ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕೆಲವೊಮ್ಮೆ ಮೊದಲ ಕಾರ್ಯವೇ, ಮೂಲ ಕಾರ್ಯವೇ ಕೊನೆಯ ಕಾರ್ಯವೂ ಆಗಿರ್ತದೆ. ಸುಂದರಕಾಂಡದ ಕೊನೆಯಲ್ಲಿ ಇಂಥದ್ದೊಂದು ಸಂದರ್ಭ. ಹನುಮಂತ ಲಂಕೆಗೆ ಏಕೆ ಬಂದ? ಮೊದಲ ಕಾರ್ಯ ಇತ್ತಲ್ಲ ಮೂಲ ಕಾರ್ಯ, ಸೀತೆಯನ್ನು ನೋಡ್ಕೊಂಡು ಹೋಗೋಕ್ಕೆ. ಆ ಸೀತೆಯನ್ನು ನೋಡಿಕೊಂಡು ಹೋಗುವಂಥ ಕಾರ್ಯವೇ ಒಂದು ಉಳಿದಿರುವಂಥದ್ದು. ಮತ್ತೊಮ್ಮೆ ಆ ಪ್ರಸಕ್ತಿ ಏಕೆ ಅಂದ್ರೆ ಲಂಕೆಯಲ್ಲೀಗ ಬೆಂಕಿ ಹರಿದಿದೆ. ಅದರ ಬಳಿಕ ಸೀತೆ ಹೇಗಿರುವಳು? ಸೀತೆಗೇನೂ ಆಗಿಲ್ಲ ತಾನೇ ಎನ್ನುವುದನ್ನು ಕಣ್ಣಿಂದ ಖಚಿತಪಡಿಸಿಕೊಳ್ಳಬೇಕು ಎನ್ನುವ ಒಂದು ಉದ್ದೇಶ.
ನಿಮಿತ್ತಗಳು ಆಗಿದ್ದಾವೆ. ಶುಭನಿಮಿತ್ತಗಳು ಸೂಚನೆ ನೀಡಿದಾವೆ ಸೀತೆಗೇನು ಆಗಿಲ್ಲ ಎಂಬುದನ್ನು. ಹಾಗೆಯೇ ಚಾರಣರ ವಾಣಿಯೂ ಸ್ಪಷ್ಟಪಡಿಸಿದೆ. ಆಶ್ಚರ್ಯ ಅವರಿಗೆ! ಲಂಕೆಯೆಲ್ಲ ಸುಟ್ಟರೂ ಕೂಡ, ಸೀತೆಯಿದ್ದ ಸಂಪೂರ್ಣ ಪರಿಸರವೆಲ್ಲವೂ ಸುಟ್ಟು ಹೋಗಿದ್ದರೂ ಕೂಡ ಸೀತೆಗೇನಾಗಿಲ್ಲ ಎನ್ನುವುದು. ಮೊದಲು ಅಶೋಕವನವನ್ನು ಭಂಗ ಮಾಡುವಾಗ ಸೀತೆಯಿರುವ ಪರಿಸರವನ್ನು ಬಿಟ್ಟು ಮತ್ತೆಲ್ಲ ವನವನ್ನು ಭಂಗ ಮಾಡಿರ್ತಾನೆ ಹನುಮಂತ. ಈಗ ತಾನೇ ಆಗಿದೆ. ಹಾಗಾಗಿ ಸೀತೆಯನ್ನು ಮತ್ತೊಮ್ಮೆ ಕಾಣಬೇಕು. ಅಂತಃಕರಣದ ಕಣ್ಣು ನೋಡಿದೆ. ಸೀತೆಗೇನಾಗಿಲ್ಲ ಎನ್ನುವುದು ಆತ್ಮಕ್ಕೆ ಖಚಿತವಾಗಿದೆ. ಆದರೆ ಪ್ರತ್ಯಕ್ಷತಃ, ಚರ್ಮಚಕ್ಷುವಿಗೆ ಅದು ಮತ್ತೊಮ್ಮೆ ಖಚಿತವಾಗ್ಬೇಕು.
ಯಾಕಂದ್ರೆ ಒಂದು ಸಾರಿ ಖಚಿತಪಡಿಸಿಕೊಳ್ಬೇಕು ನಾವು ಕೆಲವು ಕಾರ್ಯಗಳನ್ನು. ಇದಂತೂ ಅತಿ ಸೂಕ್ಷ್ಮವಾಗಿರತಕ್ಕಂತಹ ವಿಷಯ. ಸೀತೆಯ ಮೇಲೆ ಎಲ್ಲವೂ ನಿಂತಿದೆ.

ರಾಮಾವತಾರವಿರುವುದೇ ಸೀತೆಯನ್ನು ಆಧರಿಸಿ. ಸೀತೆ ಹುಟ್ಟುವ ಮೊದಲು ರಾಮಾವತಾರದಲ್ಲಿ ಆಗಿದ್ದು ಒಂದೇ ಕಾರ್ಯ. ರಾಮ ಹುಟ್ಟಿದ್ದು ಮಾತ್ರ. ಮತ್ತೇನೂ ಆಗಿಲ್ಲ. ವಿಶ್ವಾಮಿತ್ರರು ದಶರಥನ ಆಸ್ಥಾನಕ್ಕೆ ಬಂದು ರಾಮ ಹೊರಟ್ನಲ್ಲ, ಆ ಪ್ರಯಾಣ ಸೀತಾ ವಿವಾಹದಲ್ಲೆ ಪರ್ಯವಸಾನ ಆಗುವಂಥದ್ದು. ಅದಕ್ಕಿಂತ ಹಿಂದೆ ಏನೂ ಇಲ್ಲ. ಸೀತೆ ಭೂಗರ್ಭವನ್ನ ಪ್ರವೇಶ ಮಾಡಿದಮೇಲೆ ಏನೂ ಇಲ್ಲ ರಾಮಾಯಣದಲ್ಲಿ. ರಾಮ ನಿರ್ಯಾಣ ಮಾತ್ರ. ಎಷ್ಟು ಹೊತ್ತು ಭೂಮಿಲ್ಲಿ ಸೀತೆ ಇರ್ತಾಳೆ. ಅಷ್ಟು ಹೊತ್ತಿಡೀ ರಾಮಾಯಣ ನಡೆಯುವಂಥದ್ದು. ಅವಳ ಸುತ್ತಮುತ್ತವೇ ನಡೆಯುವಂಥದ್ದು. ಈ ಅವತಾರ ಕಾರ್ಯ ನೆರವೇರುವುದೇ ಸೀತೆಯ ಮುಖಾಂತರವಾಗಿ. ಅಷ್ಟು ಮುಖ್ಯವಾದದ್ದು ಆ ಪಾತ್ರವೆನ್ನುವಂಥದ್ದು.

ಹಾಗಾಗಿ ಆಕೆ ಹೇಗಿದ್ದಾಳೆ ಎಂದು ಬರಿಗಣ್ಣಿನಲ್ಲಿ ನೋಡಬೇಕು ಅಂತ ಸೀದ ಹೋದ ಅಲ್ಲಿಗೆ. ಈಗಂತೂ ಯಾರೂ ಹಿಡಿಯುವವರಿಲ್ಲ, ತಡೆಯುವವರಿಲ್ಲ. ಹಿಂದೆ ಕದ್ದುಮುಚ್ಚಿ ಹೋಗಿದ್ದ ಅಶೋಕವನಕ್ಕೆ. ಈಗ ರಾಜಗಾಂಭೀರ್ಯದಿಂದ ಹೋಗ್ತಾ ಇದಾನೆ. ಯಾಕೆ ಅಂದ್ರೆ ಲಂಕೆಯ ರಾಕ್ಷಸರಿಗೆ ಬದುಕಿದರೆ ಸಾಕಾಗಿದೆ. ಅವರು ಇನ್ಯಾವುದನ್ನೂ ಗಮನಿಸುವ ಪರಿಸ್ಥಿತಿಯಲ್ಲಿಲ್ಲ. ಸದ್ಯಕ್ಕೆ ಹನುಮಂತನ ಕಡೆ ತಿರುಗಿಯೂ ನೋಡೋದಿಲ್ಲ.

ಹಾಗಾಗಿ ನೇರವಾಗಿ ರಾವಣನ ಮನೆಯ ಅಶೋಕಾವನವನ್ನು ಪ್ರವೇಶ ಮಾಡ್ತಾನೆ ಆಂಜನೇಯ. ಅಲ್ಲಿಯೇ ಇದಾಳೆ ಸೀತೆ. ಶಿಂಶಿಪಾ ವೃಕ್ಷದ ಮೂಲದಲ್ಲಿ ಜಾನಕಿಯು ಅಕ್ಷತಳಾಗಿ ( ಅಕ್ಷತ ಎಂಬ ಶಬ್ಧಕ್ಕೆ ಕ್ಷತ ಇಲ್ಲದುದು ಎಂಬ ಅರ್ಥವಿದೆಯಂತೆ) ಮೊದಲಿನಂತೆಯೇ, ಯಾವ ವ್ಯತ್ಯಾಸವೂ ಇಲ್ಲ. ಒಂದು ಸಣ್ಣ ಗಾಯವೂ ಆಗಿಲ್ಲ, ಸುಟ್ಟ ಕಲೆಯೂ ಇಲ್ಲ. ಅವಳು ಹೇಗಿದ್ದಳೋ ಹಾಗೇ ಇದ್ದಾಳೆ. ಅಂತಹ ಸ್ಥಿತಿಯಲ್ಲಿ ಸೀತೆಯನ್ನು ಕಾಣ್ತಾನೆ ಹನುಮಂತ. ಹೇಳಿದನಂತೆ; ದೇವರು ದೊಡ್ಡವನು. ನಿನಗೇನೂ ಆಗಿಲ್ಲವಲ್ಲ. ನಾನು ಗಮನಿಸದೇ ಇಷ್ಟು ದೊಡ್ಡ ದಹನ ಕಾಂಡವನ್ನು ನಡೆಸಿದ ಮೇಲೆ ನಿನಗೇನೂ ಆಗಿಲ್ಲ, ಕೂದಲು ಕೊಂಕಿಲ್ಲ, ಒಂದು ಚಿಕ್ಕ ತೊಂದರೆ ಕೂಡ ಆಗಿಲ್ಲ ಎನ್ನುವಂಥದ್ದು. ದೇವರು ದೊಡ್ಡವನು ಎಂಬುದಾಗಿ ತುಂಬಾ ಸಂತೋಷ ಪಡ್ತಿದಾನೆ ಹನುಮಂತ.

ಹನುಮನಿಗೆ ಸೀತೆಯ ಚಿಂತೆ. ಲಂಕೆಯನ್ನು ಸುಟ್ಟುರುಹುವಾಗ ಸೀತೆಗೇನಾದರೂ ಆಯ್ತಾ ಎನ್ನುವ ಚಿಂತೆ ಹನುಮಂತನಿಗೆ. ಸೀತೆಗೆ ಹನುಮನ ಚಿಂತೆ. ಏನೇನು ಮಾಡಿದರೋ ಹನುಮಂತನಿಗೆ? ಹನುಮಂತನ ಬಂಧನವಾಗಿದೆ. ಬಂಧನವಾದಾಗ ಏನೇನು ತೊಂದರೆಯಾಯಿತೋ ಹನುಮನಿಗೆ? ಬಾಲಕ್ಕೆ ಬೆಂಕಿ ಹಚ್ಚಿದಾಗ ಅವಳು ಮಾಡಿದ ಪ್ರಾರ್ಥನೆ ಫಲಿಸಿತೋ ಇಲ್ವೋ? ಹಾಗಾಗಿ ಸೀತೆ ಹನುಮಂತನ ಕುರಿತು ಆತಂಕದಲ್ಲಿದಾಳೆ. ಹನುಮಂತ ಸೀತೆಯ ಕುರಿತು ಆತಂಕದಲ್ಲಿದಾನೆ. ಇಬ್ಬರೂ ಕೂಡ ಪರಸ್ಪರರ ಕುರಿತು ಆತಂಕದಲ್ಲಿದಾರೆ. ಹಾಗಾಗಿ ಹನುಮಂತ ಬಂದಿದ್ದು ಒಳ್ಳೆಯದೇ ಆಯಿತು. ಸೀತೆಗೆ ಸಮಾಧಾನ ಆಯಿತು. ಹನುಮಂತನಿಗೆ ಏನೂ ಆಗಿಲ್ಲ. ಹನುಮಂತನ ಬಾಲಕ್ಕೆ ಬೆಂಕಿಯಿಟ್ಟವರು ಲಂಕೆಗೇ ಬೆಂಕಿಯಿಟ್ಟುಕೊಂಡರು ಹೊರತು ಹನುಮಂತನಿಗೇನೂ ಆಗಿಲ್ಲ ಎನ್ನುವುದು ಕಣ್ಣಾರೆ ಕಾಣ್ತಾ ಇದೆ ಆಕೆಗೆ. ಇಲ್ಲದಿದ್ದರೆ ಹನುಮಂತನಿಗೆ ಏನಾಯ್ತೋ ಏನೋ? ಅವನು ವಾಪಸ್ಸು ಹೋದನೋ ಇಲ್ವೋ ಅಂತ ಗೊತ್ತಾಗ್ತಿರ್ಲಿಲ್ಲ. ರಾಕ್ಷಸಿಯರಿಂದ ಗೊತ್ತಾಗುವ ಸಂಭವವಿದೆ. ಆದರೆ ಇದು ಪ್ರತ್ಯಕ್ಷವಾಗಿ ಅಕ್ಷತನಾಗಿ ಇರುವಂಥದ್ದು ಅವಳ ಕಣ್ಣಿಗೆ ಗೋಚರಿಸ್ತಾ ಇದೆ.

ಹಾಗಾಗಿಯೇ ರಾಮಾಯಣ ಹೇಳ್ತದೆ; ಮತ್ತೆ ಮತ್ತೆ ಹನುಮಂತನನ್ನು ಸೀತೆ ನೋಡಿದಳು. ಆ ಸಮಯದಲ್ಲಿ. ನೋಡಿದಷ್ಟು ತೃಪ್ತಿಯಿಲ್ಲ. ಏನೂ ಆಗಿಲ್ಲ ತಾನೇ ಅಂತ. ಬಹು ದೊಡ್ಡ ಪ್ರೀತಿ, ವಾತ್ಸಲ್ಯವನ್ನು ಹನುಮನ ಕುರಿತು ಸೀತೆ ಹೊಂದಿದ್ದಳು ಎನ್ನುವುದನ್ನು ನಾವು ಈ ಪ್ರಕರಣದಲ್ಲಿ ಕಾಣಬಹುದು. ಅವಳ ಮುಂದಿನ ಮಾತಿನಲ್ಲಿ ರಾಮಪ್ರೇಮ ತುಂಬಿತ್ತು. ಲಂಕೆ ಹೊತ್ತಿ ಉರಿತಕ್ಕಂತಹ ಆ ವಾತಾವರಣ ಬಹಳ ಮಾತಾಡಲು ಸಮ್ಮತವಲ್ಲ. ಮತ್ತು ಮೊದಲು ಬೇಕಾದಷ್ಟು ಮಾತನಾಡಿಯಾಗಿದೆ. ಸೀತೆ ನೇರವಾಗಿ ಹನುಮಂತನಿಗೆ ಹೇಳಬೇಕಾದ್ದನ್ನ ಹೇಳ್ತಾಳೆ. ಗೊತ್ತು ನನಗೆ; ನೀನೊಬ್ಬನೇ ಸಾಕು. ಲಂಕೆಯನ್ನು ಗೆದ್ದು ನನ್ನನ್ನು ಮರಳಿ ರಾಮನಿಗೆ ಕೊಡಿಸುವ ಕಾರ್ಯಕ್ಕೆ ನೀನೊಬ್ಬನೇ ಸಾಕು. ಶತ್ರುಸಂಹಾರಿಯೇ ಎಂದು ಸಂಬೋಧನೆ ಮಾಡಿ ಸೀತೆ ಹೇಳ್ತಿದಾಳೆ. ನಿನ್ನ ಬಲದ ಆವಿರ್ಭಾವಕ್ಕೆ ಮುಂದೆ ಯಶಸ್ಸು ಕಾದಿದೆ. ಆದರೆ ರಾಮನ ಕೈಯಿಂದಲೇ ಈ ಕಾರ್ಯ ಆಗ್ಬೇಕು. ಅದು ನನ್ನ ಆಸೆ. ತನ್ನ ಬಾಣಗಳಿಂದ ಲಂಕೆಯನ್ನು ವ್ಯಾಕುಲವನ್ನಾಗಿ ಮಾಡಿ ರಾಮನು ತಾನೇ ನನ್ನನ್ನು ಕರೆದುಕೊಂಡು ಹೋದರೆ ಅದು ಅವನಿಗೆ ಸಲ್ಲುವಂಥದ್ದು. ರಾಮನಿಲ್ಲದಾಗ ರಾವಣ ನನ್ನನ್ನು ಕದ್ದುಕೊಂಡು ಬಂದ ಹಾಗೆ ಪುನಃ ನನ್ನನ್ನು ಲಂಕೆಯಿಂದ ಕದ್ದುಕೊಂಡು ಹೋಗುವಂಥದ್ದು ರಾಮನಿಗೆ ಸಲ್ಲುವಂಥದ್ದಲ್ಲ. ರಾಮನಿಗೆ ಭೂಷಣವಲ್ಲ. ಹಾಗಾಗಿ ಅವನೇ ಬರಬೇಕು ಲಂಕೆಗೆ. ಬರುವಹಾಗೆ ನೀನು ಮಾಡು.

ನೀನು ಹೋಗಿ ಇಲ್ಲಿಯ ನಿಜವಾದ ಪರಿಸ್ಥಿತಿಯನ್ನು, ನನ್ನ ಮನಸ್ಸನ್ನು ರಾಮನಿಗೆ ಮನವರಿಕೆ ಮಾಡಿಕೊಡಬೇಕು. ಆ ಆವಯಶೂರ (ಆವಯ ಅಂದ್ರೆ ಯುದ್ಧ), ಪರಮ ವಿಕ್ರಮಿ ಅವನು ಹೇಗೆ ಈ ಕಾರ್ಯವನ್ನು ಮಾಡುವನೋ ಹಾಗೆ ನೀನು ಮಾಡು. ಮಾಡುವಂತೆ ನೀನು ಮಾಡು. ಈಗಾಗಲೇ ನೂರು ಬಾರಿ ಹೇಳಿರಬಹುದು ಸೀತೆ ಪುನಃ ಹೇಳ್ತಾಳೆ ಹನುಮಂತನಿಗೆ. ಯಾಕಂದ್ರೆ ದೂರದಲ್ಲಿರುವ ರಾಮ ಏನುಬೇಕಾದ್ರು ತಿಳಿದುಕೊಳ್ಳಬಹುದು. ಇಲ್ಲಿ ಏನಾಗಿದೆ ಅವನಿಗೆ ಗೊತ್ತಿಲ್ಲವಲ್ಲ. ಹಾಗಾಗಿ ಮತ್ತೆ ಮತ್ತೆ ಹನುಮಂತನಿಗೆ ರಾಮನಿಗೆ ಸರಿಯಾಗಿ ಮನವರಿಕೆ ಮಾಡು ಎಂಬುದಾಗಿ ಸೀತೆ ಹೇಳ್ತಾ ಇದಾಳೆ. ಆ ಮಾತನ್ನು ಕೇಳಿದ ಹನುಮಂತ ಸೀತೆಗೆ ಹೇಳಿದ್ನಂತೆ. ಬೇಗ ಬರ್ತಾನೆ ರಾಮ. ತಡ ಮಾಡೋದಿಲ್ಲ. ಹನುಮಂತ ಹೋದ ದಿನವೇ ಮತ್ತೆ ಹೊರಡ್ತಾನೆ ರಾಮ. ಇಲ್ಲಿ ಅದನ್ನೇ ಹೇಳ್ತಾನೆ ಹನುಮಂತ. ಕ್ಷಿಪ್ರವಾಗಿ ಬರ್ತಾನೆ ರಾಮ. ಅವನೊಬ್ಬನೇ ಅಲ್ಲ, ಅವನ ಜೊತೆಗೆ ಅಸಂಖ್ಯಾತ ಕಪಿಗಳು, ಕರಡಿಗಳು. ಅವನು ನಿನ್ನ ವೈರಿಯನ್ನು ಗೆದ್ದು ನಿನ್ನ ಶೋಕವನ್ನು ದೂರ ಮಾಡ್ತಾನೆ ಎಂಬುದಾಗಿ ಸೀತೆಯನ್ನು ಸಂತೈಸಿ, ಮರುಪ್ರಯಾಣದ ನಿಶ್ಚಯದಲ್ಲಿ ಸೀತೆಗೆ ನಮಸ್ಕಾರ ಮಾಡಿದ. ಹೊರಟ ಅಲ್ಲಿಂದ. ಹೀಗೆ ಎರಡು ಬಾರಿ ಸೀತೆಯನ್ನು, ಮೂರು ಬಾರಿ ರಾವಣನನ್ನು ಕಂಡಿದಾನೆ ಹನುಮಂತ. ಲಂಕಾಪ್ರಯಾಣದಲ್ಲಿ ಇಷ್ಟೆಲ್ಲ ಕಾರ್ಯವಾಗಿದೆ. ಲಂಕೆಯನ್ನೇ ದೀಪವನ್ನಾಗಿ ಮಾಡಿ, ಹೊತ್ತಿಸಿ, ಆ ಪ್ರಭೆ ಸಮುದ್ರದ ಮೇಲೆ ಚೆಲ್ಲುವಂತೆ ಮಾಡಿದಾನೆ. ಲಂಕಾದಹನದ ಪ್ರಭೆಯಲ್ಲಿ ಸಮುದ್ರ ಬೆಳಗಿದೆ.

ಮರಳಿ ಹೊರಟ. ಈಗ ಮತ್ತೆ ಅದೇ ಪ್ರಶ್ನೆ. ಎಲ್ಲಿಂದ ಹಾರೋದು ಅಂತ? ಹೀಗೆ ನೋಡಿದನಂತೆ. ಒಂದು ಪರ್ವತ ಅವನ ಕಣ್ಣಿಗೆ ಬಿತ್ತು. ಮಹೇಂದ್ರ ಪರ್ವತದಷ್ಟು ಬಲಿಷ್ಟವಲ್ಲ. ಇರುವುದರಲ್ಲಿ ವಾಸಿ ಇದು ಅಂತ. ಯಾವುದದು ಅಂದ್ರೆ ಅರಿಷ್ಟವೆಂಬ ಪರ್ವತ. ಆ ಪರ್ವತವನ್ನೇರುವಾಗ ರಾಮನನ್ನು ಕಾಣುವ ತವಕ ಹನುಮನಿಗೆ. ಉತ್ಸುಕತೆ ಅವನ ಹೃದಯದಲ್ಲಿ. ಆ ಅರಿಷ್ಟ ಪರ್ವತದ ಒಂದು ವರ್ಣನೆಯಿದೆ. ಅರಿಷ್ಟ ಪರ್ವತ ನೋಡಿದ್ರೆ ಹಸಿರು ಪಂಚೆ ಉಟ್ಗೊಂಡು, ಬಿಳಿ ಶಾಲು ಹೊದ್ದುಕೊಂಡಂತೆ ಇತ್ತಂತೆ.

