LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ವಿಶ್ವಕೊಳಿತಾಗಲಿ..ಆರಂಭ ತನ್ನಿಂದಲೇ!

Author: ; Published On: ಗುರುವಾರ, ನವೆಂಬರ 4th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

“ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?”

ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು..
ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು..
ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…!
ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ..
ಮನೆ ಸುಧಾರಿಸಿದರೆ ಊರು ಸುಧಾರಿಸುವ ಪ್ರಯತ್ನಕ್ಕೆ ಶಕ್ತಿ ಬಂದೀತು..!
ಊರು ಸುಧಾರಿಸುವ ಪ್ರಯತ್ನ ಸಂಪೂರ್ಣ ಸಫಲವಾಗದಿದ್ದರೂ, ಕೊನೆಯ ಪಕ್ಷ ಊರಿನ ಒಂದಂಶವನ್ನು ಸುಧಾರಿಸಿದ ಸಾರ್ಥಕತೆಯುಳಿದೀತು..!

ಈ ಬಗೆಯ ಭಾವಗಳು ದಶರಥನ ಹೃದಯದಲ್ಲಿ ಮತ್ತೆ ಮತ್ತೆ ಆಡಿರಬೇಕು..
ತನ್ನ ರಾಜ್ಯದಲ್ಲಿ ತಾನೇನು ಕಾಣಬಯಸಿದನೋ ಅದನ್ನು ತನ್ನೊಳಗೆ ತಂದುಕೊಳ್ಳಲೆಳಸಿದನಾತ..
ಪರಿಣಾಮವಾಗಿ ಆತನ ಸಹಜ ಸಾಮಥ್ಯ೯-ಸುಗುಣಗಳು ವಿಕಸಿತಗೊಂಡವು..
‘ಅಭ್ಯಾಸಜ’ವಾದವು ಅಭ್ಯಾಗತರಂತೆ ಬಂದು ಆತನ ವ್ಯಕ್ತಿತ್ವವನ್ನಲಂಕರಿಸಿದವು…

ಲಕ್ಷ ಜನರನ್ನು ಆಳಬಯಸುವವನು ಲಕ್ಷ ಜನರ ಸಾಮರ್ಥ್ಯ- ಕೌಶಲಗಳನ್ನು ಸ್ವತಃ ತಾನು ಹೊಂದಿರಬೇಕಾಗುತ್ತದೆ..
ಹಾಗಿಲ್ಲದಿದ್ದರೆ ಆಳುವವನು ಅಳುವವನಾಗಿಬಿಡುತ್ತಾನೆ..!
ಕ್ಷತ್ರಿಯ ರಾಜನೊಬ್ಬನಲ್ಲಿ ಮುಖ್ಯವಾಗಿ ಇರಬೇಕಾದ ಗುಣವೇ ‘ಪರಾಕ್ರಮ’

“ಏಕೋ ದಶಸಹಸ್ರಾಣಿ ಯೋಧಯೇದ್ಯಸ್ತು ಧನ್ವಿನಾಂ |
ಶಸ್ತ್ರಶಾಸ್ತ್ರಪ್ರವೀಣಶ್ಚ ಸ ವೈ ಪ್ರೋಕ್ತೋ ಮಹಾರಥಃ ||
ಅಮಿತಾನ್ಯೋಧಯೇದ್ಯಸ್ತು ಸಂಪ್ರೋಕ್ತೋ ಅತಿರಥಃ ಸ್ಮೃತಃ |
ರಥಸ್ತ್ವೇಕೆನ ಯೋದ್ಧಾ ಸ್ಯಾತ್ ತನ್ನ್ಯೂನೋ ಅರ್ಧರಥಃ ಸ್ಮೃತಃ ||”

ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ಪ್ರತಿವೀರನೊಬ್ಬನೊಡನೆ ವೀರತೆಯಿಂದ ಹೋರಾಡಬಲ್ಲವನು ‘ರಥ’..
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ೧೦,೦೦೦ ರಥರೊಡನೆ ಕೆಚ್ಚೆದೆಯಿಂದ ಕಾದಾಡಬಲ್ಲವನು ‘ಮಹಾರಥ’..
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಳ್ಳುತ್ತಾ, ರಣಾಂಗಣದಲ್ಲಿ ಅಸಂಖ್ಯ ಸಂಖ್ಯೆಯ ಮಹಾರಥರನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಬಲ್ಲ ಮಹಾವೀರನೇ ‘ಅತಿರಥ’..
ಅಂದು ಭುವಿಯನ್ನಲಂಕರಿಸಿದ್ದ ಕ್ಷತ್ರಿಯವೀರರ ಮಧ್ಯದಲ್ಲಿ ತನ್ನ ಯುದ್ಧ ಕೌಶಲದಿಂದಲೇ ‘ಅತಿರಥ’ನೆನಿಸಿಕೊಂಡಿದ್ದನು ದಶರಥ..

(ಅಂದು ಯುದ್ಧದ ನಿರ್ಣಯವನ್ನು ಕೈಗೊಳ್ಳುತ್ತಿದ್ದ ನಾಯಕನು ಸ್ವಯಂ ಮುಂಚೂಣಿಯಲ್ಲಿ ನಿಂತು ಕಾದಾಡುತ್ತಿದ್ದ..
ತನ್ನವರನ್ನು ರಕ್ಷಿಸುವಲ್ಲಿ ಅಗತ್ಯಬಿದ್ದರೆ ರಣದಲ್ಲಿ ಪ್ರಾಣವನ್ನೂ ನೀಡುತ್ತಿದ್ದ..
ಇಂದಿನ ನಮ್ಮ ನಾಯಕರು……??)

ದೇವರಲ್ಲಿ ‘ಸಂಪತ್ತು – ಸಾಮರ್ಥ್ಯಗಳನ್ನು ಕೊಡು’ ಎಂದು ಬೇಡಿದರೆ ಸಾಲದು..
‘ನೀ ಕೊಟ್ಟದ್ದನ್ನು ಸದುಪಯೋಗ ಮಾಡುವ ಬುದ್ಧಿ-ಅವಕಾಶಗಳನ್ನು ಕೊಡು’ ಎಂದೂ ಜೊತೆಯಲ್ಲಿ ಕೇಳಬೇಕು..
ದೇವರ ವರವನ್ನು ಸದ್ವಿನಿಯೋಗ ಮಾಡದಿದ್ದರೆ ಅದು ‘ವ್ಯರ್ಥ’..
ದುರ್ವಿನಿಯೋಗ ಮಾಡಿದರೆ ಅದು ‘ಅನರ್ಥ’..
ಅಷ್ಟು ಮಾತ್ರವಲ್ಲ, ಕೊಟ್ಟವನ ಕೋಪಕ್ಕೂ ಗುರಿಯಾಗಬೇಕಾದೀತು..!

ಸರ್ವಶಕ್ತನು ತನಗಿತ್ತ ಶಕ್ತಿಯನ್ನು ಸಾರ್ಥಕಪಡಿಸಿದನು ದಶರಥ..
ತನ್ನ ಬದುಕಿನುದ್ದಕ್ಕೂ ಸತ್ಯಕ್ಕಾಗಿಯೇ ಸಮರಗಳನ್ನು ನಡೆಸಿ ‘ಸತ್ಯಪರಾಕ್ರಮ’ನೆನಿಸಿದನವನು..
ಪ್ರಖರ ಸೂರ್ಯನು ತನ್ನ ಪ್ರತಾಪದಿಂದ ಕತ್ತಲ ಕೂಟವನ್ನೇ ಧ್ವಂಸಗೊಳಿಸುವಂತೆ –
ತನ್ನ ಪ್ರತಾಪದಿಂದ ಹಲವು ಲೋಕಕಂಟಕರನ್ನೂ, ಧರ್ಮಕಂಟಕರನ್ನೂ ಬಡಿದೋಡಿಸಿದ ದಶರಥನನ್ನು ಲೋಕವು ‘ಪ್ರತಾಪಹತಕಂಟಕ’ನೆಂದು ಕೊಂಡಾಡಿತು..
ರಣಕಣದಲ್ಲಿ ಇದಿರಾದ ಯಾವ ಶತ್ರುವೂ ದಶರಥನಿಗೆ ಸರಿ-ಮಿಗಿಲೆನಿಸಲಿಲ್ಲ..
ಜಯಸಿರಿಯು ಆತನನ್ನೆಂದೂ ತೊರೆಯಲೇ ಇಲ್ಲ..

ಬಾಹ್ಯಬಲವು ದೇಹವಾದರೆ ಅದರಲ್ಲಿ ಜೀವ ತುಂಬುವುದು ಆಂತರವಾದ ಜ್ಞಾನಬಲ..
ಶಕ್ತಿಯಿದ್ದರೆ ಸಾಕೇ?
ದಿಕ್ಕೂ ಬೇಡವೇ..?
ವಾಯುವೇಗದಲ್ಲಿ ಓಡುವ ವಾಹನದಲ್ಲಿ ಕುಶಲ ಸಾರಥಿಯಿರಬೇಡವೇ..?
ಸಕಲ ಸುಖ ಸಾಮಗ್ರಿಗಳಿದ್ದೂ ಅಲ್ಲಿ ಬೆಳಕೇ ಇಲ್ಲದಿದ್ದರೆ ಏನು ಪ್ರಯೋಜನ..?
ಬದುಕೆಂಬ ಕೋಣೆಯಲ್ಲಿ ಬೆಳಕೇ ಅರಿವು..
ಅದು ಧಾರಾಳವಾಗಿದ್ದಿತು ದಶರಥನಲ್ಲಿ..
ವೇದ-ವೇದಾಂಗಗಳ, ಶಾಸ್ತ್ರ-ಪುರಾಣಗಳ, ಸಂಗೀತ-ಸಾಹಿತ್ಯಗಳ, ಬಗೆಬಗೆಯ ವಿದ್ಯೆ-ಕಲೆಗಳ ಸಾರವು ಸನ್ನಿಹಿತವಾಗಿದ್ದಿತು ಆತನ ಬುದ್ಧಿ-ಹೃದಯಗಳಲ್ಲಿ..
ಆದುದರಿಂದಲೇ ಆತನ ಆಶ್ರಯದಲ್ಲಿ ವೀರವರರು-ವೇದವಿದರು ಬಹುಸಂಖ್ಯೆಯಲ್ಲಿ ಬೆಳೆದರು..
ತನ್ನಲ್ಲಿ ತುಂಬಿ ತುಳುಕುವ ಬಲ -ಪರಾಕ್ರಮಗಳಿಂದ, ಜ್ಞಾನ -ವಿಜ್ಞಾನಗಳಿಂದ ಅವರೆಲ್ಲರಿಗೂ ಮೇಲ್ಪಂಕ್ತಿಯಾದನಾತ..

ಪೂರ್ಣತೆಯೆಂಬುದು ಬದುಕಿನ ಪರಮಗುರಿ..
ಧರ್ಮವು ಪೂರ್ಣತೆಯೆಡೆಗೆ ನಮ್ಮನ್ನು ಕರೆದೊಯ್ಯುವ ದಾರಿ..
ಜ್ಞಾನವು ಪೂರ್ಣತೆಯ ದಾರಿಯನ್ನು ಬೆಳಗುವ ಬೆಳಕು..
ಮೂರೂ ಸೇರಿದರೆ ಬದುಕು ‘ಪ್ರಯಾಗ’..
ಹಾಗಿಲ್ಲದಿದ್ದರೆ ಅದು ……….’ಪ್ರಯಾಸ’..
ಧರ್ಮದ ಮಾರ್ಗದಲ್ಲಿ…
ಜ್ಞಾನದ ಬೆಳಕಿನಲ್ಲಿ..
ಪೂರ್ಣತೆಯ ಗಮ್ಯದೆಡೆಗೆ ಮುನ್ನಡೆದಿತ್ತು ದಶರಥನ ಜೀವರಥ..!!

ಸರಿಯಾದ ದಾರಿಯೇ ‘ಧರ್ಮ’..
ದಾರಿ ತಪ್ಪಿದರೆ ಅದು ‘ಅಧರ್ಮ’..
ಇಂದ್ರಿಯಗಳೆಂಬ ಕುದುರೆಗಳು, ಮನವೆಂಬ ಸಾರಥಿ ದಾರಿ ತಪ್ಪದಂತೆ ಜಾಗೃತನಾಗಿ (ಅಧರ್ಮಂ ಪರಿವರ್ಜಯನ್) ಅವುಗಳ ಮೇಲೆ ನಿಯಂತ್ರಣ ಸಾಧಿಸಿದುದರಿಂದ ಬಲ್ಲವರು ಅವನನ್ನು ‘ವಿಜಿತೇಂದ್ರಿಯ, ವಶೀ’ ಎಂದು ಕರೆದರು..

ದಶರಥನೋ ‘ ಧರ್ಮರತ’
ರತಿಯೆಂದರೆ ಆನಂದ..
ಧರ್ಮದಲ್ಲಿ ಆನಂದವನ್ನು ಕಂಡವನು ‘ಧರ್ಮರತ’
ಧರ್ಮದ ರುಚಿ ಗೊತ್ತಿಲ್ಲದವರಿಗೆ ಪ್ರಯಾಸದ ವಿಷಯ..
ದಶರಥನಿಗೋ ಅದು ಪ್ರೀತಿಯ ವಿಷಯ..
ಸಪ್ಪೆಯಲ್ಲ ಧರ್ಮವವನಿಗೆ..

ಪ್ರತಿಫಲನವು ಪ್ರೀತಿಯ ಸ್ವಭಾವ
ಯಾವೆಡೆಗೆ ನಾವು ಪ್ರೀತಿಯನ್ನು ಹರಿಸುವೆವೋ, ಇಮ್ಮಡಿಯಾಗಿ ಅಲ್ಲಿಂದ ನಮ್ಮೆಡೆಗೆ ಅದು ತಿರುಗಿ ಬರುವುದರಲ್ಲಿ ಸಂಶಯವಿಲ್ಲ..
ಯಾವ ಧರ್ಮದಲ್ಲಿ ದಶರಥನು ‘ರತ’ನಾಗಿದ್ದನೋ ಆ ಧರ್ಮವು ಆತನನ್ನು ಪರಿಪರಿಯಾಗಿ ಅನುಗ್ರಹಿಸಿತು..
ಅರ್ಥ-ಕಾಮಗಳು ಧರ್ಮವೃಕ್ಷದ ಸುಪುಷ್ಪ-ಸುಫಲಗಳೇ ಅಲ್ಲವೇ..?
ನಿಯಮದಿಂದ ಧರ್ಮವನ್ನು ಆರಾಧಿಸಿದ ದಶರಥನಿಗೆ ಸಂಪತ್ಸುಖಗಳು(ಅರ್ಥ-ಕಾಮಗಳು) ಒಲಿದು ಬಂದವು…

ಎಲ್ಲೆಡೆಯಿಂದ ತನ್ನೆಡೆಗೆ ಹರಿದು ಬರುವ ಜಲಧಾರೆಗಳನ್ನು ಸಾಗರವು ಪ್ರತಿಗ್ರಹಿಸುವಂತೆ,
ಲೋಕದಿಂದ ತನ್ನೆಡೆಗೆ ಹರಿದು ಬಂದ ಸಂಪತ್ತುಗಳನ್ನು- ಸುವಸ್ತುಗಳನ್ನು ಸಂಗ್ರಹಿಸಿ ರಕ್ಷಿಸಿದನವನು..
ಧನಪತಿ ಕುಬೇರನಿಗೂ, ತ್ರಿಲೋಕಪತಿ ಮಹೇಂದ್ರನಿಗೂ ಸಾಟಿಯೆನಿಸುವ ಕೋಶವು ಅವನದಾಯಿತು..
‘ ಸಂಗ್ರಹೀ ನಾವಸೀದತಿ’
ಸಂಗ್ರಹಿಗೆ ನಾಶವಿಲ್ಲ..

ಆದರೊಂದು ಮಾತು..
ಲೋಕದಿಂದ ನಮಗೆ ಸಂದಷ್ಟು ನಮ್ಮಿಂದ ಲೋಕಕ್ಕೆ ಸಲ್ಲದಿದ್ದರೆ ಬದುಕಿನ ಸಮತೋಲನ ತಪ್ಪುತ್ತದೆ..
ಸದ್ವಿನಿಯೋಗವಾಗದ ಸಂಗ್ರಹ ಜೀವಕ್ಕೂ-ಜೀವನಕ್ಕೂ ‘ ಭಾರ’ವಾದೀತು, ಬಾಧೆಯಾದೀತು..
ತನ್ನಲ್ಲಿರುವ ಸಂಪತ್ತಿಗೆ ತಾನು ‘ಮಾಲಕ’ನಲ್ಲ, ‘ಪಾಲಕ’ ಮಾತ್ರ ಎಂಬ ಅರಿವಿದ್ದ ದಶರಥನು ಬಿಚ್ಚುಮನಸ್ಸು-ಬಿಚ್ಚುಕೈಗಳಿಂದ ದಾನ-ಮಾನಗಳನ್ನು ನಡೆಸಿದನು..
ಆದರೆ ಏನಾಶ್ಚರ್ಯ!
ತೆಗೆದುಕೊಂಡವರು ತುಂಬಿಹೋದರು..ದಶರಥ ಬರಿದಾಗಲೇ ಇಲ್ಲ…!!

|| ಹರೇರಾಮ ||

36 Responses to ವಿಶ್ವಕೊಳಿತಾಗಲಿ..ಆರಂಭ ತನ್ನಿಂದಲೇ!

 1. sriharsha.jois

  ಹರೇರಾಮ..

  ಕೊಡುವವನಿದ್ದಾಗ ತೆಗೆದುಕೊಳ್ಳುವವರಿಗೇನೂ ಕಡಿಮೆಯಿಲ್ಲವೀ ಜಗತ್ತಿನಲಿ..
  ಕೊಡುವವನು ಧಾರಾಳಿ, ತೆಗೆದುಕೊಳ್ಳುವವನೂ ಧಾರಾಳಿಯೇ ಆಗಿದ್ದರೆ ಮಾತ್ರವೇ ಸಾರ್ಥಕತೆ ಮೆರೆಯುವುದು..

  ಇಂದೇನಾಗಿದೆ..?
  ಕೈಯೊಡ್ಡುವವರೇ ಅಧಿಕ..!
  ಅಡ್ಡಿಯಿಲ್ಲ ಹಾಗೇ ಆಗಲಿ, ಆದರೆ ಕೈ ನೀಡುವವರೆಷ್ಟು ಮಂದಿ ಇದ್ದಾರೆ ?
  ಸ್ವಚಿಂತೆಯೇ ಹೊರತು ಪರಚಿಂತೆಯನ್ನು ಮಾಡುವವರಾರಿದ್ದಾರೆ..?
  ಎಲ್ಲೋ ಬೆರಳೆಣಿಕೆಯಷ್ಟು ಮಾತ್ರ..!

  ಯಾಕೆ ಹೀಗೆ ಬಂಧುಗಳೇ..?
  ನಮ್ಮ ಬುದ್ದಿಯೇಕೆ ಈ ಸ್ಥಿತಿಯಿಂದ ಮುಂದೆ ಹೋಗುವುದಿಲ್ಲ..?
  ಕೊಡುವಾತನಿಂದ ಕೃತಜ್ಞತೆಯಿಂದ ಸ್ವೀಕರಿಸಿ ವಿನೀತನಾಗಿ ನಾಲ್ಕು ಜನರಿಗೆ ಹಂಚಿದರೆ..
  ಕೊಡುವವನ ಪ್ರೀತಿ ಅಧಿಕವಾಗುವುದಿಲ್ಲವೇ..?
  ಇದು ನಮಗೇ ಲಾಭವಲ್ಲವೇ..?

  ಬನ್ನಿ, ಆ ದಾತ ನಮಗಿದ್ದಾನೆ..
  ಅವನಿಂದ ಸಮೃದ್ಧವಾಗಿ ಮೊಗೆಯೋಣ…
  ನಮ್ಮನ್ನು ತುಂಬಿಕೊಳ್ಳೋಣ..
  ಉಳಿದವರನ್ನೂ ಜೊತೆಗೂಡಿಸಿಕೊಳ್ಳೋಣ…
  ಓಡೋಡಿ ಬನ್ನಿ ನನ್ನ ಗುರುವಿನೆಡೆಗೆ…
  ಇಲ್ಲಿ ‘ನನ್ನ’ ಎಂಬುದು ಅಹಂಕಾರವಲ್ಲ, ಅಭಿಮಾನ…

  ನಾವೊಂದು ನೆನಪಿಡಬೇಕು ಇಲ್ಲಿ…
  ಕೊಡುವವನೆಂದೂ ಕೊಡಲು ಮರೆಯನು..
  ತೆಗೆದುಕೊಳ್ಳುವವನೆಂದೂ ಮರೆಯದೇ ಇರನು ಎನ್ನುವಂತಾಗಬಾರದು …
  ಅಕ್ಷಯ ಪಾತ್ರೆಯಲ್ಲಿರುವುದನ್ನು ಸವಿಯೋಣವೇ..?

  ಹೇಳಿರಿ…..

  [Reply]

  Sri Samsthana Reply:

  ನಿಜವಾದ ‘ಹರ್ಷ’ವು ನಮಗೆಲ್ಲಿಂದ ಸಿಕ್ಕಿತೋ ಅದನ್ನು ಮರೆತೇನೆಂದರೂ ಮರೆಯಲಾಗದು..

  [Reply]

 2. Raghavendra Narayana

  ಲೇಖನದ ಶೀರ್ಷಿಕೆಯ ಓದಿದ ಕೂಡಲೆ ಚಳಿ ಶುರುವಾಗಿದೆ. ಇನ್ನೂ ಲೇಖನ ಓದಿಲ್ಲ.
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ತಣ್ಣಗೆ ಆರಂಭವಾದದ್ದು ಬೆಚ್ಚಗೆ ಮುಗಿದೀತು…

  [Reply]

 3. nandaja haregoppa

  ಹರೇ ರಾಮ

  ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು

  ನೆಡೆಸೆನ್ನನು,

  ಇಷ್ತು ದಿನ ಸಲಹಿರುವೆ ಈ ಮೂರ್ಖನನು ನೀನು

  ಮು೦ದೆಯೂ ಕೈ ಹಿಡಿದು ನೆಡೆಸದಿಹೆಯಾ…..?

  ಜ್ನಾನವನು ತು೦ಬಿ ಧರ್ಮ ಮಾರ್ಗದಿ ನೆಡೆವ

  ಪೂರ್ಣತೆಯ ದಾರಿಯನು ತೋರದಿಹೆಯಾ….?

  [Reply]

  Sri Samsthana Reply:

  ಕರುಣಾಳು ಬೆಳಕು..

  ಕರೆದರೆ ಬಾರದಿರದು..

  ಕೈ ಹಿಡಿದು ನಡೆಸದಿರದು…

  [Reply]

 4. shrinivas hegde

  hare raama,

  gurugale,
  e lekanada modalane saalu sariyagi arta adare jeevan uddar apdralli erdu maatile anstu…

  [Reply]

  Sri Samsthana Reply:

  ಜೀವನದ ಮೊದಲ ಸಾಲದು…

  [Reply]

  shrinivas hegde Reply:

  hare raama,

  gurugale,

  jeevanada modalanee saalu, jeevanada konee saalu bapdra valgade nemmaashirvaadadinda arta aagali heli bedkate…

  [Reply]

  Sri Samsthana Reply:

  ಪ್ರತಿಯೊಂದು ಜೀವದ ಜನ್ಮಸಿದ್ಧ ಹಕ್ಕು ಈ ಬೇಡಿಕೆ..

  [Reply]

  shrinivas hegde Reply:

  hare raama,

  gurugale,

  karuneesi ellarigu…

  [Reply]

 5. Anuradha Parvathi

  Practice and then preach. ಎಷ್ಟು ನಿಜ.
  ದಶರಥನಲ್ಲಿ ಎಷ್ಟೊಂದು ಸದ್ಗುಣಗಳಿವೆ! ದಶರಥನೆಂದರೆ ’जोरु का गुलाम’ ಅನ್ನೊ perception ಇತ್ತು. ಇದೂ ದೇವರ ಒಂದು ಆಟವಿರಬೇಕು, ತಾನು ಭೂಮಿಗೆ ಬರಲು ಅವನು ಆಡಿದ ಆಟ.

  [Reply]

  Sri Samsthana Reply:

  ಅಸಂಖ್ಯ ರಾಮಾಯಣಗಳು ಸಮಾಜದಲ್ಲಿ ಪ್ರಚಲಿತವಾಗಿದ್ದರೂ ಮೂಲರಾಮಾಯಣವನ್ನು ಮತ್ತೊಮ್ಮೆ ಬರೆಯಬೇಕೆನಿಸಿದ್ದೇ ಹಾಗೆ..
  ಮುಂದು-ಮುಂದಿನ ಕಾಲಗಳು-ಕಾವ್ಯಗಳು ಮೂಲರಾಮಾಯಣದ ಸವಿ-ಸೊಗಡುಗಳನ್ನು ಮರೆಸಿದವು..
  ಪರಿಣಾಮವಾಗಿ ಸಟೆಯು ದಿಟವಾಗಿ ತೋರತೊಡಗಿತು..
  ದಿಟವು ಮರೆಯಾಗಿ ಮಲಗಿತು..
  ಹಲವು ಒಳ್ಳೆಯ ಪಾತ್ರಗಳ ಒಳ್ಳೆಯ ಗುಣಗಳು ಜನಮಾನಸದಿಂದ ಮರೆಯಾದವು..
  ದುಷ್ಟರು ಶಿಷ್ಟರಾಗಿ ವಿಜೃಂಭಿಸಿದರು..
  ಸಮಾಜಕ್ಕೆ ದಾರಿ ತೋರಿಸಲೆಂದೇ ಹುಟ್ಟಿದ ಕಾವ್ಯವನ್ನಾಧರಿಸಿ ದಾರಿ ತಪ್ಪಿಸುವ ಕಾವ್ಯಗಳು ತಲೆಯೆತ್ತಿದವು..

  ಈ ಹಿನ್ನೆಲೆಯಲಿ ಮೂಲರಾಮಾಯಣವನ್ನು ಮತ್ತೊಮ್ಮೆ ಸಮಾಜದ ಮುಂದಿಡುವ ಪ್ರಯತ್ನವಿದು..

  [Reply]

 6. Mohan Bhaskar

  ದಶರಥ – ಪೂರ್ಣತೆಯೆಡೆಗೆ ತುಡಿವ ಜೀವ ರಥ ”
  ಸತ್ಯಪರಾಕ್ರಮ – ಪ್ರತಾಪಹತಕ೦ಟಕ
  ಪ್ರಯಾಗ – ಪ್ರಯಾಸ
  ಎ೦ತಹ ಹೃದಯಸ್ಪರ್ಶಿ ಚಿ೦ತನೆಗಳು.
  ಪಡೆವ.. ಕೊಡುವ.. ಕೊಡಲು ಕೊಡುವ…ಕೊಟ್ಟು ಕೊಟ್ಟು ಕೂಡುವ… ಸ೦ಪತ್ತು!! ಏನು ಸು೦ದರ ವ್ಯಾಖ್ಯಾನ.
  ಅನುಗ್ರಹೀತರು ನಾವೆಲ್ಲ ಎ೦ಬಾ ಭಾವ ಒಡಮೂಡುವ೦ತಾಗಿದೆ.

  ಪ್ರಣಾಮಗಳು… ಮೋಹನ ಭಾಸ್ಕರ

  [Reply]

 7. Raghavendra Narayana

  “ಉದ್ಧರಿಸುವೆನು ಜಗವೆನ್ನುತಿಯ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?”
  —————————————————–
  ಈ ಸಾಲು ಓದಿಯೆ ಚಳಿ ಹಿಡಿದಿದ್ದು… ಶಿವ ಶಿವ ಶ೦ಕರ ನಾರಾಯಣ….
  ಇದು ಮ೦ಕುತಿಮ್ಮನ ಕಗ್ಗವೆ?
  .
  ಶ್ರೀ ಗುರುಭ್ಯೋ ನಮಃ

  [Reply]

 8. Sharada Jayagovind

  Hareraama Samsthana
  Why is Janaka considered an ideal king and not Dasharatha? Is the difference in administrative qualities or in personal qualities?

  [Reply]

  Sri Samsthana Reply:

  ಜನಕ ಪ್ರಸಿದ್ಧನಾದುದು ಆತ ಸಾಧಿಸಿದ ಕರ್ಮ-ಜ್ಞಾನಸಮನ್ವಯಕ್ಕಾಗಿ..

  ವ್ಯವಹಾರದಲ್ಲಿದ್ದುಕೊಂಡೇ ಪರಮಾರ್ಥವನ್ನು ಸಾಧಿಸಿದವನವನು..
  ಪರಮಾರ್ಥವನ್ನು ಸಾಧಿಸಿಯೂ ಲೋಕಸಂಗ್ರಹಕ್ಕಾಗಿ ವ್ಯವಹಾರವನ್ನು ಬಿಡದವನವನು…

  ಇನ್ನು ದಶರಥನು ಎಲ್ಲಿ ಆದರ್ಶ ರಾಜ ಮತ್ತು ಎಲ್ಲಿ ಅಲ್ಲವೆನ್ನುವುದನ್ನು ರಾಮಾಯಣದ ಮುಂದಿನ ಭಾಗಗಳು ತಿಳಿಸಿಕೊಡುತ್ತವೆ..

  [Reply]

 9. gopalakrishna pakalakunja

  “….ಲಕ್ಷ ಜನರನ್ನು ಆಳಬಯಸುವವನು ಲಕ್ಷ ಜನರ ಸಾಮರ್ಥ್ಯ- ಕೌಶಲಗಳನ್ನು ಸ್ವತಃ ತಾನು ಹೊಂದಿರಬೇಕಾಗುತ್ತದೆ..
  ದೇವರಲ್ಲಿ ‘ಸಂಪತ್ತು – ಸಾಮರ್ಥ್ಯಗಳನ್ನು ಕೊಡು’ ಎಂದು ಬೇಡಿದರೆ ಸಾಲದು..
  ‘ನೀ ಕೊಟ್ಟದ್ದನ್ನು ಸದುಪಯೋಗ ಮಾಡುವ ಬುದ್ಧಿ-ಅವಕಾಶಗಳನ್ನು ಕೊಡು’ ಎಂದೂ ಜೊತೆಯಲ್ಲಿ ಕೇಳಬೇಕು..
  ದೇವರ ವರವನ್ನು ಸದ್ವಿನಿಯೋಗ ಮಾಡದಿದ್ದರೆ ಅದು ‘ವ್ಯರ್ಥ’..
  ದುರ್ವಿನಿಯೋಗ ಮಾಡಿದರೆ ಅದು ‘ಅನರ್ಥ’..
  ಅಷ್ಟು ಮಾತ್ರವಲ್ಲ, ಕೊಟ್ಟವನ ಕೋಪಕ್ಕೂ ಗುರಿಯಾಗಬೇಕಾದೀತು…..
  ಲೋಕದಿಂದ ನಮಗೆ ಸಂದಷ್ಟು ನಮ್ಮಿಂದ ಲೋಕಕ್ಕೆ ಸಲ್ಲದಿದ್ದರೆ ಬದುಕಿನ ಸಮತೋಲನ ತಪ್ಪುತ್ತದೆ..
  ಸದ್ವಿನಿಯೋಗವಾಗದ ಸಂಗ್ರಹ ಜೀವಕ್ಕೂ-ಜೀವನಕ್ಕೂ ‘ ಭಾರ’ವಾದೀತು, ಬಾಧೆಯಾದೀತು..
  ತನ್ನಲ್ಲಿರುವ ಸಂಪತ್ತಿಗೆ ತಾನು ‘ಮಾಲಕ’ನಲ್ಲ, ‘ಪಾಲಕ’ ಮಾತ್ರ ಎಂಬ…..’

  ಸುವರ್ಣಾಕ್ಷ್ರರ ಗಳಲ್ಲಿ ಕೆತ್ತಿಸಿಡಬೇಕಾದ ಮಾತುಗಳು. ನಿತ್ಯದ ಜನಜೀವದಲ್ಲಿ ಬಳಕೆ ಯಲ್ಲಿ ಬೇಕಾದರೆ ಕೇವಲ ಶ್ರೀ ಗುರು ಪೊರ್ಣಾನುಗ್ರಹದಿಂದ ಮಾತ್ರ ಸಾಧ್ಯ.

  [Reply]

 10. Raghavendra Narayana

  Do we know the essence of Sun(Light)?
  Do we know the essence of Jnana(Light)?
  Can we imagine the world without Light?
  Let us light the Life lights. Celebrate the Festival of Lights. Happy Deepavali.
  .
  Shri Gurbhyo Namaha

  [Reply]

  Sri Samsthana Reply:

  ಸುಜ್ಞಾನಿಗಳ ಸಂತತಿಯು ಮತ್ತೊಮ್ಮೆ ತಲೆಯೆತ್ತಿ ಭಾರತವೇ ದೀಪಾವಳಿಯಾಗಲಿ..

  [Reply]

 11. Raghavendra Narayana

  This article is a Deepavali Dhamaka…
  .
  Shri Gurubhyo Namaha

  [Reply]

 12. Raghavendra Narayana

  “ಪೂರ್ಣತೆಯೆ೦ಬುದು ಬದುಕಿನ ಪರಮಗುರಿ..
  ಧರ್ಮವು ಪೂರ್ಣತೆಯೆಡೆಗೆ ನಮ್ಮನ್ನು ಕರೆದೊಯ್ಯುವ ದಾರಿ..
  ಜ್ಞಾನವು ಪೂರ್ಣತೆಯ ದಾರಿಯನ್ನು ಬೆಳಗುವ ಬೆಳಕು..”
  .
  ಶ್ರೀಮುಖದಲ್ಲಿ ಇದರ ಬಗ್ಗೆ ಹೆಚ್ಚು ವಿವರಿಸಬೇಕಾಗಿ ಸಾಸ್ಠಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  ೧) ಪೂರ್ಣತೆ ಎ೦ದರೆ ಏನು? ಏಕೆ ಮತ್ತು ಹೇಗೆ ಸಾಧಿಸಬೇಕು?
  ೨) ಜಗತ್ತಿನ ಹೆಚ್ಚಿನ ಜನರೆಲ್ಲ ಬೇರೆಡೆ ಮುಖ ಮಾಡಿರಬೇಕಾದರೆ, ನಾವೇಕೆ ಪೂರ್ಣತೆಯೆಡೆಗೆ ಮುಖ ಮಾಡಬೇಕು?
  ೩) ಪೂರ್ಣತೆಯಿ೦ದ ನನಗಾಗುವ ಲೋಕಕ್ಕಾಗುವ ಉಪಯೋಗವೇನು?
  .
  ಎನ್ನ ಚಿತ್ತ ಚಾ೦ಚಲ್ಯವನ್ನು ನಾಶಗೊಳಿಸು ಸದ್ಗುರುವೆ.. ಮೇಲೆರುವ ದಾರಿಯಲ್ಲಿ ಬಾರಿ ಬಾರಿ ಕೆಳ ಬೀಳುತಿಹೆ.. ಮೈ-ಮನ ಬಳಲಿಹುದು.. ಕಣ್ಣಿನ ಬೆಳಕು ಕು೦ದುತಿಹುದು.. ಕುರುಡು.. ಕುರುಡೀ ಲೋಕ.. ದಿಕ್ಕು ದಿಕ್ಕೀ ಸ೦ಚಾರ..
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಸಂತೋಷವಾಗಿ…

  [Reply]

 13. Sharada Jayagovind

  Dhanyavadagalu Samsthana… then Janaka becomes the ideal for all jeevas …

  [Reply]

  Sri Samsthana Reply:

  ಜನಕನನ್ನು ಆದರ್ಶರಾಜನೆನ್ನುವುದಕ್ಕಿಂತ ಆದರ್ಶಜೀವನೆನ್ನುವುದೇ ಹೆಚ್ಚು ಸರಿ…

  ಮತ್ತೆ ರಾಜ್ಯಭಾರದ ವಿಷಯದಲ್ಲಿ ದಶರಥನು ತನ್ನ ಸಮಕಾಲದವರ್ಯಾರಿಗೂ ಕಡಿಮೆಯಲ್ಲ…

  [Reply]

 14. vinootha B

  ಅಜ್ಣಾನವೆಂಬ ಕತ್ತಲೆ ಕಳೆದು ಜ್ಣಾನದ ಬೆಳಕು ತೋರುವ ಗುರುವಿನ ಪಾದಾರವಿಂದಗಳಿಗೆ ಕೋಟಿ ಕೋಟಿ ಪ್ರಣಾಮಗಳು.

  [Reply]

 15. madhyastharv

  ಹರೆರಾಮ,,,,,,,,,,,,,,,,,!!!!!!!

  [Reply]

  Sri Samsthana Reply:

  ರಾ(ಘವೇಂದ್ರ) ಮ(ಧ್ಯಸ್ಥ)..!!

  [Reply]

 16. Sri Samsthana

  ತುಂಬಿದ ಮೇಲೆ ತುಳುಕಲೇಬೇಕು..

  [Reply]

 17. Ashwini

  ಜೀವಿಯ ಸತ್ವ-ತತ್ವ ಪ್ರಕಟಗೊಳ್ಳುವುದು ಭಾವವಾಗಿ..
  ತನು-ಭಾವವಳಿದಲ್ಲಿ ಪರಮ ಪ್ರೇಮದಿ ತಾನಿಳಿಯಲಿಚ್ಛಿಸುವನು ಭಗವಂತ.
  ಸು-ಭಾವವೇ ಸ್ವಭಾವವಾದರೆ ದೇವ-ಭಾವವಾವರಿಸೀತು !!

  ಕೊಡು ಕೊಡುತ್ತಾ ಕಾಯುವವನು ದೇವ
  ಪಡೆ ಪಡೆದು ಬೇಡುತ್ತಲೇ ಇಹಿದು ಜೀವ…

  ಗುರುವೇ, ಕೊನೆಯಿರದೀ ವಾತ್ಸಲ್ಯಕ್ಕೆ ಪ್ರತಿಯಿಲ್ಲ…
  ನಿನ ಪಾದಗಳಲ್ಲಿ ಕಿಂಚಿನ್ಮಾತ್ರದ ಸೇವಾ ಭಾಗ್ಯವೊದಗಿದರೆ ಈ ಜೀವದ,ಜೀವನದ ಯೋಗವಾದೀತು!!

  ಹರೇ ರಾಮ.

  [Reply]

  Raghavendra Narayana Reply:

  Wonderful

  [Reply]

  Sri Samsthana Reply:

  ದೇವಲೋಕದಿಂದಿಳಿದು ಬಂದ ದಿವ್ಯ-ಭಾವ-ಪದಗಳು..!

  [Reply]

 18. mamata hegde

  Hare Raama

  Samstana E baduku”PRAYAGA” vagali…….

  [Reply]

  Sri Samsthana Reply:

  ಜಗ-ಜೀವ-ದೇವರ ಅನನ್ಯಸಂಗಮವೇ ಜೀವನ-ಪ್ರಯಾಗ..!

  [Reply]

 19. dattu

  ರಾಮರಾಜ್ಯದ ಸ್ಥಾಪನೆ ಮಾಡಲು ಹೊರಟ ಶ್ರೀಗಳಿಂದ ಮೂಲಮಂತ್ರದ ಉಪದೇಶದಂತಿದೆ.

  [Reply]

 20. ಪಕಳಕುಂಜ ಗೋಪಾಲಕೃಷ್ಣ

  ಹರೇ ರಾಮ !

  ಗೋಕರ್ಣ ಮಂಡಲವೇ ಸಾಕೇತ…ರಾಮಚಂದ್ರಾಪುರವೇ ಅಯೋಧ್ಯೆ…ಶ್ರೀ ಶಂಕರ ಪೀಠವೇ ದಶರಥ…ಶ್ರೀ ಸಂಸ್ಥಾನವೇ ಶ್ರೀರಾಮ….

  “…ಮನೆ ಸುಧಾರಿಸಿದರೆ ಊರು ಸುಧಾರಿಸುವ ಪ್ರಯತ್ನಕ್ಕೆ ಶಕ್ತಿ ಬಂದೀತು..!
  ಊರು ಸುಧಾರಿಸುವ ಪ್ರಯತ್ನ ಸಂಪೂರ್ಣ ಸಫಲವಾಗದಿದ್ದರೂ, ಕೊನೆಯ ಪಕ್ಷ ಊರಿನ ಒಂದಂಶವನ್ನು ಸುಧಾರಿಸಿದ ಸಾರ್ಥಕತೆಯುಳಿದೀತು..!….”

  ರಾಮರಾಜ್ಯ ದ ಶುಭ ನಾಂದಿ…ರಾಮ ಕಥಾ…

  ಹರೇ ರಾಮ !

  [Reply]

Leave a Reply

Highslide for Wordpress Plugin