ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಹನುಮಂತನನ್ನು ಮೊದಲ ಬಾರಿ ಕಂಡ ರಾಮ, ಅವನ ಮಾತುಗಳನ್ನು ಕೇಳಿದ ರಾಮ ಹನುಮಂತನು ಉತ್ತಮ ದೂತನಾಗಬಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಆ ಸಮಯದಲ್ಲಿ ಒಂದು ಮಾತನ್ನು ರಾಮ ಹೇಳ್ತಾನೆ. ಇವನ ಮಾತನ್ನು ಕೇಳ್ತಾ ಇದ್ರೆ ಕತ್ತಿಯನ್ನು ಎತ್ತಿ ನಿಂತ ಶತ್ರುವಿಗು ಒಂದು ಬಾರಿ ಮನಸ್ಸು ಸಮಾಧಾನಕ್ಕೆ ಬರಲು ಸಾಧ್ಯ ಅಂತ ಹೇಳ್ತಾನೆ. ಅದೇ ಶೈಲಿಯನ್ನ ನಾವಿಲ್ಲಿ ಕಾಣ್ತೇವೆ. ಹನುಮಂತ ತನ್ನ ಪರಿಚಯವನ್ನ ಕೊಟ್ಟಿದಾನೆ. ಗುಟ್ಟೇನು ಇಲ್ಲ. ನಾನು ರಾಮನ ದೂತ. ನಾನು ವಾಯುಸುತ. ನನ್ನ ಹೆಸರು ಹನುಮಂತ. ನಾನು ದೂತಕಾರ್ಯಕ್ಕೋಸ್ಕರವೇ ಬಂದಿದ್ದೇನೆ ಎಂಬುದೆಲ್ಲವನ್ನು ಸ್ಪಷ್ಟವಾಗಿ ಬಣ್ಣಿಸಿ ಹೇಳಿಯಾಗಿದೆ. ಮಾತನ್ನು ಮುಂದುವರೆಸುವಾಗ ಹನುಮಂತ ಹೇಳೋದೇನು ಅಂದ್ರೆ ಸುಗ್ರೀವನ ಸಚಿವನಾದ ನಾನು ರಾಮನ ಮತ್ತು ಸುಗ್ರೀವನ ಸಂದೇಶವನ್ನು ಹೊತ್ತು ಇಲ್ಲಿಗೆ ಬಂದಿದೇನೆ.

ಎಲೈ ರಾಕ್ಷಸರಾಜನೇ, ನಿನ್ನ ಸೋದರನಾದ ಕಪಿರಾಜನು ನಿನ್ನ ಕುಶಲವನ್ನು ಕೇಳಿದ್ದಾನೆ. ಇದನ್ನ ರಾಜನೀತಿ ಅಂತ ಹೇಳ್ತಾರೆ. ರಾವಣ ದುಷ್ಟನೇ ಆಗಿರಬಹುದು, ಎಷ್ಟೇ ಅಕಾರ್ಯವನ್ನು ಮಾಡಿರಬಹುದು, ಆದರೆ ಈರ್ವರು ದೊರೆಗಳ ಮಧ್ಯೆ ದೂತನು ಆ ದೂತನು ದೊರೆಗಳ ಪರವಾಗಿ ಸಂಭಾಷಣೆ ನಡೆಸುವಾಗ ಯಾವ ಒಂದು ಮರ್ಯಾದೆಯನ್ನು ಪಾಲಿಸಬೇಕು. ಅವನು ಕೆಡುಕನಾದರೆ ನಮ್ಮ ಮಾತು ಕೆಡುಕಾಗಬೇಕೆಂದಿಲ್ಲ. ಅವನು ಕೇಡು ಅವನ ಸಂಸ್ಕಾರ, ನಮ್ಮ ಮಾತು ನಮ್ಮ ಸಂಸ್ಕಾರ. ಹಾಗಾಗಿ ಉಚ್ಛ ಸಂಸ್ಕಾರದಲ್ಲಿ ಮಾತನ್ನ ಆರಂಭ ಮಾಡ್ತಾನೆ. ಒಳ್ಳೆ ಮಾತನ್ನು ಕೇಳುವುದಾದರೆ ಕೇಳಬಹುದಾಗಿತ್ತು ರಾವಣ ಎನ್ನುವ ಹಾಗೆ ಇವನ ಶೈಲಿಯಿದೆ.

ನಿನ್ನ ಸೋದರ, ಕಪಿರಾಜ ಸುಗ್ರೀವನು ನಿನ್ನ ಕುಶಲ ಪ್ರಶ್ನೆಯನ್ನು ಮಾಡಿದ್ದಾನೆ. ಎಲೈ ದಶಕಂಠನೇ, ನಿನ್ನ ಸೋದರನಾದ ಸುಗ್ರೀವನ ಸಂದೇಶವನ್ನು ಕೇಳು. ವಾಲಿ ರಾವಣನಿಗೆ ಸಖ. ಒಂದು ಹೆಜ್ಜೆ ಮುಂದೆ ಹೋಗಿ ಸುಗ್ರೀವನಿಗೆ ಸೋದರ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹನುಮಂತ ಹೇಳುವಂಥದ್ದು. ನಿನ್ನ ಸೋದರನು ನಿನಗೆ ಯಾವ ಮಾತನ್ನು ಹೇಳಿ ಕಳುಹಿಸಿದಾನೋ ಅದು ನಿನಗೆ ಇಹಪರಗಳೆರಡಕ್ಕೂ ಒಳ್ಳೆಯದು. ಇಹಪರಗಳೆರಡಕ್ಕೂ ಶುಭವಾಗುವಂಥ ಮಾತನ್ನು ಸುಗ್ರೀವ ನನ್ನಲ್ಲಿ ಹೇಳಿ ಕಳುಹಿಸಿದಾನೆ. ಎಲ್ಲಿಂದ ಅಂದ್ರೆ ಅಯೋಧ್ಯೆಯಿಂದ, ದಶರಥನಿಂದ ಪ್ರಾರಂಭ ಮಾಡ್ತಾನೆ. ಯಾವ ರೀತಿಯ ಮಾತುಗಳನ್ನಾಡಿದರೆ ಸುಸಂಸ್ಕೃತನಾದ ವ್ಯಕ್ತಿ ಅಥವಾ ಸ್ವಲ್ಪ ಅಸಂಸ್ಕೃತನಾದರೂ ಸಹ ಒಲಿದು ಬರಬಹುದೋ, ಮನಸ್ಸು ಬದಲಾಗಬಹುದೋ ಆ ರೀತಿಯಲ್ಲಿ ತೃಪ್ತಿಯಾಗುವಂತಹ ಮಾತನ್ನ ಹೇಳ್ತಾನೆ. ಒರಟು ಮಾತುಗಳನ್ನಾಡುವುದಿಲ್ಲ. ದಶರಥನೆಂಬ ದೊರೆ ಚತುರಂಗ ಸಂಪನ್ನ ತ್ರಿಲೋಕಕ್ಕೆ ತಂದೆಯಂತೆ ಇದ್ದವನು. ಇಂದ್ರಸಮ ಪ್ರಭಾವನಾಗಿರತಕ್ಕಂಥವನು. ಅವನ ಹಿರಿಯ ಮಗ ಮಹಾಬಾಹು, ಎಲ್ಲರಿಗೂ ಪ್ರಿಯಕರ ಶ್ರೀರಾಮ. ಆತನು ತಂದೆಯ ಆದೇಶದಂತೆ ದಂಡಕಾವನವನ್ನು ಪ್ರವೇಶ ಮಾಡುವಂಥದ್ದು. ಅಲ್ಲಿ ಲಕ್ಷ್ಮಣನೊಡನೆ, ಸೀತೆಯೊಡನೆ ಧರ್ಮವನ್ನಾಚರಿಸುವಂಥದ್ದು. ಧರ್ಮದ ಮಾರ್ಗದಲ್ಲಿ ರಾಮ ನಡೆಯುವಂಥದ್ದು. ಇವೆಲ್ಲವನ್ನೂ ನೆನಪಿಸ್ತಾನೆ ಹನುಮಂತ. ಬಳಿಕ ಏನೂ ಅರಿಯದವನಂತೆ ಮಾತನ್ನ ಮುಂದುವರೆಸ್ತಾನೆ. ಆ ರಾಮನ ಪಟ್ಟದ ರಾಣಿ, ಪ್ರಿಯಸತಿ ಸೀತೆ ಕಾಡಿನಲ್ಲಿ ಕಾಣೆಯಾದಳು. ಕಳ್ಳನ ಮುಂದೆ ಹೇಳ್ತಾ ಇರುವಂಥದ್ದು. ಒರಟಾಗಿ ಮಾತನಾಡೋದಿಲ್ಲ. ತುಂಬ ಸೌಜನ್ಯವಾಗಿ ಮಾತನ್ನ ತಗೊಂಡ್ಹೋಗ್ತಾನೆ. ರಾಜ ಕುಳಿತಿದಾನೆ ಪೀಠದ ಮೇಲೆ. ಅವನನ್ನ ಅಪಮಾನಿಸಿ ಮಾತನಾಡೋದಿಲ್ಲ. ರಾಮನ ಪ್ರಿಯಸತಿ ಕಾಡಿನಲ್ಲಿ ಕಣ್ಮರೆಯಾದಳು. ಅವಳಾದರೂ ಎಂತಹವಳು. ಮಹಾತ್ಮನಾದ ವೈದೇಹನ, ಜನಕನ ಸುತೆ. ದಶರಥನ ಸುತನ ಪತ್ನಿ. ಅಂತಹವಳು ಕಾಣೆಯಾದಾಗ ಉಪೇಕ್ಷೆ ಮಾಡೋದಕ್ಕೆ ಸಾಧ್ಯವಿಲ್ಲ. ಆಕೆಯನ್ನ ಹುಡುಕಲೇ ಬೇಕಾಗ್ತದೆ. ಹಾಗೆ ಸೀತೆಯನ್ನು ರಾಮನು ಹುಡುಕ್ತಾ ಹುಡುಕ್ತಾ ಋಷ್ಯಮೂಕಕ್ಕೆ ಬಂದ. ಸುಗ್ರೀವನ ಜೊತೆ ಸಖ್ಯವಾಯಿತು ರಾಮನಿಗೆ ಋಷ್ಯಮೂಕದಲ್ಲಿ. ಅಲ್ಲಿ ಸುಗ್ರೀವನು ರಾಮನಿಗೆ ಮಾತುಕೊಡ್ತಾನೆ. ಸೀತೆಯನ್ನು ನಾನು ಹುಡುಕಿಕೊಡ್ತೇನೆ ಎಂಬುದಾಗಿ. ರಾಮನೂ ಸುಗ್ರೀವನಿಗೆ ಮಾತುಕೊಡ್ತಾನೆ. ಕಪಿರಾಜ್ಯವನ್ನು ನಾನು ನಿನಗೆ ಕೊಟ್ಟೆ ಎಂಬುದಾಗಿ ಇಬ್ಬರು ದೊರೆಗಳ ಮಧ್ಯದಲ್ಲಿ ಒಂದು ಒಪ್ಪಂದವೇರ್ಪಟ್ಟಿತು ಎಂಬುದಾಗಿ ಹೇಳಿ, ಬಳಿಕ ರಾಮನು ಯುದ್ಧದಲ್ಲಿ ವಾಲಿಯನ್ನು ಸಂಹಾರ ಮಾಡಿ, ಸುಗ್ರೀವನನ್ನು ಸಕಲ ಕಪಿ, ಕರಡಿಗಳ ರಾಜನನ್ನಾಗಿ ಅಭೀಷೇಕಿಸಿದನು ಎಂದು ಕಥೆಯನ್ನು ತಂದು ನಿಲ್ಲಿಸಿ, ಒಂದು ಸಣ್ಣ ಮಾತನ್ನಿಟ್ಟ. ವಾಲಿ, ಅದೇ ನಿನಗೆ ಪೂರ್ವ ಪರಿಚಿತನಾಗಿರತಕ್ಕಂಥ ವಾಲಿಯನ್ನು ರಾಮನು ಒಂದೇ ಬಾಣದಲ್ಲಿ ಕೊಂದ.

ರಾವಣನಿಗೆ ವಾಲಿ ಹೇಗೆ ಗೊತ್ತು ಅಂದ್ರೆ ಹಿಂದೆ ಯಾವುದೋ ಕಾಲದಲ್ಲಿ ರಾವಣನು ಹೋಗಿ, ಉತ್ತರಕಾಂಡದಲ್ಲಿ ಒಂದು ಕಥೆ ಬರ್ತದೆ. ಕಿಷ್ಕಿಂಧೆಗೆ ಹೋಗಿ ವಾಲಿಯನ್ನು ಯುದ್ಧಕ್ಕೆ ಆಹ್ವಾನ ಮಾಡಿದ ರಾವಣ. ಅಷ್ಟ್ಹೊತ್ತಿಗೆ ವಾಲಿ ಸಂಧ್ಯಾವಂದನೆಗೆ ಸಮುದ್ರಕ್ಕೆ ಹೋಗಿದ್ನಂತೆ. ಅಲ್ಲಿ ಕಪಿಗಳೆಲ್ಲ ಹೇಳಿದ್ರಂತೆ. ಇಲ್ಲಿಲ್ಲ ವಾಲಿ. ಸಮುದ್ರ ತೀರದಲ್ಲಿ ಸಂಧ್ಯಾವಂದನೆ ಮಾಡ್ತಾ ಇದಾನೆ. ಅಲ್ಲಿಗೆ ಹೋಗು. ಆದ್ರೆ ನೀನು ಅಮೃತ ಕುಡಿದರೆ ಮಾತ್ರ ಬದುಕಬಹುದು ಅಂತ. ವಾಲಿಯ ತಂಟೆಗೆ ಹೋದರೆ ಅಮೃತ ಕುಡಿದರೆ ಮಾತ್ರ ಬದುಕಬಹುದು ಅಂತ ಕಿವಿಮಾತನ್ನ ಹೇಳಿ ಕಳುಹಿಸಿ ಕೊಡ್ತಾರೆ. ಅವ್ರಿಗೆಲ್ಲ ಬೈದಾಡಿ ಸಮುದ್ರಕ್ಕೆ ಹೋದನಂತೆ ರಾವಣ. ವಾಲಿ ಸಂಧ್ಯಾವಂದನೆ ಮಾಡ್ತಾ ಇದ್ದಿದ್ದು ಹೌದು. ಮೆಲ್ಲನೆ ಹಿಂದಿಂದ ಹೋದ್ನಂತೆ. ವಾಲಿ ಚುರುಕು. ಅವನು ಗುರುತಿಸಿದಾನೆ. ಯಾರೋ ಬಂದಿದಾರೆ ಅಂತ. ಆದ್ರೆ ಗೊತ್ತಾಗಿರೋದನ್ನ ವಾಲಿ ತೋರಿಸಿಕೊಳ್ತಾ ಇಲ್ಲ. ಹೀಗೆ ರಾವಣ ವಾಲಿ ಇಬ್ಬರೂ ಒಬ್ಬರನ್ನೊಬ್ಬರು ಗುರುತಿಸಿದಾರೆ. ಆದರೆ ವಾಲಿ ಗಮನಿಸಿದ್ದನ್ನು ರಾವಣ ಗಮನಿಸಿಲ್ಲ. ಕಳ್ಳನ ಹಾಗೆ ಮೆಲ್ಲನೆ ಹತ್ತಿರ ಹೋಗ್ತಾ ಇದಾನೆ. ಅವನು ಜಪ ಮಾಡ್ತಾ, ಮಂತ್ರ ಹೇಳ್ತಾನೆ ಇದ್ನಂತೆ. ಮಂತ್ರಗಳನ್ನ ಹೇಳ್ತಾ ಇದ್ರೂ ಒಂದು ಕಿವಿ ಹಿಂದಿದೆ. ಹೆಜ್ಜೆ ಸದ್ದನ್ನ ಕೇಳ್ತಾ ಕೇಳ್ತಾ ವಾಲಿ ಹೆಜ್ಜೆ ಸದ್ದು ಈಗ ಕೈಲಿ ಹಿಡಿಯುವಷ್ಟು ಹತ್ತಿರ ಬಂತು ಅನ್ನೋದನ್ನು ಹೆಜ್ಜೆ ಸದ್ದಿನ ಮೂಲಕವೇ ಅಂದಾಜು ಮಾಡಿ ಕೈಲಿ ಹಿಡಿಯುವಷ್ಟು ಹತ್ತಿರ ಬಂದ ಕೂಡಲೇ ಗಪ್ಪನೆ ಹಿಡ್ಕೊಂಬಿಟ್ಟ. ಹಿಡಿದು ಏನು ಮಾಡಿದ ವಾಲಿ ಅಂದ್ರೆ ಕಂಕುಳಲ್ಲಿಟ್ಟುಕೊಂಡು ಸಂಧ್ಯಾವಂದನೆ ಮುಂದುವರೆಸಿದ್ನಂತೆ. ಸಂಧ್ಯಾವಂದನೆ ಮುಗಿದು ಸಮುದ್ರಕ್ಕೆ ಹೋಗ್ಬೇಕು. ನಾಲ್ಕು ಸಮುದ್ರಕ್ಕೆ ಹೋಗ್ಬೇಕು. ಅಲ್ಲೆಲ್ಲ ಅರ್ಘ್ಯ ಕೊಡ್ಬೇಕು ಅವ್ನು. ಅವನ ಪಾಡಿಗೆ ಅವ್ನು ಅದೆಲ್ಲ ಮಾಡ್ತಾ ಇದಾನೆ. ಈ ರಾವಣ ವಾಲಿಯ ಕಂಕುಳಿನಲ್ಲಿ ಕಚ್ಚಿದನಂತೆ, ಗೀರಿದನಂತೆ. ಏನು ಮಾಡಿದ್ರೂ ವಾಲಿ ತಲೆನೇ ಕೆಡಿಸ್ಗೊಳ್ಲಿಲ್ಲ. ಇವನನ್ನು ಕಂಕುಳಲ್ಲಿ ಹೊತ್ಗೊಂಡೇ ನಾಲ್ಕೂ ಸಮುದ್ರಕ್ಕೆ ಹೋಗಿ ಅರ್ಘ್ಯ ಕೊಟ್ಟು, ಆಮೇಲೆ ಕಿಷ್ಕಿಂಧೆಗೆ ಹೋಗಿ ಉಪವನವೊಂದರಲ್ಲಿ ಇಳಿದ ಮೇಲೆ ರಾವಣನನ್ನು ಕೆಳಗೆ ಎಸೆದು ಏನು ಬಂದಿದ್ದು ಅಂತ ಕೇಳಿದ. ಯುದ್ಧದ ವಿಷಯ ಮುಗಿದ್ಹೋಗಿತ್ತು ಅಷ್ಟ್ಹೊತ್ತಿಗೆ. ಹೀಗೇ ಬಂದೆ ಅನ್ನುವ ಸ್ಥಿತಿಗೆ ರಾವಣ ಬಂದಿದ್ದ.

ಇದನ್ನು ಹನುಮಂತ ಛೇಡಿಸಿ ನೆನಪಿಸುವಂಥದ್ದು. ನಿನ್ನ ಪೂರ್ವ ಪರಿಚಿತನಾಗಿರತಕ್ಕಂಥ ವಾಲಿಯನ್ನು ರಾಮನು ಒಂದೇ ಬಾಣದಿಂದ ಕೊಂದಿದ್ದಾನೆ ಎನ್ನುವುದು ಸಂದೇಶ ರಾವಣನಿಗೆ. ಮುಂದುವರೆದರೆ ಪ್ರಕರಣ ಏನಾಗಬಹುದು? ಯಾವ ವಾಲಿಯು ನಿನ್ನನ್ನು ಕಂಕುಳಿನಲ್ಲಿ ಗೊಂಬೆಯಂತೆ ಹೊತ್ತುಕೊಂಡು ಹೋಗಿದ್ನೋ ಅಂತಹ ವಾಲಿಯನ್ನು ಒಂದೇ ಬಾಣದಿಂದ ಕೊಂದವನು, ನಿನ್ನ ಕಥೆಯೇನು ನಾಳೆ?
ಅವನಿಗೂ ನಿನಗೂ ಮುಖಾಮುಖಿಯಾದರೆ ಏನಾದೀತು ಎನ್ನುವುದು ಸಂದೇಶ ಅಲ್ಲಿ. ಇದು ರಾಜನೀತಿಯ ಭಾಷೆ. ನೇರವಾಗಿ ಏನನ್ನೂ ಹೇಳದೆ, ಏನು ಹೇಳಬೇಕೋ ಪರೋಕ್ಷವಾಗಿ ಅದನ್ನು ಸರಿಯಾಗಿ ಹೇಳಿ ಮುಂದುವರೀತಾನೆ.

ಈಗ ವಾಲಿಯ ರಾಜ್ಯವು ಸುಗ್ರೀವನಿಗೆ ಸಿಕ್ಕಿದಮೇಲೆ, ಸುಗ್ರೀವನು ಕಪಿರಾಜನಾದಮೇಲೆ, ಕಪಿಗಳನ್ನು ಎಲ್ಲೆಡೆಗೆ ಸೀತೆಯನ್ನು ಅನ್ವೇಷಿಸಲು ಕಳುಹಿಸಿಕೊಟ್ಟ. ಹುಡುಕ್ತಾ ಇದಾರೆ ಕಪಿಗಳು. ಭೂಮ್ಯಾಕಾಶದಲ್ಲಿ, ಪಾತಾಳದಲ್ಲಿ ಲಕ್ಷೋಪಲಕ್ಷ ಕಪಿಗಳು ಸೀತೆಯನ್ನು ಹುಡುಕ್ತಾ ಸಂಚಾರ ಮಾಡ್ತಾ ಇದಾರೆ. ಅವರಲ್ಲಿ ಕೆಲವರು ಗರುಡನಂಥವರು, ವಾಯುವಿನಂಥವರು, ಕೆಲವರು ಭೂಮಿಯನ್ನು ಮುಟ್ಟದೆಯೇ ಎಲ್ಲಿಂದೆಲ್ಲಿಗೋ ಹಾರಬಲ್ಲಂಥವರು ಭಾರೀ ಭಾರಿ ವೀರರಿದ್ದಾರೆ ಕಪಿಗಳಲ್ಲಿ. ನಾನು ಹನುಮಂತ ಎಂಬುವವನು. ಮಾರುತನ ಔರಸ ಪುತ್ರ. ಸೀತೆಗಾಗಿ ನೂರು ಯೋಜನದ ಸಾಗರವನ್ನ ಹಾರಿ ಇತ್ತ ಬಂದೆ. ಲಂಕೆಯಲ್ಲೆಲ್ಲ ಹುಡುಕಿದೆ. ನನಗೆ ನಿನ್ನ ಮನೆಯಲ್ಲಿ ಸೀತೆ ಕಂಡುಬಿಟ್ಳಲ್ಲ! ಏನೂ ಗೊತ್ತಿಲ್ಲದವನಂತೆ ಮಾತನಾಡಿ ತಂದು ನಿಲ್ಲಿಸಿದ್ದೆಲ್ಲಿ ಅಂದ್ರೆ ಅಲ್ಲಿಗೆ. ನೀನು ಕದ್ದೆ ಅಂತ ಹೇಳ್ಲಿಲ್ಲ. ಸೀತೆ ಕಳೆದು ಹೋದಳು ಪಂಚವಟಿಯಲ್ಲಿ. ಹುಡುಕ್ತಾ ಹುಡುಕ್ತಾ ಬಂದಾಗ ನಿನ್ನ ಮನೆಯಲ್ಲಿ ಕಂಡುಬಿಟ್ಟಳು ಸೀತೆ. ಇದೆಲ್ಲ ಮಾತನಾಡುವಾಗ ರಾವಣನ ಮುಖಭಾವ, ಏನಾದರೂ ಸ್ವಲ್ಪ ದಾರಿಗೆ ಬರ್ತಾನಾ? ಎಲ್ಲವನ್ನು ಗಮನಿಸ್ತಾನೆ ಹೋಗ್ತಿದಾನೆ ಹನುಮಂತ. ಮುಖಭಾವಕ್ಕನುಸರಿಸಿ ಧಾಟಿ ಬದಲಾಗ್ತಾ ಹೋಗ್ತಿದೆ ಹನುಮಂತನದ್ದು. ರಾವಣನಿಗೆ ನೀನು ಕಳ್ಳ ಎನ್ನುವುದನ್ನು ಯಾವ ರೀತಿ ಹೇಳ್ಬೇಕೋ ಹಾಗೆ ಗೌರವವಾಗಿ ಹೇಳಿದಾನೆ ಹನುಮಂತ. ಹನುಮಂತ ಮುಂದುವರೆಸ್ತಾನೆ.

ನೀನಾದರೂ ಎಂಥವನು? ನಿನ್ನ ತಪಸ್ಸಿನಿಂದಾಗಿ ಎಲ್ಲವನ್ನೂ ಸಂಪಾದನೆ ಮಾಡಿರ್ತಕ್ಕಂತವನು. ಹಾಗಾಗಿ, ನಿನ್ನ ಮನೆಯಲ್ಲಿ ಪರಸ್ತ್ರೀಯರು.. ಅದೂ ಕರ್ಮಯೋಗಿ ಜನಕನ ಮಗಳು! ಸೂರ್ಯವಂಶದ ದಶರಥನ ಸೊಸೆ; ರಾಮನ ಮಡದಿ, ಅಂಥವರು ನಿನ್ನ ಮನೆಯಲ್ಲಿರುವಂಥದ್ದು ಸರಿಯಲ್ಲ, ಸೂಕ್ತವಲ್ಲ. ನಿನ್ನಂಥಾ ಬುದ್ಧಿವಂತರು, ತಿಳುವಳಿಕೆಯುಳ್ಳವರು ಯಾವ ಕರ್ಮದಲ್ಲಿ ಬಹಳ ಅಪಾಯವಿದೆಯೋ, ಯಾವ ಕರ್ಮ ನಮ್ಮ ಬೇರನ್ನೇ ಕತ್ತರಿಸೀತೋ, ಅಂಥಾದ್ದರಲ್ಲಿ ಮುಂದುವರಿಯೋದಿಲ್ಲ’. ಅಂದರೆ ಮುಂದಿವರಿಯಬಾರದು ಅಂತ. ರಾಜನನ್ನು ಹೊಗಳುವ ಕ್ರಮವದು. ಅವನು ಅದೆಲ್ಲ ಹೌದು ಅಂತ ಅರ್ಥ ಅಲ್ಲ. ಆದ್ರೂ ಕೂಡ ಹಾಗೆ ಹೊಗಳಬೇಕು ಯಾಕಂದ್ರೆ ಹಾಗಾಗು ನೀನು ಎನ್ನುವ ಭಾವದಲ್ಲಿ. ಯಾವುದು ಹೌದೋ, ಅದು ಹೌದು. ಯಾವುದು ಅಲ್ಲವೋ, ಅದು ನೀನು ಆಗಬೇಕಾಗಿದೆ. ರಾಜರುಗಳಿಗೆ ಮಾಡುವ ಸ್ತುತಿ ಪಾಠಗಳಿಗೆ ಅರ್ಥ ಅದು. ಹನುಮಂತ ಅದೇ ಶೈಲಿಯಲ್ಲಿ ಹೇಳ್ತಾನೆ, ‘ನಿನ್ನಂಥಾ ಜ್ಞಾನಿಗಳು, ವಿವೇಕಿಗಳು ಅಪಾಯಕಾರಿಯಾಗಿರ್ತಕ್ಕಂತ, ಮೂಲಘಾತವನ್ನೇ ಮಾಡ್ತಕ್ಕಂತ ಕರ್ಮಗಳಲ್ಲಿ ಮುಂದುವರೆಯೋದಿಲ್ಲ.

ಇನ್ನು, ರಾಮ ಲಕ್ಷ್ಮಣರ ಬಾಣಗಳ ಮುಂದೆ ದೇವಾಸುರರೂ ಕೂಡ ನಿಲ್ಲೋದಕ್ಕೆ ಸಾಧ್ಯ ಇಲ್ಲ. ರಾಮನನ್ನು ನೋಯಿಸಿ, ರಾಮನಿಗೆ ಅಪಚಾರವೆಸಗಿ ಯಾರೂ ಸುಖವಾಗಿರಲಿಕ್ಕೆ ಸಾಧ್ಯವಿಲ್ಲ. ಈ ದಾರಿಯಲ್ಲಿ ಮುಂದೆ ಅಪಾಯವಿದೆ. ಹಾಗಾಗಿ, ನಿನ್ನ ಸೋದರನ ಈ ಒಂದು ಮಾತಿನಲ್ಲಿ ಧರ್ಮವಿದೆ. ಮಾತ್ರವಲ್ಲ ಆ ಮಾತಿನಲ್ಲಿ ಅರ್ಥವೂ ಕೂಡ ಇದೆ. ಈಗ ನಿನ್ನ ಸಂಪತ್ತು ನಿನಗೆ ಉಳಿಬೇಡ್ವಾ? ನಿನ್ನ ಲಂಕಾಧಿಪತ್ಯ ನಿನಗುಳಿಯಬೇಡವಾ? ಪುಷ್ಪಕವಿಮಾನವೇ ಮೊದಲಿಗೆ ಇಷ್ಟೆಲ್ಲ ರತ್ನಗಳನ್ನು ನೀನು ತಂದು ಇಟ್ಟುಕೊಂಡಿದ್ದೀಯೆ. ಅದೆಲ್ಲಾ ಅನುಭವಿಸಬೇಡ್ವಾ ನೀನು? ಹಾಗಾಗಿ ಧರ್ಮವೂ ಉಳ್ಳ, ಅರ್ಥವೂ ಉಳ್ಳ, ತ್ರಿಕಾಲ ಹಿತವಾದ ಮಾತು ವಿಭೀಷಣನದು. ತುಂಬಾ ಸೂಕ್ತವಾಗಿದೆ ರಾವಣ. ಹಾಗಾಗಿ ಆ ಮಾತನ್ನು ಸ್ವೀಕಾರ ಮಾಡಿ ನೀನು ನರದೇವನಿಗೆ ಜಾನಕಿಯನ್ನು ತಿರುಗಿ ಕೊಟ್ಟಿಬಿಡು. ನನ್ನದು ಒಂದು ಹಂತದ ಕರ್ತವ್ಯವಾಗಿದೆ. ನಾನು ದೇವಿಯ ದರ್ಶನವನ್ನು ಪಡೆದೆ. ನಿನ್ನ ದರ್ಶನವೂ ಆಯ್ತು. ಇನ್ನು ಮುಂದೇನು? ರಾಮನಿಗೆ ಬಿಟ್ಟಿದ್ದು. ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನವನ್ನು ರಾಮ ತೆಗೆದುಕೊಳ್ತಾನೆ, ನೀನಲ್ಲ. ಆದರೆ ನಿನ್ನ ಕಡೆಯಿಂದ ನೀನು ಏನು ಮಾಡಬಹುದು? ನಾನು ಹೇಳ್ಬೇಕಲ್ವಾ….
ನಾನು ಸೀತೆಯನ್ನು ಕಂಡಾಗ ಶೋಕದ ಪರಾಕಾಷ್ಠೆಯಲ್ಲಿದ್ದಳು ಆಕೆ. ಅದು ಸರಿಯಲ್ಲ. ಇನ್ನು, ಈ ಸೀತೆಯನ್ನು ನೀನು ಹಿಡಿದುಕೊಳ್ಳುವುದು ಸರ್ಪವನ್ನು ಕೊರಳಿಗೆ ಹಾಕಿಕೊಂಡಂತೆ ಆಗಬಹುದು. ಹಾಗಾಗಿ ಮುಂದೆ ಈ ದಾರಿಯಲ್ಲಿ ಅಪಾಯವಿದೆ. ಮಾತ್ರವಲ್ಲ, ಉಪಯೋಗವೂ ಇಲ್ಲ. ಯಾಕಂದ್ರೆ, ಸೀತೆಯನ್ನು ಚರಾಚರ ಪ್ರಪಂಚದ ಯಾರೊಬ್ಬನೂ ದಕ್ಕಿಸಿಲಿಕೊಳ್ಳಲು ಸಾಧ್ಯವಿಲ್ಲ, ಸೀತೆ ರಾಮನಿಗೆ ಮಾತ್ರವೇ ಸಲ್ಲುವವಳು. ನಿನ್ನ ತಪಸ್ಸಿನ ಧರ್ಮವನ್ನು ಉಳಿಸುಕೊಳ್ಳುವುದು ಒಳ್ಳೆಯದು. ಈ ಪಾಪಕಾರ್ಯದಲ್ಲಿ ಆ ಪುಣ್ಯವು ನಷ್ಟವಾಗಿ ಹೋಗಬಹುದು.
ರಾವಣನು ಪಡೆದ ವರದ ಕುರಿತೇ ಹೇಳ್ತಾನೆ, ಸುಗ್ರೀವ ದೇವನೂ ಅಲ್ಲ, ಅಸುರನೂ ಅಲ್ಲ. ಈ ವರದ ವ್ಯಾಪ್ತಿಯಲ್ಲಿ ಸುಗ್ರೀವನೂ, ಅವನ ಯಾವ ಒಡನಾಡಿಯೂ ಬರೋದಿಲ್ಲ. ರಾಮನೋ, ಮಾನುಷ! ನಿನ್ನ ವರ ಇರೋದು ಹೇಗೆ? ಮಾನುಷರನ್ನು ಬಿಟ್ಟು, ಮರ್ಕಟರನ್ನು ಬಿಟ್ಟು. ನಿನ್ನ ಮೇಲೆ ದಂಡಕ್ಕೆ ಬರಲಿರುವವರು, ಒಬ್ಬನು ಮನುಷ್ಯ ಮತ್ತು ಕಪಿಗಳು. ಹಾಗಾಗಿ ನಿನ್ನ ಪ್ರಾಣ ಉಳಿಯೋದು ಹೇಗೆ?

ಪುಣ್ಯದ ಪಾಡಿಗೆ ಪುಣ್ಯ ಫಲವನ್ನು ಕೊಡ್ತದೆ, ಪಾಪದ ಪಾಡಿಗೆ ಪಾಪವೂ ಫಲವನ್ನು ಕೊಡ್ತದೆ. ತಪಸ್ಸು ಮಾಡಿದೆ, ಪುಣ್ಯದ ಫಲ ಬಂದಿದೆ ನಿನಗೆ. ಈಗ ಮಾಡ್ತಿರುವಂಥದ್ದು ಪಾಪವೇ, ಇದರ ಫಲ ಮುಂದೆ ಬರಲಿಕ್ಕಿದೆ. ಎಂದಿದ್ದರೂ ಧರ್ಮವು ಅಧರ್ಮವನ್ನು ನಾಶ ಮಾಡ್ತದೆ. ನಾವು ಧರ್ಮದ ಜೊತೆಗಿರುವುದು ಒಳ್ಳೆಯದು. ಇಲ್ಲದಿದ್ದರೆ ಧರ್ಮವು ನಮ್ಮನ್ನು ನಾಶ ಮಾಡುವುದು ಖಂಡಿತ. ಈಗಲೇ ಸರಿ ಮಾಡಿಬಿಡು. ಉದಾಹರಣೆಗಳು ನಿನ್ನ ಕಣ್ಣ ಮುಂದಿವೆ.. ಜನಸ್ಥಾನದಲ್ಲಿ, ಪಂಚವಟಿಯಲ್ಲಿ 14,000 ರಾಕ್ಷಸರ ವಧೆ ಆಗಿದೆಯಲ್ಲ, ನಿನಗೆ ಗೊತ್ತು ಆ ರಾಕ್ಷಸರ ಸಾಮರ್ಥ್ಯ ಏನು ಎಂಬುದು. ಅತ್ಯಂತ ಬಲಶಾಲಿಗಳಾದ ನಿನ್ನ ಆಯ್ಕೆಯ ರಾಕ್ಷಸರವರು. ಆದರೆ ಒಂಟಿ ರಾಮ ಎಲ್ಲರನ್ನೂ ಘಳಿಗೆ ಎರಡರಲ್ಲಿ ಸಂಹಾರ ಮಾಡಿದನಲ್ಲ! ಅಂದಾಜು ಮಾಡು ಏನಿರಬಹುದು ಸಾಮರ್ಥ್ಯ ಅವನದು? ವಾಲಿವಧೆಯನ್ನು ನೋಡು. ವಾಲಿಯ ಶಕ್ತಿ ಗೊತ್ತಿಲ್ಲವ ನಿನಗೆ? ಅದೇ ಬಾಣ ನಿನ್ನ ಮೇಲೂ ಪ್ರಯೋಗವಾಗಬಹುದಲ್ಲ ನಾಳೆ! ರಾಮ ಸುಗ್ರೀವರ ಸಖ್ಯವನ್ನು ಆಲೋಚನೆ ಮಾಡು. ನಿನ್ನ ಹಿತವನ್ನು ನೀನು ಚಿಂತನೆ ಮಾಡೋದು ಒಳ್ಳೆಯದು.

ಇನ್ನು ನಾನೊಬ್ಬನೇ ಮಾಡೋದಲ್ಲ ಚತುರಂಗ ಬಲ ಸಹಿತವಾಗಿರುವ ಲಂಕೆಯನ್ನು ಧ್ವಂಸ ಮಾಡುವುದಕ್ಕೆ ನಾನೊಬ್ಬ ಸಾಕು. ಆದರೆ ನನ್ನ ತೀರ್ಮಾನವದಲ್ಲ. ರಾಮನ ಮತವೇ ಹನುಮನ ಮತವೂ. ರಾಮನು ಪ್ರತಿಜ್ಞೆ ಮಾಡಿದ್ದಾನೆ, ‘ಯಾವ ವೈರಿಗಳು ಸೀತೆಯನ್ನು ಅಪಹರಿಸಿದರೋ, ಅವರನ್ನು ಯುದ್ಧದಲ್ಲಿ ವಧಿಸುವೆ’ ಎಂಬುದಾಗಿ. ಅವನ ಜೊತೆಯಲ್ಲಿ ನಾನಿರುವಂಥದ್ದು. ಆ ಕಾರಣಕ್ಕಾಗಿ ನಾನು ಮಾಡ್ತಾ ಇಲ್ಲ. ಇಲ್ಲವಾದರೆ ನಾನೇ ಮಾಡಬಲ್ಲೆ ಈ ಕಾರ್ಯವನ್ನು. ರಾಮನಿಗೆ ಅಪಕಾರ ಮಾಡಿ ದೇವೇಂದ್ರನೂ ಚೆನ್ನಾಗಿರಲಿಕ್ಕೆ ಸಾಧ್ಯ ಇಲ್ಲ. ನೀನೇನು? ಸೀತೆ ಕೂಡ ಹಾಗೇ. ನೀನು ಯಾರನ್ನು ನಿನ್ನ ವಶದಲ್ಲಿದ್ದಾಳೆ ಅಂತ ಅಂದುಕೊಂಡಿದ್ದೀಯೋ ನನ್ನ ದೃಷ್ಟಿಯಿಂದ ನಿನ್ನ ಪಾಲಿಗಂತೂ ಅವಳು ಕಾಲರಾತ್ರಿ, ಲಂಕಾವಿನಾಶಿನಿ. ಅವಳೊಬ್ಬಳಿಂದಲೇ ಇಡೀ ಲಂಕೆಯ ಸರ್ವನಾಶವಾಗ್ತದೆ. ನಿನ್ನ ಕೊರಳಿಗೆ ನೀನೇ ನೀನಾಗಿ ಹಾಕಿಕೊಂಡ ಕಾಲಪಾಶ. ನಿನ್ನ ರಕ್ಷಣೆಯ ಕುರಿತು ಯೋಚಿಸು. ನಾನು ನೋಡುತ್ತಿದ್ದೇನೆ. ನೀನೂ ನೋಡು. ಸೀತೆಯ ತೇಜಸ್ಸಿನಿಂದ ಹೊತ್ತಿ ಉರಿಯುತ್ತಿರುವ ಲಂಕೆಯನ್ನು ನೋಡು. ರಾಮನ ಕೋಪದ ಬೆಂಕಿಯಿಂದ ಉಪ್ಪರಿಗೆಯ ಮನೆಗಳುಳ್ಳ , ರಾಜಬೀದಿಗಳಿರುವ ಈ ಲಂಕೆ ನನ್ನ ಪಾಲಿಗಂತೂ ಹೊತ್ತಿ ಉರಿಯುತ್ತಿದೆ. ಮುಂದಾಗುತ್ತದೆ ಇದು. ಬರಿಯ ಉಪದೇಶವಲ್ಲ. ಅದನ್ನು ಹನುಮಂತ ಈಗಲೇ ಕಂಡಿದ್ದಾನೆ. ಈಗಾಗಲೇ ಆ ಬೆಂಕಿ ಬಿದ್ದಿದೆ. ಹನುಮನೇ ಆ ಬೆಂಕಿ. ನೀನೂ ನೋಡು ಎಂದು ರಾವಣನಿಗೆ ಪರಿಪರಿಯಾಗಿ ಹೇಳುತ್ತಾನೆ. ಇದೇ ದಾರಿಯಲ್ಲಿ ಮುಂದೆ ಹೋದರೆ ಈ ರಾಮಾಗ್ನಿಯಲ್ಲಿ, ಸೀತಾಗ್ನಿಯಲ್ಲಿ ಉರಿದುಹೋಗುವವರು ಯಾರೆಲ್ಲಾ? ನಿನ್ನ ಮಿತ್ರರು, ನಿನ್ನ ಮಂತ್ರಿಗಳು, ನಿನ್ನ ಬಂಧು-ಬಾಂಧವರು, ಸೋದರರು, ಮಕ್ಕಳು, ನಿನ್ನ ವೈಭವಗಳು, ನಿನ್ನ ಪತ್ನಿಯರ ಬಾಳು ಮತ್ತು ಲಂಕೆ. ಇದೆಲ್ಲವನ್ನೂ ನೀನು ನೀನಾಗಿಯೇ ಬೆಂಕಿಯಲ್ಲಿ ದೂಡುತ್ತಿದ್ದೀಯೆ. ರಾಮದೂತನಾದ ನನ್ನ ಈ ಮಾತನ್ನು ಕೇಳು. ರಾಮ ಎಂದರೆ ಸಮಸ್ತ ಲೋಕಗಳನ್ನು ಸಂಹರಿಸಿ ಮತ್ತೆ ಸೃಷ್ಟಿಸಬಲ್ಲ. ಅದು ಅವನ ಯೋಗ್ಯತೆ. ಅವನ ವೈರ ಬೇಕಾ? ವಿಷ್ಣುತುಲ್ಯ ಪರಾಕ್ರಮನಾದ ರಾಮನಿಗೆ ಎದುರು ದೇವತೆಗಳಲ್ಲಿ, ಅಸುರರಲ್ಲಿ, ದೊರೆಗಳಲ್ಲಿ, ಯಕ್ಷರಲ್ಲಿ, ರಾಕ್ಷಸರಲ್ಲಿ, ವಿದ್ಯಾಧರ-ಗಂಧರ್ವರಲ್ಲಿ, ಉರಗಗಳಲ್ಲಿ, ಸಿದ್ಧರಲ್ಲಿ, ಕಿನ್ನರೇಂದ್ರರಲ್ಲಿ, ಪಕ್ಷಿಗಳಲ್ಲಿ, ಸರ್ವಭೂತಗಳಲ್ಲಿ, ಸರ್ವಕಾಲಗಳಲ್ಲಿ, ಸರ್ವದೇಶಗಳಲ್ಲಿ ಯಾರೂ ಇಲ್ಲ. ಅವನ ವ್ಯಾಪ್ತಿ ಎಲ್ಲಾ ಕಡೆ ಬಂದಿತು. ರಾಮನು ಸರ್ವಲೋಕೇಶ್ವರ. ಅವನಿಗೆ ಇಂತಹಾ ಅಪ್ರಿಯವನ್ನು ಮಾಡಿದೆ. ನಿನ್ನ ಜೀವಿತವೇ ದುರ್ಲಭ. ರಾಮನ ಕೋಪದ ಕಣ್ಣಿಗೆ ತುತ್ತಾದವನನ್ನು ಬ್ರಹ್ಮನೂ, ರುದ್ರನೂ, ಇಂದ್ರನೂ, ಯಾರೂ ಕಾಪಾಡಲಾರರು. ಮರಳಿ ಸೀತೆಯನ್ನು ರಾಮನಿಗೆ ಒಪ್ಪಿಸಿದರೆ ಬರಬಹುದಾದ ಅನರ್ಥದ ಪರಂಪರೆಯಿಂದ ನೀನು ತಪ್ಪಿಸಿಕೊಳ್ಳಬಹುದು ಎಂದು ಹನುಮಂತನು ವಿರಮಿಸುತ್ತಾನೆ.

ಮಾತುಗಳು ಚೆನ್ನಾಗಿದ್ದವು. ಆ ಮಾತುಗಳಲ್ಲಿ ದೈನ್ಯವಿರಲಿಲ್ಲ. ಸಂಪೂರ್ಣ ಶತ್ರುಮಯವಾದ ಪ್ರದೇಶದಲ್ಲಿ ಒಂದಿಷ್ಟೂ ಅಳುಕದೇ ರಾವಣನ ಮುಖಕ್ಕೇ ಇಷ್ಟೂ ಮಾತುಗಳನ್ನಾಡಿದ್ದಾನೆ ಹನುಮಂತ. ರಾವಣನಿಗೆ ಈ ಮಾತುಗಳು ಅಪ್ರತಿಮ ಎಂದೆನಿಸಿದವು. ಅವನಿಗೆ ನನಗ್ಯಾರೂ ಇಂತಹ ಮಾತುಗಳನ್ನಾಡಿಲ್ಲವಲ್ಲ ಎಂದೆನಿಸಿತು. ಕೋಪದಿಂದ ಕಣ್ಣು ತಿರುಗಿಸುತ್ತಾ ಹನುಮಂತನ ವಧೆಗೆ ಅಪ್ಪಣೆ ಮಾಡಿದನು. ಪ್ರತಿ ಮಾತು ಕೂಡಾ ಇಲ್ಲ. ದೂತನಾಗಿ ಬಂದವನೊಂದಿಗೆ ಸರಿಯಾಗಿ ಮಾತನಾಡಬೇಕೆಂಬುವುದು ರಾಜಧರ್ಮ. ಅದನ್ನು ಬಿಟ್ಟು ಕೊಲ್ಲಿ ಎಂದು ಆಜ್ಞೆ ಮಾಡಿಯಾಯಿತು. ಎಂತಹ ಸಂಸ್ಕೃತಿ ಇವನದು! ಇಡಿಯ ರಾವಣನ ಸಭೆಯಲ್ಲಿ ಯಾರೂ ಏನೂ ಹೇಳಲಿಲ್ಲ.

ಆದರೆ ವಿಭೀಷಣ ಒಪ್ಪಲಿಲ್ಲ. ಅವನು ಧರ್ಮವನ್ನು ಬಿಡದವನು. ಯಾವುದು ಸರಿಯೋ ಅದು ಸರಿ. ಯಾವುದು ತಪ್ಪೋ ಅದು ತಪ್ಪು. ನಾನು ಹೇಳುವವನೇ ಎನ್ನುವ ಛಾತಿ ಇದ್ದದ್ದು ವಿಭೀಷಣನಿಗೆ ಮಾತ್ರ.ಹೆಸರು ಕೂಡಾ ಹಾಗೆಯೇ ಇದೆ. ಅವನಿಂದ ಯಾರಿಗೂ ಭಯವಿಲ್ಲ, ಅವನಿಗೂ ಯಾರಿಂದಲೂ ಭಯವಿಲ್ಲ ಎನ್ನುವಂತಹ ವ್ಯಕ್ತಿತ್ವ. 2 ಸಂಗತಿಗಳಿವೆ. ಹನುಮಂತನಿಗೆ ರಾವಣ ಮಾಡಲಿಕ್ಕೆ ಹೊರಟಿರುವುದು ಅಧರ್ಮ ಒಂದಾದರೆ, ಇನ್ನೊಂದು ಹನುಮಂತ ಹೋಗಿ ರಾಮನಿಗೆ ವಿಷಯ ತಿಳಿಸಬೇಕು ಎನ್ನುವುದು ಅವನ ಆಸೆ. ಹನುಮಂತನೇ ಕೊಂಡಿ, ಅವನು ಹೋಗಿ ವಿಷಯವನ್ನು ಹೇಳಬೇಕು. ಆ ಆಶಯವನ್ನು ಆಳದಲ್ಲಿಟ್ಟುಕೊಂಡು ಧರ್ಮಯುಕ್ತವಾದ ಮಾತುಗಳನ್ನು ಆಡುತ್ತಾನೆ. ನಾನು ದೂತ ಎಂದು ಯಾರಾದರೂ ಹೇಳಿದರೆ ಅವರನ್ನು ವಧಿಸಲು ಶಾಸ್ತ್ರವಿಲ್ಲ. ನಾನೊಪ್ಪುವುದಿಲ್ಲ. ರಾಕ್ಷಸಾಧಿಪತಿ ಕ್ರುದ್ಧನಾಗಿದ್ದಾನೆ. ಮೃತ್ಯುದಂಡವನ್ನು ವಿಧಿಸಿಯಾಗಿದೆ. ಇನ್ನು ಯಾರೂ ಏನೂ ಮಾಡದಿದ್ದರೆ ಆ ದಂಡ ಜಾರಿಯಾಗುತ್ತದೆ. ಏನು ಮಾಡಲಿ ಎಂದು ಆಲೋಚನೆ ಮಾಡಿ ಒಂದು ನಿಶ್ಚಯಕ್ಕೆ ಬಂದ. ಅಣ್ಣನಿಗೂ, ರಾಜಪೀಠಕ್ಕೂ ಗೌರವವನ್ನು ಕೊಟ್ಟು ಅತ್ಯಂತ ಹಿತಕಾರಿಯಾದ ವಾಕ್ಯಗಳನ್ನು ರಾವಣನಿಗೆ ಹೇಳುತ್ತಾನೆ. ರಾಕ್ಷಸಾಧಿಪತಿಯೇ ರೋಷವನ್ನು ಬಿಡು. ದೊರೆಯ ಸ್ಥಾನದಲ್ಲಿ ಇರುವವರು ಕೆಲವನ್ನು ಸಹಿಸಬೇಕಾಗುತ್ತದೆ. ದುಡುಕುವಂತಿಲ್ಲ. ಪ್ರಸನ್ನನಾಗು. ನನ್ನ ಮಾತನ್ನು ಕೇಳುವ ತಾಳ್ಮೆ ನಿನಗಿರಲಿ. ದೂತನ ವಧೆಯನ್ನು ಯಾವ ಜ್ಞಾನಿಗಳೂ, ಹಿಂದು-ಮುಂದು ತಿಳಿದಿರುವ ದೊರೆಗಳೂ ಮಾಡುವುದಿಲ್ಲ. ಹಾಗೆ ಮಾಡಕೂಡದು. ರಾಜಧರ್ಮದ ವಿರುದ್ಧವದು. ಅಂದಿನ ಕಾಲದಲ್ಲಿ ದೂತರ ಮೂಲಕವೇ ಎಲ್ಲಾ ಸಂವಾದ ನಡೆಯುತ್ತಿತ್ತು. ಅವರೇ ಇಲ್ಲವಾದರೆ ಹೇಗೆ ವ್ಯವಹಾರ ನಡೆಯುವುದು? ಹಾಗಾಗಿ ದೂತನನ್ನು ವಧಿಸಕೂಡದು ಎನ್ನುವುದು ಶಾಶ್ವತ ನಿಯಮ. ಮತ್ತು ಲೋಕದ ನಡೆಗೆ ನಿಂದ್ಯ. ರಾಕ್ಷಸಚಕ್ರವರ್ತಿ ಎನ್ನಿಸಿಕೊಂಡವನು ಇಂತಹ ಕೆಲಸವನ್ನು ಮಾಡಕೂಡದು. ನೀನು ಧರ್ಮಜ್ಞನಾಗಿರಬೇಕಾದವನು, ರಾಜಧರ್ಮವಿಶಾರದನಾದವನು, ಪರಮಾತ್ಮ ಬಲ್ಲವನು. ನಿನ್ನಂಥವರೂ ಸಿಟ್ಟಿನ ಕೈಗೆ ವಿದ್ಯೆ ಕೊಡುವುದಾದರೆ ವಿದ್ಯೆ ಎಂಬುದು ಸುಮ್ಮನೆ ಶ್ರಮ. ಇದೆಲ್ಲಾ ನಮಗೂ ಅನ್ವಯಿಸುತ್ತದೆ. ರಾವಣನನ್ನು ಮೇಲಿಟ್ಟು ಮಾತನಾಡುತ್ತಾನೆ. ನೀನು ವಿದ್ಯಾವಿಶಾರದನಾಗಿ ಇಂತಹ ಕೆಲಸವನ್ನು ಮಾಡಿದರೆ ಹೇಗೆ? ಹಾಗಾಗಿ ರಾಕ್ಷಸೇಂದ್ರನೇ ಪ್ರಸನ್ನನಾಗು. ದೂತನು ತಪ್ಪು ಮಾಡಿದರೆ ದಂಡ ವಿಧಿಸಲು ಅವಕಾಶವಿದೆ ಆದರೆ ಮೃತ್ಯುದಂಡವಲ್ಲ.

ಯುಕ್ತಾ ಯುಕ್ತವನ್ನು ಆಲೋಚನೆ ಮಾಡಿ ತಪ್ಪಾಗಿದೆಯೋ ಆಗಿಲ್ಲವೋ ಏನು ಕಥೆ ಹಾಗಿದ್ದರೆ! ಆ ತಪ್ಪಿಗೆ ಏನು ದಂಡ ನೀವು ಅದನ್ನು ಪರಿಯಾಲೋಚನೆ ಮಾಡಿ ದೂತನಿಗೆ ದಂಡವಿಧಿಸಬೇಕು ಹೊರತು ಮೃತ್ಯು ದಂಡ ಅಲ್ಲ. ಇದನ್ನು ವಿಭೀಷಣ ಎದ್ದುನಿಂತು ಗಟ್ಟಿಯಾಗಿ ಹೇಳಿಯೇ ಬಿಟ್ಟ. ಇದಕ್ಕೆ ನ್ಯಾಯವಾದಿ ಅಂತ ಕರೀತಾರೆ. ನ್ಯಾಯವಾದಿ ಎನ್ನುವ ಪದವೇ ಮೊಟ್ಟ ಮೊದಲು ಪ್ರಯೋಗ ಆಗಿರತಕ್ಕಂತಹದ್ದು ವಿಭೀಷಣನಿಗೆ. ನ್ಯಾಯವಾದಿ ವಿಭೀಷಣ ಎಂದು ಯಾಕೆ ಹೇಳಲಾಗುತ್ತದೆ ಅಂತ ಮುಂದೆ ತಿಳಿಯುತ್ತದೆ. ವಿಭೀಷಣ ನ್ಯಾಯವನ್ನು ಮಾತನಾಡತಕ್ಕಂತವನು. ಯಾವುದು ಸರಿಯೋ ಅದನ್ನು ಮಾತನಾಡತಕ್ಕಂತವನು. ಹನುಮಂತ ವಿಭೀಷಣನಿಗೆ ವಕಾಲತ್ತೂ ಕೊಟ್ಟಿಲ್ಲ, ಫೀಸೂ ಕೊಟ್ಟಿಲ್ಲ ಕೋರ್ಟ್ ಅನುಕೂಲವಾಗಿಲ್ಲ. ಕೋರ್ಟ್ ಪೂರ್ತಿ ಪ್ರತಿಕೂಲವಾಗಿದೆ ಆದರೂ ಕೆಲವು ಹೊಗಳಿಕೆಗಳು, ಕೆಲವು ಶಬ್ದಗಳು ಬೇಕಾಯ್ತು. ಯಾಕೆ ಅಂದ್ರೆ ಮೇಲಕ್ಕೆ ಕುಳಿತುಕೊಂಡವನು ತೀರ್ಪು ಕೊಡುವವನು ಪೂರ್ತಿ ಪೂರ್ವಾಗ್ರಹ ಪೀಡಿತ. ಒಬ್ಬ ವಕೀಲ ಒಂದು ಸಂದರ್ಭವನ್ನು ಹೇಗೆ ತೆಗೆದುಕೊಂಡು ಹೋಗ್ತಾನೆ ಎಂದು ವಿಭೀಷಣನನ್ನು ಕಂಡು ಕಲಿಯುವ ಹಾಗಿದೆ. ಎಲ್ಲಿ ಹೊಗಳಿಕೆ ಬೇಕೋ ಆ ಜಾಗದಲ್ಲಿ ಹೊಗಳಿಕೆ. ಅವನ ಮನಸ್ಸಿನಲ್ಲಿ ಬೇರೆಯೇ ಇದೆ. ಆದರೆ ತನ್ನ ಕೆಲಸ ಆಗಲಿಕ್ಕೇ ಏನೇನು ಮಾಡಬೇಕೋ ಅದನ್ನು ಮಾಡ್ತಾ ಇದ್ದಾನೆ. ತನ್ನ ಮನಸ್ಸಿನಲ್ಲಿದ್ದದ್ದನ್ನು ಹಾಗೆ ಹೇಳಿ ಬಿಡೋದಿಲ್ಲ ಅದನ್ನ. law point ಅದು. ಹನುಮಂತನನ್ನು ಹೇಗೆ ಬಚಾವ ಮಾಡಬಹುದು ಎನ್ನುವುದನ್ನ ಆಲೋಚನೆ ಮಾಡಿ ಅದೇ ರೀತಿ ತನ್ನ ಮಾತುಗಳನ್ನು ರಾವಣನ ಎದುರಿಗಿಡ್ತಾನೆ ವಿಭೀಷಣ.

ವಿಭೀಷಣನ ಮಾತನ್ನ ಕೇಳಿದ ರಾವಣನಿಗೆ ಮೊದಲೇ ಸಿಟ್ಟು ಬಂದಿದೆ. ಯಾಕೆ ಸಿಟ್ಟು ಅಂದರೆ ರಾವಣ ego hurt ಆಗಿದೆ. ಮೊದಲೇ ಹೇಳಿದ ಹಾಗೆ ರಾವಣ ಅಂದ್ರೆ ವಿಕೃತ ಅಹಂಕಾರ. ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಕೆರಳಿ ಬಿಡ್ತದೆ. ಅದೇ ಆಗಿದ್ದು ಬೇರೆ ಏನೂ ಅಲ್ಲ. ವಿಭೀಷಣನನ್ನು ಅಗೌರವ ಮಾಡಲಿಲ್ಲ ರಾವಣ. ವಿಭೀಷಣನಿಗೆ ಗೌರವವನ್ನು ಕೊಟ್ಟು ಹೀಗೆ ಹೇಳಿದನಂತೆ, “ಎಲೈ ವಿಭೀಷಣನೇ! ಸಚಿವೋತ್ತಮನೆ! ನೀನು ಹೇಳಿದ್ದೆಲ್ಲ ಸರಿಯಾದರೂ ಕೂಡ ಪಾಪಿಗಳನ್ನು ವಧೆಮಾಡುವುದರಲ್ಲಿ ಪಾಪವಿಲ್ಲ. ಎಲೈ ಶತ್ರು ಶೋಧನನೇ ಎಲೈ ಶತ್ರು ದಮನನೇ, ವಿಭೀಷಣನೇ! ದೂತ ವಧೆ ಸರಿ ಅಲ್ಲ ಎನ್ನುವುದು ಸರಿಯಾದರೂ ಕೂಡ ಪಾಪಿಗಳ ವಧೆ ಮಾಡಬಹುದು.” ಹಾಗೆ ನೋಡಿದರೆ ಆ ಮಾತನ್ನು ತೆಗೆದುಕೊಂಡ್ರೆ ಮೊಟ್ಟ ಮೊದಲು ರಾವಣನ ವಧೆಯನ್ನೇ ಮಾಡಬೇಕು ಅಲ್ವಾ. ಯಾಕೆಂದ್ರೆ ಇವನಷ್ಟು ಪಾಪಗಳನ್ನು ಮಾಡಿದವರು ಪ್ರಪಂಚದಲ್ಲಿ ಯಾರೂ ಇಲ್ಲ. ರಾವಣ ಹೇಳಿದ ನೀತಿ ಅನುಸಾರವಾಗಿ, ರಾವಣನನ್ನೇ ವಧೆ ಮಾಡಬೇಕು. ರಾವಣ ಪುನಹ ಹೇಳಿದ, “ಆದರೆ ಪಾಪಿಗಳನ್ನು ವಧೆ ಮಾಡಬಹುದು ಅಂತ ಇನ್ನೊಂದು ನೀತಿ ಇದೆಯಲ್ಲ. ಆ ನೀತಿಗನುಸಾರವಾಗಿ ಈ ಪಾಪಿಯನ್ನು ವಧೆಯನ್ನು ಮಾಡುತ್ತೇನೆ.”

ಈ ಸಂದರ್ಭದಲ್ಲಿ ನಾವು ಹಳೆಯ ಸಂದರ್ಭವನ್ನು ನೆನಪು ಮಾಡಿಕೊಳ್ಳುವ. ರಾವಣ ಬಹಳಷ್ಟು ಅನ್ಯಾಯಗಳನ್ನು ಮಾಡ್ತಾ ಇದ್ದ ಪ್ರಪಂಚದಲ್ಲಿ. ಆ ಸಮಯದಲ್ಲಿ ರಾವಣನ ಅಣ್ಣ ಕುಬೇರನಿಗೆ ವಿಷಯ ಎಲ್ಲ ತಿಳಿಯಿತು. ದೇವತೆಗಳಿಂದಲೂ, ಋಷಿಗಳಿಂದಲೂ ಈ ವಿಷಯ ತಿಳಿಯಿತು. ಹೇಗೆ ರಾವಣನನ್ನು ಕೊಲ್ಲಬಹುದು ಎಂದು ರಾವಣನ ವಧೋಪಾಯವನ್ನು ದೇವತೆಗಳು ಚಿಂತನೆ ಮಾಡ್ತಾ ಇದ್ದಾರೆ ಎನ್ನುವುದು ಕುಬೇರನಿಗೆ ತಿಳಿಯಿತು. ಎಷ್ಟೆಂದರೂ ತನ್ನ ತಮ್ಮ. ತಮ್ಮನಿಗೆ ಒಳ್ಳೆಯ ದಾರಿಯನ್ನು ಹೇಳಬೇಕಾದದ್ದು ತನ್ನ ಕರ್ತವ್ಯ. ಮುಂದಾಗುವ ಅನಾಹುತದಿಂದ ಅವನನ್ನು ಕಾಪಾಡುವುದೂ ತನ್ನ ಕರ್ತವ್ಯ ಎನ್ನುವುದನ್ನು ಭಾವಿಸಿ ಕೇವಲ ಭ್ರಾತೃ ಪ್ರೇಮದಿಂದ, ತನ್ನ ತಮ್ಮನಿಗೆ ಒಳ್ಳೆಯದು ಮಾಡಬೇಕೆನ್ನುವ ಭಾವನೆಯಿಂದ ದೂತನನ್ನು ರಾವಣನಲ್ಲಿ ಕಳುಹಿಸಿ ಕೊಡ್ತಾನೆ. ದೂತ ಮೊದಲು ವಿಭೀಷಣನ್ನು ಕಂಡು, ಅವನ ಮನೆಯಲ್ಲಿ ಉಳಿದು ಆಮೇಲೆ ರಾವಣನ ಆಸ್ಥಾನಕ್ಕೆ ಬರ್ತಾನೆ. ದೂತನಾಡಿತ ಅದ್ಭುತ ಮಾತುಗಳೆಲ್ಲವೂ ಕುಬೇರನ ಮಾತುಗಳು. ರಾವಣನಿಂದ ಏನು ತಪ್ಪಾಗುತ್ತಾ ಇದೆ, ಇದರ ಫಲವಾಗಿ ಅವನ ವಿರುದ್ಧ ಸಂಚುಗಳು ತಯಾರ್ಗಾತ್ತಾ ಇದೆ. ಮುಂದೊಂದು ದಿನ ಇದು ಅವನ ಸರ್ವನಾಶಕ್ಕೆ ಹೇಗೆ ಕಾರಣವಾಗಬಹುದು. ಅವನು ಯಾವುದನ್ನು ಮಾಡಿದರೆ ಒಳ್ಳೆಯದು ಯಾವುದು ಹಿತ ಎನ್ನುವುದನ್ನು ಕುಬೇರ ಹೇಳಿ ಕಳುಹಿದ್ದನ್ನು ಆ ಕುಬೇರನ ದೂತನು ರಾವಣನಿಗೆ ತಿಳಿಸುತ್ತಾನೆ.

ಆದರೆ ರಾವಣ! ಕುಬೇರನನ್ನು ಒಂದಿಷ್ಟು ಬೈದು, ಆ ದೂತನನ್ನು ಒಂದಿಷ್ಟು ಬೈದು ಹಂಗಿಸಿದ್ದು ಮಾತ್ರವಲ್ಲ, ಅಲ್ಲಿಯೇ ಕತ್ತಿಯಿಂದ ಆ ದೂತನನ್ನು ಕಡಿದು, ತನ್ನದೇ ಕತ್ತಿಯಿಂದು ಕಡಿದು ತನ್ನ ಸಹಚರರಿಗೆ ಆಸ್ಥಾನದಲ್ಲೇ ತಿನ್ನುವಂತೆ ಆದೇಶಿಸಿದನಂತೆ. ಅವನ ಅಣ್ಣ, ಕುಬೇರ, ಅವನೂ ಕೂಡ ಲೋಕಪಾಲಕ, ಅಧಿಪತಿಯೂ ಹೌದು, ಅಣ್ಣನದ್ದೇ ಲಂಕೆ. ಅದೂ ಕುಬೇರನೇ ಬಿಟ್ಟು ಕೊಟ್ಟಿದ್ದು. ರಾವಣ ಅನುಭವಿಸುತ್ತಾ ಇದ್ದಾನೆ, ಅಂತಹದ್ದರಲ್ಲಿ ಅಣ್ಣನನ್ನೇ ಚೆನ್ನಾಗಿ ಬೈದು ಆ ದೂತನನ್ನು ಅಲ್ಲೇ ಕೊಂದು ರಾಕ್ಷಸರಿಗೆ ತಿನ್ನಲಿಕ್ಕೆ ಕೊಟ್ಟು, ಅಲ್ಲಿಂದಲ್ಲಿಯೇ ಅಣ್ಣನ ಮೇಲೆ ದಂಡೆತ್ತಿ ಹೋದನಂತೆ. ಅಣ್ಣನಿಗೆ ಬುದ್ಧಿ ಕಲಿಸ್ತೇನೆ, ದುರಹಂಕಾರವನ್ನು ಇಳಿಸ್ತೇನೆ. ನನಗೆ ಬುದ್ದಿ ಹೇಳಲಿಕ್ಕೆ ಇವನು ಯಾರು? ಎಂಬುದಾಗಿ ಅಬ್ಬರಿಸಿ ಅಲ್ಲಿಂದಲಿಯೇ ಹಾಗೇ ದಂಡೆತ್ತಿ ಹೋದನಂತೆ ರಾವಣ, ಕುಬೇರನ ಮೆಲೆ. ಇದು ರಾವಣನ ಸಂಸ್ಕಾರ. ಈಗಲೂ ಅದನ್ನೇ ಮುಂದುವರಿಸ್ತಾ ಇದ್ದಾನೆ. ಅದೇ ಮಾಡುವುದೇ ಸರಿ ಅಂತ ರಾವಣನ ಅನಿಸಿಕೆ. ಯಾಕೆಂದರೆ ರಾವಣನ ಮನಸ್ಸಿನಲ್ಲಿ ತರ್ಕ ಇಲ್ಲ. ವ್ಯಕ್ತಿ ಇಲ್ಲ.

ಹನುಮಂತ ಏನು ಪಾಪ ಮಾಡಿದ್ದು ಯಾವ ಪಾಪ ಕಾರ್ಯ ಮಾಡಿದ್ದು? ಹನುಮಂತ ಯಾವ ಪಾಪವನ್ನೂ ಮಾಡಲಿಲ್ಲ. ರಾಮನು ಕಳುಹಿದ ದೂತನಾಗಿ ರಾಮನ ಪರವಾಗಿ ಸೀತೆಯನ್ನು ಹುಡುಕುತ್ತಾ ಬಂದಿದ್ದಾನೆ. ಅವನು ಅವನ ಧರ್ಮವನ್ನು ಮಾಡ್ತಾ ಇದ್ದಾನೆ. ಸೀತೆಯನ್ನು ಹುಡುಕಿಯೂ ಹುಡುಕಿದ್ದಾನೆ. ಹನುಮನೇ ನಿರೂಪಣೆ ಮಾಡಿದ ಹಾಗೆ ಆತ್ಮರಕ್ಷಣೆಗಾಗಿ ಯುದ್ಧವನ್ನು ಮಾಡಿದ್ದಾನೆ. ಅವನೇ ಯಾರದ್ದೋ ಮನೆಗೆ ನುಗ್ಗಿ ಅವರನ್ನು ಕೊಂದಿಲ್ಲ. ಅವನ ಮೇಲೆ ಯಾರು ಬಂದು ಬಿದ್ರೋ ಅವರನ್ನು ಸಂಹಾರ ಮಾಡಿದ್ದಾನೆ. ಮಾಡಿದ ಮೇಲೆಯೂ ಕೂಡ ದೂತ ವಧೆಗೆ ಶಾಸ್ತ್ರ ಇಲ್ಲ. ಪಾಪ ಮಾಡಿದ್ದಾನೆ ಅದಕ್ಕೋಸ್ಕರ ಕೊಲ್ತೇನೆ ಅಂದ್ರೆ ಅದಕ್ಕೆ ಏನು ಅರ್ಥ. ನಾನೇ ಧರ್ಮ ನಾನೇ ನ್ಯಾಯ ನಾನೇ ಎಲ್ಲ ಅಂತ ಅಂದ್ಕೊಂಡವರಿಗೇ ಇದು ಸಾಧ್ಯ ಹೊರತು ಇನ್ಯಾರಿಗೂ ಸಾಧ್ಯ ಇಲ್ಲ. ವಿಭೀಷಣ ಎಷ್ಟು ಬಹಳ ಚೆನ್ನಾಗಿ ರಾವಣನಿಗೆ ಹೇಳಿದ್ದಾನೆ ಒಪ್ಪಬಹುದು ಒಪ್ಪದೇ ಇರಬಹುದು ಅದು ರಾವಣನಿಗೆ ಬಿಟ್ಟಿದ್ದು. ವಿಭೀಷಣ ರಾವಣನ ಮಾತುಗಳನ್ನು ಕೇಳಿದ, ಅದರಲ್ಲಿ ಅಧರ್ಮವೇ ತುಂಬಿದೆ. ಅಧರ್ಮದಿಂದಲೇ ಉದ್ಭವಿಸಿರುವಂತಹ ಮಾತುಗಳು ಅಧರ್ಮಕ್ಕೆ ಕಾರಣವಾಗಿರುವಂತಹ ಮಾತುಗಳು. ಆದರೆ ಆ ಮಾತುಗಳನ್ನು ವಿಭೀಷಣ ಕೇಳಿದಾಗ ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ, ಅಲ್ಲಿಗೇ ಸುಮ್ಮನಾಗಲಿಲ್ಲ. ಅವನು ತನ್ನ ಮಾತುಗಳನ್ನು ರಾವಣನಲ್ಲಿ ಮುಂದುವರಿಸುತ್ತಾನೆ. ಆದರೆ ಗೌರವ ಸೌಜನ್ಯದಿಂದ, “ಲಂಕೇಶ್ವರನೇ! ಪ್ರಸನ್ನನಾದೆ. ಧರ್ಮ ಮತ್ತು ಅರ್ಥ ಇರುವಂತಹ ನನ್ನ ಮಾತುಗಳನ್ನು ಕೇಳು. ಯಾವ ಸಂದರ್ಭದಲ್ಲೂ ದೂತನನ್ನು ವಧೆಮಾಡುವಂತೇ ಇಲ್ಲ. ಶಾಸ್ತ್ರ ಇರುವುದೇ ಹಾಗೆ. ಎಲ್ಲೂ ದೂತನ ವಧೆ ಮಾಡುವಂತಿಲ್ಲ. ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ದೂತ ವಧೆಯನ್ನು ಮಾಡಬಾರದು ಎನ್ನುವಂತಹದ್ದೇ ಶಾಸ್ತ್ರ ಇರುವಂತಹದ್ದು. ಪಾಪ ಮಾಡಿದ್ದಾನೆ, ಪಾಪ ಮಾಡಿಲ್ಲ ಎನ್ನುವ ತರ್ಕ ಬಂದರೂ ಕೂಡ ಈ ದೂತವಧೆ ಎನ್ನುವ ವಿಷಯ ಬಂದಾಗ, ಯಾವ ಕಾಲದಲ್ಲಿಯೂ ಕೂಡ, ಯಾವುದೇ ಸ್ಥಳದಲ್ಲಿ ಮಾಡಬಾರದು ಎಂದೇ ಶಾಸ್ತ್ರ ಇರತಕ್ಕಂತಹದ್ದು. ನೀನು ದೂತವಧೆಯನ್ನು ಮಾಡುವುದು ಸರಿ ಅಲ್ಲ. ನಿನ್ನ ಪ್ರಕಾರ ಇವನು ಶತ್ರು, ಶತ್ರುಗಳಲ್ಲಿಯೂ ದೊಡ್ದ ಶತ್ರು, ಸಣ್ಣ ಶತ್ರು ಅಲ್ಲ! ಅನೇಕ ರಾಕ್ಷಸರನ್ನು ವಧಿಸಿದ್ದಾನೆ. ಅಶೋಕವನವನ್ನು ಭಂಗಮಾಡಿದ್ದಾನೆ. ನೀನು ಹೇಳಿದ್ದು ಸರಿ. ಆದರೆ, ಯಾವಾಗ ಅವನು ದೂತನಾಗಿ ಪರಿಣಮಿಸಿದನೋ, ಅವನ ವಧೆಯನ್ನು ಮಾಡುವಂತಿಲ್ಲ.” ವಿಭೀಷಣ ಒಂದು via media ಹುಡುಕುವ ಪ್ರಯತ್ನ ಮಾಡುತ್ತಾನೆ. ವಕೀಲರು ಹುಡುಕುವುದು ಇಂತಹ ಹಾದಿಗಳನ್ನ. ಪ್ರತಿಕೂಲ ಪರಿಸ್ಥಿತಿ ಬಂದೇ ಬರ್ತದೆ ಎನ್ನುವಾಗ ಕೊನೇ ಪಕ್ಷ ದೊಡ್ಡದನ್ನು ತಪ್ಪಿಸಿ ಎಲ್ಲೋ ಸಣ್ಣಕ್ಕೆ ನಿಲ್ಲೋ ತರಹ ಮಾಡ್ತಾರೆ. ಅದನ್ನೇ ಮಾಡ್ತಾ ಇದ್ದಾನೆ ವಿಭೀಷಣ. ಹಾಗೇ ತನ್ನ ಮಾತನ್ನು ಮುಂದುವರಿಸುತ್ತಾನೆ, “ಸರಿ, ಇಷ್ಟೆಲ್ಲ ಮಾಡಿದ್ದಾನೆ ಅಂತ ನಿನ್ನ ಮನಸ್ಸಿನಲ್ಲಿ ಇದ್ರೆ ನೀತಿಗಳು ಬೇರೆ ಇವೆ. ಒಬ್ಬ ದೂತ ತಪ್ಪೇ ಮಾಡಿದ್ರೆ ದಂಡ ವಿಧಿಸಬಹುದು. ಶಾಸ್ತ್ರ ವಿಹಿತವಾದಂತಹ ದಂಡಗಳು. ದೂತ ತಪ್ಪು ಮಾಡಿದಾಗ ಅಂಗ ವೈರೂಪ್ಯವನ್ನು ಮಾಡಬಹುದು. ಅಥವಾ ಛಡಿ ಏಟನ್ನು ಕೊಡಬಹುದು ದೂತನಿಗೆ ಅಥವಾ ತಲೆ ಬೋಳಿಸಬಹುದು. ಚಿಹ್ನೆಯನ್ನು ಮೂಡಿಸಬಹುದು. ದೂತನು ಮಾಡಬಾರದ ಕೆಲಸವನ್ನು ಮಾಡಿದಾಗ, ಆಡಬಾರದ ಮಾತನ್ನು ಆಡಿ ಅಪರಾಧವನ್ನು ಮಾಡಿದಾಗ ಹಣೆಯಲ್ಲಿ, ತಾಮ್ರವನ್ನು ಚಿಹ್ನೆಯನ್ನು ಮೂಡಿಸಿ ಜೀವನ ಪರ್ಯಂತ ಚಿಹ್ನೆ ಉಳಿಸುವಂತಹ ಸನ್ನಿವೇಶಗಳು ಇವೆ ಇಲ್ಲಿ. ಹೀಗೆ ದಂಡಕೊಡಿ ಅಂತ ಶಾಸ್ತ್ರಗಳು ಹೇಳಿವೆ ಆದರೆ ಎಲ್ಲಿಯೂ ದೂತವಧೆಯನ್ನು ಹೇಳಿಲ್ಲ.” ವಿಭೀಷಣ ಏನು ಪ್ರಯತ್ನ ಮಾಡ್ತಾ ಇದ್ದಾನೆ ವಿಭೀಷಣ ಅಂದ್ರೆ ಕೊನೆಯ ಪಕ್ಷ ಹನುಮಂತನ ಜೀವ ಉಳಿಯಬೇಕು. ಜೀವಂತ ಹೋಗಬೇಕು ಹನುಮಂತ ಇಲ್ಲಿಂದ ಅದನ್ನು ಹೇಗೆ ಮಾಡಬಹುದು ಅಂತ ಆಲೋಚನೆ ಮಾಡ್ತಾ ಇದ್ದಾನೆ ವಿಭೀಷಣ.

ರಾವಣನಿಗೆ ತಿಳಿಸಿ ಹೇಳಲಿಕ್ಕೆ ಪ್ರಯತ್ನ ಮಾಡುತ್ತಾನೆ. “ನೀನಗೆ ಧರ್ಮ ಶಾಸ್ತ್ರ ಗೊತ್ತು, ಅರ್ಥಶಾಸ್ತ್ರ ಗೊತ್ತು, ಚೆನ್ನಾಗಿ ವಿದ್ಯಾಭ್ಯಾಸ ಮಾಡಿರತಕ್ಕಂತವನು, ದೊಡ್ದ ನಿರ್ಣಯಗಳನ್ನು, ಸಣ್ಣ ನಿರ್ಣಯಗಳನ್ನು ಮಾಡುವಂತಹ ಶಕ್ತಿ ಉಳ್ಳವನು, ಕೋಪಕ್ಕೆ ವಶನಾಗಿ ಹೀಗೆ ಏನಾದರೂ ಆದೇಶವನ್ನು ಮಾಡಬಾರದು. ಶಕ್ತಿವಂತವರು ಎಂದು ಅನ್ನಿಸತಕ್ಕಂತವರು ಕೋಪವನ್ನು ಗೆದ್ದಿರುತ್ತಾರೆ. ಆ ಪಟ್ಟಿಗೆ ತಾನೇ ಬರಬೇಕು ನೀನು. ನೀನೇನು ಸಣ್ಣವನಾ? ಧರ್ಮದ ಮಾತಾಡುವುದರಲ್ಲಿ ಲೋಕದ ನಡೆತೆಯನ್ನು ತಿಳಿಯುವುದರಲ್ಲಿ ಶಾಸ್ತ್ರಗಳಲ್ಲಿ, ಇವೆಲ್ಲವೂಗಳಲ್ಲಿ ನಿನ್ನ ಜ್ಞಾನಕ್ಕೆ ಯಾರು ಸಮಾನರಿದ್ದಾರೆ? ಇಷ್ಟೆಲ್ಲ ತಿಳಿದಿರತಕ್ಕಂತವನು ನೀನು. ಶೂರ ವೀರನೂ ಕೂಡ ಹೌದು. ನೀನು ಗೆಲ್ಲದವರು ಯಾರಿದ್ದಾರೆ? ನೀನು ಗೆಲ್ಲದ ಲೋಕಗಳು, ಊರುಗಳು ಯಾವುದಿದ್ದಾವೆ? ಅಷ್ಟೆಲ್ಲ ಮಾಡಿದವನು ನೀನು, ನಿನ್ನಂತವನಿಗೇ ಯಾರಾದರೂ ಅಪಚಾರ ಮಾಡ್ತಾರೆ ಅಂದ್ರೆ ಅವರಿಗೆ ಬುದ್ಧಿ ಇಲ್ಲ ಅಂತ ಅನ್ನಬೇಕು ಹೊರತು ಯಾರು ನಿನ್ನನ್ನು ಎದುರು ಹಾಕಿಕೊಳ್ತಾರೆ? ಇಷ್ಟಕ್ಕೂ ನೀನು ಕಪಿಯ ಮೇಲೆ ಆಕ್ರಮಣ ಮಾಡುವುದಕ್ಕೆ ಅವನು ಮೂಲ ಅಲ್ಲವಲ್ಲ! ಯಾರೋ ಬಂದಿರತಕ್ಕಂತವನು ಅವನು. ಯಾರದ್ದೋ ಮಾತನಾಡತಕ್ಕಂತವನು ಅವನು. ಹನುಮಂತನೇನೂ ನೇರವಾಗಿ ಸೀತೆಯ ಸಂಬಂಧಿಕ ಅಂತ ಇಲ್ವಲ್ಲ. ರಾಮನ ಪತ್ನಿ ಸೀತೆ. ಹಾಗಾಗಿ ರಾಮನ ಪರವಾಗಿ ಮಾತನಾಡ್ತಾ ಇದ್ದಾನೆ. ರಾಮನ ಪರವಾಗಿ ಬಂದಿದ್ದಾನೆ ಅಂದ ಮೆಲೆ ನಿಜವಾಗಿ ನಿನ್ನ ಕೋಪ ಇರಬೇಕಾದದ್ದು ರಾಮನಲ್ಲಿ. ಈ ಕಪಿಯ ಮೇಲೆ ಯಾಕೆ ಅದು? ಅಷ್ಟೆಲ್ಲ ಸಿಟ್ಟು ನಿನಗೆ ಬಂದ್ರೆ, ಯಾರು ಈ ದೂತನನ್ನು ಕಳುಹಿ ಕೊಟ್ಟರೋ ಅಲ್ಲಿ ಪರಾಕ್ರಮವನ್ನು ತೋರು, ಇಲ್ಲಲ್ಲ. ಯಾರು ದೂತನಾಗಿ ಬಂದಿದ್ದಾನೋ ಅವನ ಮುಂದೆ ನಿನ್ನ ಪರಾಕ್ರಮವನ್ನು ತೋರಿಸುವುದರಲ್ಲಿ ಏನಿದೆ ಹೇಳು. ಯಾವ ಮಾತೂ ಇವನದ್ದಲ್ಲ. ಯಾವ ಕೃತಿಯೂ ಇವನದ್ದಲ್ಲ. ಇದೆಲ್ಲ ಇನ್ನೊಬ್ಬರ ಪರವಾಗಿ ಇರತಕ್ಕಂತಹದ್ದು. ದೂತವಧೆಯನ್ನು ಮಾಡುವಂತೆ ಇಲ್ಲ”ಎಂದನು ವಿಭೀಷಣ.

ಏನು ಹೇಳಿದರೂ ಸಮಾಧಾನವಾಗ್ತಾ ಇಲ್ಲ ರಾವಣನಿಗೆ. ಕೊನೆಗೆ ವಿಭೀಷಣ ಬೇರೆ ಉಪಾಯವನ್ನು ಮಾಡ್ತಾನೆ. ರಾವಣ ದುರಹಂಕಾರಿ ಅಂತ ಗೊತ್ತು. ಅವನಿಗೆ ತುಂಬಾ ego ಇದೆ ಅಂತನೂ ಗೊತ್ತು. ರಾವಣನ ದಾರಿಯಲ್ಲೇ ಹೋಗಿ ಅವನಿಗೆ ತಿಳಿಸುವ ಪ್ರಯತ್ನ ಮಾಡ್ತಾನೆ ವಿಭೀಷಣ, “ಅಣ್ಣ, ಇವನನ್ನು ಕೊಂದೇ ಬಿಟ್ರೆ ಮತ್ಯಾರೂ ಇಲ್ಲಿಗೆ ಬರಲಿಕ್ಕೆ ಸಾಧ್ಯ ಇಲ್ಲ ರಾಮನ ಪರವಾಗಿ. ಯಾರೂ ಬರಲಿಕ್ಕೆ ಸಾಧ್ಯ ಇಲ್ಲದೇ ಇರದಿದ್ರೆ ನಿನಗೂ ರಾಮನಿಗೂ ಯುದ್ಧವೇ ಆಗುವುದಿಲ್ಲವಲ್ಲ! ಯುದ್ಧ ಒಂದು ಅವಕಾಶ ತಾನೇ, ರಾಕ್ಷಸರಿಗೆ. ಯುದ್ಧವೇ ಆಗದೇ ಯಾವ ಕಾಲ ಆಯ್ತು ನಮ್ಮ ಲಂಕೆಯಲ್ಲಿ. ಹಾಗಾಗಿ ಎಲ್ಲ ರಾಕ್ಷಸರೂ ಯುದ್ಧವನ್ನು ಬಯಸಿದ್ದಾರೆ. ನಿನಗೂ ಎಷ್ಟೆಲ್ಲ ಕಾಲ ಆಯ್ತು ಸರಿಯಾದ ಪ್ರತಿದ್ವಂದ್ವಿ ಸಿಗದೆ. ನಿನ್ನ ವೀರತ್ವ ಸ್ಥಾಪನೆ ಆಗುವುದಾದರೂ ಹೇಗೆ. ಈ ಒಂದು ಕಪಿ ಜೊತೆಗೇ ಮುಕ್ತಾಯ ಮಾಡಿಬಿಡ್ತಿಯಾ? ಅಥವಾ ರಾಮ ಮತ್ತು ಕಪಿಸೇನೆ ಒಟ್ಟಿಗೆ ಈ ರಾಕ್ಷಸರ ಯುದ್ಧ ನೀನು ನೋಡುವುದು ಬೇಡವಾ?” ಅಂತ ಅಂದ ವಿಭೀಷಣ. ನಾವು ಈ ತಂತ್ರಗಳನ್ನ ಕೋರ್ಟ ಗಳಲ್ಲಿ ಕಾಣ್ತೆವೆ. ಕೋರ್ಟ್ ನ mind ಅನ್ನು ನೋಡಿಕೊಂಡು ಅದಕ್ಕೆ ತಕ್ಕ ಹಾಗೆ ಬೇರೆ ಬೇರೆ ಉಪಾಯಗಳಿಂದ ಹೋಗಿ ತಮ್ಮ ಕಾರ್ಯಗಳನ್ನ ಸಾಧನೆ ಮಾಡತಕ್ಕಂತಹದ್ದು. ಯಾಕೆಂದ್ರೆ ರಾವಣ ಅಂತವನು. ಅಲ್ಲಿ ನೀವು ಶುದ್ಧ ಧರ್ಮ ಶಾಸ್ತ್ರ ಇಂತಹ ಮಾತುಗಳು ಪ್ರಯೋಜನವಾಗುವಂತಹದ್ದಲ್ಲ. ಏನಾದರೂ ಬೇರೆ ದಾರಿಯನ್ನು ಹುಡುಕಬೇಕಾಗುತ್ತದೆ. ಹಾಗಾಗಿ ರಾವಣನಿಗೆ ಹಿತವಾಗುವ ಹಾಗೇ ವಿಭೀಷಣ ಮಾತನಾಡುತ್ತಾನೆ, “ಹನುಮಂತನನ್ನು ಈಗ ವಧಿಸಿದ್ರೆ ಇಲ್ಲಿ ಬೇರೆ ಯಾರೂ ಬರೋಕೆ ಸಾಧ್ಯ ಇಲ್ಲ. ಇಲ್ಲಿಂದ ಯಾರೂ ಹೋಗದೇ ಇದ್ರೆ ಅವರಿಬ್ಬರನ್ನೂ ಮತ್ಯಾರು ತರೋಕೆ ಸಾಧ್ಯ ಇಲ್ಲ. ಅವರು ಬರದೇ ಇದ್ರೆ, ಯುದ್ಧ ಆಗದೇ ಇದ್ರೆ ಇಷ್ಟೂ ರಾಕ್ಷಸರಿಗೂ ನಿರಾಸೆ ಆಗ್ತದೆ. ನೀನಾಗಿ ನೀನು ಯುದ್ಧವನ್ನು ತಪ್ಪಿಸಿದಂತಾಗುತ್ತದೆ. ಯುದ್ಧವನ್ನು ತಪ್ಪಿಸುವವನಾ ನೀನು? ಬೇಕು ಅನ್ನುವವನು ತಾನೇ ನೀನು? ಯುದ್ಧಪ್ರಿಯ ತಾನೇ ನೀನು? ಇಂತಹ ಸಂದರ್ಭವನ್ನು ತಪ್ಪಿಸುತ್ತಾರಾ ಯಾರಾದರೂ? ನಿನ್ನಲ್ಲಿ ಎಷ್ಟು ಕೋಟಿ ಕೋಟಿ ಯೋಧರಿದ್ದಾರೆ. ನೀನೆ ಹೋಗಬೇಕು ಅಂತೇನೂ ಇಲ್ಲವಲ್ಲ! ನಿನ್ನ ಒಂದು ನಾಲ್ಕು ಸೈನಿಕರನ್ನು ಕಳುಹಿಸಿದರೂ ನಿನ್ನ ಕಾರ್ಯ ಆಗಬಹುದು. ಅಂತಂತಹ ವೀರರಿದ್ದಾರೆ. ಅದೆಲ್ಲ ಬಿಟ್ಟು ನಾವು ಯಾಕೆ ಇವನಲ್ಲಿ ಪರಾಕ್ರಮ ತೋರಿಸಬೇಕಪ್ಪ! ನಮ್ಮ ಇಡೀ ಲಂಕೆಯ ಶಕ್ತಿಯನ್ನು, ನಮ್ಮ ವರಬಲವನ್ನೂ ಈ ಒಂದು ಕಪಿಯ ಮೆಲೆ ತೋರಿಸುವುದಾ ನಾವು? ಇಲ್ಲೇ ಮುಗಿಸಿಬಿಡುವುದಾ?” ಅಂತ ವಿಭೀಷಣ ಹೇಳಿದಾಗ “ಓ ಹೌದು” ಅಂತ ಅಂದನಂತೆ ರಾವಣ. ಇದು ಸರಿ. ಈ ವರೆಗೆ ಇದು ಹೋಗಲೇ ಇಲ್ಲ. ವಿಭೀಷಣ ಹೇಳಿದ್ದು ರಾವಣನದ್ದೇ ಧಾಟಿ ಆಗಿತ್ತು.

ವಿಭೀಷಣನು ರಾವಣನಿಗೆ ದೂತನನ್ನು ಕೊಲ್ಲುವುದು ತಪ್ಪು, ಒಂದುವೇಳೆ ಇವನನ್ನು ಕೊಂದರೆ ಯುದ್ಧವೇ ನಡೆಯುವುದಿಲ್ಲ, ನಿನ್ನ ಸಾಮರ್ಥ್ಯ ಮತ್ತು ಕೋಟಿ ಕೋಟಿ ವೀರರಿಂದ ಕಾರ್ಯ ಸಾಧಿಸಬಹುದು. ಅದನ್ನು ಬಿಟ್ಟು ದೂತನಲ್ಲಿ ನಿನ್ನ ಶಕ್ತಿಯನ್ನು ದೂತನಲ್ಲಿ ತೋರಿಸುವುದೇ ? ಎಂದು ಕೇಳಿದನು. ಈವರೆಗೆ ರಾವಣನಿಗೆ ವಿಭೀಷಣ ಹೇಳಿದ್ದು ಸರಿ ಎಂದು ಅನ್ನಿಸಿರಲಿಲ್ಲ. ಆದರೆ ಈಗ ಮಾತ್ರ ವಿಭೀಷಣನ ಮಾತನ್ನು ರಾವಣನು ಒಪ್ಪಿದನು. ರಾವಣನಿಗೆ ಒಪ್ಪದೇ ಬೇರೆ ದಾರಿಯೇ ಇರಲಿಲ್ಲ. ರಾವಣನು ವಿಭೀಷಣನ ಮಾತನ್ನು ಒಪ್ಪದೇ ಇದ್ದರೆ ಅವನಿಗೆ ಅಪಮಾನವಾಗುತ್ತಿತ್ತು. ಸಭೆಯ ಮಧ್ಯೆಯಲ್ಲಿ ಯುದ್ಧಕ್ಕೆ ಹಿಂಜರಿಯುವಂತೆ ಇರಲಿಲ್ಲ.

ಪರಾಕ್ರಮಿಯಾದವನು ಯುದ್ಧಕ್ಕೆ ಹಿಂಜರಿಯಬಾರದು –ಶ್ರೀಸೂಕ್ತಿ.

ರಾವಣನ ಮನಸ್ಸಿನಲ್ಲಿ ಅಳುಕಿದ್ದರೂ ಘನತೆಯನ್ನು ಕಾಪಾಡಿಕೊಳ್ಳಲು ವಿಭೀಷಣನ ಮಾತನ್ನು ಒಪ್ಪಿದನು. ವಿಭೀಷಣನು ಹೇಗಾದರೂ ಮಾಡಿ ಹನುಮಂತನನ್ನು ವಾಪಾಸ್ ರಾಮನಿದ್ದಲ್ಲಿಗೆ ಕಳುಹಿಸಬೇಕೆಂದು ಯೋಚಿಸುತ್ತಿದ್ದ. ರಾವಣನು ಸಿಟ್ಟನ್ನು ತನ್ನಳಗೆ ಇಟ್ಟುಕೊಂಡು ವಿಭೀಷಣನ ಮಾತನ್ನು ಮನ್ನಣೆ ಮಾಡಿ ನೀನು ಹೇಳಿದ್ದು ಸರಿ ಎಂದು ಹೇಳಿದನು. ರಾಮನಿಗೆ ಏನಾಗುತ್ತಿದೆ ಎಂದು ಹೇಳಲು ಬೇರೆ ಯಾರೂ ಇರಲಿಲ್ಲ. ಅದಕ್ಕಾಗಿಯೇ ಹನುಮಂತ ತಿರುಗಿ ರಾಮನಿದ್ದಲ್ಲಿಗೆ ಹೋಗಬೇಕು ಎಂದು ವಿಭೀಷಣನು ಯೋಚಿಸುತ್ತಿದ್ದ. ಆದರೆ ಈ ಸಂಗತಿಯನ್ನು ದುಷ್ಟ ರಾವಣನ ಮುಂದೆ ಹೇಳುವಂತೆ ಇರಲಿಲ್ಲ. ದೂತರ ವಧೆಯನ್ನು ಮಾಡುವುದು ತಪ್ಪು, ಚಕ್ರವರ್ತಿ ಸ್ಥಾನದಿಂದ ರಾಜನೀತಿಯನ್ನು ಮೀರುವುದು ಸರಿಯಲ್ಲ ಎಂದು ರಾವಣನು ಹೇಳಿದನು. ದೂತ ವಧೆಯು ರಾಜನೀತಿಗೆ ಬಾಹಿರವಾಗಿದ್ದರಿಂದ ನೀನು ಹೇಳಿದಂತೆ ಬೇರೆ ಏನಾದರೂ ಮಾಡೋಣ ಎಂದು ವಿಭೀಷಣನಿಗೆ ರಾವಣನು ಹೇಳಿದನು. ರಾವಣನಿಗೆ ದೌಷ್ಟ್ಯವೇ ಪ್ರಿಯವಾಗಿತ್ತು. ಸಾವಿಗಿಂತ ಯಾರನ್ನಾದರೂ ಹಿಂಸೆ ಮಾಡುವುದೇ ಅವನಿಗೆ ಪ್ರಿಯವಾಗಿದ್ದರಿಂದ ವಿಭೀಷಣನ ಮಾತನ್ನು ಒಪ್ಪಿಕೊಂಡನು. ಯಾವ ರೀತಿ ಹಿಂಸಿಸಬಹುದು .? ಯಾವ ರೀತಿಯಲ್ಲಿ ಜೀವನ ಪರ್ಯಂತ ತೊಂದರೆಯನ್ನು ಉಂಟುಮಾಡಬಹುದು ಎನ್ನುವುದರಲ್ಲಿ ರಾವಣನು ಪರಿಣಿತನಾಗಿದ್ದನು. ನಂತರ ಸಭೆಯನ್ನುದ್ದೇಶಿಸಿ ರಾವಣನು ಮಾತನಾಡಲು ಆರಂಭಿಸಿದನು. ಕಪಿಗಳಿಗೆ ಅತ್ಯಂತ ಇಷ್ಟವಾದ ಅಂಗವೆಂದರೆ ಬಾಲ.
ರಾವಣನ ಈ ಮಾತು ಸತ್ಯವೂ ಹೌದು. ಹಿಂದೆ ಹನುಮಂತನು ಮಂಡೋದರಿಯನ್ನು ನೋಡಿದಾಗ ಸೀತೆ ಎಂದು ತಿಳಿದು ಸಂತೋಷದಲ್ಲಿ ಬಾಲಕ್ಕೆ ಮುತ್ತು ಕೊಟ್ಟಿದ್ದನು.

ಕಪಿಗಳಿಗೆ ಬಾಲವು ಭೂಷಣ. ಆದ್ದರಿಂದ ಬಾಲಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕೋಣ, ಸುಟ್ಟ ಬಾಲದಲ್ಲಿ ಊರಿಗೆ ಹೋಗಲಿ, ಜೀವಮಾನ ಪರ್ಯಂತ ಅವನ ಇಷ್ಟ ಮಿತ್ರರು, ಬಂಧು–ಬಾಂಧವರು ಸುಟ್ಟು ಬಾಲದವನು ಎಂದು ಅವನನ್ನು ಹೀಯಾಳಿಸಲಿ ಎಂದು ರಾವಣನು ಹೇಳಿದನು. ಈಗ ಮಾತ್ರ ಶಿಕ್ಷೆ ಕೊಟ್ಟು ಮುಗಿಸಬಾರದು. ಅಶೋಕವನ ಧ್ವಂಸ ಮಾಡಿದ್ದಕ್ಕೆ, ಇಷ್ಟೆಲ್ಲ ನಮ್ಮವರನ್ನು ಕೊಂದಿದ್ದಕ್ಕೆ ಚಿಹ್ನೆ ಮೂಡಿಸಬೇಕು. ಅದಕ್ಕೆ ಈಗಲೇ ಬಾಲಕ್ಕೆ ಬೆಂಕಿ ಹಚ್ಚಿ ಎಂದು ರಾವಣನು ಅಪ್ಪಣೆ ಮಾಡಿದನು. ಬಾಲಕ್ಕೆ ಬೆಂಕಿ ಹಚ್ಚಿ, ಇಡೀಯ ಲಂಕೆಯಲ್ಲಿ ಮೆರವಣಿಗೆ ಮಾಡಿ ಬಿಡಿ, ಪೂರ್ತಿ ಬಾಲವು ಸುಡಬೇಕು, ಅವನಿಗೆ ಹಿಂಸೆ ಆಗಬೇಕು ಎಂದು ರಾವಣನು ಹೇಳಿದನು. ಇದನ್ನು ನೋಡಿ ಇನ್ಯಾರು ಮುಂದೆ ಹೀಗೆ ಮಾಡಬಾರದು ಎಂದು ಸಭೆಯಲ್ಲಿ ಹೇಳಿದನು. ಬಾಲಕ್ಕೆ ಬೆಂಕಿ ಹಚ್ಚುವುದು ವಧೆಗೆ ಸಮಾನವಾಗಿತ್ತು. ಬಾಲಕ್ಕೆ ಬೆಂಕಿ ಹಚ್ಚಿದಾಗ ದೇಹಕ್ಕೆ, ಮನಸ್ಸಿಗೆ ಆಗುವ ಪೀಡೆ, ಬಾಲವಿಲ್ಲದಾದಾಗ ಆಗುವ ಪೀಡೆ, ಲಂಕೆಯಲ್ಲಿ ಮೆರವಣಿಗೆ ಮಾಡಿದಾಗ ಆಗುವ ಮಾನಸಿಕ ಆಘಾತ ಎಲ್ಲವನ್ನು ಕಲ್ಪನೆಗೆ ಮೀರಿದ್ದಾಗಿತ್ತು. ಕೋಪ ಕರ್ಕಶರಾದ ರಾಕ್ಷಸರು ರಾವಣನ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸಿ ಹನುಮಂತನ ಬಾಲಕ್ಕೆ ಹಳೆ ಹಳೆಯ ಹತ್ತಿಬಟ್ಟೆಯನ್ನು ಸುತ್ತಲೂ ಆರಂಭ ಮಾಡಿದರು. ಹನುಮಂತನು ದೊಡ್ಡದಾಗಿ ಬೆಳೆಯುತ್ತಿದ್ದನು. ರಾಕ್ಷಸರು ಸುತ್ತುವುದನ್ನು ನಿಲ್ಲಿಸಲಿಲ್ಲ. ಲಂಕೆಯಲ್ಲಿದ್ದ ಹಳೆಯ ಬಟ್ಟೆಯನ್ನೆಲ್ಲ ಸುತ್ತಿದರು. ತುಂಬಾ ಬಟ್ಟೆಯನ್ನು ಬಾಲಕ್ಕೆ ಸುತ್ತಿ ಎಣ್ಣೆಯನ್ನು ಹಾಕಲು ಆರಂಭಿಸಿದರು. ಹನುಮಂತನು ಕಾಡ್ಗಿಚ್ಚಿನಂತೆ ಬೆಳೆಯುತ್ತಿದ್ದನು.

(ಕಾಡ್ಗಿಚ್ಚು : ಒಣಗಿದ ಕಾಡನ್ನು ಹಿಡಿದ ಬೆಂಕಿಯು ಬೆಳೆಯುವುದು) ಬಾಲಕ್ಕೆ ಸರಿಯಾಗಿ ಎಣ್ಣೆ ಹಾಕಿ ಕೊನೆಗೆ ಬೆಂಕಿಯನ್ನು ಕೊಟ್ಟರು. ಹನುಮಂತನು ಬೆಂಕಿ ಕೊಟ್ಟ ತಕ್ಷಣವೇ ಸುತ್ತಮುತ್ತಲೂ ಇದ್ದ ರಾಕ್ಷಸರಿಗೆ ಬೆಂಕಿ ಬಾಲದಿಂದ ಹೊಡೆದು ಕೆಳಕ್ಕೆ ಕೆಡಗಿದನು. ಹನುಮಂತನಿಗೆ ಬಾಲಕ್ಕೆ ಬೆಂಕಿ ಹಾಕಿದ್ದರೆಂದು ತುಂಬಾ ಸಿಟ್ಟು ಬಂದಿತ್ತು. ಈತನ್ಮಧ್ಯೆ ಸಭೆಯಲ್ಲಿರುವ ಎಲ್ಲರೂ ಆ ದೃಶ್ಯವನ್ನು ನೋಡಿ ಬಹಳ ಸಂತೋಷ ಪಟ್ಟರು. ಸ್ತ್ರೀಯರು, ಬಾಲರು, ವೃದ್ದರೆಲ್ಲರೂ ವಿಕೃತ ಸಂತೋಷಪಟ್ಟರು. ಲಂಕೆಯಲ್ಲಿರುವ ಪ್ರಜೆಗಳೆಲ್ಲರೂ ವಿಕೃತ ಸಂತೋಷಿಗಳಾಗಿದ್ದರು. ಬಿದ್ದ ರಾಕ್ಷಸರೆಲ್ಲರೂ ಮತ್ತೆ ಎದ್ದು ಬಂದು ಹನುಮಂತನನ್ನು ಹಿಡಿದುಕೊಂಡರು. ನನ್ನನ್ನು ಕಟ್ಟಿದ್ದಾರೆ, ನಾನು ಮನಸ್ಸು ಮಾಡಿದರೆ ಈ ಕಟ್ಟನ್ನು ತುಂಡು ಮಾಡಿ ರಾಕ್ಷಸರನ್ನು ಕೊಲ್ಲಬಲ್ಲೆ, ಆ ಶಕ್ತಿ ನನಗಿದೆ, ನನ್ನ ಪ್ರಭುವಿನ ಅಪ್ಪಣೆ ಮೇರೆಗೆ ದೂತನಾಗಿ ಬಂದು ಮಾತನಾಡುತ್ತಿದ್ದಾಗ ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದು ಹನುಮಂತನು ಆಲೋಚನೆ ಮಾಡಿದನು. ನಂತರ ಇವರೆಲ್ಲರಿಗೂ ನಾನೊಬ್ಬನೇ ಸಾಕು, ಈಗಲೇ ರಾವಣ ಸಹಿತರಾಗಿ ಎಲ್ಲರನ್ನು ಕೊಲ್ಲಬಲ್ಲೆ, ಆದರೆ ಬೇಡ ಎಂದು ತೀರ್ಮಾನಿಸಿದನು. ರಾಮನಿಗೆ ಚಿಕ್ಕ ಸೇವೆ ಆಗುವುದಾದರೆ ಅದೆಷ್ಟು ದೊಡ್ಡ ಕಷ್ಟವನ್ನಾದರೂ ಸಹಿಸುತ್ತೇನೆ. ರಾಮನ ಪ್ರೀತಿಗಾಗಿ, ರಾಮ ಕಾರ್ಯಕ್ಕಾಗಿ ಇದೆಲ್ಲವನ್ನು ನಾನು ಸಹಿಸುತ್ತೇನೆ ಎಂದು ಹನುಮಂತನು ಮನಸ್ಸಿನೊಳಗೆ ಹೇಳಿಕೊಂಡನು. ಲಂಕೆಯಲ್ಲಿ ಮೆರವಣಿಗೆ ಮಾಡಿ ಎಂದು ರಾವಣ ಹೇಳಿದ್ದನ್ನು ಹನುಮಂತನು ತನಗೆ ಲಂಕೆಯನ್ನು ತೋರಿಸಿದರೆ ಒಳ್ಳೆಯದು, ಯಾರ್ಯಾರ ಮನೆ ಎಲ್ಲಿದೆ.? ಸೇತುವೆಗಳು ಎಲ್ಲಿವೆ..? ಎಲ್ಲವನ್ನು ರಾತ್ರಿ ನೋಡಿದ್ದರೂ ಹಗಲು ನೋಡುವುದೇ ಒಳ್ಳೆಯದೆಂದು ಯೋಚಿಸಿದನು ಹನುಮಂತ. ಇದನ್ನೆಲ್ಲ ಹೋಗಿ ರಾಮನಿಗೆ ವರದಿ ಮಾಡುತ್ತೇನೆ ಎಂದು ಅಂದುಕೊಂಡನು. ರಾತ್ರಿ ಸೀತೆ ಹುಡುಕುತ್ತಿದ್ದರಿಂದ ಮನಸ್ಸು ಬೇರೆಯೇ ಇತ್ತು. ಈಗ ಹಾಗಲ್ಲ, ಗುಪ್ತಚರರು ನೋಡುವ ರೀತಿಯಲ್ಲಿ , ಮುಂದಿನ ಯುದ್ಧಕ್ಕೆ ಅನುಕೂಲವಾಗುವ ರೀತಿಯಲ್ಲಿ ಲಂಕೆಯನ್ನು ನೋಡುತ್ತೇನೆ. ಅದಕ್ಕಾಗಿ ಇದನ್ನೆಲ್ಲ ಸಹಿಸುತ್ತೇನೆ ಎಂದು ಹನುಮಂತನು ತೀರ್ಮಾನಿಸಿದನು.

ಬಾಲಕ್ಕೆ ಬೆಂಕಿ ತಗುಲಿದಾಗಲೂ ಬೆಂಕಿಯ ಬೆಳಕಲ್ಲಿ ಲಂಕೆಯನ್ನು ನೋಡಿ ಪ್ರಭುವಿಗೆ ವರದಿ ಮಾಡಬೇಕೆಂಬ ಯೋಚನೆ ಮಾಡಲು ಹನುಮಂತನಿಂದ ಮಾತ್ರ ಸಾಧ್ಯ. ದೇಹವು ಸುಡುತ್ತಿದ್ದಾಗಲೂ ಸ್ವಾಮಿ ಕಾರ್ಯವನ್ನು ನಿಷ್ಠೆಯಿಂದ ಹನುಮಂತನು ಮಾಡಲು ಮುಂದಾಗುತ್ತಾನೆ. ಹನುಮಂತನು ಅಯೋಧ್ಯೆಯವನಲ್ಲ, ರಾಮನು ಇದಕ್ಕಾಗಿ ಸಂಪತ್ತನ್ನು ಕೊಡುತ್ತಾನೆ ಎಂದು ಅಲ್ಲದೇ, ಕೇವಲ ರಾಮನ ಮೇಲಿನ ಪ್ರೀತಿಯಿಂದ ಮಾಡಿದನು. ಸ್ವಲ್ಪವಾದರೂ ರಾಮನಿಗೆ ಸಹಕಾರವಾಗುತ್ತದೆ ಎಂದಾದರೆ ಅದನ್ನು ಮಾಡುವ ಭಾವ ಹನುಮಂತನದ್ದಾಗಿತ್ತು. ಹನುಮಂತನಂತ ಸ್ವಾಮಿ ನಿಷ್ಠೆಯುಳ್ಳವರು ಜಗದಲ್ಲೂ, ಯುಗ–ಯುಗಗಳಲ್ಲೂ ಸಿಗುವುದಿಲ್ಲ. ರಕ್ಷಣೆ ಮತ್ತು ಯುದ್ಧನೀತಿಯ ದೃಷ್ಟಿಯಿಂದ ಸುರಂಗವೇ ಮೊದಲಾದ ಕೆಲವು ಸ್ಥಳಗಳನ್ನು ನೋಡಬೇಕು, ಎಷ್ಟೇ ಅಪಚಾರ ಮಾಡಲಿ, ಬಾಲ ಸುಟ್ಟರೆ ಸುಡಲಿ, ನನಗೇನು ವ್ಯಥೆಯಿಲ್ಲ, ಇದರ ಮಧ್ಯೆ ರಾಮನ ಸೇವೆಯನ್ನು ಹೇಗೆ ಮಾಡಬೇಕು ಎಂದು ಹನುಮಂತನು ಆಲೋಚಿಸಿದನು. ಅದೇ ಸ್ಥಿತಿಯಲ್ಲಿ ಹನುಮಂತನನ್ನು ಲಂಕೆಯಲ್ಲಿ ಮೆರವಣಿಗೆ ಮಾಡಲು ಮುಂದಾದರು. ಎರಡು ಇಕ್ಕೆಲಗಳಲ್ಲಿ ಜನರೆಲ್ಲ ಸೇರಿ ಮಧ್ಯೆ ಹನುಮಂತನನ್ನು ಮೆರವಣಿಗೆ ಮಾಡುತ್ತಾ , ಬೈಯುತ್ತಾ , ನಿಂದಿಸುತ್ತಾ, ಘೋಷಣೆಯನ್ನು ಮಾಡುತ್ತಿರುವಾಗಲೂ ಹನುಮಂತನು ಮೌನದಿಂದ ಸುತ್ತಮುತ್ತಲೂ ಅವಲೋಕಿಸುತ್ತಿದ್ದನು. ಸೀತೆಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ ಸುದ್ದಿ ತಲುಪಿತು.

ಮುಂದೇನಾಯಿತು ..? ಇದನ್ನು ಕೇಳಿದ ಸೀತೆಯ ಪ್ರತಿಕ್ರಿಯೆ ಏನು..? ಹನುಮಂತನು ಹೇಗೆ ಸಹಿಸಿದನು..? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments