‍|| ಹರೇರಾಮ ||‍

ಅದ್ಭುತಾಕಾರದ ಅಗ್ನಿಗೋಳಗಳು..!

ಅನಂತ ಅಂತರಾಳಗಳು..!

ಬೆಳಕ ಬೀರುವ ತಾರೆಗಳು..!

ಬೆಳಕ ಹೀರುವ ಗ್ರಹಗಳು..!

ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..!

ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..!

ಒಂದರ ಸುತ್ತ ಇನ್ನೊಂದು ಸುತ್ತುವ  ಅನಿರ್ವಚನೀಯ ಪ್ರೀತಿ..!

ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!

ಮೂರ್ತಿ ಕಿರಿದಾದರೂ ಕೀರ್ತಿ ಕಿರಿದಲ್ಲವದರದ್ದು..!

ಬಗೆದು ನೋಡಿದರೆ ಬ್ರಹ್ಮಾಂಡದಲ್ಲೆಲ್ಲ್ಲೂ ಜೀವಗಳ ಸುಳಿವಿಲ್ಲ ..!

ಜೀವಸೆಲೆಯಿರುವುದು ನಮ್ಮ ಹೆಮ್ಮೆಯ ಭೂಮಿಯಲ್ಲಿ ಮಾತ್ರವೇ..!

ಅನಂತ ತೇಜಃಪುಂಜಗಳಿರಬಹುದು ಬ್ರಹ್ಮಾಂಡದಲ್ಲಿ..

ಆದರೆ ಅಸಂಖ್ಯ ಚೇತನಗಳು ಬಗೆಬಗೆಯ ರೂಪದ, ಬಗೆಬಗೆಯ ರೀತಿಯ ಬದುಕು ನಡೆಸುವುದು ಭೂಮಿಯಲ್ಲಿ ಮಾತ್ರ..!

ಆದುದರಿಂದಲೇ ಭೂಮಿಯೆಂದರೆ ಅದು ಬ್ರಹ್ಮಾಂಡದ ಜೀವ…!

ಜೀವಗಳೇನು ! ದೇವರೇ ಮತ್ತೆ ಮತ್ತೆ ಹುಟ್ಟಿ ಬರುವ ಪಾವನ ರಾಷ್ಟ್ರವೊಂದಿದೆ ಭೂಮಂಡಲದಲ್ಲಿ…

ಅದುಭಾರತ

ಭಾರತವೆಂದರೆ ನಾಕಕಿಂತ ಮೇಲು..

ಭಾರತೀಯರೆಂದರೆ ದೇವತೆಗಳಿಗಿಂತಲೂ ಮಿಗಿಲು..

ಗಾಯಂತಿ ದೇವಾಃ ಕಿಲ ಗೀತಕಾನಿ

ಧನ್ಯಾಸ್ತು ತೇ ಭಾರತಭೂಮಿಭಾಗೇ|

ಸ್ವರ್ಗಾಪವರ್ಗಾಸ್ಪದಮಾರ್ಗಭೂತೇ

ಭವಂತಿ ಭೂಯಃ ಪುರುಷಾಃ ಸುರತ್ವಾತ್||

ವಿಷ್ಣುಪುರಾಣ

ಸ್ವರ್ಗದಲ್ಲಿ ಮುಕ್ತಿಗೆಡೆಯಿಲ್ಲ..

ಆದುದರಿಂದಲೇ ದೇವತೆಗಳು ತಮ್ಮ ದೇವತ್ವವನ್ನೂ, ಸ್ವರ್ಗವಾಸವನ್ನೂ ತೊರೆದು ಮಾನವರಾಗಿ ಹುಟ್ಟಿ ಬರಬಯಸುವ ಮೋಕ್ಷಭೂಮಿಯಿದು..!

ಭಾರತವೆಂದರೆ ಮಾನವತೆಯಲ್ಲಿ ಹುಟ್ಟಿ, ದಾನವತೆಯನ್ನು ಮೆಟ್ಟಿ, ಮಾಧವತೆಯನ್ನುಮುಟ್ಟುವ ಮಹಾಸಾಧಕರ ತವರೂರು..

ದೇವದೂತರು ಹುಟ್ಟಿಬರುವ ದೇಶಗಳು ಹಲವಿವೆ..

ಆದರೆ, ಸ್ವಯಂ ದೇವರೇ ಭುವಿಯಲ್ಲಿ ವಾಸಿಸುವ ತನ್ನ ಮಕ್ಕಳನ್ನು ನೋಡಲು ಅಗಾಗ ಮೈವೆತ್ತು ಬರುವ ನಾಡೆಂದರೆ ಭಾರತವೊಂದೇ..!

ಭಾರತವೆಂದರೆ ದೇವರ ಒಡಲು…!

ಭಾರತವೆಂದರೆ ದೇವರ ಮಡಿಲು..!

ಭಾರತವೆಂದರೆ ದೇವರ ತಾಯಿ..!!

ಭೂಮಿಯೆಂಬ ಮನೆಯಲ್ಲಿ ಭಾರತವೆಂದರೆ ದೇವರಕೋಣೆ..!

ಮೂರು ಮಹಾಸಮುದ್ರಗಳು…

ಏಳು ಕುಲಪರ್ವತಗಳು…

ನೂರಾರು ಮಹಾನದಿಗಳು…

ಸಾವಿರಾರು ಭಾಷೆಗಳು…

ಅಗಣಿತ ಪಂಥಗಳು – ಜೀವನ ವಿಧಾನಗಳು..

ಬಗೆಬಗೆಯ ಮಾನವ ಪ್ರಭೇದಗಳು…

ತನ್ನ ತಾಯ್ನಾಡಿಗೆ ದೇವರು ಏನನ್ನು ತಾನೆ ಕೊಡಲಿಲ್ಲ..!?

ಈ ನೆಲಕ್ಕೆ ನೀಡಿದ ತೆರನಾದ ಬಗೆಬಗೆಯ ಸಂಪತ್ತುಗಳನ್ನು ಬೇರಾವ ರಾಷ್ಟ್ರಕ್ಕೆ ತಾನೇ ಈಶ್ವರನಿತ್ತಿದ್ದಾನೆ…?

ಸುಂದರ ಶರೀರಕ್ಕೊಂದು ತುಂಬಿದ ಹೃದಯ ಬೇಡವೇ..?

ವಿಶ್ವದಲ್ಲಿಯೇ ಸರ್ವೋಪರಿಯೆನಿಸಿದ ಭಾರತದ ಹೃದಯಸ್ಥಾನದಲ್ಲಿದ್ದ ನಾಡು…

ಅದುವೇ ಕೋಸಲ…!

ಕೋಸಲವೆಂದರೆ…

ಜ್ಞಾನದ ಬೆಳಕಿನಿಂದ ಬೆಳಗುವ ಆತ್ಮಜ್ಞಾನಿಗಳ ಜ್ಞಾನರಾಜ್ಯವದು..

ಎಲ್ಲರ ಮೊಗದಲ್ಲಿ ನಗು ಮಿನುಗುವ  ಆನಂದರಾಜ್ಯವದು..

ಯಾರಿಗೂ ಯಾವಾಗಲೂ ಯಾರಿಂದಲೂ ಭಯವಿಲ್ಲದಅಭಯರಾಜ್ಯವದು..

ಧುಮ್ಮಿಕ್ಕುವ ಝರಿಗಳ, ಹರಿಯುವ ಹೊಳೆಗಳ, ಚಿಮ್ಮುವ ಚಿಲುಮೆಗಳ, ಸ್ತಿಮಿತಗಾಂಭೀರ್ಯದ ಸರೋವರಗಳ ಕಣ್ತಣಿಸುವ ಅಮೃತರಾಜ್ಯವದು..

ದೇವರ ಸೃಷ್ಟಿಯ ವನಗಳು, ಮಾನವ ಸೃಷ್ಟಿಯ ಉದ್ಯಾನಗಳಿಂದ ವಿಭೂಷಿತವಾದ ಹಸಿರುರಾಜ್ಯವದು..

ಪ್ರಕೃತಿಯ ಹಸಿರುಂಡು ಮಮತೆಯ ಹಾಲುಣಿಸುವ ಹಸುಗಳ ಹುಂಭಾರವವು ಹೆಜ್ಜೆ ಹೆಜ್ಜೆಗೆ ಕೇಳಿಬರುವ ವಾತ್ಸಲ್ಯ‘ರಾಜ್ಯವದು..

ಎಲ್ಲೆಂದರಲ್ಲಿ ಮಂತ್ರಗಳು ಮೊಳಗುವ ವೇದರಾಜ್ಯವದು…

ಎಲ್ಲೆಂದರಲ್ಲಿ ದರ್ಶನವೀಯುವ ದೇವವೃಕ್ಷಗಳ, ದೇವಸ್ಥಾನಗಳ ದೇವರಾಜ್ಯವದು…

ಉಸಿರು ಉಸಿರಿನಲ್ಲಿ ಹೋಮಧೂಮದ ಸುಗಂಧವು ಪಸರಿಸುವ ಯಜ್ಞರಾಜ್ಯವದು..

ಧನಲಕ್ಷ್ಮಿಯು ಕೋಶದಲ್ಲಿಯೂ, ಧಾನ್ಯಲಕ್ಷ್ಮಿಯು ಕಣಜದಲ್ಲಿಯೂ ತುಂಬಿತುಳುಕುವ ಸಮೃದ್ಧಿರಾಜ್ಯವದು..

ತುಂಬಿದ ಸಂಪತ್ತು ನಿಂತ ನೀರಾಗದೆ  ದೀನರೆಡೆಗೆ ಧಾರಾಳವಾಗಿ ಹರಿಯುವ ದಾನರಾಜ್ಯವದು..

ತುಷ್ಟ ಮನಸ್ಸು, ಪುಷ್ಟ ಶರೀರಗಳಿಂದ ಕೂಡಿದ ಪ್ರಜೆಗಳ ತೃಪ್ತಿರಾಜ್ಯವದು..

ವೇದಘೋಷ, ದೇವಪೂಜೆ, ದಾನ, ಯಜ್ಞ, ತಪಸ್ಸುಗಳ ಮೂಲಕವಾಗಿ ಅಲ್ಲಿ ದಿವ್ಯತೆಯು ಪ್ರಕಟಗೊಳ್ಳುತ್ತಿದ್ದರೆ…

ಬಯಲು-ಬೆಟ್ಟಗಳಲ್ಲಿ, ನದೀ-ಸರೋವರಗಳಲ್ಲಿ, ಕಾನನೋದ್ಯಾನಗಳಲ್ಲಿ ಪ್ರಕೃತಿಯ ರಮ್ಯತೆಯು ಹೊರಸೂಸುತ್ತಿತ್ತು..

ಅರಿವು ಆನಂದಗಳ ರೂಪದಲ್ಲಿ ಸ್ವಯಂ ನಾರಾಯಣನೇ ಅಲ್ಲಿ ನೆಲೆಸಿದ್ದರೆ..

ಧನಧಾನ್ಯ ಸಮೃದ್ಧಿಯ ರೂಪದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯೇ ನೆಲೆಸಿದ್ದಳಲ್ಲಿ..!

ಆ ಕೋಸಲದಲ್ಲಿ..

ಸಚೇತನರಲ್ಲಿ ಸತತವಾಗಿ ಪ್ರವಹಿಸುವ ಚೈತನ್ಯವಾಹಿನಿಯಂತೆ..

ನಾಡಿನ ಸಮೃದ್ಧಿಗೆ ಪ್ರಥಮ ಕಾರಣವಾಗಿ, ಪ್ರವಹಿಸುತ್ತಿದ್ದಳು ಸರಯೂ..

ಸೃಷ್ಟಿಕರ್ತನ ಮಾನಸವು ಕರಗಿದಾಗ..

ಅದು ಕೈಲಾಸದ ಪರಿಸರದಲ್ಲಿ ಮಾನಸ ಸರೋವರವಾಗಿ ರೂಪುಗೊಂಡಾಗ..

ಅಲ್ಲಿಂದ ಹರಿದವಳವಳು..!

ಬ್ರಹ್ಮಮಾನಸಸರದಿಂದ ಹೊರಹೊಮ್ಮಿದ್ದರಿಂದಲೇ ‘ಸರಯೂ’ ಆಕೆ..

ಅನಂತ ಅಮೃತಬಿಂದುಗಳನ್ನೊಳಗೊಂಡು ಹರಿಯುವ ಆ ನದಿಯ ಪುಣ್ಯತೀರದಲ್ಲಿ

ಅಸಂಖ್ಯ ಅಮೃತಜೀವಿಗಳಿಗೆ ಆಶ್ರಯವಿತ್ತ ಪುರಾತನ ನಗರಿಯೊಂದು ನೆಲೆ ನಿಂತಿದ್ದಿತು..

ಅದುವೇ ಮಾನವ ಕುಲದ ಮೂಲಪುರುಷನಾದ ಮನು ಮಹಾರಾಜನು ನಿರ್ಮಿಸಿದ ಮೋಕ್ಷನಗರಿ ಅಯೋಧ್ಯೆ..!

ಸೃಷ್ಟಿಯ ಮೂಲಪುರುಷನ ಮನಸ್ಸು ನೀರಾಗಿ ಹರಿದ ನದಿಯ ತಟದಲ್ಲಿ…

ಮಾನವಕೋಟಿಯ ಮೂಲಪುರುಷನು ನಿರ್ಮಿಸಿದ ಆ ಮಹಾನಗರಿಯಲ್ಲಿ..

ಮಾನವತೆಯ ಮರ್ಯಾದೆಗಳನ್ನು ಮನುಕುಲಕ್ಕೆ ತೋರಿದ,

ಸೃಷ್ಟಿಯ ಸಂಕಟಕ್ಕೆ ಮಿಡಿಯುವ ಹೃದಯದ ಮಹಾಪುರುಷರು ಆವಿರ್ಭವಿಸಿದರೆ ಅದು ಸಹಜವಲ್ಲವೇ..?

ಶುಭಶಿರದಲ್ಲಿ ಶೋಭಿಸುವ ಮಣಿಮುಕುಟದಂತೆ..

ಮಣಿಮಾಲೆಯ ಮಧ್ಯೆ ಮೆರೆಯುವ ನಾಯಕಮಣಿಯಂತೆ..

ಸಮೃದ್ಧಕೋಸಲದ ಸುಭದ್ರರಾಜಧಾನಿಯಾಗಿ ರಾರಾಜಿಸುತ್ತಿದ್ದಿತು ಅಯೋಧ್ಯೆ..!

ಅಯೋಧ್ಯೆಯೆಂಬ ಸುಮಂಗಲಿಗೆ ತಿಲಕವಾಗಿ ಒಪ್ಪಿತ್ತು ರಾಜರಾಜರು ವಿರಾಜಿಸುವ ರಮಣೀಯವಾದ ಅರಮನೆ ..

ಅಲ್ಲೊಂದು ರತ್ನ ಸಿಂಹಾಸನ..

ಉತ್ತಮಾಂಗವೆನಿಸಿದ ಶಿರಸ್ಸಿನೊಳಗೆ  ಮಂಡಿಸಿ ಸಮಸ್ತ ಶರೀರದ ಆಗುಹೋಗುಗಳನ್ನು ನಿಯಂತ್ರಿಸುವ ಮಹಾಮಸ್ತಿಷ್ಕದಂತೆ..

ಅಯೋಧ್ಯೆಯ ಅರಮನೆಯಲ್ಲಿ ಮಂಡಿಸಿ, ಕೋಸಲವೇನು, ಸಮಸ್ತ ಭೂಮಂಡಲದ ಆಗು-ಹೋಗುಗಳನ್ನೇ ನಿಯಂತ್ರಿಸುವ ವಿಶ್ವನಿಯಾಮಕಪೀಠವದು..!

ಭೂಮಂಡಲದ ನಾಯಕರು ಮಂಡಿಸುವ ಮಹಾಸಿಂಹಾಸನವದು..!

ಬ್ರಹ್ಮಾಂಡನಾಯಕನೂ  ಮಂಡಿಸಲು ಯೋಗ್ಯವಾದ ಧರ್ಮಸಿಂಹಾಸನವದು..!

ಭೂಲೋಕದ ಸಕಲಜೀವಗಳ ಯೋಗಕ್ಷೇಮದ ಹೊಣೆ ಹೊತ್ತ ಅಖಂಡ ಭೂಮಂಡಲದ ಏಕೈಕ ಸಿಂಹಾಸನವದು..!

ಧರಣಿಯ ರಾಜರೆಲ್ಲರೂ ವಿನಯದಿಂದ ಬಾಗುವ, ಕೋಸಲದ ಪ್ರಜೆಗಳೆಲ್ಲರೂ ಹೆಮ್ಮೆಯಿಂದ ಬೀಗುವ ಮಹೋನ್ನತ ಸಿಂಹಾಸನವದು..

ದುಷ್ಟರನ್ನು ಶಿಕ್ಷೆಯಿತ್ತು ತಿದ್ದುವ, ಶಿಷ್ಟರನ್ನು ರಕ್ಷೆಯಿತ್ತು ಸಲಹುವ ನಿಗ್ರಹಾನುಗ್ರಹ ಸಾಮರ್ಥ್ಯ ಸಂಪನ್ನವಾದ ಪರಮಾಸನವದು..

ಮಾನವತೆಯ ಉಗಮವಾಗುವಾಗಲೇ ಉದಯಿಸಿ ಬಂದ ಆದಿ ಸಿಂಹಾಸನವದು..

ಅನಂತ ಕಾಲಪ್ರವಾಹದ ನಡುವೆಯೂ ತನ್ನ ಸತ್ತ್ವ- ಅಸ್ತಿತ್ವವನ್ನು ಕಳೆದುಕೊಳ್ಳದ ಅಮರ ಸಿಂಹಾಸನವದು..

ರಾಮಾಯಣವು ನಡೆದಿದ್ದು ಆ ಸಿಂಹಾಸನವನ್ನಲಂಕರಿಸಿದ್ದ ಮಹೋನ್ನತವಾದ ರಾಜವಂಶದಲ್ಲಿ..

ಆದಿರಾಜನು ಕಟ್ಟಿದ ಆದಿನಗರಿಯ ಆದಿಸಿಂಹಾಸನದಲ್ಲಿ ಕುಳಿತು ಲೋಕವನ್ನಾಳಿದ ಅನಂತ ಸಾಮರ್ಥ್ಯ -ಸುಗುಣಸಂಪನ್ನರಾದ ಸಮ್ರಾಟರ ವಂಶದಲ್ಲಿ ನಡೆದೊಂದು ಮಹತ್ತರ ಘಟನೆಯೇ ಆದಿಕಾವ್ಯದ ವಸ್ತುವಾಯಿತೆಂಬುದು ಉಚಿತವೇ ಅಲ್ಲವೇ..?

‍|| ಹರೇರಾಮ ||

ಟಿಪ್ಪಣಿ:

ಅನಿರ್ವಚನೀಯ – ಹೀಗೆಂದು ವಿವರಿಸಲಾಗದ..

ಸರ್ವೋಪರಿಯೆನಿಸಿದ – ಎಲ್ಲದಕ್ಕಿಂತಲೂ ಮೇಲೆನಿಸಿದ..

ಸ್ತಿಮಿತ – ನಿಶ್ಚಲ..

ನಾಯಕಮಣಿ – ಮಣಿಹಾರದ ಮಧ್ಯದಲ್ಲಿ ಬೇರೆಲ್ಲ ಮಣಿಗಳಿಗಿಂತ ದೊಡ್ಡದಾಗಿ ಎದ್ದುತೋರುವ ಮಣಿ..ಶಿಖಾಮಣಿ
ನಿಗ್ರಹಾನುಗ್ರಹಸಾಮಥ್ಯ೯ಸಂಪನ್ನ – ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಬೇಕಾದ ಶಕ್ತಿಸಾಮಥ್ಯ೯ಗಳನ್ನು ಹೊಂದಿದವರು…

ಆವಿರ್ಭವಿಸಿದರೆ – ಹುಟ್ಟಿದರೆ..

Facebook Comments Box