ಪ್ರೀತಿ ಇರಬೇಕು, ಮೋಹ ಇರಬಾರದು. ಪ್ರೀತಿ ನಂಟು, ಮೋಹ ಅಂಟು. ಪ್ರೀತಿಯು ಸುಖಪ್ರದ. ಮೋಹ ದುಃಖಪ್ರದ. ಮೋಹ ಅಧರ್ಮ. ಮೋಹದಿಂದ ಕೂಡಿದವನಿಗೆ ಯಾವುದು ಸರಿ , ಯಾವುದು ತಪ್ಪು ಎಂದು ಯೋಚಿಸುವ ವಿವೇಕ ಇರುವುದಿಲ್ಲ. ವಸ್ತು ಅಥವಾ ವ್ಯಕ್ತಿ ಮೇಲೆ ಮೋಹ ಉಂಟಾದಾಗ ಏನಾಗುತ್ತದೆ ಎಂಬುದಕ್ಕೆ ದಶರಥ ಉದಾಹರಣೆ.

ರಾಮನ ಮೇಲೆ ಮೋಹ ಬಂದಾಗ ದಶರಥನಿಗೆ ಏನಾಗಿತ್ತು? ದಶರಥ ವಿಶ್ವಾಮಿತ್ರರಿಗೆ ಮಾತುಕೊಟ್ಟಿದ್ದ. ರಾಮನನ್ನು ಹತ್ತು ದಿನ ಯಾಗಕ್ಕೆ ಕಳುಹಿಸೆಂದು ಕೇಳಿದಾಗ ಏನೂ ಮಾಡಲು ಅರಿಯದ ಸ್ಥಿತಿ ದಶರಥನದು.

ಎಚ್ಚೆತ್ತ ದಶರಥ ಮಾತಾಡಲು ಪ್ರಾರಂಭಿಸಿದ. ಇನ್ನೂ ಹದಿನಾರು ತುಂಬದ ಚಿಕ್ಕವನು, ನನ್ನ ರಾಮ! ಕಮಲದ ಕಣ್ಣವನು (ಇದು ಏಕೆಂದರೆ, ಕಮಲ ಸೂರ್ಯಾಸ್ತವಾಗುತ್ತಿದ್ದಂತೆ ಮುದುರಿಬಿಡುತ್ತದೆ – ಅವನು ಚಿಕ್ಕ ಮಗು, ನಿದ್ದೆ ಬಂದುಬಿಡುತ್ತದೆ). ರಾಕ್ಷಸರ ಕೆಲಸ ಪ್ರಾರಂಭವಾಗುವುದೇ ಸೂರ್ಯಾಸ್ತದ ನಂತರ, ಇವನ ಕೆಲಸಗಳೆಲ್ಲ ಮುಕ್ತಾಯವಾಗಬಹುದು ಆಗ! ಯುದ್ಧಯೋಗ್ಯತೆಯಿಲ್ಲ ಇನ್ನೂ ಅವನಿಗೆ, ಅದೂ ರಾಕ್ಷಸರೊಡನೆ? ಸಾಧ್ಯವಾಗಲಾರದು. ಅಯೋಧ್ಯೆಯ ಅಕ್ಷೌಹಿಣೀ ಸೈನ್ಯದೊಡೆಯ ನಾನು, ನಾನೇ ಬರುತ್ತೇನೆ; ಶೂರ ವೀರರಾದ ನನ್ನ ಭಟರು – ರಾಕ್ಷಸರೊಡನೆ ಯುದ್ಧಮಾಡಲು ಯೋಗ್ಯರು, ರಾಮ ಬರುವುದು ಬೇಡ. ಪ್ರಾಣ ಇರುವವರೆಗೂ ನಾನು ನಿಂತು ಹೋರಾಡುತ್ತೇನೆ. ಯಜ್ಞ ನಿರ್ವಿಘ್ನವಾಗಿ ಆಗಬೇಕಲ್ವೇ, ಅದನ್ನೇ ಮಾಡೋಣ; ರಾಮ ಯಾಕೆ ಅದಕ್ಕೆ. ಮಾಯಾಯುದ್ಧವನ್ನು ಮಾಡುವವರು ರಾಕ್ಷಸರು, ಅಷ್ಟು ಅರ್ಹತೆ ಇವನಲ್ಲಿಲ್ಲ. ರಾಮನಿಂದ ದೂರವಾಗಿ ಒಂದು ಮುಹೂರ್ತವೂ ಬದುಕಲಾರೆ. ನನಗೆ ನನ್ನ ನಾಲ್ಕು ಮಕ್ಕಳೂ ಪ್ರಿಯರು ಆದರೆ ರಾಮನು ಪರಮಪ್ರಿಯ.

ರಾಮನೇ ಬೇಕು ಎಂದು ತೀರ್ಮಾನವಾದರೆ, ನಾನೂ ಬರುವೆ ಅವನೊಡನೆ; ಸೈನ್ಯವೂ ಬರಲಿ! ಯಾಕೆಂದರೆ, ಅವನು ಹುಟ್ಟಬೇಕಾದರೆ ಬಹಳ ತಪಸ್ಸಿದೆ ಅದರ ಹಿಂದೆ, 60000 ವರ್ಷಗಳ ಕಾಯುವಿಕೆಯಿದೆ! ಇವನು ರತ್ನ, ಹಾಗೆ ಹೇಗೆ ಚೆಲ್ಲಿಬಿಡುವುದು..ಇವನು ಪರಮಪ್ರಿಯ, ಧರ್ಮಮೂರ್ತಿ – ಧರ್ಮಾತ್ಮನಾಗುವ ಎಲ್ಲಾ ಲಕ್ಷಣಗಳೂ ಇವೆ!

ಮುಂದೆ ದಶರಥನು ರಾಕ್ಷಸರ ಶಕ್ತಿ, ಅವರ ಹಿನ್ನೆಲೆ, ಸ್ವರೂಪದ ಬಗ್ಗೆ ವಿವರ ಬೇಕು ಎಂದು ಕೇಳುತ್ತಾನೆ.

ವಿಶ್ವಾಮಿತ್ರರು ಬಹಳ ತಾಳ್ಮೆಯಲ್ಲಿ ವಿವರಿಸುತ್ತಾರೆ.

ಪೌಲಸ್ತ್ಯ ವಂಶದಲ್ಲಿ ಹುಟ್ಟಿದ ಮಹಾರಕ್ಷಸ, ವಿಶ್ರವಸುವಿನ ಪುತ್ರ , ಧನೇಶ್ವರ ಕುಬೇರನ ತಮ್ಮ. ಬ್ರಹ್ಮನ ವರದಿಂದಾಗಿ ತ್ರಿಲೋಕವನ್ನೇ ಬಾಧಿಸುತ್ತಿದ್ದಾನೆ. ಸ್ವತಃ ಹೋಗಿ ಬಾಧಿಸಲಾಗದ ಸಮಯಗಳಲ್ಲಿ ಬೇರೆ ಪ್ರತಿನಿಧಿಗಳನ್ನು ಕಳುಹಿಸುತ್ತಾನೆ. ನಾವು ನಡೆಸುವ ಯಜ್ಞ ಭಂಗ ಮಾಡಲು ಮಾರೀಚ ಮತ್ತು ಸುಬಾಹುವನ್ನು ಕಳುಹಿಸುತ್ತಿದ್ದಾನೆ.

“ರಾವಣನಾ? ಅವನ ತಂಟೆ ಬೇಡ; ಅವನ ವಿಷಯದಲ್ಲಿ ನಾವಿಲ್ಲ, ನಾನು ಅವನನ್ನು ಎದುರಿಸಲು ಶಕ್ತನಲ್ಲ” ಎಂದುಬಿಟ್ಟ ದಶರಥ, ವಿಶ್ವಾಮಿತ್ರರಿಗೆ! “ದಯವಿಟ್ಟು ನಮಗೆ ಆಶೀರ್ವದಿಸಿ, ಬಿಟ್ಟುಬಿಡಿ. ಮನುಷ್ಯರೇನು? ದೆವದೇವತೆಗಳಿಗೂ ಅವನ ವಿರುದ್ಧ ಯುದ್ಧಮಾಡಲು ಶಕ್ತರಲ್ಲ; ನನಗೂ ನನ್ನ ಸೈನ್ಯಕ್ಕೂ – ಅವನನ್ನು ಬಿಡಿ, ಅವನ ಬಳಗವನ್ನೂ ಎದುರಿಸುವ ಶಕ್ತಿ ಇಲ್ಲ! ರಾಮನನ್ನು ಕೊಡಲು ಸಾಧ್ಯವಿಲ್ಲ, ಅವರು ಯಜ್ಞಕ್ಕೆ ವಿಘ್ನ ಮಾಡುತ್ತಾರಾದರೂ, ನಾನು ಮಗನನ್ನು ಕಳುಹಿಸಿಕೊಡುವುದಿಲ್ಲ.. ಇಲ್ಲ ಇಲ್ಲ ಇಲ್ಲ..”
ಏಕೆ ಹೀಗೆ? ರಾಮನ ಜೊತೆ ಬಾಳ್ವೆಮಾಡುವ ಮೋಹ! ಮೋಹ ಬಂದಾಗ, ವಿವೇಚನೆ ಹೋಗುತ್ತದೆ!

ಯಾವ ದೊರೆಯು ತನ್ನ ಪ್ರಜೆಗಳಿಂದ ಆರನೇ ಒಂದು ಭಾಗ ಕರವನ್ನು ಸ್ವೀಕರಿಸುತ್ತಾನೋ ಅವನು ಪ್ರಜೆಗಳನ್ನು ಕಾಪಾಡಲೇಬೇಕು, ಕಾಪಾಡದಿದ್ದಲ್ಲಿ ಪಾಪಬರುತ್ತದೆ. ಪ್ರಜೆಗಳಿಗಾಗಿ ತನ್ನ ಜೀವವನ್ನೇ ಎರೆಯಬೇಕು. ಅವರ ಯೋಗಕ್ಷೇಮವೇ ಮುಖ್ಯವಾಗಿರಬೇಕು. ರಾಜಧರ್ಮ , ಕ್ಷಾತ್ರಧರ್ಮ, ವಚನಪಾಲನೆ ರಾಜನಾದವನಿಗೆ ಇರಬೇಕು. ಮಾತು ಕೊಡಬಾರದು ಆದರೆ ಕೊಟ್ಟ ಮಾತನ್ನು ಪ್ರಾಣಹೋದರೂ ತಪ್ಪಬಾರದು.

ಇಲ್ಲಿಯವರೆಗೆ ಸಹಿಸಿದರು ವಿಶ್ವಾಮಿತ್ರರು. ಆದರೆ ಈಗ ಸಹನೆಯು ಕಳೆದುಹೋಯಿತು. ಇದು ನರಪತಿಯ ಮಾತುಗಳಲ್ಲ, ಕೋಪಬಂತು. ಯಜ್ಞಕ್ಕೆ ಆಹುತಿ ಕೊಟ್ಟಾಗ ಯಾವ ತರದಲ್ಲಿ ಪ್ರಜ್ವಲಿಸುತ್ತದೆಯೋ ಹಾಗೆ ಬೆಳಕಾಗಿ ಬಂದವರು ಬೆಂಕಿಯಾದರು, ಹೊತ್ತಿ ಉರಿದರು – ವಿಶ್ವಾಮಿತ್ರರು. ಅಧರ್ಮವನ್ನು ಕಂಡಾಗ ಬರುವ ಕೋಪವದು, ಧರ್ಮಯುಕ್ತವದು. ದಶರಥನ ಮೋಹಾಕ್ರಾಂತವಾದ ಮಾತುಗಳನ್ನು ಕಂಡು ಕೋಪಬಂತು. “ಮೊದಲು ಮಾತು ಕೊಟ್ಟು ಅದನ್ನು ಮರೆತುಬಿಡುತ್ತೀಯಾ? ರಘುವಂಶೀಯರು ಮಾಡುವ ಕೆಲಸವಲ್ಲ ಇದು. ಇದೇ ನಿನ್ನ ಮಾತು ಅಂತಾದರೆ – ಇದೋ ಹೊರಟೆ! ಹೇಗೆ ಬಂದೆನೋ ಹಾಗೆ ಹೋಗುವೆ. ಹೇ ದಶರಥಾ, ಮಿಥ್ಯಾ ಪ್ರತಿಜ್ಞನಾಗಿ ಬಂಧು ಬಾಂಧವ ಸಹಿತನಾಗಿ ಸುಖವಾಗಿರು” ವಿಶ್ವಾಮಿತ್ರರ ಈ ವಿರುದ್ಧಾರ್ಥವೂ ಮೋಹತುಂಬಿದ ದಶರಥನಿಗೆ ಅರ್ಥವಾಗಲಿಲ್ಲ! ದಶರಥ ತಪ್ಪಿದ ಮಾತಿಗೆ ಮುಂದೆ ಅವನ ಮಾತೇ ಅವನಿಗೆ ಮುಳುವಾಯಿತು. ಕೊಟ್ಟಮಾತಿಗೆ ತಪ್ಪಬಾರದು. ಇದೇ ನಮ್ಮ ಜೀವನಕ್ಕೆ ಪಾಠ.

ಕೊಟ್ಟ ಮಾತಿಗೆ ಮನಸ್ಸಿನಲ್ಲೂ ತಪ್ಪಬಾರದು ಎಂಬುದು ತತ್ತ್ವ. ರಾಮನನ್ನು ಬಿಟ್ಟಿರಲಾರೆ ಎಂದು ವಿಶ್ವಾಮಿತ್ರರಿಗೆ ಕೊಟ್ಟ ವಚನ ಭ್ರಷ್ಟನಾದ ದಶರಥ, ಮುಂದೇನಾಯಿತು ನೋಡಿ? ರಾಮನ ವಿರಹ, ಅದನ್ನು ತಾಳಲಾರದೆ ಪ್ರಾಣತ್ಯಾಗ ಮಾಡಬೇಕಾಯಿತು! ರಾಮನಿಗೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಸಾಧ್ಯವಿಲ್ಲ ಎಂದಿದ್ದ ದಶರಥ – ಆದರೆ ಜೀವನಪೂರ್ತಿ ರಾಮ ರಾಕ್ಷಸರೊಂದಿಗೆ ಹೋರಾಡಬೇಕಾಯಿತು! ಕೊಟ್ಟ ಮಾತನ್ನು ಪಾಲಿಸುವುದಿಲ್ಲ ಎಂದು ಮನಸ್ಸು-ಮಾತಿನಲ್ಲಿ ಹೇಳಿಬಿಟ್ಟಿದ್ದಾನೆ. ಮಾತೇ ಮುಳುವಾಯಿತು. ವಿಶ್ವಾಮಿತ್ರರೊಂದಿಗೆ ಕಳುಹಿಸಲು ಹಿಂದೆ ಮುಂದೆ ನೋಡಿದ ದಶರಥ, ಮುಂದೆ ಅವನೇ ರಾಮನನ್ನು ಕಾಡಿಗೆ ಕಳುಹಿಸಬೇಕಾಯಿತು, ಆತನ ವಿರಹದಲ್ಲಿ ಪ್ರಾಣತ್ಯಾಗಮಾಡಬೇಕಾಯಿತು.

ವಿಶ್ವಾಮಿತ್ರರು ಹೊರಟಾಗಿದೆ ಮುಂದೇನು?

ಗುರು ವಸಿಷ್ಠರೆದ್ದರು. ಗುರುವಿನ ಅವಶ್ಯಕಥೆಯಿದೆಯಿಲ್ಲಿ ; ದಾರಿ ತಪ್ಪಿದಾಗ.
ದಶರಥ , ಇಕ್ಷ್ವಾಕು ವಂಶದವ, ವ್ರತಪರಿಪಾಲಕ ನೀನು, ಧರ್ಮಕ್ಕೆ ಆಕೃತಿ ಬಂದಂತೆ ಬದುಕಿದವ, ಧರ್ಮಾತ್ಮನೆಂದು ತ್ರಿಲೋಕ ವಿಖ್ಯಾತ. ಆದ್ದರಿಂದ ನೀನು ಧರ್ಮವ ಬಿಡಲಾಗದು. ಪ್ರಜೆಗಳೂ ನಿನ್ನನ್ನು ನೋಡಿ ಅಧರ್ಮವನ್ನು ಅನುಸರಿಸಿದರೆ ಏನು ಗತಿ?
ಮರಳು ಧರ್ಮಮಾರ್ಗಕ್ಕೆ. ಇಲ್ಲದಿದ್ದಲ್ಲಿ ಪುಣ್ಯಶೂನ್ಯವಾಗಿ, ಇಷ್ಟಪೂರ್ತಗಳ ವಧವಾದೀತು.

ವಿಶ್ವಾಮಿತ್ರರ ಆಶ್ರಯದಲ್ಲಿ ಇರುವಾಗ ನಿನ್ನ ಮಕ್ಕಳನ್ನು ರಾಕ್ಷಸರು ಮುಟ್ಟಲಾಗದು. ಮೂರ್ತಿವೆತ್ತ ಧರ್ಮ ಅವರು. ಪರಮವೀರರಲ್ಲಿ ಅಗ್ರಗಣ್ಯರು, ಬುದ್ಧಿಪ್ರಚೋದನೆಯಲ್ಲಿ ಯಾರೂ ಮೀರಲಾರರು. ತಪಸ್ಸಿನ ತುತ್ತತುದಿಯವರು. ಸಕಲ ಅಸ್ತ್ರಗಳನ್ನು ಬಲ್ಲವರು. ಆದರೆ ಅವರನ್ನು ಬಲ್ಲವರು ವಿರಳ. ಆದರೆ ಅವರನ್ನು ನನಗೆ ಗೊತ್ತು. ಪ್ರಜಾಪತಿ ಬೃಶಾಶ್ವನಿಗೆ ಇಬ್ಬರು ಮಕ್ಕಳು ಜಯ ಮತ್ತು ಸುಪ್ರಭಾ. ಜಯಳಿಗೆ ಐವತ್ತು ಮಕ್ಕಳು ಅವೆಲ್ಲಾ ಅಸ್ತ್ರಗಳು. ಸುಪ್ರಭಾಳಿಗೆ ಐವತ್ತು ಮಕ್ಕಳು ಅವೆಲ್ಲಾ ಅಸ್ತ್ರಗಳಿಗೆ ಉಪಸಂಹಾರ. ಪ್ರಯೋಗ ಮತ್ತು ಉಪಸಂಹಾರ ಇವೆಲ್ಲವನ್ನೂ ಬಲ್ಲವರು ವಿಶ್ವಾಮಿತ್ರರು. ಅವರಿಗೆ ಹೊಸ ಅಸ್ತ್ರವನ್ನು ಆವಿಷ್ಕಾರ ಮಾಡುವ ಶಕ್ತಿಇದೆ. ಅವರು ಭೂತ ಮತ್ತು ಭವಿಷ್ಯವನ್ನು ಬಲ್ಲವರು. ಇಂತಹ ವಿಶ್ವಾಮಿತ್ರರೊಡನೆ ರಾಮನನ್ನು ಕಳುಹಿಸಲು ಎರಡು ಮನಸ್ಸು ಮಾಡಬೇಡ. ಮಾರೀಚ ಮತ್ತು ಸುಬಾಹುವಿನ ನಿಗ್ರಹ ಅವರಿಂದಾಗದು ಎಂದು ತಿಳಿಯಬೇಡ. ನಿನ್ನ ಮಗನಿಗೆ ಅವರಿಂದ ಶ್ರೇಯಸ್ಸು ಆಗುವುದಿದೆ. ರಾಮನನ್ನು ಕಳುಹಿಸು ಎಂದರು.

ಪ್ರಸನ್ನಚಿತ್ತನಾದ ದಶರಥ ರಾಮನನ್ನು ಕರೆದ. ರಾಮನನ್ನು ಕಳುಹಿಸಲು ಸಿದ್ಧನಾದ. ಮೋಹವನ್ನೂ ಮೀರಿ ಗುರುವಾಕ್ಯ ಕೆಲಸ ಮಾಡಿತು. ಧರ್ಮಸಂಕಟಗಳಿಗೆ ಗುರುವೇ ಬೇಕು, ಅಲ್ಲದೆ ಬೇರೆ ಪರಿಹಾರವೇ ಇಲ್ಲ . ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂಬಂತೆ ದಶರಥ, ಕೌಸಲ್ಯೆ, ಗುರು ವಸಿಷ್ಠರು ರಾಮನನ್ನು ಮಂಗಳವಾಕ್ಯಗಳ ಮೂಲಕ ಹರಸಿದರು. ಪ್ರಿಯಪುತ್ರ ಶ್ರೀರಾಮನನ್ನು ಬಳಿಕರೆದು ನೆತ್ತಿಯನ್ನು ಆಘ್ರಾಣಿಸಿ ದಶರಥ ಸುಪ್ರೀತವಾದ ಅಂತರಾತ್ಮದಿಂದ ವಿಶ್ವಾಮಿತ್ರರೊಡನೆ ಕಳುಹಿಸಿದ.

ಕೊಡುವುದಾದರೆ ಪ್ರೀತಿಯಿಂದ ಕೊಡು, ಇಲ್ಲದಿದ್ದರೆ ಕೊಡಬೇಡ. ಪ್ರೀತಿಯಿಂದ ಕೊಟ್ಟರೆ ಸಾತ್ತ್ವಿಕ ದಾನ; ಇಲ್ಲದಿದ್ದರೆ ರಾಜಸ ದಾನ – ಅದಕ್ಕಷ್ಟು ಫಲವಿಲ್ಲ.

ದಶರಥ ರಾಮನನ್ನು ಕಳುಹಿಸಿದ ಮರುಕ್ಷಣವೇ ಪ್ರಕೃತಿ ಪ್ರಸನ್ನವಾಯಿತು. ತಂಪಾದ ಗಾಳಿಬೀಸಿತು , ಗಗನದಿಂದ ಪುಷ್ಪವೃಷ್ಠಿಯಾಯಿತು, ದೇವದುಂದುಭಿ ಮೊಳಗಿತು ಅದೇ ಶಕುನಶಾಸ್ತ್ರ. ಪ್ರಕೃತಿಯು ಜೀವಸಂವಾದಿ-ಅದೇ ಶಕುನಶಾಸ್ತ್ರ. ಶಕುನ ಅಂತ ಮೂಗುಮುರೀಬೇಡಿ. ನಾವು ಯಾವುದೋ ಜೀವನದ ಘಟ್ಟದಲ್ಲಿ ಇರುವಾಗ ಪ್ರಕೃತಿಯು ನಮಗೆ ಮುಂದಿನ ಸೂಚನೆಗಳನ್ನು ಕೊಡುತ್ತದೆ! ಅತ್ಯಂತ ದೊಡ್ಡ ಮರ್ಮಗಳಿವೆ ಆ ಶಾಸ್ತ್ರದಲ್ಲಿ. ಈಗಿನ ‘ಬೆಕ್ಕು ಅಡ್ಡ ಬಂತು’ ಎಂಬಂತೆ ಅಲ್ಲ ಅದು. ಶಕುನಶಾಸ್ತ್ರದ ವ್ಯಾಪ್ತಿ ಎಷ್ಟೆಂದರೆ – ಪಂಚಭೂತಾತ್ಮಕ ಅದು! ಮಗೂ ಮುಂದೆ ಹೀಗಾಗಲಿದೆ ಎಂದು ಪ್ರಕೃತಿಮಾತೆಯು ಹೇಳುತ್ತಾಳೆ! ಹೆಮ್ಮೆಯ ವಿಷಯವೆಂದರೆ ಶಕುನಶಾಸ್ತ್ರವೂ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದಲ್ಲಿ ಒಂದು ಪಠ್ಯ.

ವಿಶ್ವಾಮಿತ್ರರೊಡನೆ ರಾಮ, ಲಕ್ಷ್ಮಣರು ಹೊರಟರು. ಕಿರೀಟ, ಧನಸ್ಸು ಇವುಗಳೊಡನೆ ದಶದಿಕ್ಕುಗಳಿಗೆ ಶೋಭೆಯನ್ನು ನೀಡುತ್ತಾ, ಮೂರುಹೆಡೆಯ ಸರ್ಪದಶೋಭೆ ಆ ಇಬ್ಬರಲ್ಲಿ ಕಾಣುತ್ತಿತ್ತು. ಅರ್ಧ ಯೋಜನ ಸಾಗುತ್ತಿದಂತೆ ಸರಯೂ ನದಿಯ ತೀರದಲ್ಲಿ ವಿಶ್ವಾಮಿತ್ರರು ಮೃದುಮಧುರ ಧ್ವನಿಯಲ್ಲಿ ರಾಮಾ ಎಂದು ಕರೆದರು. ಮಗು ಜಲಗ್ರಹಣಮಾಡು , ಮಂತ್ರೋಪದೇಶ ಮಾಡುವುದಿದೆ ಸಿದ್ಧನಾಗು. ಬ್ರಹ್ಮದೇವನ ತೇಜಸ್ಸಿನಿಂದ ಸೃಷ್ಠಿಸಿದ, ಎಲ್ಲಾ ವಿದ್ಯೆಗಳ ತಾಯಿಯಾದ ಬಲ ಹಾಗೂ ಅತಿಬಲ ವಿದ್ಯಾದ್ವಯವನ್ನು ನಿನಗೆ ನೀಡಲಿದ್ದೇನೆ. ಅಂತಹ ಮಂತ್ರಗಳನ್ನು ಪಾತ್ರರಿಗೆ ಮಾತ್ರವೇ ನೀಡಬೇಕು. ನನ್ನ ಬದುಕಿನಲ್ಲಿ ನಿನಗಿಂತ ಪಾತ್ರರು ಬೇರೆಯಿಲ್ಲ ಎಂದು ಹೇಳಿ ಶುದ್ಧನಾಗೆಂದು ತಿಳಿಸಿದರು ವಿಶ್ವಾಮಿತ್ರರು. ಅವರ ಆಣತಿಯಂತೆಯೇ ವಿದ್ಯಾದ್ವಯವನ್ನು ಸ್ವೀಕರಿಸಿದಾಗ ಶ್ರೀರಾಮನ ಸಹಜ ತೇಜಸ್ಸು ಮತ್ತೆ ಪ್ರಜ್ವಲಿಸಿತು. ಸಾಸಿರ ಕಿರಣಗಳ ಸೂರ್ಯನಂತೆ ಶೋಭಿಸಿದ ಆತ.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments