ ಈ ಕ್ಷೋಭೆ..!!?
ಮಮತೆಯ ಮಾತೆಗೆ ಅದಾವ ಮೂರ್ಖ ಮಗನ ವಿರೋಧ..?
ಅವನೇ ವಿರಾಧ..!!

ಆ ಕಾಡಿನ ಘೋರತೆಯೇ ನೂರ್ಮಡಿಯಾಗಿ ಆತನಲ್ಲಿ ಮನೆಮಾಡಿತ್ತು..!!
ಅಥವಾ ಆತನ ಕ್ರೂರತೆಯೇ ಕಾಡಿನಲ್ಲೆಲ್ಲಾ ಪ್ರತಿಫಲಿಸಿತ್ತು..!

ಬೆಟ್ಟದಂತಹ ಆಕಾರ, ಕರ್ಣ ಕರ್ಕಶವಾದ ಸ್ವರ, ಗುಂಡಿಗಿಳಿದಿದ್ದ ಕೆಂಡಗಣ್ಣುಗಳು…!!
ಪಾತಾಳವನ್ನು ನೆನಪಿಸುವ ಬಾಯಿಯೆಂಬ ಬಾವಿ…!!
ಬಹುದೊಡ್ಡ ವಿಕೃತ ಮುಖ..!
ಗುಡಾಣದಂಥಾ ಹೊಟ್ಟೆ..!!
ಒಂದಕ್ಕೊಂದು ಸಂಬಂಧವಿಲ್ಲದಂತಿದ್ದ ಅಂಗಾಂಗಳು…!
ಜೀವಿಗಳಮೇಲೆ ಆತ ಮಾಡಿದ ಬರ್ಬರ ಧಾಳಿಯ ಗುರುತಾಗಿ ಮೈತುಂಬ ಮೆತ್ತಿಕೊಂಡಿದ್ದ ರಕ್ತ, ಮಾಂಸ, ಮೇದಸ್ಸುಗಳು..!!!
ಮಾನ ಮುಚ್ಚಲು(?) ಬಟ್ಟೆಯ ಬದಲು ರಕ್ತ ಸಿಕ್ತವಾದ ವ್ಯಾಘ್ರ ಚರ್ಮಗಳು..!!
ಎಲ್ಲೂ ಪ್ರಕೃತಿಯ ಕುರುಹಿಲ್ಲ… ಎಲ್ಲೆಲ್ಲಿಯೂ ವಿಕೃತಿಯೇ ವಿಕೃತಿ..!!
ರಾಕ್ಷಸತ್ವವಿರುವುದೇ ಹೀಗಲ್ಲವೇ..!!!?

ರಾಮನಿರುವ ಅಡವಿ ಅದು ಅಯೋಧ್ಯೆ ! ರಾಮನಿಲ್ಲದ ಅಯೋಧ್ಯೆ . . . ?

ಕೈಯಲ್ಲೊಂದು ಮಹಾಶೂಲ..!!! ಆ ಶೂಲದ ಚೂಪಾದ ತುದಿಯಲ್ಲಿ,..
ಮೂರು ಸಿಂಹಗಳು. . .
ನಾಲ್ಕು ಹುಲಿಗಳು . . .
ಎರಡು ತೋಳಗಳು. . . .
ಹತ್ತು ಜಿಂಕೆಗಳು . . .
ದಂತಗಳೊಡನಿರುವ, ರಕ್ತ ಪ್ರವಹಿಸುವ, ಬಹುದೊಡ್ಡ ಆನೆಯ ತಲೆ ..
ಇವುಗಳು ಚುಚ್ಚಿಕೊಂಡಿದ್ದವೆಂದರೆ, ಆ ಶೂಲವೆಷ್ಟು ದೊಡ್ಡದಿರಬಹುದೆಂಬುದನ್ನು ಮತ್ತು ಶೂಲಧಾರಿಯಾದ ರಾಕ್ಷಸನು ಹೇಗಿದ್ದನೆಂಬುದನ್ನು ಕಲ್ಪಿಸಿಕೊಳ್ಳಬಹುದು..!!

ಅದೊಂದು ಮಹಾದಿನ ….
ಧರೆಯ ಧಗೆ ಹೆಚ್ಚಿದಾಗ ನಾಕದಿಂದ ತಂಪಾದ ಮಳೆ ಇಳೆಗಿಳಿದು ಬರುವಂತೆ..
ಇಳೆಯ ಕೊಳೆಯನ್ನು ತೊಳೆಯುವಂತೆ..
ಆ ಕಾಡಿನಲ್ಲಾಯಿತೊಂದು ಶುಭಾಗಮನ..!
ಘೋರತೆಯ ಪರಾಕಾಷ್ಠೆಯಾಗಿದ್ದ ಆ ಕಾಡಿನಲ್ಲಿ ಸೌಮ್ಯತೆಯ ಚರಮಸೀಮೆಯ ಸಾಕಾರ ರೂಪರಾದ ಸೀತಾರಾಮಲಕ್ಶ್ಮಣರ ಚರಣಸ್ಪರ್ಶ..!!

ಅದೊಂದು ಆಶ್ಚರ್ಯದ ಮುಖಾಮುಖಿ..!
ಇತ್ತ ಪ್ರಕೃತಿಯ ವಿಕೃತ ರೂಪವಾಗಿದ್ದ ಆ ಕಾಡು..!
ಅತ್ತ ಪರಿಶುದ್ಧ ಪ್ರಕೃತಿಯ ಪ್ರಕಟಸ್ವರೂಪಿಣಿ ಸೀತೆ..!!
ಇತ್ತ ಲೋಕಮರ್ಯಾದೆಯನ್ನು ಭಂಗಿಸುವ ವಿರಾಧನೆಂಬ ಪುರುಷಾಧಮ..!!
ಅತ್ತ ಲೋಕವನುಳುಹಲು ನಾಕದಿಂದ ಧರೆಗಿಳಿದ ಶ್ರೀರಾಮನೆಂಬ ಮರ್ಯಾದಾಪುರುಷೋತ್ತಮ..!

ಔಷಧವು ದೇಹದೊಳಹೊಗುತ್ತಿದ್ದಂತೆಯೇ ದೋಷ-ವಿಷಗಳು ಹೊರಬರುವಂತೆ…,
ಶ್ರೀರಾಮನ ಅಮೃತದೃಷ್ಟಿ ವಿರಾಧನೊಳಪ್ರವೇಶಿಸುತ್ತಿದ್ದಂತೆಯೇ, ಅನಂತಕಾಲ ಅಂತರಂಗದಲ್ಲಿ ಸಂಚಿತವಾಗಿದ್ದ ದೋಷ ರಾಶಿಗಳು ಆತನ ದೃಷ್ಟಿಯ ಮೂಲಕ ಸೀತೆಯೆಡೆಗೆ ಹರಿದವು..!!!
ಚಿಕಿತ್ಸೆಮಾಡುವಾಗ ಉದ್ರೇಕವಾಗುವ ರೋಗದಂತೆ, ವಿರಾಧನ ರಾಕ್ಷಸತ್ವ ಒಮ್ಮಿಂದೊಮ್ಮೆಲೇ ಉದ್ರೇಕಗೊಂಡಿತು..!!
ಸೀತೆಯನ್ನಾತ ನೋಡಿದ ರೀತಿ, ಸುತ್ತಮುತ್ತಲಿನ ಪ್ರಕೃತಿಯನ್ನಾತ ನೋಡಿಕೊಂಡ ರೀತಿಗಿಂತ ಭಿನ್ನವಾಗೇನೂ ಇರಲಿಲ್ಲ..!

ಪ್ರಳಯಕಾಲದ ಅಂತಕನು ಪ್ರಜೆಗಳನ್ನು ಸಂಹರಿಸಲು ಧಾವಿಸಿ ಬರುವಂತೆ ಬಾಯ್ದೆರೆದು ಬೊಬ್ಬಿಡುತ್ತಾ, ಮುನ್ನುಗ್ಗಿಹೋಗಿ,
ಕ್ಷಣಮಾತ್ರದಲ್ಲಿ ಸೀತೆಯನ್ನಪಹರಿಸಿ ಮರಳುವಾಗ ರಾಮ ಲಕ್ಷ್ಮಣರನ್ನುದ್ದೇಶಿಸಿ ಈ ಮಾತುಗಳನ್ನು ಹೇಳಿದನು..
“ಜಯ ಮತ್ತು ಶತಹ್ರದೆಯರ ಮಗನಾದ ವಿರಾಧನೆಂಬ ರಾಕ್ಷಸನು ನಾನು.
ವರಬಲದಿಂದಾಗಿ ಅಸ್ತ್ರ- ಶಸ್ತ್ರಗಳಿಂದ, ಅನ್ಯಾನ್ಯ ಆಘಾತಗಳಿಂದ ಸಾವಿಲ್ಲದವನು..
ಮುನಿಕುಲಕಲಂಕರಾದ ನಿಮ್ಮನ್ನು ಶಿಕ್ಷಿಸಲು ಬಂದವನು..
ಹಾಗಲ್ಲದಿದ್ದರೆ ಮುನಿವೇಷಕ್ಕೂ ಧನುರ್ಬಾಣಗಳಿಗೂ ಏನು ಸಂಬಂಧ?
ಇಬ್ಬರು ಪುರುಷರ ಮಧ್ಯೆ ಒಬ್ಬಾಕೆ ಸ್ತ್ರೀ ಇರುವುದಕ್ಕೆ ಏನು ಔಚಿತ್ಯ..?
ಇದರ ಪರಿಣಾಮ ನೀವೀರ್ವರು ಯಮಲೋಕಕ್ಕೆ..
ಈಕೆ ನನ್ನ ಗುಹೆಗೆ..!! ”


(ಪಾತಕಿಗಳ ಸ್ವಭಾವವಿದು,
ತಮ್ಮೊಳಗಿನ ದೋಷ ರಾಶಿಗಳು ಇವರಿಗೆ ಕಾಣದು.
ಸಜ್ಜನರಲ್ಲಿ ಇರುವಂತೆ ತೋರುವ ದೋಷ ಪರಮಾಣುಗಳುಪರ್ವತವಾಗಿ ಇವರಿಗೆ ತೋರುವವು.
ಪರರ ತಪ್ಪನ್ನು ತಿದ್ದುವ ನೆವದಲ್ಲಿ ಇನ್ನಷ್ಟು ದೊಡ್ದತಪ್ಪನ್ನು ಮಾಡುವುದು ಇವರ ಲಕ್ಷಣ..!!!!!!)

ಬಿರುಗಾಳಿಗೆ ಸಿಕ್ಕಿದ ಬಾಳೆಗಿಡದಂತೆ ಭಯಗೊಂಡು ಕಂಪಿಸಿದಳು ಸೀತೆ….!
ವಿರಾಧನ ವಶದಲ್ಲಿ ಪರಮಮಂಗಲೆಯನ್ನು ಕಂಡು ಬಾಡಿತು ಶ್ರೀರಾಮನ ಮುಖಕಮಲ..!!
ಅಗ್ನಿಗೋಳಗಳಾದವು ಲಕ್ಷ್ಮಣನ ಕಣ್ಣುಗಳು..!!!
ಬಾಣಗಳ ಮಳೆಗರೆದವು ರಾಮ ಲಕ್ಷ್ಮಣರ ದಿವ್ಯ ಧನುಸ್ಸುಗಳು..!

ರಾಮಬಾಣಗಳು ಶರೀರವನ್ನು ಭೇದಿಸುತ್ತಿದ್ದಂತೆಯೇ ಸೀತೆಯನ್ನು(ಕಾಮವನ್ನು) ಕೆಳಗಿಳಿಸಿ
ಶೂಲವನ್ನು (ಕ್ರೋಧವನ್ನು) ಕೈಗೆತ್ತಿಕೊಂಡು ಗಹಗಹಿಸಿ ನಗುತ್ತಾ ಒಮ್ಮೆ ಮೈಮುರಿದು ಆಕಳಿಸಿದನಾತ..!!
ಮರುಕ್ಷಣದಲ್ಲಿಯೇ ಅವನ ಮೈಯಲ್ಲಿ ನೆಟ್ಟುಕೊಂಡಿದ್ದ ರಾಮಲಕ್ಷ್ಮಣರ ಬಾಣಗಳು ತೊಪತೊಪನೆ ಕೆಳಗುದುರಿದವು..!
ವರಬಲದ ಪ್ರತಾಪವದು..!!

ಆದರೆ ರಾಮನ ದಿವ್ಯ ಕೋದಂಡದಿಂದ ಚ್ಯುತವಾದ ಎರಡು ಬಾಣಗಳು ವಿರಾಧನ ಶೂಲವನ್ನು ಮೂರಾಗಿ ಮುರಿದವು..!
ನೀಲಾಕಾಶದಂತೆ ನಿರ್ಮಲವಾದ ಖಡ್ಗಗಳಿಂದ ರಾಮಲಕ್ಷ್ಮಣರು ವಿರಾಧನನ್ನು ಪ್ರಹರಿಸಿದರು..!!
ಆದರೆ ವಿರಾಧನ ಯುದ್ಧತಂತ್ರವೇ ಬೇರಿದ್ದಿತು..
ಚಿಕ್ಕಮಕ್ಕಳ ಹಾಗೆ ರಾಮ – ಲಕ್ಷ್ಮಣರನ್ನು ತನ್ನ ಹೆಗಲ ಮೇಲೆತ್ತಿಕೊಂಡು ಕಾಡಿನೆಡೆಗೆ ಧಾವಿಸಿದನಾತ..!
ರಾಮಲಕ್ಷ್ಮಣರು ಮಾತನಾಡಿಕೊಂಡರು….
“ಹೇಗಿದ್ದರೂ ನಾವು ಹೋಗುವ ಮಾರ್ಗ ಇದುವೇ ಆಗಿದೆ. ಎಲ್ಲಿಯವರೆಗೆ ನಮ್ಮನ್ನೆತ್ತಿಕೊಂಡೊಯ್ಯಬಯಸುವನೋ
ಅಲ್ಲಿಯವರೆಗೆ ಒಯ್ಯಲಿ,ನಡೆಯುವ ಶ್ರಮವನ್ನಾದರೂ ಉಳಿಸಲಿ”….!!!

ಅಷ್ಟರಲ್ಲಿ ಸೀತೆಯ ಆಕ್ರಂದನ ಕೇಳಿಸಿತು.
ತನ್ನೆರಡೂ ಚಾರುಭುಜಗಳನ್ನು ಮೇಲಕ್ಕೆತ್ತಿ ವಿರಾಧನನ್ನುದ್ದೇಶಿಸಿ ಕೂಗಿಕೊಂಡಳಾಕೆ..
ಹೇ ರಾಕ್ಷಸಾ ! ಏನಾದರೂ ಕೆಡುಕು ಮಾಡುವುದಿದ್ದರೆ ಅದನ್ನು ನನಗೇ ಮಾಡು. ಸತ್ಯ ಧರ್ಮಗಳ ಸಾಕಾರರೂಪರಾದ ರಾಮಲಕ್ಷ್ಮಣರನ್ನು ಬಿಟ್ಟುಬಿಡು..!

ಪ್ರೀತಿಯೆಂದರೆ ಹೀಗೆ……!!

ಕ್ರೂರಿ ವಿರಾಧ, ಯಕ್ಷಗಾನದ ಮುಖದಲ್ಲಿ..!

ವಿರಾಧ - ಇದು ನಿಜವಲ್ಲ, ವೇಷ . . . !

ಸೀತೆಯೆಂದರೆ ಈಕೆ….!!.
ಕೆಡುಕೆಲ್ಲಾ ತನಗಿರಲಿ, ಒಳಿತೆಲ್ಲಾ ತನ್ನರಸನಿಗಿರಲಿ ಎನ್ನುವ ಪ್ರೇಮಮಯಿ..!

ಸೀತೆಯ ಕರುಣ ರಾಮನಲ್ಲಿ ಕ್ರೋಧವಾಗಿಮಾರ್ಪಟ್ಟಿತು..!
ಚಂಡಮಾರುತದ ಆಘಾತಕ್ಕೆ ಅಡಿಮೇಲಾಗುವ ಮಹಾವೃಕ್ಷಗಳಂತೆ, ರಾಮಲಕ್ಶ್ಮಣರ ಬಾಹುವೇಗದಿಂದ ವಿರಾಧನ ಭುಜದಂಡಗಳು ಭಗ್ನಗೊಂಡವು..!

ಯಾರೆಂದರು ನಾರಿ ಅಬಲೆಯೆಂದು..?!!!
ಸೀತೆ ತನ್ನ ಕೋಮಲ ಭುಜಗಳಾನ್ನು ಮೇಲಕ್ಕೆತ್ತಿದರೆ, ವಿರಾಧನ ಕಠೋರ ಭುಜಗಳು ಮುರಿದು ಧರೆಗುರುಳಬೇಕೇ..!!??

ಮೊದಲು ಬಾಣಗಳಿಂದ..ಮತ್ತೆ ಖಡ್ಗಗಳಿಂದ.. ಮತ್ತೆ ಮುಷ್ಟಿ, ಪಾದ, ಮೊಣಕಾಲುಗಳಿಂದ ಅನವರತವಾಗಿ ಪ್ರಹರಿಸಲ್ಪಡುತ್ತಿದ್ದರೂ ಆ ಪಾಪಿ
ಪ್ರಾಣಗಳನ್ನು ತೊರೆಯಲೇ ಇಲ್ಲವೆಂದರೆ ಅದನ್ನು ವರವೆನ್ನಬೇಕೋ, ಶಾಪವೆನ್ನಬೇಕೋ..!?

ತನ್ನೊಳಗೆ ನಿಹಿತವಾದ ಅಮೃತ ಸಮುದ್ರವನ್ನೇ ಕಣ್ಣುಗಳಿಂದ ಹೊರಸೂಸುತ್ತಾ ವಿರಾಧನನ್ನು ಒಮ್ಮೆ ದಿಟ್ಟಿಸಿ ನೋಡಿದ ಶ್ರೀರಾಮ..!
ಆ ರಾಕ್ಷಸನ ಆಳದಲ್ಲೆಲ್ಲಿಯೋ ಹುದುಗಿದ್ದ ದಿವ್ಯತೆಯ ಕಿಡಿಯೊಂದು ಎಚ್ಚರಗೊಳ್ಳತೊಡಗಿತು..!!

“ವರದ ಪ್ರಭಾವದಿಂದಾಗಿ ಪ್ರಹಾರಗಳು ಈತನ ಪ್ರಾಣಹರಣ ಮಾಡಲಾರವು .
ವಿರಾಧನ ವಿಮುಕ್ತಿಗೆ ದಾರಿಯೊಂದೇ…
ಅದು ಧರಣೀ ಪ್ರವೇಶ..!
ಸಿದ್ಧತೆ ಮಾಡು ಲಕ್ಷ್ಮಣ”

ತಮ್ಮನಿಗೆ ಹೀಗೆನ್ನುತ್ತಾ ತನ್ನ ಪಾವನ ಪಾದವನ್ನೆತ್ತಿ ವಿರಾಧನ ಕೊರಳಮೇಲಿರಿಸಿದನಾ ಮೋಕ್ಷರಾಜ್ಯದ ದೊರೆ..!!!

ಪಾದಗಳು ಶರೀರದಲ್ಲಿ ನಿರಂತರ ಹರಿಯುವ ಶಕ್ತಿಯನ್ನು ಹೊರ ಹರಿಸುವ ಮಾಧ್ಯಮಗಳು,
ಆದುದರಿಂದಲೇ ಅಲ್ಲವೇ ದೊಡ್ಡವರ ಪಾದಗಳು ನಮ್ಮ ನಮಸ್ಕಾರಕ್ಕೆ ವಿಷಯವಾಗುವುದು..!

ವಿರಾಧನ ಬದುಕಿನ ಪರಮೋಚ್ಛ ಕ್ಷಣವದು..!
ಶ್ರೀರಾಮನ ಚರಣಗಳಿಂದ ಅನುಗ್ರಹ ಧಾರೆ ವಿರಾಧನೆಡೆಗೆ ಹರಿಯುತ್ತಲೇ ಇತ್ತು..!!
ಸೂರ್ಯಕಿರಣಗಳು ಒಳಹೊಕ್ಕೊಡನೆಯೇ ಕತ್ತಲೆಯು ಓಡುವಂತೆ ಆತನೊಳಗೆ ಹುದುಗಿದ್ದ ಅಪಾರ ತಮೋರಾಶಿಯು ಕ್ಷಯಿಸುತ್ತಲೇ ಇತ್ತು..!

ವಿರಾಧ ಕಣ್ತೆರೆದ..
ತನ್ನ ಕೊರಳಲ್ಲಿ ‘ಆತನ’ ಚರಣ…..!!!
ನಕ್ಷತ್ರಮಂಡಲದಲ್ಲಿ ‘ಆತನ’ ಜಟಾಮಂಡಲ..!!
ಭುವಿಯಿಂದ ದಿವಿಯವರೆಗೆ ವ್ಯಾಪಿಸಿ ನಿಂತ ವಿಶ್ವಂಭರ ಮೂರುತಿ..!!

ಈಗ ವಿರಾಧನಿಗೆ ತಾನಾರೆಂಬುದು ಗುರುತಾಗತೊಡಗಿತು..
ಎಲ್ಲವೂ ನೆನಪಾಗತೊಡಗಿತು..

ತುಂಬುರುವೆಂಬ ದೇವಪುರುಷ ತಾನಾಗಿದ್ದುದು..!
ಜೀವ-ದೇವರನ್ನು ಬೆಸೆಯುವ ದಿವ್ಯಗಾಯಕನಾಗಿದ್ದುದು….
ರಂಭಾಸಕ್ತನಾಗಿ ಕುಬೇರನ ಕುರಿತಾದ ತನ್ನ ಕರ್ತವ್ಯವನ್ನು ಮರೆತುದು…..
ಅಭಿಶಾಪದಿಂದ ರಾಕ್ಷಸನಾಗಿ ಭೂಮಿಗೆ ಬಿದ್ದುದು..!!

ಒಮ್ಮಿಂದೊಮ್ಮೆಗೇ ಆತನ ಮನದಲ್ಲಿ ಪ್ರಶ್ನೆಯ ಅಲೆಯೊಂದು ಎದ್ದಿತು..
ಪರ್ವತದ ಪ್ರಮಾಣದ ತನ್ನ ಶರೀರದಲ್ಲಿ ಬೇರಾವ ಅಂಗಕ್ಕೂ ಸಿಗದ ಯೋಗ ಕೊರಳಿಗೆ ಹೇಗೆ ಬಂತು..!!??
ಜೀವೇಶ್ವರನ ಪಾದಸ್ಪರ್ಶ ಕಂಠದಲ್ಲಿಯೇ ಏಕಾಯಿತು..?

ಹ್ಞಾ…!!
ಆ ಕಂಠದ ಮೂಲಕವೇ ಅಲ್ಲವೇ ಮೊದಲೊಮ್ಮೆ ಅನವರತವಾಗಿ ದೇವದೇವನನ್ನು ಹಾಡಿ ಹೊಗಳುತ್ತಿದ್ದುದು..!!!?
ಎಂದೋ ಎಲ್ಲಿಯೋ ಮಾಡಿದ ಸೇವೆಗೆ ಇಂದು ಇಲ್ಲಿ ಪೂರ್ಣಫಲ..!!
ಸಿರಿಕಂಠಕ್ಕೆ ಸಿರಿಯರಸನ ಪಾದಸ್ಪರ್ಶ..!!!!!!
ರಂಭೆಯ ಸಂಗದಲ್ಲಿ ಬಂದ ಶಾಪಕ್ಕೆ…..ಸೀತೆಯ ಚರಣದಲ್ಲಿ ಮೋಕ್ಷ..!!

ಆ ದೇವದೇವನ ಕರುಣೆಗೆ ಅದೆಷ್ಟು ಮುಖಗಳೋ…!!??
ಅವನ ನಿಗ್ರಹವೂ ಅನುಗ್ರಹವೇ..!
ಕ್ರೋಧವೂ ಕರುಣೆಯೇ..!!
ಪ್ರಹಾರವೂ ಪರಿಹಾರವೇ..!!

ನಮ್ಮ ಶರೀರದಲ್ಲಿ (ಯೋಗ ಶಾಸ್ತ್ರ ಹೇಳುವಂತೆ) ಅಸಂಖ್ಯಾತ ನಾಡಿಗಳಿವೆ..!!!
ನಾಡಿಗಳೆಂದರೆ ಶಕ್ತಿ ಪ್ರವಹಿಸುವ ಅವ್ಯಕ್ತ ಮಾರ್ಗಗಳು..
ನಾವು ಏನನ್ನು ಚಿಂತಿಸುತ್ತಿರುತ್ತೇವೆಯೋ, ಅದಕ್ಕೆ ಸಂಬಂಧಿಸಿದ ನಾಡಿಯಲ್ಲಿ ನಮ್ಮ ಜೀವ ಸಂಚರಿಸುತ್ತಿರುತ್ತದೆ..!!
ಕೊನೆಯ ಕ್ಷಣದಲ್ಲಿ ನಾವು ಏನನ್ನು ಭಾವಿಸುತ್ತಿರುತ್ತೇವೆಯೋ, ಆ ನಾಡೀಮಾರ್ಗದಲ್ಲಿಯೇ ಜೀವೋತ್ಕ್ರಮಣವಾಗುವುದು..!!
ಯಾವ ನಾಡಿಯಲ್ಲಿ ಜೀವೋತ್ಕ್ರಮಣವಾಗುವುದೋ, ಅಂಥದ್ದೇ ಜನ್ಮ ಮುಂದೆ ನಮಗೆ ಬರುವುದು..!!!

ಅಂತಿಮ ಕ್ಷಣದಲ್ಲಿ ಉಂಟಾದ ಶ್ರೀರಾಮನ ಪಾದಸ್ಪರ್ಶ – ದರ್ಶನಗಳಿಂದ ವಿರಾಧನ ರಾಕ್ಷಸಜನ್ಮ, ಭೀಭತ್ಸರೂಪಗಳು ತೊಲಗಿದವು..
ಭುವಿಯಲ್ಲಿ ತೆರೆದಿಟ್ಟ ದಿವಿಯ ಮಹಾದ್ವಾರ ಶ್ರೀರಾಮ..!
ಅವನ ಕರುಣೆಯಿಂದ ಆನಂದಮಯವಾದ,ಜ್ಯೋತಿರ್ಮಯವಾದ ಸ್ವಸ್ವರೂಪವನ್ನು ಪಡೆದು ವಿರಾಧ ಸ್ವಸ್ಥಾನವನ್ನು ಸೇರಿದ..!!

‘ವಿರಾಧವಧ ಪಂಡಿತಾಯನಮಃ’ ಎಂಬುದು ಶ್ರೀರಾಮನ ಅಷ್ಟೋತ್ತರ ಶತನಾಮಗಳಲ್ಲೊಂದು..
ಇಲ್ಲಿ ವಿರಾಧವಧೆಯಲ್ಲಿ ಪಾಂಡಿತ್ಯವೇನಿರಬಹುದಪ್ಪಾ..?ಎಂಬ ಪ್ರಶ್ನೆಯೇಳುವುದು ಸಹಜ..
ವಧೆಯಲ್ಲಿಯೂ ಪಾಂಡಿತ್ಯವೇ..????
ಅದೊಂದು ಸ್ತುತಿ-ನಮನವಾಗಬಹುದೇ..????
ಆಗಬಹುದು…
ಭೀಭತ್ಸವಾದ, ಪಾಪಮಯವಾದ ರಾಕ್ಷಸ ಜನ್ಮದಲ್ಲಿ ಸಿಲುಕಿ ತೊಳಲುವ ಜೀವವನ್ನು ಬಿಡುಗಡೆಗೊಳಿಸಿ ಪುನಃ ಸ್ವಸ್ವರೂಪದಲ್ಲಿ ನೆಲೆನಿಲ್ಲಿಸುವುದು ಅದ್ಭುತ ಕೌಶಲವಲ್ಲವೇ..?

ರಾಮಬಾಣ:

ಇದು ಯುದ್ಧವಲ್ಲ ಮೋಕ್ಷದಾಟ..!
ಇದು ವಧೆಯಲ್ಲ ಶಸ್ತ್ರಚಿಕಿತ್ಸೆ..!!
ಇದು ಮೃತ್ಯುವಲ್ಲ ಮುಕ್ತಿ..!!!

ಹೇ ಪ್ರಭೋ . . . ! ನಿನ್ನ ಕರುಣೆ ಇಲ್ಲದುದೆಲ್ಲಿ…!!
ರಾಮಾ ! ರಾಮಾ ! ಸರ್ವದುಃಖವಿರಾಮಾ..! ಶರಣು !

16 Responses to ವಿರಾಧ ವಧ ಪಂಡಿತನೆಂದರೆ..??

 1. Raghavendra Narayana

  ಶಿವರಾತ್ರಿಯ ಶುಭ ದಿನದ೦ದು, ಶ೦ಕರನಾರಾಯಣನ ದರ್ಶನವಾಯಿತು.
  ಶ್ರೀ ಗುರುಭ್ಯೋ ನಮಃ
  ಜ್ಞಾನ ವಿಜ್ಞಾನ ಸೃಷ್ಟಿ ದೃಷ್ಟಿ ಪ್ರ‍ೀತಿ ಪ್ರ‍ೇಮ ಶಕ್ತಿ ಸೌ೦ದರ್ಯ, ಎಲ್ಲವೂ ಇವೆ.

  [Reply]

 2. Mohan Bhaskar

  raakshassatadalli ….. saaksharatva…..

  [Reply]

 3. Sharada Jayagovind

  Samsthana , This blog is a superb illustration of pandithya. An excellent interpretation of myths which appear fantastic and supernatural but in reality have great moral significance. The only way to kill the Virada in us is to invite a compassionate hunter like Sri Rama to our hearts.

  Shree Ramana Shiva roopa darushana aaithu indu Raghavana pandithya krupeyinda.

  pranamagalu, beduva ashirwadagalu

  sharadakka

  [Reply]

  Raghavendra Narayana Reply:

  Adbhuta.

  [Reply]

 4. vdaithota

  ನಾನು ಮಾಡುವುದೇ ಸರಿ, ಅವರು ಮಾಡುತ್ತಿರುವುದು ತಪ್ಪು, ಅವರನ್ನು ತಿದ್ದುವುದು ನನ್ನ ಕರ್ತವ್ಯ ಅನ್ನುವುದು ಮನುಷ್ಯ ಸಹಜ ಗುಣವೇ ಅನ್ನುವಷ್ಟು ಅಭ್ಯಾಸದಲ್ಲಿದೆ ಅಲ್ಲವೇ..??!!!!!

  [Reply]

  krishnananda sharma Reply:

  ಭೂಯಾಂಸಿ ನಮಾಂಸಿ……..
  ತುಂಬಾ ಚನ್ನಾಗಿದೆ ಲೇಖನ. ಕಥೆಯ ಜೊತೆಜೊತೆಗೆ ಅಧ್ಯಾತ್ಮ ವಿಷಯ ಹೇಳುತ್ತಿರುವುದು ಸಾಮಾನ್ಯರಿಗು ಅರ್ಥ ಮಾಡಿಸುವಂತಿದೆ.

  [Reply]

 5. Anuradha Parvathi

  ರಮಾಯಣ ಎಂಬ ಮಹಾ ಕಾವ್ಯದಲ್ಲಿ ಇಂತಹ ಅದೆಷ್ಟು ನೀತಿ ಪಾಠಗಳಿವೆಯೊ? ಅದ್ಭುತ.

  [Reply]

 6. chs bhat

  ಅದ್ಭುತ.ಸಾಹಿತ್ಯರಸಗಂಗೆಯಲ್ಲಿ ಮಿಂದಂತಾಯ್ತು. ಗೊತ್ತಿರದ ಎಶ್ಡೋ ವಿಷಯಗಳು ತಿಳಿದವು.ನಿತ್ಯ ಶ್ರೀ ರಾಮ ಅಶ್ಟೋತ್ತರ ಹೇಳುವಾಗ “ವಿರಾಧ ವಧ ಪಂಡಿತ” ೆನ್ನುತ್ತಿದ್ದೆ.ಅರ್ಥ ಗೊತ್ತಿರಲಿಲ್ಲ. ಇಂದು ತಿಳಿದು ಸಂತೋಷವಾಯ್ತು. ರಾಮನ ಪಾದಗಳಿಂದ ಅಹಲ್ಯೆಗೆ ಮುಕುತಿ ಸಿಕ್ಕಿದ ವಿಚಾರ ತಿಳಿದಿತ್ತು.ವಿರಾಧನ ವಿಚಾರ ಗೊತ್ತಿರಲಿಲ್ಲ. ಇಂದು ತಿಳಿಯಿತು.ಗುರುಕೃಪೆ.
  ಹರೇರಾಮ. ಹೊಡಾದ್ತೆ.

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 7. Raghavendra Narayana

  “ಇದು ಯುದ್ಧವಲ್ಲ ಮೋಕ್ಷದಾಟ..!
  ಇದು ವಧೆಯಲ್ಲ ಶಸ್ತ್ರಚಿಕಿತ್ಸೆ..!!
  ಇದು ಮೃತ್ಯುವಲ್ಲ ಮುಕ್ತಿ..!!!”
  .
  ಮೋಕ್ಷದಾಟ
  —————-
  ಶಿವನ ಪೌರುಷ, ರಾಮನ ನೀತಿ ಮೇಳೈಸಿದೆ ರಾಮಾಯಣದ ಈ ಭಾಗದಲಿ.
  .
  ಆನ೦ದ ಕ್ಷೀರ ಸಾಗರದ ಯೋಗಿಯ, ಸ್ಥಿತಿ ಒಡೆಯನ ಕರುಣೆ ಕೇವಲ ಅವನ ವ್ಯಾಪ್ತಿಯಷ್ಟೆ – “ಅನ೦ತ”. ಅಚ್ಯುತ-ಅನ೦ತ-ಗೋವಿ೦ದ.
  .
  ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ವಿವೇಕಚೂಡಾಮಣಿಯ ಒ೦ದು ಮಣಿ
  ತ್ನಙಮಾ೦ಸಮೇದೋsಸ್ಥಿಪುರೀಷರಾಶೌ
  ಅಹ೦ಮತಿ೦ ಮೂಢಜನಃ ಕರೋತಿ |
  ವಿಲಕ್ಷಣ೦ ವೇತ್ತಿ ವಿಚಾರಶೀಲೋ
  ನಿಚಸ್ವರೂಪ೦ ಪರಮಾರ್ಥಭೂತಮ್ ||
  (ಚರ್ಮ, ಮಾ೦ಸ, ಮೇದಸ್ಸು, ಮೂಳೆ ಮತ್ತು ಮಲ – ಇವುಗಳ ರಾಶಿಯಾಗಿರುವ ಈ ಶರೀರವನ್ನು ಮೂಢನಾದವನು “ನಾನು” ಎ೦ದು ತಪ್ಪಾಗಿ ತಿಳಿಯುತ್ತಾನೆ. ವಿವೇಕಿಯಾದರೋ ಶರೀರಾದಿಗಳಿಗಿ೦ತ ಭಿನ್ನವಾದ ಮತ್ತು ಪರಮಾರ್ಥವಾದ ತನ್ನ ಸ್ವರೂಪವನ್ನು ಅರಿತುಕೊಳ್ಳುತ್ತಾನೆ.)
  .
  ವಿವೇಕಾನ೦ದರ “ಜ್ಞಾನ ಯೋಗ” ಪುಸ್ತಕದಲ್ಲಿ ಓದಿದ ನೆನಪು, “..ಪ್ರತಿಯೊ೦ದೂ ಮೋಕ್ಷದೆಡೆಗೆ ಪ್ರಯಾಣ ಮಾಡುತ್ತಿದೆ..”.
  .
  ಮಾಯೆಯೆ೦ಬ ತಾಯಿಯಿ೦ದ ಮೋಕ್ಷದ ಮೊದಲ ಪಾಠ, ಮಾಯೆಯೆ ಮೊದಲ ಗುರು..? ಆಕರ್ಷಿತರಾಗಲು ತಿಳಿಯದೆ, ಮೋಕ್ಷವೆ೦ಬ ಪರಮ ಆಕರ್ಷಣೆಡೆಗೆ ಆಕರ್ಷಿತರಾಗುವುದೆ೦ತು? “..ತಾಯಿ ಅವಳ್ ಮಗು ನೀನು.. – ಮ೦ಕುತಿಮ್ಮ”. ಮಾಯೆ ಕ್ರೂರಿಯೆ, ತಾಯಿಯೆ, ಪರಮಾತ್ಮ ಸ್ವರೂಪಿಣಿಯೆ, ಪರಮಾತ್ಮನೆ..? “ಸೆಳೆತ” ಪದದಲ್ಲಿರುವ ಅ೦ದ-ಚೆ೦ದ, ಸೆಳೆತಗಳಿಗೆ ಸಿಲುಕುವ ರೀತಿ-ನೀತಿಗಳು, ಮಾಯೆಯ ಸರಸ-ವಿರಸಗಳ ಒಡನಾಟದಿ೦ದ ಕಲಿಯುವು ಪಾಠವಲ್ಲವೆ? ಆನ೦ದದ ಪರಿಚಯವೇ ಇಲ್ಲದೇ, ಪರಮಾನ೦ದವನ್ನು ಬಯಸುವುದಾದರು ಹೇಗೆ..?
  ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |
  ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||
  ಇನಿತನಿತು ದಿಟಗಳಿವು – ತು೦ಬುದಿಟದ೦ಶಗಳು |
  ಗಣನೀಯವವು ಬಾಳ್ಗೆ – ಮ೦ಕುತಿಮ್ಮ ||
  .
  ಶ್ರೀ ಶ್ರೀ ಆದಿ ಶ೦ಕರಾಚಾರ್ಯರ ವಿವೇಕಚೂಡಾಮಣಿಯ ಒ೦ದು ಶ್ಲೋಕ.
  ಶಲ್ಯರಾಶಿರ್ಮಾ೦ಸಲಿಪ್ತೋ ಮಲಪೂರ್ಣೋsತಿಕಶ್ಮಲಃ |
  ಕಥ೦ ಭವೇದಯ೦ ವೇತ್ತಾ ಸ್ವಯಮೇತದ್ವಿಲಕ್ಷಣಃ ||
  _
  ಅದ್ವೈತ ಸಿ೦ಹ ಆಚಾರ್ಯರ ಪದ ಪದದಲ್ಲು ವಿವೇಕ ತು೦ಬಿ ಚಿಮ್ಮುತ್ತದೆ..?
  ಆಚಾರ್ಯರ ಕಣ ಕಣದಲ್ಲು ವೈರಾಗ್ಯ ತು೦ಬಿ ಹರಿಯುತ್ತದೆ..?
  ವಿವೇಕವೋ, ವೈರಾಗ್ಯವೋ, ವೈರಾಗ್ಯದಲ್ಲಿ ವಿವೇಕವೋ..?
  _
  ಸತ್ಯ ಸತ್ಯ ಸತ್ಯ ಸತ್ಯ ಸತ್ಯ, ಶ೦ಕರಾಚಾರ್ಯ ಸಾಕ್ಷತ ಶಿವ, ಅದ್ವೈತ ಅತಿ ಸು೦ದರ.
  ಗುರು ಪರ೦ಪರೆಯಲ್ಲಿ ಬ೦ದ, ಶಿವ ನೀಡಿದ, ಸತ್ಯ ಸು೦ದರ ಜ್ಞಾನವನ್ನು ಗುರು ಪಾದಕ್ಕೆ ಮಸ್ತಕವನ್ನಿಟ್ಟು ಪಡೆದುಕೊಳ್ಳುವ.
  .
  ಸರ್ವ೦ ಶಿವ೦.
  ಶುಭ ಶಿವರಾತ್ರಿ.

  [Reply]

 8. nandaja haregoppa

  Hare raama

  vodta vodta kanniru bandubidtu,Sundara chitrana,

  ರಾಮನಿರುವ ಅಡವಿ ಅದು ಅಯೋಧ್ಯೆ ! ರಾಮನಿಲ್ಲದ ಅಯೋಧ್ಯೆ . . . ? ..sahisalagada

  himse,

  [Reply]

 9. Raghavendra Narayana

  “(ಪಾತಕಿಗಳ ಸ್ವಭಾವವಿದು,
  ತಮ್ಮೊಳಗಿನ ದೋಷ ರಾಶಿಗಳು ಇವರಿಗೆ ಕಾಣದು.
  ಸಜ್ಜನರಲ್ಲಿ ಇರುವಂತೆ ತೋರುವ ದೋಷ ಪರಮಾಣುಗಳು ಪರ್ವತವಾಗಿ ಇವರಿಗೆ ತೋರುವವು.
  ಪರರ ತಪ್ಪನ್ನು ತಿದ್ದುವ ನೆವದಲ್ಲಿ ಇನ್ನಷ್ಟು ದೊಡ್ದತಪ್ಪನ್ನು ಮಾಡುವುದು ಇವರ ಲಕ್ಷಣ..!!!!!!)”
  .
  This is Very TRUE.

  [Reply]

 10. shobha lakshmi

  ತು೦ಬ ಒಳ್ಳೇ ಅಧ್ಯಾತ್ಮ ಲೇಖನ…ಬೇರೆಯವರಲ್ಲಿ ಹುಳುಕು ನೋಡುವ ಮೊದಲು ನಮ್ಮೊಳಿನ ದೋಷ ಮೊದಲು ನೋಡ ಬೇಕೆ೦ದು ಅರಿತುಕೊ೦ಡೆ……ಕ್ಣ್ಣು ತೆರೆಸಿದ ಗುರುದೇವರಿಗೆ ನಮೋನಮಃ………

  [Reply]

 11. lohitha hebbar

  ramarasa atyantha madhura.

  [Reply]

 12. ಮಂಗ್ಳೂರ ಮಾಣಿ...

  ಎಷ್ಟು ಬಾರಿ ಓದಿದರೂ ಮತ್ತೊಂಮ್ಮೆ ಓದುವಾಗ ಇನ್ನೊಂದೇ ಅರ್ಥ ಕೊಡುವ ಕಥೆ..

  [Reply]

 13. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಹಲವು ರಾಕ್ಷಸರ ಆಕ್ರಮಣಕ್ಕೊಳಗಾಗಿ ನಿತ್ಯ ಒತ್ತಡವನ್ನು ಅನುಭವಿಸುತ್ತಿರುವ ಈ ಶರೀರವನ್ನು ಶ್ರೀರಾಮನ ಪದಕಮಲಗಳಲ್ಲಿ ಸಮರ್ಪಿಸೋಣ….. ರಾಕ್ಷಸರ ಆಡಳಿತ ಕೊನೆಗೊಂಡು ರಾಮ ರಾಜ್ಯದ ಉದಯವಾಗುವುದು ಯಾರಿಗೆ ತಾನೇ ಇಷ್ಟವಿಲ್ಲ…..

  [Reply]

Leave a Reply

Highslide for Wordpress Plugin