ಹಸಿರು ಪಂಚೆ ಯಾವುದಪ್ಪ ಅಂದರೆ, ವನಗಳು – ಎತ್ತರವಾಗಿ ಬೆಳೆದ ವೃಕ್ಷಗಳು. ಅದು ನೋಡಿದರೆ, ಹಸಿರು ಪಂಚೆಯಂತೆ ಕಾಣುತ್ತಿತ್ತು. ಬಿಳಿಯ ಉತ್ತರೀಯ ಯಾವುದು ಎಂದರೆ, ಮೋಡಗಳು ಬಂದು ಶೃಂಗದ ಮೇಲೆ ನೆಲೆಸಿದ್ದವು. ಸೂರ್ಯಕಿರಣಗಳು ಚೆಲ್ಲಿದ್ದವು ಪರ್ವತದ ಮೇಲೆ, ಅದು ಸೂರ್ಯನ ಕಿರಣವೆಂಬ ಕರಗಳಿಂದ ಆ ಅರಿಷ್ಟ ಪರ್ವತವನ್ನು ತಟ್ಟಿ ಎಬ್ಬಿಸುತ್ತಿರುವ ಎನ್ನುವಂತೆ ಕಾಣುತ್ತಿತ್ತು. ಪರ್ವತದಲ್ಲಿರುವ ಬಣ್ಣ ಬಣ್ಣದ ಧಾತುಗಳು ಕಣ್ಣಿನ ಹಾಗೆ ಕಾಣುತ್ತಿದ್ದವು. ಅದನ್ನು ನೋಡಿದರೆ ಪರ್ವತ ಮೈಯೆಲ್ಲಾ ಕಣ್ಣು ತೆರೆದಂತೆ ಕಾಣುತ್ತಿತ್ತು . ಮಂದ್ರವಾಗಿ ನೀರು ಹರಿವ ಸದ್ದು ಕೇಳುತ್ತಿತ್ತು. ಅದು ಯಾರೋ ಮಂದ್ರವಾಗಿ ವೇದಾಧ್ಯಯನ ಮಾಡುತ್ತಿರುವಂತೆ ತೋರುತ್ತಿತ್ತು. ಜೋರಾಗಿ ಹರಿಯುವ ನದಿಗಳು ಸಂಗೀತ ಹೇಳುತ್ತಿದ್ದಂತೆ ಕಾಣುತ್ತಿತ್ತು. ಎತ್ತರೆತ್ತರದ ದೇವದಾರು ವೃಕ್ಷಗಳು ಇದ್ದವು ಆ ಬೆಟ್ಟದಲ್ಲಿ, ಅವುಗಳನ್ನು ನೋಡಿದರೆ ಅರಿಷ್ಟ ಪರ್ವತ ಕೈಯನ್ನು ಮೇಲೆ ಇತ್ತಿ ಹನುಮನನ್ನು ಕರೆಯುವ ಹಾಗೆ ಕಾಣುತ್ತಿತ್ತು. ಕಂಪಿಸುವ ಮೋಡಗಳು ಪರ್ವತವನ್ನೇ ಕಂಪಿಸುವಂತೆ ಕಾಣುತ್ತಿತ್ತು. ರಂಧ್ರವಿರುವ ಬಿದಿರುಗಳ ಮೇಲೆ ಗಾಳಿ ಬೀಸಿದಾಗ ಕೊಳಲು ಊದಿದಂತೆ ಸದ್ದು ಕೇಳುತ್ತಿತ್ತು. ದೊಡ್ಡದೊಡ್ಡ ಸರ್ಪಗಳು ಬುಸು ಕೊಡುವಾಗ ಪರ್ವತವೇ ನಿಟ್ಟುಸಿರು ಬಿಡುವಂತೆ ಕಾಣುತ್ತಿತ್ತು. ಪುಟ್ಟ ಪುಟ್ಟ ಪರ್ವತವು, ಅಂದರೆ ಪಾದಗಳು ನಡೆಯುತ್ತಿರುವಂತೆ ಕಾಣುತ್ತಿತ್ತು. ಶೃಂಗದ ಮೇಲಿನ ಮೋಡ ಮುಂದೆ ಹೋಗುವಾಗ ಪರ್ವತವು ಮೈಮುರಿಯುವ ಹಾಗೆ ಕಾಣುತ್ತಿತ್ತು.

ಪರ್ವತದಲ್ಲಿ ಅನೇಕ ಶಿಖರಗಳು, ಶಿಖರದಲ್ಲಿ ಅನೇಕ ಗುಹೆಗಳು, ಗುಹೆಗಳ ಸುತ್ತ ಅನೇಕ ವೃಕ್ಷಗಳು ಸಾಲ, ತಾಲ, ಅಶ್ವಕರ್ಣ ಮತ್ತು ಬಿದಿರು ಮೊದಲಾಗಿ ಇರುವ ವೃಕ್ಷಗಳು, ಬಳ್ಳಿಗಳು, ಬಳ್ಳಿಗಳಲ್ಲಿ ಪುಷ್ಪಗಳು, ಪರ್ವತದ ಚೆಂದ. ನಾನಾ ಪ್ರಕಾರದ ಮೃಗಗಳು, ಧಾತುಗಳು ಅಂದರೆ ಬಣ್ಣು ಬಣ್ಣದ ಮಣ್ಣು ಹರಿದು ನೀರಿನೊಟ್ಟಿಗೆ ಸೇರಿ ಬರುವ ಚೆಂದ, ಝರಿಗಳು. ಅನೇಕಾನೇಕ ಅಚ್ಚರಿಗಳು..! ಪರ್ವತದಲ್ಲಿ ಯಕ್ಷರು, ಗಂಧರ್ವರು, ಕಿನ್ನರರು ವಾಸಮಾಡುತ್ತಿದ್ದರು ಅಥವಾ ವಿಹಾರಕೋಸ್ಕರ ಬಂದಿದ್ದರೂ, ತಪಸ್ಸಿಗೋಸ್ಕರ ಬಂದಿದ್ದರು. ವ್ಯಾಘ್ರಸಂಘವೇ ಇತ್ತು. ರುಚಿರುಚಿಯಾದ ಮೂಲ ಫಲಗಳು ಇರುವ ಗೆಡ್ಡೆಗೆಣಸುಗಳು ಇರುವ ಅರಿಷ್ಟ ಪರ್ವತವನ್ನು ಹನುಮಂತ ಏರುತ್ತಾ ಇದ್ದಾನೆ. ಅರಿಷ್ಠ ಪರ್ವತವನ್ನು ಹನುಮಂತನೆಂಬ ಪರ್ವತ ಇರುತ್ತಿದೆ. ರಾಮನನ್ನು ಕಾಣುವ ತವಕ ಹನುಮನ ಕಾಲಿಗೆ ವೇಗವನ್ನು ಕೊಟ್ಟಿದೆ. ಪರಿಣಾಮ ಏನು ಅಂದ್ರೆ ಅವನ ಕಾಲಿಗೆ ಸಿಕ್ಕ ಪರ್ವತಗಳು, ಬಂಡೆಗಳು ಪುಡಿಪುಡಿಯಾದವು. ಅದರಿಂದ ಶಬ್ದವು ಬರುತ್ತಿತ್ತು. ಪರ್ವತದ ಮೇಲೇರಿ ನಿಂತು ಬೆಳೆದನು ಹನುಮ. ಯಾಕೆಂದರೆ ಸಮುದ್ರ ಉಲ್ಲಂಘನೆಗೆ ದೊಡ್ಡ ಶರೀರ ಬೇಕಾಗುತ್ತದೆ. ಸಮುದ್ರದ ದಕ್ಷಿಣದಿಂದ ಉತ್ತರಕ್ಕೆ ಹೋಗುವ ತವಕ. ಸಮುದ್ರದ ಈಚೆ ದಡದಿಂದ ಆಚೆ ದಡಕ್ಕೆ, ಲಂಕೆಯಿಂದ ಭಾರತಕ್ಕೆ ಹೋಗುವ ಸಂಕಲ್ಪ. ಹನುಮಂತ ಹೀಗೆ ಒಮ್ಮೆ ಸಮುದ್ರವನ್ನು ನೋಡಿದನಂತೆ. ಕಾಲಿಡುವ ಮೊದಲು ಕಣ್ಣಿಡು, ಕಣ್ಣಿಟ್ಟಲ್ಲಿ ಕಾಲಿಡು, ಕಣ್ಣಿಡದೇ ಕಾಲಿಡಬೇಡ. ಸಮುದ್ರವನ್ನು ಗಂಭೀರವಾಗಿ ನೋಡಿದನು ಹನುಮಂತ. ಬಳಿಕ ಅಂತರಂಗದಲ್ಲಿಯೇ ಸಮುದ್ರವನ್ನು ಹಾರಿದನು. ಪರ್ವತವನ್ನು ಒದ್ದು ಹಾರಬೇಕು ಸಮುದ್ರದಕ್ಕೆ. ಪರ್ವತವೆ ಕೂಗಿಕೊಂಡಿತು. ಹನುಮಂತ ಹಾರುವಾಗ ಬೆಟ್ಟಕ್ಕೆ ಬೆಟ್ಟವೇ ಬೊಬ್ಬೆ ಹಾಕಿದಂತೆ. ಪರ್ವತ ಶಿಖರಗಳು ಕಂಪಿಸುತ್ತಾ ಇದೆ. ಮರಗಳು ಉದುರಿ ಬೀಳ್ತಾ ಇದೆ ಹನುಮಂತ ಅರಿಷ್ಟ ಪರ್ವತವನ್ನು ಒದ್ದು ಹಾರುವಾಗ. ಗುಹೆಗಳಲ್ಲಿರುವ ಸಿಂಹಗಳು ಒಮ್ಮೆಲೇ ಕೂಗಿಕೊಂಡಿದ್ದಾವೆ. ಆಕಾಶ ಒಡೆಯುವ ಸದ್ದದು. ವಿದ್ಯಾಧರಿಯರು ಓದುತ್ತಿದ್ದರು. ಪರ್ವತವೇ ನರ್ತಿಸುತ್ತಿದೆ. ಆಕಾಶಕ್ಕೆ ಹಾರಿದ್ದಾರೆ ಅವರೆಲ್ಲರೂ. ಸರ್ಪಗಳು ಹೊರಳಾಡಿದವು. ಕಿನ್ನರರು, ಉರಗರು, ಗಂಧರ್ವರು, ಯಕ್ಷ ವಿದ್ಯಾಧರರು ಬೆಟ್ಟವನ್ನು ಬಿಟ್ಟು, ಆಕಾಶದೆಡೆಗೆ ಹಾರಿದ್ದಾರೆ. ಹನುಮಂತ ಮೇಲೆ ಹಾರುವಾಗ ಪರ್ವತವು ಭೂಮಿಯೊಳಗೆ ಪ್ರವೇಶವನ್ನು ಮಾಡಿತು. ಹತ್ತು ಯೋಜನ ಅಗಲ 30ಯೋಜನ ಉದ್ದದ ಪರ್ವತವು ನೆಲಸಮವಾಯಿತು. ಹನುಮನು ಗಗನಕ್ಕೆ ನೆಗೆದನು. ಆಕಾಶದಲ್ಲಿ ಹನುಮನು ದೊಡ್ಡ ನೌಕೆಯಂತೆ ಕಾಣುತ್ತಿದ್ದಾನೆ. ಶ್ರಮದ ಸುಳಿವೇ ಇಲ್ಲ, ಮೋಡಗಳ ನಡುವೆ ಹನುಮನ ಆಟ.

ಪಾಂಡರ, ಅರುಣ, ನೀಲ, ಹರಿತ ಬೇರೆ ಬೇರೆ ಬಣ್ಣದ ಮೋಡಗಳು ಶೋಭಿಸುತ್ತಿದ್ದಾವೆ. ಅದರ ಮಧ್ಯೆ ಬಂಗಾರದ ಬಣ್ಣದ, ಕುಂಕುಮದ ಮುಖದ ಹನುಮಂತ. ಚಂದ್ರನು ಮೋಡದ ಒಳಗೂ, ಹೊರಗೂ ಆಗುವಂತೆ ಹನುಮನು ಒಮ್ಮೆ ಮೋಡದ ಒಳಗೆ ಹೊಗುತ್ತಾನೆ ಒಮ್ಮೆ ಹೊರಗೆ ಬರುತ್ತಾನೆ.ಮಧ್ಯ ಮಧ್ಯ ದೊಡ್ಡದಾಗಿ ಘರ್ಜನೆ ಕೂಡಾ ಮಾಡುತ್ತಿದ್ದಾನೆ. ರಾಕ್ಷಸನಾಯಕರನ್ನು ಕೊಂದು, ಲಂಕೆಗೆಲ್ಲಾ ತನ್ನ ಪರಿಚಯ ಮಾಡಿಸಿ, ಲಂಕಾನಗರಿಯನ್ನು ಆಕುಲವನ್ನಾಗಿ ಮಾಡಿ, ರಾವಣನನ್ನು ವ್ಯಥೆಗೊಳಿಸಿ, ಅವನ ಸೈನ್ಯವನ್ನು ಪೀಡಿಸಿ, ವೈದೇಹಿಗೆ ಅಭಿವಂದಿಸಿ ಸಮುದ್ರದ ಮೇಲೆ ಆಕಾಶಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದಾನೆ. ಮೈನಾಕನ ಭೇಟಿಯಾಯಿತು. ಮೈನಾಕ ಎದ್ದು ಬಂದಾಗ ಇಂದ್ರ ಅಭಯ ಕೊಟ್ಟಿದ್ದ ಅವನು ಹನುಮಂತನಿಗೆ ಸಹಾಯ ಮಾಡಲು ಮುಂದಾದನೆಂದು. ಹಾಗಾಗಿ ಅದು ಮೇಲೆಯೇ ಇತ್ತು. ನೋಡುತ್ತಿದ್ದಾನೆ ಹನುಮಂತನು ಬರಬಹುದೇ? ಆಗಂತೂ ಅವಸರವಿತ್ತು. ಈಗ ಅವಸರವಿಲ್ಲವಲ್ಲ, ಇಲ್ಲೇ ಉಳಿದು ಆತಿಥ್ಯ ಸ್ವೀಕರಿಸಿ ಹೋಗಬಹುದೇ? ಎಂದು. ಹನುಮಂತನಿಗೆ ಮೈನಾಕನ ಅಂತರಂಗದ ಆಮಂತ್ರಣವಿದೆ. ಕೈಯಿಂದ ಮುಟ್ಟಿದ್ದಾನೆ ಹನುಮಂತ, ಆತಿಥ್ಯ ಸ್ವೀಕರಿಸಿದೆ ಎನ್ನುವಂತೆ. ಬೇಗ ರಾಮನ ಬಳಿ ಹೋಗಬೇಕು ನಾನು, ಆದಷ್ಟು ಬೇಗ ರಾಮನಿಗೆ ಈ ಸುದ್ದಿಯನ್ನು ತಲುಪಿಸಬೇಕು ಎಂದು ನೇರವಾಗಿ ಮುಂದೆ ಸಾಗಿದನು ಹನುಮಂತ.

ರಾಮನ ಬಿಲ್ಲಿನಿಂದ ಚ್ಯುತವಾದ ಬಾಣದಂತೆ ಹಾರಿ ಬರುವ ಹನುಮಂತನಿಗೆ ಮಹೇಂದ್ರ ಪರ್ವತವು ಕಾಣಿಸಿತು. ಅವನ ಗೆಳೆಯರ ಬಳಗ ಅಲ್ಲೇ ಇದೆ. ಆವೇಶ ಬಂತು ಹನುಮಂತನಿಗೆ. ಸಾವಿರಾರು ಮೋಡಗಳು ಒಟ್ಟಿಗೆ ಗುಡುಗುವಂತೆ ದೊಡ್ಡ ಘರ್ಜನೆ ಮಾಡಿದನು. ಅದು ಅವರಿಗೆ ‘ನಾನು ಗೆದ್ದು ಬಂದೆ’ ಎಂಬ ಸಂದೇಶ. ಅವನಿಗೆ ಜಾಂಬವಂತ, ನೀಲ, ಅಂಗದ ಇವರನ್ನೆಲ್ಲಾ ಕಾಣಬೇಕು ಎಂಬ ತವಕ. ಹಾಗೆ ಇನ್ನೊಮ್ಮೆ ಘರ್ಜಿಸಿ ತನ್ನ ಬಾಲವನ್ನು ಎತ್ತಿ ಆಡಿಸಿದನು. ಆ ಘರ್ಜನೆ ಗಗನವು ಒಡೆದು ಹೋಯಿತೋ ಎನ್ನುವಂತೆ ಇತ್ತು. ಆ ಕಡೆಗೆ ಎಲ್ಲರೂ ಕುಳಿತಿದ್ದಾರೆ. ಜಾಂಬವಂತ, ಅಂಗದ, ನೀಲ, ಗವಾಕ್ಷ ಮೊದಲಾದ ಕಪಿಗಳು ದೀನರಾಗಿ ಕುಳಿತಿದ್ದಾರೆ. ಎಲ್ಲರಿಗೂ ಆತಂಕ. ವಾಯುಪುತ್ರನನ್ನು ಕಾಣುವ ಆಲೋಚನೆಯೊಂದೇ. ಅವರಿಗೆ ಮೊದಲು ಈ ಘರ್ಜನೆ ಕೇಳಿಸಿತು. ಆಮೇಲೆ ಅಂತಹ ವೇಗದಲ್ಲಿ ಗಾಳಿಯನ್ನು ಸೀಳಿ ಬರುವಾಗ ಆಗುವ ಗಾಳಿಯ ಶಬ್ದ. ಎಲ್ಲರೂ ಉತ್ಸುಕರಾದರು. ಏಕೆಂದರೆ ಇವರ ಭವಿಷ್ಯ ಅವನ ಕೈಯಲ್ಲಿದೆ. ಆ ಕಾರ್ಯ ಹನುಮಂತನನ್ನು ಆಶ್ರಯಿಸಿದೆ. ಹಾಗಾಗಿ ಅವನನ್ನು ಕಾಣುವ ತವಕ. ಏತನ್ಮಧ್ಯೆ ಜಾಂಬವಂತ ಎಲ್ಲರನ್ನೂ ಕರೆದು ಹೇಳಿದ. ಅವನಿಗೆ ಖುಷಿಯೋ ಖುಷಿ. ಏಕೆಂದರೆ ಅವನು ತಿಳಿದವನು. ಬೇಗ ವಿಷಯವನ್ನು ಅರ್ಥ ಮಾಡಿಕೊಳ್ಳಬಲ್ಲವನು. ಕೆಲಸ ಆಗಿದೆ ಎಂದು ಕಪಿಗಳಿಗೆ ಈ ರೀತಿ ಹೇಳಿದ. ‘ಖಂಡಿತವಾಗಿಯೂ ಹನುಮನು ಹೋದ ಕಾರ್ಯವನ್ನು ಸಾಧಿಸಿಕೊಂಡು ಬಂದಿದ್ದಾನೆ. ಅದರಲ್ಲಿ ಸಂಶಯವಿಲ್ಲ. ಕೆಲಸವಾಗದಿದ್ದರೆ ಈ ಸ್ವರ ಬರುತ್ತಿರಲಿಲ್ಲ’.

ಕಪಿಗಳಿಗೆಲ್ಲಾ ಸಂತೋಷವಾಯಿತು. ಕುಣಿದು ಕುಪ್ಪಳಿಸಿದರು. ಎಲ್ಲಿಂದ ಹನುಮನನ್ನು ಕಾಣಬಹುದೆಂದು ಮರದಿಂದ ಮರಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ ಹಾರಿದರು. ಕೆಲವರು ದೊಡ್ಡ ಮರಗಳನ್ನೇರಿ ಹೂಬಿಟ್ಟ ಕೊಂಬೆಗಳನ್ನು ಅಲುಗಾಡಿಸಿದರು. ಅತ್ತ ಹನುಮಂತ ಘರ್ಜಿಸುತ್ತಾ ಬರುತ್ತಿದ್ದಾನೆ. ಸ್ವಲ್ಪವೇ ಹೊತ್ತಿನಲ್ಲಿ ಸಮುದ್ರದ ಮೇಲೆ ಹಾರಿ ಬರುವ ಹನುಮಂತನ ಮಹಾರೂಪ ಕಾಣಿಸಿತು. ಕೂಡಲೇ ಎಲ್ಲಾ ಕಪಿಗಳೂ ಚೇಷ್ಟೆ ಬಿಟ್ಟು ಶಿಸ್ತಾಗಿ ಕೈಮುಗಿದು ನಿಂತರು. ಮಹೇಂದ್ರ ಪರ್ವತದ ಮೇಲೆ ಹನುಮತ್ಪರ್ವತ ಬಂದಿಳಿಯಿತು. ಹನುಮಂತನಲ್ಲಿ ಹರ್ಷವು ತುಂಬಿ ತುಳುಕುತ್ತಿದೆ. ರೆಕ್ಕೆಯನ್ನು ಕಳಚಿಕೊಂಡು ಪರ್ವತವು ಇಳಿಯುವ ಹಾಗೆ ಮಹಾಪರ್ವತಾಕಾರನು ಬಂದು ಇಳಿದ.ಅವನನ್ನು ಎಲ್ಲರೂ ಸುತ್ತುವರೆದರು. ಅವರಿಗೂ ಸಂತೋಷ, ಇವನಿಗೂ ಸಂತೋಷ. ಇನ್ನೂ ವಿಷಯ ಪ್ರಸ್ತಾಪವಾಗಿಲ್ಲ. ಆಗಲೇ ಸಂಭ್ರಮಾಚರಣೆ ಶುರುವಾಗಿದೆ. ಅವರಿಗೆ ಮೊದಲು ಹನುಮಂತನಿಗೆ ಏನೂ ತೊಂದರೆಯಾಗಿಲ್ಲ ಎಂದು ಸಂತೋಷವಾಯಿತು. ಪ್ರೀತಿಯಿಂದ ನೋಡಿದರು ಹನುಮಂತನನ್ನು. ಏಕೆಂದರೆ ಹೋಗಿದ್ದು ಲಂಕೆಗೆ. ಮುಂದೆ ರಾಮ ಹೇಳುವಂತೆ ಉಸಿರಿಟ್ಟುಕೊಂಡು ಹೋದವನು ಉಸಿರಿಟ್ಟುಕೊಂಡು ಬರುವುದು ಕಷ್ಟ ಲಂಕೆಯಿಂದ. ಹಾಗಿರುವಾಗ ಏನೂ ತೊಂದರೆಯಿಲ್ಲದೇ ಹನುಮಂತ ಬಂದ ಎನ್ನುವುದು ಸಂತೋಷದ ವಿಷಯ. ಆಮೇಲೆ ಎಲ್ಲರೂ ಕಪ್ಪಕಾಣಿಕೆಯನ್ನು ಸಲ್ಲಿಸಿದರು ಅವನಿಗೆ. ಗೆಡ್ಡೆ-ಗೆಣಸು, ಹಣ್ಣು-ಹಂಪಲು ಎಲ್ಲವನ್ನೂ ಅವನಿಗೆ ಒಪ್ಪಿಸಿದರು. ಹನುಮಂತನು ಕ್ರಮವಾಗಿ ಕಪಿಸೇನೆಯಲ್ಲಿ ಯಾರು ಗುರುಪ್ರಾಯರೋ ಅವರಿಗೆ ನಮಸ್ಕರಿಸಿ, ಅಂಗದನನ್ನು ವಂದಿಸಿದನು.ಇಲ್ಲಿ ಅವನು ನಮಸ್ಕರಿಸದಿದ್ದರೆ ಯಾರೂ ಕೇಳುವುದಿಲ್ಲ ಆದರೂ ಎಲ್ಲೂ ಶಿಷ್ಟಾಚಾರವನ್ನು ಬಿಡುವುದಿಲ್ಲ.

ಅಂಗದನಿಗೂ ವಂದಿಸುತ್ತಾನೆ ಯಾಕೆಂದ್ರೆ ಅವನು ಯುವರಾಜ. ವಂದಿಸುವುದು ಪದ್ಧತಿ. ಸದ್ಯಕ್ಕೆ ಇವನೇ ರಾಜ ಇಲ್ಲಿ. ಆ ಸ್ಥಾನ ಗೌರವದ ದೃಷ್ಟಿಯಿಂದ ಅಂಗದನಿಗೆ ಗೌರವವನ್ನು ಸಲ್ಲಿಸಿದ. ಹನುಮಂತ ನಮಸ್ಕಾರ ಮಾಡದಿದ್ದರೆ ಯಾರೂ ಅವನನ್ನು ಕೇಳುವುದಿಲ್ಲ ಯಾಕೆ ನಮಸ್ಕಾರ ಮಾಡಲಿಲ್ಲ ಎಂದು. ಹನುಮಂತ ಶಿಷ್ಟಾಚಾರ ಬಿಡಬಹುದಿತ್ತು ಆದರೆ ಇಲ್ಲೂ ಶಿಷ್ಟಾಚಾರ ಬಿಡಲಿಲ್ಲ. ನಮಸ್ಕರಿಸಿ ಹನುಮಂತ ಅಂಗದ ಕೈ ಹಿಡಿದು ಎಲ್ಲಿ ಸುಂದರವಾದ ಜಾಗ ಇದೆಯೋ ಕುಳಿತುಕೊಳ್ಳುವುದಕ್ಕೆ ಅಂತಹ ಕಡೆಗೆ ಪರ್ವತದ ಮೇಲೆ ಬಂದು ಕುಳಿತುಕೊಂಡ. ಅಂಗದ ಮತ್ತು ಹನುಮಂತ ಒಂದೇ ವಯಸ್ಸಿನವರಾದುದರಿಂದ ಸಖ್ಯ ಸ್ನೇಹ ತುಂಬಾ ಇದೆ. ಆದರೆ ತತ್ವಕ್ಕೆ ರಾಜಿ ಇಲ್ಲ ಎನ್ನುವುದು ಮುಂದೆ ನಾವು ಕಾಣುತ್ತೇವೆ. ಕಪಿಗಳು ಎಲ್ಲ ಸುತ್ತ ಕುಳಿತುಕೊಂಡಿದ್ದಾರೆ. ಮೊಟ್ಟಮೊದಲು ಹನುಮಂತ ಎರಡು ಪದದಲ್ಲಿ ಸಂಕ್ಷೇಪವಾಗಿ ವಿಷಯ ಹೇಳ್ತಾನೆ. “ದೃಷ್ಟಾ ಸೀತಾ”, ಕಂಡೆ ಸೀತೆಯನ್ನು, ಅಷ್ಟೇ ಅವನು ಹೇಳಿದ್ದು ಮತ್ತು ಅಷ್ಟೇ ಬೇಕಾಗಿದ್ದು ಅಲ್ಲಿ. ಎರಡು ಸಂಗತಿ. ಒಂದು ಅವನು ಸೀತೆಯನ್ನು ನೋಡಿಬರಬೇಕು, ಇನ್ನೊಂದು ಸುರಕ್ಷಿತವಾಗಿ ಮರಳಿ ಬರಬೇಕು. ಅದೆರಡೂ ಆಗಿದೆ. ಹೇಳಿ ಅಂಗದನ ಕೈ ಹಿಡಿದು ವಿಸ್ತಾರವಾಗಿ ಹೇಳ್ತಾನೆ, “ಲಂಕೆಯ ಮಧ್ಯದಲ್ಲಿ, ರಾವಣನ ಮನೆಯಲ್ಲಿ ಅಶೋಕವನದಲ್ಲಿ ಕಂಡೆ ಸೀತೆಯನ್ನು. ಸುತ್ತ ಘೋರ ರಾಕ್ಷಸಿಯರ ಭದ್ರ ಕಾವಲು. ಅವರ ಮಧ್ಯದಲ್ಲಿ ಒಂದೂ ದೋಷವಿಲ್ಲದ ಸೀತೆ. ಎಲ್ಲ ದೋಷಗಳ ಮಧ್ಯದಲ್ಲಿ ಒಂದೂ ದೋಷವಿಲ್ಲದ ಸೀತೆ. ತನ್ನ ಜಡೆಗೆ ಯಾವ ಸಂಸ್ಕಾರವನ್ನೂ ಮಾಡಿಲ್ಲ ಅವಳು. ಅವಳ ಕೂದಲು ಜಟಿಲವಾಗಿ ಜಡೆಗಟ್ಟಿದೆ. ಅವಳು ರಾಮನ ದರ್ಶನಕ್ಕೆ ಆತುರವಾಗಿರುವವಳು. ಉಪವಾಸದಿಮ್ದ ಕೃಶಳಾದವಳು. ಮೈಯೆಲ್ಲ ಮಲಿನವಾಗಿದೆ, ತನ್ನ ದೇಹದ ಬಗ್ಗೆ ಲಕ್ಷ್ಯವಿಲ್ಲ. ಇಂತಹ ಸೀತೆಯನ್ನು ಕಂಡೆ”.

ಇದನ್ನು ಕೇಳಿ ಎಲ್ಲ ಕಪಿಗಳಿಗೆ ಇದು ಅಮೃತಪಾನವಾದಂತಾಯಿತು. ಈ ಮಾತು ಅವಳನ್ನು ಬದುಕಿಸತಕ್ಕಂತಹದ್ದು. ಎಲ್ಲರಿಗೂ ಸಂತೋಷವಾಗಿದೆ. ಕೆಲವರು ಕುಣಿದು ಕುಪ್ಪಳಿಸಿದರು, ಕೆಲವರು ದೊಡ್ಡದಾಗಿ ಘರ್ಜಿಸಿದರು ಇನ್ನು ಕೆಲವರು ಅವರ ಘರ್ಜನೆಗೆ ಪ್ರತಿಧ್ವನಿ ಆದರು. ಕೆಲವರು ಕಿಲ ಕಿಲ ಶಬ್ದಮಾಡಿದರಂತೆ. ಎಲ್ಲ ಕಪಿಗಳು ಅವರಿಗೆ ತಕ್ಕ ಹಾಗೆ ಸಂತೋಷವನ್ನು ಆಚರಣೆ ಮಾಡಿದರು. ಬೇರೆಯವರು ಹಾಡಿದ್ದನು ಕೇಳಿ ತಾನು ಹಾಡುವ ಹಾಗೆ ಕೆಲವರು ಘರ್ಜಿಸಿ ತಮ್ಮ ಸಂತೋಷವನ್ನು ವ್ಯಕ್ತ ಮಾಡಿದರು. ಕೆಲವರು ಹಾಡಿದರು, ಕೆಲವರು ತಮ್ಮ ತಮ್ಮ ಉದ್ದ ಉದ್ದ ದಪ್ಪದ ಬಾಲಗಳನ್ನು ಬಡಿದರು ಸಂತೋಷವನ್ನು ಆಚರಣೆ ಮಾಡಿದರು. ಇನ್ನು ಕೆಲವರು ದೂರ ಕುಳಿತವರು, ಅವರಿಗೆ ಏನು ಆಸೆ ಆಯಿತೆಂದು ಗೊತ್ತಿಲ್ಲ, ಅವರಲ್ಲಿ ಕೆಲವರು ಓಡಿ ಬಂದು, ಕೆಲವರು ಹಾರಿ ಬಂದು ಹನುಮಂತನನ್ನು ಮುಟ್ಟಿದರಂತೆ. ಹನುಮಂತನನ್ನು ಮುಟ್ಟುವ ಕಾರ್ಯಕ್ರಮ. ಆ ಸೀತೆಯನ್ನು ನೋಡಿದ ಹನುಮಂತನನ್ನು ಮುಟ್ಟುವುದೇ ಪುಣ್ಯವೆನ್ನುವಂತೆ. ಅಷ್ಟೂ ಸಂಭ್ರಮವಾಗಿದೆ. ನಮ್ಮಲ್ಲಿಯೂ ಕೆಲವರಿದ್ದಾರೆ ಅವರು ಮುಟ್ಟಿ ಸಂತೊಷ ಪಡುತ್ತಾರೆ. ಉದಾಹರಣೆಗೆ ಅಭಿಮಾನೀ ವರ್ಗ. ಹಾಗೇ ಆ ಕಪಿಗಳು ತುಂಬಾ ಪ್ರೀತಿಯಿಂದ, ಪಕ್ಕದ ಪರ್ವತದಿಂದ ಹಾರಿ ಬಂದು, ಹನುಮಂತನನ್ನು ಮುಟ್ಟಿ ಹೋಗುವಂತಹದ್ದು. ಯಾಕೆಂದ್ರೆ ಹನುಮಂತನ ಸುತ್ತ ಕಪಿಗಳು ಇರುವುದರಿಂದ ಅಲ್ಲಿ ಜಾಗ ಇಲ್ಲ. ಹಾಗಾಗಿ ಅವನನ್ನು ಮುಟ್ಟಿ ಹೋಗುತ್ತಿದ್ದರು ದೂರ ಇರುವ ಕಪಿಗಳು. ಆದರೆ ಹನುಮಂತ ಯಾರನ್ನೂ ಬೈಯಲಿಲ್ಲ. ಅವನಿಗೂ ಪ್ರೀತಿ ಅವರ ಮೇಲೆ.

ಆಗ ಅಂಗದನು ಎಲ್ಲ ಕಪಿಗಳ ಮಧ್ಯದಲ್ಲಿ ಹನುಮಂತನನ್ನು ಉದ್ದೇಶಿಸಿ ಹೇಳ್ತಾನೆ, ” ಹೇ ವಾನರ ಶ್ರೇಷ್ಠ! ನಿನಗೆ ಯಾರೂ ಸಮಾನರಲ್ಲ ತತ್ವದಲ್ಲಿ, ವೀರತನದಲ್ಲಿ ಯಾರು ನಿನಗೆ ಸಮಾನರು? ಸಮುದ್ರವನ್ನು ಹಾರಿ ಬಂದೆಯಾ? ಕನಸೋ, ಕಲ್ಪನೆಯೋ? ಅಚ್ಚರಿ! ಅಚ್ಚರಿ ಒಂದು ಕಡೆಗೆ ಇರಲಿ ನಮ್ಮ ಮಟ್ಟಿಗೆ ನೀನು ಯಾರು ಅಂದ್ರೆ, ಪ್ರಾಣದಾತ! ಕೋಟಿ ಕೋಟಿ ಕಪಿಗಳಲ್ಲಿ ನಮಗೆ ಜೀವ ಕೊಟ್ಟ ಕಪಿ ಯಾರು ಅಂದ್ರೆ ಅದು ನೀನು. ನಿನ್ನ ಕೃಪೆಯಿಂದ ನಾವು ಹೋಗಿ ರಾಮನನ್ನು ಕಾಣಬಹುದು. ರಾಮನ ಆ ದಿವ್ಯ ಮುಖಾರವಿಂದನ ಪುನಃದರ್ಶನ ಮಾಡುವ ಅವಕಾಶವಿದ್ದರೆ ಅದು ನಿನ್ನ ಕಾರಣದಿಂದ. ನಿನ್ನ ಕಾರಣದಿಂದಾಗಿ ನಾವು ನಮ್ಮ ಗೆಲುವಿನ ಮುಖದಿಂದ ರಾಮನನ್ನು ಕಾಣ್ತೇವೆ. ಧನ್ಯತೆಯ ಮುಖದಲ್ಲಿ ರಾಮನನ್ನು ಕಾಣ್ತೇವೆ. ಏನು ಸ್ವಾಮಿ ಭಕ್ತಿ ನಿನ್ನದು!”. ಅಂಗದನ ಈ ಮಾತಿಗೆ ಅರ್ಥ ಇದೆ. ಹನುಮಂತ ಸುಗ್ರೀವನನ್ನೂ ಬಿಟ್ಟುಕೊಡಲಿಲ್ಲ. ಅದನ್ನೆಲ್ಲ ನೆನಪಿಸಿಕೊಂಡು ಹೇಳ್ತಾ ಇದ್ದಾನೆ ಅಂಗದ. “ಏನು ವೀರತೆ ನಿನ್ನದು! ಆ ವೀರಶ್ರೀ ಆ ಕಾಂತಿ ಎಂತಹದು ನಿನ್ನದು? ಭಾಗ್ಯ ದೊಡ್ಡದು ನಿನ್ನದು. ರಾಮ ಪತ್ನಿಯನ್ನು ಆ ಯಶಸ್ವಿನಿ ಸೀತೆಯನ್ನು ನೀನು ಕಂಡೆ. ದೇವರು ದೊಡ್ಡವನು. ರಾಮನ ಶೋಕದ ಭಾರ ಇನ್ನು ಇಳಿಯುತ್ತದೆ. ಸೀತಾ ವಿಯೋಗದ ಬಹು ದೊಡ್ದ ಶೋಕ ಇಳಿಯುತ್ತದ್ದಲ್ಲ. ಇದು ಯೋಗ.” ಹೇಳುತ್ತಿದ್ದಂತೆಯೇ ಕಪಿಗಳಲ್ಲೇ ಸುತ್ತು ವರಿದಿದ್ದಾರೆ. ಅಂಗದ, ಹನುಮಂತ, ಜಾಂಬವಂತನನ್ನು, ಎಲ್ಲರಿಗೂ ಕೇಳ್ತಾ ಇಲ್ಲ ಈ ಮಾತುಗಳು ಹಾಗಾಗಿ, ಎಲ್ಲರೂ ಸುತ್ತು ವರಿದಿದ್ದಾರೆ ಕಪಿಗಳು. ಕೆಲವು ಕಪಿಗಳು ಈ ಮಾತುಗಳು ಕೇಳಲಿಕ್ಕೆ ಬಂಡೆಗಳನ್ನೋ ಕಲ್ಲನ್ನೋ ಆರಿಸಿ ಅದರ ಮೇಲೆ ಹೋಗಿ ಕುಳಿತುಕೊಂಡರಂತೆ. ಕಥೆ ಕೇಳಲಿಕ್ಕಿದೆ ಮುಂದೆ ಸುಂದರಕಾಂಡದ ಕಥೆಯನ್ನು ಹನುಮಂತನಿಂದ ಕೇಳಲಿಕ್ಕಿದೆ. ಹಾಗಾಗಿ ಒಳ್ಳೊಳ್ಳೆ ಜಾಗ, ಆಸಾನಗಳನ್ನು ಹುಡುಕಿ ಕುಳಿತುಕೊಂಡರಂತೆ. ಕಥೆ ಹೇಳು ಅಂತ ಅರ್ಥ. ಸಾಗರ ಲಂಘನವು ಹೇಗಾಯಿತು? ಲಂಕಾ ದರ್ಶನವು ಹೇಗಾಯಿತು? ಸೀತಾ ದರ್ಶನ ಹೇಗಾಯಿತು? ರಾವಣನ ಸಮಾಗಮವು ಅಥವಾ ದರ್ಶನವು ಹೇಗಾಯಿತು? ಎಂಬುದನ್ನು ಕೇಳುವ ಸಲುವಾಗಿ ಎಲ್ಲರೂ ತಾನಾಪನ್ನರಾಗಿ ಕೈಮುಗಿದು ಕುಳಿತರಂತೆ. ಕೈಮುಗಿಯದೇ ಕುಳಿತ ಕಪಿ ಅಲ್ಲಿರಲಿಲ್ಲ. ಇಷ್ಟೆಲ್ಲ ಚೇಷ್ಟೆ ಚಂಚಲತೆಯ ಮಧ್ಯದಲ್ಲಿ ಪ್ರೀತಿ ಗೌರವ ಸೇರಿದೆ ಅಲ್ಲಿ. ಅಂಗದನೂ ಕೂಡ ಕಪಿಗಳ ಮಧ್ಯದಲ್ಲಿ ಶೋಭಿಸುತ್ತಾ ಇದ್ದಾನೆ. ಅವರಿಗೆಲ್ಲ ಒಡೆಯ, ಅಧಿಪತಿ ಅವನು ದೇವತೆಗಳ ಮಧ್ಯೆ ದೇವರಾಜನಂತೆ, ಇಂದ್ರಾಂಶ ಸಂಭೂತ ದೇವರಾಜ ಇಂದ್ರನಂತೆ ಶೋಭಿಸುತ್ತಾ ಇದ್ದಾನೆ. ಹನುಮಂತ ಮತ್ತು ಅಂಗದರಿಂದ ಆ ಪರ್ವತವೇ ಶೋಭಿಸಿತು. ಆ ಎರಡು ವೀರ ಕಪಿಗಳಿಂದ ಪರ್ವತಕ್ಕೆ ಪರ್ವತವೇ ಅಲಂಕೃತವಾಯಿತು. ಎಲ್ಲರಲ್ಲಿಯೂ ಪ್ರೀತಿ ಹರಿದಾಡುತ್ತಾ ಇದೆ. ಯಾರೂ ಸ್ವಲ್ಪ ಹೊತ್ತು ಮಾತನಾಡಲಿಲ್ಲ.

ಆಮೇಲೆ ಜಾಂಬವಂತ ಪ್ರಸ್ತಾಪ ಮಾಡ್ತಾನೆ. ಯಾರಾದರೂ ಮೊದಲು ಕೇಳಬೇಕಲ್ಲ ಹನುಮಂತನಿಗೆ. ಜಾಂಬವಂತ ಕೇಳ್ತಾನೆ, “ಹೇಗೆ ನೋಡಿದೆ ಸೀತೆಯನ್ನು? ಹೇಗಿದ್ದಳು ಅವಳು ನೀನು ನೋಡಿದಾಗ? ಆ ಸೀತೆಯಲ್ಲಿ ಕ್ರೂರಿ ರಾವಣನ ವರ್ತನೆ ಹೇಗಿದೆ, ಕ್ರೂರಿ ರಾವಣ ಸೀತೆಯ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಾ ಇದ್ದಾನೆ?” ಮುಖ್ಯವಾದ ಪ್ರಶ್ನೆ ಅದು. “ಎಲ್ಲವನ್ನೂ ಇದ್ದದ್ದನ್ನು ಇದ್ದ ಹಾಗೆ ಹೇಳು ಹನುಮಂತ. ಹೇಗೆ ಹುಡುಕಿದೆ ಸೀತೆಯನ್ನು? ಸೀತೆ ಏನು ಹೇಳಿದಳು? ವಿವರಾಗಿ ಕೇಳ್ತಾ ಇದ್ದೇವೆ. ಲಂಕೆಯಲ್ಲಿ ಏನಾಯಿತು ಎನ್ನುವ ಇಡೀ ನಿನ್ನ ಅನುಭವವನ್ನು, ವಿವರವಾಗಿ ಹೇಳಿದ ಮೇಲೆ ಮುಂದಿನ ಕಾರ್ಯನೀತಿಯನ್ನು ಮಾಡೋಣ. ನಾವು ಮುಂದೆ ಏನು ಮಾಡಬೇಕು ಎನ್ನುವುದರ ನಿಶ್ಚಯ ನೀನು ಏನು ಹೇಳುವೆ ಎನ್ನುವುದರ ಮೇಲೆ ಇದೆ. ವಿವರವಾಗಿ ಹೇಳು”. ಇನ್ನೊಂದು ಮಾತನ್ನು ಸೇರಿಸುತ್ತಾನೆ ಜಾಂಬವಂತ “ಆಮೇಲೆ ಅಲ್ಲಿ, ಅಲ್ಲಿ ಅಂದ್ರೆ ರಾಮನಲ್ಲಿ, ಯಾವುದನ್ನು ಹೇಳಬೇಕು ಯಾವುದನ್ನು ಹೇಳಬಾರದು ಎನ್ನುವುದನ್ನೂ ತೀರ್ಮಾನ ಮಾಡಬೇಕಾಗಿದೆ.” ತುಂಬಾ ಸೂಕ್ಷ್ಮಗಳಿದ್ದಾವೆ ಇದರಲ್ಲಿ. ಯಾವುದನ್ನು ಹೇಳಿದರೆ ದುಃಖವಾಗಬಹುದು, ಯಾವುದನ್ನು ಹೇಳಿದರೆ ತುಂಬಾ ಆಘಾತವಾಗಬಹುದು, ಅದೆಲ್ಲ ಜಾಗ್ರತೆ ಮಾಡಬೇಕು. ಹಳಬರಿಗೆಲ್ಲ ಇಂತಹ ವಿಷಯದಲ್ಲಿ ಜ್ಞಾನ ಇರತಕ್ಕಂತಹದ್ದು. ಅದನ್ನು ಹೇಳ್ತಾನೆ ಜಾಂಬವಂತ.

ಆಗ ಹನುಮಂತ ಸೀತೆಯನ್ನು ನೆನಪು ಮಾಡಿಕೊಂಡನಂತೆ. ರೋಮಾಂಚನವಾಯಿತಂತೆ ಹನುಮಂತನಿಗೆ. ಕಂಪಿಸಿತು ಒಮ್ಮೆ ಹನುಮಂತನ ಮೈ ರೋಮಾಂಚನದಲ್ಲಿ. ಅಲ್ಲಿಂದಲೇ ಸೀತೆ ಇರುವ ದಿಕ್ಕಿಗೆ ತಿರುಗಿ ನಮಸ್ಕರಿಸಿದನಂತೆ ಹನುಮಂತ. ಎಷ್ಟು ಗೌರವ ಇದ್ದಿರಬೇಕು ಎಷ್ಟು ಪ್ರೀತಿ ಇರಬೇಕು ಹನುಮಂತನಿಗೆ ಸೀತೆಯಲ್ಲಿ. ಸಹಜವಾದ ಕ್ರಿಯೆಗಳು ಇವೆಲ್ಲ. ನಮಸ್ಕರಿಸಿ ಪ್ರಾರಂಭ ಮಾಡ್ತಾನೆ ಕಥೆ ಹೇಳುವುದಕ್ಕೆ. ಈ ಕಥೆ ಏನು ಅಂದ್ರೆ, ಸುಂದರಕಾಂಡವೇ. ಹನುಮಂತ ಹೇಳಿದ ಸುಂದರಕಾಂಡ. ಇಡೀ ಸುಂದರಕಾಂಡದಲ್ಲಿ ತುಂಬಾ ಸುಂದರವಾಗಿ ವಿವರಿಸ್ತಾನೆ ಹನುಮಂತ. ಇಡೀ ಸುಂದರಕಾಂಡ, ನಾವು ಏನನ್ನು ೨೧ ದಿವಸದಿಂದ ಮಾತನಾಡುತ್ತಾ ಇದ್ದೇವೆ ಅದೇ ಇದು. ಅದು ಹನುಮಂತನೇ ಹೇಳುವಂತಹದ್ದು. ಆತ್ಮಕಥನ, ಅನುಭವ ಕಥನ. ಶುರುಮಾಡ್ತಾನೆ ಹನುಮಂತ. ನಿಮ್ಮ ಕಣ್ಮುಂದೆ ಹಾರಿದೆನು ಮಹೇಂದ್ರ ಪರ್ವತದಿಂದ. ಇಲ್ಲಿಂದ ಲಂಘಿಸಿದೆ ಆಕಾಶಕ್ಕೆ. ಅಲ್ಲಿಂದ ಮುಂದೆ ನಾನು ಮುಂದೆ ಪ್ರಯಾಣ ಮಾಡುವಾಗ ದಾರಿಯ ಮಧ್ಯೆ ಪರ್ವತ ಒಂದು ಗೋಚರಿಸಿತು.” ಎಲ್ಲವನ್ನೂ ಹೇಳ್ತಾನೆ. ಆ ಮೈನಾಕ ಪರ್ವತ ಗೋಚರಿಸಿದ್ದು. ಹನುಮಂತ ವಿಗ್ರಹ ಅಂತ ಎದೆಯಿಂದ ತಳ್ಳಿದ್ದು. ಬಾಲದಿಂದ ಬಡಿದಿದ್ದು. ಆ ಪರ್ವತ, “ನಾನು ನಿನ್ನ ಶತ್ರುವಲ್ಲ, ನಾನು ನಿನ್ನ ಮಿತ್ರ, ನಾನು ನಿನ್ನ ಹಿತೈಷಿ. ಯಾಕೆಂದ್ರೆ ನನಗೆ ರಘುವಂಶಿಯರ ಉಪಾಕಾರ ಸ್ಮರಣೆ ಇದೆ. ಋಣ ಇದೆ ರಘುವಂಶಿಯರದ್ದು. ಹಾಗಾಗಿ ರಾಮ ಕಾರ್ಯಕ್ಕೆ ಸಹಾಯಕ್ಕೆ ಸಮುದ್ರರಾಜನಾದ ನಾನು ನಿನ್ನ ಸಹಾಯಕ್ಕೆ ಇದ್ದೇನೆ. ಇದು ಒಂದು ಆದ್ರೆ, ಇನ್ನೊಂದು ನಿನ್ನ ತಂದೆಯ ಉಪಕಾರ ತುಂಬಾ ಇದೆ ನನ್ನ ಮೇಲೆ. ಅವನು ಇಲ್ಲದಿದ್ದರೆ ನನ್ನ ರೆಕ್ಕೆಗಳು ಉಳಿತಾ ಇರಲಿಲ್ಲ. ಉಳಿಸಿದ್ದು ನಿನ್ನ ತಂದೆ. ಹಾಗಾಗಿ ನಾನು ನಿನ್ನ ಮಿತ್ರ ಹೊರತು, ಶತ್ರುವಲ್ಲ” ಎಂದು ಆ ಮೈನಾಕ ಪರ್ವತ ಹೇಳಿದ್ದು. “ನನಗೆ ಆತಿಥ್ಯ ಬೇಕಾಗಿಲ್ಲ, ರಾಮ ಕಾರ್ಯವೇ ಮುಖ್ಯವಾಗಿರತಕ್ಕಂತಹದ್ದು ಹಾಗಾಗಿ ಮುಂದುವರಿಯುತ್ತೇನೆ” ಅಂತ ಹೇಳಿದ್ದು ಎಲ್ಲವನ್ನೂ ಹೇಳಿದ. ಆಮೆಲೆ ಸುರಸೆಯೊಂದಿಗಿನ ಭೇಟಿ ಹಾಗೂ ಅವಳ ಪರೀಕ್ಷೆ. ಅವಳು ನುಂಗಲಿಕ್ಕೆ ಬಂದದ್ದು ಆದರೆ ತಾನು ಒಪ್ಪದೇ ದೊಡ್ಡದಾಗಿ ದೊಡ್ಡ ಬಾಯಿ ತೆಗೆದಿದ್ದು. ಅವಳೂ ತನ್ನ ಬಾಯಿಯನ್ನು ದೊಡ್ಡದಾಗಿ ಮಾಡಿ ಇವನು ಚಿಕ್ಕ ರೂಪವನ್ನು ತಾಳಿ ಅವಳ ಬಾಯಿಯೊಳಗೆ ಹೊಕ್ಕಿ ಹೊರಗೆ ಬರುವ ಉಪಾಯ ಮಾಡಿದ್ದು. ಸುರಸೆ ಸಂತೋಷ ಪಟ್ಟು ಮೆಚ್ಚಿ ಹರಸಿದ್ದು.

ಅಲ್ಲಿಂದ ಮುಂದಕ್ಕೆ ಸಿಂಹಿಕಾ ಪ್ರಕರಣ, ಸಿಂಹಿಕೆಯು ದೊಡ್ಡ ಬಾಯಿಯನ್ನು ತೆರೆದಾಗ ಚಿಕ್ಕ ರೂಪ ತಾಳಿ ಅವಳ ಒಳಗೆ ಹೋಗಿ ಹೃದಯವನ್ನೇ ಹೊರತಂದು ಅವಳ ಸಂಹಾರ ಮಾಡಿದ್ದು, ಲಂಕೆಗೆ ಹೋಗಿ ಇಳಿದು ರಾತ್ರಿಯವರೆಗೂ ಚಿಂತೆ ಮಾಡಿದ್ದು, ಬೆಕ್ಕಿನ ಗಾತ್ರದಲ್ಲಿ ಲಂಕೆಯ ಒಳಗೆ ಪ್ರವೇಶ, ಲಂಕಾಧಿದೇವತೆಯ ಜೊತೆ ಸಂಗ್ರಾಮ : ಅವಳು ತನಗೆ ಗುದ್ದಿದಾಗ ತಾನು ಎಡಕೈಯಲ್ಲಿ ಹೆಣ್ಣು ಎಂದು ಅರೆ ಶಕ್ತಿಯಲ್ಲಿ ಗುದ್ದಿದಾಗ ಅವಳು ಬಿದ್ದಿದ್ದು, ನಂತರ ತನ್ನನ್ನು ಅವಳು ಆಶ್ರಯಿಸಿದ್ದು, ಶಾಪದ ಕಥೆಯನ್ನು ಹೇಳಿದ್ದು , ಲಂಕೆಯಲ್ಲಿ ಸೀತೆಯನ್ನು ಹುಡುಕಾಡಿದ್ದು, ಸೀತೆ ಸಿಗದೆ ಇದ್ದಾಗ ದುಃಖವಾಗಿದ್ದು, ಅಶೋಕ ವನದ ವರ್ಣನೆ, ಅಶೋಕ ವನದೊಳಗೆ ಪ್ರವೇಶ ಮಾಡಿದ್ದು, ಅಲ್ಲಿ ಹುಡುಕಿ ಕೊನೆಯಲ್ಲಿ ಸೀತಾ ದರ್ಶನವಾಗಿದ್ದು, ಅಲ್ಲಿರುವ ರಾಕ್ಷಸಿಯರ ವರ್ಣನೆ, ಸೀತೆಯ ಸ್ಥಿತಿ , ಅವಳ ಮನಸ್ಸು ಮತ್ತು ಕಷ್ಟಗಳು, ರಾವಣ ಬಂದಾಗ ಸೀತೆ ಧಿಕ್ಕರಿಸಿದ್ದು, ಸೀತೆಯ ಶೌರ್ಯ–ಧೈರ್ಯವನ್ನೆಲ್ಲ ಹನುಮಂತನು ಜಾಂಬವಂತ, ಅಂಗದನೇ ಮೊದಲಾದ ವಾನರ ಕೋಟಿಗೆ ವಿವರಿಸಿದನು. ರಾವಣ ಹೋದಮೇಲೆ ರಾಕ್ಷಸಿಯರು ಕಾಟ ಕೊಟ್ಟಿದ್ದು, ಆಗ ತ್ರಿಜಟೆ ರಾಕ್ಷಸಿಯರಿಗೆ ಬೈದಿದ್ದು, ತ್ರಿಜಟೆಯ ಸ್ವಪ್ನ, ತಾನು ರಾಮಕಥೆ ಹೇಳಿದ್ದು, ಸೀತೆಯು ತನ್ನನ್ನು ಪರೀಕ್ಷೆ ಮಾಡಿದ್ದು, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದು ತೇರ್ಗಡೆಯಾಗಿದ್ದು, ಆಗ ಅಲ್ಲಿ ನಡೆದ ಸಂಭಾಷಣೆಗಳೆಲ್ಲವನ್ನು ವಿವರವಾಗಿ ಹನುಮಂತನು ಹೇಳಿದನು. ನಂತರ ಸೀತೆಯ ಕೊನೆಯ ಮಾತನ್ನು ಹೇಳಿದನು. “ಇನ್ನು ನನಗೆ ಎರಡು ತಿಂಗಳ ಆಯಸ್ಸು, ಎರಡು ತಿಂಗಳ ಒಳಗೆ ರಾಮ ಬರದೇ ಇದ್ದರೆ ಅನಾಥೆಯಂತೆ ಸಾಯುತ್ತೇನೆ” ಎಂದು ಸೀತೆ ಹೇಳಿದ್ದನ್ನು ಹೇಳಿದನು. ಮಾತುಕತೆ ಮುಗಿಸಿ ಹೊರಬಂದಾಗ ತನಗೆ ಸೀತೆಯು ಅನಾಥೆಯಂತೆ ಸಾಯುತ್ತೇನೆ ಎಂದು ಹೇಳಿದ್ದು ಮತ್ತೆ ಮತ್ತೆ ನೆನಪಾಗಿದ್ದು, ನೆನಪಾದಾಗ ಸಿಟ್ಟು ಬಂದು ಸಿಕ್ಕು ಸಿಕ್ಕಿದ್ದನ್ನು ಮುರಿದು ಹಾಕಿದೆ, ಮರ–ಗಿಡಗಳನ್ನು ಮುರಿದು ಹಾಕಿದೆ, ಮೃಗ–ಪಕ್ಷಿಗಳನ್ನು ಓಡಿಸಿದೆ ಎಂದು ಹನುಮಂತನು ಹೇಳಿದನು.

ನಂತರ ಮುಂದಿನ ಕಥೆಯನ್ನು ಹೇಳುತ್ತಾ ರಾಕ್ಷಸಿಯರು ಬಂದಿದ್ದು, ಗುಮ್ಮಗಳಿಗೆ ಗುಮ್ಮನಂತೆ ರಾಕ್ಷಸಿಯರನ್ನೇ ಹೆದರಿಸಿ ಓಡಿಸಿದ್ದು, ರಾವಣನಿಗೆ ಸುದ್ದಿ ತಲುಪಿದ್ದು, ಆಗ ಕಿಂಕರರು ಬಂದಿದ್ದು, ಕಿಂಕರರ ಸಂಹಾರ, ವೀರ ಘರ್ಜನೆ ಮಾಡಿದ್ದು, ಹೆಬ್ಬಾಗಿಲಿನ ಮೇಲೆ ನಿಂತು ಲಂಕೆಗೆ ಲಂಕೆಯೇ ಕೇಳುವ ಹಾಗೆ ತನ್ನ ಪರಿಚಯ ಮತ್ತು ರಾಮನ ಪರಿಚಯವನ್ನು ಹೇಳಿದ್ದು, ಚೈತ್ಯ ಪ್ರಾಸದವನ್ನು ಧ್ವಂಸಮಾಡಿ ಚೈತ್ಯ ಪಾದರನ್ನು ಸಂಹಾರ ಮಾಡಿದ್ದು, ಜಂಬುಮಾಲಿಯ ಸಂಹಾರ, ಮಂತ್ರಿ ಪುತ್ರರ ಸಂಹಾರ, ಸೇನಾಪತಿಗಳ ಸಂಹಾರ, ಅಕ್ಷನ ಸಂಹಾರ, ಮೇಘನಾದ ಸಮರ, ಮೇಘನಾದನು ದಾರಿಯಿಲ್ಲದೆ ಬರಿಗೈಯಾಗಿದ್ದು, ಇಂದ್ರಜಿತು ಮತ್ತು ಅವನ ಸೈನ್ಯವನ್ನು ನಿರ್ವೀರ್ಯರನ್ನಾಗಿ ಮಾಡಿ ಸಂತೋಷ ಪಟ್ಟಿದ್ದು, ರಾವಣ ಬಾರಿ ವಿಶ್ವಾಸದಿಂದ ವೀರರ ಜೊತೆ ಮೇಘನಾದನನ್ನು ಕಳುಹಿಸಿದಾಗ ಅವನನ್ನು ನಿಶ್ಶಕ್ತನನ್ನಾಗಿ ಮಾಡಿದ್ದು, ತನ್ನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಆಗಿದ್ದು, ಬ್ರಹ್ಮಾಸ್ತ್ರದಿಂದ ಬಂಧನವಾಗಿದ್ದೆಲ್ಲವನ್ನು ವಿವರವಾಗಿ ಹನುಮನಂತನು ಕಪಿಗಳಿಗೆ ವಿವರಿಸಿದನು. ನಂತರ ಉಳಿದ ಚಿಲ್ಲರೆ ರಾಕ್ಷಸರು ಸೆಣಬಿನ ನಾರಿನಿಂದ ಬಂಧಿಸಿದಾಗ ಬ್ರಹ್ಮಾಸ್ತ್ರವು ತಾನೇ ತಾನಾಗಿ ಹೋಯಿತು. ರಾವಣನ ಬಳಿಗೆ ಹೋಗಿದ್ದು, ಅಲ್ಲಿ ನಡೆದ ಸಂಭಾಷಣೆ, ತಾನು ರಾವಣನಿಗೆ ಒಳ್ಳೆಯ ಮಾತನ್ನು ಹೇಳಿದ್ದು, ರಾವಣ ಮೃತ್ಯುದಂಡವನ್ನು ಅಪ್ಪಣೆ ಮಾಡಿದ್ದು ಎಲ್ಲವನ್ನು ಹೇಳಿ ಕೊನೆಗೆ ತನ್ನ ಸ್ನೇಹಿತರ ಮುಂದೆ ಹನುಮಂತನು ನಾನು ಯಾರು ಎಂದು ತಿಳಿದಿಲ್ಲ, ಯಾರು ಎಂದು ತಿಳಿದಿದ್ದರೆ ಆ ಕೆಲಸ ಮಾಡುತ್ತಿರಲಿಲ್ಲ, ನನ್ನ ಪ್ರಭಾವವನ್ನು ತಿಳಿಯದೇ ಮೃತ್ಯುದಂಡವನ್ನು ಅಪ್ಪಣೆ ಮಾಡಿದ ಎಂದು ಹೇಳಿದನು.

ನಂತರ ಹನುಮಂತನು ವಿಭೀಷಣನ ಬಗ್ಗೆ ಒಳ್ಳೆಯ ಮಾತಗಳನ್ನು ಆಡಿದನು. ವಿಭೀಷಣನನ್ನು “ಮಹಾಮತಿ” ಎಂದು ಹೊಗಳಿದನು. ನನಗೋಸ್ಕರ ರಾವಣನಲ್ಲಿ ಬೇಡಿದ ಎಂದು ಹನುಮಂತನು ಹೇಳಿದನು. ಇದರಿಂದ ರಾಕ್ಷಸ ಕೋಟಿಯ ಮಧ್ಯದ ಸಭೆಯಲ್ಲೂ ಹನುಮಂತ ಮತ್ತು ವಿಭೀಷಣನ ಭಾವದ ವಿನಿಮಯವಾಗಿದ್ದನ್ನು ಗಮನಿಸಬಹುದು. ದೂತವಧೆಯನ್ನು ರಾಜಶಾಸ್ತ್ರ ಒಪ್ಪುವುದಿಲ್ಲ, ದೂತನನ್ನು ವಿರೂಪ ಮಾಡುತ್ತಾರೆ ಹೊರತು ವಧಿಸುವುದಿಲ್ಲ ಎಂದು ವಿಭೀಷಣ ಹೇಳಿದ್ದನ್ನು ಹನುಮಂತನು ಹೇಳಿದನು. ನಂತರ ರಾವಣ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲು ಅಪ್ಪಣೆ ಮಾಡಿದ್ದು, ನಂತರ ರಾಕ್ಷಸರು ಬಾಲಕ್ಕೆ ಬಟ್ಟೆ ಸುತ್ತಿ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದನ್ನು ಹನುಮಂತನು ಹೇಳಿದಾಗ ಕಪಿಗಳೆಲ್ಲರೂ ಹನುಮಂತನ ಬಾಲವನ್ನೇ ನೋಡಿದರು. ಬಾಲಕ್ಕೆ ಏನು ಆಗಿರಲಿಲ್ಲ. ಬಾಲಕ್ಕೆ ಬೆಂಕಿ ಬರುವವರೆಗೆ ಸೀತೆಯು ತಂಪು ಮಾಡಿದ್ದಳು. ಹನುಮಂತನು ಆಗ ತನಗೆ ಏನು ಆಗಲಿಲ್ಲ, ದೊಣ್ಣೆಗಳಿಂದ ಹೊಡೆದರೂ, ಗುದ್ದಿದರೂ, ಬಾಯಿಗೆ ಬಂದ ಹಾಗೆ ಬೈದರೂ ಮೈಗಾಗಲಿ ಮನಸ್ಸಿಗಾಗಲಿ ಏನು ಆಗಲಿಲ್ಲ, ಏಕೆಂದರೆ ನನಗೆ ನಗರವನ್ನೆಲ್ಲ ಹಗಲಿನಲ್ಲಿ ನೋಡಬೇಕಿತ್ತು ಎಂದು ಹನುಮಂತನು ಹೇಳಿದನು. ಲಂಕೆಯಲ್ಲಿ ಮೆರವಣಿಗೆ ಮಾಡಿದ್ದು, ಪೂರ್ತಿ ನೋಡುವವರೆಗೆ ಸುಮ್ಮನೆ ಇದ್ದಿದ್ದು, ನೋಡಿ ಮುಗಿದ ಮೇಲೆ ಚಿಕ್ಕ ರೂಪ ತಾಳಿ ಹಗ್ಗವನ್ನೆಲ್ಲ ಬಿಚ್ಚಿ ಹಾಕಿ, ಮತ್ತೆ ದೊಡ್ಡ ರೂಪವನ್ನು ತಾಳಿ ಅದೇ ಬಾಲದಿಂದ ಲಂಕೆಗೆ ಬೆಂಕಿ ಹಚ್ಚಿದೆ ಎಂದು ಹನುಮಂತನು ಹೇಳಿದನು. ಲಂಕೆಯನ್ನು ಪ್ರಳಯ ಕಾಲದ ಅಗ್ನಿಯಂತೆ ಸುಟ್ಟಿದ್ದನ್ನು ರಸವತ್ತಾಗಿ ವರ್ಣನೆ ಮಾಡಿದನು. ಪೂರ್ತಿ ಲಂಕೆಯನ್ನು ಸುಟ್ಟಮೇಲೆ ಸೀತೆ ಏನಾದಳು..? ಎಂದು ಬಾರಿ ಚಿಂತೆಯಾಗಿದ್ದು, ಅದೇ ಹೊತ್ತಿಗೆ ಶುಭ ಶಕುನಗಳಾಗಿದ್ದು, ಸೀತೆ ದಹನವಾಗಿಲ್ಲ ಎಂದು ವಾಣಿಯಾಗಿದ್ದು, ಬಾಲದ ತುದಿಯಲ್ಲಿ ಮಂಜುಗಡ್ಡೆ ಇದ್ದಂತೆ ಆಗಿದ್ದು, ಸೀತೆಗೆ ಏನು ಆಗಿಲ್ಲ ಎಂಬ ವಿಶ್ವಾಸ ಬಂದಿದ್ದೆಲ್ಲವನ್ನು ಹನುಮಂತನು ವಿವರಿಸಿದನು.

ಆಗ ಜಾಂಬವಂತನು ಹನುಮಂತನಿಗೆ ನಂತರ ಸೀತೆಯನ್ನು ನೋಡ ಬಂದೆಯಾ ? ಎಂದು ಕೇಳಿದನು. ಹನುಮಂತನು ಮತ್ತೊಮ್ಮೆ ಸೀತೆಯ ಬಳಿ ಹೋಗಿ ಅವಳ ಆಶೀರ್ವಾದ ಪಡೆದು ಬಂದೆ ಎಂದು ಹೇಳಿದನು. ನಂತರ ಅರಿಷ್ಠ ಪರ್ವತದಿಂದ ನೆಗೆದೆ ಎಂದು ಹೇಳಿದನು. ಹನುಮಂತನು ಆಕಾಶಕ್ಕೆ ನೆಗೆದಾಗ ಪರ್ವತವು ಪಾತಾಳಕ್ಕೆ ಹೋಗಿತ್ತು. ಗಗನ, ಚಂದ್ರ, ವಾಯು, ಗಂಧರ್ವ ಸೇವಿತ ಆಕಾಶದಲ್ಲಿ ದೀರ್ಘ ಪ್ರಯಾಣ ಮಾಡಿ ಇಲ್ಲಿಗೆ ನಾನು ಬಂದೆ, ಇದೆಲ್ಲ ರಾಮನ ಕರುಣೆ ಎಂದು ಹನುಮಂತನು ಹೇಳಿದನು. ಮತ್ತೊಮ್ಮೆ ಇದೆಲ್ಲ ರಾಮನ ಪ್ರಭಾವ, ನನ್ನದೆನಿಲ್ಲ ಎಂದು ರಾಮನನ್ನು ಕೊಂಡಾಡಿದನು. ಬಳಿಕ ಸ್ನೇಹಿತರಿಗೆ ಹನುಮಂತನು ಇದೆಲ್ಲ ನಿಮಗೆ ಸಲ್ಲುವಂತದ್ದು, ನೀವು ಕೊಟ್ಟ ಪ್ರೋತ್ಸಾಹ, ನೀವು ಕೊಟ್ಟ ಶಕ್ತಿಯಿಂದಾಗಿ ಆಯಿತು. ದೊರೆ ಸುಗ್ರೀವನಿಗೆ ಕೀರ್ತಿ ತರಬೇಕೆನ್ನುವ ಆಸೆ ನಮಗಿತ್ತು. ವಾನರರಿಗೆ ಸಾರ್ಥಕತೆಯನ್ನು ತಂದು ಕೊಡಬೇಕೆನ್ನುವ ಆಸೆ ಇತ್ತು. ಹಾಗಾಗಿ ಇದೆಲ್ಲ ನೆರವೇರಿತು. ಮುಂದಿನ ಕಾರ್ಯವನ್ನು ನಾವೆಲ್ಲರೂ ಸೇರಿ ಯೋಚನೆ ಮಾಡಬೇಕಾಗಿದೆ ಎಂದು ಹೊಸ ಪೀಠಿಕೆಯನ್ನು ಹಾಕಿದನು. ಆಗ ಅಂಗದನು ಹೌದು ಹೌದು ಎಂದನು. ಅವರಿಬ್ಬರೂ ಸೇರಿ ಹೊಸ ಯೋಚನೆಯನ್ನು ಮಾಡಿದರು. ಆಗ ಜಾಂಬವಂತನಿಗೆ ಚಿಂತೆಯಾಯಿತು.

ಮುಂದೇನಾಯಿತು?
ಹನುಮಂತನ ಹೊಸ ಯೋಚನೆ ಯಾವುದು ..? ಅದಕ್ಕೆ ಅಂಗದನ ಪ್ರತಿಕ್ರಿಯೆ ಏನು..?? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments